ತರಗೆಲೆಯು ನಾನು

– ಅಜಯ್ ರಾಜ್.

ಜೋರು ಗಾಳಿಯ ರಬಸದ ಹೊಡೆತಕೆ
ಉದುರಿ ಬಿದ್ದ ತರಗೆಲೆ ನಾನು
ನನ್ನ ಗುಡಿಸಿ, ಸೇರಿಸಿ
ಕಿಚ್ಚು ಹೊತ್ತಿಸುವುದು ನಿನಗೆ ಕಶ್ಟವೇನು?

ಸೆಟೆದು ಕೊಂಡ ನರನಾಡಿಗಳಲ್ಲೆಲ್ಲ
ಬತ್ತಿ ಹೋಯಿತು ನೆತ್ತರೆಂಬ ಜೀವಜಲ
ಬಿರುಸಿನ ಬೇಗುದಿಯಲ್ಲಿ
ಒಂದು ಹನಿಯೂ ದಕ್ಕಿಸಿಕೊಳ್ಳಲಾಗಲಿಲ್ಲ;
ಬರಿಯ ತರಗೆಲೆ ನಾನು
ಕಿಚ್ಚು ಹಚ್ಚುವುದು ಕಶ್ಟವೇನು?

ಒಡಲ ಕಿಚ್ಚು ಮೌನದಿ ಆರ‍್ಬಟಿಸುವಾಗ
ನೀ ಹಚ್ಚುವ ಕಿಚ್ಚ ದೂರುವೆನೆ?
ಕರುಳ ಬಳ್ಳಿ ಉನ್ಮಾದದಿ ಅರಚುವಾಗ
ನಿನ್ನ ಬರಿಗಾಲಿನ ತುಳಿತಕೆ ನಲುಗುವೆನೆ?
ತರಗೆಲೆ ನಾನು, ತ್ರುಣಮಾತ್ರನು
ಕಿಡಿ ಹಚ್ಚುವುದು ಕಶ್ಟವೇನು?

ಮಗ್ಗುಲಲಿ ಬಿದ್ದಿಹ ಮುಗ್ಗಲು
ನನ್ನೊಳಗಿರುವುದೆಲ್ಲಾ ಕಾರ‍್ಗತ್ತಲು
ಚಿವುಟಿ ಅವುಟಿದರೂ ಚಲನೆಯಿಲ್ಲ
ಮಿತ್ರರ ಅವಶೇಶಗಳೇ ನನ್ನ ಸುತ್ತಲು
ತರಗೆಲೆ,  ನಾನು
ರಾಶಿ ಮಾಡಿ ಕಿಚ್ಚು ಹೊತ್ತಿಸು ನೀನು!

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: