ನಗೆಬರಹ: ಹತ್ತು ರೂಪಾಯಿ

 ಬರತ್ ಜಿ.

ಬೆಳಿಗ್ಗೆ ಎದ್ದಾಗಿನಿಂದಲೂ ನನಗೆ ಒಂದೇ ಯೋಚನೆ.ಆ 10 ರೂಪಾಯಿ ನೋಟನ್ನು ಹೇಗೆ ಕರ‍್ಚು ಮಾಡುವುದು? ಯಾರಿಗೆ ಕೊಡುವುದು? ಅಶ್ಟಕ್ಕೂ ಆ ನೋಟಿನ ಬಗ್ಗೆ ಅಶ್ಟೊಂದು ಯೋಚನೆ ಏಕೆ ಮಾಡುತ್ತಿದ್ದೆ ಎಂದರೆ ಆ ನೋಟಿನಲ್ಲಿದ್ದ ಗಾಂದಿ ತಾತನಿಗೆ ಎಶ್ಟು ವಯಸ್ಸಾಗಿತ್ತೋ ಅದಕ್ಕೂ ಅಶ್ಟೇ ವಯಸ್ಸಾಗಿತ್ತು. ಅಂಚುಗಳಲ್ಲಿ ತೂತು ಬಿದ್ದಿತ್ತು, ಮದ್ಯ ಗೆರೆಯ ಬಳಿ ತೇಪೆ ಹಾಕಲಾಗಿತ್ತು. ಕಮಟು ಎಣ್ಣೆಯಲ್ಲಿ ಕರಿದ ಕಜ್ಜಾಯದ ಹಾಗೆ ಕೈಗೆ ಅಂಟುತಿತ್ತು. ಇಂತಹ ವಾನಪ್ರಸ್ತಾಶ್ರಮ ಸೇರಿದ ನೋಟು ನನ್ನ ಬಳಿ ಹೇಗೆ ಬಂದು ಸೇರಿತು ಎಂಬುದೇ ನನ್ನ ಯೋಚನೆಯ ಕೇಂದ್ರಬಿಂದುವಾಗಿತ್ತು. ಈ ಬಗ್ಗೆ ಯೋಚಿಸುವಾಗ ಹಿಂದಿನ ಎರಡು ದಿನಗಳ Flashback ಅನ್ನು ಪುನಹ ಪುನಹ ಮೆಲುಕು ಹಾಕುತ್ತಾ ನಾನು ಮಾಡಿದ ಎಲ್ಲಾ ಕರ‍್ಚುಗಳನ್ನು ವಿವರವಾಗಿ ಲೆಕ್ಕ ಹಾಕುತ್ತಿದ್ದೆ.

ನನ್ನ ಯೋಚನಾ ಲಹರಿ ಹೀಗೆ ಸಾಗುತ್ತಿತ್ತು. ಗುರುವಾರ ಮದ್ಯಾನ ಬೆಲ್ ಸರ‍್ಕಲ್ ಬಳಿ ಎರಡು ಪರೋಟ ತಿಂದು ಜಾಲಹಳ್ಳಿ ಕ್ರಾಸ್ ನಲ್ಲಿರುವ ರೂಮಿಗೆ ನೇರವಾಗಿ ಬಂದೆ. ಪರೋಟಗೆ 30ರೂ ಚಿಲ್ಲರೆ ನಾನೇ ಸರಿಯಾಗಿ ಕೊಟ್ಟೆ. ಬಸ್ ಪಾಸ್ ಇರುವುದರಿಂದ ಬಸ್ ಅಲ್ಲಿ ಟಿಕೆಟ್ ತೆಗಿಸುವ ಅಗತ್ಯ ಇರಲಿಲ್ಲ. ಸಂಜೆವರೆಗೂ ರೂಮಿನಲ್ಲಿ ಮಲಗಿದ್ದೆ. ಸುಮಾರು 5 ಗಂಟೆ ಹೊತ್ತಿಗೆ ನೀರಿನ ಹುಡುಗ ಬಂದು ಎರಡು ಕ್ಯಾನ್ ನೀರು ಕೊಟ್ಟು ಹೋದ. ಅವನಿಗೆ 50ರೂ ಕೊಟ್ಟಾಗ ಅವನು ಈ ನೋಟನ್ನು ಕೊಟ್ಟನೇ?..ಚೇ..ಇಲ್ಲ..ಅವನು ಚಿಲ್ಲರೆ ಕೊಡದೆ ಮುಂದಿನ ಸಾರಿ ಬಂದಾಗ ಕಡಿಮೆ ಕೊಡಿ ಎಂದು ಕಾಲಿ ಕ್ಯಾನ್ ತೆಗೆದುಕೊಂಡು ಹೊರಟುಹೋದ. ಅಲ್ಲಿಗೆ ಮೊನ್ನೆ ಸಂಜೆವರೆಗೂ ಈ ನೋಟು ನನ್ನ ಬಳಿ ಇರಲಿಲ್ಲ ಎಂದ ಹಾಗಾಯಿತು. ಸಂಜೆ ವಿಜಯ್ ರೂಮಿಗೆ ಬಂದಾಗ ಹೊಸದಾಗಿ ಬಂದಿರುವ ದರ‍್ಶನ್ ಸಿನಿಮಾ ನೋಡೋಣ ಎಂದು ಹೊರಡಿಸಿದ.

ಇಬ್ಬರೂ ಮೆಜೆಸ್ಟಿಕ್ ಕಡೆ ಹೊರಟೆವು.ಆ ರೂಟಿನಲ್ಲಿ ಬಸ್ ಪಾಸ್ ನಡೆಯುವುದಿಲ್ಲವಾದ್ದರಿಂದ ಟಿಕೆಟ್ ತೆಗಿಸಬೇಕು. ಇಬ್ಬರಿಗೂ ಸೇರಿ ಟಿಕೆಟ್ ತೆಗಿಸೋಣ ಎಂದು ನಾನೇ ಕಂಡಕ್ಟರ್ ಬಳಿ 100 ರೂ ನೋಟನ್ನು ನೀಡಿ “ಎರಡು ಮೆಜೆಸ್ಟಿಕ್ ಕೊಡಿ” ಎಂದು ಕೇಳಿದೆ. ಅವನು “ಒಂದೇ ಮೆಜೆಸ್ಟಿಕ್ ಸಾರ್ ಇರೋದು!” ಎಂದು ಓಬಿರಾಯನ ಕಾಲದ ಜೋಕ್ ಹೇಳಿ ಕಣ್ಣು ಹೊಡೆದ. ತನ್ನ ಜೋಕಿಗೆ ತಾನೇ ನಗುತ್ತ ಟಿಕೆಟ್ ಹಾಗು ಬಾಕಿ ಚಿಲ್ಲರೆ 60ರೂ ನೀಡಿದ. ಬಸ್ಸಿನಲ್ಲಿ ತುಂಬಾ ರಶ್ ಇದ್ದಿದ್ದರಿಂದ ಮತ್ತೆ ಪರ‍್ಸ್ ಅನ್ನು ಹೊರಕ್ಕೆ ತೆಗೆಯಲು ಆಗಲಿಲ್ಲ. ಸರಿ ಎಂದು ದುಡ್ಡನು ಪ್ಯಾಂಟ್ ಜೇಬಿನಲ್ಲಿ ಇಟ್ಟುಕೊಂಡೆ.

ಟಾಕೀಸ್ ನಲ್ಲಿ ಹಣ ಕೊಡುವಾಗ ಪರ‍್ಸ್ ನಿಂದ ತೆಗೆದು ಕೊಟ್ಟೆ. ಇನ್ನು ಪಾಪ್-ಕಾರ‍್ನ್, ಮಾಜಾ ರಾತ್ರಿ ಊಟ ಎಲ್ಲದಕ್ಕೂ ವಿಜಯನೇ ಹಣ ನೀಡಿದ್ದರಿಂದ ಮತ್ತೆ ಪರ‍್ಸನ್ನಾಗಲಿ, ಜೇಬನ್ನಾಗಲಿ ಮುಟ್ಟುವ ಪ್ರಮೇಯ ಬರಲಿಲ್ಲ. ಸಿನಿಮಾ ಬರ‍್ಜರಿಯಾಗಿತ್ತು, ದರ‍್ಶನ್ ಹೇಳಿದ ಸಂಬಾಶಣೆಗಳು, ಚಿಕ್ಕಣ್ಣ ಹೇಳಿದ ಜೋಕ್ ಗಳು, ನಾಯಕಿಯ ಗ್ಲಾಮರ್, ಇನ್ನು ಏನೇನು ಚೆನ್ನಾಗಿತ್ತು? ಯಾವುದನ್ನೂ ಬದಲಾಯಿಸಬೇಕಿತ್ತು ಎಂದು ವಿಮರ‍್ಶಕರ ದಾಟಿಯಲ್ಲಿ ಮಾತಾಡುತ್ತಾ ಮನೆಗೆ ಬಂದು ಮಲಗಿದಾಗ ಮದ್ಯರಾತ್ರಿ ದಾಟಿತ್ತು.

ಬೆಳಿಗ್ಗೆ B.B.M.P ಕಸದ ಗಾಡಿಯವರು ಬಾರಿಸುವ ಗಂಟೆ ಸದ್ದಿಗೆ ಎಚ್ಚರವಾಯಿತು. ನಮ್ಮ ಬೀದಿಯಲ್ಲಿ ಹಸಿ ಕಸ ಒಣ ಕಸ ಬೇರ‍್ಪಡಿಸಿ ಹಾಕುವ ಏಕೈಕ ಮನೆ ನಮದಾದ್ದರಿಂದ ಆ ಹುಡುಗನೊಂದಿಗೆ ಕೊಂಚ ಸ್ನೇಹ ಸಲುಗೆ ಇತ್ತು. ಕಸ ಹಾಕುವಾಗ ಅವನು ತಿಂಗಳ ಬಕ್ಶೀಸನ್ನು ಕೇಳಿದ. ಅವನಿಗೆ ಸರಕಾರವಾಗಲಿ, ನಗರಪಾಲಿಕೆಯಾಗಲಿ ಸರಿಯಾದ ಸಂಬಳ, ಸವಲತ್ತು ನೀಡುತ್ತಿರಲಿಲ್ಲ. ಆದರೂ ಅವನು ವಾರಕ್ಕೆ ಮೂರು ದಿನ ಸರಿಯಾದ ಸಮಯಕ್ಕೆಬಂದು ಕಸ ವಿಲೇವಾರಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತಾನೆಂದು ಅವನಿಗೆ ತಿಂಗಳಿಗೊಂದು ಬಾರಿ ಐವತ್ತೋ ನೂರೋ ಕೊಡುವುದು ರೂಡಿಯಾಗಿತ್ತು. ಅವನು ಕೇಳಿದಾಗ ಪರ‍್ಸ್ ನಲ್ಲಿ ನೋಡಿದೆ. ಚಿಲ್ಲರೆ ಸಿಗಲಿಲ್ಲ. ನೆನ್ನೆ ಸಂಜೆ ಬಸ್ನಲ್ಲಿ ಕಂಡಕ್ಟರ್ ನೀಡಿದ 60ರೂ ಹಣ ನೆನಪಿಗೆ ಬಂದು ಅದನ್ನು ತೆಗೆದುಕೊಂಡು ಬಂದು ಆ ಹುಡುಗನಿಗೆ ನೀಡಿದೆ. ಅದರಲ್ಲಿ ಅವನು 50ರೂ ಇಟ್ಟುಕೊಂಡು 10ರೂ ವಾಪಸು ನೀಡಿದ. ಏಕೆ ಎಂದು ಸರಿಯಾಗಿ ನೋಡಿದಾಗ ಆ ನೋಟು ತನ್ನ ಜೀವಿತಾವದಿಯ ಕೊನೆ ಅಂಚಿನಲ್ಲಿತ್ತು. ನೆನ್ನೆ ದಿನ ಬಸ್ಸಿನಲ್ಲಿ ಸರಿಯಾಗಿ ನೋಡಬೇಕಾಗಿತ್ತು ಎಂದು ಅನಿಸಿದರೂ ಆ ಹುಡುಗನ ಮುಂದೆ ತೋರಿಸಿಕೊಳ್ಳದೆ “ಇವನಿಗೆ ಎಶ್ಟು ಕೊಬ್ಬು?” ಎಂದು ಗೊಣಗುತ್ತ ಮನೆ ಒಳಗೆ ಬಂದೆ.

ಯಾವಾಗಲು ವಜ್ರಮುನಿಯನ್ನು ಮೈಮೇಲೆ ಆವಾಹಿಸಿಕೊಂಡಂತೆ ಇರುತ್ತಿದ್ದ ಬಸ್ ಕಂಡಕ್ಟರ್ ಅಂದು ಯಾಕೆ ದೀರೇಂದ್ರ ಗೋಪಾಲ್ ರೀತಿ ಜೋಕ್ ಹೇಳಿ ನಗಿಸಿದ ಎಂದು ಈಗ ಅರ‍್ತವಾಯಿತು. ಹತ್ತರ ನೋಟನ್ನು ಐವತ್ತರ ನೋಟಿನೊಳಗೆ ಇಟ್ಟು ಕಂಡಕ್ಟರ್ ಯಾಮಾರಿಸಿದ್ದ. ಟೋಪಿ ಹಾಕಿಸಿಕೊಂಡಿದ್ದಾಯಿತು, ಇನ್ನು ಆ ಟೋಪಿಯನ್ನು ಬೇರೆಯವರ ತಲೆಗೆ ವರ‍್ಗಾಯಿಸಬೇಕು. ಅದರ ಬಗ್ಗೆ ಯೋಚನೆ ಶುರುಮಾಡಿದೆ.

ಟೀ ಮಾರುವ ಗುಜರಾತಿ ಹುಡುಗ, ವಡಾ ಪಾವ್ ಎನ್ನುವ ಮರಾಟಿ ಹುಡುಗ, ಸಿಗರೇಟ್ ಮಾರುವ ಮಲೆಯಾಳಿ, ಪಾನಿ ಪುರಿ ಮಾರುವ ಬಿಹಾರಿ ಬಾಬು, ಹಳಸಿದ ಪಪ್ ಮಾರುವ ಬೇಕರಿ ಅಯ್ಯಂಗಾರಿ, ಕೊನೆಗೆ ಹೂ ಮಾರುವ ಬಟ್ಲರ್ ಇಂಗ್ಲಿಶ್ ಅಜ್ಜಿ ಕೂಡ ಆ ನೋಟನ್ನು ಮೂಸಿ ನೋಡಲಿಲ್ಲ. ಇವರೆಲ್ಲರೂ ವಯಸ್ಸಾದ ಗಾಂದಿ ತಾತನನ್ನ ನಿರಾಕರಿಸಿದಾಗ ನನಗೆ ಹಣಕ್ಕೂ ಆಕಾರದ ಅವಶ್ಯಕತೆ ಇದೆ ಎಂದು ಮನವರಿಕೆ ಆಯಿತು. ವ್ಯಕ್ತಿತ್ವ ವಿಕಸನ ಕೇಂದ್ರದ Mr.ರಾವ್ ಅವರು 100ರೂ ನೋಟನ್ನು ಮುದುರಿ, ನೆಲದಲ್ಲಿ ಉಜ್ಜಿ ಆಕಾರ ವಿಕಾರ ಮಾಡಿ ಇದಕ್ಕೆ ಈಗಲೂ ಅದೇ ಬೆಲೆ ಎಂದು ಹೇಳಿದಾಗ ಜ್ನಾನೋದಯವಾದಂತೆ ಬಾವಿಸಿ ಕುಶಿ ಪಟ್ಟಿದ್ದೆ. ಆದರೆ ಈಗ ಹತ್ತು ರೂ ನೋಟಿಗೆ ಆ ತತ್ವ ಅನ್ವಯಿಸುತ್ತಿಲ್ಲವಲ್ಲ ಅನಿಸುವ ಹೊತ್ತಿಗೆ, ವ್ಯಕ್ತಿಗೆ ಆಗಲಿ ವಸ್ತುವಿಗೆ ಆಗಲಿ ಬೆಲೆ ಹೆಚ್ಚಿಗೆ ಇದ್ದಶ್ಟು ಅಂಟಿದ ಕೊಳೆ ಸಮಾಜಕ್ಕೆ ಕಾಣುವುದಿಲ್ಲ ಎಂದು ಮತ್ತೊಮ್ಮೆ ಜ್ನಾನೋದಯವಾಯಿತು. ಆ ನೋಟು ಎರಡನೇ ದಿನವೂ ನನಲ್ಲಿಯೇ ಉಳಿಯಿತು.

ಈ ಹೊಸ ಜ್ನಾನೋದಯದ ಜೊತೆ ಸ್ವಲ್ಪ ಪುಣ್ಯವು ಬರಲಿ ಎಂದು ಶನಿವಾರ ಸಂಜೆ ವೆಂಕಟೇಶ್ವರನ ದೇವಸ್ತಾನಕ್ಕೆ ಹೊರಟೆ. ಜೊತೆಯಲ್ಲಿ ವಿಜಯನನ್ನು ಹೊರಡಿಸಿದೆ. ದೇವರಲ್ಲಿ ಬಕ್ತಿಗಿಂತ ಹತ್ತು ಪಟ್ಟು ಬೇಡಿಕೆಗಳನ್ನು ಹೊತ್ತು ತಂದಿದ್ದ ಅಪಾರವಾದ ಜನಸಮೂಹ ಹನುಮಂತನ ಬಾಲದಶ್ಟು ಉದ್ದ ಇತ್ತು. ಇಶ್ಟು ದೂರ ಬಂದ ಮೇಲೆ ದೇವರಿಗೆ ಮುಕ ತೋರಿಸದೆ ಹಾಗೆ ಹೋದರೆ ಅವನಿಗೂ ಬೇಜಾರು ಆಗಬಹುದು ಎಂಬ ಕಾರಣಕ್ಕೆ ಕ್ಯೂ ನಲ್ಲಿ ನಿಂತೆವು. ನಿಜ ಹೇಳಬೇಕೆಂದರೆ ಅಲ್ಲಿ ಸಿಗುವ ರುಚಿಯಾದ ಪ್ರಸಾದದ ಆಸೆ ನಮನ್ನು ಕ್ಯೂ ನಲ್ಲಿ ನಿಲ್ಲಿಸಿತು. ಪ್ರಪಂಚದ ಎಲ್ಲಾ ಆಗುಹೋಗುಗಳನ್ನು, ವಿವಿದ ವಿಚಾರಗಳನ್ನು ಪರಿಣಾಮಕಾರಿಯಾಗಿ ಚರ‍್ಚೆ ಮಾಡುವುದಕ್ಕೆ ಅದು ಪ್ರಶಸ್ತವಾದ ಜಾಗ. ಅಲ್ಲಿ ನಿಂತಿದ್ದ ಬಹುತೇಕ ಜನರು ರಾಜಕೀಯ, ಕ್ರಿಕೆಟ್, ಅಮೇರಿಕಾ, ಚೀನಾ, ಸಾಪ್ಟ್ ವೇರ್, ಹಾರ‍್ಡ್ ವೇರ್, ಆರ‍್ಗ್ಯಾನಿಕ್ ಪುಡ್ ಇತ್ಯಾದಿ ಎಲ್ಲಾ ವಿಶಯಗಳ ಬಗ್ಗೆ ತಮ್ಮ ತಮ್ಮ ಜ್ನಾನ ಬಂಡಾರವನ್ನು ಪ್ರದರ‍್ಶನಕ್ಕಿಟ್ಟಿದ್ದರು. ನಾವು ಬಂದಿರುವುದು ದೇವಸ್ತಾನಕ್ಕೆ ಎಂಬುದು ಮರೆತುಹೋಗುವಶ್ಟರಲ್ಲಿ ದೇವರ ಮುಂದೆ ನಿಂತಿದ್ದೆವು.

ಮಂಗಳಾರತಿ ನಡೆಯುತಿತ್ತು. ತಟ್ಟೆಯಲ್ಲಿ ಬಿದ್ದಿದ ಚಿಲ್ಲರೆ ಮತ್ತು ರಾಶಿ ರಾಶಿ ನೋಟುಗಳನ್ನು ನೋಡಿ ನನಗೊಂದು ಯೋಚನೆ ಬಂತು. ಎಲ್ಲರೂ ನಿರಾಕರಿಸುತಿರುವ ಗಾಂದಿ ತಾತನಿಗೆ ಮುಕ್ತಿ ದೊರಕಿಸಬೇಕೆಂದು ತಟ್ಟೆಯಲ್ಲಿ ಹಾಕಿ ದೇವರಲ್ಲಿ ಕ್ಶಮಿಸು ಎನ್ನುವಂತೆ ಕೈ ಮುಗಿದೆ. ಆ ನೋಟಿನಿಂದ ಬಿಡುಗಡೆ ಸಿಕ್ಕಿತು ಮತ್ತು ದೇವರಿಗೆ ಕಾಣಿಕೆ ಹಾಕಿದ ಪುಣ್ಯವು ಬಂತು ಎಂದು ಹಿಗ್ಗಿದೆ. ಆಗ ನನ್ನಹೆಗಲ ಮೇಲೆ ಹಿಂದಿನಿಂದ ಒಂದು ಕೈ ಬಿತ್ತು. ಒಂದು ಕ್ಶಣ ಗಾಬರಿಯಾದರೂ ತೋರ‍್ಪಡಿಸದೆ ಹಿಂದೆ ತಿರುಗಿದೆ. ಹಿಂದೆ ನಿಂತಿದ್ದ ವ್ಯಕ್ತಿ 500 ರೂಪಾಯಿ ನೋಟು ನೀಡಿ ಏನೋ ಹೇಳಿದ. ಆ ಸದ್ದು ಗದ್ದಲದಲ್ಲಿ ನನಗೆ ಸರಿಯಾಗಿ ಕೇಳಲಿಲ್ಲ. ಹಿಂದೆ ನಿಂತಿದ್ದ ವ್ಯಕ್ತಿಗೆ ಮಂಗಳಾರತಿ ತಟ್ಟೆ ಎಟುಕುತ್ತಿರಲಿಲ್ಲ. ಆದ್ದರಿಂದ ನನಗೆ ದಕ್ಶಿಣೆ ಹಾಕಲು ಹಣ ಕೊಟ್ಟಿದ್ದನೆಂದು ಬಾವಿಸಿ ಮಂಗಳಾರತಿ ತಟ್ಟೆಯಲ್ಲಿ ಹಣ ಹಾಕಿದೆ.

ನಾನು 10 ರೂಪಾಯಿ ನಶ್ಟವಾಗುತ್ತದೆ ಎಂದು ಎರಡು ದಿನದಿಂದ ಯೋಚಿಸಿ ಕಡೆಗೆ ದಾರಿ ಕಾಣದೆ ದೇವರಿಗೆ ಹಾಕಿರುವಾಗ ಈ ವ್ಯಕ್ತಿ 500 ರೂಪಾಯಿ ದಕ್ಶಿಣೆ ಹಾಕಿದ್ದಾನೆ ಎಂದರೆ ಅವನ ಬಕ್ತಿ ಎಂತಹದ್ದು, ಅವನ ಸಂಪಾದನೆ ಎಶ್ಟಿರಬಹುದು ಎಂದೆಲ್ಲ ಯೋಚಿಸಿ ಹೊರಗೆ ಬಂದು ಪ್ರದಕ್ಶಿಣೆ ಹಾಕುವಾಗ ದುಡ್ಡು ಕೊಟ್ಟ ಆ ವ್ಯಕ್ತಿ ಎದುರಾದರು.

“ಸರ್, ನಿಮ್ಮದು ತುಂಬಾ ದೊಡ್ಡ ಮನಸ್ಸು” ಎಂದು ನಾನೇ ಮುಂದಾಗಿ ಮಾತನಾಡಿಸಿದೆ.

ಇವನು ಯಾವ ಗ್ರಹದ ಜೀವಿ ಎಂಬಂತೆ ಅವನು ನನನ್ನು ಆಶ್ಚರ‍್ಯದಿಂದ ದಿಟ್ಟಿಸಿ ನೋಡಿದ.

“ನನ್ನ ಗುರುತು ಸಿಗಲಿಲ್ಲ ಎಂದು ಕಾಣುತ್ತೆ, ಅದೇ ನೀವು ಮಂಗಳಾರತಿ ತಟ್ಟೆಯಲ್ಲಿ ಹಾಕು ಎಂದು 500 ರೂಪಾಯಿ ನೀಡಿದಿರಲ್ಲ..” ಎಂದು ತಡವರಿಸುತ್ತಲೇ ಹೇಳಿದೆ.

ಆ ವ್ಯಕ್ತಿ “ಅಯ್ಯೋ.., ಅದು ನನ್ನ ದುಡ್ಡು ಅಲ್ಲ, ನಿಮ್ಮ ಪ್ಯಾಂಟ್ ಜೇಬಿನಿಂದ ಜಾರಿ ಹೊರಬಿದ್ದಿತು. ಎತ್ತಿ ಕೊಟ್ಟೆ ಅಶ್ಟೇ” ಎಂದು ಹೇಳಿ ಹೊರಟು ಹೋದ.

ಈಗ ಆಶ್ಚರ‍್ಯ ಪಡುವ ಸರದಿ ನನ್ನದಾಗಿತ್ತು.ಹರಿದ 10 ರೂಪಾಯಿಯನ್ನು ದೇವರಿಗೆ ಕೊಟ್ಟು ಕೈ ತೊಳೆದುಕೊಳ್ಳಬೇಕು ಎಂದುಕೊಂಡವನಿಂದ ಆ ‘ಏಡುಕೊಂಡಲಸಾಮಿ’ 50 ಪಟ್ಟು ಹೆಚ್ಚಿಗೆ ವಸೂಲಿ ಮಾಡಿದ್ದ. ಪ್ರಸಾದದ ಸರತಿ ಸಾಲಿನಲ್ಲಿ ಸಕ್ಕರೆ ಪೊಂಗಲ್ ಹಂಚುತ್ತಿದ್ದರೂ ದೇವರು ತನ್ನ ಸ್ಪೆಶಲ್ ಬಕ್ತನಿಗೆ ಹಲ್ವಾ ಪ್ರಸಾದವನ್ನು ಸರಿಯಾಗಿ ತಿನ್ನಿಸಿದ್ದ!

(ಚಿತ್ರ ಸೆಲೆ: fullstopindia.com )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. ಬರಹ ಸಕ್ಕತ್ತಾಗಿದೆ. ಕ್ಲೈಮಾಕ್ಸ್ ಅದ್ಭುತ!

  2. ಡಿ ಜಿ ನಾಗರಾಜ್ ಹರ್ತಿಕೋಟಗ says:

    ನಿಜಕ್ಕೂ ನಗುವಿನ ಹೊನಲಿದೆ…

ಅನಿಸಿಕೆ ಬರೆಯಿರಿ:

%d bloggers like this: