‘ಜೀನ್ಸ್ ಪ್ಯಾಂಟ್’ ಹುಟ್ಟಿ ಬೆಳೆದ ಕತೆ

– ನಾಗರಾಜ್ ಬದ್ರಾ.

ಹಲವಾರು ವರುಶಗಳ ಹಿಂದೆ ಮಾರುಕಟ್ಟೆಗೆ ಬಂದ, ಅಲ್ಲಲ್ಲಿ ಮಾಸಿ ಹೋದಂತೆ ಕಾಣುವ, ಒರಟಾದ ಹತ್ತಿ ಬಟ್ಟೆಯ ಈ ಜೀನ್ಸ್ ಪ್ಯಾಂಟ್ ಕೂಡಲೇ ಎಲ್ಲರ ಮೆಚ್ಚುಗೆ ಪಡೆಯಿತು. ವಿದೇಶದಿಂದ ಬಂದಿರುವ ಈ ಉಡುಪು ಇಂದು ಇಂಡಿಯಾದ ಜನರ ಬದುಕಿನಲ್ಲಿ ಬೆರೆತು ಹೋಗಿದ್ದು ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಅಚ್ಚುಮೆಚ್ಚಿನ ಉಡುಪಾಗಿದೆ.

ಜೀನ್ಸ್ ಪ್ಯಾಂಟನ್ನು ಕಂಡುಹಿಡಿದಿದ್ದು ಯಾರು?

ಜೀನ್ಸ್ ಪ್ಯಾಂಟನ್ನು 1873 ರಲ್ಲಿ ಜೇಕಬ್ ಡೇವಿಸ್ (Jacob Davis) ಹಾಗೂ ಲೆವಿ ಸ್ಟ್ರಾಸ್ (Levi Strauss) ಎಂಬ ಇಬ್ಬರು ಸೇರಿ ಹುಟ್ಟುಹಾಕಿದರು. ಜೀನ್ಸ್ ಪ್ಯಾಂಟನ್ನು ಮೊದಲು ದನ ಕಾಯುವ ಹುಡುಗರು, ಗಣಿ ಕೆಲಸ ಮಾಡುವವರು, ಪ್ಯಾಕ್ಟರಿಗಳಲ್ಲಿ ಕೆಲಸ ಮಾಡುವವರು ಹೀಗೆ ಬೇರೆ ಬೇರೆ ವಲಯಗಳಲ್ಲಿ ಕೆಲಸ ಮಾಡುವ ಕೆಲಸಗಾರರು ತೊಡಲೆಂದು ತಯಾರಿಸಲಾಗಿತ್ತು.

ಜರ‍್ಮನಿಯಲ್ಲಿ ವಾಸವಾಗಿದ್ದ ಲೆವಿ ಸ್ಟ್ರಾಸ್ ಅವರು 1851 ರಲ್ಲಿ ಅಣ್ಣನ ಜೊತೆ ಸೇರಿ ಕೆಲಸ ಮಾಡಲು ನ್ಯೂಯಾರ‍್ಕ್ ಗೆ ಹೋದರು. ಇಬ್ಬರು ಸೇರಿ ಬಂಗಾರದ ವ್ಯಾಪಾರವನ್ನು ಹಲವೆಡೆ ವಿಸ್ತರಿಸಿದರು. ಕೆಲವು ವರ‍್ಶಗಳ ಬಳಿಕ ಪಡುವಣದ ಸ್ಯಾನ್ ಪ್ರಾನ್ಸಿಸ್ಕೋನಲ್ಲಿ ಬಂಗಾರದ ಬೇಡಿಕೆ ಹೆಚ್ಚಾಗಿದೆ ಎಂಬ ಸುದ್ದಿ ನ್ಯೂಯಾರ‍್ಕ್ ನಲ್ಲಿ ಹರಡಿತ್ತು. ಇದನ್ನು ತಿಳಿದ ಲೆವಿ ಸ್ಟ್ರಾಸ್ ಅವರು ತಮ್ಮ ವ್ಯಾಪಾರವನ್ನು ಸ್ತಾಪಿಸಲು 1852 ರಲ್ಲಿ ಸ್ಯಾನ್ ಪ್ರಾನ್ಸಿಸ್ಕೋಗೆ ಹೋದರು. ಕೆಲವು ದಿನಗಳಲ್ಲಿಯೇ ಅವರು ಅಲ್ಲಿ ಬಂಗಾರದ ವ್ಯಾಪಾರದ ಜೊತೆಗೆ ಹತ್ತಿ ಬಟ್ಟೆಯ ವ್ಯಾಪಾರವನ್ನು ಆರಂಬಿಸಿದರು.

ಇನ್ನೊಂದು ಕಡೆಗೆ ಜೇಕಬ್ ಡೇವಿಸ್ ಎಂಬುವವರು ನೆವಾಡಾದ (Nevada) ರೆನೋ (Reno) ನಗರದಲ್ಲಿ ಬಟ್ಟೆ ಹೊಲಿಯುವ ಕೆಲಸ ಮಾಡುತ್ತಿದ್ದರು. ಕುದುರೆ ಕಂಬಳಿಗಳು, ಟೆಂಟಿಗೆ ಬೇಕಾಗುವ ಹೊದಿಕೆಗಳು ಹೀಗೆ ಬಗೆ ಬಗೆಯ ವಸ್ತುಗಳನ್ನು ಹೊಲಿಯುತ್ತಿದ್ದ ಅವರು ತಮಗೆ ಹೊಲಿಯಲು ಬೇಕಾಗುವ ಬಟ್ಟೆಯನ್ನು ಲೆವಿ ಸ್ಟ್ರಾಸ್ ಅವರ ಅಂಗಡಿಯಿಂದ ಕೊಳ್ಳುತ್ತಿದ್ದರು. ಒಂದು ದಿನ ಕೊಳ್ಳುಗನೊಬ್ಬ ಅವರ ಅಂಗಡಿಗೆ ಬಂದು ಗಟ್ಟಿ ಕೆಲಸವನ್ನು ತಡೆದುಕೊಳ್ಳುವಂತಹ ಒಂದು ಜೋಡಿ ಗಟ್ಟಿಮುಟ್ಟಾದ ಪ್ಯಾಂಟ್ ಹೊಲಿದು ಕೊಡಲು ಹೇಳಿದನು. ಅವರು ಲೆವಿ ಸ್ಟ್ರಾಸ್ ಅಂಗಡಿಯಿಂದ ಕೊಂಡಿರುವ ಡೆನಿಮ್ ಬಟ್ಟೆಯಿಂದ ಪ್ಯಾಂಟ್ ಹೊಲಿದು, ಕೊಳ್ಳುಗನು ಹೇಳಿದಂತೆ ಪ್ಯಾಂಟನ್ನು ಇನ್ನೂ ಗಟ್ಟಿಮುಟ್ಟಾಗಿಸಲು ಒಂದು ಉಪಾಯ ಬಳಿಸಿದರು. ಅದೇನೆಂದರೆ ಪ್ಯಾಂಟಿನಲ್ಲಿ ಬೇಗ ಹರಿದು ಹೋಗುವ ಜಾಗಗಳಾದ ಕೀಸೆಗಳ ತುದಿಗಳಿಗೆ ತಾಮ್ರದ ಕಟಿ ಮೊಳೆಗಳನ್ನು (Copper Rivets) ಇರಿಸಿದರು, ಇದು ಪ್ಯಾಂಟನ್ನು ಹೆಚ್ಚು ಗಟ್ಟಿಮುಟ್ಟಾಗಿಸಿತು. ಇದನ್ನು ತೊಟ್ಟ ಕೊಳ್ಳುಗನು ತುಂಬಾ ಮೆಚ್ಚುಗೆಯನ್ನು ತಿಳಿಸಿದನು.

ಈ ಬಗೆಯ ಪ್ಯಾಂಟಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಯಿತು. ಪ್ಯಾಂಟ್ ಗಳ ವ್ಯಾಪಾರವನ್ನು ಇನ್ನೂ ದೊಡ್ಡ ಮಟ್ಟದಲ್ಲಿ ಹೆಚ್ಚಿಸಲು ಡೇವಿಸ್ ಹತ್ತಿರ ಅಶ್ಟೊಂದು ಹಣವಿರಲಿಲ್ಲ. ಬಳಿಕ 1872 ರಲ್ಲಿ ಅವರು ಲೆವಿ ಸ್ಟ್ರಾಸ್ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಪತ್ರ ಬರೆದರು. ಇದಕ್ಕೆ ಲೆವಿ ಸ್ಟ್ರಾಸ್ ಕೂಡ ಒಪ್ಪಿಗೆ ಸೂಚಿಸಿದರು. ಬಳಿಕ 1873 ರಲ್ಲಿ ಇಬ್ಬರ ಪಾಲುದಾರಿಕೆಯಲ್ಲಿ ಲೆವಿ ಸ್ಟ್ರಾಸ್ ಆಂಡ್ ಕಂಪನಿಸ್ ಎಂಬ ಹೆಸರಿನ ಕಂಪನಿಯೊಂದನ್ನು ಆರಂಬಿಸಿದರು.

ಈ ಪ್ಯಾಂಟಿಗೆ ಜೀನ್ಸ್ ಎಂಬ ಹೆಸರು ಹೇಗೆ ಬಂತು?

18 ನೆ ಶತಮಾನದಲ್ಲಿ ಇಟಲಿಯ ಜಿನೋವಾ (Genoa) ನಗರದಲ್ಲಿ ಒರಟಾದ ಕಾಟನ್ ಬಟ್ಟೆಯನ್ನು ತಯಾರಿಸಲಾಗುತ್ತಿತ್ತು. ಹಡಗುಗಳ ಮೂಲಕ ಈ ಬಟ್ಟೆಯನ್ನು ಜಿನೋವಾದಿಂದ ಯುರೋಪಿನ ಬೇರೆ ಬೇರೆ ಬಾಗಗಳಿಗೆ ಕಳುಹಿಸಲಾಗುತ್ತಿತ್ತು. ಜಿನೋವಾದಲ್ಲಿನ ನಾವಿಕರು ಈ ಒರಟಾದ ಹತ್ತಿ ಬಟ್ಟೆಗೆ ‘ಜೀನ್’ ಎಂದು ಕರೆಯುತ್ತಿದ್ದರು. ಇನ್ನು ಜೀನ್ಸ್ ಪ್ಯಾಂಟನ್ನು ಕೂಡ ಡೆನಿಮ್ ಎಂಬ ಒರಟಾದ ಕಾಟನ್ ಬಟ್ಟೆಯಿಂದ ತಯಾರಿಸಲಾಗುವುದರಿಂದ ಇದನ್ನು ‘ಜೀನ್ ಪ್ಯಾಂಟ್’ ಎಂದು ಕರೆದರು. ಮುಂದಿನ ದಿನಗಳಲ್ಲಿ ಮಂದಿಯ ಬಾಯಿಯಲ್ಲಿ ಇದು ‘ಜೀನ್ಸ್ ಪ್ಯಾಂಟ್’ ಎಂದು ಹೆಸರುವಾಸಿ ಆಯಿತು.

ಜೀನ್ಸ್ ಪ್ಯಾಂಟಿನ ಹೊರಮೈ ನೀಲಿ, ಒಳ ಮೈ ಬಿಳಿಯಾಗಿರುತ್ತದೆ ಹೇಗೆ?

ಜೀನ್ಸ್ ಪ್ಯಾಂಟುಗಳನ್ನು ಡೆನಿಮ್ ಎಂಬ ಬಟ್ಟೆಯಿಂದ ತಯಾರಿಸಲಾಗುತ್ತದೆ. ಡೆನಿಮ್ ಒಂದು ಬಗೆಯ ಬಿರುಸಾದ ಕಾಟನ್ ಬಟ್ಟೆಯಾಗಿದೆ. ಇದರ ನೇಯ್ಗೆಯಲ್ಲಿ ಒಂದು ಅಡ್ಡನೂಲು, ಎರಡು ಅತವಾ ಅದಕ್ಕಿಂತ ಹೆಚ್ಚಿನ ಉದ್ದನೂಲುಗಳ ಅಡಿಯಲ್ಲಿ ಹಾದು ಹೋಗುತ್ತದೆ. ಡೆನಿಮ್ ಬಟ್ಟೆಯ ಉದ್ದನೂಲುಗಳಿಗೆ ನೀಲಿ ಬಣ್ಣವನ್ನು ಹಾಕುತ್ತಾರೆ ಆದರೆ ಅಡ್ಡನೂಲುಗಳಿಗೆ ಯಾವುದೇ ಬಣ್ಣವನ್ನು ಹಾಕದೇ ಹಾಗೆಯೇ ಬಿಳಿ ಬಣ್ಣದಲ್ಲಿಯೇ ಬಿಡುತ್ತಾರೆ. ಆದ್ದರಿಂದಲೇ ಡೆನಿಮ್ ಬಟ್ಟೆಯು ಒಂದು ಕಡೆ ನೀಲಿ, ಇನ್ನೊಂದು ಕಡೆಗೆ ಬಿಳಿ ಆಗಿರುತ್ತದೆ. ಡೆನಿಮ್ ಬಟ್ಟೆಯನ್ನು ಜೀನ್ಸ್ ಪ್ಯಾಂಟ್ ತಯಾರಿಸಲು ಬಳಸುವಾಗ ನೀಲಿ ಬಣ್ಣದ ಬಟ್ಟೆಯ ಬದಿಯನ್ನು ಹೊರಗೆ ತಿರುಗಿಸುತ್ತಾರೆ.

ಜೀನ್ಸ್ ಪ್ಯಾಂಟಿನ ಬಗ್ಗೆ ಹೆಚ್ಚಿನವರಿಗೆ ಗೊತ್ತಿರದ ಕೆಲ ಸಂಗತಿಗಳು

  • ಜೇಕಬ್ ಡೇವಿಸ್ ಮತ್ತು ಲೆವಿ ಸ್ಟ್ರಾಸ್ ಅವರ ಒಪ್ಪಂದದ ದಿನವಾದ ಮೇ 20, 1873 ನ್ನು ಜೀನ್ಸ್ ಪ್ಯಾಂಟುಗಳ ಹುಟ್ಟುಹಬ್ಬವೆಂದು ಆಚರಿಸಲಾಗುತ್ತದೆ.
  • ಜೀನ್ಸ್ ಪ್ಯಾಂಟಿನಲ್ಲಿ ಬಳಸುವ ತಾಮ್ರದ ಕಟಿ ಮೊಳೆಗಳು ಕಿತ್ತಳೆ ಬಣ್ಣದಲ್ಲಿರುತ್ತವೆ. ಈ ಬಣ್ಣಕ್ಕೆ ಹೋಲುವಂತೆ ಜೀನ್ಸ್ ಪ್ಯಾಂಟನ್ನು ಕಿತ್ತಳೆ ಬಣ್ಣದ ನೂಲಿನಿಂದ ಹೊಲಿಯುತ್ತಾರೆ.
  • ಮೊದಲಿಗೆ ಜೀನ್ಸ್ ಪ್ಯಾಂಟುಗಳ ಹಿಂದೆ ಹಾಗೂ ಮುಂದೆ ಎರಡು ಬದಿಯಲ್ಲಿರುವ ಕೀಸೆಗಳಿಗೆ ತಾಮ್ರದ ಕಟಿ ಮೊಳೆಗಳನ್ನು ಇರಿಸಲಾಗುತ್ತಿತ್ತು. ಕುರ‍್ಚಿಯ ಮೇಲೆ ಕುಳಿತುಕೊಂಡಾಗ ಹಿಂಬದಿಯ ಕಟಿ ಮೊಳೆಗಳು ಕುರ‍್ಚಿಗೆ ಗೀಚುತ್ತವೆ ಎಂದು ಕೊಳ್ಳುಗರಿಂದ ದೂರುಗಳು ಬಂದವು. ಬಳಿಕ ಹಿಂಬದಿಯಲ್ಲಿರುವ ತಾಮ್ರದ ಕಟಿ ಮೊಳೆಗಳನ್ನು ತಗೆದುಹಾಕಲಾಯಿತು.
  • ಜೀನ್ಸ್ ಗಳು ಮೊದಲಿಗೆ ಇಂಡಿಗೊ ನೀಲಿ ಹಾಗೂ ಕಂದು ಎರಡು ಬಣ್ಣಗಳಲ್ಲಿ ಬಂದವು.
  • 217.7 ಕೆಜಿ ತೂಗುವ ಒಂದು ಹತ್ತಿ ಮೂಟೆಯಿಂದ ಸುಮಾರು 215 ರಿಂದ 225 ಜೀನ್ಸ್ ಪ್ಯಾಂಟುಗಳನ್ನು ತಯಾರಿಸಬಹುದು.
  • 1950 ರಲ್ಲಿ ಜೀನ್ಸ್ ಪ್ಯಾಂಟುಗಳನ್ನು ಕಲಿಕೆ ಮನೆ, ಸಿನಿಮಾ ತಿಯೇಟರ್ ಹಾಗೂ ರೆಸ್ಟೋರೆಂಟ್ ಗಳಂತಹ ಕೆಲವು ಜಾಗಗಳಲ್ಲಿ ತೊಡಬಾರದೆಂದು ತಡೆಹಿಡಿಯಲಾಗಿತ್ತು.
  • ಎರಡನೆಯ ವಿಶ್ವ ಯುದ್ದದ ಸಮಯದಲ್ಲಿ ಮೊದಲ ಬಾರಿಗೆ ಜೀನ್ಸ್ ಪ್ಯಾಂಟುಗಳು ಯುನೈಟೆಡ್ ಸ್ಟೇಟ್ಸ್ ನಿಂದ ಹೊರಗೆ ಹೆಸರುವಾಸಿಯಾದವು. ಏಕೆಂದರೆ ಅಮೇರಿಕಾದ ಕಾವಲುಪಡೆಯವರು ಕೆಲಸದ ಸಮಯವು ಮುಗಿದ ನಂತರ ಈ ಪ್ಯಾಂಟುಗಳನ್ನು ತೊಡುತ್ತಿದ್ದರು.

ಮಾರುಕಟ್ಟೆಗೆ ಬಂದ ಕೆಲವೇ ವರ‍್ಶಗಳಲ್ಲಿ ವಿದೇಶಗಳಲ್ಲಿ ತುಂಬಾ ಹೆಸರುವಾಸಿಯಾದ ಜೀನ್ಸ್ ಪ್ಯಾಂಟ್ ಕೂಡಲೇ ಇಂಡಿಯಾ ದೇಶಕ್ಕೂ ಕಾಲಿಟ್ಟಿತು. ನಾವು ತೊಡುವ ಜೀನ್ಸ್ ಪ್ಯಾಂಟುಗಳ ಹಿಂದೆ ಇಶ್ಟೊಂದು ಕುತೂಹಲಕಾರಿ ಸಂಗತಿಗಳು ಅಡಗಿವೆ.

(ಮಾಹಿತಿ ಸೆಲೆ: historyofjeans.comdashofsalt.conewint.org)

(ಚಿತ್ರ ಸೆಲೆ: ebay.com, mirror.co.uk)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Kantha Raju says:

    ಜೀನ್ಸ್ ಪ್ಯಾಂಟ್ ಬಗೆಗಿನ ಇತಿಹಾಸ ತುಂಬಾ ಚೆನ್ನಾಗಿದೆ. ಪ್ರತಿ ನಿತ್ಯ ನಾವು ಬಳಸುವ ಇಂತಹ ವಸ್ತುಗಳ ಬಗ್ಗೆ ತಿಳಿಸಿಕೊಡುತ್ತಿರುವ “ಹೊನಲು ತಂಡಕ್ಕೆ ಧನ್ಯವಾದಗಳು. . . . . . . .

ಅನಿಸಿಕೆ ಬರೆಯಿರಿ:

%d bloggers like this: