ಕಣ್ಣು ಕಾಣದವರಿಗೆ ಕಣ್ಣಾಗಬಲ್ಲುದೇ ಎಪೊಲಿ?

ವಿಜಯಮಹಾಂತೇಶ ಮುಜಗೊಂಡ.

ಜಪಾನೀ ನುಡಿಯಲ್ಲಿರುವ ಬರಿಗೆಗಳನ್ನು ಇಂಗ್ಲೀಶಿನಲ್ಲಿ ಓದುವ ಮೊಬೈಲ್ ಬಳಕವೊಂದರ ಕುರಿತು ತಿಳಿಸಲಾಗಿತ್ತು. ಇದೀಗ ಕಣ್ಣು ಕಾಣದವರಿಗೆ ವಸ್ತುಗಳನ್ನು ಗುರುತಿಸಲು ನೆರವಾಗುವ ಚೂಟಿಯುಲಿ ಬಳಕವೊಂದು(app) ಬಂದಿದೆ. ಯಂತ್ರಗಳ ಕಾಣ್ಕೆ(machine vision) ಮತ್ತು ಮಾಳ್ಕೆಯ ಜಾಣತನಗಳನ್ನು(artificial intelligence) ಬಳಸಿಕೊಂಡು ಕೆಲಸ ಮಾಡುವ ಈ ಬಳಕ, ಮೊಬೈಲ್ ಕ್ಯಾಮೆರಾ ಮೂಲಕ ಕಂಡಿದ್ದನ್ನು ಬಳಸುಗನಿಗೆ ಕೇಳುವಂತೆ ಉಲಿಯುತ್ತದೆ.

ಅಮೆರಿಕಾದ ಕ್ಯಾಲಿಪೋರ್‍ನಿಯಾದಲ್ಲಿರುವ ಸಿಂಗುಲಾರಿಟಿ ಕಲಿಕೆವೀಡಿನಲ್ಲಿ ಮರಿಟಾ ಚೆಂಗ್(Marita Cheng) ಮತ್ತು ಅಲ್ಬೆರ್‍ಟೊ ರಿಜ್ಜೋಲಿ(Alberto Rizzoli) ಎನ್ನುವವರು ಜೊತೆಯಾಗಿ ಎಪೊಲಿ(Aipoly) ಎನ್ನುವ ಚೂಟಿಯುಲಿ ಬಳಕವನ್ನು ಮಾಡಿದ್ದಾರೆ. ಇಂದು ಜಗತ್ತಿನಲ್ಲಿ ಸುಮಾರು 285 ಮಿಲಿಯನ್ ಮಂದಿ ಕಣ್ಣು ಕಾಣದವರಿದ್ದಾರೆ, ಇವರಲ್ಲಿ ಶೇಕಡಾ 66ಕ್ಕೂ ಹೆಚ್ಚು ಮಂದಿ ಮುಂದಿನ ಐದು ವರುಶಗಳಲ್ಲಿ ಚೂಟಿಯುಲಿ ಬಳಸಬಲ್ಲರು ಎನ್ನುತ್ತಾರೆ ಈ ಬಳಕವನ್ನು ತಯಾರಿಸಿದ ಚೆಂಗ್ ಮತ್ತು ರಿಜ್ಜೋಲಿ. ಈ ಬಳಕ 2017ನೆಯ ವರುಶದ ಜನವರಿಯಲ್ಲಿ ನಡೆದ ಸಿಇಎಸ್ (CES – Consumer Electronics Show) ಪ್ರದರ್‍ಶನದಲ್ಲಿ ಅತ್ಯುತ್ತಮ ಹೊಸಮಾರ‍್ಪು(Innovation) ಪ್ರಶಸ್ತಿಯನ್ನು ಬಾಚಿಕೊಂಡಿದೆ.

“ಮಾಳ್ಕೆಯ ಜಾಣತನದ ಮೇಲೆ ಕೆಲಸ ಮಾಡುವ ಐಬಿಎಂ‍ನ ವಾಟ್ಸನ್ ಗುಂಪಿನ ರಾಬರ್‍ಟ್ ಹೈ(Robert High) ಅವರ ಕಾಣ್ಕೆಯೊಂದು(presentation) ಈ ಬಳಕಕ್ಕೆ ಹುರುಪುನೀಡಿದೆ. ತಿಟ್ಟವೊಂದನ್ನು ತೋರಿಸಿದರೆ ಅದಕ್ಕೆ ಸಂಬಂದಿಸಿದ ವಿವರಣೆ ನೀಡುವ ವಿಶೇಶ ಬಗೆಯ ಎಣ್ಣುಕಗಳ(computer) ಕುರಿತು ರಾಬರ್‍ಟ್ ಹೈ ತೋರಿಸಿದ್ದರು. ಅಲ್ಲಿಂದ ತಿಟ್ಟಗಳನ್ನು ಗುರುತಿಸುವ ಚಳಕಗಳ ಕುರಿತು ನಾವು ಕಲಿಯತೊಡಗಿದೆವು, ನ್ಯೂಟ್ರಲ್ ನೆಟ್ವರ‍್ಕ್ ಎನ್ನುವ ಚಳಕ ಬಳಸಿ ಈ ಬಳಕವನ್ನು ಸಿದ್ದಪಡಿಸಿದೆವು, ತಿಟ್ಟವೊಂದನ್ನು ಗುರುತಿಸಲು ಅತೀ ಸುಳುವಾದ ಬಗೆ ಇದು” ಎನ್ನುತ್ತಾರೆ ರಿಜ್ಜೋಲಿ.

ಎಪೊಲಿ ಹೇಗೆ ಕೆಲಸ ಮಾಡುತ್ತದೆ?

ಎಪೊಲಿ ಮೆದುಸರಕು(Software) ಕ್ಯಾಮೆರಾ ಮೂಲಕ ಕಂಡ ತಿಟ್ಟವನ್ನು ಸಣ್ಣ ಸಣ್ಣ ತುಣುಕುಗಳನ್ನಾಗಿ ಬೇರ್‍ಪಡಿಸುತ್ತದೆ; ಹಿಂಬರಕಿ ತಿಟ್ಟ ಹುಡುಕಾಟವನ್ನು(Reverse Image Search) ಬಳಸಿಕೊಂಡು ಈ ತುಣುಕುಗಳಿಗೆ ಸಂಬಂದಿಸಿದ ಮಾಹಿತಿ ಪಡೆಯುತ್ತದೆ. ಹಿಂಬರಕಿ ತಿಟ್ಟ ಹುಡುಕಾಟವೆಂದರೆ ತಿಟ್ಟವೊಂದನ್ನು ನೀಡಿದರೆ ಅದಕ್ಕೆ ಸಂಬಂದಿಸಿದ ವಿವರವನ್ನು ಪಡೆಯುವ ಚಳಕ. ನೀವು ಗೂಗಲ್‍ ಇಮೇಜಸ್‍ನಲ್ಲಿ ಹುಡುಕಾಡುವ ಬಗೆಯನ್ನು ತಿಳಿದಿರಬಹುದು. ಇಲ್ಲಿ ವಿವರಣೆಯನ್ನು ನೀಡಿದರೆ ಅದಕ್ಕೆ ಸರಿಹೊಂದುವ ತಿಟ್ಟವನ್ನು ನೀವು ಪಡೆಯುವವಿರಿ. ಇದಕ್ಕೆ ಎದುರಾದ ಚಳಕವೇ ಹಿಂಬರಕಿ ತಿಟ್ಟ ಹುಡುಕಾಟ. ಕ್ಯಾಮೆರಾ ಮೂಲಕ ಕಂಡಿದ್ದನ್ನು ಹೆಸರುಪದಗಳ ವಿವರಗಳನ್ನಾಗಿ ಮಾರ್‍ಪಡಿಸುತ್ತದೆ – ಕಾರು, ನಾಯಿ, ಚೆಂಡು, ಮರ – ಹೀಗೆ. ಅಲ್ಲದೇ ಅದರ ಬಣ್ಣ, ಅಳತೆಯಂತಹ ಪರಿಚೆಗಳ ವಿವರಣೆಯನ್ನೂ ಪಡೆಯುತ್ತದೆ. ಮಾಳ್ಕೆಯ ಜಾಣತನ ಬಳಸಿಕೊಂಡು ಎಣ್ಣುಕದ ತಿಳುವಳಿಕೆಯನ್ನು ಮನುಶ್ಯರಿಗೆ ಕೇಳುವಂತೆ ದನಿಯ ರೂಪದಲ್ಲಿ ನೀಡುತ್ತದೆ. ಅಂದರೆ ಕ್ಯಾಮೆರಾ ಮೂಲಕ ಕಂಡಿದ್ದನ್ನು ಉಲಿಯುತ್ತದೆ – ಕರಿ ನಾಯಿ, ಕಾಪೀ ಕಪ್, ಹೊಳೆಯುವ ಕಾರು… ಹೀಗೆ..

ಇದಿನ್ನೂ ಆರಯ್ಕೆಯ(experimental) ಹಂತದಲ್ಲಿರುವ ಚಳಕ. ಈ ಚಳಕ ಪೂರ್‍ತಿಯಾಗಿ ಬಳಕೆಗೆ ಬಂದರೆ, ಕಣ್ಣು ಕಾಣದವರು ಈ ಬಳಕವನ್ನು ಬಳಸಿಕೊಂಡು ವಸ್ತುಗಳನ್ನು ಗುರುತಿಸಲು, ಮಂದಿ ಯಾವ ಬಣ್ಣದ ಮತ್ತು ಯಾವ ಬಗೆಯ ಬಟ್ಟೆ ಹಾಕಿದ್ದಾರೆ ಎಂದು ಗುರುತಿಸಲು ನೆರವಾಗಬಲ್ಲುದು. ಕಾರುಗಳ ಬಗ್ಗೆ ಒಲವುಳ್ಳ ಬಳಸುಗರು ಇದನ್ನು ಬಳಸಿ ನೋಡಿದಾಗ ಇದು ಟೆಸ್ಲಾ ಕಾರನ್ನು ಗುರುತಿಸಿತು ಎನ್ನುತ್ತಾರೆ ರಿಜ್ಜೋಲಿ. ಸದ್ಯಕ್ಕೆ ಇದು ತಿಟ್ಟಗಳನ್ನು ತಪ್ಪಿಲ್ಲದೆ ಗುರುತಿಸಲು ಬಳಸುಗರಿಂದ ಸ್ವಲ್ಪ ಮಟ್ಟಿನ ನೆರವು ಪಡೆಯತ್ತದೆ. ಮುಂದಿನ ದಿನಗಳಲ್ಲಿ ಯಾವುದರ/ಯಾರ ನೆರವಿಲ್ಲದೆ ತನ್ನಿಂತಾನೇ ವಸ್ತುಗಳನ್ನು ಗುರುತಿಸುವ ಕೆಲಸ ಎಪೊಲಿ ಮಾಡಬಲ್ಲುದು ಎನ್ನುತ್ತಾರೆ ಅವರು.

ಈ ಬಳಕದ ಬವಿಶ್ಯದ ಬಗ್ಗೆ ದೊಡ್ಡ ಕನಸನ್ನು ಹೊಂದಿರುವ ರಿಜ್ಜೋಲಿ, ಎಪೋಲಿ ಬಳಕವನ್ನು ಗೂಗಲ್ ಬೀದಿ ನೋಟದ(Google Street View) ಹಾಗೆ ಬೆಳೆಸುವ ಉದ್ದೇಶ ಹೊಂದಿದ್ದಾರೆ. ಜಗತ್ತಿನ ಸೋಗಿನ ಮಾದರಿಯೊಂದನ್ನು(virtual model) ಮಾಡಿ,  ಬಳಸುಗರು ಕ್ಯಾಮೆರಾ ಬಳಸದೆಯೇ ತಮ್ಮ ಮುಂದಿರುವುದರ ಬಗ್ಗೆ ಮಾಹಿತಿ ಪಡೆಯುವಂತಾಗಬೇಕು ಎನ್ನುತ್ತಾರೆ ರಿಜ್ಜೋಲಿ. ಈ ಬಳಕ ಕಣ್ಣು ಕಾಣದವರಿಗೆ ಬೇರೆಯವರ ಮೇಲಿನ ಅವಲಂಬಿಕೆಯನ್ನು ಕಡಿಮೆ ಮಾಡಬಲ್ಲುದು, ಜಗತ್ತಿನ ಯಾವುದೇ ಮೂಲೆಗೆ ಹೋದರೂ ಅವರಿಗೆ ಜೊತೆಗಾರನಾಗಿ ಈ ಬಳಕ ನಿಲ್ಲಬಲ್ಲುದು  ಎಂದು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

(ಮಾಹಿತಿ ಮತ್ತು ಚಿತ್ರ ಸೆಲೆ: dailydot.comphonearena.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: