‘ಕಲ್ಮಿಯಾ ಲ್ಯಾಟಿಪೋಲಿಯಾ’ – ವಿಶವೇ ಇದರ ಹೆಗ್ಗುರುತು!

– ಕೆ.ವಿ.ಶಶಿದರ.

ಕೋಮಲತೆಯ ಮತ್ತೊಂದು ಹೆಸರೇ ಹೂವು. ಇದರೊಂದಿಗೆ ಮತ್ತೆ ಹಲವು ಗುಣಲಕ್ಶಣಗಳನ್ನು ಹೂವು ಮೈಗೂಡಿಸಿಕೊಂಡಿದೆ. ಅವುಗಳಲ್ಲಿ ಪ್ರಮುಕವಾದದು ಮಕರಂದ ಹಾಗೂ ಸುವಾಸನೆ. ಬಹತೇಕ ಎಲ್ಲಾ ಹೂವುಗಳಲ್ಲಿಯೂ ಇವುಗಳಿರುತ್ತದೆ. ಇವುಗಳೊಂದಿಗೆ ಮಾರಕವಾದ ಕೆಲವು ವಿಶೇಶ ಗುಣಗಳನ್ನು ಹೊಂದಿರುವ ಬಹಳಶ್ಟು ಹೂವುಗಳೂ ಸಹ ಪ್ರಕ್ರುತಿಯಲ್ಲಿವೆ. ಅಂತಹ ಮಾರಕ ಹೂವುಗಳಲ್ಲಿ ‘ಕಲ್ಮಿಯಾ ಲ್ಯಾಟಿಪೋಲಿಯಾ’ ಒಂದು.

ಕಲ್ಮಿಯಾ ಲ್ಯಾಟಿಪೋಲಿಯಾ ಹೂವನ್ನು ಸಾಮಾನ್ಯವಾಗಿ ಗುರುತಿಸುವುದು ‘ಮೌಂಟನ್ ಲಾರೆಲ್’, ಕ್ಯಾಲಿಕೊ-ಬುಶ್(ನಸುಗೆಂಪು ಅತವಾ ಬಿಳಿ ಬಣ್ಣದ ಹೂವಿನ ದಳಗಳ ಮೇಲೆ ನೇರಳೆ ಬಣ್ಣದ ಚುಕ್ಕೆಗಳಿರುವುದರಿಂದ) ಅತವಾ ಸ್ಪೂನ್‍ಪುಡ್ (ಇದರ ಕಾಂಡದಿಂದ ಚಮಚಗಳನ್ನು ಮಾಡುತ್ತಿದ್ದ ಕಾರಣ) ಎಂದು.

ಇದು ಎರಿಕೇಶಿಯೆ ಸಸ್ಯಗುಂಪಿಗೆ ಸೇರಿದ್ದು, ಸದಾಕಾಲ ಹಸಿರು ತುಂಬಿರುವ ಎಲೆಗಳಿರುವ ಪೊದೆಯಂತಹ ಕುರುಚಲು ಗಿಡ. ಇದು ಪೂರ‍್ವ ಅಮೇರಿಕೆಯಲ್ಲಿ ಹೆಚ್ಚು ಕಾಣ ಸಿಗುತ್ತದೆ. 1624ರಶ್ಟು ಹಿಂದಯೇ ಇದರ ಇರುವನ್ನು ಅಮೇರಿಕೆಯಲ್ಲಿ ದಾಕಲಿಸಲಾಗಿದೆ. ಕಲ್ಮಿಯಾ ಲ್ಯಾಟಿಪೋಲಿಯಾ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಈ ಗಿಡದ ಮಾದರಿಗಳನ್ನು ಪರೀಕ್ಶೆಗಾಗಿ ಲೆನ್ನಿಯಸ್‍ಗೆ ಕಳುಹಿಸಿದ ಪೆಹರ್ ಕಾಮ್‍ನ ಹೆಸರನ್ನೇ ಈ ಸಸ್ಯಕ್ಕ್ಕೂ ಇಡಲಾಗಿತ್ತು. ಪೆನ್ಸಿಲ್ವೇನಿಯಾ ಮತ್ತು ಕನೆಕ್ಟಿಕಟ್ ಕಲ್ಮಿಯಾ ಲ್ಯಾಟಿಪೋಲಿಯಾ ಹೂವನ್ನು ತಮ್ಮ ರಾಜ್ಯದ ಹೂವಾನ್ನಾಗಿ ಗುರುತಿಸಿ ಮನ್ನಣೆ ನೀಡಿದೆ.

ನೋಡಲು ಈ ಹೂವು ತುಂಬಾ ಚೆಂದ!

ಈ ಹೂವು ನೋಡಲು ತುಂಬಾ ಆಕರ‍್ಶಣೀಯ. ಇದರ ಬಣ್ಣ ಅಪ್ಪಟ ಬಿಳಿ. ಕೆಲವೊಂದು ವೆರೈಟಿಯ ಹೂವುಗಳು ನಸುಗೆಂಪು ಬಣ್ಣದಿಂದ ಕಡುಗೆಂಪು ಬಣ್ಣವನ್ನು ಹೊಂದಿರುವುದೂ ಇದೆ. ಇದರ ಹೂವಿನ ದಳದ ಮೇಲೆ ನೇರಳೆ ಬಣ್ಣ ಮಚ್ಚೆಯಿದೆ. ಬಿಳಿಯ ಬಣ್ಣದ ಹಿನ್ನಲೆಯಲ್ಲಿ ಈ ನೇರಳೆ ಬಣ್ಣದ ಹೊಳಪು ನಯನ ಮನೋಹರವಾಗಿ ಕಂಡುಬರುತ್ತದೆ. ಈ ಪುಶ್ಪಕ್ಕೆ ಅತಿ ಹೆಚ್ಚು ಮೆರುಗನ್ನು ಹಾಗೂ ಆಕರ‍್ಶಣೆಯನ್ನು ನೀಡಿರುವುದೇ ಈ ನೇರಳೆ ಬಣ್ಣ. ಇದೇ ಕಲ್ಮಿಯಾ ಲ್ಯಾಟಿಪೋಲಿಯಾದ ಹೆಗ್ಗುರುತು. ಕಲ್ಮಿಯಾ ಲ್ಯಾಟಿಪೋಲಿಯಾ ಪುಶ್ಪವು ಅರಳುವ ಕಾಲ ಮೇ-ಜೂನ್ ತಿಂಗಳು. ಸೂರ‍್ಯನ ಬೆಳಕಿರುವ ಸ್ತಳಗಳಲ್ಲಿ ಇದನ್ನು ನೋಡಲು ಬಲು ಚಂದ. ಈ ಗಿಡದ ಕಾಂಡ ತೂಕವಾಗಿ ಹಾಗೂ ಬಲವಾಗಿದ್ದರೂ ಸಹ ಸುಲಬವಾಗಿ ಒಡೆಯುವ ಲಕ್ಶಣ ಹೊಂದಿದೆ. ಇದನ್ನು ಹಲವು ಸಲಕರಣೆಗಳಿಗೆ ಹಿಡಿಯನ್ನಾಗಿ, ತಂಬಾಕು ಕೊಳವೆಗಳನ್ನಾಗಿ ಬಳಸುತ್ತಾರೆ. 19ನೇ ಶತಮಾನದ ಮೊದಲಲ್ಲಿ ಮರದ ಗಡಿಯಾರಗಳ ತಯಾರಿಕೆಯಲ್ಲಿ ಈ ಮರದ ಕಾಂಡಗಳನ್ನು ಉಪಯೋಗ ಮಾಡಲಾಗುತ್ತಿತ್ತು.

ಇಶ್ಟೆಲ್ಲಾ ಉಪಯುಕ್ತ ಗುಣ ಹೊಂದಿರುವ ಈ ಹೂವನ್ನು ವಿಶಪೂರಿತವೆಂದೇಕೆ ಪರಿಗಣಿಸಲಾಗಿದೆ?

ಅತಿ ಸುಂದರವಾದ ನವಿರಾದ ಹೊರಸೊಬಗನ್ನು ಹೊಂದಿರುವ ಈ ಹೂವಿನ ಅಡಿಯಲ್ಲಿ ಕೊಲೆಗಾರನ ಹ್ರುದಯ ಮಿಡಿತ ಅಡಗಿದೆ. ಕಾರಣ ಹೂವಿನಲ್ಲಿರುವ 2 ಟಾಕ್ಸಿನ್‍ಗಳು. ಆಂಡ್ರೊಮೆಡಾಟಾಕ್ಸಿನ್ (Andromedotoxin) ಹಾಗೂ ಆರ್‍ಬ್ಯುಟಿನ್ (Arbutin). ಇವುಗಳಲ್ಲಿ ಹೆಚ್ಚು ಆತಂಕಕಾರಿಯಾಗಿರುವುದು ಆಂಡ್ರೊಮೆಡಾಟಾಕ್ಸಿನ್. ಆಂಡ್ರೊಮೆಡಾಟಾಕ್ಸಿನ್‍ನ ಹೆಚ್ಚು ಸೇವನೆ ಹ್ರುದಯಾಗಾತಕ್ಕೆ ಕಾರಣವಾಗುತ್ತದೆ. ಆಂಡ್ರೊಮೆಡಾಟಾಕ್ಸಿನ್‍ನ ಸೇವನೆ ಪ್ರಮಾಣ ಕಡಿಮೆ ಇದ್ದಲ್ಲಿ ವಾಂತಿ ಅತಿಯಾಗಿ, ಒಂದು ಗಂಟೆಯ ಬಳಿಕ ಉಸಿರಾಟದಲ್ಲಿ ತೊಂದರೆ ಕಾಣಿಸುತ್ತದೆ. ನಿದಾನವಾಗಿ, ದೇಹದ ಮಾಂಸಕಂಡಗಳ ಮೇಲಿನ ಹಿಡಿತ ಕಡಿಮೆಯಾಗುತ್ತದೆ. ಇದರಿಂದಾಗಿ ಮನುಶ್ಯ ಕೋಮಾ ಸ್ತಿತಿಗೆ ಜಾರುತ್ತಾನೆ. ಮುಂದೆ ಸಾವು ಕಚಿತ!

ಇಲ್ಲೊಂದು ಅಚ್ಚರಿಯ ಆದರೆ ಹೆದರಿಕೆ ಹುಟ್ಟಿಸುವ ವಿಶಯವೊಂದಿದೆ. ಕಲ್ಮಿಯಾ ಲ್ಯಾಟಿಪೋಲಿಯಾ ಹೂವನ್ನು ತಿಂದರೆ ಹ್ರುದಯಾಗಾತವಾಗುತ್ತದೆ ಎನ್ನುವುದು ಎಶ್ಟು ನಿಜವೋ, ಈ ಹೂವಿನ ಮಕರಂದ ಹೊಂದಿರುವ ಜೇನನ್ನು ಸೇವಿಸಿದರೂ ಸಹ ಹೂವಿನಶ್ಟೇ ಪ್ರಕರವಾದ ವಿಶವನ್ನು ಸೇವಿಸಿದಂತಾಗುತ್ತದೆ! ಗ್ರೀಕರು ಇದನ್ನು ‘ಮ್ಯಾಡ್ ಹನಿ’ ಎಂದು ಕರೆದಿದ್ದರು. ಕ್ಸೆನೋಪೋನ್‍ನ ಸೋಲಿಸಲು ಗ್ರೀಕರು ಈ ಜೇನನ್ನೇ ಅಸ್ತ್ರವನ್ನಾಗಿ ಕ್ರಿಸ್ತ ಪೂರ‍್ವ 400ರಲ್ಲಿ ಬಳಸಿರುವುದಾಗಿ ಇತಿಹಾಸ ಹೇಳುತ್ತದೆ. ಹಸಿರನ್ನೇ ತಿಂದು ಜೀವಿಸುವ ಸಸ್ಯಹಾರಿ ಪ್ರಾಣಿಗಳಿಗೂ ಕಲ್ಮಿಯಾ ಲ್ಯಾಟಿಪೋಲಿಯಾ ಗಿಡದ ಎಲೆ ಮಾರಣಾಂತಿಕ.

ವಿಶಕಾರಿಯಾದ ಈ ಗಿಡ ಉಪಯೋಗಕಾರಿಯೂ ಕೂಡ!

ವಿಶಪೂರಿತವಾದ ಈ ಗಿಡ ಸಾಕಶ್ಟು ಉಪಯೋಗಕಾರಿಯೂ ಹೌದು. ಅಮೇರಿಕೆಯಲ್ಲಿ ನೆಲೆಸಿರುವ ಬಾರತೀಯ ಸಂಜಾತರು ಇದರ ಔಶದೀಯ ಗುಣವನ್ನು ಕಂಡುಕೊಂಡಿದ್ದರು. ಗಿಡದ ಎಲೆಗಳನ್ನು ನೋವು ನಿವಾರಕವಾಗಿ ಹೆಚ್ಚು ಬಳಸುತ್ತಿದ್ದರು. ಎಲೆಗಳಿಂದ ತೆಗೆದ ದ್ರಾವಣವನ್ನು ನೋವಿರುವ ಜಾಗದಲ್ಲಿ ಹಚ್ಚಿದಲ್ಲಿ ನೋವು ಉಪಶಮನವಾಗುತ್ತದೆ ಎಂದು ಅವರು ತಿಳಿದಿದ್ದರು. ಸಂದಿವಾತಕ್ಕೆ ಹಾಗೂ ಸ್ನಾಯು ಸೆಳೆತದ ಉಪಶಮನಕ್ಕೆ ಇದು ರಾಮ ಬಾಣ.

ಈ ಗಿಡದ ಕಾಂಡ ಮರದ ಕೆತ್ತನೆಯ ಕೆಲಸಕ್ಕೆ ಹೇಳಿ ಮಾಡಿಸಿದ್ದಂತಹುದು. ಮರದ ಕಾಂಡದ ಮೇಲೆ ತರೆಹಾವರಿ ಕೆತ್ತನೆಯ ಕೆಲಸವನ್ನು ಮಾಡಬಹುದು. ಉರುವಲಾಗಿಯೂ ಇದನ್ನು ಬಳಸಬಹುದು, ಆದರೆ ಇದರಿಂದ ಹೊರಬರುವ ಹೊಗೆ ಅಪಾಯಕಾರಿ. ದೇಹ ಸೇರಿದರೆ ಮಾರಣಾಂತಿಕವಾಗುತ್ತದೆ.

ಇನ್ನೂ ಇಂತಹ ವಿಶಕಾರಕ ಸಸ್ಯ ಮತ್ತು ಹೂವುಗಳು ಪ್ರಕ್ರುತಿಯಲ್ಲಿ ಹೇರಳವಾಗಿವೆ. ಈ ಗುಣ ಅವುಗಳ ಸ್ವಯಂ ರಕ್ಶಣೆಗೆ ಪ್ರಕ್ರುತಿದತ್ತವಾದ ವರವಿರಬಹುದೆ?

(ಮಾಹಿತಿ ಮತ್ತು ಚಿತ್ರ ಸೆಲೆ: wikipedia, listverse )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: