ಮರದ ಟೊಳ್ಳಿನ ಒಳಗೊಂದು ವೈನ್ ಶಾಪ್!

– ಕೆ.ವಿ.ಶಶಿದರ.

ಬಾವೋಬಾಬ್ – ಕಡಿಮೆ ಎತ್ತರದ, ಬಾರಿ ಗಾತ್ರದ ಕಾಂಡವನ್ನು ಹೊಂದಿರುವ ಮರ. ಇದು ನೀಡುವ ಹಣ್ಣನ್ನು ತಿನ್ನಲು ಯೋಗ್ಯವಾಗಿರುತ್ತೆ. ಬಾವೋಬಾಬ್ ಮರವನ್ನು ಡೆಡ್-ರ‍್ಯಾಟ್ ಟ್ರಿ, ಮಂಕಿ-ಬ್ರೆಡ್ ಟ್ರಿ, ಅಪ್‍ಸೈಡ್ ಡೌನ್ ಟ್ರಿ ಎಂತಲೂ ಕರೆಯುತ್ತಾರೆ. ಇದು ದೀರ‍್ಗಾಯುಶಿ. ಇದರ ಜೀವಿತದ ಕಾಲಾವದಿ ಸಾವಿರಾರು ವರ‍್ಶ.

ದಕ್ಶಿಣ ಆಪ್ರಿಕಾದ ಲಿಂಪೊಪೊದ ಸನ್‍ಲ್ಯಾಂಡ್ ಪಾರಂನಲ್ಲಿ ಬಾವೋಬಾಬ್ ದೈತ್ಯ ಮರವೊಂದಿದೆ. ಇದರ ವಿವರ – 72 ಅಡಿ ಎತ್ತರ. ಸುತ್ತಳತೆ 155 ಅಡಿ. ತಲೆಯ ಸುತ್ತಳತೆ ಅಂದಾಜು ನೂರು ಅಡಿಯಶ್ಟು. ಕಾಂಡದ ವ್ಯಾಸ 30 ಅಡಿ. ಈ ಅಂಕಿಅಂಶಗಳನ್ನು ಗಮನಿಸಿದಲ್ಲಿ, ಅನೇಕ ಗಣನೆಗಳಲ್ಲಿ, ಇದು ವಿಶ್ವದಲ್ಲೇ ಮೊದಲ ಸ್ತಾನ ಪಡೆದು ಬಾರಿ ಗಾತ್ರದ ಮರವೆಂಬ ಹೆಗ್ಗಳಿಕೆಯನ್ನು ಹೊಂದಿದೆ. ಅಗಲದಲ್ಲಿ ಇದರಶ್ಟು ದೊಡ್ಡ ಮರ ಆಪ್ರಿಕಾ ಕಂಡದಲ್ಲೇ ಇಲ್ಲ. ಈ ದೈತ್ಯಮರ ಹೊಂದಿರುವ ಅಸಾಮಾನ್ಯ ಆಯಾಮಗಳ ಜೊತೆಗೆ ಇದನ್ನು ವಿಶ್ವದಲ್ಲೇ ಜೀವಂತವಿರುವ ಅತಿ ಹಳೆಯ ಮರ ಎಂದು ಗುರುತಿಸಿರುವುದು ಇದರ ಗರಿಮೆ.

ಕೆಲವೊಂದು ಅಂದಾಜಿನ ಪ್ರಕಾರ ಸನ್‍ಲ್ಯಾಂಡ್ ಪಾರಂನ ಬಾವೋಬಾಬ್ 60 ಶತಮಾನಗಳಶ್ಟು ಹಳೆಯ ಮರ. ನಿಕರವಾದ ದಾಕಲೆಗಳಿಲ್ಲದ ಕಾರಣ ಇದು ಜಿಜ್ನಾಸೆಗೆ ಆಗರವಾಗಿದೆ. ಕಾರ‍್ಬನ್ ಡೇಟಿಂಗ್ ರೀತ್ಯ ಇದು ಈ ಸಹಸ್ರಮಾನಕ್ಕಿಂತ ಹಳೆಯದೆಂದು ದ್ರುಡಪಟ್ಟಿದೆ. ಈ ಅದ್ಬುತ ಜಾತಿಯ ಬಾವೋಬಾಬ್ ಮರದ ಕಾಂಡ ಅಂದಾಜು ಸಾವಿರ ವರ‍್ಶಕ್ಕೆ ಟೊಳ್ಳಾಗುತ್ತದೆ. ಒಳಗಿನ ಪದರಗಳೆಲ್ಲಾ ಕೊಳೆತು ಕುಸಿಯುತ್ತದೆ. ಸನ್‍ಲ್ಯಾಂಡ್ ಬಾವೋಬಾಬ್ ಮರದ ಕಾಂಡ ಅನೇಕ ತಲೆಮಾರುಗಳ ಮುಂಚೆಯೆ ಈ ರೀತಿಯಲ್ಲಿ ಟೊಳ್ಳಾಗಿದೆ.

ಟೊಳ್ಳಿನ ಮದ್ಯ ಬಾಗದಲ್ಲಿದ್ದ ಮರ ಕೊಳೆತು ಉದುರಿ ಗಣನೀಯ ಪ್ರಮಾಣದ ಕಾಂಪೋಸ್ಟ್ ಅಗಿ ಮಾರ‍್ಪಾಟಾಗಿತ್ತು. ಅದನ್ನು ಅಗೆದು ತೆಗೆದು ಅಚ್ಚುಕಟ್ಟು ಮಾಡಲಾಯಿತು. ಇದರಿಂದ ಒಳಗಿನ ನೆಲ ಹೊರಗಿನ ನೆಲಕ್ಕಿಂತಾ ಒಂದು ಮೀಟರ್‍ನಶ್ಟು ಕೆಳೆಗಿಳಿಯಿತು. ನೆಲಹಾಸು ಹಾಕಿ ಆ ಜಾಗವನ್ನು ಸ್ವಚ್ಚ ಹಾಗೂ ಸುಂದರಗೊಳಿಸಲಾಯಿತು. ಪ್ರಾಕ್ರುತಿಕವಾಗಿ ಸ್ರುಶ್ಟಿಯಾಗಿದ್ದ ಕಾಂಡದ ತೆರವಿಗೆ ಬಾಗಿಲನ್ನು ಈಗ ಅಳವಡಿಸಿಲಾಗಿದೆ.

ಈ ಟೊಳ್ಳಿನಲ್ಲಿ ಎರಡು ವಿಬಾಗಗಳಿದ್ದು ಒಂದೊಕ್ಕೊಂದು ಒಳಗಿನಿಂದ ಸಂಪರ‍್ಕ ಹೊಂದಿದೆ. ಒಂದು ಬಾಗ ಪುಟ್ಟ ವೈನ್ ಶಾಪ್ ತೆರೆಯುವಶ್ಟು ವಿಶಾಲವಾಗಿದೆ. ಮತ್ತೊಂದರಲ್ಲಿ ಮಾಮೂಲಿನಂತೆ ಗ್ರಾಹಕರಿಗೆ ಕೂರಲು ಸ್ತಳಾವಕಾಶ ಕಲ್ಪಿಸಿದೆ. ಇದರ ಮಾಲೀಕರು ವಾನ್ ಹೀರ‍್ಡೆನ್ ಕುಟುಂಬದವರು. ಈ ಟೊಳ್ಳಿನಲ್ಲಿ ವಿನೂತನ ಮಾದರಿಯ ವೈನ್ ಶಾಪ್ ಮಾಡಿ ಮಾದಕ ಪ್ರಿಯರ ಮನ್ನಣೆ ಗಳಿಸಿದ್ದಾರೆ.

1993ರಲ್ಲಿ ವಾನ್ ಹೀರ‍್ಡೆನ್ ಕುಂಟುಂಬದವರು ಈ ಟೊಳ್ಳಿನಲ್ಲಿ ವೈನ್ ಶಾಪ್ ತೆರೆದ ನಂತರ ಇದು ಪ್ರವಾಸಿಗರ ಪ್ರಮುಕ ಆಕರ‍್ಶಣೆಯ ಕೇಂದ್ರವಾಯಿತು. 2016ರಲ್ಲಿ ಮರದ ಮೂರನೇ ಒಂದು ಬಾಗ ಕುಸಿದಿತ್ತು. ಇದರಿಂದ ವೈನ್ ಶಾಪ್‍ಗೆ ಯಾವುದೇ ಹಾನಿ ಆಗಲಿಲ್ಲ. ಸಾವಿರಾರು ವರ‍್ಶದ ಇಳಿ ವಯಸ್ಸು ಹಾಗೂ ದೀರ‍್ಗಕಾಲ ನೈಸರ‍್ಗಿಕ ವಿಕೋಪಗಳಿಗೆ ಮೈಯೊಡ್ಡಿ ನಿಂತಿದ್ದು ಕುಸಿತಕ್ಕೆ ಮೂಲ ಕಾರಣ. ರೈಲ್ವೆ ಸ್ಲೀಪರ್‍ನಂತೆ ಇಲ್ಲಿ ಪಬ್ಬನ್ನು ರಚಿಸಲಾಗಿದೆ. ಬಿಯರ್ ಬಾಟಲಿಗಳನ್ನು ತೆರೆದ ಮರದ ಕಪಾಟಿನಲ್ಲಿ ಜೋಡಿಸಲಾಗಿದೆ. ಗ್ರಾಹಕರು ಮರದ ಟೊಳ್ಳಿನೊಳಗಿನ ಪ್ರದೇಶದಲ್ಲಾಗಲಿ ಅತವಾ ಹೊರಗಿನ ಪ್ರಶಾಂತ ವಾತಾವರಣದಲ್ಲಾಗಲಿ ಕುಳಿತು ಬಿಯರ‍್ನ್ನುರನ್ನು ಹೀರಬಹುದು. ಎಲ್ಲೆಡೆಯಲ್ಲೂ ಕೂರಲು ಸೂಕ್ತ ಆಸನದ ಏರ‍್ಪಾಡನ್ನು ಮಾಡಲಾಗಿದೆ. ಜೊತೆಗೆ ಆದುನಿಕತೆಯನ್ನು ಬಯಸುವವರಿಗಾಗಿ ಮ್ಯೂಸಿಕ್ ಸಿಸ್ಟಮ್ ಸಹ ಇದೆ. ವೈನ್ ಸೆಲ್ಲಾರ್ ಎರಡನೇ ವಿಬಾಗದಲ್ಲಿದೆ. ನೈಸರ‍್ಗಿಕವಾಗಿ ಲಬ್ಯವಿರುವ ಮರದ ಕಿಂಡಿಗಳು ಈ ವಿಬಾಗವನ್ನು ತಂಪಾಗಿರಿಸಿವೆ.

ಒರಟಾದ ಹಳ್ಳಿಗಾಡಿನ ವೈನ್ ಶಾಪ್‍ನಂತಿರುವ ಇದು ಎಲ್ಲಾ ರೀತಿಯ ಬಿಯರಿನ ಆಗರ. 13 ಅಡಿ ಎತ್ತರದ ಒಳಮಾಳಿಗೆಯನ್ನು ಹೊಂದಿರುವ ಇದರಲ್ಲಿ 15 ಜನ ಆರಾಮವಾಗಿ ಕೂರಬಹುದು. 40 ಜನ ವಯಸ್ಕರರು ಒಮ್ಮೆ ಇದರೊಳಗೆ ತೂರಿ ಪಾರ‍್ಟಿಯನ್ನು ಆಚರಿಸಿರುವುದಾಗಿ ಹೇಳಿಕೊಂಡು ಪಬ್‍ನ ಮಾಲೀಕರು ಹೆಮ್ಮೆಯಿಂದ ಬೆನ್ನು ತಟ್ಟಿಕೊಳ್ಳುತ್ತಾರೆ.

ಒಂದು ಗುಟುಕು ಬಿಯರ್ ಎಳೆಯಲು ಇಶ್ಟಪಡುವ ವೀಕ್ಶಕರಿಗೆ ವೈನಾದ ಜಾಗ ಈ ವೈನ್ ಶಾಪ್. ಇಲ್ಲಿನ ವಾತಾವರಣದ ಪ್ರಶಾಂತತೆ ಅವರನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ಯುತ್ತದೆ. ವಿಶ್ರಾಂತಿ ಬೇಕೆನ್ನಿಸುವವರು ಇಲ್ಲಿ ಬಿಯರ್ ಸೇವಿಸುತ್ತಾ ನೆಮ್ಮದಿ ಪಡೆಯಬಹುದು. ಇನ್ನೂ ಹೆಚ್ಚಿನ ವಿಶ್ರಾಂತಿ ಬಯಸುವವರು ನಶೆ ಇಳಿಯುವವರೆಗೂ ಅತವಾ ಇಡೀ ರಾತ್ರಿ ಇಲ್ಲಿನ ಜಂಗ್ಲೋಗಳಲ್ಲಿ (ಜಂಗಲ್-ಬಂಗ್ಲೋ) ತಂಗಬಹುದು.

(ಮಾಹಿತಿ ಮತ್ತು ಚಿತ್ರ ಸೆಲೆ: bigbaobab.co.za, wiki)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks