ಗುಹೆಯ ಒಳಗೊಂದು ಹಳ್ಳಿ ‘ಜೊಂಗ್‍ಡಂಗ್ ಮಿಯಾವೋ’!

– ಕೆ.ವಿ.ಶಶಿದರ.

ಮಿಯಾವೋ ಜನಾಂಗದ ಅಲ್ಪಸಂಕ್ಯಾತರ ಗುಂಪೊಂದು ಶತಮಾನಗಳ ಕಾಲದಿಂದ ಈ ಬ್ರುಹದಾಕಾರದ ಗುಹೆಯೊಂದನ್ನು ತಮ್ಮ ಆವಾಸ ಸ್ತಾನವನ್ನಾಗಿ ಮಾಡಿಕೊಂಡಿದೆ. ಈ ಗುಹೆ ಇರುವುದು ಚೀನಾದ ನೈರುತ್ಯ ದಿಕ್ಕಿನಲ್ಲಿರುವ ಗ್ಯುಜೋವುವಿನ ಪ್ರಾಂತ್ಯದಲ್ಲಿರುವ ಅನ್‍ಶುನ್ ಪರ‍್ವತ ಶ್ರೇಣಿಯಲ್ಲಿ, ಈ ಗುಹೆಯ ಹಳ್ಳಿಯನ್ನು ಜೊಂಗ್‍ಡಂಗ್ ಮಿಯೋವೋ ಎನ್ನುತ್ತಾರೆ.

ಇಲ್ಲಿರುವ ಹಳ್ಳಿಗರನ್ನು ಚೀನಾ ಸರ‍್ಕಾರವು ಆಶ್ರಯವನ್ನು ನೀಡಿ ಗುಹೆಯನ್ನು ತೊರೆದು ಬಂದು ಮುಕ್ಯವಾಹಿನಿಗೆ ಸೇರುವಂತೆ ಕೇಳಿದ್ದರೂ, ಶತಮಾನಗಳ ಕಾಲದಿಂದ ಇಲ್ಲೇ ವಾಸಿಸುತ್ತಿರುವ ಈ ಬುಡಕಟ್ಟು ಜನಾಂಗದ ಸಣ್ಣ ಗುಂಪಿನವರು ಅದನ್ನು ತಿರಸ್ಕರಿಸಿ ಅಲ್ಲೇ ಉಳಿದರು. ಗುಹೆಯಲ್ಲಿ ತಮ್ಮ ಅವಶ್ಯಕತೆಗಾಗಿ ಮಾಳಿಗೆ ರಹಿತ ಮನೆಗಳನ್ನು, ಶಾಲೆಯನ್ನು, ಆಡಲು ಬಾಸ್ಕೆಟ್ ಬಾಲ್ ಕೋರ‍್ಟ್ ಅನ್ನು ಸಹ ಕಟ್ಟಿಕೊಂಡಿದ್ದಾರೆ. ಇಲ್ಲಿರುವ ಕಟ್ಟಡಗಳೆಲ್ಲಾ ಮರದ ಹಲಗೆಗಳಿಂದ ಮಾಡಿದವು.

ಗುಹೆಯ ವಿಸ್ತೀರ‍್ಣ ಎಶ್ಟು? ವಾತಾವರಣ ಹೇಗಿರುತ್ತೆ?

ದೂರದಿಂದ ನೋಡಿದಲ್ಲಿ ಜೊಂಗ್‍ಡಂಗ್ ಮಿಯೋವೋ ಹಳ್ಳಿಯು ಆನ್‍ಶುನ್ ಪರ‍್ವತ ಶ್ರೇಣಿಯ ಬ್ರುಹತ್ ಕಣ್ಣಿನಂತೆ ಕಾಣುತ್ತದೆ. ಇದರ ಸುತ್ತ ಬೆಳೆದಿರುವ ಬಿದಿರಿನ ತೋಪು ಕಣ್ಣಿನ ರೆಪ್ಪೆಗಳಂತೆ ಕಾಣುತ್ತವೆ. ಈ ಸುಂದರ ಗುಹೆಯ ಬಳಿ ಹೋಗಲು ಇರುವ ಹಾದಿ ಕಶ್ಟಕರವಾದದ್ದು. ಸುತ್ತಿ ಬಳಸಿ ಹೋಗಲಿರುವ ದಾರಿಯು ಕೆಲವೊಂದೆಡೆ ವಿಪರೀತ ಕಡಿದಾಗಿದ್ದು ಅದನ್ನು ದಾಟಲು ಕಾಲಿನ ಜೊತೆ ಕೈಯ ಸಹಾಯ ಕೂಡ ಬೇಕೇಬೇಕು. ಒಂದು ಗಂಟೆ ಕಾಲ್ನಡಿಗೆಯ ಕಟಿಣ ಹಾದಿ ಇದು.

ಈ ಗುಹೆಯು 230 ಮೀಟರ್ ಉದ್ದ, 115 ಮೀಟರ್ ಅಗಲ ಹಾಗೂ 50 ಮೀಟರ್ ಎತ್ತರವಿದೆ. ಗುಹೆಯಲ್ಲಿನ ವಾತಾವರಣ ಚಳಿಗಾಲದಲ್ಲಿ ಬೆಚ್ಚಗೆ, ಬೇಸಿಗೆಯಲ್ಲಿ ತಂಪಾಗಿ ಉಳಿದ ಕಾಲಗಳಲ್ಲಿ ಒಣ ಹವೆಯಿರುತ್ತದೆ. ಹೆಚ್ಚು ಸೂರ‍್ಯನ ಬೆಳಕು ಹಾಗೂ ತಾಜಾ ಗಾಳಿಗಾಗಿ ಬಹುತೇಕ ಮನೆಗಳನ್ನು ಗುಹೆಯ ಪ್ರವೇಶದಲ್ಲೇ ಕಾಣಬಹುದು. ಪ್ರತಿ ಮನೆಯ ಬಾಗಿಲಿಗೂ ಒಂದೊಂದು ಸಂಕ್ಯೆಯನ್ನು ನೀಡಲಾಗಿದೆ. ಒಂದು ಮನೆ ಮತ್ತೊಂದರಿಂದ ಬೇರ‍್ಪಡಿಸಲು ಬಿದಿರಿನಿಂದ ಮಾಡಿದ ಬೇಲಿಗಳ ಗೋಡೆಗಳನ್ನು ಅಡ್ಡವಾಗಿ ಇರಿಸಲಾಗಿದೆ. ಇಲ್ಲಿನ ಜನರೆಲ್ಲಾ ಒಂದೇ ಮನೆಯವರಂತೆ ಸೌಹಾರ‍್ದತೆಯಿಂದ ಇರುವ ಕಾರಣ ಈ ಬೇಲಿಯ ವಿಂಗಡಣೆ ಅವಶ್ಯಕತೆಗಿಂತ ಕೇವಲ ನೆಪಕ್ಕೆ ಮಾತ್ರ. ಇವರ ಮನೆಗಳಲ್ಲಿ ಯಾವುದೇ ರೀತಿಯ ಆದುನಿಕ ಸೌಲಬ್ಯಗಳಿಲ್ಲ. ಮರದಿಂದ ಮಾಡಲಾಗಿರುವ ಬೆಂಚುಗಳು, ಮಂಚಗಳು, ಡೈನಿಂಗ್ ಟೇಬಲ್‍ನಂತವುಗಳು ಪ್ರಮುಕ ಅಲಂಕಾರಿಕ ವಸ್ತುಗಳು.

ಜೀವನೋಪಾಯಕ್ಕೆ ಪರ‍್ವತದ ಕಲ್ಲು ಬಂಡೆಗಳ ಮೇಲಿಂದ ಸುರಿಯುವ ನೀರನ್ನು ಕೂಡಿಟ್ಟುಕೊಂಡು ಗುಹೆಯ ಮುಂದಿರುವ ಜಾಗದಲ್ಲಿ ಗೋದಿಯನ್ನು ಬೆಳೆಯುತ್ತಾರೆ. ಗುಹೆಯ ಗೋಳದ ಮೇಲೆ ಹೋದರೆ ಅಲ್ಲಿ 3 ಮೀಟರ್ ಎತ್ತರದ ಇಳಿಬಿದ್ದಿರುವ ನೀರ‍್ಗಲ್ಲು ಬಾಯಿ ತರೆದಿರುವ ಕಪ್ಪೆಯಂತಿದೆ. ಕಲ್ಲು ಬಂಡೆಯ ಸಂದಿಯಲ್ಲಿ ಹರಿಯುವ ನೀರು ಕಪ್ಪೆಯ ಬಾಯಿಯಿಂದ ಹೊರ ಬಂದು ಕೊಳವಾಗಿದೆ. ಹೀಗೆ ಕೂಡಿದ ನೀರನ್ನು ಹಳ್ಳಿಯ ಜನರ ಹಾಗೂ ದನಕರುಗಳ ಉಪಯೋಗಕ್ಕೆ ಬಳಕೆಯಾಗುತ್ತದೆ.

ಇದು ಬೆಳಕಿಗೆ ಬಂದಿದ್ದಾದರು ಹೇಗೆ?

ಚೀನಾದಲ್ಲಿನ ಪ್ರಸಿದ್ದ ದಿನ ಪತ್ರಿಕೆ ‘ಚೀನಾ ಡೈಲಿ’ಯಲ್ಲಿ 2007ರಲ್ಲಿ ಪ್ರಕಟವಾದ ಬರಹದಿಂದ ಈ ಗುಹೆಯ ಹಳ್ಳಿ ಬೆಳಕಿಗೆ ಬಂತು. ಆ ಬರಹವು ಗುಹೆಯಲ್ಲಿ ವಾಸಿಸುತ್ತಿರುವವರಿಗೆ ಆದುನಿಕತೆಯ ಗಂದ ಕೊಂಚವೂ ಇಲ್ಲ ಹಾಗೂ ಪ್ರಪಂಚದ ಆಗುಹೋಗುಗಳ ಬಗ್ಗೆ ಕಿಂಚಿತ್ತೂ ಅರಿವಿಲ್ಲ ಎಂದು ಪ್ರತಿಪಾದಿಸಿತ್ತು. ಮುಂದುವರೆಯುತ್ತಾ ಏಶ್ಯಾದಲ್ಲೇ ಗುಹೆಯಲ್ಲಿ ವಾಸಿಸುವ ಕೊನೆಯ ಜನಾಂಗ ಎಂದೂ ಸಹ ಬಿಂಬಿಸಿತ್ತು. ಇದು ಎಶ್ಟು ಸರಿ ಎಶ್ಟು ತಪ್ಪು ಎಂಬುದರ ಬಗ್ಗೆ ಇನ್ನೂ ಜಿಜ್ನಾಸೆಯಿದೆ.

ಇದರ ಜನಸಂಕ್ಯೆ ಎಶ್ಟು? ಅವರ ಕಸುಬೇನು?

ಒಂದು ಕಾಲದಲ್ಲಿ ಕಿಕ್ಕಿರಿದಿದ್ದ ಈ ಗುಹೆಯ ಹಳ್ಳಿ ಜೊಂಗ್‍ಡಂಗ್ ಮಿಯೋವೋ ಇಂದು ಬಹುತೇಕ ಬಣಗುಡುತ್ತಿದೆ. ನೂರಕ್ಕೂ ಹೆಚ್ಚು ಸಂಸಾರ ವಾಸಿಸುತ್ತಿದ್ದ ಈ ಹಳ್ಳಿಯಲ್ಲಿ ಇಂದು ಕೇವಲ ಹದಿನೆಂಟು ಸಂಸಾರ ಮಾತ್ರವಿದೆ. ಅದರಲ್ಲಿರುವುದು ಸರಿ ಸುಮಾರು 70ರಿಂದ 75 ಜನ ಮಾತ್ರ. 2007ರ ನಂತರ ಇಲ್ಲಿನ ಜನಸಂಕ್ಯೆ ಕಡಿಮೆಯಾಗುತ್ತಾ ಬಂತು. ಯುವಕರು ಓದಿಗಾಗಿ, ಹಣಕ್ಕಾಗಿ ಮತ್ತು ಕೆಲಸಕ್ಕಾಗಿ ಹೊರಹೋಗಲು ಪ್ರಾರಂಬಿಸಿದ ಮೇಲೆ ಆದುನಿಕತೆಯ ಸೋಂಕು ತಗುಲಿದ ಕಾರಣ ಹಿಂದಿರುಗುವ ಗೋಜಿಗೆ ಹೋಗಲಿಲ್ಲ, ಹಾಗಾಗಿ ಇಂದಿನ ಪರಿಸ್ತಿತಿ.

ಇಲ್ಲಿ ಉಳಿದಿರುವವರ ಕೆಲಸ ಹಸು ಸಾಕಾಣಿಕೆ, ಬಟ್ಟೆಯನ್ನು ನೇಯುವುದು, ಅಕ್ಕಿಯನ್ನು ಕುಟ್ಟುವುದು, ಅಕ್ಕಿ ಗೋದಿ ಬೆಳೆಯುವುದು. ಹೊರ ಜಗತ್ತಿನ ಸಂಪರ‍್ಕ ಬಂದ ಮೇಲೆ ಇಲ್ಲಿನ ಜನ ವಾರಕ್ಕೊಮ್ಮೆ ಕಾಲ್ನಡಿಗೆಯಲ್ಲೇ 15 ಕಿಲೋಮೀಟರ್ ದೂರದ ಮಾರುಕಟ್ಟೆಗೆ ತರಳಿ ಬೇಕಾದ್ದನ್ನು ಕರೀದಿಸಿ ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತಾರೆ. ಇತ್ತೀಚೆಗೆ ಇಲ್ಲಿನವರು ಟಿವಿ ಸೆಟ್ಟೊಂದನ್ನು ಇಟ್ಟುಕೊಂಡಿದ್ದು, ಕ್ವಾರಿಯ ಸಿಗ್ನಲ್ ಬಳಸಿ ದಾರಾವಾಹಿಗಳನ್ನು ನೋಡಿ ಆನಂದಿಸುತ್ತಾರೆ.

ಈ ಗುಹೆಯಲ್ಲಿ ಜನ, ದನ ಇವುಗಳೊಂದಿಗೆ 1984ರಲ್ಲಿ ಕಟ್ಟಿದ ಶಾಲೆ ಸಹ ಇದೆ. ವಿಶ್ವದಲ್ಲೇ ಗುಹೆಯಲ್ಲಿ ಸ್ತಾಪಿತವಾಗಿರುವ ಏಕೈಕ ಶಾಲೆ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಒಂದು ಕಾಲದಲ್ಲಿ ಇದರಲ್ಲಿ 200ಕ್ಕೂ ಹೆಚ್ಚು ಮಕ್ಕಳು ಅಬ್ಯಾಸ ಮಾಡುತ್ತಿದ್ದರು. ಸ್ಕೂಲಿನ ಕಲಿಕೆಯ ಬಳಿಕ ಹೆಚ್ಚಿನ ಓದಿಗಾಗಿ ಹತ್ತಿರದ ಪಟ್ಟಣಕ್ಕೆ ಹೋದವರಾರು ಹಿಂದಿರುಗಿ ಬಾರದ ಕಾರಣ ಇಲ್ಲಿನ ಜನಸಂಕ್ಯೆ ಕಡಿಮೆಯಾಗಿ 2010ರಲ್ಲಿ ಈ ಶಾಲೆಯನ್ನು ಮುಚ್ಚುವ ಹಂತ ತಲುಪಿತು. ಶಾಲೆಯನ್ನು ಮುಚ್ಚಿ ಉಳಿದಿದ್ದ ಮಕ್ಕಳನ್ನು ಹತ್ತಿರದ ಹಳ್ಳಿಯ ಶಾಲೆಗೆ ವರ‍್ಗಾವಣೆ ಮಾಡಲಾಯಿತು. ಶಾಲೆ ಮುಚ್ಚಿದ ನಂತರ ಶಾಲೆಯ ಜಾಗ, ಅದಕ್ಕೆ ಹೊಂದಿಕೊಂಡತ್ತಿದ್ದ ಬಾಸ್ಕೆಟ್ ಬಾಲ್ ಮೈದಾನ ಹಾಗೂ ಪಿಂಗ್ ಪಾಂಗ್ ಟೇಬಲ್‍ಗಳು ಅನಾತವಾದವು.

ಈ ಗುಹೆಗೆ ಆದುನಿಕತೆ ಕಾಲಿಡಲು ಯಾರು ಕಾರಣ?

2003ರಲ್ಲಿ ಅಮೇರಿಕಾದ ಹ್ಯುರಾಂಕ್ ಬೊಡೆ ಎಂಬಾತ ಜೊಂಗ್‍ಡಂಗ್ ಮಿಯೋವೋ ಹಳ್ಳಿಗೆ ಬಂದಿದ್ದ. ಇಲ್ಲಿನ ಜನರ ಪಡುತ್ತಿರುವ ಕಶ್ಟ ಮತ್ತು ತೊಂದರೆಗಳನ್ನು ಗಮನಿಸಿದ ಆತ ಒಂದು ಲಕ್ಶ ರೆನ್ ಮಿನ್ ಬಿ ಯನ್ನು ವಿದ್ಯುತ್ ಸಂಪರ‍್ಕ ಕಲ್ಪಿಸಲು ದೇಣಿಗೆಯಾಗಿ ನೀಡಿದ. ಅಲ್ಲಿಂದೀಚೆಗೆ ಇಲ್ಲಿನ ಜನಕ್ಕೆ ರಾತ್ರಿ ಹೊತ್ತು ಕತ್ತಲಿನಿಂದ ಮುಕ್ತಿ ಸಿಕ್ಕಿತು. ಹ್ಯುರಾಂಕ್ ಬೊಡೆ ಮುಂದೆ ಹಲವು ಬಾರಿ ಇಲ್ಲಿಗೆ ಬೇಟಿ ನೀಡಿ ಗುಹೆಯಲ್ಲಿ ವಾಸಿಸುತ್ತಿರುವವರಿಗೆ ದನಕರು ಕರೀದಿಸಲು ಹಣ ಸಹಾಯ ಮಾಡಿ ಅವರ ಜೀವನ ಶೈಲಿಯನ್ನು ಉತ್ತಮಗೊಳಿಸಲು ಪ್ರಯತ್ನಿಸಿದ. ಗುಹೆಯ ಮಂದಿ ವಿಚಿತ್ರ ಜೀವನ ಶೈಲಿ ಅನುಬವಿಸುತ್ತಿರುವ ಕಶ್ಟ ಕಾರ‍್ಪಣ್ಯ ಬದುಕು ಸಾಗಿಸುತ್ತಿರುವ ರೀತಿ ಎಲ್ಲವನ್ನೂ ಚಿತ್ರೀಕರಿಸಿಕೊಂಡು ಟಿವಿಗಳಲ್ಲಿ ಪ್ರಸಾರ ಮಾಡಲಾಯಿತು.

ಅವರ ಮುಂದಿರುವ ಬೇರೆ ಆಯ್ಕೆಗಳೇನು?

ಜೊಂಗ್‍ಡಂಗ್ ಮಿಯೋವೋನಿಂದ ಹತ್ತಿರದ ರಸ್ತೆಗೆ ಒಂದು ಗಂಟೆಯ ಕಾಲ್ನಡಿಗೆ. ಹಾಗಾಗಿ ಇಲ್ಲಿ ವಾಸಿಸುತ್ತಿರುವವರು ತಾವು ಗ್ರುಹೋದ್ಯೋಗದಲ್ಲಿ ತಯಾರಿಸಿದ ಮಾರಾಟ ಯೋಗ್ಯ ವಸ್ತುಗಳನ್ನು, ಕಡಿದಾದ, ಸುತ್ತಿ ಬಳಸಿ ಹೋಗುವ ಮಾರ‍್ಗದಲ್ಲಿ ಕೊಂಡೊಯ್ಯುವುದು ಬಹಳ ಕಶ್ಟ. ಈ ಕಶ್ಟ ಕಾರ‍್ಪಣ್ಯದಿಂದ ಮುಕ್ತಿಗಾಗಿ ಹಾಗೂ ತಮ್ಮ ಜೀವನದ ಗುಣ ಮಟ್ಟವನ್ನು ಹೆಚ್ಚಿಸಲು ಹಳ್ಳಿಯ ಹಿರಿಯರು ರಸ್ತೆ ಸಂಪರ‍್ಕ ಕಲ್ಪಿಸಿಕೊಡುವಂತೆ ಕೋರಿ ಸ್ತಳೀಯ ಸರ‍್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ. ರಸ್ತೆ ಸಂಪರ‍್ಕ ಬಂದಾದಲ್ಲಿ ತ್ರಾಸಿಲ್ಲದೆ ಮಕ್ಕಳು ಶಾಲೆಗೆ ಮೋಟಾರ್ ಬೈಕ್ ಟಾಕ್ಸಿಯಲ್ಲಿ ಹೋಗಿಬರಬಹುದು. ಈಗ ಶಾಲೆಗೆ ಹೋಗಿಬರಲು ಕನಿಶ್ಟ ದಿನಕ್ಕೆ ಎರಡು ಗಂಟೆಗಳ ಕಾಲ ಬೇಕು. ಯುವಕರಿಗೂ ಸಹ ಉದ್ಯೋಗಾವಕಾಶಕ್ಕೆ ಹೆಚ್ಚು ಒತ್ತು ನೀಡಿದಂತಾಗುತ್ತದೆ ಮತ್ತು ಇಲ್ಲಿ ವಾಸಿಸುವ ಜನರೂ ಮುಕ್ಯವಾಹಿನಿಗೆ ಬರಲು ಕೂಡ ಸಹಾಯಕಾರಿ ಎಂಬುದು ಅಲ್ಲಿನ ಹಿರಿಯರ ಅನಿಸಿಕೆ.

ಈ ಗುಹೆಯ ಹಳ್ಳಿ ಜೊಂಗ್‍ಡಂಗ್ ಮಿಯೋವೋ ಚಾರಣ ಪ್ರಿಯರಿಗೆ ಬಹಳ ಪ್ರಶಸ್ತವಾದ ಸ್ತಳ.

(ಚಿತ್ರ ಸೆಲೆ: scmp.com, moco-choco.com, capitalfm.co.ke )

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: