ಬಾಡಿದ ಒಲವು

ಕ್ರಿಶ್ಣ ಕುಮಾರ್.

ಬೆಳಗಾಯಿತು, ಸೂರ‍್ಯನ ಬೆಳಕು ಕತ್ತಲನ್ನು ಸರಿಸಿ ಜಗತ್ತಿಗೆ ಬೆಳಕನ್ನು ನೀಡಲು ಬರುವ ಸಮಯ. ಮುಂದೇನು ಎಂದು ತೋಚದೆ ಎದ್ದು ಕುಳಿತೆ. ರಾತ್ರಿಯೆಲ್ಲಾ ಯೋಚನೆಯ ಸುಳಿಯಲ್ಲಿ ಸಿಲುಕಿ ಒದ್ದಾಡಿ ಬೆಳಗ್ಗೆಯೂ ನಿರ‍್ದಾರಕ್ಕೆ ಬಾರದ ತ್ರಿಶಂಕು ಸ್ತಿತಿ ನನ್ನದು. ಅಪ್ಪ ಅಮ್ಮನ ನೆನಪಾಯಿತು. ಮಾತಾಡಬೇಕು, ಅಪ್ಪ ಅಮ್ಮನ ಜೊತೆ ನನ್ನೆಲ್ಲಾ ನೋವುಗಳನ್ನು ಹೇಳಿಕೊಳ್ಳಬೇಕು ಅನಿಸಿ ಬೈಕ್ ಹತ್ತಿ ಮಹಾನಗರದಿಂದ ನಮ್ಮೂರು ಚಿಕ್ಕ ಹಳ್ಳಿಯ ಕಡೆಗೆ ಹೊರಟೆ.

ಹೆದ್ದಾರಿಯಲ್ಲಿನ ವಾಹನಗಳಂತೆ ಮನಸಲ್ಲಿ ಹಲವಾರು ಆಲೋಚನೆಗಳು ಗರಿಗೆದರಿದವು. ‘ಅವಳು’ ನನ್ನ ಪ್ರೀತಿಯ ಹುಡುಗಿ. ಚಿನ್ನಾ, ಎಶ್ಟೊಂದು ಇಶ್ಟಪಟ್ಟೆ ನಿನ್ನ, ಕಳೆದ ಹತ್ತು ವರ‍್ಶಗಳಲ್ಲಿ ಎಶ್ಟೊಂದು ಕನಸು ಕಂಡಿದ್ದೆವು ನಾವು ಜೊತೆಯಾಗಿ. ನಿಮ್ಮಮನೆಯಲ್ಲಿ ಯಾವಾಗ ಜಾತಿಯವನಲ್ಲದ ಹುಡುಗ ಬೇಡ ಅಂದರೋ ಆವಾಗಲೇ ನಾನು ಕಟ್ಟಿದ್ದ ಕನಸಿನ ಸೌದ ನುಚ್ಚುನೂರಾಗಿತ್ತು! ನೀನೆಶ್ಟು ಅತ್ತು ಕರೆದರೂ ನಿಮ್ಮ ಮನೆಯವರು ಬಗ್ಗಲೇ ಇಲ್ಲ. ಕೊನೆಗೆ ನೀನೇ ಮನೆಯವರಿಗೆ ಶರಣಾಗಿ ನನಗಂದ ಮಾತುಗಳು ಕಿವಿಯಲ್ಲಿ ಮಾರ‍್ದನಿಸುತ್ತಿದೆ. ‘ಅಪ್ಪ ಅಮ್ಮ ಮುಕ್ಯ ಅವರು ಹೇಳಿದ ಹಾಗೆ ಆಗಬೇಕು, ಅವರಿಗೆ ನೋವು ಕೊಟ್ಟು ನಾವು ಸುಕವಾಗಿ ಇರುವುದು ಸರಿಯಲ್ಲ’ ಈ ಮಾತುಗಳು ನನಗೆ ಅರಗಿಸಿ ಕೊಳ್ಳಲು ಆಗಲಿಲ್ಲ. ಕಳೆದ ಹತ್ತು ವರ‍್ಶಗಳಿಂದ ಎಲ್ಲಾ ಪ್ರೀತಿಯನ್ನು ನಿನಗೆ ಅಬಿಶೇಕಮಾಡಿಬಿಟ್ಟಿದ್ದೆ. ನನಗೆ ನೀನಲ್ಲದ ಹುಡುಗಿ ನನ್ನವಳಾಗುವುದು ಕಲ್ಪಿಸಲೂ ಸಾದ್ಯವಿಲ್ಲ. ನನ್ನೊಂದಿಗೆ ಇರಬೇಕಾದ, ನನ್ನ ಬಾಳನ್ನು ಬೆಳಗಬೇಕಾದ ನಿನ್ನನ್ನು ಹೇಗೆ ಪರಪುರುಶನೊಂದಿಗೆ ನೋಡಲಿ? ಅಸಾದ್ಯ ಅನಿಸಿತು.

ಹೀಗೆ ಯೋಚನೆಗಳು ಲಗಾಮು ಇಲ್ಲದಂತೆ ಹೋಗುತ್ತಿದ್ದಾಗ ಎದುರಿನಿಂದ ಶರವೇಗದಲ್ಲಿ ಬಂದ ಲಾರಿ ನನ್ನೆಲ್ಲಾ ಯೋಚನೆಗಳಿಗೆ ಪೂರ‍್ಣವಿರಾಮ ಕೊಟ್ಟಿತು. ಏನಾಯಿತು ಎನ್ನುವಶ್ಟರಲ್ಲಿ ನನ್ನ ದ್ವಿಚಕ್ರ ವಾಹನಕ್ಕೆ ಮುತ್ತಿಕ್ಕಿ ಲಾರಿ ಹೊರಟು ಹೋಯಿತು. ಹೆದ್ದಾರಿಯಿಂದ ದೂರ ಚಿಮ್ಮಿದ ನನಗೆ ಕಣ್ಣು ಕತ್ತಲಾದಂತಾಯಿತು, ದೇಹ ಚಿದ್ರವಾಗಿದೆ ಅನಿಸಿತು. ನೀನಿಲ್ಲದ ಬಾಳು ಬಾಳಲ್ಲ ಎಂದು ಆ ದೇವರೇ ನನ್ನ ಕರೆದುಕೊಂಡ ಅನಿಸಿತು. ನನ್ನ ಹೆತ್ತವರಿಗೆ ದುಕ್ಕ ಬರಿಸುವ ಶಕ್ತಿ ಆ ದೇವರು ನೀಡಲಿ ಎಂದು ಬೇಡಿಕೊಂಡೆ. ಹೊರಗಿನಿಂದ ನನ್ನನ್ನು ಶರವೇಗದ ಲಾರಿ ಕೊಂದು ಬಿಟ್ಟಿತು ಆದರೆ ಒಳಗಿನಿಂದ ಈ ಸಮಾಜದ ‘ ಜಾತಿವಾದ’ ನನ್ನನ್ನು ಮುಗಿಸಿತ್ತು.

(ಚಿತ್ರ ಸೆಲೆ: unsplash.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: