‘ಮರ ಬೆಳೆಸಿ, ಹಸಿರು ಉಳಿಸಿ’

– ಗೌರೀಶ ಬಾಗ್ವತ.

ಆವತ್ತು ಅದೇಕೋ ಗಡಿಬಿಡಿ, ಹೆಜ್ಜೆಗಳು ಬಿರುಸಾಗಿ ಸಾಗಿದ್ದವು. ಕೆಲಸದ ಸವಾಲು ಒಂದೆಡೆಯಾದರೆ ಮನದಲಿ ಯೋಚನೆಗಳ ಸವಾರಿ ಇನ್ನೊಂದೆಡೆ. ಒಂದೇ ಸಮನೆ ನಡೆಯುತ್ತಿದ್ದ ನನ್ನಲ್ಲಿ ಅಗೋಚರವಾದ ಕದಲಿಕೆ ಇತ್ತು, ಬಹುಶಹ ನಿನ್ನೆ ಸರಿಯಾಗಿ ನಿದ್ರಿಸಿರಲಿಲ್ಲ ಅದೇ ಕಾರಣ ಎಂದುಕೊಂಡೆ. ಏನಾದರಾಗಲಿ ಕೆಲಸಕ್ಕೆ ಹೋಗಲೇಬೇಕು ಎಂದು ಇನ್ನೂ ಬಿರುಸಾಗಿ ಹೆಜ್ಜೆಯಿಡಲಾರಂಬಿಸಿದ್ದೆ.

ಸೂರ‍್ಯ ಅದಾಗಲೇ ಅವನ ಕಾಯಕಕ್ಕೆ ಹಾಜರಿ ಹಾಕಿದ್ದ. ರಸ್ತೆಯಲ್ಲಿ ಜನಜಂಗುಳಿ ಅಶ್ಟೇನು ಇರಲಿಲ್ಲ. ಗಾಡಿಗಳಂತೂ ಆಗೊಂದು ಈಗೊಂದು ಬರ‍್ರನೇ ಸಾಗುತಿದ್ದವು. ಇನ್ನೇನು ಬಸ್ ಸ್ಟ್ಯಾಂಡ್ ತಲುಪಲು ಹತ್ತು ನಿಮಿಶ ಬೇಕಿತ್ತು, ಅಶ್ಟರಲ್ಲಿ ಅದ್ಯಾರದೋ ಅಳುವ ಸದ್ದು ಕೇಳಿಸಿತ್ತು, ಬೆಳಿಗ್ಗೆ ಬೆಳಿಗ್ಗೆ ಯಾರಪ್ಪಾ ಇದು ಅಳೋರು ಅಂತ ಸುತ್ತ ಮುತ್ತ ಗಮನಿಸಿದೆ, ಯಾರು ಕಾಣ್ತಿಲ್ಲ. ಯಾರಾದರೇನು ನನಗೇನು ಎಂದು ನಾಲ್ಕು ಹೆಜ್ಜೆ ನಡೆದಿದ್ದೆ ಮತ್ತೆ ಬಿಕ್ಕಳಿಸಿ ಅಳುವ ದನಿ ಕೇಳಿಸಿತು, ಹತ್ತಿರದಲ್ಲೇ ಇರುವ ಹಾಗನಿಸಿತು, ನೋಡೋಣ ಎಂದು ಅತ್ತ ಇತ್ತ ಇನ್ನೊಮ್ಮೆ ನೋಡಿದೆ. ರಸ್ತೆಬದಿಯಲ್ಲೊಂದು “ಗಿಡ” ಮುರಿದಿತ್ತು, ಸನಿಹ ಹೋಗಿ ನೋಡಿದೆ ಆ ಗಿಡವೇ ಅಳುತ್ತಿತ್ತು.

ಬೇಕಂತಲೇ ಯಾರೋ ಆ ಗಿಡವನ್ನು ಮುರಿದಿದ್ದರು, ಅಸಹಾಯಕನಾಗಿ ಆ ಗಿಡ ಬಿಕ್ಕಳಿಸುತ್ತಿತ್ತು. ಹೀಗೆ ಅದೆಶ್ಟೋ ಮರಗಿಡಗಳ ನಾಶ ನಮ್ಮಿಂದಾಗಿದೆ, ಅವುಗಳು ಅದೆಶ್ಟು ಅತ್ತಿರಬೇಕು. ಯೋಚಿಸಿ, ಮರಗಿಡಗಳ ಕೂಗೂ ನಮಗೆ ಕೇಳಿಸುವಂತಿದ್ದರೆ ಅದೆಶ್ಟು ಅಳುವ ದನಿ ಕೇಳಬೇಕಿತ್ತೋ…

ಮರ ಬೆಳೆಸಿ, ಹಸಿರು ಉಳಿಸಿ..
ಅಳುವ ದನಿ ಕಾಲ್ಪನಿಕವಾದರೂ ವಾಸ್ತವಕ್ಕೆ ದೂರವಿಲ್ಲ…

(ಚಿತ್ರ ಸೆಲೆ: flickr.com)

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: