ದುಂಬಿ ನಾನಲ್ಲ

– ಹಜರತಅಲಿ.ಇ.ದೇಗಿನಾಳ.


ಮಕರಂದ ಹೀರಲು ಹೂವಿಂದ ಹೂವಿಗೆ
ಹಾರಿ ಹೋಗುವ ದುಂಬಿ ನಾನಾಗಲಾರೆ
ನನ್ನ ಸಕಿಯೆಂಬ ಸೂರ‍್ಯಪಾನದ ಹೂವ
ಸಕ್ಯವನು ಮರೆತು ನಾ ಬದುಕಲಾರೆ

ಹತ್ತು ಹಲ ಹೂವುಗಳ ಮೋಹಕ್ಕೆ ಒಳಗಾಗಿ
ಹುಚ್ಚಾಗಿ ಅಲೆವ ದುಂಬಿ ನಾನಲ್ಲ
ಮಲ್ಲಿಗೆ, ಸಂಪಿಗೆ, ಸೇವಂತಿಗೆಯರೆಂಬ
ಅಪ್ಸರೆಯರ ಪ್ರೇಮ ನನಗೆ ಬೇಕಿಲ್ಲ

ಗುಳಿಕೆನ್ನೆಯ ಕೆಂದಾವರೆ ಕೈಬೀಸಿ ಕರೆದರೂ
ನಾನತ್ತ ತಿರುಗಿಯೂ ನೋಡಲಾರೆ
ರಂಗುರಂಗಿನ ಚಲುವೆ ಕೆಂಪು ಗುಲಾಬಿ
ಕಣ್ಣು ಹೊಡೆದರೂ ಬೆನ್ನು ಬೀಳಲಾರೆ

ಅರಳಿ ನಿಂತಿವೆ ತರತರದ ಹೂವು
ಈ ಜಗವೆಂಬ ಹೂದೋಟದಲ್ಲಿ
ನನ್ನ ಮನಸತ್ತ ಎಂದಿಗೂ ಹರಿಯದು
ಅರಸಿ ಕುಳಿತಿಹಳೆನ್ನ ಹ್ರುದಯದಲ್ಲಿ

ನನ್ನ ಸಕಿಯೆಂಬ ಸೂರ‍್ಯಪಾನದ ಹೂವು
ಸಾಕೆನಗೆ ಜೀವನದಿ ಸಂಗಾತಕೆ
ನನಗಾಗಿ ಅವಳು ಅರಳಿ ನಿಂತಿರುವಾಗ
ಆ ಹೂವ ಈ ಹೂವ ಬೇಕೇತಕೆ?

( ಚಿತ್ರ ಸೆಲೆ: lanlinglaurel.com/data/out )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks