ನಗೆಬರಹ: ಚಪ್ಪಲಿ ಕಳ್ಳ

– ಗಂಗಾದರಯ್ಯ.ಎಸ್.ಕೆಂಗಟ್ಟೆ.

ಜುಗ್ಗ ಅಂದ್ರೆ ಜುಗ್ಗಾ ಕಣ್ರಿ ಇವನು. “ಕಿಲುಬು ದುಗ್ಗಾಣಿ ನನ್ ಮಗಾ” ಅಂತಾರಲ್ಲ ಹಾಗೆ. ಆದ್ರೆ “ಎಂಜಲು ಕೈಯಲ್ಲಿ ಕಾಗೇನೂ ಓಡ್ಸಲ್ಲ ಅಂತಾರಲ್ಲ” ಹಾಗಲ್ಲ. ಇವನು ಒಂತರಾ ಒಳ್ಳೇ ಜುಗ್ಗಾ ಕಣ್ರಿ. ಈ ಪ್ರೇತಾತ್ಮಗಳಲ್ಲು ಒಳ್ಳೇ ಆತ್ಮ, ಕೆಟ್ಟ ಆತ್ಮ ಅಂತ ಇರುತ್ತವಂತಲ್ಲ ಹಾಗೆ ಜುಗ್ಗರಲ್ಲು ಒಳ್ಳೇ ಜುಗ್ಗ ಮತ್ತು ಕೆಟ್ಟ ಜುಗ್ಗ ಅಂತಿದ್ದಾರೆ. ಮನೆಗೆ ನೆಂಟರು ಬಂದಾಗ ಅಕ್ಕಿ-ಬೇಳೆ, ತರಕಾರಿಗಳ ಕರ‍್ಚನ್ನು ಅವರ ಮುಂದೆ ಜೋರಾಗಿ ಲೆಕ್ಕಮಾಡಿ ಅವರು ಬೇಗ ಹೊರಡುವಂತೆ ಮಾಡುವ ಜುಗ್ಗನಲ್ಲ. ರಾತ್ರಿ ನೆಂಟರೆಲ್ಲ ಹೊಟ್ಟೆತುಂಬಾ ಊಟಮಾಡಿದ ನಂತರ ಉಳಿದ ಅನ್ನವನ್ನು ವ್ಯರ‍್ತಮಾಡದೆ, ಬೆಳಿಗ್ಗೆ ಅದನ್ನೇ ಚಿತ್ರಾನ್ನ ಮಾಡಿ ಬಡಿಸುವಂತಹ ಒಳ್ಳೇ ಜುಗ್ಗಾ ಕಣ್ರೀ ನಮ್ಮ ಈ ರಂಗ. ಸಾಲ ಕೊಡುವಶ್ಟು ಶ್ರೀಮಂತನಲ್ಲ. ಸಾಲ ಪಡೆಯುವಶ್ಟು ಬಡವನೂ ಅಲ್ಲ. ದುಡಿದದ್ದರಲ್ಲಿಯೇ ಹೆಂಡತಿಯ ಬಯಕೆ, ಮಕ್ಕಳ ಬಾಯ ತುರಿಕೆ, ಹೆತ್ತವರ ಹರಕೆ, ಎಲ್ಲವನ್ನು ಬುದ್ದಿವಂತಿಕೆಯಿಂದ ನಿಬಾಯಿಸುತ್ತಾನೆ.

“ಲೇ ಶಾಂತಾ… ತಿಂಡಿ ಆಯ್ತೇನೇ? ಎಶ್ಟೊತ್ತೇ?” ನಡುಮನೆಯಿಂದ ಅಡುಗೆಕೋಣೆಗೆ ಕೇಳುವಂತೆ ಕೂಗಿದನು.

“ತಿಂಡಿ ಅವಾಗ್ಲೇನೆ ಆಯ್ತುರೀ. ಮಕ್ಕಳ ಸ್ಕೂಲ್ ಬಸ್ಸು ಬರೋದು ಲೇಟಾಯ್ತು. ಅವರನ್ನ ಬಸ್ಸು ಹತ್ಸಿ ಈಗತಾನೆ ಬಂದೆ” ಎನ್ನುತ್ತಾ ಊಟದ ಚೀಲವನ್ನು ಅವನ ಮುಂದಿಟ್ಟಳು. ಅವನು ಬಾಗಿಲ ಬಳಿ ಬಂದು ಬೂಟು ಹಾಕಿಕೊಳ್ಳತೊಡಗಿದನು. ಶಾಂತಾ ಅವನನ್ನೇ ಹಿಂಬಾಲಿಸಿದಳು. ತನ್ನ ಗಂಡನ ಸವೆದು ಸಣಕಲಾಗಿದ್ದ ಚಪ್ಪಲಿಗಳನ್ನು ಗಮನಿಸಿದಳು.

“ರೀ ಒಂದ್ಜೊತೆ ಒಳ್ಳೇ ಚಪ್ಲಿ ತಗೊಳ್ರಿ. ಅವು ನೋಡಿ ಹೇಗೆ ಸವ್ದೋಗಿದಾವೆ. ಅವುನ್ನ ಹಾಕೋದು ಒಂದೇ ಬಿಡೋದು ಒಂದೇ”

“ಇರ‍್ಲಿ ಬಿಡೆ. ಹೆಂಗು ನಾನು ಆಪೀಸಿಗೆ ಬೂಟ್ಸು ತಾನೆ ಹಾಕ್ಕೊಂಡು ಹೋಗೋದು. ಮನೆ ಹತ್ರ ಓಡಾಡೋಕೆ ಹೇಗಿದ್ರೂನು ನಡೆಯತ್ತೆ ಬಿಡು”

“ನನ್ನ ಮಾತ್ನ ಯಾವಾಗ್ ತಾನೆ ಕೇಳಿದೀರ ಹೇಳಿ?”

“ಆಯ್ತು ಬಿಡೆ. ಹೊಸ ಚಪ್ಲಿ ತಗೋತೀನಿ ಆಯ್ತಾ. ಸಮಾದಾನನಾ ನಿಂಗೆ?”

“ಸಮಾದಾನ ಆಗೋಕೆ ನೀವೇನು ನಂಗಾ ತಗೋಳೋದು? ನಿಮ್ಗೆ ತಾನೆ. ತಗೋಳೋದು ತಗೋತೀರ ಸ್ವಲ್ಪ ಚನ್ನಾಗಿರೋದೆ ತಗೋಳಿ”

“ಒಂದು ನೂರೋ-ನೂರೈವತ್ತೊ ಕೊಟ್ರೆ ಒಳ್ಳೇ ಚಪ್ಲೀನೆ ಸಿಗ್ತಾವೆ ಬಿಡು. ಸಂಜೆ ಬಂದು ತರ‍್ತೀನಿ. ಬರ‍್ಲಾ-ಬಾಯ್” ಎಂದು ತನ್ನಪ್ಪನಿಂದ ಬಳುವಳಿಯಾಗಿ ಬಂದಿದ್ದ ಬಜಾಜ್ ಸ್ಕೂಟರನ್ನೇರಿ ಕಚೇರಿಯಡೆಗೆ ಪ್ರಯಾಣಿಸಿದನು.

ಸಂಜೆಯ ಹೊತ್ತಿಗೆ ಕಚೇರಿಯಿಂದ ಹೊರಟ ರಂಗ, ಮಾರ‍್ಗ ಮದ್ಯದಲ್ಲಿ ತರಕಾರಿ-ಸೊಪ್ಪುಗಳನ್ನೆಲ್ಲ ಕೊಂಡುಕೊಂಡು ನೇರವಾಗಿ ಮನೆಸೇರಿದನು. ದಾರಾವಾಹಿಯನ್ನು ನೋಡುತ್ತಾ, ತಾನೂ ಅದರಲ್ಲಿ ಒಂದು ಪಾತ್ರವೇನೋ ಎನ್ನುವಂತೆ ತಲ್ಲೀನಳಾಗಿದ್ದ ಶಾಂತಾ, ಮನೆಯ ಬಾಗಿಲ ಗಂಟೆಯ ಸದ್ದಿಗೆ ಮರಳಿ ಬೂಲೋಕಕ್ಕೆ ಬಂದು ಬಾಗಿಲು ತೆಗೆದಳು. ಗಂಡ ಹೊತ್ತು ತಂದಿದ್ದ ಸೊಪ್ಪು-ತರಕಾರಿಗಳು ಅಡುಗೆಮನೆ ಸೇರಿದವು.

“ಹೊಸ ಚಪ್ಲಿ ತಗೋತೀನಿ ಅಂದಿದ್ರಿ. ಯಾಕ್ ತಗೊಂಡಿಲ್ಲ?” ಶಾಂತಾ ಪ್ರಶ್ನಿಸಿದಳು.

“ಅಯ್ಯೋ..! ಮರೆತ್ಬಿಟ್ಟೆ ಕಣೇ. ನಾಳೆ ತಗೋತೀನಿ ಬಿಡು”

“ನಾಳೆ ಅಂದೋರ ಮನೆ ಹಾಳು. ನಡೀರಿ ಇವಾಗ್ಲೆ ಹೋಗೋಣ”

ಒಂದಲ್ಲ ಎರಡಲ್ಲ ಮೂರ‍್ನಾಲ್ಕು ಅಂಗಡಿಗಳನ್ನು ಸುತ್ತಿದರೂ ರಂಗನಿಗೆ ಯಾವ ಚಪ್ಪಲಿಯ ರಂಗೂ ಹಿಡಿಸಲಿಲ್ಲ. ಕೊನೆಗೆ ಶಾಂತಾಳೆ ದೊಡ್ಡ ಮನಸ್ಸು ಮಾಡಿ ತಾನು ಹಾಗೋ-ಹೀಗೋ ಕೂಡಿಟ್ಟಿದ್ದ ಹಣವನ್ನು ತೆಗೆದು ಅವನಿಗೆ ಒಳ್ಳೆಯ ಕಂಪನಿಯ ಸಾವಿರ ಬೆಲೆಯ ಉತ್ತಮ ಗುಣಮಟ್ಟದ ಚಪ್ಪಲಿಯನ್ನು ಕೊಂಡಳು. ಪ್ರಾರಂಬದಲ್ಲಿ ಇಶ್ಟೊಂದು ಬೆಲೆಯ ಚಪ್ಪಲಿ ಬೇಡ ಎಂದು ಗೊಣಗುತ್ತಿದ್ದವನು ಹೆಂಡತಿ ಅವಳ ಹಣವನ್ನು ತೆಗೆದು ಕೊಟ್ಟಾಗ ಮರುಮಾತನಾಡಲಿಲ್ಲ. ಹೆಂಡತಿಯ ದಯೆಯಿಂದ ರಂಗ ಮೊದಲ ಬಾರಿಗೆ ಉತ್ತಮ ಚಪ್ಪಲಿಗಳನ್ನು ಪಡೆದ. ಆದರೆ ಸವೆದು ಸಣಕಲಾಗಿದ್ದ ಹಳೆಯ ಚಪ್ಪಲಿಗಳನ್ನು ಬಿಸಾಡಲಿಲ್ಲ. ಶೌಚಾಲಯಕ್ಕೆ ಹೋಗುವಾಗ ಹಾಕಿಕೊಂಡು ಹೋಗಬಹುದೆಂದು.

ಅಂದು ಶನಿವಾರ ಬೇರೆ, ಪ್ರತಿ ಶನಿವಾರ ಸಂಜೆ ಆಂಜನೇಯನ ದೇವಸ್ತಾನಕ್ಕೆ ಹೋಗಿ ಬರುವುದು ಅವನ ಅಬ್ಯಾಸ. ಎಂದಿನಂತೆ ಶುಬ್ರವಾಗಿ ಬೇಗ ಬೇಗನೆ ಸ್ಕೂಟರಿನಲ್ಲಿ ಗುಡಿಯನು ತಲುಪಿದನು. ಅಲ್ಲಿ ಚಪ್ಪಲಿಗಳನ್ನು ಬಿಡಲು ವ್ಯವಸ್ತೆ ಮಾಡಲಾಗಿತ್ತು. ಅವುಗಳನ್ನು ಕಾಯುವವನಿಗೆ ಒಂದು ರೂಪಾಯಿ ಕೊಡಬೇಕಿತ್ತು. “ಕೇವಲ ಒಂದು ನಿಮಿಶ ದೇವರ ದರ‍್ಶನ ಮಾಡಿ ಬರುತ್ತೇವೆ. ಆ ಒಂದು ನಿಮಿಶಕ್ಕಾಗಿ ಇವನಿಗೇಕೆ ಒಂದು ರೂಪಾಯಿ ಕೊಡಬೇಕು” ಎಂಬುದು ಅವನ ವಿಚಾರವಾಗಿತ್ತು. ಆದ್ದರಿಂದ ಅವನು ಎಂದಿಗೂ ಚಪ್ಪಲಿ ಕಾಯುವವನ ಬಳಿ ತನ್ನ ಚಪ್ಪಲಿಗಳನ್ನು ಬಿಡುತ್ತಿರಲಿಲ್ಲ. ಎಂದಿನಂತೆ ಚಪ್ಪಲಿಗಳನ್ನು ಸ್ಕೂಟರಿನಡಿಯಲ್ಲಿ ಬಿಟ್ಟನು.

ಬಕ್ತಿಯಿಂದ ದೇವರ ದರ‍್ಶನಮಾಡಿ ಸ್ಕೂಟರಿನ ಬಳಿ ಬಂದಾಗ ಅವನಿಗೊಂದು ಆಶ್ಚರ‍್ಯ ಕಾದಿತ್ತು. ಚಪ್ಪಲಿಗಳು ಇರಲಿಲ್ಲ! ಹೊಸ ಚಪ್ಪಲಿಗಳಲ್ಲವೇ, ಯಾರೋ ಕದ್ದೊಯ್ದಿದ್ದರು. ಒಂದು ಕ್ಶಣ ಬೂಮಿಯೇ ಕುಸಿದಂತಾಯ್ತವನಿಗೆ. ಒಂದು ರೂಪಾಯಿ ಉಳಿಸಲು ಹೋಗಿ ಒಂದು ಸಾವಿರ ಬೆಲೆಯ ಚಪ್ಪಲಿಗಳನ್ನು ಕಳೆದುಕೊಂಡೆನಲ್ಲಾ ಎಂದು ನೊಂದುಕೊಂಡನು. ಹೆಂಡತಿ ಪ್ರೀತಿಯಿಂದ ಕೊಡಿಸಿದ್ದ ಚಪ್ಪಲಿಗಳವು. ‘ಅವಳ ಸಾಲು-ಸಾಲು ಪ್ರಶ್ನೆಗಳಿಗೆ ಹೇಗೆ ಉತ್ತರಿಸಲಿ?’ ಎಂದು ಚಿಂತಿಸತೊಡಗಿದ. ದಿಕ್ಕು ತೋಚದಂತಾಗಿ ಸ್ಕೂಟರಿನ ಪಕ್ಕದಲ್ಲಿದ್ದ ಕಟ್ಟೆಯ ಮೇಲೆ ಕುಳಿತುಕೊಂಡನು. ಚಪ್ಲೀನೂ ಬಿಡಲ್ಲ ಅಂತಾರಲ್ಲ ಕಚಡಾ ನನ್ ಮಕ್ಳು ಎಂದು ನಿಂದಿಸಿದ. ಸ್ವಲ್ಪ ಸಮಯದ ನಂತರ ಅಲ್ಲೇ ಪಕ್ಕದಲ್ಲಿ ಯಾರೋ ತನ್ನಂತೆಯೇ ಬೈಕಿನಡಿಯಲ್ಲಿ ಹೊಸ ಚಪ್ಪಲಿಗಳನ್ನು ಬಿಟ್ಟು ಹೋಗಿದ್ದನ್ನು ಕಂಡನು. ಹಿಂದು-ಮುಂದು ಯೋಚಿಸದೆ ಅಕ್ಕ-ಪಕ್ಕ ನೋಡುತ್ತಾ ಆ ಚಪ್ಪಲಿಗಳನ್ನು ಹಾಕಿಕೊಂಡು ಸ್ಕೂಟರ್ ಹಾರಿತೇನೋ ಎನ್ನುವ ವೇಗದಲ್ಲಿ ಸಾಗಿ ಮನೆ ತಲುಪಿದನು.

ಕುರ‍್ಚಿಯ ಮೇಲೆ ಕೂತವನೇ “ಲೇ ಶಾಂತಾ ಸ್ವಲ್ಪ ಟೀಗಿಡೆ, ಸ್ಟ್ರಾಂಗಾಗಿರ‍್ಲಿ” ಎಂದನು. ಟೀ ಸ್ಟ್ರಾಂಗಾಗಿರ‍್ಲಿ ಎಂದಾಗಲೇ ತನ್ನ ಗಂಡ ಯಾವುದೋ ಚಿಂತೆಯಲ್ಲಿದ್ದಾನೆ ಎಂದು ಶಾಂತಾ ಊಹಿಸಿದಳು.

“ಯಾಕ್ರೀ ಏನಾಯ್ತು? ಯಾಕೋ ಒಂತರಾ ಇದೀರ. ದೇವಸ್ತಾನದಲ್ಲೇನಾದ್ರು ಅಪಶಕುನವಾಯ್ತ?”

“ನಿಂದೊಂದು. ಅಪಶಕುನಾನೂ ಇಲ್ಲ ಏನೂ ಇಲ್ಲ” ಎನ್ನುತ್ತಾ ಚಹಾ ಹೀರತೊಡಗಿದನು.

“ಮತ್ಯಾಕೆ ಒಂತರಾ ಇದೀರಲ್ಲ?”

“ಏನಿಲ್ಲ ಕಣೇ. ದೇವಸ್ತಾನದಲ್ಲಿ ಚಪ್ಲಿ ಕಳ್ಕೊಂಡೆ. ಯಾರೋ ತಗಂಡ್ಹೋಗ್ಬಿಟ್ರು”

“ಏನೂ..! ನೆನ್ನೆ ತಾನೆ ತಗೊಂಡಿದ್ ಹೊಸ ಚಪ್ಲಿ ಕಳ್ಕೊಂಡ್ ಬಂದಿದೀರಾ?”

“ಅದು ಏನಾಯ್ತು ಅಂದ್ರೆ….”

“ಇನ್ನೇನಾಗಿರತ್ತೆ. ಚಪ್ಲಿ ಕಾಯೋನಿಗ್ಯಾಕೆ ಒಂದ್ರುಪಾಯಿ ಕೊಡಬೇಕು ಅಂತ ಹೊರಗೆ ಬಿಟ್ಟೋಗಿರ‍್ತೀರಿ. ಯಾವನೋ ಹೊತ್ಕೊಂಡು ಹೋಗಿರ‍್ತಾನೆ”

“ಅದೇನೆ ಅಶ್ಟು ಕರೆಕ್ಟಾಗಿ ಹೇಳ್ಬಿಟ್ಟೆ”

“ನಿಮ್ಜೊತೆ ಹದಿನೈದು ವರ‍್ಶ ಏಗಿದೀನಿ. ಅಶ್ಟು ಅರ‍್ತಮಾಡ್ಕೊಳ್ಳಿಲ್ಲಾಂದ್ರೆ ಹೇಗೆ?”

“ನೀನೇನು ಯೋಚ್ನೆ ಮಾಡ್ಬೇಡ ಕಣೇ. ಆ ಚಪ್ಲಿ ಹೋದ್ರೇನಾಯ್ತು? ಅದಕ್ಕಿಂತ ಚನ್ನಾಗಿರೊ ಬೇರೆ ಚಪ್ಲಿ ಹಾಕ್ಕೊಂಡು ಬಂದಿದೀನಿ”

ಗಂಡ ಯಾರದ್ದೋ ಚಪ್ಪಲಿ ಹಾಕಿಕೊಂಡು ಬಂದಿರೋದನ್ನು ಅವಳು ಮೊದಲು ತನ್ನತ್ತೆಗೆ ತಿಳಿಸಿದಳು. ಅತ್ತೆ-ಸೊಸೆಯಿಬ್ಬರು ಅವನನ್ನು ಗಾಬರಿಗೊಳಿಸಿದರು.

“ನೀನು ಚಪ್ಪಲಿ ಕಳೆದುಕೊಂಡಿರೋದು ನಮಗೆ ಬೇಜಾರಿಲ್ಲ. ದರಿದ್ರ ಕಳೆಯಿತು ಅಂದ್ಕೋಬಹುದು. ಆದರೆ, ಬೇರೆ ಯಾರದ್ದೋ ಚಪ್ಪಲಿಗಳನ್ನು ಹಾಕ್ಕೊಂಡು ಬಂದಿದೀಯಲ್ಲ. ಅವರ ದರಿದ್ರಾನ ನಮ್ಮನೆಗೆ ಹೊತ್ಕೊಂಡು ಬಂದ್ಹಾಗಾಯ್ತು. ಅವರ ಪಾಪಾನ ನೀನು ಹೊತ್ಕಂಡಂಗಾಯ್ತೀಗ” ಎನ್ನುವ ಮಾತುಗಳನ್ನು ಅವನ ಕಿವಿಯ ಮೂಲಕ ತಲೆಗೆ ತುಂಬಿದರು. ಮೊದಲೇ ಚಪ್ಪಲಿ ಕಳೆದುಕೊಂಡು ಗಲಿಬಿಲಿಗೊಂಡಿದ್ದ ರಂಗ, ಇವರ ಮಾತುಗಳನ್ನು ಕೇಳಿ ಮುಂದೇನು ಮಾಡಬೇಕೆನ್ನುವ ಗೊಂದಲಕ್ಕೀಡಾದನು. ಚಪ್ಪಲಿ ಕದ್ದಿರುವ ಕಳ್ಳತನದ ಬಾವನೆ, ಇನ್ನಾರದೋ ದರಿದ್ರವನ್ನು ಹೊತ್ತುತಂದ ಬಾವನೆಯೊಂದೆಡೆಯಾದರೆ, ತನ್ನ ಹೊಸ ಚಪ್ಪಲಿಗಳನ್ನು ಕಳೆದುಕೊಂಡ ಬೇಸರ ಇನ್ನೊಂದೆಡೆ. ಎಲ್ಲವೂ ಒಟ್ಟಾಗಿ ಇವನನ್ನು ನಿದ್ರೆಯಲ್ಲೂ-ಕನಸಿನಲ್ಲೂ ಎಡೆಬಿಡದೆ ಕಾಡತೊಡಗಿದವು.

ಏನಾದರೂ ಆಗಲಿ ಚಪ್ಪಲಿಗಳನ್ನು ಮರಳಿ ದೇವಸ್ತಾನದ ಮುಂದೆ ಬಿಟ್ಟು ಬರಬೇಕೆಂದು ನಿರ‍್ದರಿಸಿದ ಅವನು, ಮರುದಿನ ಮುಂಜಾನೆ ಕಚೇರಿಗೆ ಹೋಗುವ ಮುನ್ನ ದೇವಸ್ತಾನದ ಬಳಿ ಹೋಗಿ ಚಪ್ಪಲಿಗಳನ್ನು ಅವುಗಳ ಮೂಲ ಸ್ತಾನದಲ್ಲಿಯೇ ಇಟ್ಟನು. ಹೊತ್ತು ತಂದಿದ್ದ ದರಿದ್ರವನ್ನು ವಿಸರ‍್ಜಿಸಿದ ಬಾವನೆಯಲ್ಲಿ ಕಚೇರಿಯ ದಾರಿ ಹಿಡಿದನು. ಸ್ವಲ್ಪ ದೂರ ಕ್ರಮಿಸಿದಾಗ, “ಆ ಚಪ್ಪಲಿಗಳು ಯಾರವೋ? ಅವರೇ ಬಂದು ತೆಗೆದುಕೊಂಡು ಹೋಗುವುದು ಹೆಚ್ಚು-ಕಡಿಮೆ ಸಾದ್ಯವಿಲ್ಲದ ಮಾತು. ಆದರೆ, ಕಳ್ಳನೇ ಅವುಗಳನ್ನು ತೆಗೆದುಕೊಂಡು ಹೋಗುವ ಸಾದ್ಯತೆ ಹೆಚ್ಚು. ಆ ಚಪ್ಪಲಿ ಕಳ್ಳ ಯಾರು ಎಂದು ನೋಡೇ ಬಿಡೋಣ” ಎಂದೆನಿಸಿತವನಿಗೆ. ತಕ್ಶಣ ತನ್ನ ಸ್ಕೂಟರನ್ನು ಹಿಂದಕ್ಕೆ ತಿರುಗಿಸಿಕೊಂಡು ದೇವಸ್ತಾನದ ಬಳಿ ಬಂದು ನೋಡಿದನು. ಅವನು ಅಲ್ಲಿಟ್ಟು ಹೋಗಿದ್ದ ಇನ್ಯಾರದೋ ದರಿದ್ರ ಚಪ್ಪಲಿಗಳೂ ಸಹಾ ಅಲ್ಲಿರಲಿಲ್ಲ. ಕೆಲವೇ ನಿಮಿಶಗಳಲ್ಲಿ ಚಪ್ಪಲಿ ಕಳ್ಳ ತನ್ನ ಕೈಚಳಕವನ್ನು ತೋರಿಸಿಯೇಬಿಟ್ಟಿದ್ದ!

( ಚಿತ್ರ ಸೆಲೆ:  newskannada.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: