“ನಮ್ಮ ಬೆಂಗಳೂರು”

– ಚಂದ್ರಮೋಹನ ಕೋಲಾರ.

ಇದು ರಾಜ್ಯ ರಾಜದಾನಿಯನ್ನ ಬೆಂಗಳೂರಿಗರು ಅನ್ನೋ ಬೆಂಗಳೂರಿಗರು ಮುದ್ದಾಗಿ, ಪ್ರೀತಿಯಿಂದ, ಇಚ್ಚೆ ಪಟ್ಟು ಕರೆಯೋ ಹೆಸರು. ಬಹುಶಹ ಇತ್ತೀಚಿನ ದಿನಗಳಲ್ಲಿ, ನಮ್ಮ ಬೆಂಗಳೂರು ಕಸ ಸಮಸ್ಯೆ, ರಸ್ತೆ ಗುಂಡಿಗಳು, ಮಳೆ ಬಂದಾಗ ತುಂಬಿಕೊಳ್ಳೋ ಚರಂಡಿಗಳು, ರಸ್ತೆಯಲ್ಲಿ ಹೋಗುವಾಗ ಎಲ್ಲೆಂದರಲ್ಲಿ ಅಡ್ಡ ಬರೋ ಬೀಡಾಡಿ ದನಗಳು, ಬೀದಿ ನಾಯಿಗಳು… ಹೀಗೆ ಸಮಸ್ಯೆಗಳ ಊರಾಗಿ, ಬೇರೆಯ ಊರಿಂದ ಬರೋರಿಗೆ, ಅಬ್ಬಾ! ಇದೆಂತಾ ಊರಪ್ಪಾ, ನಾವು ಅಲ್ಲಿಗೆ ಹೋಗೋದು ಹೇಗಪ್ಪಾ? ಅನ್ನೋ ಬಾವನೆ ಸ್ರುಶ್ಟಿಸುತ್ತೆ. ಆದ್ರೆ, ನಮ್ಮ ಬೆಂಗಳೂರು ನಿಜವಾಗಿಯೂ ಈ ರೀತಿ ಇದ್ಯಾ ಅನ್ನುವ ಪ್ರಶ್ನೆಯ ಬೆನ್ನು ಹತ್ತಿ ಹೋದರೆ, ತೆರೆದುಕೊಳ್ಳೋ ಹೊಸದೊಂದು ಲೋಕ ನಮ್ಮ ಬೆಂಗಳೂರಿನ ಮತ್ತೊಂದು ಮುಕದ ಅನಾವರಣಗೊಳಿಸುತ್ತೆ.

ಬೆಂದಕಾಳೂರಿನ ಇತಿಹಾಸವನ್ನ ಕೆದಕುತ್ತಾ ಹೋದರೆ, ನಿಮಗೆ ಗೊತ್ತಿಲ್ಲದ ಅನೇಕ ಸ್ವಾರಸ್ಯಕರ ವಿಚಾರಗಳು ತಿಳಿಯುತ್ತವೆ. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಹುಟ್ಟಿರುವವರೋ, ಇಲ್ಲವೇ ಇಲ್ಲಿ ಬೆಳೆದಿರುವವರೋ, ಕಾಲೇಜು ಶಿಕ್ಶಣ ಮುಗಿಸಿರುವವರೋ ನಿಮಗೆ ಪರಿಚಯದವರಿದ್ರೆ ಅವರ ಬಳಿ ದ್ವಿಚಕ್ರ ವಾಹನ ಇದ್ರೆ, ಅವರನ್ನು ಸ್ವಲ್ಪ ಗಮನಿಸಿ. ಮಲೆನಾಡು, ಕರಾವಳಿ ಪ್ರದೇಶದ ಜನ, ಹೇಗೆ ಕೊಡೆಯನ್ನ ಜೊತೆಗಿಟ್ಟುಕೊಂಡಿರುತ್ತಾರೋ, ಅದೇ ರೀತಿ ಒಂದು ರೇನ್ ಕೋಟ್ ಅತವಾ ಜರ‍್ಕಿನ್ ಅತವಾ ಸ್ವೆಟರ್ ಇಟ್ಟುಕೊಂಡೇ ಇರುತ್ತಾರೆ. ಬೇಸಿಗೆ ಕಾಲದಲ್ಲೂ ಸಹ ಈ ವಸ್ತುವನ್ನ ತಪ್ಪಿಸಲ್ಲ. ಯಾಕೆ ಗೊತ್ತಾ? ಬೆಂಗಳೂರಿನ ಹವಾಮಾನ ಗಂಟೆಗೊಂದು ಬಾರಿ ಬದಲಾಗುತ್ತೆ. ಈಗ ಅಕ್ಶರಶಹ ಬೆಂಕಿಯಂತೆ ರವಿ ತನ್ನ ಶಾಕವನ್ನ ಉಗಳುತ್ತಿದ್ರೆ, ಅರ‍್ದ ಗಂಟೆ ಬಳಿಕ ಉದೋ ಅಂತಾ ಮಳೆ ಸುರಿಯುತ್ತೆ. ಈ ಮೂಲಕ ಇಳೆಯನ್ನ ತಂಪಾಗಿಸೋ ವರುಣ, ತನ್ನ ಜೊತೆಗೆ ಚಳಿಯನ್ನೂ ಕರೆ ತಂದಿರ‍್ತಾನೆ. ಹೀಗಾಗಿಯೇ, ಬದಲಾಗೋ ಹವಾಮಾನಕ್ಕೆ ಬೆಂಗಳೂರಿಗರು ಸದಾ ಸಿದ್ದರಾಗಿರ‍್ತಾರೆ.

ಬೆಂಗಳೂರು, ಅವಕಾಶಗಳ ಆಗರ. ಇಲ್ಲಿಗೆ ಕಾಲಿ ಕೈಯಲ್ಲಿ ಬಂದು, ಕೈ ತುಂಬಾ ಬಾಚಿಕೊಂಡು ಹೋದವರಿದ್ದಾರೆ. ಕುಡಿ ಮೀಸೆ ಚಿಗುರುವ ವಯಸ್ಸಿನಲ್ಲಿ, ಬೆಂಗಳೂರು ಎಂಬ ಮಾಯಾ ನಗರಿಯ ಸಹವಾಸಕ್ಕೆ ಬಿದ್ದು ಹಾಳಾದವರು ಸಿಗುತ್ತಾರೆ. ಒಂದು ಕಾಲಕ್ಕೆ ಮಚ್ಚು, ಲಾಂಗುಗಳ ಅಬ್ಬರದಲ್ಲಿ ಕಳೆದು ಹೋಗುತ್ತಿದ್ದ ಕಡೆ, ಈಗ ಜಣಜಣ ಕಾಂಚಾಣ ಎಣಿಸುವ ಕನಸ್ಸು ಕಾಣುತ್ತಿರುವ ಯುವಕರು ಕಾಣುತ್ತಾರೆ. ಇದೆಲ್ಲಾ ಜಾಗತೀಕರಣದ ಮಹಿಮೆ ಎಂದರೆ ತಪ್ಪಾಗಲಿಕ್ಕಿಲ್ಲ. ಇದರ ನಡುವೆ ಅಲ್ಲಲ್ಲಿ ರೌಡಿಗಳು ಹೆಣವಾಗಿ ಪತ್ತೆಯಾಗಿ, ಹಳೆಯ ದಿನಗಳನ್ನ ಮೆಲುಕು ಹಾಕಲು ಕಾರಣವಾಗುತ್ತವೆ.

ಬೆಂಗಳೂರಿನ ಪ್ರಮುಕ ಸ್ತಳ ಅಂದರೆ, ಮೆಜೆಸ್ಟಿಕ್. ಪ್ರಪಂಚದ ಯಾವ ಮೂಲೆಯಿಂದ ಬೆಂಗಳೂರಿಗೆ ಬಂದರೂ, ಒಂದಲ್ಲಾ ಒಂದು ಸಂದರ‍್ಬದಲ್ಲಿ, ಅವರು ಮೆಜೆಸ್ಟಿಕ್ ಗೆ ಕಾಲಿಟ್ಟಿರುತ್ತಾರೆ. ಅಶ್ಟರ ಮಟ್ಟಿಗೆ, ಮೆಜೆಸ್ಟಿಕ್ ಪ್ರಸಿದ್ದವಾಗಿದೆ. ಇಂತಹ ಮೆಜೆಸ್ಟಿಕ್ ನಿಂದ ಎಲ್ಲಿಯೂ ಜಾಗ ಸಿಗದೇ, ಇದ್ದರೂ ಇಲ್ಲದಂತಿರುವುದೇ ಕ್ರಿಶ್ಣರಾಜೇಂದ್ರ ಮಾರುಕಟ್ಟೆ ಅತವಾ ಕೆ ಆರ್ ಮಾರ‍್ಕೆಟ್. ಮೆಜೆಸ್ಟಿಕ್ ಗೆ ಸೊಪಿಸ್ಟಿಕೇಟೆಡ್ ಜನ ಸಹ ಕಾಲಿಡಬಹುದು. ಆದರೆ, ಇಲ್ಲಿಗೆ ಬರಲು ಯಾರೂ ಮನಸು ಮಾಡಲ್ಲ. ಎಶ್ಟೋ ಜನರಿಗೆ ಗೊತ್ತಿಲ್ಲದ ಅದೆಶ್ಟೋ ವಿಶಯಗಳನ್ನ ತನ್ನಲ್ಲಿ ಅಡಗಿಸಿಟ್ಟುಕೊಂಡಿರುವ ಮಾರ‍್ಕೆಟ್ ಪ್ರದೇಶ, ಮೆಜೆಸ್ಟಿಕ್ ಗಿಂತಾ ಹತ್ತುಪಟ್ಟು ಜನ ಹೊಟ್ಟೆ ಹೊರೆಯಲು ನೆರವಾಗುತ್ತಿದೆ. ಆದರೂ ಅದೇಕೋ, ಬೆಂಗಳೂರಿಗರಿಗೆ ಕೆ ಆರ್ ಮಾರ‍್ಕೆಟ್ ಅಂದರೆ ತಾತ್ಸಾರ.

ಕೆ ಆರ್ ಮಾರ‍್ಕೆಟ್‌ಗೆ ಒಮ್ಮೆ ನೀವು ಬೇಟಿ ಕೊಟ್ರೆ, ಸಣ್ಣ ಸೂಜಿಯಿಂದ ಹಿಡಿದು ಯಾವ ವಸ್ತು ಬೇಕಾದ್ರೂ ಸಿಗುತ್ತದೆ. ಆದುನಿಕತೆಯ ಕುರುಹುಗಳಾದ ಮೊಬೈಲ್‌, ಕಂಪ್ಯೂಟರ‍್‌ ಬೇಕಾದ್ರೆ, ಮಾರ‍್ಕೆಟ್‌ನಿಂದ ಕೇವಲ ಗಾವುದ ದೂರದಲ್ಲಿರೋ ಸರ‍್ದಾರ‍್‌ ಪತ್ರಪ್ಪ ರಸ್ತೆ ಅಂದರೆ, ಎಸ್‌ ಪಿ ರೋಡ್‌ನಲ್ಲಿ ನಿಮಗೆ ಬೇಕಾದದ್ದು ಸಿಗುತ್ತದೆ. ಅಲ್ಲಿಂದ ಮುಂದೆ ಬರುತ್ತಿದ್ದಂತೆ ಮನೆಗೆ ಬೇಕಿರೋ ವಸ್ತುಗಳು ಒಂದೊಂದಾಗಿ ಸಿಗುತ್ತವೆ. ಇದು ಮಾರ‍್ಕೆಟ್‌ ಪ್ರದೇಶದ ಹೆಗ್ಗಳಿಕೆ. ಅವೆನ್ಯೂ ರೋಡ್‌, ತರಗುಪೇಟೆ, ಅರಳೇಪೇಟೆ, ಚಿಕ್ಕಪೇಟೆ, ಬಿವಿಕೆ ಅಯ್ಯಂಗಾರ‍್‌ ರೋಡ್‌ – ನಿಮಗನಿಸಬಹುದು ಇವೆಲ್ಲಾ ಮೆಜೆಸ್ಟಿಕ್‌ಗೂ ಹತ್ತಿರ ಎಂದು. ಆದರೆ, ಬೆಂಗಳೂರಿಗರು ಈ ಪ್ರದೇಶಗಳಿಗೆ ಹೋಗಬೇಕಾದರೆ ಕೆ ಆರ್ ಮಾರ‍್ಕೆಟ್‌ನ ಆಶ್ರಯಿಸುತ್ತಾರೆ ಎಂಬುದು ಬಹಳ ಜನರಿಗೆ ಗೊತ್ತಿರಲು ಸಾದ್ಯವೇ ಇಲ್ಲ. ಅಶ್ಟರ ಮಟ್ಟಿಗೆ ಮಾರ‍್ಕೆಟ್‌ ಬೆಂಗಳೂರಿನಲ್ಲಿ ಬೆರತು ಹೋಗಿದೆ.

ಬೆಂಗಳೂರಿನಲ್ಲಿ ಪ್ರಕ್ಯಾತ ಸ್ತಳ ಎಂದರೆ, ಅದು ಮಹಾತ್ಮ ಗಾಂದಿ ರಸ್ತೆ ಅತವಾ ಎಂ ಜಿ ರೋಡ್‌. ಬಾರತಕ್ಕೆ ಸ್ವಾತಂತ್ರ್ಯ ಸಿಗುವ ಮುನ್ನ ಇದಕ್ಕಿದ್ದ ಹೆಸರು ಸೌತ್‌ ಪರೇಡ್‌ ರೋಡ್‌. ಹೆಸರಿನಲ್ಲಿ ಮಹಾತ್ಮ ಗಾಂದಿ ಅಂತಾ ಇದ್ದರೂ, ಇಲ್ಲಿ ಗಾಂದಿ ಪ್ರತಿಪಾದಿಸಿದ ತತ್ವಗಳಿಗೆ ವಿರುದ್ದವಾದದ್ದೇ ನಡೆಯುತ್ತದೆ ಅನ್ನುವುದು ವಿಚಿತ್ರವಾದರೂ ಸತ್ಯ. ಬೆಂಗಳೂರಿನ ಅತ್ಯಂತ ಪ್ರತಿಶ್ಟಿತ ಸ್ತಳ ಎಂದರೆ, ಇದೇ ರಸ್ತೆ. ಇಲ್ಲಿ ಸುತ್ತಮುತ್ತಲಿನ ರಸ್ತೆಗಳೆಲ್ಲವೂ ಆಂಗ್ಲಮಯವೇ. ಬ್ರಿಗೇಡ್‌ ರೋಡ್‌, ಸೇಂಟ್‌ ಮಾರ‍್ಕ್ಸ್‌ ರೋಡ್‌, ಚರ‍್ಚ್‌ ಸ್ಟ್ರೀಟ್‌, ಲ್ಯಾವೆಲ್ಲೇ ರೋಡ್‌, ರೆಸಿಡೆನ್ಸಿ ರೋಡ್‌, ಪ್ರಿಮ್‌ರೋಸ್‌ ರೋಡ್‌, ಮೆಗ್ರಾತ್‌ ರೋಡ್‌. ಬೆಂಗಳೂರು ಎಂಬ ಕಾಸ್ಮೊಪಾಲಿಟನ್‌ ಸಿಟಿಯ ವೈವಿದ್ಯತೆ ಕಾಣಸಿಗುವುದೇ ಇಲ್ಲಿ. ಇಲ್ಲಿಗೆ ಬರುವವರೆಲ್ಲಾ ಹೈ-ಪೈ ಜನ.

ನಮ್ಮ ಮೆಟ್ರೋ ಎಂ ಜಿ ರಸ್ತೆಯ ಅಂದಕ್ಕೆ ಸ್ವಲ್ಪ ಕುಂದು ತಂದಿದೆ ಎಂದು ಹೇಳಬಹುದು. ಯಾಕೆಂದರೆ, ನಮ್ಮ ಮೆಟ್ರೋ ಶುರುವಾಗುವ ಮುನ್ನ ಎಂ ಜಿ ರಸ್ತೆಯ ಮೆಟ್ರೋ ನಿರ‍್ಮಿತವಾಗಿರುವ ಬದಿಯಲ್ಲಿದ್ದ ಮರಗಳು ಎಂ ಜಿ ರಸ್ತೆಯ ಸೌಂದರ‍್ಯವನ್ನು ಹೆಚ್ಚಿಸುತ್ತಿದ್ದವು. ಅದು ಹಾಗೆಯೇ ಇದ್ದಿದ್ದರೆ ಇನ್ನೂ ಚೆನ್ನಾಗಿ ಇರುತ್ತಿತ್ತೇನೋ? ಆದರೆ, ಅಬಿವ್ರುದ್ದಿಯ ಹೆಸರಲ್ಲಿ ಮೆಟ್ರೋ ನಿರ‍್ಮಾಣಕ್ಕಾಗಿ ಅವನ್ನು ಕತ್ತರಿಸಿ, ಬಾನೆತ್ತರದಲ್ಲಿ ಮೆಟ್ರೋ ಹಳಿಗಳು ಮತ್ತು ನಿಲ್ದಾಣ ನಿರ‍್ಮಿಸಲಾಗಿದೆ. ಹಿಂದಿದ್ದ ಆ ಎಂ ಜಿ ರಸ್ತೆಯ ಅಂದ ಮುಂದೆದಾರೂ ಮರಳಿ ಬರಬಹುದೇ ಎಂಬ ಆಸೆಗಣ್ಣುಗಳಿಂದ ಎಶ್ಟೋ ಮಂದಿ ಕಾತರಿಸುತ್ತಿದ್ದಾರೆ. ಬೆಂಗಳೂರಿಗೆ ಬಹುಸಂಸ್ಕ್ರುತಿಯ ನಗರ ಎಂಬ ಹೆಸರು ಬರಲು ಕಾರಣವಾಗಿರುವ ಆಂಗ್ಲೋ-ಇಂಡಿಯನ್ನರು, ಎಂ ಜಿ ರಸ್ತೆಯ ಸುತ್ತಮುತ್ತ ಇದ್ದಾರೆ. ಇವರಿಂದಾಗಿಯೇ ಎಂ ಜಿ ರಸ್ತೆ ಮತ್ತು ಬ್ರಿಗೇಡ್‌ ರಸ್ತೆ ಪ್ರಕ್ಯಾತವಾಗಲು ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಮೆಜೆಸ್ಟಿಕ್ ಹೇಗೆ ಬೆಂಗಳೂರಿನ ಕೇಂದ್ರ ಸ್ತಾನ ಎನಿಸಿಕೊಳ್ಳುತ್ತದೆಯೋ, ಅದೇ ರೀತಿ ಇತ್ತೀಚಿನ ದಿನಗಳಲ್ಲಿ ಎಂ ಜಿ ರಸ್ತೆ ಕೂಡ ಬೆಂಗಳೂರಿನ ಕೇಂದ್ರ ಸ್ತಾನವಾಗಿ ಬದಲಾಗಿದೆ.

ನಮ್ಮ ಬೆಂಗಳೂರಿನ ಕುರಿತು ಬರೆಯುತ್ತಾ ಹೋದರೆ ಪುಟಗಳು ಸಾಲದು ಎಂಬಶ್ಟು ಬರೆಯಬಹುದು. ಬಹುಶಹ ಬಾರತದ ಎಲ್ಲ ಪ್ರಮುಕ ನಗರಗಳಿಗೆ ಹೋಲಿಸಿದರೆ ಸುಂದರವಾಗಿರುವ ನಗರ ಬೆಂಗಳೂರು. ನನ್ನ ಮಟ್ಟಿಗಾದರೂ, ನಾನು ನೋಡಿರುವ ಮೂರು ರಾಜದಾನಿ ನಗರಗಳ ಪೈಕಿ (ಇದರಲ್ಲಿ ದೇಶದ ರಾಜದಾನಿ ದೆಹಲಿಯೂ ಸೇರಿದೆ) ಬೆಂಗಳೂರು ಎಲ್ಲಕ್ಕಿಂತಲೂ ಉತ್ತಮ ಎಂಬುದು ನನ್ನ ಅನಿಸಿಕೆ. ಇಂತಹ ನಮ್ಮ ಬೆಂಗಳೂರು ಇತ್ತೀಚಿನ ದಿನಗಳಲ್ಲಿ ತನ್ನ ಸೌಂದರ‍್ಯವನ್ನು ಕಳೆದುಕೊಳ್ಳುತ್ತಿರುವುದು ಬೆಂಗಳೂರಿಗರಿಗೆ ಬೇಸರದ ಸಂಗತಿ. ಆದುನಿಕತೆ, ಅಬಿವ್ರುದ್ದಿಯ ಹೆಸರಿನಲ್ಲಿ ಬೆಂಗಳೂರು ತನ್ನ ಅಂದ ಚೆಂದವನ್ನು ಕಳೆದುಕೊಳ್ಳುತ್ತಿರುವುದು ಮಾತ್ರ ಅಕ್ಶರಶಹ ಸತ್ಯ.

( ವಿ.ಸೂ: ಎಲ್ಲವೂ ನನಗೇ ಗೊತ್ತಿದೆ ಎಂತಲೋ, ನೀವೆಲ್ಲ ಏನೂ ಗೊತ್ತಿಲ್ಲದವರು ಎಂದೋ ಇದನ್ನು ಬರೆದಿಲ್ಲ. ಬೆಂಗಳೂರಿನ ಕುರಿತು ಕುತೂಹಲ ಇರೋರಿಗೆ, ಎಲ್ಲಿಂದಲೋ ಬಂದು ಈ ಊರಿನ ಕುರಿತು ಏನೂ ಗೊತ್ತಿಲ್ಲದಿರೋರಿಗೆ, ಬೆಂಗಳೂರಿನ ಕುರಿತು ತಿಳಿದುಕೊಳ್ಳಬೇಕೆಂಬ ಹಂಬಲ ಇರೋರಿಗೆ – ನನಗಿರುವ ಅಲ್ಪಜ್ನಾನವನ್ನು ಹಂಚುವುದಕ್ಕಾಗಿ ಇದನ್ನು ಬರೆದಿದ್ದೇನೆ. ನನಗೆ ಗೊತ್ತಿಲ್ಲದೇ ಯಾವುದೇ ತಪ್ಪುಗಳಿದ್ದರೂ ತಿಳಿಸಿದರೆ ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ಎಲ್ಲದಕ್ಕಿಂತಲೂ ಮುಕ್ಯವಾಗಿ ಇಲ್ಲಿರುವುದು ಕೇವಲ ನನ್ನ ಅನಿಸಿಕೆ ಮಾತ್ರ. ನಿಮ್ಮ ಟೀಕೆ-ಟಿಪ್ಪಣಿಗಳಿಗೆ ಸದಾ ಸ್ವಾಗತ 🙂 )

( ಚಿತ್ರ ಸೆಲೆ: ibtimes.co.in, bangalorefirst.in, sujnaturelover  )Categories: ನಲ್ಬರಹ

ಟ್ಯಾಗ್ ಗಳು:, , , , , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s