ಡಾ|| ರಾಜ್ – ಒಂದು ಮುತ್ತಿನ ಕತೆ

ವೆಂಕಟೇಶ್ ಯಗಟಿ.


ಅದೊಂದು ದ್ರುವತಾರೆ, ಅದೊಂದು ಹೊಸಬೆಳಕು, ಅದೊಂದು ಮುತ್ತು ಮತ್ತು ಇದು ಒಂದು ಮುತ್ತಿನ ಕತೆ! ನನಗೆ ತಿಳಿದಿರೋ ಹಾಗೆ ಅಬಿಮಾನಿಗಳನ್ನು ದೇವರು ಎಂದು ಕರೆದ ಏಕೈಕ ವ್ಯಕ್ತಿ ಡಾ||ರಾಜಕುಮಾರ್. ನಮ್ಮೆಲ್ಲರ ಮುತ್ತುರಾಜ್. ರಾಜಕುಮಾರ್ ಅವರಂತಹ ನಟ ಸಾರ‍್ವಬೌಮ ಮತ್ತೆ ಹುಟ್ಟಿಬರಲು ನಾವಿನ್ನೆಶ್ಟು ಶತಮಾನಗಳು ಕಾಯಬೇಕೋ ದೇವರೇ ಬಲ್ಲ!!

24 ಏಪ್ರಿಲ್ 1929 ರಂದು ಕಲಾದೇವಿಗೆ ಪ್ರಸವವೇದನೆ, ಆಕೆ ಜನ್ಮ ನೀಡಿ ಮುನ್ನುಡಿ ಬರೆದಿದ್ದು ಡಾ|| ರಾಜಕುಮಾರ್ ಎಂಬ ದಂತಕತೆಗೆ. ರಂಗಬೂಮಿಯ ಹಿನ್ನೆಲೆಯ ತಂದೆ ಪುಟ್ಟಸಾಮಯ್ಯನವರ ಸೇರಿದ ಮುತ್ತುರಾಜ್, ರಾಜಕುಮಾರ್ ಆಗಿ ಕರ‍್ನಾಟಕಕ್ಕೆ ಪರಿಚಿತರಾಗಿದ್ದು ಮೊದಲ ಚಿತ್ರವಾದ ‘ಬೇಡರ ಕಣ್ಣಪ್ಪ’ ಮೂಲಕ.  ಅಲ್ಲಿಂದ ಹಿಂತಿರುಗಿ ನೋಡದ ರಾಜ್, ಕನ್ನಡ ಚಿತ್ರರಂಗವನ್ನು ಇಡೀ ದೇಶ ನೋಡುವಂತೆ ಮಾಡಿದ್ದು ತಮ್ಮ ಚಲನಚಿತ್ರಗಳಿಂದ.

ಅಬಿನಯದಿಂದ ಎಲ್ಲರ ಸೆಳೆದ ರಾಜಣ್ಣ ಮಕ್ಕಳಿಂದ ಇಳಿವಯಸ್ಸಿನವರನ್ನೂ ಸಿನೆಮಾ ನೋಡುವಂತೆ ಮಾಡಿದ ಕನ್ನಡ ಚಿತ್ರರಂಗದ ಶಿಲ್ಪಿ. ಈಗಿನ ಹಾಗೆ ಆಗೆಲ್ಲಾ ಸಿನೆಮಾ ಬಿಡುಗಡೆ ಆಗಿ 3 ತಿಂಗಳಿಗೆಲ್ಲಾ ದೂರದರ‍್ಶನದಲ್ಲಿ ಪ್ರಸಾರ ಆಗ್ತಿರಲ್ಲಿಲ್ಲ. ಇಂದಿನ ಹಾಗೆ ಹಲವಾರು ಚಾನೆಲ್ಗಳೂ ಇರಲಿಲ್ಲ. ಸಿನೆಮಾ ನೋಡಲು ಎಲ್ಲರೂ ಚಿತ್ರಮಂದಿರಕ್ಕೆ ಹೋಗಬೇಕಾದ ಅನಿವಾರ‍್ಯ. ಆದರೆ ಎಲ್ಲರನ್ನೂ ತಮ್ಮ ಕಡೆ ಸೆಳೆದು ತಮ್ಮ ಚಿತ್ರಗಳಿಂದ ಸಾಮಾಜಿಕ, ಕೌಟುಂಬಿಕ ಮೌಲ್ಯಗಳನ್ನು ಎತ್ತಿಹಿಡಿದಿದ್ದು ಡಾ||ರಾಜ್.

ಬೇಡದ ಮಾತುಗಳಾಡದ ಅಣ್ಣಾವ್ರು ಯಾರಿಗೂ ಮನನೋಯಿಸಿದವರಲ್ಲ. ಕಿರಿಯರು, ಹಿರಿಯರು ಎಂದು ಬೇದಬಾವವಿಲ್ಲದೆ ಸಮಾನ ಗೌರವ ನೀಡುತ್ತಿದ್ದ ಡಾ|| ರಾಜ್ ಇಂದಿನ ಪೀಳಿಗೆಗೆ ಸ್ಪೂರ‍್ತಿಯ ಚಿಲುಮೆ ಅನ್ನೋದು ನೂರಕ್ಕೆ ನೂರು ಸತ್ಯ . ಡಾ|| ರಾಜ್ ಕೇವಲ ಒಂದು ವ್ಯಕ್ತಿಯಲ್ಲ ಅದೊಂದು ಸರಳ ವ್ಯಕ್ತಿತ್ವ, ಎಲ್ಲರೂ ಅನುಸರಿಸಬೇಕಾದ ವ್ಯಕ್ತಿತ್ವ.

ಇಂದು ನಮಗೆ ಕ್ರಿಶ್ಣ ದೇವರಾಯ, ಮಹಾಬಾರತದ ಅರ‍್ಜುನ, ಹಿರಣ್ಯಕಶಿಪು, ಕದಂಬ ದೊರೆ ಮಯೂರವರ‍್ಮ – ಹೀಗೆ ಹಲವಾರು ಪುರಾಣದ ಪಾತ್ರಗಳನ್ನು ನೆನೆದರೆ ತಟ್ಟನೆ ತಲೆಯಲ್ಲಿ ಮೂಡುವುದು ಅಣ್ಣಾವ್ರು. ಈ ಪಾತ್ರಗಳು ನೋಡಲು ಹೇಗಿರಬಹುದು ಅಂತ ನೆನದರೆ ಅವರೆಲ್ಲಾ ಡಾ|| ರಾಜ್ ತರಹ ಇರಬಹುದು ಅಂತ ಅನಿಸೋದು ನಿಜ. ದಾದಾಸಾಹೇಬ ಪಾಲ್ಕೆ ಪಡೆದ ಈ ಮಹಾನಟ, ಜೀವನಚೈತ್ರ ಚಿತ್ರದ ನಾದಮಯ ಹಾಡಿಗೆ ರಾಶ್ಟ್ರಪ್ರಶಸ್ತಿ ಪಡೆದಿದ್ದಾರೆ.

ಈ ಅನರ‍್ಗ್ಯರತ್ನ ನಮ್ಮಿಂದ ಕಣ್ಮರೆಯಾಗಿದ್ದು 12 ಏಪ್ರಿಲ್ 2006. ಮರಣಾನಂತರವೂ ಮಾನವೀಯತೆ ಮೆರೆದ ಅಣ್ಣಾವ್ರು ಅಂದರಿಬ್ಬರಿಗೆ ನೇತ್ರದಾನ ಮಾಡಿದ ಮಹಾಚೇತನ- ಇದು ನಮ್ಮೆಲ್ಲರಿಗೂ ಮಾದರಿ.

(ಚಿತ್ರ ಸೆಲೆ: our-karnataka.blogspot.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks