ನಗೆಬರಹ: “ನಿಮ್ಮುತ್ರ ತಪ್ಪು”

– ಕೆ.ವಿ.ಶಶಿದರ.

ಹತ್ತಾರು ಪಡ್ಡೆ ಹುಡುಗ ಹುಡುಗಿಯರೆಲ್ಲಾ ಜಾಲಿ ರೈಡಿನಲ್ಲಿದ್ದರು. ಆಗ ತಾನೆ ಪರೀಕ್ಶೆಗಳು ಮುಗಿದ ಸಂಬ್ರಮ. ಓದು, ಟ್ಯೂಶನ್‍ನ ಜಂಜಾಟ ತಾತ್ಕಾಲಿಕವಾಗಿ ಕೊನೆಯಾಗಿದ್ದು ಅವರುಗಳಿಗೆ ಕುಶಿ ತಂದಿತ್ತು. ಹುಟ್ಟಿದಾರಬ್ಯ ನಗರದ ಕಾಂಕ್ರೀಟ್ ಕಾಡಿನ ಮದ್ಯೆ ಕಾಲ ಕಳೆದವರಿಗೆ ಹಳ್ಳಿಗಾಡಿನ ಕಡೆ ಹೋಗುತ್ತಿದ್ದರಿಂದ ಉತ್ಸಾಹ ಇಮ್ಮಡಿಯಾಗಿತ್ತು. ಹಾಡು, ಕೇಕೆ ಮಾತುಗಳ ಬರಾಟೆಯಲ್ಲಿ ದಾರಿ ಸವೆದಿದ್ದೇ ತಿಳಿಯಲಿಲ್ಲ. ಅವರ ಗಮನ ರಸ್ತೆ ಕಡೆ ಹೊರಳುವ ಹೊತ್ತಿಗಾಗಲೇ ಗಾಡಿ ಹೆದ್ದಾರಿಯನ್ನು ಬಿಟ್ಟು ಹಳ್ಳಿಗಾಡಿನ ರಸ್ತೆಯ ಕಡೆ ಜಾರಿತ್ತು. ಎಲ್ಲಿಗೆ ಹೋಗುತ್ತಿದ್ದೇವೆ ಎಂಬುದು ಡ್ರೈವರ್‍ಗೆ ಹೊರತು ಪಡಿಸಿ ಬೇರಾರಿಗೂ ತಿಳಿದಿರಲಿಲ್ಲ.

“ಏ ನಿಲ್ಸು ನಿಲ್ಸು” ಅವ ಕೂಗಿದ.

ಡ್ರೈವರ್ ಕೂಡಲೆ ಬ್ರೇಕ್ ಹಾಕಿದ. ಕೀರ್…..ಎಂಬ ಚಕ್ರದ ಶಬ್ದದೊಂದಿಗೆ ಗಾಡಿ ನಿಂತಿತು.

“ಏ ಕುರಿ ಮರಿಗಳು ಮೇಕೆ ಮರಿಗಳು ಎಶ್ಟೊಂದು ಇವೆ ಇಲ್ಲಿ.. ಎಶ್ಟು ಮುದ್ದಾಗಿದೆ ಅಲ್ವ. ಬನ್ರೋ ಹೋಗಿ ಅವುಗಳನ್ನ ಹಿಡಿದು ಮುದ್ದು ಮಾಡೋಣ, ಅವುಗಳ ಜೊತೆ ಆಟ ಆಡಿ ಬರೋಣ” ಎಂದು ಒಂದೇ ಉಸಿರಿಗೆ ಗಾಡಿಯಿಂದ ಹಾರಿ ರಸ್ತೆ ದಾಟಿ ಮಂದೆಯಲ್ಲಿ ತಾನೂ ಒಬ್ಬನಾದ.

ಎಶ್ಟಾದರು ಸಮ ವಯಸ್ಸಿನ ಹತ್ತು ಹುಡುಗ ಹುಡುಗಿಯರು ಒಟ್ಟಾಗಿ ಒಂದೆಡೆ ಸೇರಿದಲ್ಲಿ ಅದೂ ಜಾಲಿ ರೈಡ್ ಸಮಯದಲ್ಲಿ ಅವರುಗಳ ಆಟ ಮಂಗನಿಗೆ ಹೆಂಡ ಕುಡಿಸಿದಂತಲ್ಲವೆ?

ಒಬ್ಬನೆಂದ –ಇದು ಕುರಿಮರಿ. ಮತ್ತೊಬ್ಬ ಅಲ್ಲಗೆಳೆದ. ಅಲ್ಲಾ ಕಣೋ ಕುರಿ ಮೈಮೇಲೆ ತುಪ್ಪುಳ ಜಾಸ್ತಿ ಇರುತ್ತೆ. ಅದಕ್ಕೆ ಇದೇ ಕುರಿ ಮರಿ ಅಂತ ಸಮಜಾಯಿಶಿ ನೀಡಿದ ಮೊದಲನೆಯವ. ತರಗತಿಯಲ್ಲಿ ಓದಿದ್ದನ್ನು ನೆನಪು ಮಾಡಿಕೊಳ್ಳಲು ತಲೆ ಕೆರೆದುಕೊಂಡ ಮತ್ತೊಬ್ಬ.

ಅವರಲ್ಲೊಬ್ಬ “ಅಲ್ನೋಡೋ ಕುರಿ ಮೇಸೋ ಅಜ್ಜ ಅಲ್ಲೇ ಇದ್ದಾನೆ. ಅವ್ನ ಕೊಂಚ ಕಿಚಾಯಿಸಿ ಮಜ ತಗಳ್ಳೋಣ ಬನ್ರೋ” ಎಂದು ಅವನತ್ರ ಹೊರಟ. ಹುಡುಗ ಹುಡುಗಿಯರ ಮಂದೆಯಲ್ಲಾ ಕೂಡಲೇ ಅವನನ್ನು ಹಿಂಬಾಲಿಸಿದರು.

“ಅಜ್ಜ ಅಜ್ಜ ಈ ಮಂದೆಲಿ ಒಟ್ಟು ಎಶ್ಟು ಕುರಿ ಮರಿ ಮೇಕೆ ಮರಿ ಇದೆ?” ಅಜ್ಜನನ್ನು ಮಾತಿಗೆಳೆದಿದ್ದರು.

ಅಜ್ಜ ಅವರ ಮುಕವನ್ನು ಒಮ್ಮೆ ನೋಡಿದ. ಅಶ್ಟು ಹೊತ್ತಿಗೆ ಮತ್ತೊಬ್ಬ “ಅಜ್ಜ ಅಜ್ಜ ಒಂದು ಪಂದ್ಯ ಕಟ್ಟುವ? ಏನಂತಿ?” ಎಂದ.

ಬಹಳ ವರ‍್ಶಗಳ ಹಿಂದೆ ಅಜ್ಜ ಕೋಳಿ ಪಂದ್ಯ ಗೆದ್ದ ನಂತರ ಯಾವ ಪಂದ್ಯವನ್ನೂ ಆಡಿರಲಿಲ್ಲ. ಅವನ ಮನಸ್ಸು ತುಡಿಯುತ್ತಿತ್ತು. ಅನಾಯಾಸವಾಗಿ ಪಂದ್ಯವಾಡಲು ಬಂದ ಆಹ್ವಾನವನ್ನು ತಿರಸ್ಕರಿಸದಾದ. ಗೋಣಾಡಿಸುತ್ತ ತನ್ನ ಒಪ್ಪಿಗೆ ಸೂಚಿಸಿದ ಅಜ್ಜ.

“ಪಂತ ಏನಪ್ಪಾ ಅಂದ್ರೆ ನಾವು ಈ ಮಂದೇಲಿ ಒಟ್ಟು ಎಶ್ಟು ಮರಿಗಳಿವೆ ಅಂತ ಹೇಳ್ತಿವಿ. ಅದು ಸರಿಯಾದ್ರೆ ನೀನು ನಮಗೊಂದು ಮರಿ ಕೊಡ್ಬೇಕು. ನಾವು ಸೋತ್ರೆ ಐನೂರು ರೂಪಾಯಿ ಕೊಡ್ತೀವಿ. ಏನಂತಿ?” ಅಜ್ಜನ ಮುಕ ನೋಡಿದರು.

ಅಜ್ಜನ ಮನಸ್ಸಿನಲ್ಲಿ ಮಂದಹಾಸ ಬೀರಿತು. ಬೇಶಾಗಿ ಶರತ್ತಿಗೆ ಒಪ್ಪಿದ. ಅವರಿಂದ ಬರಬಹುದಾದ ಉತ್ತರಕ್ಕಾಗಿ ಕಾದ.

ಈ ಅಜ್ಜ ಒಳ್ಳೆ ಹಳ್ಳಿ ಗಮಾರ ಇದ್ದಂಗಿದ್ದಾನೆ. ಎಣಿಸೊಕ್ಕೆ ಬರುತ್ತೋ ಇಲ್ವೋ. ಸರಿಯಾಗಿ ಟೋಪಿ ಹಾಕ್ಬಹುದು ಎಂದು ಕೊಂಡ್ರು ಪೇಟೆ ಮಂದಿ. ಅಜ್ಜ ಒಪ್ಪಿಗೆ ಕೊಡ್ತಿದ್ದಂಗೆ ಅವರೆಲ್ಲಾ ಗುಸು ಗುಸು ಚರ‍್ಚೆ ಮಾಡಿ ಅವರಲ್ಲಿ ಒಬ್ಬ ಅಂದ “186 ಮರಿಗಳು. ಸರೀನಾ?” ಪ್ರಶ್ನಾರ‍್ತಕವಾಗಿ ಅಜ್ಜನ ಮುಕ ನೋಡಿದ.

ಅಜ್ಜ ಮೋರೆ ಕೆಳಗೆ ಹಾಕಿದ. “ನೀವು ಹೇಳಿದ ಉತ್ರ ಸರಿ ಐತೆ. ಪಂದ್ಯ ನಾನು ಸೋತೆ. ಯಾವ್ದಾದ್ರು ನಿಮಗಿಶ್ಟವಾದ ಮರಿನ ತಕ್ಕೊಳ್ರಿ” ಅಂದ.

ಎಲ್ಲಾರು ‘ಹುರ‍್ರೇ’ ಎಂದು ಕುಣಿದಾಡುತ್ತಾ ಹೈ-ಪೈ ಹೊಡೆಯುತ್ತಾ ಚಂದಾಗಿರೋ ಮರೀನ ಹುಡ್ಕಿ ತೊಗೊಂಡ್ರು. ಅವರನ್ನೇ ನೋಡುತ್ತಿದ್ದ ಅಜ್ಜ, ಮರಿ ತೊಗೊಂಡಾದ ಮೇಲೆ “ಮಕ್ಳಾ ಆಗ ನೀವು ನನ್ನ ಜೊತೆ ಪಂದ್ಯ ಕಟ್ಟಿ ಗೆದ್ರಿ. ಬಾಳಾ ಸಂತೋಸ. ಈಗ ನನ್ನ ಸರ‍್ದಿ. ನಾನೊಂದು ಪ್ರಶ್ನೆ ಕೇಳ್ಲಾ?” ಎಂದ.

ಗೆದ್ದ ಕುಶೀಲಿದ್ದ ಅವರೆಲ್ಲಾ ಒಕ್ಕೊರಲಿನಲ್ಲಿ ‘ಆಯ್ತು’ ಅಂದ್ರು.

“ಮಕ್ಳೆ ನೀವು ಮರಿ ಗೆದ್ದಿದ್ದು ನಂಗೆ ಶಾನೆ ಸಂತೋಸ. ಆದ್ರೆ ನಂದೊಂದು ಪ್ರಶ್ನೆ ಐತೆ. ಸರ‍್ಯಾದ ಉತ್ರ ಹೇಳಿ. ಗೆಲ್ಲಿ. ಉತ್ರ ಸರಿ ಆದ್ರೆ ಮರೀನೂ ಇಟ್ಕೊಳ್ಳಿ ಅದ್ರ ಜೊತ್ಗೆ, ಎರಡ್ನೆ ಬಾರಿ ಸೋತಿದ್ದಕ್ಕೆ, ನಂತಾವ ಇರೋ ನೂರ್ ರುಪಾಯಿ ರೊಕ್ಕಾನೂ ಕೊಡ್ತೀನಿ. ನಾನು ಬಡ್ವ ಅಲ್ವಾ ಆದ್ಕೆ ಕಡ್ಮೆ ರೊಕ್ಕ. ಉತ್ರ ತೆಪ್ಪಾದ್ರೆ ನನ್ನ ಮರಿ ನಂಗೆ ವಾಪ್ಸು ಕೊಡ್ಬೇಕು ಜೊತೆಗೆ ಐನೂರ್ ರುಪಾಯಿ ಕೂಡ” ಎಂದು ಶರತ್ತು ಹಾಕಿದ.

ಈ ಹಳ್ಳಿ ಗಮಾರ‍್ನ ಹತ್ರ ಮರಿ ಜೊತೆ ನೂರ್ ರುಪಾಯಿ ರೊಕ್ಕಾನು ಹೊಡಿ ಬಹ್ದು ಅಂತ ಅದ್ಕೊಂಡು ಅವರಲ್ಲಾ ‘ಹೂಂ’ ಎನ್ನುತ್ತಾ ಗೋಣಾಡ್ಸಿದ್ರು.

ಅಜ್ಜ ತನ್ನ ಪ್ರಶ್ನೆನ ಪ್ರಾರಂಬ ಮಾಡ್ದ.

“ಮಕ್ಳೆ ನಂತಾವ ಇದ್ದ ಮಂದೇಲಿ ಒಟ್ಟು 186 ಮೇಕೆ ಕುರಿ ಇದ್ವು ಸರಿನಾ? ಅದ್ರಾಗೆ ಪಂದ್ಯ ಕಟ್ಟಿ ನೀವ್ಗಳು ಒಂದು ಮರಿ ಗೆದ್ದು ತಗೊಂಡ್ರಿ ಅಲ್ವಾ. ಹಂಗಾದ್ರೆ ನಂತಾವ ಈಗ ಎಶ್ಟು ಮರಿ ಐತೆ? ಹೇಳ್ರಿ ಮತ್ತೆ” ಅತಿ ಕಶ್ಟವಾದ ಪ್ರಶ್ನೆಯನ್ನು ಮುಂದಿಟ್ಟಿರುವಂತೆ ಮುಕದಲ್ಲಿ ಮಂದಹಾಸ ಬೀರುತ್ತಾ ಕೇಳಿದ.

ಸುಲಬದ ತುತ್ತಾದ ಪ್ರಶ್ನೆಯಿಂದ ಕುಶಿಯಾದ ಅವರೆಲ್ಲಾ ಜೋರಾಗಿ ಕೇಕೇ ಹಾಕಿ ನಗುತ್ತಾ “ಅಜ್ಜ ಇದು ಬಾರಿ ದೊಡ್ಡ ಪ್ರಶ್ನೆನಾ? ಎಲ್ಲಿ ನೂರ್ ರುಪಾಯಿ ರೊಕ್ಕ ತೆಗೆದು ರೆಡಿ ಇಟ್ಕೋ” ಎಂದು ಅಜ್ಜನನ್ನು ಕಿಚಾಯಿಸಿದರು.

ಅಜ್ಜ “ಉತ್ರ ಯೇಳಿ ಮತ್ತೆ?” ಎಂದ.

ಅದಕ್ಕವರು “186ರಲ್ಲಿ ಒಂದು ಮರಿ ಕಡ್ಮೆಯಾದ್ರೆ 185 ಅಲ್ವಾ ಅಜ್ಜಾ?” ಎಂದು ಅಜ್ಜನನ್ನೇ ಪ್ರಶ್ನೆ ಮಾಡುತ್ತಾ ಉತ್ತರಿಸಿದರು. ಉತ್ತರದಿಂದ ಅಜ್ಜ ಸೋತು ಸುಣ್ಣವಾಗಿ ಪೆಚ್ಚು ಮೋರೆ ಹಾಕುವುದನ್ನೇ ಕಾದರು.

ಬಿದ್ದರೂ ಮೀಸೆ ಮಣ್ಣಾಗದಂತೆ ಇದ್ದ ಅಜ್ಜ “ನಿಮ್ಮುತ್ರ ಸರಿನಾ ತೆಪ್ಪೋ ಕೊಂಚ ಯೋಚ್ಸಿ” ಅಂತ ಸ್ವಲ್ಪ ಕಾಲಾವಕಾಶ ಕೊಟ್ಟ.

ಅವರ ಕೇಕೇ ಇನ್ನು ಹೆಚ್ಚಾಯಿತು. “ಉತ್ರ ತಪ್ಪಾಗ್ಲಿಕ್ಕೆ ಸಾದ್ಯಾನೇ ಇಲ್ಲ ಅಜ್ಜ. ಯಾಕಂದ್ರೆ ನಾವುಗಳು ಸೈನ್ಸ್ ಸ್ಟೂಡೆಂಟ್ಸ್. ಎಲ್ಲಿ? ನೂರ್ ರುಪಾಯಿ ರೊಕ್ಕ ತೆಗಿ” ಅಂತ ಎಲ್ರೂ ದುಂಬಾಲು ಬಿದ್ರು.

“ಮಕ್ಳೆ ಇನ್ನೊಮ್ಮೆ ಚೆನ್ನಾಗಿ ಯೋಚ್ನೆ ಮಾಡಿ” ಶಾಂತ ಚಿತ್ತದಿಂದ ಅಂದ ಅಜ್ಜ. ಪಂದ್ಯ ಗೆದ್ದ ಸಂಬ್ರಮ ಹಾಗೂ ಹುಮ್ಮಸ್ಸಿನಲ್ಲಿದ್ದ ಅವರೆಲ್ಲಾ “ಯೋಚ್ನೆ ಮಾಡೋ ಅವಶ್ಯಕತೆನೇ ಇಲ್ಲ ಅಜ್ಜ. ನಮ್ಮುತ್ರ ಸರಿ ಇದೆ ತೆಗಿ ನೂರ್ ರುಪಾಯಿ ರೊಕ್ಕಾನಾ” ಅಂದ್ರು.

ನಿದಾನವಾಗಿ ಅಜ್ಜ “ಮಕ್ಳೆ ನಿಮ್ಮುತ್ರ ತೆಪ್ಪಾಗೈತೆ …” ಎನ್ನುತ್ತಾ ಸ್ವಲ್ಪ ಪಾಸ್ ಕೊಟ್ಟ.

ಅವರಿಗೆಲ್ಲಾ ನಿಜಕ್ಕೂ ಅತ್ಯಾಶ್ಚರ‍್ಯವಾಯಿತು. ನಗುವಿನ ಅಟ್ಟಹಾಸ ಒಮ್ಮೆಲೆ ಸ್ತಬ್ದವಾಯಿತು. ಅಜ್ಜನಿಗೆಲ್ಲೋ ಮತಿ ಬ್ರಮಣೆಯಾಗಿರಬೇಕು. ಇಲ್ಲಾ ಮರಿ ಕಳ್ಕೊಂಡಿದ್ದಕ್ಕೆ ಬೇಸರವಾಗಿರ‍್ಬೇಕು. ಅದ್ಕೆ ಹೀಗೆ ಹೇಳ್ತಿದ್ದಾನೆ ಅಂದು ಕೊಂಡ್ರು. ಅಜ್ಜ ಮುಂದುವರೆಸುತ್ತಾ,

“ನಿಮ್ಮುತ್ರ ತಪ್ಪು. ಯಾಕಂದ್ರೆ ನಂತಾವ ಈಗ್ಲೂ ಇರೋ ಮರಿ ಸಂಕೆ 186ರೇ ಅದ್ಕೆ”

ಅಜ್ಜ ಏನು ಹೇಳ್ತಿದ್ದಾನೆ ಅನ್ನೋದೆ ಅವರುಗಳಿಗೆ ಅರ‍್ತವಾಗ್ಲಿಲ್ಲ. ಅಜ್ಜನ ಉತ್ತರದಿಂದ ನಗಬೇಕೋ ಅಳಬೇಕೋ ಅವರಿಗೆ ತಿಳಿಯದಾಯ್ತು. ಎಲ್ಲರೂ ಪ್ರಶ್ನಾರ‍್ತಕವಾಗಿ ಅಜ್ಜನ ಕಡೆ ನೋಡಿದ್ರು.

ಅಜ್ಜ ಮುಂದುವರೆಸುತ್ತಾ “ಯಾಕಂದ್ರೆ…..” ಎಂದು ಎಲ್ಲರ ಮುಕವನ್ನು ಒಮ್ಮೆ ತೀಕ್ಶ್ಣವಾಗಿ ದಿಟ್ಟಿಸಿ ನೋಡಿದ. “ನೀವು ಮೊದಲನೇ ಪಂದ್ಯ ಗೆದ್ದ ಕುಸೀಲಿ ಆಯ್ಕೊಂಡಿದ್ದು ಕುರಿ ಮರಿನೂ ಅಲ್ಲ ಮೇಕೆ ಮರಿನೂ ಅಲ್ಲ……ಬದ್ಲಿಗೆ ನಾಯಿ ಮರಿನಾ!!! ಅದ್ಕೆ ನಿಮ್ಮುತ್ರ ತೆಪ್ಪಾಗಿದೆ” ಅಂದ.

( ಚಿತ್ರ ಸೆಲೆ:  alwaysoutbound.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: