ಪುಟ್ಬಾಲ್ ಕ್ಲಬ್ ಗಳ ನಡುವಿನ ಕಾದಾಟ – ‘ಎಲ್ ಕ್ಲಾಸಿಕೋ’

– ಚಂದ್ರಮೋಹನ ಕೋಲಾರ.

ಹಿಂದಿನ ಬರಹದಲ್ಲಿ ಪುಟ್ಬಾಲ್ ಲೀಗ್ ಗಳ ಕಿರು ಪರಿಚಯ ಕೊಡಲಾಗಿತ್ತು. ಈ ಬರಹದಲ್ಲಿ ಎಲ್ ಕ್ಲಾಸಿಕೋ ಬಗ್ಗೆ ಒಂದಶ್ಟು ಮಾಹಿತಿ ನೀಡುವೆನು.

ಎಲ್ ಕ್ಲಾಸಿಕೋ ಎಂದರೆ, ಅತ್ಯುತ್ತಮ. ಜಗತ್ತಿನ ಯಾವುದೇ ಪಂದ್ಯಕ್ಕಿಂತಲೂ ಇದು ಉತ್ತಮ ಎಂದು. ಎಲ್ ಕ್ಲಾಸಿಕೋ ಎಂದು ಕರೆಸಿಕೊಳ್ಳುವುದು ರಿಯಲ್ ಮ್ಯಾಡ್ರಿಡ್ ಮತ್ತು ಬಾರ‍್ಸಿಲೋನಾ ನಡುವಿನ ಪಂದ್ಯಗಳು ಮಾತ್ರ. ಆರಂಬದಲ್ಲಿ ಸ್ಪ್ಯಾನಿಶ್ ಲಾ ಲೀಗಾದಲ್ಲಿ ಎರಡು ತಂಡಗಳು ಎದುರಾದ್ರೆ, ಅವಕ್ಕೆ ಎಲ್ ಕ್ಲಾಸಿಕೋ ಎನ್ನುತ್ತಿದ್ದರು. ಈಗ ಎರಡೂ ತಂಡಗಳು ಎಲ್ಲೇ ಎದುರಾದರೂ ಅದನ್ನು ಎಲ್ ಕ್ಲಾಸಿಕೋ ಎಂದೇ ಕರೆಯುತ್ತಾರೆ.

ಎಲ್ ಕ್ಲಾಸಿಕೋಗೆ ಸುಮಾರು 9 ದಶಕಗಳ ಇತಿಹಾಸವಿದೆ. ಎರಡೂ ತಂಡಗಳು ಸ್ಪೇನ್ ನ ಎರಡು ಬ್ರುಹತ್ ನಗರಗಳನ್ನು ಪ್ರತಿನಿದಿಸುತ್ತವೆ. ಮ್ಯಾಡ್ರಿಡ್ ಸ್ಪೇನ್ ರಾಶ್ಟ್ರೀಯತೆಯನ್ನು ಪ್ರತಿಪಾದಿಸುತ್ತಿದ್ದರೆ, ಬಾರ‍್ಸಿಲೋನಾ ಪ್ರತ್ಯೇಕ ಕ್ಯಾಟಲಾನ್ ರಾಶ್ಟ್ರೀಯತೆಯನ್ನು ಪ್ರತಿಪಾದಿಸುತ್ತಿತ್ತು. ಇಲ್ಲಿಂದ ಎರಡೂ ಕ್ಲಬ್ ಗಳ ನಡುವಿನ ವೈಶಮ್ಯ ಶುರುವಾಗುತ್ತದೆ. 1930ರ ದಶಕದಲ್ಲಿ ಮ್ಯಾಡ್ರಿಡ್ ಮತ್ತು ಬಾರ‍್ಸಿಲೋನಾದಲ್ಲಿ ನಡೆದ ವಿಬಿನ್ನ ಚಳವಳಿಗಳಿಂದ, ಎರಡೂ ಕ್ಲಬ್ ಗಳ ಅಬಿಮಾನಿಗಳು ಒಬ್ಬರಿಂದ ಒಬ್ಬರು ಅಂತರ ಕಾಯ್ದುಕೊಳ್ಳುತ್ತಾ ಬಂದರು. ಇದು ಅದ್ಯಾವ ಮಟ್ಟ ತಲುಪಿತು ಎಂದರೆ, ಒಂದೇ ದೇಶದೊಳಗಿದ್ದರೂ, ಎರಡು ನಗರಗಳ ಅಬಿಮಾನಿಗಳು ಒಂದೆಡೆ ಸೇರಿದರೆ ಅಲ್ಲಿ ಗರ‍್ಶಣೆ ಕಾಯಂ ಅನ್ನೋ ಪರಿಸ್ತಿತಿ ಸ್ರುಶ್ಟಿಸಿತು. ಆಗ ಎರಡು ತಂಡಗಳ ನಡುವೆ ದ್ವೇಶ ಹುಟ್ಟು ಹಾಕಿದವರು, ಅಂದಿನ ಸ್ಪೇನ್ ಸರ‍್ವಾದಿಕಾರಿ ಪ್ರಾಂಕೋಯಿಸ್ ಪ್ರಾಂಕೋ.

ಬಾರ‍್ಸಿಲೋನಾದಲ್ಲಿದ್ದ ಎಡಪಂತೀಯರು, ಸ್ವತಂತ್ರಕ್ಕಾಗಿ ಆಗ್ರಹಿಸುತ್ತಿದ್ದವರನ್ನ ಹತ್ತಿಕ್ಕಲು, ರಿಯಲ್ ಮ್ಯಾಡ್ರಿಡ್ ಗೆ ತಮ್ಮ ಸಂಪೂರ‍್ಣ ಬೆಂಬಲ ಸೂಚಿಸಿದರು. ಹೀಗೆ ಎರಡೂ ಕ್ಲಬ್ ಗಳ ನಡುವೆ ದ್ವೇಶ ಹುಟ್ಟುಹಾಕಿದರು. 1943ರ ಕೋಪಾ ಡೆಲ್ ಜನರಿಲಿಸಾಮೋ ಸೆಮಿಪೈನಲ್ ಪಂದ್ಯಗಳ ಬಳಿಕ ಇದು ಮತ್ತಶ್ಟು ವಿಶಮ ಪರಿಸ್ತಿತಿ ತಲುಪಿತು. ಸೆಮಿಪೈನಲ್ ಎಂದರೆ, ಕ್ರಿಕೆಟ್ ಅತವಾ ಪುಟ್ಬಾಲ್ ವಿಶ್ವಕಪ್ ರೀತಿ ಕೇವಲ ಒಂದು ಪಂದ್ಯಕ್ಕೆ ಸೀಮಿತವಲ್ಲ. ಯೂಪಾ ಚಾಂಪಿಯನ್ಸ್ ಲೀಗ್ ಅತವಾ ಬೇರಾವುದೇ ಯುರೋಪಿಯನ್ ಲೀಗ್ ಪಂದ್ಯಗಳು ಎರಡು ಪಂದ್ಯಗಳನ್ನು ಒಳಗೊಂಡಿರುತ್ತವೆ. ಅವನ್ನು ಪಸ್ಟ್ ಲೆಗ್, ಸೆಕೆಂಡ್ ಲೆಗ್ ಎಂದು ಕರೆಯುತ್ತಾರೆ. ಒಂದು ಹೋಮ್ ಲೆಗ್ ಆದರೆ, ಮತ್ತೊಂದು ಅವೇ ಲೆಗ್. ಅಂದರೆ, ಎರಡೂ ತಂಡಗಳ ತವರು ನೆಲದಲ್ಲಿ ನಡೆಯುವ ಪಂದ್ಯಗಳು.

1943ರ ಕೋಪಾ ಡೆಲ್ ಜನರಿಲಿಸಾಮೋ ಅತವಾ ಈಗಿನ ಕೋಪಾ ಡೆಲ್ ರೇನಲ್ಲಿ ರಿಯಲ್ ಮ್ಯಾಡ್ರಿಡ್ ಮತ್ತು ಬಾರ‍್ಸಿಲೋನಾ ಎದುರಾಗಿದ್ದವು. ಮೊದಲ ಪಂದ್ಯ ಬಾರ‍್ಸಿಲೋನಾದಲ್ಲಿ ನಡೆಯಿತು. ಆ ಪಂದ್ಯದಲ್ಲಿ ಬಾರ‍್ಸಿಲೋನಾ 3-0 ಅಂತರದ ಗೆಲುವು ಸಾದಿಸಿತು. ಇಲ್ಲಿಂದಲೇ ಎರಡು ತಂಡಗಳ ನಡುವಿನ ಅಸಲಿ ಕದನ ಶುರವಾಯಿತು. ಬಾರ‍್ಸಿಲೋನಾ ಗಳಿಸಿದ ಮೂರು ಗೋಲುಗಳು, ರೆಪ್ರಿಯ ತಪ್ಪು ನಿರ‍್ದಾರದ ಪಲವಾಗಿತ್ತು. ಇದು ಮ್ಯಾಡ್ರಿಡ್ ಅಬಿಮಾನಿಗಳು ಕೆರಳುವಂತೆ ಮಾಡಿತ್ತು.

ಮೊದಲ ಲೆಗ್ ನಲ್ಲಿ ಬಾರ‍್ಸಿಲೋನಾ ಗೆದ್ದಾಕ್ಶಣ ಮ್ಯಾಡ್ರಿಡ್ ನಲ್ಲಿ ಬೇರೆಯದೇ ರೀತಿಯ ಪ್ರಚಾರ ನಡೆಯಿತು. ‘ಬಾರ‍್ಸಿಲೋನಾದಲ್ಲಿ ರಿಯಲ್ ಮ್ಯಾಡ್ರಿಡ್ ಗೆ ಅನ್ಯಾಯವಾಗಿದೆ. ಯಾವುದೇ ಕಾರಣಕ್ಕೂ ಬಾರ‍್ಸಿಲೋನಾ ಮ್ಯಾಡ್ರಿಡ್ ನಲ್ಲಿ ಗೆಲ್ಲಲೇಬಾರದು’ ಎಂದು ಮ್ಯಾಡ್ರಿಡ್ ಆಡಳಿತ ಮಂಡಳಿ ಕೂಡ ಯೋಜನೆ ರೂಪಿಸಿತು. ಬಾರ‍್ಸಿಲೋನಾ ಅಬಿಮಾನಿಗಳು ಮ್ಯಾಡ್ರಿಡ್ ಗೆ ಪ್ರಯಾಣಿಸದಂತೆ ನಿಶೇದ ಹೇರಲಾಯಿತು. ಬಾರ‍್ಸಿಲೋನಾ ಆಟಗಾರರು ಮ್ಯಾಡ್ರಿಡ್ ನ ತಮ್ಮ ಹೋಟೆಲ್ ಗೆ ಬಸ್ ನಲ್ಲಿ ಬರುತ್ತಿದ್ದಾಗ ಆ ಬಸ್ ಮೇಲೆ ಕಲ್ಲು ತೂರಾಟ ನಡೆಯಿತು. ಮ್ಯಾಡ್ರಿಡ್ ನ ಸ್ಯಾಂಟಿಯಾಗೋ ಬರ‍್ನೆಬ್ಯೂ ಕ್ರೀಡಾಂಗಣದಲ್ಲಿ ಪಂದ್ಯದ ಆರಂಬಕ್ಕೂ ಮುನ್ನ, ಬಾರ‍್ಸಿಲೋನಾ ಹೋಂ ಪೀಲ್ದ್ ನಲ್ಲಿ ನಾಣ್ಯಗಳ ಸುರಿಮಳೆಯಾಗಿತ್ತು. ಬಾರ‍್ಸಿಲೋನಾ ಗೋಲ್ ಕೀಪರ್, ಗೋಲು ಆವರಣ ಪ್ರವೇಶಿಸದಂತೆ ಮ್ಯಾಡ್ರಿಡ್ ಅಬಿಮಾನಿಗಳು ತಡೆಗಟ್ಟಿದ್ದರು. ಒಂದು ವೇಳೆ ಗೋಲು ಆವರಣಕ್ಕೆ ಬಂದರೆ, ಕೀಪರ್ ಮೇಲೆ ಕಲ್ಲು ತೂರಾಟ ನಡೆಸುವ ಬಯ ಸ್ರುಶ್ಟಿಸಿದ್ದರು. ಅಬಿಮಾನಿಗಳ ಜೊತೆಗೆ ಮ್ಯಾಡ್ರಿಡ್ ಪೊಲೀಸರೂ ಬಾರ‍್ಸಿಲೋನಾ ಆಟಗಾರರಲ್ಲಿ ಬಯ ಹುಟ್ಟಿಸಿದ್ದರು. ಇದೆಲ್ಲದರ ಪರಿಣಾಮ ರಿಯಲ್ ಮ್ಯಾಡ್ರಿಡ್ 11-1 ಗೋಲು ಅಂತರದಿಂದ, ಬಾರ‍್ಸಿಲೋನಾ ವಿರುದ್ದ ಗೆದ್ದಿತು. ಇಲ್ಲಿಂದ ಈ ಎರಡೂ ತಂಡಗಳ ನಡುವೆ ವೈಶಮ್ಯ ಶುರುವಾಯಿತು. ಅದು ಇಂದಿಗೂ ಮುಂದುವರಿದಿದೆ.

1950ರ ದಶಕದಲ್ಲಿ ಎರಡು ತಂಡಗಳ ನಡುವಿನ ವೈಶಮ್ಯ ತಾರಕಕ್ಕೇರಿತ್ತು. ಅದರಲ್ಲಿಯೂ ಆಲ್ಪ್ರೆಡೋ ಡಿ ಸ್ಟೆಪಾನೋ ವರ‍್ಗಾವಣೆ ವಿಚಾರದಲ್ಲಿ ಆದ ಗೊಂದಲ, ಬಾರ‍್ಸಿಲೋನಾ ಆಡಳಿತ ಮಂಡಳಿಯ ಅದ್ಯಕ್ಶರೇ ರಾಜೀನಾಮೆ ನೀಡುವಂತೆ ಮಾಡಿತು. ಕೊನೆಗೆ ಡಿ ಸ್ಟೆಪಾನೋ, ರಿಯಲ್ ಮ್ಯಾಡ್ರಿಡ್ ಕ್ಲಬ್ ಸೇರಿದರು. ಇದಾದ ಬಳಿಕ ಮತ್ತೊಮ್ಮೆ ಮ್ಯಾಡ್ರಿಡ್ ಅಬಿಮಾನಿಗಳು ಮತ್ತೊಮ್ಮೆ ಬಾರ‍್ಸಿಲೋನಾ ಆಟಗಾರರ ವಿರುದ್ದ ಸಿಟ್ಟು ತೋರಿದ್ದು, 1968ರ ಕೋಪಾ ಡೆಲ್ ರೇ ಪೈನಲ್ ಪಂದ್ಯದಲ್ಲಿ. ಅಂದು ರೆಪ್ರಿ ಮಾಡಿದ ಎಡವಟ್ಟಿನಿಂದ, ಬಾರ‍್ಸಿಲೋನಾ 1-0 ಅಂತರದಿಂದ ಗೆದ್ದಿತು. ರೆಪ್ರಿ ಮಾಡಿದ್ದ ಎಡವಟ್ಟು ಕಂಡು ಸಿಟ್ಟಿಗೆದ್ದಿದ್ದ ಮ್ಯಾಡ್ರಿಡ್ ಅಬಿಮಾನಿಗಳು, ರೆಪ್ರಿ ಮತ್ತು ಬಾರ‍್ಸಿಲೋನಾ ಆಟಗಾರರ ಮೇಲೆ ಗಾಜಿನ ಬಾಟಲಿಗಳನ್ನ ತೂರಿದರು. ಕೊನೆಗೆ ಸ್ಪೇನ್ ನ ಸರ‍್ವಾದಿಕಾರಿ ಜನರಲ್ ಪ್ರಾಂಕೋ, ಗಾಜಿನ ಬಾಟಲಿಗಳಿಂದ ತುಂಬಿದ್ದ ಕ್ರೀಡಾಂಗಣದಲ್ಲಿಯೇ ಬಾರ‍್ಸಿಲೋನಾಗೆ ಪ್ರಶಸ್ತಿ ವಿತರಿಸಿದ.

ಆದರೆ ಇತ್ತೀಚಿನ ವರ‍್ಶಗಳಲ್ಲಿ ಈ ರೀತಿಯ ಗಟನೆಗಳು ಮರುಕಳಿಸಿಲ್ಲ. ಕಾಲ್ಚೆಂಡಾಟ ಆದುನಿಕತೆಗೆ ತೆರೆದುಕೊಳ್ಳುತ್ತಿದ್ದಂತೆ, ಎರಡೂ ಕ್ಲಬ್ ಗಳ ಅಬಿಮಾನಿಗಳ ನಡುವಿನ ವೈಶಮ್ಯ ಕಡಿಮೆಯಾಗಿದೆ. ಈಗ ಎಲ್ ಕ್ಲಾಸಿಕೋಗಿಂತಾ, ರಿಯಲ್ ಮ್ಯಾಡ್ರಿಡ್ ಪರ ಆಡುವ ಕ್ರಿಶ್ಚಿಯಾನೋ ರೊನಾಲ್ಡೋ ಮತ್ತು ಬಾರ‍್ಸಿಲೋನಾದ ಸ್ಟಾರ್ ಆಟಗಾರ ಲಯನೆಲ್ ಮೆಸ್ಸಿ ನಡುವಿನ ಕಾದಾಟ, ಗುದ್ದಾಟ ನೋಡೋಕೆ ಎರಡೂ ತಂಡಗಳ ಅಬಿಮಾನಿಗಳು ಕಾದು ಕುಳಿತಿರುತ್ತಾರೆ. ಇಬ್ಬರೂ ಆಟಗಾರರ ನಡುವಿನ ಪೈಪೋಟಿ ವಿಶ್ವ ಮಟ್ಟದಲ್ಲಿ ಪ್ರಚಾರ ಪಡೆದುಕೊಂಡಿದೆ. ಈ ಎರಡು ತಂಡಗಳ ನಡುವಿನ ಕಾಳಗ, ಇಬ್ಬರ ನಡುವಿನ ಕಾಳಗದ ಮಟ್ಟಕ್ಕೆ ಇಳಿದಿದೆ.

ಲಯನೆಲ್ ಮೆಸ್ಸಿ ಆರಂಬದಿಂದಲೂ ಬಾರ‍್ಸಿಲೋನಾ ಪರ ಆಡುತ್ತಿದ್ದರೆ, ಕ್ರಿಶ್ಚಿಯಾನೋ ರೊನಾಲ್ಡೋ ಮೊದಲು ಪೋರ‍್ಚುಗಲ್ ನ ಸ್ಪೋರ‍್ಟಿಂಗ್ ಲಿಸ್ಬನ್, ನಂತರ ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ಯುನೈಟೆಡ್ ಪರ ಆಡಿದ್ದರು. ಮ್ಯಾಂಚೆಸ್ಟರ್ ಯುನೈಟೆಡ್ ನಲ್ಲಿ ರೊನಾಲ್ಡೋ ಆಡುತ್ತಿದ್ದ ಪರಿಯನ್ನ ನೋಡಿ, ರಿಯಲ್ ಮ್ಯಾಡ್ರಿಡ್ ಆ ಕಾಲಕ್ಕೆ ವಿಶ್ವ ದಾಕಲೆಯ ಮೊತ್ತ ನೀಡಿ ಕರೀದಿ ಮಾಡಿತ್ತು. ರೊನಾಲ್ಡೋ ಮ್ಯಾಂಚೆಸ್ಟರ್ ಯುನೈಟೆಡ್ ಪರ ಆಡುತ್ತಿದ್ದ ಕಾಲದಿಂದಲೂ ರೊನಾಲ್ಡೋ ಮತ್ತು ಮೆಸ್ಸಿ ಆಟವನ್ನ ಹೋಲಿಸಿ, ಯಾರು ಗ್ರೇಟ್ ಅನ್ನೋ ವಿಚಾರ ಸದಾ ಸದ್ದು ಮಾಡುತ್ತಲೇ ಇದೆ. ರೊನಾಲ್ಡೋ ರಿಯಲ್ ಮ್ಯಾಡ್ರಿಡ್ ಸೇರಿದ ಬಳಿಕ, ಈ ವಿಚಾರ ಇನ್ನೂ ಹೆಚ್ಚು ಸದ್ದು ಮಾಡಲು ಶುರುಮಾಡಿತು ಮತ್ತು ಇನ್ನೂ ಸದ್ದು ಮಾಡುತ್ತಿದೆ!

ಇದೇನೇ ಇದ್ದರೂ, ಎಲ್ ಕ್ಲಾಸಿಕೋ ಬರುತ್ತಿದೆ ಎಂದರೆ ತಿಂಗಳ ಮೊದಲೇ ತಯಾರಿ ಆರಂಬಿಸುತ್ತಾರೆ. ಎಲ್ ಕ್ಲಾಸಿಕೋ ಅದ್ಯಾವ ಪರಿ ಪುಟ್ಬಾಲ್ ಜಗತ್ತನ್ನು ಆವರಿಸಿದೆ ಎಂದರೆ, ಎಲ್ ಕ್ಲಾಸಿಕೋ ನಡೆಯುವ ತಿಂಗಳಿಗೂ ಮೊದಲಿನಿಂದಲೇ ಎಲ್ಲ ಕ್ರೀಡಾ ಚಾನೆಲ್ ಗಳು ಅದು ನಡೆಯುವ ದಿನದ ಕುರಿತು ಮೊದಲೇ ಪ್ರಚಾರ ಆರಂಬಿಸುತ್ತವೆ. ಪುಟ್ಬಾಲ್ ಕುರಿತು ಅಶ್ಟೇನು ಹೆಚ್ಚು ಗೊತ್ತಿರದ ಬಾರತದಲ್ಲೂ ಎಲ್ ಕ್ಲಾಸಿಕೋಗೆ ಪ್ರಚಾರ ಸಿಗುತ್ತಿದೆ. ಈ ಮೂಲಕ ಕೇವಲ ಎಲ್ ಕ್ಲಾಸಿಕೋ ಮಾತ್ರವಲ್ಲದೇ, ಪುಟ್ಬಾಲಿಗೂ ಪ್ರಚಾರ ಸಿಗುತ್ತಿದೆ.

( ಚಿತ್ರ ಸೆಲೆ: thesportsbank.net,  pub.lv )

( ಮಾಹಿತಿ ಸೆಲೆ : wikipedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: