ಪಯೊನಿಯರ್ ಟೌನ್ – ಒಂದಾನೊಂದು ಕಾಲದ ಸಿನೆಮಾ ಸೆಟ್!

– ಕೆ.ವಿ.ಶಶಿದರ.

1946ರ ಹಿಂದು ಮುಂದಿನ ವರ‍್ಶಗಳಲ್ಲಿ ಹಾಲಿವುಡ್‍ನಲ್ಲಿ ತಯಾರಾದ ಪಾಶ್ಚಿಮಾತ್ಯ ಚಲನಚಿತ್ರಗಳು ಜನಪ್ರಿಯತೆಯ ತುತ್ತ ತುದಿಯನ್ನು ಮುಟ್ಟಿದ್ದವು. ಹಾಲಿವುಡ್‍ನ ದೈತ್ಯ ಪ್ರತಿಬೆಗಳಾದ ರಾಯ್ ರೋಜರ‍್ಸ್, ‘ಕೌಬಾಯ್ ಆಕ್ಟರ‍್’ ಡಿಕ್ ಕರ‍್ಟಿಸ್ ಮತ್ತು ರಸೆಲ್ ಹೇಡೆನ್ ಪಾಶ್ಚಿಮಾತ್ಯ ಸಿನೆಮಾಗಳನ್ನು ಶೂಟ್ ಮಾಡಲು ಹೊಸ ಹೊಸ ಲೊಕೇಶನ್‍ಗಳನ್ನು, ದುರ‍್ಗಮವಾದ ಜನನಿಬಿಡವಾದ ಪ್ರದೇಶಗಳನ್ನು ಹುಡುಕುವುದು, ಅಲ್ಲಿಗೆ ತೆರಳಿ ಶೂಟ್ ಮಾಡುವುದನ್ನು ಕಾಯಕ ಮಾಡಿಕೊಂಡಿದ್ದರು. ಒಂದು ಲೊಕೇಶನ್‍ನಿಂದ ಮತ್ತೊಂದು ಲೊಕೇಶನ್‍ಗೆ ತಮ್ಮೆಲ್ಲಾ ಪರಿಕರಗಳನ್ನು ಹೊತ್ತು ತಿರುಗುವ ಪ್ರಯಾಸದ ಪ್ರಯಾಣ ಅವರ ಶಕ್ತಿಯನ್ನು ಉಡುಗಿಸಿತ್ತು, ಉತ್ಸಾಹವನ್ನು ನುಂಗಿಹಾಕಿತ್ತು. ಕ್ರಮೇಣ ಬೇಸರ ಅವರಲ್ಲಿ ಮನೆಮಾಡಿತ್ತು.

ಈ ನಿರುತ್ಸಾಹದಿಂದ ಹೊರಬರಲು ರಾಯ್ ರೋಜರ‍್ಸ್ ಮತ್ತು ಸಂಗಡಿಗರು ಸುಲಬೋಪಾಯವನ್ನು ಚರ‍್ಚಿಸುವಾಗ, ತಮ್ಮ ಅವಶ್ಯಕತೆಗೆ ತಕ್ಕಂತೆ ತಯಾರಿಕೆಗೆ ಬೇಕಿರುವ ಎಲ್ಲಾ ಸೌಲಬ್ಯಗಳು ಒಂದೆಡೆ ಸಿಗುವಂತಿದ್ದಲ್ಲಿ ಎಶ್ಟು ಚೆನ್ನ ಎಂಬ ವಿಚಾರ ಹೊರಬಂತು. ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದು ರಾಯ್ ರೋಜರ‍್ಸ್. ಅದನ್ನು ಕಾರ‍್ಯ ರೂಪಕ್ಕೆ ತರಲು, ತನ್ನ ಕಲ್ಪನೆಯ ಚಿತ್ರ ನಗರಿಯನ್ನು ನಿರ‍್ಮಿಸಲು ಸೂಕ್ತ ತಾಣವನ್ನು ಹುಡುಕಲು ತೀರ‍್ಮಾನಿಸಿದ. ಆಗ ಆತನಿಗೆ ಹೊಳೆದಿದ್ದೇ ತಾನು ಕಂಡಿದ್ದ ಸೌತ್ ಕ್ಯಾಲಿಪೋರ‍್ನಿಯಾದ ಹೈ ಡೆಸೆರ‍್ಟ್‍ನಲ್ಲಿ ವೈಲ್ಡ್ ವೆಸ್ಟ್ ಸೆಟ್ ಎಂಬ ಸ್ತಳ. ತಮ್ಮ ಕಲ್ಪನೆಯ ಸಾಕಾರಕ್ಕೆ ಇದೇ ಅತಿ ಸೂಕ್ತ ಪ್ರದೇಶ ಎಂಬ ಅಬಿಪ್ರಾಯವನ್ನು ರೊಜರ‍್ಸ್ ಎಲ್ಲರ ಮುಂದಿಟ್ಟ. ಹೀಗೆ ಚಿಗುರೊಡೆದ ಚಿತ್ರ ನಗರಿಗೆ ರೊಜರ‍್ಸ್ ತನ್ನ ಅಮ್ರುತ ಹಸ್ತದಿಂದ 1946ರಲ್ಲಿ ಶಂಕುಸ್ತಾಪನೆಯನ್ನೂ ಸಹ ನೆರವೇರಿಸಿದ.

ಪಯೊನಿಯರ್ ಟೌನ್ ಏಲ್ಲಿದೆ?

ಯುಕ್ಕಾ ವ್ಯಾಲಿಯಿಂದ ಈಶಾನ್ಯಕ್ಕೆ ನಾಲ್ಕು ಮೈಲಿ ದೂರ ಮತ್ತು ಲಾಸ್ ಏಂಜಲೀಸ್‍ನಿಂದ ಎರಡು ಗಂಟೆ ಪ್ರಯಾಣದಶ್ಟು ದೂರವಿರುವ ಹೈ ಡೆಸರ‍್ಟ್ ನಲ್ಲಿರುವುದೇ ಪಯೊನಿಯರ್ ಟೌನ್ ಎಂಬ ಚಿತ್ರ ನಗರಿ. 19ನೇ ಶತಮಾನದಲ್ಲಿನ ಪಾಶ್ಚಿಮಾತ್ಯರ ಶೈಲಿಯಲ್ಲೇ ಅವರ ಅವಶ್ಯಕತೆಯ ಅಶ್ಟೂ ಸೆಟ್‍ಗಳು ಇಲ್ಲಿ ನಿರ‍್ಮಾಣವಾದವು. ಅಲ್ಲಿನ ಸೌಲಬ್ಯಗಳನ್ನು ಉಪಯೋಗಿಸಿಕೊಂಡು ಚಿತ್ರ ನಿರ‍್ದೇಶಕರು, ನಿರ‍್ಮಾಪಕರು ತಮಗಿಶ್ಟವಾದ ಸೆಟ್‍ಗಳನ್ನು ಹಾಕಿ ಮೂವಿ ಶೂಟ್ ಮಾಡ ಬಹುದಾಗಿತ್ತು. ಚತ್ರದ ಶೂಟಿಂಗ್ ಅವ್ಯಾಹತವಾಗಿ ನಡೆಯಲು ಚಿತ್ರ ತಂಡದಲ್ಲಿನ ನಟರು, ತಾಂತ್ರಿಕ ತಜ್ನರು, ಇತರೆ ಸಿಬ್ಬಂದಿ ಅಲ್ಲೇ ಟಿಕಾಣಿ ಹೂಡುವುದು ಅನಿವಾರ‍್ಯವಾಗಿತ್ತು. ಅದಕ್ಕಾಗಿ ಅಲ್ಲಿ ಸೂಕ್ತ ವ್ಯವಸ್ತೆ ಸಹ ನಿರ‍್ಮಾಣವಾಯಿತು. ಇದರಿಂದ ಚಿತ್ರ ನಿರ‍್ಮಾಣದ ಕರ‍್ಚು ಗಣನೀಯವಾಗಿ ಕಡಿಮೆಯಾಯಿತು.

ಅನುಶ್ಟಾನಗೊಂಡ ಈ ಯೋಜನೆ ಕೆಲವೇ ದಿನಗಳಲ್ಲಿ ಅತಿ ದೊಡ್ಡ ಯಶಸ್ಸಿಗೆ ಪಾತ್ರವಾಯಿತು. ಎರಡು ನೂರಕ್ಕೂ ಹೆಚ್ಚು ಪಾಶ್ಚಿಮಾತ್ಯರು ಪಯೊನಿಯರ್ ಟೌನ್‍ನಲ್ಲಿ ತಮ್ಮ ಚಿತ್ರಗಳ ವಿವಿದ ಸನ್ನಿವೇಶಗಳನ್ನು ಶೂಟ್ ಮಾಡಿದರು. ‘ದ ಸಿಸ್ಕೋ ಕಿಡ್’ ಇಲ್ಲಿ ಶೂಟಿಂಗ್ ಆದ ಹೆಸರಿಸಬಹುದಾದ ಮೂವಿ. ‘ಜಡ್ಜ್ ರಾಯ್ ಬೀನ್’ ಚಿತ್ರದ ನಿರ‍್ಮಾಪಕರಾದ ಎಡ್ಗರ್ ಬುಕಾನನ್ ಸೇರಿದಂತೆ ‘ದ ಜೆನೆ ಆಟ್ರಿ ಶೋ’ ಮುಂತಾದ ಹೆಸರಾಂತ ಟಿವಿ ಶೋಗಳೂ ನಿರ‍್ಮಾಪಕರುಗಳೂ ಸಹ ಇಲ್ಲಿ ಶೂಟ್ ಮಾಡಲು ಬರಲಾರಂಬಿಸಿದರು. ಇಲ್ಲಿನ ಸೌಕರ‍್ಯದಿಂದ ಉತ್ತೇಜನಗೊಂಡ ಅನೇಕ ಟಿವಿ ಸೀರಿಯಲ್‍ಗಳ ನಿರ‍್ಮಾಪಕರು ಶೂಟಿಂಗಿಗಾಗಿ ಪಯೊನಿಯರ್ ಟೌನ್‍ನಲ್ಲೇ ಬೀಡುಬಿಟ್ಟರು. ಇಲ್ಲನ ಸೌಲಬ್ಯಗಳನ್ನು ಮನಗಂಡ ನಿರ‍್ಮಾಪಕರು ಸಾಲುಗಟ್ಟಿದರು. 200ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಇದು ಪ್ರಮುಕ ಶೂಟಿಂಗ್ ತಾಣವಾಯಿತು. ಇಲ್ಲಿನ ಪೋಸ್ಟ್ ಆಪೀಸ್ ಅತಿ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು, ಇಡೀ ಅಮೇರಿಕಾದಲ್ಲೇ ಅತಿ ಹೆಚ್ಚು ‘ಪೋಟೋಗ್ರಾಪ್ಡ್ ಪೋಸ್ಟ್ ಆಪೀಸ್’ ಎಂಬ ಹೆಗ್ಗಳಿಕೆ ಪಾತ್ರವಾಯಿತು.

ಪಯೊನಿಯರ್ ಬೌಲ್

‘ದ ಜೆನೆ ಆಟ್ರಿ ಶೋ’ದ ಜೆನೆ ಆಟ್ರಿ ತನ್ನ ಶೋವನ್ನು ಆರು ಬೌಲಿಂಗ್ ಪತಗಳಿರುವ ಪಯೊನಿಯರ್ ಬೌಲ್‍ನಲ್ಲಿಯೇ ಶೂಟ್ ಮಾಡಿದ. ಆರೆಂಟ್ ಇ ತಾಂಸನ್ 1947ರಲ್ಲಿ ಈ ಪಯೊನಿಯರ್ ಬೌಲ್ ನಿರ‍್ಮಾಣವನ್ನು ಪ್ರಾರಂಬಿಸಿದ. ಪಯೊನಿಯರ್ ಟೌನ್ ನಿರ‍್ಮಾಪಕರಲ್ಲಿ ಒಬ್ಬರಾದ ರಾಯ್ ರೋಜರ‍್ಸ್ ಇಲ್ಲಿ ಮೊದಲನೇ ಬಾಲನ್ನು 1949 ರಲ್ಲಿ ಉರುಳಿ ಬಿಟ್ಟು ಲೋಕಾರ‍್ಪಣೆ ಮಾಡಿದ. ಈ ಪಯೊನಿಯರ್ ಬೌಲ್‍ನ ಹೆಗ್ಗಳಿಕೆಯಂದರೆ ನಿರಂತರ ಉಪಯೋಗದಲ್ಲಿರುವ ಅತಿ ಹಳೆಯ ಬೌಲಿಂಗ್ ಪತ ಎಂಬುದಾಗಿದೆ. ಇದನ್ನು ಮೊರೊಂಗೊ ಬೇಸಿನ್ ಹಿಸ್ಟಾರಿಕಲ್ ಸೊಸೈಟಿಯು ದ್ರುಡೀಕರಿಸಿದೆ.

ಪಯೊನಿಯರ್ ಟೌನ್‍ನ ಅವಸಾನ

ಜುಲೈ 11, 2006ರಲ್ಲಿ ಮಿಂಚಿನಿಂದಾಗಿ ಸಂಬವಿಸಿದ ಅತಿ ಬೀಕರ ಸಾಟೂತ್ ಕಾಂಪ್ಲೆಕ್ಸ್ ಪೈರ್‍ನಲ್ಲಿ ಪಯೊನಿಯರ್ ಟೌನ್‍ನ ಕೆಲವೊಂದು ಬಾಗ ಸುಟ್ಟು ಬೂದಿಯಾಯಿತು. ಈ ಬೆಂಕಿ ಎಶ್ಟು ಗಾಡವಾಗಿತ್ತೆಂದರೆ ಯುಕ್ಕಾ ವ್ಯಾಲಿ ಮತ್ತು ಮೊರೊಂಗೊ ವ್ಯಾಲಿಯ ಬಹುತೇಕ ಬಾಗಗಳು ಬೆಂಕಿಗೆ ಆಹುತಿಯಾದವು. ಈ ಬೆಂಕಿ ದುರಂತದಲ್ಲಿ ಸುಟ್ಟು ಹೋಗಿದ್ದು ಸುಮಾರು 61,700 ಎಕರೆಯಶ್ಟು ವಿಶಾಲವಾದ ಪ್ರದೇಶ. ಇದರೊಂದಿಗೆ 50 ಮನೆಗಳು, 13 ಗ್ಯಾರೇಜ್‍ಗಳು, 191 ಕಾರುಗಳು ಮತ್ತು ಹಲವಾರು ಟ್ರಕ್‍ಗಳು ಕೂಡ ಸುಟ್ಟುಹೋದವು. ಬೆಂಕಿ ಹರಡದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ತೆಗೆದುಕೊಂಡ ಕಾರಣ ಒಂದು ಸಾವನ್ನು ಹೊರತುಪಡಿಸಿ ಹೆಚ್ಚು ಪ್ರಾಣಹಾನಿಯಾಗಲಿಲ್ಲ.

ಅಗ್ನಿಶಾಮಕದಳದವರ ಅವಿರತ ಹೋರಾಟದಿಂದ ಕೆಲವೊಂದು ಐತಿಹಾಸಿಕ ಮೂವಿ ಸೆಟ್‍ಗಳನ್ನು ಮಾತ್ರ ಬಚಾವು ಮಾಡಲು ಸಾದ್ಯವಾಯಿತು. ಚರಿತ್ರಾರ‍್ಹ ಸೆಟ್‍ಗಳಲ್ಲಿ ‘ಪಪ್ಪಿ ಅಂಡ್ ಹ್ಯಾರಿಯಟ್’ನ ಪಯೊನಿಯರ್ ಟೌನ್ ಪ್ಯಾಲೆಸ್, ಹಲವು ವರುಶಗಳಿಂದಿದ್ದ ಸ್ತಳೀಯ ಕ್ಲಬ್ ಮಾತ್ರ ಬೆಂಕಿ ಅನಾಹುತದಿಂದ ಉಳಿಯಿತು. ಈ ಸ್ತಳೀಯ ಕ್ಲಬ್‍ನ ಪೋಶಕರಲ್ಲಿ ಪ್ರಸಿದ್ದ ಜೆಪ್ಲಿನ್ ಸಂಗೀತಗಾರರಾದ ಎರಿಕ್ ಬರ‍್ಡನ್ ಮತ್ತು ರಾಬರ‍್ಟ್ ಪ್ಲಾಂಟ್ ಸಹ ಒಬ್ಬರು.

ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ನಗರದ ಜನ – ಕಲಾವಿದರಿರಬಹುದು, ವ್ಯಾಪರಸ್ತರಿರಬಹುದು, ನಗರದ ಯಾಂತ್ರಿಕತೆಯ ಒತ್ತಡದಿಂದ ದೂರವಿರಲು ಬಯಸಿ ಇಲ್ಲಿಗೆ ವಲಸೆ ಬಂದು, ಆಸ್ತಿಯನ್ನು ಕರೀದಿಸಿ ನೆಮ್ಮದಿಯಿಂದ ಕಾಲಕಳೆದಿದ್ದುಂಟು. ಇದರಿಂದಾಗಿ ಟೌನ್‍ನ ಸುತ್ತ ಮುತ್ತ ರಿಯಲ್ ಎಸ್ಟೇಟ್ ದಂದೆ ಬಿರುಸಾಗಿ ಸಾಗಲು ಪ್ರಾರಂಬವಾಯಿತು. ಇಲ್ಲಿಗೆ ವಲಸೆ ಬಂದ ಪ್ರಮುಕರಲ್ಲಿ ಕೆನೆಡಿಯನ್ ಚಲನಚಿತ್ರೋದ್ಯಮಿ ಜೂಲಿಯನ್ ಟಿ. ಪಿಂಡರ್ ಹಾಗೂ ಅವನ ಸಂಗಾತಿ, ಬೆಲ್ಜಿಯನ್ ಆಬರಣಗಳ ವಿನ್ಯಾಸಕ ಮತ್ತು ಅವನ ಪಾಲುದಾರ, ನಿವ್ರುತ್ತಿ ಹೊಂದಿದ ಆಬರಣ ಉದ್ಯಮದ ಕಾರ‍್ಯನಿರ‍್ವಾಹಕ ಮುಂತಾದವರೆಲ್ಲಾ ಸೇರಿದ್ದಾರೆ. ಜೂಲಿಯನ್ ಟಿ. ಪಿಂಡರ್ ತನ್ನ ಸತಿಯ ಸಮೇತ ಇಲ್ಲಿಗೆ ಬಂದು ಮುಚ್ಚಿ ಹೋಗಿದ್ದ ಗಣಿಯ ಕ್ಯಾಬಿನ್ ಅನ್ನು ಕರೀದಿಸಿ ಅದನ್ನು ಪರಿವರ‍್ತಿಸಿ ಮನೆಯಾಗಿಸಿ ಅಲ್ಲೇ ವಾಸಿಸಲು ಪ್ರಾರಂಬಿಸಿದರು.

ಪಪ್ಪಿ ಅಂಡ್ ಹ್ಯಾರಿಯಟ್‍ನ ಪಯೊನಿಯರ್ ಟೌನ್ ಪ್ಯಾಲೆಸ್ ಇಲ್ಲಿ ಅತಿ ಮುಕ್ಯ ವೀಕ್ಶಣೀಯ ಸ್ತಳ. ತಿನ್ನಲು ಬರ‍್ಗರ‍್ಸ್, ಸ್ಯಾಂಡ್ವಿಚ್‍ಗಳು, ಮನರಂಜನೆಗಾಗಿ ಲೈವ್ ಮ್ಯೂಸಿಕ್ ಹಾಗೂ ಚಳಿಯಿಂದ ಕಾಪಾಡಿಕೊಂಡು ಬೆಚ್ಚಗಿರಲು ಬಿಸಿ ಕಾಯಿಸುವ ಒಲೆಗಳೂ ಇಲ್ಲಿ ಸಿಗುತ್ತವೆ.

2014ರ ಜನಗಣತಿಯಂತೆ ಇಲ್ಲಿನ ಜನಸಂಕ್ಯೆ ಕೇವಲ 600 ಮಾತ್ರ.

(ಚಿತ್ರ ಸೆಲೆ: wiki/bowl, wiki/signatlasobscura.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: