ನಿಮ್ಮ ಬವಿಶ್ಯ ನಿಮ್ಮ ನಿರ‍್ದಾರಗಳ ಮೇಲೆ ನಿಂತಿದೆ!

 ಬರತ್ ಜಿ.

ನಿಮ್ಮ ಬಾಸ್ ಎಲ್ಲರ ಮುಂದೆ ನಿಮ್ಮನ್ನು ಹೀಯಾಳಿಸಿರುತ್ತಾರೆ. ನೀವು ಕೆಲಸವನ್ನು ಸರಿಯಾಗಿ ಮಾಡಿದ್ದರೂ ಇಲ್ಲದ ನೆಪ ಹುಡುಕಿ ಮಾತನಾಡಿರುತ್ತಾರೆ. ನಿಮ್ಮ ತಂದೆ ತಾಯಿ ಪಕ್ಕದ ಮನೆ ಹುಡುಗನ ಜೊತೆ ನಿಮ್ಮನ್ನು ಹೋಲಿಕೆ ಮಾಡಿ ನೀನು ಸರಿ ಇಲ್ಲ ಎಂದು ಬೈದಿರುತ್ತಾರೆ. ನಿಮ್ಮ ಗೆಳೆಯರು ನಿಮಗೆ ಹೇಳದೆ ಕೇಳದೆ ಹೊಸ ಸಿನೆಮಾಗೆ ಹೋಗಿರುತ್ತಾರೆ. ನಿಮ್ಮ ಗರ‍್ಲ್ ಪ್ರೆಂಡ್ ತಾನು ಕೆಲಸ ಬದಲಾಯಿಸುತ್ತಿರುವುದರ ಬಗ್ಗೆ ನಿಮಗೆ ಹೇಳೇ ಇರುವುದಿಲ್ಲ. ಪಕ್ಕದ ಮನೆಯವನು ಜೋರಾಗಿ ರೇಡಿಯೋ ಆನ್ ಮಾಡ್ದಿದೀಯ ಎಂದು ನಿಮ್ಮೊಂದಿಗೆ ಜಗಳ ಕಾದಿರುತ್ತಾನೆ. ನೀವು ಸೆಮಿಸ್ಟರ್ ಪೂರಾ ಕಶ್ಟ ಪಟ್ಟು ಓದಿ ಪರೀಕ್ಶೆ ಬರೆದ್ದಿದ್ದರೂ ಲೆಕ್ಚರರ್ ಹಳೆ ಜಿದ್ದು ಸಾದಿಸಿ ನಿಮಗೆ ಕಡಿಮೆ ಅಂಕ ನೀಡಿರುತ್ತಾರೆ. ಇಡೀ ಪ್ರಪಂಚವೇ ನಿಮ್ಮ ಮೇಲೆ ತಿರುಗಿ ಬಿದ್ದಿದೆ ಅಂತ ಅನ್ನಿಸ್ಸುತ್ತಿದ್ದೆ ಅಲ್ಲವಾ? ಈಗ ನೀವೇ ಯೋಚನೆ ಮಾಡಿ.

ಈ ಮೇಲೆ ಓದಿದರಲ್ಲಿ ಯಾವುದಾದರೂ ಒಂದು ಸಂಗತಿ ಇನ್ನು ಕೆಲವು ವರ‍್ಶಗಳ ನಂತರ ನಿಮಗೆ ಮುಕ್ಯ ಅನ್ನಿಸುತ್ತದೆಯೇ? ನಿಮ್ಮ ಜೀವನದ ಮೇಲೆ ಮುಕ್ಯ ಪರಿಣಾಮ ಬೀರುತ್ತದೆಯೇ? ವರ‍್ಶಗಳ ಲೆಕ್ಕ ಬಿಡಿ, ಇನ್ನು ಕೆಲವು ತಿಂಗಳುಗಳ ನಂತರ, ಅಶ್ಟೇ ಏಕೆ ವಾರಗಳಲ್ಲಿಯೇ ಅದು ನಿಮ್ಮ ನೆನಪಿನಿಂದ ಅಳಿಸಿ ಹೋಗಿರುತ್ತದೆ. ಮತ್ತೆ ಯಾಕೆ ಸುಮ್ಮನೆ ಯೋಚನೆ ಮಾಡ್ತೀರಾ? ಕ್ಶುಲ್ಲಕ ವಿಚಾರಗಳಿಗೆ ಸಮಯವನ್ನು ಕೊಡದೆ ಮನಸ್ಸನ್ನು ಪ್ರಶಾಂತವಾಗಿ ಇಟ್ಟುಕೊಂಡಿರಿ. ನಿಮ್ಮ ಅಂತರಂಗದಲ್ಲಿ ನೀವು ಏನು ಎಂದು ನಿಮಗೆ ಗೊತ್ತು ಅಂದ ಮೇಲೆ ಬೇರೆಯವರ ಮಾತುಗಳಿಗೆ ಹೆಚ್ಚು ಕಿವಿಗೊಡಬೇಡಿ.

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು

ನಿಮ್ಮ ಜೀವನ ಬಹಳ ಸುಕಮಯವಾಗಿ ಏನು ಇಲ್ಲ, ಒಪ್ಪಿಕೊಳ್ಳೋಣ. ನೀವು ಜೀವನದಲ್ಲಿ ನಿಮ್ಮ ನೆಮ್ಮದಿ, ಮನಶಾಂತಿ ಎಲ್ಲವನ್ನೂ ಹಾಳು ಮಾಡುವಂತ ವ್ಯಕ್ತಿಗಳ ಜೊತೆಯಲ್ಲಿ ವ್ಯವಹರಿಸಬೇಕಾಗುತ್ತದೆ. ನೀವು ನಿಮ್ಮ ಹಣೆಬರಹವನ್ನು ಬೈದುಕೊಳ್ಳುತಾ ಕುಳಿತಿದ್ದರೆ ಅಂತಹ ವ್ಯಕ್ತಿಗಳು ನಿಮ್ಮ ತಲೆಯ ಮೇಲೆಯೇ ಕುಳಿತು ಇನ್ನೂ ಹಿಂಸಿಸಲು ಶುರು ಮಾಡಿಬಿಡುತ್ತಾರೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಅನ್ನುವಂತೆ ಅಂತಹ ಜನರೊಂದಿಗೆ ಅವರ ದಾರಿಯಲ್ಲಿಯೇ ಹೋಗಿ ಅವರಂತೆಯೇ ನಡೆದುಕೊಂಡರೆ ನಿಮ್ಮ ದಾರಿಗೆ ಬರುತ್ತಾರೆ. ಹಾವು ತಿನ್ನುವ ಊರಿನಲ್ಲಿ ಮದ್ಯದ ತುಂಡು ನಮಗೆ ಅಂತ ಕುಳಿತುಕೊಳ್ಳಬೇಕು. ನೀವು ಯಾರೊಂದಿಗೆ ಹೇಗೆ ವ್ಯವಹರಿಸಬೇಕು ಎನ್ನುವ ಜ್ನಾನ ಬಹಳ ಮುಕ್ಯ. ಇಂತಹ ನಡುವಳಿಕೆ ಹೊಂದುವುದು ಆರಂಬದಲ್ಲಿ ಕಶ್ಟವಾಗಬಹುದು, ಆದರೆ ಅಸಾದ್ಯವಲ್ಲ.

ನಿಮ್ಮ ಹಣ, ನಿಮ್ಮ ಬುದ್ದಿ

ನೀವೀಗ ಇಪ್ಪತ್ತರ ಹರೆಯದಲ್ಲಿದೀರಿ ಸ್ವತಂತ್ರ  ಜೀವನವನ್ನು ಅನುಬವಿಸುತ್ತಿದ್ದೀರಿ. ಇನ್ನು ಮುಂದೆ ಪಾಕೆಟ್ ಮನಿಗಾಗಿ ಅಪ್ಪ ಅಮ್ಮನ ಮುಂದೆ ಕೇಳಬೇಕಾಗಿಲ್ಲ, ನಿಮ್ಮ ಜೀವನದ ಪ್ರತಿಯೊಂದು ನಿರ‍್ದಾರಗಳನ್ನು ನೀವೇ ತೆಗೆದುಕೊಳ್ಳಬಹುದು.ಸ್ವರ‍್ಗ ಅಂದ್ರೆ ಇದೆ ಅಲ್ವಾ? ನೀವು ಇಶ್ಟ ಬಂದ ಹಾಗೆ ನಿಮ್ಮ ಹಣವನ್ನು ಕರ‍್ಚು ಮಾಡಬಹುದು, ನಿಮ್ಮ ಹಣ ಕರ‍್ಚು ಮಾಡಲು ಯಾರ ಪರ‍್ಮಿಶನ್ ಕೂಡ ಬೇಕಾಗಿರುವುದಿಲ್ಲ. ಕಣ್ಣಿಗೆ ಕಂಡಿದ್ದು ಕೈಯಲ್ಲಿ ಕೊಳ್ಳುವ ಸಾಮರ‍್ತ್ಯ ನಿಮಗೆ ಇರುತ್ತದೆ. ನಿಮಗೆ ಬೇಕಾದ ಹಾಗೆ ಪಾರ‍್ಟಿ ಮಾಡಬಹುದು, ಇಶ್ಟ ಪಟ್ಟಿದ್ದ ಹೊಸ ಬೈಕ್ ಕೊಂಡುಕೊಳ್ಳಬಹುದು, ಪ್ರಪಂಚದಲ್ಲಿರುವ ಎಲ್ಲ ಸುಕಗಳ್ಳನ್ನು ಅನುಬವಿಸಬಹುದು ಇಲ್ಲವೇ ಸ್ವಲ್ಪ ಬುದ್ದಿವಂತಿಕೆಯಿಂದ ಯೋಚಿಸುತ್ತೇನೆ ಎಂದರೆ ಹಣವನ್ನು ಉಳಿಸಬಹುದು. ಸಂಪಾದಿಸುವ ಹಣವನ್ನೆಲ್ಲ  ಕೂಡಿಡಬೇಕು ಅಂತ ಅಲ್ಲ. ಸಾದ್ಯವಾದಶ್ಟು ಸರಳತೆಯನ್ನು ರೂಡಿಸಿಕೊಳ್ಳಬೇಕು. ನಮ್ಮ ಜೀವನಕ್ಕೆ ಎಶ್ಟು ಬೇಕೋ ಅಶ್ಟನ್ನು ಬಳಸಿಕೊಂಡು ಮಿಕ್ಕಿದನ್ನು ಉಳಿಸಿಡಬೇಕು, ಸರಿಯಾದ ರೀತಿಯಲ್ಲಿ ಒಳ್ಳೆಯ ಕಡೆ ಅದನ್ನು ಇನ್ವೆಸ್ಟ್ ಮಾಡಬೇಕು. ಅತಿಯಾದ ಆಸೆ ಇಂದ ಹೆಚ್ಚು ದುಡ್ಡು ಮಾಡಲು ಸುರಕ್ಶಿತವಲ್ಲದ ಕಡೆಗಳಲ್ಲಿ ಹಣ ತೊಡಗಿಸಬಾರದು. ನೀವು ಈಗ ಮಾಡುವ ಸಣ್ಣ ಉಳಿತಾಯಗಳು ಮುಂದೆ ದೀರ‍್ಗ ಕಾಲದಲ್ಲಿ ನಿಮ್ಮನು ಕಾಪಾಡುತ್ತವೆ.

ಗಟ್ಟಿ ಗುಂಡಿಗೆ, ದಿಟ್ಟ ನಿರ‍್ದಾರಗಳು.

ಇಪ್ಪತ್ತರ ಆಸು ಪಾಸು ಜೀವನದ ಪ್ರಮುಕ ಗಟ್ಟ. ಈ ಹಂತದಲ್ಲಿ ನೀವು ತೆಗೆದುಕೊಳ್ಳುವ ನಿರ‍್ದಾರಗಳು, ಮಾಡುವ ಕೆಲಸಗಳು ದೀರ‍್ಗ ಕಾಲದವರೆಗೂ ಪರಿಣಾಮ ಬೀರುವಂತಹದ್ದಾಗಿರುತ್ತವೆ. ಇದು ಹೇಳುವಶ್ಟು ಸುಲಬವಲ್ಲ ಆದರೆ ಕಂಡಿತ ಕಶ್ಟವಲ್ಲ. ಹೊರಗಡೆ ಜನಗಳ ಅಬಿಪ್ರಾಯಗಳು ನಿಮ್ಮ ನಿರ‍್ದಾರಗಳ ಮೇಲೆ ಸಾದ್ಯವಾದಶ್ಟು ಕಡಿಮೆ ಪ್ರಬಾವ ಬೀರಬೇಕು. ಅಂದರೆ ನೀವು ಯಾರ ಮಾತನ್ನು ಕೇಳಬಾರದು ಅಂತ ಅಲ್ಲ, ಆದರೆ ಎಲ್ಲರ ಮಾತುಗಳಿಗೆ ಕಿವಿ ಕೊಡುವ ಹಿತ್ತಾಳೆ ಕಿವಿಯವರಾಗಬಾರದು.ನಿಮ್ಮ ಮನಸ್ಸಿನಂತೆ ನಡೆದುಕೊಳ್ಳಬೇಕು, ನಿಮ್ಮ ಎಲ್ಲ ನಿರ‍್ದಾರಗಳು, ಮಾಡುವ ಕೆಲಸಗಳು ಅದರ ಪರಿಣಾಮಗಳು ಎಲ್ಲಕ್ಕೂ ನೀವೇ ಜವಾಬ್ದಾರಿ ಎಂದು ಮರೆಯಬಾರದು. ಮಾಡುತ್ತಿರುವ  ಕೆಲಸ ಇಶ್ಟ ಇಲ್ಲ ಅಂದರೆ ತಂದೆ ತಾಯಿಗೆ ಹೇಳಿ ಒಪ್ಪಿಸಿ ಕೆಲಸ ಬಿಡಿ, ಮನಸ್ಸಿಗೆ ಒಪ್ಪುವ ಕೆಲಸ ಆರಿಸಿಕೊಳ್ಳಿ. ಕೈ ತುಂಬಾ ಹಣ ಸಿಗದ್ದಿದರೂ ಮನಸ್ಸಿನ ತುಂಬಾ ನೆಮ್ಮದಿ ಇರುತ್ತದೆ. ನೀವು ಚಿಕ್ಕ ವಯಸ್ಸಿನಲ್ಲಿ ಮಾಡಬೇಕು ಎಂದು ಅಂದುಕೊಂಡು ಯಾವುದೊ ಕಾರಣಕ್ಕೆ ಮಾಡಲಾಗದ ಹಲವಾರು ಬಯಕೆಗಳು ಇರುತ್ತವೆ, ಈಗ ಅವನ್ನು ಈಡೇರಿಸಿಕೊಳ್ಳಿ. ನಿಮ್ಮ ಇಶ್ಟದ ಹವ್ಯಾಸಗಳನ್ನು ಮತ್ತೆ ಮುಂದುವರೆಸಿ, ಪ್ರಪಂಚವನ್ನು ಸುತ್ತಿ, ಎಲ್ಲ ತರದ ಜನಗಳು ಪರಿಚಯ ಆಗುತ್ತಾರೆ. ನಿಮಗೆ ಬೇಜಾರು ಮಾಡಿದ, ನಿಮ್ಮೊಂದಿಗೆ ಜಗಳವಾಡಿದ ವ್ಯಕ್ತಿಗಳನ್ನು ಕ್ಶಮಿಸಿ, ನಿಮ್ಮಿಂದ ಯಾರಿಗಾದರೂ ತೊಂದರೆ ಆಗಿದೆ ಅನಿಸಿದರೆ ಯಾವುದೇ ಅಹಂ ಇಟ್ಟುಕೊಳ್ಳದೆ ಅವರ ಕ್ಶಮೆ ಕೇಳಿರಿ. ನೀವು ಜೀವನದಲ್ಲಿ ಯಾವಾಗಲಾದರೂ ಹಿಂತಿರುಗಿ ನೋಡಿದಾಗ ಅತಿ ಹೆಚ್ಚು ಕಾಡುವುದು ಈ ಯೌವನದ ದಿನಗಳು. ಆಗ ನೀವು ಮಾಡಿದ ಕೆಲಸಗಳಿಗಿಂತ ಮಾಡದ ಕೆಲಸಗಳಿಗೆ ಪಶ್ಚಾತಾಪ ಪಡುತ್ತೀರಿ. ಅಂತಹ ಯಾವುದೇ ಪಶ್ಚಾತಾಪ ನಿಮಗೆ ಬೇಡ . ಜೀವನ ಸುಂದರವಾಗಿರಲಿ, ನಗು ನಗುತ್ತಾ ಇರಿ.

( ಚಿತ್ರ ಸೆಲೆ: wikipedia.org )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. jinnu says:

    ನಿಮ್ಮ ನಾಳೆ, ಇಂದಿನ ನಿಮ್ಮ ತೀರ್ಮಾನಗಳ ಮೇಲೆ ನಿಂತಿದೆ !!

  2. jinnu says:

    ತುಂಬಾ ಚೆನ್ನಾದ ಬರಹ

ಅನಿಸಿಕೆ ಬರೆಯಿರಿ:

%d bloggers like this: