ಒಲವಿನ ಅಲೆ ಅಪ್ಪಳಿಸಿದಾಗ…

 ಈರಯ್ಯ ಮಟದ.

ಸಾಮಾನ್ಯವಾಗಿ ಈ ಮದ್ಯಾವಸ್ತೆ ಇಲ್ಲವೇ ತಾರುಣ್ಯದ ಕಾಲ ಬಂತೆಂದರೆ ಸಾಕು ಚಿಗುರು ಮೀಸೆಯೊಡೆಯುವ ಕಾಲವದು. ಹೊಸ ಹೊಸ ಆಸೆಗಳ ಮೂಲ ಈ ತಾರುಣ್ಯವೆನ್ನಬಹುದು. ಈ ಟೀನೇಜಿನ ದಿನಗಳಲ್ಲಿ ನಾವೆಲ್ಲರೂ ಕಾಣತಕ್ಕ ಕನಸುಗಳು ಯಾವುವು ಅಂತ ಉಹಿಸೊಕ್ಕಾಗಲ್ಲ. ಕೆಲವೊಬ್ಬರಿಗೆ ತಮ್ಮ ಬಾಳಸಂಗಾತಿಯ ಬಗೆಗಿನ ಕನಸು, ತಮ್ಮ ಜೀವನ ಸಾದನೆಯ ಕನಸು, ಇನ್ನೂ ಕೆಲವರಿಗೆ ವಿಲಾಸಿ ಜೀವನದ ಕನಸು ಹೀಗೆ ಹಲವರಿಗೆ ಹಲವು ಕನಸುಗಳು ಸಹಜ. ಕಾಲೇಜಿನ ಕಲಿಕೆಯಲ್ಲಿ ಹೊಸ ರೀತಿಯ ಅನುಬವಗಳನ್ನು ಪಡೆಯುತ್ತೇವೆ. ಅದು ಸ್ನೇಹವಾಗಲಿ, ಮಾನವೀಯ ಮೌಲ್ಯಗಳಾಗಲಿ ಹೀಗೆ ವಿವಿದವಾದ ಅನುಬವಗಳನ್ನು ಅನುಬವಿಸುತ್ತೇವೆ.

ಅನುರಾಗದ ಮಳೆ ಹನಿ ತಾಕಿ, ಪ್ರೀತಿಯೆಂಬ ಸ್ವಾತಿಮುತ್ತು ಹ್ರುದಯವೆಂಬ ಚಿಪ್ಪಿನಲ್ಲಿ ಅರಳುವುದು ಮರೆಯಲಾಗದ ಅನುಬವ ತಾನೆ?

“ಪ್ರೀತಿ” ಇದು ಯಾರನ್ನು ಕೇಳದೆ ಹೇಳದೆ ಬರುವ ಅಪರಿಚಿತ ಅತಿತಿ. ಕೆಲವೊಬ್ಬರು ಈ ಅತಿತಿಯನ್ನು ತಿರಸ್ಕರಿಸುವವರುಂಟು ಆದರೆ ಹೆಚ್ಚಿನ ಜನ ಈ ಅತಿತಿಯನ್ನು ಆದರಿಸುತ್ತಾರೆ. ಪ್ರೀತಿಯೆಂಬ ತಾವರೆ ಹೂವು ಅರಳುವುದಕ್ಕೆ ಬೇರೆ ಬೇರೆ ಮೂಲ ಇರಬಹುದು ಆದರೆ ಅದರ ಹಿಂದೆ ಇರುವುದು ಮಾತ್ರ ಅತಿಯಾದ ಕಾಳಜಿ ಮತ್ತು ಪ್ರಾಮಾಣಿಕವಾದ ನಂಬಿಕೆ.

ಸಾಮಾನ್ಯವಾಗಿ ಈ ಪ್ರೀತಿ ಹುಟ್ಟುವುದು ಪವಿತ್ರವಾದ ಸ್ನೇಹ ಸಂಬಂದದಲ್ಲಿ, ಮೊಗ್ಗಿನ ಹಾಗೆ ಬಂದು ಹೂವಾಗಿ ಅರಳುತ್ತದೆ. ಮೊದ ಮೊದಲಿಗೆ ಪ್ರೀತಿ ಚಿಗುರೊಡೆಯುವುದು ಪರಸ್ಪರ ಅನುಬವಗಳನ್ನು ಮುಕ್ತ ಅತವಾ ನಿರ‍್ಮಲ ಮನಸ್ಸಿನಿಂದ ಹಂಚಿಕೊಳ್ಳುವ ಮೂಲಕ. ಹೀಗೆ ಇದು ಮೊಳಕೆಯಿಂದ ಹೆಮ್ಮರವಾಗುವುದು. ಆಗ ಮಾತ್ರ ಒಬ್ಬರನ್ನು ಬಿಟ್ಟು ಒಬ್ಬರು ಇರುವುದು ತುಂಬಾ ಕಶ್ಟ ಅನಿಸುವುದು. ಪ್ರತಿ ದಿನ ಪ್ರತಿ ಕ್ಶಣವೂ ಯಾವಾಗಲು ಹತ್ತಿರ ಇರಬೇಕೆನ್ನಿಸುವುದು, ಕೆಲವೊಮ್ಮೆ ಯಾವುದೋ ಕಾರಣಕ್ಕಾಗಿ ಜಗಳವಾಡಿ ಮಾತು ನಿಂತು ಹೋದಾಗಲೂ ಮನಸ್ಸು ಮಾತನಾಡಲು ಹಾತೊರೆಯುತ್ತದೆ. ಆದರೆ ಮೊದಲು ಅವನು ಮಾತನಾಡಲಿ ಅತವಾ ಮೊದಲು ಅವಳು ಮಾತನಾಡಲಿ ಎನ್ನುವ ಚಿಕ್ಕ ಹಟ ಶುರುವಾಗುತ್ತದೆ, ಹೀಗೆ ಮುಂದುವರಿದರೂ ಸಹ ಪ್ರತಿ ಗಳಿಗೆಯು ಅವಳ ನೆನಪು ಕಾಡುತ್ತದೆ. ಯಾವುದೇ ಕೆಲಸದಲ್ಲಿ ತೊಡಗಿದರು ಮನಸ್ಸು ಮಾತ್ರ ಕನಸಿನ ಲೋಕದಲ್ಲಿ ಸಂಚರಿಸುತ್ತಿರುತ್ತದೆ. ಈಗಿನ ದಿನಗಳಲ್ಲಿ ವಿವಿದ ರೀತಿಯ ಮೋಬೈಲುಗಳ ಮಳೆಯಿಂದಾಗಿ ಪ್ರೇಮಿಗಳು ಅದೆಶ್ಟೇ ದೂರವಿದ್ದರೂ ಸನಿಹ ಮಾಡುವ ಸಾದನಗಳಾಗಿವೆ, ಹೀಗಿರುವಾಗ ಪ್ರತಿ ನಿಮಿಶವು ಒಂದು ಚಿಕ್ಕ ಸಂದೇಶಕ್ಕಾಗಿ ಅತವಾ ಒಂದು ಕರೆಗಾಗಿ ಮನಸ್ಸು ಹಾತೊರೆಯುತ್ತಿರುತ್ತದೆ.

ಪ್ರೀತಿ ಮುಂದುವರಿದು ಅದು ಪವಿತ್ರವಾದ ಮದುವೆ ಎನ್ನುವ ಬಂದನಕ್ಕೆ ಅಣಿಯಾದರೆ ಅದಕ್ಕೊಂದು ಅಮೂಲ್ಯವಾದ ಬೆಲೆ ಸಿಗುತ್ತದೆ. ಆ ಪ್ರೀತಿಗೆ ಅನನ್ಯವಾದ ಗೌರವ ಸಿಗುತ್ತದೆ. ಇಲ್ಲವಾದರೆ ಪ್ರೀತಿಯ ಅಲೆ ತಂಗಾಳಿಯ ಸೆಲೆಯಾಗದೆ ಸುಡುಬಿಸಿಲಿನ ಬಿರುಗಾಳಿಯಗುತ್ತದೆ.

ಈ ನಮ್ಮ ಬದುಕಿನಲ್ಲಿ ಸುಕ ದುಕ್ಕಗಳು, ನೋವು ನಲಿವುಗಳು ಸಾಮಾನ್ಯವಾಗಿರುತ್ತವೆ, ಇವುಗಳು ತಾನೆ ಮನುಶ್ಯನಿಗೆ ಅನುಬವ ತರುವ ಮೂಲಗಳು. ಅದೇ ರಿತಿಯಾಗಿ ಈ ಪ್ರೀತಿಯಲ್ಲಿಯು ಕೂಡಾ ಸಣ್ಣ ಪುಟ್ಟ ವಿರಸಗಳು ಸಾಮಾನ್ಯವಾಗಿರುತ್ತವೆ, ಅವುಗಳನ್ನು ಮೀರಿ ನಿಂತು ಪ್ರೀತಿಯನ್ನು ಗೆಲ್ಲಬೇಕೇ ಹೊರತು ಪ್ರೀತಿಯಿಂದ ದೂರವಾಗಬಾರದು. ನಿಜವಾಗಿ ಹೀಗೆ ದೂರವಾಗುವುದಕ್ಕೆ ಕಾರಣ ನಮ್ಮಲ್ಲಿರುವ ಅತಿಯಾದ ಹಟ, ಅತವಾ ಕೆಲವೊಂದು ಸಂದರ‍್ಬಗಳಿಗೆ ಹೊಂದಿಕೊಳ್ಳದೆ ಇರುವ ಗುಣ. ಇವುಗಳಿಂದ ನಾವೇನೂ ಸಾದಿಸುವುದಿಲ್ಲ, ಯಾವ ಐಶ್ವರ‍್ಯವನ್ನು ಗಳಿಸುವುದಿಲ್ಲ, ಸುಮ್ಮನೆ ಎಲ್ಲರಿಂದ ದೂರವಾಗುತ್ತೇವೆ. ಇತಿಹಾಸವನ್ನು ಇಣುಕಿ ನೋಡಿದಾಗ ದ್ವೇಶ, ಹಗೆತನ, ಅಹಂಕಾರ ಇವುಗಳಿಂದ ಏನನ್ನು ಸಾದಿಸಲು ಸಾದ್ಯವಾಗಿಲ್ಲ ಅದೇ ಪ್ರೀತಿ, ಮಮತೆ, ಕರುಣೆ, ದಯೆ ಇವುಗಳಿಂದ ಇಡೀ ಜಗತ್ತನ್ನೆ ಗೆಲ್ಲಬಹುದು.

ನಾವೆಲ್ಲರೂ ಹೇಳುತ್ತೇವೆ ಪ್ರೀತಿ ಮದುರ ತ್ಯಾಗ ಅಮರ ಅಂತ. ನಿಜ ಆ ಮದುರವಾದ ಪ್ರೀತಿಗೆ ನಂಬಿಕೆ, ಕಾಳಜಿ ಮತ್ತು ಹೊಂದಿಕೊಳ್ಳುವ ಸ್ವಬಾವವೆ ಕಾರಣ. ಪ್ರೀತಿಯನ್ನು ಪ್ರೀತಿಯಿಂದಲೇ ಗೆಲ್ಲಬೇಕು…

(ಚಿತ್ರ ಸೆಲೆ: pexels.com , pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: