ಕುಗ್ಗುತ್ತಿರುವ ದನಿ

– ಸಿ.ಪಿ.ನಾಗರಾಜ.

ಸುಮಾರು ಇಪ್ಪತ್ತು ವರುಶಗಳ ಹಿಂದೆ ನಡೆದ ಪ್ರಸಂಗವಿದು. ಒಂದು ದಿನ ರಾತ್ರಿ ಎಂಟು ಗಂಟೆಯ ಸಮಯದಲ್ಲಿ ನಮ್ಮೂರಿನಲ್ಲಿದ್ದ ಟೆಲಿಪೋನ್‍ ಬೂತಿಗೆ ಹೋದೆನು. ಅತ್ಯಂತ ತುರ‍್ತಾದ ಸಂಗತಿಯೊಂದನ್ನು ಮಂಗಳೂರಿನಲ್ಲಿದ್ದ ಗೆಳೆಯರೊಬ್ಬರಿಗೆ ತಿಳಿಸಬೇಕಾಗಿತ್ತು. ಬೂತಿನ ಬಳಿಗೆ ಹೋಗುತ್ತಿದ್ದಂತೆಯೇ, ಎದುರುಗಡೆಯಲ್ಲಿದ್ದ ಕಟ್ಟಡದ ಕಂಬಕ್ಕೆ ಬಿಗಿದಿದ್ದ ಸ್ಪೀಕರ್‍ನಿಂದ ದೇವರ ನಾಮಸ್ಮರಣೆಯು ಎತ್ತರದ ದನಿಯಲ್ಲಿ ಹೊರಹೊಮ್ಮುತ್ತಾ ನನ್ನ ಕಿವಿ ತಮಟೆಗಳ ಮೇಲೆ ಅಪ್ಪಳಿಸತೊಡಗಿತು.

ಕಟ್ಟಡದೊಳಗಿನ ಕೊಟಡಿಯೊಂದರಲ್ಲಿ ಹತ್ತಾರು ಮಂದಿ ಕುಳಿತುಕೊಂಡು, ತಮ್ಮ ಮೆಚ್ಚಿನ ದೇವರನ್ನು ಕುರಿತು ತಾರಕದನಿಯಲ್ಲಿ ಪೂಜಿಸುತ್ತಿದ್ದರು. ದೇವರ ಹೆಸರು, ಪವಾಡ ಮತ್ತು ಮಹಿಮೆಯನ್ನು ಸಾರುವ ನುಡಿಗಟ್ಟುಗಳು ಹೊರಗಡೆಯ ಜನರ ಕಿವಿಗೆ ಬಿದ್ದು, ಜನರೆಲ್ಲರೂ ದೇವರ ಅನುಗ್ರಹಕ್ಕೆ ಪಾತ್ರರಾಗಲೆಂಬ ಉದ್ದೇಶದಿಂದಲೋ ಇಲ್ಲವೇ ತಮ್ಮಲ್ಲಿರುವ ದೇವರ ಬಗೆಗಿನ ಒಲವಿನ ತುಡಿತವು ಇತರರಿಗೂ ತಿಳಿಯುವಂತಾಗಬೇಕೆಂಬ ಬಯಕೆಯಿಂದಲೋ, ದೇವರ ಸ್ತುತಿಗೀತೆಯ ಪ್ರಸಾರಕ್ಕಾಗಿ ನಾಲ್ಕು ದಿಕ್ಕಿನ ಕಡೆಗೂ ಲೌಡ್‍ಸ್ಪೀಕರ್ ಅನ್ನು ಅಳವಡಿಸಿದ್ದರು.

ಟೆಲಿಪೋನ್ ಬೂತಿನ ಬಳಿ ನನ್ನಂತೆಯೇ ನಾಲ್ಕಾರು ಮಂದಿ ಪೋನ್ ಮಾಡಲೆಂದು ಬಂದಿದ್ದರು. ಅವರಲ್ಲಿ ಕೆಲವು ಗಳಿಗೆಯ ಹಿಂದೆ ಪೋನ್ ಮಾಡಿದ್ದ ಒಬ್ಬರು ತುಂಬಾ ಬೇಸರದಿಂದ ಚಡಪಡಿಸುತ್ತಾ ಅಲ್ಲಿದ್ದವರ ಮುಂದೆ “ದೂರದ ಊರಿನಿಂದ ಮಾತನಾಡಿದ ತಮ್ಮ ಮಗನ ಮಾತುಗಳನ್ನು ಸರಿಯಾಗಿ ಕೇಳಿಸಿಕೊಳ್ಳಲಾಗಲಿಲ್ಲ. ಅವನಿಗೆ ತಾವು ಹೇಳಬೇಕಾಗಿದ್ದ ಸಂಗತಿಯನ್ನು ಸರಿಯಾಗಿ ತಿಳಿಸಲಾಗಲಿಲ್ಲ. ಪೋನ್ ಮಾಡುತ್ತಿದ್ದಾಗ ಅಲೆಅಲೆಯಾಗಿ ಬಂದು ಅಪ್ಪಳಿಸುತ್ತಿದ್ದ ಬಜನೆಯ ದೊಡ್ಡ ದನಿಯಿಂದ ಪೋನಿನಲ್ಲಿ ಸರಿಯಾಗಿ ಮಾತನಾಡಲಿಲ್ಲ” ಎಂದು ತಮ್ಮ ಅಳಲನ್ನು ತೋಡಿಕೊಂಡರು. ಈ ಟೆಲಿಪೋನ್ ಬೂತಿನಲ್ಲಿ ಪ್ರತ್ಯೇಕವಾದ ಕ್ಯಾಬಿನ್ ಇರಲಿಲ್ಲ. ಈಗ ಇನ್ನುಳಿದವರು ಪೋನ್ ಮಾಡಲು ಹಿಂಜರಿದು, ಏನು ಮಾಡಬೇಕೆಂದು ತೋಚದೆ ಒದ್ದಾಡತೊಡಗಿದರು. ನಾನು ಬೂತಿನ ಮಾಲೀಕನನ್ನು ಕುರಿತು –

“ಬಜನೆ ಮಾಡ್ತ ಇರೋರು ಯಾರು?” ಎಂದು ಕೇಳಿದೆ.

“ದೇವರು ಮಾಡೋಕೆ ಯಾತ್ರೆಗೆ ಹೋಗುವಂತಹ ಬಕ್ತರು ಸಾರ್”

“ಹಿಂಗೆ ಎಶ್ಟೊತ್ತಿನವರೆಗೆ ಮಾಡ್ತರೆ?”

“ರಾತ್ರಿ ಹತ್ತು-ಹನ್ನೊಂದು ಗಂಟೆಯ ತನಕ ಮಾಡ್ತಿರ‍್ತರೆ ಸಾರ್. ನಾಕು ದಿನದಿಂದ ಹಿಂಗೆ ಮಾಡ್ತಾವ್ರೆ ಸಾರ್”

“ನೀವು ಅಲ್ಲಿಗೆ ಹೋಗಿ, ಬೂತಿನಲ್ಲಿ ನಿಮ್ಮ ಗಿರಾಕಿಗಳಿಗೆ ಆಗುತ್ತಿರುವ ತೊಂದರೆಯನ್ನು ತಿಳಿಸಿ ಸ್ಪೀಕರಿನ ದನಿಯನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳುವಂತೆ ಅವರಿಗೆ ತಿಳಿಸಬಾರ‍್ದೆ?”

“ಶುರೂನಲ್ಲೇ ಹೋಗಿ ಅವರನ್ನ ಕೇಳ್ಕೊಂಡೆ. ಆದರೆ ನನ್ನ ಮಾತನ್ನ ಅವರು ಕಿವಿ ಮೇಲೆ ಹಾಕೊಳ್ಳಿಲ್ಲ ಸಾರ್”

“ಹಿಂಗಾದ್ರೆ ನಿಮ್ಮ ಬಿಸ್‍ನೆಸ್ ಹಾಳಾಗುದಿಲ್ವೆ?”

“ಏನ್ ಮಾಡ್ತೀರಿ ಸಾರ್. ದೇವರ ಹೆಸರಿನಲ್ಲಿ ಬಜನೆ ಮಾಡ್ತಾವ್ರೆ. ಅವರನ್ನ ಈಗ ಎದುರುಹಾಕಿಕೊಳ್ಳುವುದಕ್ಕೆ ಯಾರಿಂದಲೂ ಆಗುವುದಿಲ್ಲ” ಎಂದು ತಮ್ಮ ಮಿತಿಯನ್ನು ಹೇಳಿಕೊಂಡರು. ಅಂದು ಪೋನ್ ಮಾಡಲಾಗದೆ ಮನೆಗೆ ಹಿಂತಿರುಗಿದೆ.

ಕಳೆದ ವಾರ ನಮ್ಮೂರಿನ ಬಡಾವಣೆಯೊಂದರಲ್ಲಿ ವಾರದ ಮೊದಲ ಎರಡು ದಿನಗಳ ಕಾಲ ಹಿಂದೂಗಳ ದೇವರ ಪೂಜೆಗಾಗಿ ಒಂದು ರಸ್ತೆಯಲ್ಲಿನ ಸಂಚಾರ ಸ್ತಗಿತಗೊಂಡಿದ್ದರೆ, ಮತ್ತೊಂದು ರಸ್ತೆಯಲ್ಲಿ ಮುಸಲ್ಮಾನರ ದೇವರ ಪ್ರಾರ‍್ತನೆಗೆ ಜನರು ಸೇರಿದ್ದಾರೆಂದು ಇನ್ನೊಂದು ದಿನ ಸಂಚಾರ ಬಂದ್ ಆಗಿತ್ತು. ದೇವರ ಬಕ್ತರು ಅತ್ಯಂತ ಉತ್ಸಾಹದಿಂದ ರಸ್ತೆಗೆ ಅಡ್ಡಲಾಗಿ ದಿಂಡುಗಲ್ಲುಗಳನ್ನು ಓತಿಟ್ಟು, ರಸ್ತೆಯಲ್ಲಿ ಗುಳಿ ತೋಡಿ ಬೊಂಬುಗಳನ್ನು ನೆಟ್ಟು, ಹಗ್ಗವನ್ನು ಬಿಗಿದು ರಸ್ತೆಯಲ್ಲಿನ ವಾಹನ ಸಂಚಾರವನ್ನು ತಡೆಹಿಡಿದಿದ್ದರು. ಇದರಿಂದ ಅಲ್ಲಿ ಪ್ರತಿನಿತ್ಯ ಓಡಾಡುತ್ತಿದ್ದ ನೂರಾರು ಜನರಿಗೆ ತೊಂದರೆಯುಂಟಾಯಿತು. ಆದರೆ ಯಾವೊಬ್ಬ ನಾಗರಿಕನಾಗಲಿ ಅಲ್ಲಿದ್ದ ಬಕ್ತರನ್ನು ಕುರಿತು “ಯಾಕೆ ಹಿಂಗೆ ಮಾಡ್ತಿದ್ದೀರಿ” ಎಂದು ಕೇಳಿ ಉಳಿದುಕೊಳ್ಳುವಂತಿರಲಿಲ್ಲ.

ಪ್ರಾರ‍್ತನೆಯ ರೂಪದಲ್ಲಿ ಮಾನವರ ಮನಸ್ಸಿನಲ್ಲಿ ಇರಬೇಕಾದ ದೇವರು ಮತ್ತು ಆಚರಣೆಯ ರೂಪದಲ್ಲಿ ಗುಡಿ, ಮಸೀದಿ ಮತ್ತು ಚರ‍್ಚುಗಳಲ್ಲಿ ನಡೆಯಬೇಕಾಗಿದ್ದ ದಾರ‍್ಮಿಕ ಕ್ರಿಯೆಗಳು, ಅಲ್ಲಿನ ಆವರಣವನ್ನು ದಾಟಿಕೊಂಡು ಬೀದಿಗೆ ಬರುತ್ತಿದ್ದಂತೆಯೇ, ಒಳ್ಳೆಯ ನಡೆನುಡಿಗಳನ್ನು ಮೂಡಿಸುವ ಒಳಮಿಡಿತಗಳ ಬದಲಾಗಿ, ಅವು ಒಂದು ಗುಂಪಿನ/ಜಾತಿಯ/ದರ‍್ಮದ ಸಾಮಾಜಿಕ ಶಕ್ತಿಯ ಸಂಕೇತವಾಗುತ್ತವೆ. ಆಯಾಯ ವರ‍್ಗಕ್ಕೆ ಸೇರಿದ ವ್ಯಕ್ತಿಗಳ, ಅವರವರ ಯಾವುದೇ ಬಗೆಯ ಬಯಕೆಗಳನ್ನು ಈಡೇರಿಸಿಕೊಳ್ಳುವುದಕ್ಕೆ ದೇವರು ಮತ್ತು ದರ‍್ಮದ ಆಚರಣೆಯು ಒಂದು ದೊಡ್ಡ ಲಯ್‍ಸೆನ್ಸ್ ಆಗುತ್ತದೆ. ಯಾಕೆಂದರೆ ಎಲ್ಲವೂ ನಡೆಯುತ್ತಿರುವುದು ದೇವರು ಮತ್ತು ದರ‍್ಮದ ಹೆಸರಿನಲ್ಲಿ!

ದೇವರನ್ನು ದೊಡ್ಡರೀತಿಯಲ್ಲಿ ಹೊತ್ತು ಮೆರೆಸುವ ಮತ್ತು ದಾರ‍್ಮಿಕ ಆಚರಣೆಗಳನ್ನು ನೋಡುವವರ ಕಣ್ಣು ಕುಕ್ಕುವಂತಹ ರೀತಿಯಲ್ಲಿ ಆಡಂಬರದಿಂದ ಆಚರಿಸುವ ವ್ಯಕ್ತಿಗಳಲ್ಲಿ, ಬಹುತೇಕ ಮಂದಿಗೆ ಮಾನವರ ಬಗ್ಗೆ ತುಂಬಾ ಅಸಡ್ಡೆಯಿರುತ್ತದೆ. ಜಾತಿ/ದರ‍್ಮ/ದೇವರುಗಳನ್ನು ಮೆರೆಸುತ್ತಿರುವ ವ್ಯಕ್ತಿಗಳ ಅಬ್ಬರದ ದನಿಯ ಮುಂದೆ ಎಲ್ಲರೊಡನೆ ಪ್ರೀತಿ, ಕರುಣೆ ಮತ್ತು ಒಳಿತಿನಿಂದ ನಡೆದುಕೊಳ್ಳಬೇಕೆಂಬ ಸಾಮಾಜಿಕ ಅರಿವಿನಿಂದ ಕೂಡಿದ ಸಾಮರಸ್ಯದ ಸಹಬಾಳ್ವೆಯ ದನಿಯು ದಿನೇ ದಿನೇ ಕುಗ್ಗುತ್ತಿದೆ.

( ಚಿತ್ರ ಸೆಲೆ: shilrani.wordpress.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: