ಬೆರಗು ಮೂಡಿಸುವ ಇಂಡಿಯಾದ ಕೆಲವು ವಸ್ತು ಸಂಗ್ರಹಾಲಯಗಳು

– ಕೆ.ವಿ.ಶಶಿದರ.

ವಸ್ತು ಸಂಗ್ರಹಾಲಯಗಳು ಎಂದಾಕ್ಶಣ ಮನದ ಮುಂದೆ ಹರಿದಾಡುವುದು ವೈಜ್ನಾನಿಕ ಲೋಕಕ್ಕೆ ಸಂಬಂದಿಸಿದ ನವನವೀನ ಸಂಶೋದನೆಗಳ ಪ್ರತಿರೂಪಗಳು, ವಿಚಿತ್ರವಾಗಿ ಜನಿಸಿದ ಪ್ರಾಣಿ ಪಕ್ಶಿಗಳು, ನಿಜ ಜೀವನದಲ್ಲಿ ಕಾಣಸಿಗದ ಹಲವು ಅತ್ಯುತ್ತಮ ವಸ್ತುಗಳು ಇವೇ ಮುಂತಾದವುಗಳನ್ನು ಕೂಡಿಟ್ಟ ಜಾಗ ಎಂಬ ಬಾವನೆ. ಇವುಗಳನ್ನು ಹೊರತುಪಡಿಸಿ ವಿವಿದ ಸ್ತರದ ಜನರ ಆಶೋತ್ತರಗಳನ್ನು ಬಿಂಬಿಸುವ ವಿಚಿತ್ರವಾದ ಅಸಂಪ್ರದಾಯಿಕ ಅನನ್ಯ ವಸ್ತುಗಳ ಸಂಗ್ರಹಾಲಯಗಳು ಬಾರತದಲ್ಲಿದೆ ಎಂದರೆ ನಂಬುವುದು ಕಶ್ಟವಲ್ಲವೆ?

ಸುಲಬ್ ಇಂಟರ್ ನ್ಯಾಶನಲ್ ಮ್ಯೂಸಿಯಮ್ ಆಪ್ ಟಾಯ್ಲೆಟ್ಸ್ – ದೆಹಲಿ

ಈ ಅನನ್ಯ ಅಸಾಮಾನ್ಯ ವಸ್ತು ಸಂಗ್ರಹಾಲಯವು ನೈರ‍್ಮಲ್ಯ ಮತ್ತು ಶೌಚಾಲಯಗಳ ಚರಿತ್ರೆಗೆ ಮೀಸಲಾಗಿದೆ. ಇಲ್ಲಿರುವ ಹಲವು ವಸ್ತುಗಳು ಕ್ರಿಸ್ತ ಪೂರ‍್ವ 3000 ದಶ್ಟು ಹಿಂದಿನವುಗಳಾಗಿವೆ. ಅನಾದಿಕಾಲದಲ್ಲಿ ಬಳಸುತ್ತಿದ್ದ ‘ಚೇಂಬರ್ ಪಾಟ್’ಗಳ ಪ್ರತಿರೂಪಗಳನ್ನು ಇಲ್ಲಿ ಕಾಣಬಹುದು. ಚೇಂಬರ್ ಪಾಟ್‍ಗಳು ಈಗಿನ ಕಮೋಡ್‍ನ ಪ್ರತಿರೂಪ. ಒಳಚರಂಡಿ ಏರ‍್ಪಾಟಾಗಲಿ, ನೀರು ಸರಬರಾಜಿಗೆ ನಲ್ಲಿಯ ಏರ‍್ಪಾಟಾಗಲಿ ಇಲ್ಲದ ದಿನಗಳಲ್ಲಿ ಮರದಲ್ಲಿ ತಯಾರಿಸಿದ ಕಮೋಡ್‍ನಂತ ಚೇಂಬರ್ ಪಾಟ್‍ಗಳನ್ನು ಬೆಡ್‍ರೂಮ್‍ಗಳಲ್ಲಿ ಬಳಸುವ ಪರಿಪಾಟವಿತ್ತು.

ಈ ಸಂಗ್ರಹಾಲಯದಲ್ಲಿ ವಿಕ್ಟೋರಿಯನ್ ಟಾಯ್ಲೆಟ್‍ಗಳು, ರೋಮನ್ ಚಕ್ರವರ‍್ತಿಗಳು ಬಳಸುತ್ತಿದ್ದ ಚಿನ್ನದ ಟಾಯ್ಲೆಟ್‍ಗಳು ಪ್ರದರ‍್ಶನಕ್ಕಿವೆ. ಇದರೊಂದಿಗೆ ಸುಲಬ್ ಇಂಟರ್ ನ್ಯಾಶನಲ್‍ನವರು ಸಂಶೋದಿಸಿ ಬಿಡುಗಡೆ ಮಾಡಿರುವ, ಗ್ರಾಮಾಂತರ ಪ್ರದೇಶದ ಜನರಿಗೆ ಕೈಗೆಟುಕುವ ಕಡಿಮೆ ವೆಚ್ಚದ, ಬಯೋಡಿಗ್ರೇಡಬಲ್ ಟಾಯ್ಲೆಟ್‍ಗಳು ಸಹ ಇಲ್ಲಿ ನೋಡಲು ಸಿಗುತ್ತವೆ.

ವೇಚಾರ್ ಯುಟೆನ್ಸಿಲ್ಸ್ ಮ್ಯೂಸಿಯಮ್ – ಅಹಮದಾಬಾದ್

ವೇಚಾರ್ (ವಿಶಾಲ್ ಎನ್ವಿರೋನ್ಮೆಂಟಲ್ ಸೆಂಟರ್ ಪಾರ್ ಹೆರಿಟೇಜ್ ಆರ‍್ಟ್, ಆರ‍್ಕಿಟೆಕ್ಚರ್ ಅಂಡ್ ರಿಸರ‍್ಚ್) ಯುಟೆನ್ಸಿಲ್ಸ್ ಮ್ಯೂಸಿಯಮ್ ವಾಸ್ತುಶಾಸ್ತ್ರಜ್ನ ಸುರೇಂದರ್ ಸಿ. ಪಟೇಲ್‍ರವರ ಕನಸಿನ ಕೂಸು. ತಲೆ ತಲೆಮಾರುಗಳಿಂದ ಬೆಳೆದು ಬಂದ ಅಪರೂಪದ, ಕಲಾತ್ಮಕ ಹಾಗೂ ಕೌಶಲ್ಯದ ತುಣುಕಾದ, ಸಾಂಸ್ಕ್ರುತಿಕ ಪರಂಪರೆಯ ಪಾತ್ರೆ ಪಗಡಗಳನ್ನು ಸಂರಕ್ಶಿಸುವ ಪ್ರಯತ್ನ ಈ ವಿಶೇಶವಾದ ಮ್ಯೂಸಿಯಮ್‍ನದು.

ಇದರಲ್ಲಿ ಅಂದಾಜು 4000 ಪಾತ್ರೆ ಪಗಡಗಳು ಇವೆ. ಸಾವಿರ ವರ‍್ಶದ ಹಳೆಯ ಜಗ್‍ನಿಂದ ಮೊದಲ್ಗೊಂಡು ಇಂದಿನ ಗ್ಲಾಸ್ ಪಾತ್ರೆಗಳವರೆಗೆ ಎಲ್ಲಾ ತರಹದ ಪಾತ್ರೆಗಳನ್ನು ಕೂಡಿಡಲಾಗಿದೆ. ಕಂಚಾಗಲಿ, ಹಿತ್ತಾಳೆಯಾಗಲಿ, ಜರ‍್ಮನ್ ಸಿಲ್ವರ್ ಆಗಲಿ, ಸ್ಟೀಲ್ ಆಗಲಿ, ಎಲ್ಲಾ ತರಹದ ಲೋಹಗಳಿಂದ ತಯಾರಾದ ಪರಿಕರಗಳನ್ನು ಇಲ್ಲಿ ಕಾಣಬಹುದು. ಪ್ರತಿಯೊಂದು ಪಾತ್ರೆಯ ಅಡಿಯಲ್ಲಿ ಅವುಗಳ ವಿವರವಿದೆ. ಅದರ ಸಮಯ, ಹುಟ್ಟು, ಯಾವ ಅವಶ್ಯಕತೆಗೆ ಅದು ಬಳಕೆಯಾಗಿತ್ತು ಎಂಬ ವಿವರಗಳನ್ನು ಗಮನಿಸಬಹುದು.

ಮಾನವ ಮೆದುಳಿನ ಸಂಗ್ರಹಾಲಯ – ಬೆಂಗಳೂರು

ಬೆಂಗಳೂರಿನಲ್ಲಿರುವ ರಾಶ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ನಾನ ಸಂಸ್ತೆಯ ಆವರಣದ ನೆಲ ಮಹಡಿಯಲ್ಲಿ ಮಾನವ ಮೆದುಳಿನ ಸಂಗ್ರಹಾಲಯವಿದೆ. ಇದು ಒಂದು ರೀತಿಯಲ್ಲಿ ರಕ್ತಸಿಕ್ತ ಸಂಗ್ರಹಾಲಯ. 300 ಕ್ಕೂ ಹೆಚ್ಚು ಮೆದುಳುಗಳನ್ನು ಜಾರ್‍ಗಳಲ್ಲಿ ಸಂರಕ್ಶಿಸಿ ಇಡಲಾಗಿದೆ. ಇವುಗಳಲ್ಲಿ ಕೆಲವು ದಾನಿಗಳಿಂದ ನೀಡಲ್ಪಟ್ಟಿದ್ದರೆ ಮತ್ತೆ ಕೆಲವು ರಸ್ತೆ ಅಪಗಾತದಲ್ಲಿ ಮಡಿದವರ ಮೆದುಳುಗಳು ಸೇರಿವೆ. ಒಂದೊಂದು ಮೆದುಳಿನ ಹಿಂದೆ ಒಂದೊಂದು ರೋಚಕ ಕತೆಯನ್ನು ಕಾಣಬಹುದು. ಅಪಗಾತದಲ್ಲಿ ನಜ್ಜುಗುಜ್ಜಾದ ಮೆದುಳುಗಳಿಂದ ಹಿಡಿದು ಪರಾವಲಂಬಿಯಿಂದ ದ್ವಂಸಗೊಂಡ ಮೆದುಳುಗಳು ಸಹ ಇಲ್ಲಿ ಕೂಡಿಡಲಾಗಿದೆ. ಕೊನೆಯಲ್ಲಿ ನೋಡುಗರಿಗೆ ಮಾನವನ ಮೆದುಳನ್ನು ಮುಟ್ಟಿ ಅನುಬವಿಸುವ ಅವಕಾಶ ಸಹ ಇದೆ.

ಪಲ್ಡಿ ಗಾಳಿಪಟದ ಮ್ಯೂಸಿಯಮ್- ಅಹಮದಾಬಾದ್

ಅಹಮದಾಬಾದ್ ಗಾಳಿಪಟದ ಹಬ್ಬಕ್ಕೆ ಜಾಗತಿಕ ಪ್ರಸಿದ್ದಿ ಪಡೆದ ನಗರ. ಹಾಗಾಗಿ ಇಲ್ಲಿ ಒಂದು ಸುಂದರ ಅದ್ಬುತ ವಸ್ತು ಸಂಗ್ರಹಾಲಯವಿದ್ದು ಅದು ಗಾಳಿಪಟಗಳ ಇತಿಹಾಸವನ್ನು ಅರುಹಲು ಮಾತ್ರ ಮೀಸಲಾಗಿರುವುದು ಆಶ್ಚರ‍್ಯವೇನಲ್ಲ. ಗಾಳಿಪಟಗಳ ಸಂಗ್ರಹಾಲಯವು ಬಾನು ಶಾರವರ ಕನಸಿನ ಕೂಸು. ಈತ ಒಬ್ಬ ಗಾಳಿಪಟ ಉತ್ಸಾಹಿ. ಐದು ದಶಕಗಳಿಗೂ ಹೆಚ್ಚು ಕಾಲದಿಂದ ತನ್ನಲ್ಲಿರಿಸಿಕೊಂಡಿದ್ದ ಅತಿ ಅಪರೂಪದ ಗಾಳಿಪಟಗಳನ್ನು ಈ ವಸ್ತು ಸಂಗ್ರಹಾಲಯದಲ್ಲಿ ಪ್ರದರ‍್ಶನಕ್ಕಿಡಲು ದೇಣಿಗೆಯಾಗಿ ಅಹಮದಾಬಾದ್ ಮುನಿಸಿಪಲ್ ಕಾರ‍್ಪೋರೇಶನ್‍ಗೆ ನೀಡಿದ್ದಾರೆ.

1985ರಲ್ಲಿ ಸ್ತಾಪಿತವಾದ ಇದರಲ್ಲಿ ಅತಿ ಅಪರೂಪವಾದ 125 ಗಾಳಿಪಟಗಳು ಇವೆ. ಇದರಲ್ಲಿ ಕೆಲವು 70-80 ವರ‍್ಶಗಳಶ್ಟು ಹಳೆಯದು. ಗಾಳಿಪಟದ ಚರಿತ್ರೆ, ವಿವಿದ ದೇಶಗಳಲ್ಲಿ ಕೊರಿಯಾ, ಮಲೇಶಿಯಾ, ಅಮೇರಿಕಾ ಮುಂತಾದ ಕಡೆ ಹಾರಿಸುವುದರ ತಂತ್ರಗಳ ಬಗ್ಗೆ ವಿವರಗಳಿರುವುದನ್ನು ನೋಡುಗರು ಗಮನಿಸಬಹುದು. ಅಹಮದಾಬಾದಿನ ಈ ಅನನ್ಯ ಗಾಳಿಪಟಗಳ ಮ್ಯೂಸಿಯಮ್ ಬಾರತದಲ್ಲೇ ಮೊದಲನೆಯದು ಹಾಗೂ ಜಪಾನಿನ ಒಸಾಕದ ನಂತರ ವಿಶ್ವದಲ್ಲೇ ಎರಡನೆಯದು.

ಲೊಸೆಲ್ ಗೊಂಬೆಗಳ ಮ್ಯೂಸಿಯಮ್ – ದರ‍್ಮಶಾಲ

ದರ‍್ಮಶಾಲದ ಮ್ಯಾಕ್ಲಿಯೊಡ್ಗಂಜ್‍ನಲ್ಲಿರುವ ನೊರ‍್ಬುಲಿಂಗ್ಕ ಇನ್ಸ್ಟಿಟ್ಯೂಟ್‍ನಲ್ಲಿ ವಿಸ್ತಾರವಾಗಿ ಹರಡಿರುವ ಹಸಿರು ಉದ್ಯಾನವನದಲ್ಲಿರುವ ಲೊಸೆಲ್ ಗೊಂಬೆಗಳ ಮ್ಯೂಸಿಯಮ್ ತನ್ನದೇ ಆದ ವಿಶಿಶ್ಟ ಚಾಪನ್ನು ಹೊಂದಿದೆ. ಇದು ವಿಶ್ವದಲ್ಲೇ ಲೊಸೆಲ್ ಗೊಂಬೆಗಳ ದೊಡ್ಡ ಸಂಗ್ರಹಾಗಾರ. ಇಲ್ಲಿರುವ ಬಹುತೇಕ ಗೊಂಬೆಗಳನ್ನು ಬಿಕ್ಶುಗಳು ಕೈಯಲ್ಲೇ ತಯಾರಿಸಿದ್ದು ವಿಶೇಶ. ಗೊಂಬೆಗಳ ತಯಾರಿಕೆಯಲ್ಲಿ ತಂತಿಗಳು, ಜೇಡಿ ಮಣ್ಣು ಮತ್ತು ರುಬ್ಬಿದ ಕಾಗದವನ್ನು ಬಳಸಲಾಗಿದೆ.

ಈ ಗೊಂಬೆಗಳನ್ನು ಶ್ರುಂಗರಿಸಲಾಗಿರುವ ಬಟ್ಟೆಗಳು ಟೆಬೆಟಿಯನ್ನರ ಬಟ್ಟೆಗಳಂತಿವೆ. ಹತ್ತಿ, ಉಣ್ಣೆ, ರೇಶ್ಮೆ ದಾರಗಳನ್ನು ಉಪಯೋಗಿಸಿ ಬಟ್ಟೆಗಳನ್ನು ತಯಾರಿಸಲಾಗಿದೆ. ಟಿಬೆಟಿಯನ್ ಸಂಸ್ಕ್ರುತಿಯಂತೆ ಒಡವೆ, ಸರ ಮುಂತಾದವುಗಳಿಂದ ಅಲಂಕರಿಸಲಾಗಿದೆ.

ಮಾಯಾಂಗ್ ಸೆಂಟ್ರಲ್ ಮ್ಯೂಸಿಯಮ್ – ಮಾಯಾಂಗ್

ಅಸ್ಸಾಂನ ಮೊರಿಗಾವ್ ಜಿಲ್ಲೆಯಲ್ಲಿದೆ ಮಾಯಾಂಗ್ ಹಳ್ಳಿ. ಈ ಬಾಗದ ಚರಿತ್ರೆಯ ಪುಟಗಳನ್ನು ತಿರುವಿ ಹಾಕಿದಲ್ಲಿ ಈ ಹಳ್ಳಿ ‘ಮಾಟಗಾರರ ತೊಟ್ಟಿಲು’ ಎಂಬ ಹೆಸರನ್ನು ಹೊತ್ತಿರುವುದು ಕಾಣುತ್ತದೆ. ಮಾಟ ಮಂತ್ರಗಳ ತವರಾದ ಈ ಹಳ್ಳಿಗೆ ಅನ್ವರ‍್ತನಾಮವೇ ಮಾಯಾಂಗ್. ಮಾಯಾಂಗ್‍ನಲ್ಲಿರುವ ಸೆಂಟ್ರಲ್ ಮ್ಯೂಸಿಯಮ್‍ನಲ್ಲಿ ಮಾನವ ನಿರ‍್ಮಿತ ಸ್ತಳೀಯ ವಿಲಕ್ಶಣ ಕಲಾಕ್ರುತಿಗಳು ಯತೇಚ್ಚವಾಗಿವೆ. ವಾಮಾಚಾರದ ಬಗ್ಗೆ, ಮಾಟ ಮಂತ್ರದ ಬಗ್ಗೆ ಕೈಬರಹದಲ್ಲಿರುವ ಹಲವಾರು ಪುಸ್ತಕಗಳಿವೆ. ಮಾನವನ ತಲೆ ಬುರುಡೆ, ಕೈಯಲ್ಲೇ ತಯಾರಿಸಿದ ಮಾಟ ಮಂತ್ರದಲ್ಲಿ ಉಪಯೋಕ್ಕೆ ಬರುವ ಉಪಕರಣಗಳನ್ನೂ, ಗೊಂಬೆಗಳನ್ನೂ ಇಲ್ಲಿ ಇರಿಸಲಾಗಿದೆ.

ಇಶ್ಟ ಪಡುವ ನೋಡುಗರಿಗೆ ಮಾತ್ರ ಶತಮಾನಗಳ ಹಿಂದಿನ ಮಂತ್ರ ಚಿಕಿತ್ಸೆಯ ಮೂಲಕ ನೋವು ನಿವಾರಣಾ ಪ್ರಾತ್ಯಕ್ಶಿತೆಯನ್ನು ಮಾಡಿ ತೋರಿಸುವ ಪರಿಪಾಟವಿದೆ ಇಲ್ಲಿ.

(ಮಾಹಿತಿ ಮತ್ತು ಚಿತ್ರ ಸೆಲೆ: www.tripadvisor.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: