‘ಐ.ಪಿ.ಎಲ್’ : ಸುತ್ತ – ಮುತ್ತ

ರಾಮಚಂದ್ರ ಮಹಾರುದ್ರಪ್ಪ.

ಕ್ರಿಕೆಟ್ ಒಂದು ದರ‍್ಮವಾಗಿ ಬೆಳೆದಿರೋ ಬಾರತದಲ್ಲಿ ಈ ಆಟಕ್ಕೆ ಮೆರುಗಿನ ಜೊತೆ ಹೊಸ ಆಯಾಮ ನೀಡಿದ ಪಂದ್ಯಾವಳಿಯೇ ಐ.ಪಿ.ಎಲ್. ಪ್ರತಿ ಬೇಸಿಗೆಯಲ್ಲಿ ಎಡಬಿಡದೆ ಸತತ 45 ರಿಂದ 50 ದಿನಗಳ ಕಾಲ 8 ತಂಡಗಳ ನಡುವೆ  ನಡೆಯುವ 20 ಓವರುಗಳ ಈ ಕ್ರಿಕೆಟ್ ಪೋಟಿ ಇಡೀ ಪ್ರಪಂಚವೇ ಬಾರತದತ್ತ ತಿರುಗಿ ನೋಡುವಂತೆ ಮಾಡಿದೆ ಎಂದರೆ ತಪ್ಪಾಗಲಾರದು. ಹಣದ ಹೊಳೆಯನ್ನು ಹರಿಸುವುದರ ಜೊತೆಗೆ ಹಲವಾರು ಆಟಗಾರರ ಬದುಕನ್ನೇ ಬದಲಿಸಿದ ಶಕ್ತಿ – “ಇಂಡಿಯನ್ ಪ್ರೀಮಿಯರ್ ಲೀಗ್”

ಐ.ಪಿ.ಎಲ್‍ ಹುಟ್ಟು – ಇತಿಹಾಸ

2004ರಿಂದಲೇ ಇಂಗ್ಲೆಂಡಿನಲ್ಲಿ 20 ಓವರ್‌ಗಳ ದೇಸಿ ಪಂದ್ಯಗಳು ನಡೆಯುತ್ತಿದ್ದವು. 2005ರಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ನಡುವೆ ಚೊಚ್ಚಲ ಅಂತರಾಶ್ಟ್ರೀಯ ಟಿ-20 ಪಂದ್ಯವೂ ನಡೆಯಿತು. ಆದರೆ ಬಾರತ ಮಾತ್ರ ಐ.ಸಿ.ಸಿ.ಯ ಎಲ್ಲಾ ಕೂಟಗಳಲ್ಲಿ ಈ ಮಾದರಿಯ ಪಂದ್ಯಗಳನ್ನು ವಿರೋದಿಸುತ್ತಲೇ ಬಂದಿತ್ತು. ಇದು ಕ್ರಿಕೆಟ್‍ಗೆ ಮರಣ ಶಾಸನ ಆಗಲಿದೆ ಎಂದು ಆಗಿನ ಬಿ.ಸಿ.ಸಿ.ಐ ಅದ್ಯಕ್ಶ ಶರದ್ ಪವಾರ್ ಅಬಿಪ್ರಾಯ ಪಟ್ಟಿದ್ದರು. ಬಾರತ ತನ್ನ ಮೊದಲ ಟಿ-20 ಪಂದ್ಯವನ್ನು ಕಡೆಯ ಅಂತರಾಶ್ಟ್ರೀಯ ತಂಡವಾಗಿ 2006ರಲ್ಲಿ ದಕ್ಶಿಣ ಆಪ್ರಿಕಾ ವಿರುದ್ದ ಆಡಿತು. ಆದರೆ ಬಾರತದಲ್ಲಿದ್ದ ಕ್ರಿಕೆಟ್ ಬಗೆಗಿನ ಅತಿಯಾದ ಒಲವನ್ನು ಅರಿತ್ತಿದ್ದ ಜೀ ಎಂಟರ್‌ಪ್ರೈಸಸ್ ಅವರು ಟಿ-20 ಮಾದರಿಯ ಇಂಡಿಯನ್ ಕ್ರಿಕೆಟ್ ಲೀಗ್ (ಐ.ಸಿ.ಎಲ್) ಎಂಬ ಒಂದು ಕಾಸಗಿ ಲೀಗ್‍ಗೆ ಚಾಲನೆ ನೀಡಿದರು. ಈ ಲೀಗ್‍ಗೆ ಹಲವಾರು ದೇಶಗಳ ಮಾಜಿ ಆಟಗಾರರ ಜೊತೆಗೆ ಬಾರತದ ಹಾಲಿ ರಣಜಿ ಆಟಗಾರರೂ ಸೇರಿದರು. ಇದರಿಂದ ಕುಪಿತರಾದ ಬಿ.ಸಿ.ಸಿ.ಐ, ಐ.ಸಿ.ಸಿ.ಯಿಂದ ಮಾನ್ಯತೆ ಪಡೆಯದ ಈ ಲೀಗ್ ಅದಿಕ್ರುತವಲ್ಲ ಎಂದು ಗೋಶಿಸಿ ಐ.ಸಿ.ಎಲ್. ಸೇರಿದ ಎಲ್ಲಾ ಬಾರತದ ಆಟಗಾರರನ್ನು ರಣಜಿ ಪಂದ್ಯಗಳನ್ನು ಆಡದಂತೆ ತಡೆ ಒಡ್ಡಿತು. ಈ ವಿವಾದಗಳ ನಡುವೆಯೂ 2007ರಲ್ಲಿ ನಡೆದ ಮೊದಲ ಐ.ಸಿ.ಎಲ್ ಪಂದ್ಯಾವಳಿ ಜನರನ್ನು ತಲುಪಿ ಯಶಸ್ಸನ್ನು ಗಳಿಸುವುದರ ಜೊತೆಗೆ ಹಣಕಾಸಿನ ಲಾಬವನ್ನೂ ಮಾಡಿತು.

ಇದರಿಂದ ಇಂಬು ಪಡೆದ ಬಿ.ಸಿ.ಸಿ.ಐ ತನ್ನದೇ ಆದ ಒಂದು ಟಿ-20 ಮಾದರಿಯ ಕ್ರಿಕೆಟ್ ಪಂದ್ಯಾವಳಿಯನ್ನು ಹುಟ್ಟು ಹಾಕಿತು. ಲಲಿತ್ ಮೋದಿಯವರ ಮುಂದಾಳತ್ವದಲ್ಲಿ ಹುಟ್ಟಿದ ಈ ಲೀಗ್‍ನ ಹೆಸರೇ ಪ್ರಪಂಚದಾದ್ಯಂತ ಮನೆಮಾತಾಗಿರುವ ಇಂಡಿಯನ್ ಪ್ರಿಮಿಯರ್ ಲೀಗ್ (ಐ.ಪಿ.ಎಲ್‍) . 2007ರ ಸೆಪ್ಟಂಬರ್‌ನಲ್ಲಿ ಇದನ್ನು ಅದಿಕ್ರುತವಾಗಿ ಗೋಶಿಸಿದ ಬಿ.ಸಿ.ಸಿ.ಐ ಈ ಪಂದ್ಯಾವಳಿಯ ರೂಪುರೇಶಗಳನ್ನು ಬಿಡುಗಡೆ ಮಾಡಿತು. ಐ.ಪಿ.ಎಲ್‍ನ ಮೊದಲ ಕೂಟದಲ್ಲಿ ಆಗಿನ ಬಾರತ ತಂಡದ ನಾಯಕ ರಾಹುಲ್ ದ್ರಾವಿಡ್ ಅಲ್ಲದೇ ತೆಂಡೂಲ್ಕರ್, ಗಾಂಗೂಲಿ ಹಾಗೂ ನ್ಯೂಜಿಲ್ಯಾನ್ಡ್ ನ ಪ್ಲೆಮಿಂಗ್, ಆಸ್ಟ್ರೇಲಿಯಾದ ಮೆಗ್ರಾತ್ ಹಾಜರಿದ್ದರು.

ಹರಾಜು ಪ್ರಕ್ರಿಯೆ –  ನಿಯಮಗಳು

2008ರ ಜನವರಿಯಲ್ಲಿ ಮೊದಲಿಗೆ ಪ್ರಾಂಚೈಸಿಗಳ ಹರಾಜು ಪ್ರಕ್ರಿಯೆ ನಡೆಯಿತು. ಆಗ ಮುಂಬೈ ನಂತರ ಅತಿ ದುಬಾರಿಯಾದ ಬೆಂಗಳೂರು ಪ್ರಾಂಚೈಸಿಯನ್ನು 430 ಕೋಟಿ ರೂಪಾಯಿಗಳಿಗೆ ವಿಜಯ್ ಮಲ್ಯರವರು ಕರೀದಿ ಮಾಡಿದರು. ನಂತರ ಬೆಂಗಳೂರು ತಂಡಕ್ಕೆ “ರಾಯಲ್ ಚಾಲೆಂಜೆರ‍್ಸ್ ಬೆಂಗಳೂರು” ಎಂದು  ಹೆಸರಿಸಿದರು. ಅದೇ ರೀತಿ ಇನ್ನುಳಿದ 7 ಪ್ರಾಂಚೈಸಿಗಳಾದ ಕೋಲ್ಕತಾ, ದೆಹಲಿ, ಹೈದರಾಬಾದ್, ಮುಂಬೈ, ಚೆನ್ನೈ, ಪಂಜಾಬ್ ಮತ್ತು ರಾಜಸ್ತಾನ ಹರಾಜಿನಲ್ಲಿ ಬಿಕರಿಯಾದವು.

ದೇಶದ ಜನರ ನಾಡಿ ಮಿಡಿತವನ್ನು ಅರಿತಿದ್ದ ಲಲಿತ್ ಮೋದಿ ಆಟಗಾರರ ಹರಾಜಿಗಿಂತ ಮೊದಲೇ ‘ಐಕಾನ್ ಆಟಗಾರರು’ ಎಂಬ ಕಟ್ಟಳೆ ಮಾಡಿ ಅದರಡಿ ಪ್ರಬಾವಿ ಆಟಗಾರರನ್ನು ಹರಾಜಿನಿಂದ ಹೊರಗಿಟ್ಟರು. ತೆಂಡೂಲ್ಕರ್, ದ್ರಾವಿಡ್, ಗಾಂಗೂಲಿಯಂತಹ ದಿಗ್ಗಜ ಆಟಗಾರರು ಅವರ ತವರೂರಿನ ಬದಲು ಹರಾಜಿನಲ್ಲಿ ಬೇರೆ ತಂಡದ ಪಾಲಾದರೆ, ಪಂದ್ಯಾವಳಿಯ ಕಳೆ ಕುಂದುತ್ತದೆ ಎಂದು ಈ ಐಕಾನ್ ಆಟಗಾರರ ಕಟ್ಟಳೆ ಮಾಡಲಾಗಿತ್ತು. ಬೆಂಗಳೂರು ತಂಡಕ್ಕೆ ನಮ್ಮ ರಾಹುಲ್ ದ್ರಾವಿಡ್ ಐಕಾನ್ ಆಟಗಾರರಾದರೆ ಮುಂಬೈಗೆ ತೆಂಡೂಲ್ಕರ್, ಕೋಲ್ಕತಾಗೆ ಗಾಂಗೂಲಿ, ಪಂಜಾಬ್‍ಗೆ ಯುವರಾಜ್ ಸಿಂಗ್, ಮತ್ತು ದೆಹಲಿಗೆ ಸೆಹ್ವಾಗ್ ಐಕಾನ್ ಆಟಗಾರರಾದರು. ಈ ದಿಗ್ಗಜ ಆಟಗಾರರಿಗೆ ಅವರ ತಂಡದ ದುಬಾರಿ ಆಟಗಾರರಿನಿಗಿಂತ 15% ಹೆಚ್ಚು ಸಂಬಳ ಎಂದು ನಿಗದಿ ಮಾಡಲಾಯಿತು. (2011ರಿಂದ ಈ ಕಟ್ಟಳೆ ಇಲ್ಲದಿದ್ದರೂ ಆರಂಬದಲ್ಲಿ ಬದ್ರ ಬುನಾದಿ ಹಾಕಿ ಕೊಟ್ಟಿತು). ನಂತರ ಪೆಬ್ರವರಿಯಲ್ಲಿ ಇನ್ನುಳಿದ ಎಲ್ಲಾ ಆಟಗಾರರ ಹರಾಜು ನಡೆದಾಗ ಬಾರತದ ನಾಯಕ ದೋನಿ 6 ಕೋಟಿಗೆ ಚೆನ್ನೈ ತಂಡದ ಪಾಲಾಗಿ ಪಂದ್ಯಾವಳಿಯಲ್ಲಿ ಅತ್ಯಂತ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಂತರಾಶ್ಟ್ರೀಯ ಆಟಗಾರರ ಜೊತೆಗೆ ಬಾರತದ ದೇಶೀ ಆಟಗಾರರಿಗೂ ಆಡುವ ಅವಕಾಶ ಕಲ್ಪಿಸಿದ್ದರಿಂದ ಎಲೆಮರೆಯ ಕಾಯಿಯಂತಿದ್ದ ಎಶ್ಟೋ ಆಟಗಾರರಿಗೆ ಅದ್ರುಶ್ಟದ ಬಾಗಿಲು ತೆರೆಯಿತು. ಆಡುವ ಹನ್ನೊಂದರಲ್ಲಿ 4ಕ್ಕಿಂತ ಹೆಚ್ಚು ವಿದೇಶಿ ಆಟಗಾರರಿಗೆ ಮಣೆ ಹಾಕುವಂತಿಲ್ಲ ಎಂಬುವ ನಿಯಮ ದೇಶೀ ಆಟಗಾರರಿಗೆ ಹೆಚ್ಚು ಪ್ರೋತ್ಸಾಹ ನೀಡಿತು.

ಚೊಚ್ಚಲ ಐ.ಪಿ.ಎಲ್‍ (2008)

ಚೊಚ್ಚಲ ಐ.ಪಿ.ಎಲ್. ಗೆದ್ದ ಸಂಬ್ರಮದಲ್ಲಿ ರಾಜಸ್ತಾನ ರಾಯಲ್ಸ್ ತಂಡ

ಎಲ್ಲಾ ಪೂರ‍್ವಬಾವಿ ತಯಾರಿಗಳ ನಂತರ 2008ರ ಏಪ್ರಿಲ್ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಅಂಕಣದಲ್ಲಿ ಕೋಲ್ಕತಾ ಹಾಗೂ ಬೆಂಗಳೂರು ತಂಡಗಳ ನಡುವೆ ಮೊದಲ ಐ.ಪಿ.ಎಲ್‍ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಅಬ್ಬರದ 158 ರನ್ ಬಾರಿಸಿದ ಕೋಲ್ಕತಾ ತಂಡದ ಮೆಕಲಮ್ ಐ.ಪಿ.ಎಲ್‍ಗೆ ಬರ‍್ಜರಿ ಆರಂಬ ನೀಡಿದರು. ಈ ಹೊಸಬಗೆಯ ಕ್ರಿಕೆಟ್‍ನಿಂದ ಇಡೀ ಕ್ರಿಕೆಟ್ ಜಗತ್ತೇ ಬಾರತದ ಕಡೆ ಬೆರಗಿನಿಂದ ನೋಡಿತು. ಈ ಪಂದ್ಯದ ನಂತರ ಸುಮಾರು 50 ದಿನಗಳ ಕಾಲ ನಡೆದ ಬಹುತೇಕ ಪಂದ್ಯಗಳು ರೋಚಕವಾಗಿದ್ದವು. ಕಡೆಗೆ ಶೇನ್ ವಾರ‍್ನ್ ನಾಯಕತ್ವದಲ್ಲಿ ರಾಜಸ್ತಾನ ತಂಡ ಪೈನಲ್‍ನಲ್ಲಿ ದೋನಿ ಮುಂದಾಳ್ತನದ ಚೆನ್ನೈ ತಂಡವನ್ನು ಮಣಿಸಿ ಚೊಚ್ಚಲ ಐ.ಪಿ.ಎಲ್‍ ಟ್ರೋಪಿಯನ್ನು ಮುಡಿಗೇರಿಸಿಕೊಂಡು ಅಚ್ಚರಿ ಮೂಡಿಸಿತು. ಒಂದು ಆವ್ರುತ್ತಿಯಲ್ಲಿ ಅತ್ಯಂತ ಹೆಚ್ಚು ರನ್ ಗಳಿಸುವವರಿಗೆ ಆರೇಂಜ್ ಕ್ಯಾಪ್ ಮತ್ತು ಹೆಚ್ಚು ವಿಕೆಟ್ ಪಡೆದವರಿಗೆ ಪರ‍್ಪಲ್ ಕ್ಯಾಪ್ ನೀಡಲಾಗುತ್ತದೆ. ಮೊದಲ ವರ‍್ಶ ಪಂಜಾಬ್‍ ತಂಡದ ಶಾನ್ ಮಾರ‍್ಶ್ 616 ರನ್ ಗಳಿಸಿ ಆರೇಂಜ್ ಕ್ಯಾಪ್ ಪಡೆದರೆ ರಾಜಸ್ತಾನದ ಸೋಹೆಲ್ ತನ್ವಿರ್ 22 ವಿಕೆಟ್ ಪಡೆದು ಪರ‍್ಪಲ್ ಕ್ಯಾಪ್ ಪಡೆದರು.

2016 ತನಕ ಒಟ್ಟು 9 ಐ.ಪಿ.ಎಲ್‍ ಪೋಟಿಗಳು ನಡೆದಿದ್ದು ಚೆನ್ನೈ ಸೂಪರ್ ಕಿಂಗ್ಸ್ 2 ಬಾರಿ(2010 ಮತ್ತು 11), ಕೋಲ್ಕತಾ ನೈಟ್ ರೈಡರ‍್ಸ್ 2 (2012, 14), ಮುಂಬೈ ಇಂಡಿಯನ್ಸ್ 2 (2013, 15), ಡೆಕ್ಕನ್ ಚಾರ‍್ಜರ‍್ಸ್ 1(2009), ರಾಜಸ್ತಾನ ರಾಯಲ್ಸ್ 1(2008) ಹಾಗೂ ಸನ್ ರೈಸರ‍್ಸ್ ಹೈದರಾಬಾದ್ 1 (2016) ಬಾರಿ ಗೆಲ್ಲುಗರಾಗಿದ್ದಾರೆ. ರಾಯಲ್ ಚಾಲೆಂಜೆರ‍್ಸ್ ಬೆಂಗಳೂರು ತಂಡ ಒಂದು ಬಾರಿಯೂ ಗೆಲ್ಲದೆ 3 ಬಾರಿ ಪೈನಲ್‍ನಲ್ಲಿ ಎಡವಿದೆ. 2016‍ರಲ್ಲಿ ಗೆದ್ದ ಹೈದರಾಬಾದ್ ಪ್ರಶಸ್ತಿ ಹಣವಾಗಿ 20 ಕೋಟಿ ರೂಪಾಯಿಗಳನ್ನು ಪಡೆದರೆ ಪೈನಲ್ ನಲ್ಲಿ ಸೋತ ಬೆಂಗಳೂರು ತಂಡ 11 ಕೋಟಿ ಪಡೆಯಿತು.ಮೂರು ಹಾಗೂ ನಾಲ್ಕನೇ ಸ್ತಾನ ಪಡೆದ ಗುಜರಾತ್ ಹಾಗೂ ಕೋಲ್ಕತಾ ತಂಡಗಳು ತಲಾ 7.5 ಕೋಟಿಗಳನ್ನು ಪಡೆಯಿತು.  ಐ.ಪಿ.ಎಲ್‍ ಇತಿಹಾಸದಲ್ಲಿ ಬೆಂಗಳೂರು ತಂಡದ ವಿರಾಟ್ ಕೊಹ್ಲಿ ಅತ್ಯದಿಕ ರನ್(4,110)  ಗಳಿಸಿದ್ದರೆ ಮುಂಬೈ ತಂಡದ ಲಸಿತ್ ಮಾಲಿಂಗ ಅತ್ಯದಿಕ ವಿಕೆಟ್(143)  ಪಡೆದ್ದಿದ್ದಾರೆ.

ಐ.ಪಿ.ಎಲ್‍ ವಿವಾದಗಳು

ಕ್ರಿಕೆಟ್ ಪ್ರೇಮಿಗಳ ಅಚ್ಚುಮೆಚ್ಚಿನ ಪಂದ್ಯಾವಳಿಯಾದ ಐ.ಪಿ.ಎಲ್‍ಗೆ ವಿವಾದಗಳು ಬೆಂಬಿಡದಂತೆ ಕಾಡಿದವು. 2010ರಲ್ಲಿ ಹಲವಾರು ಕಟ್ಟಳೆಗಳನ್ನು ಮೀರಿದ್ದ ಐ.ಪಿ.ಎಲ್‍ ಅದ್ಯಕ್ಶ ಲಲಿತ್ ಮೋದಿಯವರ ತಲೆದಂಡವಾಯಿತು. ನಂತರ ಹಲವಾರು ನಿಯಮಗಳ ಉಲ್ಲಂಗನೆಯ ಆರೋಪದ ಮೇಲೆ  2012ರಲ್ಲಿ ಕೊಚ್ಚಿ ತಂಡದ ಸದಸ್ಯತ್ವ ರದ್ದಾದರೆ 2013ರಲ್ಲಿ ಪುಣೆ ತಂಡವೂ ರದ್ದಾಯಿತು. ಇದರ ನಡುವೆಯೇ ಮೋಸದಾಟ, ಜೂಜು ನಡೆದುದರ ಬಗ್ಗೆ ವರದಿಗಳು ಹೊರ ಬಂದವು. ಇದರಲ್ಲಿ ಸಿಲುಕಿದ ಆಟಗಾರ ಶ್ರೀಶಾಂತ್ ಅವರಿಗೆ ಕ್ರಿಕೆಟ್ ಆಡದಂತೆ ನಿರ‍್ಬಂದ ಹೇರಲಾಯಿತು. 2015 ರಲ್ಲಿ ಚೆನ್ನೈ ಹಾಗೂ ರಾಜಸ್ತಾನ ತಂಡದ ಒಡೆಯರು ಜೂಜಿನಲ್ಲಿ ಪಾಲ್ಗೊಂಡಿದ್ದದ್ದು ಕಾತ್ರಿಯಾದ ನಂತರ ಈ ಎರಡೂ ತಂಡಗಳಿಗೆ ತಲಾ 2 ವರ‍್ಶಗಳ ಕಾಲ ಆಡದಂತೆ ತಡೆ ಹಿಡಿಯಲಾಯಿತು. ಈ ವಿವಾದಗಳನ್ನು ನೋಡಿದ ಹಲವಾರು ಮಾಜಿ ಆಟಗಾರರು ಐ.ಪಿ.ಎಲ್‍ ಕ್ರಿಕೆಟ್‍ಅನ್ನು ಕೊಲ್ಲುತ್ತಿದೆ, ಕೂಡಲೇ ಇದನ್ನು ನಿಲ್ಲಿಸಬೇಕು ಎಂದು ಕಳವಳ ವ್ಯಕ್ತ ಪಡಿಸಿದ್ದರು. ಅವರ ಮಾತಿನಲ್ಲಿ ಹುರುಳಿಲ್ಲದೇ ಇಲ್ಲ.

ಹಲವಾರು ಆಟಗಾರರು ಹಣದ ಹೊಳೆ ಹರಿಸುವ ಐ.ಪಿ.ಎಲ್‍ನಲ್ಲಿ ಮಾತ್ರ ಆಡಿ, ದೇಶೀ ಕ್ರಿಕೆಟ್ಅನ್ನು ನಿರ‍್ಲಕ್ಶಿಸುವ ಚಾಳಿ ಮೈಗೂಡಿಸಿಕೊಂಡಿರುವ ಎತ್ತುಗೆಗಳು ನಮ್ಮ ಕಣ್ಣ ಮುಂದಿವೆ.  ಆದರೆ ಕಳೆದ ವರ‍್ಶದಿಂದ ಯಾವುದೇ ವಿವಾದಗಳಿಗೆ ಸಿಲುಕದೆ ಐ.ಪಿ.ಎಲ್‍ ಕೊಂಚ ನಂಬಿಕೆ ಗಳಿಸಿರುವುದನ್ನು ಕಾಣಬಹುದು.

ಚಿನ್ನದ ಮೊಟ್ಟೆ ಇಡುವ ಕೋಳಿ

ಹಲವಾರು ವಿವಾದಗಳಲ್ಲಿ ಐ.ಪಿ.ಎಲ್‍ ಸಿಕ್ಕಿಕೊಂಡಿದ್ದರೂ ತನ್ನ ಜನಪ್ರಿಯತೆ ಕಾಪಾಡಿಕೊಂಡಿದೆ ಎಂಬುದು ದಿಟ. ಬೇಸಿಗೆ ಬಂತೆಂದರೆ ಬಾರತದಾದ್ಯಂತ ಕ್ರಿಕೆಟ್ ಜ್ವರ ಆವರಿಸಿಕೊಂಡಿರುತ್ತದೆ. 9 ಬಾರಿ ನಡೆದಿರುವ ಈ ಪಂದ್ಯಾವಳಿಯು ಪ್ರತಿ ಬಾರಿಯೂ ಲಾಬ ಮಾಡಿದೆ. ಪ್ರಾಯೋಜಕತ್ವ , ಟಿ.ವಿ-ಇಂಟರ್‌ನೆಟ್ ಹಕ್ಕುಗಳಿಂದ ಕೋಟ್ಯಂತರ ರೂಪಾಯಿಗಳನ್ನು ಗಳಿಸುವ ಬಿ.ಸಿ.ಸಿ.ಐ ಆ ಹಣದಿಂದ ಮಾಜಿ ಆಟಗಾರರಿಗೆ ಪಿಂಚಣಿ ನೀಡುವುದರ ಜೊತೆಗೆ ದೇಶೀ ಕ್ರಿಕೆಟ್ ಆಟಗಾರರಿಗೆ ಹೆಚ್ಚು ಹಣ ಸಿಗುವಂತಹ ಏರ‍್ಪಾಡು ಮಾಡಿ ಮೆಚ್ಚುಗೆ ಗಳಿಸಿದೆ. ಅಂತರಾಶ್ಟ್ರೀಯ ಕ್ರಿಕೆಟ್ ಆಡಲು ಆಗದಿದ್ದರೂ ಐ.ಪಿ.ಎಲ್‍ ಆಡಿ ಸಾಕಶ್ಟು ಹಣ ಗಳಿಸುವ ಅವಕಾಶ ಇರುವುದರಿಂದ ಈ ಪಂದ್ಯಾವಳಿ ಬಹುತೇಕ ಎಲ್ಲಾ ಆಟಗಾರರ ಮೆಚ್ಚಿನ ಪಂದ್ಯಾವಳಿಯಾಗಿದೆ. ಐ.ಪಿ.ಎಲ್‍ನ ಈ ಯಶಸ್ಸನ್ನು ಕಂಡು ಕ್ರಿಕೆಟ್ ಆಡುವ ಬೇರೆ ದೇಶಗಳು ಅಸೂಯೆ ಪಡುವಂತಾಗಿರುವುದು ಸುಳ್ಳಲ್ಲ. ಬಾರತ ತಂಡ ವಿದೇಶದಲ್ಲಿ ಅದರಲ್ಲೂ ಮುಕ್ಯವಾಗಿ ಟೆಸ್ಟ್ ಪಂದ್ಯಗಳಲ್ಲಿ ಕಳಪೆ ಆಟ ಆಡಿದಾಗಲೆಲ್ಲ ಎಲ್ಲಾ ದೇಶದ ಮಾಜಿ ಆಟಗಾರರು ಐ.ಪಿ.ಎಲ್‍ ಅನ್ನು ದೂರುತ್ತಿದ್ದರು. ಆದರೆ ಕಳೆದ ಎರಡು ವರ‍್ಶಗಳಿಂದ ಬಾರತ ತಂಡದ ಪ್ರದರ‍್ಶನದಲ್ಲಿ ಸುದಾರಣೆ ಕಂಡಿರುವುದರಿಂದ ಟೀಕೆಗಳು ಕಡಿಮೆಯಾಗಿವೆ.

2017ರ ಐ.ಪಿ.ಎಲ್‍ – ಬೆಂಗಳೂರು ತಂಡ

ಐ.ಪಿ.ಎಲ್‍ ನೋಡುವ ಕ್ರಿಕೆಟ್ ಪ್ರೇಮಿಗಳು ಯಾವ ಊರಿನವರಾಗಿದ್ದರೂ ಯಾವ ತಂಡವನ್ನು ಬೆಂಬಲಿಸಿದರೂ ಅವರೆಲ್ಲರ ಹ್ರುದಯಗಳಲ್ಲಿ ರಾಯಲ್ ಚಾಲೆಂಜೆರ‍್ಸ್ ಬೆಂಗಳೂರು ತಂಡಕ್ಕೆ ಒಂದು ವಿಶಿಶ್ಟ ಸ್ತಾನ ಇದ್ದೇ ಇದೆ. ಅದಕ್ಕೆ ಕಾರಣ ಬೆಂಗಳೂರು ತಂಡದ ಆಟದ ಪರಿ. ವಿರಾಟ್ ಕೊಹ್ಲಿ ನಾಯಕತ್ವದ ಈ ತಂಡಕ್ಕೆ ಗೇಲ್, ಡಿವಿಲಿಯರ‍್ಸ್, ವಾಟ್ಸನ್‍ರಂತಹ ಗಟಾನುಗಟಿಗಳ ಬಲವಿದೆ. ಬೆಂಗಳೂರು ತಂಡ ಚಿನ್ನಸ್ವಾಮಿ ಆಟಂಕಣದಲ್ಲಿ ಬ್ಯಾಟಿಂಗ್ ಮಾಡುವಾಗ ಅಬಿಮಾನಿಗಳು ಮಾಡುವ ಸದ್ದು, ತಂಡದ ಬಾವುಟ ಹಿಡಿದು ಬೆಂಬಲವನ್ನು ಸೂಚಿಸುವು ಪರಿಯನ್ನು ನೋಡಿ ಹಲವಾರು ಆಟಗಾರರು, ಮಾದ್ಯಮಗಳು ಮತ್ತು ಅಬಿಮಾನಿಗಳು ಬೆಂಗಳೂರಿನಂತಹ ಕ್ರಿಕೆಟ್ ವಾತಾವರಣ ಪ್ರಪಂಚದ ಬೇರೆಲ್ಲೂ ಕಾಣಲು ಸಾದ್ಯವಿಲ್ಲ ಎಂದು ಅಬಿಪ್ರಾಯ ಪಟ್ಟಿದ್ದಾರೆ. 2011ರಿಂದ 2015ರ ತನಕ ಹೆಚ್ಚು ಕನ್ನಡಿಗರು ಬೆಂಗಳೂರು ತಂಡದಲ್ಲಿ ಇಲ್ಲದಿದ್ದರೂ ಅಬಿಮಾನಿಗಳ ಬೆಂಬಲ ಕುಂದಲಿಲ್ಲ. ಇದು ಕನ್ನಡಿಗರ ಕ್ರಿಕೆಟ್ ಪ್ರೀತಿಗೆ ಹಿಡಿದ ಕನ್ನಡಿ. ಪ್ರತಿ ವರ‍್ಶವೂ ಆಕ್ರಮಣಕಾರಿ ಆಟದಿಂದ ಎಲ್ಲರ ಮನ ಗೆದ್ದಿರುವ ಬೆಂಗಳೂರು ತಂಡ ಇನ್ನೂ ಒಮ್ಮೆಯೂ ಐ.ಪಿ.ಎಲ್‍ ಗೆಲ್ಲದಿರುವುದು ಒಂದು ಕೊರಗು. ಈ ಬಾರಿ ನಾಯಕ ಕೊಹ್ಲಿ ಬುಜದ ನೋವಿನಿಂದ ಮೊದಲ ಕೆಲವು ಪಂದ್ಯಗಳನ್ನು ಆಡುತ್ತಿಲ್ಲ. ರಾಹುಲ್ ಶಸ್ತ್ರಚಿಕಿತ್ಸೆಗೆಂದು ಇಂಗ್ಲೆಂಡ್‍ಗೆ ಪ್ರಯಾಣ ಬೆಳೆಸಿದ್ದಾರೆ. ಡಿವಿಲಿಯರ‍್ಸ್ ಕೂಡ ಆರಂಬದ ಪಂದ್ಯಗಳಿಗೆ ಅನುಮಾನ ಎಂಬ ಸುದ್ದಿ ಇದೆ. ಹಾಗಾಗಿ ಮೊದಲ ಕೆಲವು ಪಂದ್ಯಗಳಿಗೆ ವಾಟ್ಸನ್ ಮುಂದಾಳು ಆಗಲಿದ್ದಾರೆ. ಹೀಗಿದ್ದರೂ ಅಬಿಮಾನಿಗಳು ಉತ್ಸಾಹ ಕಡಿಮೆಯಾಗಿಲ್ಲ. ಏಪ್ರಿಲ್ 5ರ ಚೊಚ್ಚಲ ಪಂದ್ಯಕ್ಕೆ ಕಾಯುತ್ತಾ ಕುಳಿತ್ತಿದ್ದಾರೆ. ಕನ್ನಡಿಗರಾದ ಬಿನ್ನಿ, ಅರವಿಂದ್, ಪ್ರವೀಣ್ ದೂಬೇ ಬೆಂಗಳೂರು ತಂಡದಲ್ಲಿರುವುದು ಬೆಂಬಲಿಗರಲ್ಲಿ ಹುರುಪು ತುಂಬಿದೆ.

ಐ.ಪಿ.ಎಲ್‍ನಲ್ಲಿ ಕರ‍್ನಾಟಕದ ಆಟಗಾರರು

2017 ರ ಐ.ಪಿ.ಎಲ್‍ನಲ್ಲಿ ದೇಶಿ ಕ್ರಿಕೆಟ್‍ನ ಬಲಾಡ್ಯ ತಂಡವಾದ ಕರ‍್ನಾಟಕದ 15 ಆಟಗಾರರು ಪಾಲ್ಗೊಳ್ಳುತ್ತಿದ್ದು ಪ್ರತಿಯೊಂದು ತಂಡದಲ್ಲಿಯೂ ಕನಿಶ್ಟ ಕರ‍್ನಾಟಕದ ಒಬ್ಬ ಆಟಗಾರನಿದ್ದಾನೆ. ಐ.ಪಿ.ಎಲ್‍ನಲ್ಲಿ ಈ ಬಗೆಯ ವಿಶಿಶ್ಟ ಸಾದನೆ ಮಾಡುವುದರ ಮೂಲಕ ಕರ‍್ನಾಟಕದ ಆಟಗಾರರು ಇತಿಹಾಸದ ಪುಟ ಸೇರಿದ್ದಾರೆ. ಇದು ಕರ‍್ನಾಟಕದ ಕ್ರಿಕೆಟ್ ಶಕ್ತಿಗೆ ಸೂಕ್ತ ಎತ್ತುಗೆ. ಮುಂಬೈ ತಂಡದಲ್ಲಿ ವಿನಯ್, ಸುಚಿತ್, ಕೆ. ಗೌತಮ್, ಶ್ರೇಯಸ್ ಗೋಪಾಲ್. ಕೋಲ್ಕತಾ ತಂಡದಲ್ಲಿ ಉತ್ತಪ್ಪ, ಮನೀಶ್ ಪಾಂಡೆ. ದೆಹಲಿಯಲ್ಲಿ ಕರುಣ್, ಗುಜರಾತ್ ತಂಡದಲ್ಲಿ ಶಿವಿಲ್ ಕೌಶಿಕ್, ಪಂಜಾಬ್‍ನಲ್ಲಿ ಕಾರಿಯಪ್ಪ, ಪುಣೆಯಲ್ಲಿ ಮಾಯಂಕ್ ಮತ್ತು ಹೈದರಾಬಾದ್ ತಂಡದಲ್ಲಿ ಮಿತುನ್ ಇದ್ದಾರೆ. ಹಾಗಾಗಿ ಪ್ರತಿಯೊಂದು ಪಂದ್ಯವೂ ಕರ‍್ನಾಟಕದ ಕ್ರಿಕೆಟ್ ಪ್ರಿಯರಿಗೆ ತಮ್ಮ ತಂಡದ ಪಂದ್ಯ ಎಂದೇ ಅನಿಸುವುದು ಸಹಜ. ಇಡೀ ಪ್ರಪಂಚವೇ ನೋಡುವ ಐ.ಪಿ.ಎಲ್‍ನಲ್ಲಿ ಯಾವ ತಂಡದ ಪರವಾಗಿ ಆಡಿದರೂ ನಮ್ಮ ಕರುನಾಡಿನ ಆಟಗಾರರು ಒಳ್ಳೆ ಪ್ರದರ‍್ಶನ ನೀಡಲಿ ಎಂದು ಹರಸೋಣ.

(ಮಾಹಿತಿ ಸೆಲೆ: ರಾಮಚಂದ್ರ ಮಹಾರುದ್ರಪ್ಪ)

(ಚಿತ್ರ ಸೆಲೆ: sportskeeda.comiplt20.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks