ಮೈಬಣ್ಣ ಬದಲಿಸುವ ಊಸರವಳ್ಳಿಯ ಒಳಗುಟ್ಟು

– ವಿಜಯಮಹಾಂತೇಶ ಮುಜಗೊಂಡ.

ಹೊತ್ತಿಗೆ ತಕ್ಕಂತೆ ಗತ್ತು ಬದಲಿಸಿ ಮಾತನಾಡುವವರನ್ನು ಸಾಮಾನ್ಯವಾಗಿ ಊಸರವಳ್ಳಿ ಎಂದು ಕರೆಯುತ್ತೇವೆ. ಊಸರವಳ್ಳಿ ತನ್ನ ಮೈಬಣ್ಣವನ್ನು ಬದಲಿಸಬಲ್ಲುದು. ಹೀಗಾಗಿ ಮಾತು ಇಲ್ಲವೇ ನಡವಳಿಕೆಯನ್ನು ಬದಲಿಸುವವರನ್ನು ಊಸರವಳ್ಳಿ ಎನ್ನುತ್ತೇವೆ. ಗೋಸುಂಬೆ ಎಂದು ಕೂಡ ಕರೆಯಲಾಗುವ ಊಸರವಳ್ಳಿ ಹಲ್ಲಿಯ ಜಾತಿಗೆ ಸೇರಿದ ಪ್ರಾಣಿ. ಇವುಗಳ ಕುರಿತ ಕೆಲ ಅಚ್ಚರಿಯ ಸಂಗತಿಗಳು ಹೀಗಿವೆ:

  • ಊಸರವಳ್ಳಿಯ ನಾಲಿಗೆಯು ಅದರ ಮೈಯ ಉದ್ದಕ್ಕಿಂತಲೂ ಹೆಚ್ಚಿರುತ್ತದೆ!
  • ಊಸರವಳ್ಳಿ ತನ್ನ ಎರಡೂ ಕಣ್ಣುಗಳನ್ನು ಬೇರೆ ಬೇರೆ ದಿಕ್ಕಿನಲ್ಲಿ ಸ್ವತಂತ್ರವಾಗಿ ತಿರುಗಿಸಬಲ್ಲುದು!
  • ಗೋಸುಂಬೆಯ ಬೆರಳುಗಳು ಎರಡು ಮುಂದಿದ್ದರೆ, ಇನ್ನೆರಡು ಹಿಂದಕ್ಕೆ ಚಾಚಿಕೊಂಡಿರುತ್ತವೆ, ಹಕ್ಕಿಗಳಂತೆ.
  • ಎಲ್ಲ ಗೋಸುಂಬೆಗಳಿಗೂ ಬಣ್ಣ ಬದಲಿಸುವ ಅಳವು ಇಲ್ಲ, ಪೂರ‍್ತಿ ಬೆಳೆದ ಗಂಡುಗಳು ಮಾತ್ರ ಬಣ್ಣ ಬದಲಿಸುತ್ತವೆ.

ಗೋಸುಂಬೆಗಳು ತಮ್ಮ ಸುತ್ತಲಿನ ಬಣ್ಣಕ್ಕೆ ತಕ್ಕಂತೆ ಮೈಬಣ್ಣವನ್ನು ಹೊಂದಿಸಿಕೊಳ್ಳುತ್ತವೆ ಎನ್ನುವ ತಪ್ಪು ತಿಳುವಳಿಕೆ ಮಂದಿಯ ನಡುವೆ ಇದೆ. ಆದರೆ ದಿಟವಾದ ವಿಶಯ ಏನೆಂದರೆ, ಗೋಸುಂಬೆಗಳು ಯಾವಾಗಲೂ ಮೈಬಣ್ಣ ಬದಲಾಯಿಸುವುದಿಲ್ಲ. ಕೆರಳಿದಾಗ ಮಾತ್ರ ಇವು ಮೈಬಣ್ಣವನ್ನು ಬದಲಿಸುತ್ತವೆ. ಸಾಮಾನ್ಯವಾಗಿ ಹೆಣ್ಣು ಊಸರವಳ್ಳಿಗಳನ್ನು ಕಂಡಾಗ ಬೆಳೆದು ನಿಂತ ಗಂಡು ಊಸರವಳ್ಳಿಗಳು ಬಣ್ಣ ಬದಲಿಸುವುದು ಹೆಚ್ಚು ಎಂದು ಅರಕೆಯ ಮೂಲಕ ಕಂಡುಕೊಳ್ಳಲಾಗಿದೆ.

ಗೋಸುಂಬೆಗಳ ಮೈಬಣ್ಣದ ಕುರಿತು ಇಲ್ಲಿಯವರೆಗೂ ಇದ್ದ ತಿಳುವಳಿಕೆ ಏನು?

ಗೋಸುಂಬೆಗಳ ಮೈಯ ಹೊರತೊಗಲಿನಲ್ಲಿ ಕೆಂಪು ಮತ್ತು ಹಳದಿ ಬಣ್ಣದ ಹೊಗರನ್ನು(pigment) ಹೊಂದಿರುವ ಹಲವು ಕಿರುಕೋಣೆಗಳಿವೆ. ಎಲ್ಲ ಜೀವಿಗಳ ಹೊರತೊಗಲಿನ ಕಿರುಕೋಣೆಗಳ ನಡುವೆ ಕರ‍್ವಣ್ಣ(melanin) ಇದೆ. ಹಲವು ಉಸಿರಿಗಳು ಕರ‍್ವಣ್ಣವನ್ನು ಹರಡುವ ಮೂಲಕ ತಮ್ಮ ಮೈಬಣ್ಣವನ್ನು ಕಪ್ಪಾಗಿಸಿ ಮತ್ತು ಕರ‍್ವಣ್ಣವನ್ನು ಕುಗ್ಗಿಸಿಕೊಂಡು ಮೈಬಣ್ಣವನ್ನು ಬಿಳುಪಾಗಿಸಿ ಹೊಂದಿಸಿಕೊಳ್ಳಬಲ್ಲವು. ಹೀಗೆ ಆಕ್ಟೋಪಸ್‍ಗಳೂ ತಮ್ಮ ಮೈಬಣ್ಣವನ್ನು ಬದಲಿಸಬಲ್ಲವು. ಕೆಲವು ಜೀವಿಗಳು ತಮ್ಮ ಮೈತೊಗಲಿನ ಕಿರುಕೋಣೆಗಳಲ್ಲಿರುವ ಹೊಗರನ್ನು ಹಿಗ್ಗಿಸುವ ಮತ್ತು ಕುಗ್ಗಿಸುವ ಮೂಲಕ ಬಣ್ಣವನ್ನು ಬದಲಿಸುತ್ತವೆ.

ಗೋಸುಂಬೆಗಳ ಮೈಬಣ್ಣದ ಕುರಿತಾಗಿಯೂ ಇತ್ತೀಚಿನವರೆಗಿನ ತಿಳುವಳಿಕೆ ಇದೇ ಆಗಿತ್ತು. ಅಂದರೆ, ಗೋಸುಂಬೆಗಳು ತಮ್ಮ ಮೈಯ್ಯಲ್ಲಿರುವ ಕೆಂಪು ಮತ್ತು ಹಳದಿ ಬಣ್ಣದ ಹೊಗರನ್ನು ಹಿಗ್ಗಿಸುವ ಮತ್ತು ಕುಗ್ಗಿಸುವ ಮೂಲಕ ತಮ್ಮ ಮೈಬಣ್ಣ ಬದಲಿಸುತ್ತವೆ ಎಂದು. ಈ ತಿಳುವಳಿಕೆಯ ಪ್ರಕಾರ ನೋಡಿದರೆ ಗೋಸುಂಬೆಗಳು ಮೈಬಣ್ಣವನ್ನು ಹಳದಿ, ಕಿತ್ತಳೆ ಇಲ್ಲವೇ ಕೆಂಪು ಬಣ್ಣಕ್ಕಶ್ಟೇ ಬದಲಿಸಿಕೊಳ್ಳಬಹುದು. ಆದರೆ ಇತ್ತೀಚಿನ ಅರಕೆಗಳು ಹೇಳುವುದೇ ಬೇರೆ.

ಹೊಸ ಅರಕೆಗಳೇನು ಹೇಳುತ್ತವೆ?

ಜಿನೇವಾ ಕಲಿಕೆಮನೆಯ ಪುರುಳರಿಮೆಯ(physics) ಮತ್ತು ಉಸಿರರಿಮೆಯ(bilogy) ತಿಳಿವಿಗರು ಒಟ್ಟಾಗಿ ನಡೆಸಿದ ಅರಕೆಗಳಲ್ಲಿ ಇನ್ನಶ್ಟು ಹೊಸ ಸಂಗತಿಗಳು ತಿಳಿದುಬಂದಿವೆ. ಇತ್ತೀಚಿನ ಅರಕೆಗಳಂತೆ ಗೋಸುಂಬೆಗಳ ಬದಲಾಗುವ ಮೈಬಣ್ಣಕ್ಕೆ ಕಾರಣ ಅವುಗಳ ಹೊರಮೈಯಲ್ಲಿರುವ ವಿಶೇಶ ಬಗೆಯ ಕಿರುಕೋಣೆಗಳು(cells) ಮತ್ತು ಬೆಳಕಿನೊಂದಿಗೆ ಅವು ನಡೆದುಕೊಳ್ಳುವ ಬಗೆ ಎಂದು ತಿಳಿದುಬಂದಿದೆ. ಗೋಸುಂಬೆಗಳ ಮೈಬಣ್ಣ ಬದಲಾಗುವಂತೆ ಕಾಣಲು ಬೆಳಕನ್ನು ಹಿಂಪುಟಿಸುವ ಕಿರುಕೋಣೆಗಳು ಕಾರಣ.

ಗೋಸುಂಬೆಗಳ ಮೈತೊಗಲಿನಲ್ಲಿ ಇರುವ ವಿಶೇಶ ಬಗೆಯ ಬಣ್ಣಹೊರಗುಕಣಗಳು(chromatophore) ಸಣ್ಣ ಹರಳುಗಳನ್ನು ಹೊಂದಿದ್ದು ಇವು ಬೆಳಕನ್ನು ಹಿಂಪುಟಿಸಬಲ್ಲವು. ಈ ಹರಳುಗಳೇ ಗೋಸುಂಬೆಗಳ ಬದಲಾಗುವ ಮೈಬಣ್ಣಕ್ಕೆ ಕಾರಣ ಎನ್ನುವುದನ್ನು ಅರಕೆಗಾರರು ಕಂಡುಕೊಂಡಿದ್ದಾರೆ. ಮೈಸಡಿಲಿಸಿದ್ದಾಗ ಮತ್ತು ಕೆರಳಿದಾಗ ಗೋಸುಂಬೆಗಳ ಹೊರಮೈಯಲ್ಲಿ ಆಗುವ ಬದಲಾವಣೆಗಳಿಂದ ಮೈಬಣ್ಣ ಬದಲಾದಂತೆ ಕಾಣುತ್ತದೆ. ಬೆಳಕನ್ನು ಹಿಂಪುಟಿಸುವ ಬಣ್ಣಹೊರಗುಕಣಗಳ ನಡುವಿನ ಅಂತರ ಬದಲಾದಂತೆ ಹಿಂಪುಟಿಯುವ ಬಣ್ಣದ ಅಲೆಯುದ್ದ(wavelength) ಬದಲಾಗುವುದರಿಂದ ಬೇರೆ ಬೇರೆ ಬಣ್ಣಗಳು ಕಾಣುತ್ತವೆ.

“ಗೋಸುಂಬೆಗಳು ಮೈಸಡಿಲಿಸಿ ಕುಳಿತಾಗ ಬಣ್ಣಹೊರಗುಕಣಗಳ ನಡುವಿನ ಅಂತರ ಕಡಿಮೆ, ಇಂತಹ ಹೊತ್ತಿನಲ್ಲಿ ಕಡಿಮೆ ಅಲೆಯುದ್ದದ ಬೆಳಕು ಹಿಂಪುಟಿದು ಗೋಸುಂಬೆಯ ಮೈ ನೀಲಿ ಬಣ್ಣವನ್ನು ಹೊರಸೂಸುತ್ತದೆ” ಎನ್ನುತ್ತಾರೆ ಜಿನೀವಾ ಕಲಿಕೆಮನೆಯ ಪೀಳಿಯರಿಮೆ(genetics) ಮತ್ತು ಪೀಳಿಮಾರ‍್ಪರಿಮೆಯ(evolution) ಹಿರಿಯ ಕಲಿಸುಗ ಮೈಕಲ್ ಮಿಲಿಂಕೊವಿಚ್. ಕೆರಳುತ್ತಿದ್ದಂತೆ ಬಣ್ಣಹೊರಗುಕಣಗಳ ನಡುವಿನ ಅಂತರ ಹೆಚ್ಚುತ್ತದೆ, ಇದರಿಂದಾಗಿ ಹೆಚ್ಚಿನ ಅಲೆಯುದ್ದದ ಬೆಳಕು ಹಿಂಪುಟಿಯುವುದರಿಂದ ಹಳದಿ, ಕಿತ್ತಳೆ ಇಲ್ಲವೇ ಕೆಂಪು ಬಣ್ಣದಂತೆ ಕಾಣುತ್ತದೆ ಎನ್ನುತ್ತಾರೆ ಮಿಲಿಂಕೊವಿಚ್.

ಬಣ್ಣಹೊರಗುಕಣಗಳ ನಡುವಿನ ಅಂತರ ಹೆಚ್ಚಾದಂತೆ ಹಿಂಪುಟಿಯುವ ಬಣ್ಣ ನೀಲಿ, ಹಸಿರು, ಹಳದಿ, ಕಿತ್ತಳೆ ಮತ್ತು ಕೆಂಪಾಗಿ ಬದಲಾಗುವುದು

ಗೋಸುಂಬೆಗಳ ಮೈಯ ಹೊರತೊಗಲು ಹಿಗ್ಗಿದಾಗ ಬಣ್ಣಹೊರಗುಕಣಗಳ ನಡುವಿನ ಅಂತರ ಹೆಚ್ಚಿದಂತೆ, ಹೆಚ್ಚು ಅಲೆಯುದ್ದದ ಬೆಳಕು ಹಿಂಪುಟಿಯುತ್ತದೆ. ಹೀಗಾಗಿ ಕ್ರಮವಾಗಿ ನೀಲಿ, ಹಸಿರು, ಹಳದಿ, ಕಿತ್ತಳೆ ಮತ್ತು ಕೆಂಪು ಬಣ್ಣ ಹಿಂಪುಟಿಯುತ್ತದೆ. ಗೋಸುಂಬೆಗಳು ಕೆರಳಿದಾಗ ಮೆಲ್ಲಗೆ ಕೆಂಪು ಬಣ್ಣಕ್ಕೆ ತಿರುಗುವುದಶ್ಟೇ ಅಲ್ಲ, ಅವುಗಳ ಮೈಬಣ್ಣದ ಹೊಳಪು ಹೆಚ್ಚುತ್ತದೆ ಎನ್ನುವುದನ್ನೂ ಅರಕೆಹಾಳೆಯಲ್ಲಿ ಬರೆದಿದ್ದಾರೆ.

ಗೋಸುಂಬೆಗಳ ಈ ನಡವಳಿಕೆಯ ಹಿನ್ನೆಲೆಯನ್ನು ತಿಳಿಯಲು ಅವುಗಳನ್ನು ಹಲವು ಬಗೆಯ ಅರಕೆಗೆ ಒಳಪಡಿಸಲಾಯಿತು. ಹೆಚ್ಚು ಚುಕ್ಕಿದಟ್ಟಣೆಯುಳ್ಳ(resolution) ಕ್ಯಾಮರಾ ಬಳಸಿ ಓಡುತಿಟ್ಟಗಳನ್ನು(video) ಹಿಡಿದು ಗೋಸುಂಬೆಗಳ ಮೈಬಣ್ಣದಲ್ಲಾಗುವ ಬದಲಾವಣೆಗಳನ್ನು ಗಮನಿಸಲಾಯಿತು. ಇದರಿಂದಾಗಿ ಬದಲಾಗುವ ಬೆಳಕಿನ ಹಿಂಪುಟಿತದಿಂದ ಬಣ್ಣಗಳು ಬದಲಾದಂತೆ ಕಂಡುಬಂದಿತು ಎನ್ನುತ್ತಾರೆ ಮಿಲಿಂಕೊವಿಚ್. ಗೋಸುಂಬೆಗಳ ಹೊರತೊಗಲಿನ ಮೇಲೆ ಒತ್ತಡ ಹೇರಿ ಹೊರತೊಗಲು ಹಿಗ್ಗುವಂತೆ ಮತ್ತು ಕುಗ್ಗುವಂತೆ ಮಾಡಿ ಬಣ್ಣಹೊರಗುಕಣಗಳ ನಡುವಿನ ಅಂತರ ಬದಲಿಸಿ ನೋಡಿದಾಗಲೂ ಇದೇ ಬಗೆಯ ನಡವಳಿಕೆ ಕಂಡುಬಂದಿದೆ.

ಹಾಗಾದರೆ ಗೋಸುಂಬೆಗಳ ನಿಜವಾದ ಮೈಬಣ್ಣ ಯಾವುದು?

ಗೋಸುಂಬೆಗಳು ಮೈಸಡಿಲಿಸಿ ಕುಳಿತಿದ್ದಾಗ ಅವುಗಳ ಮೈಬಣ್ಣ ಎಲೆಗಳ ಹಸಿರು ಬಣ್ಣಕ್ಕೆ ಹೊಂದಿಕೊಳ್ಳುತ್ತದೆ ಎನ್ನುವ ನಂಬಿಕೆಯಿದೆ. ಗೋಸುಂಬೆಗಳು ಮೈಸಡಿಲಿಸಿ ಕುಳಿತಾಗ ಅವುಗಳ ಮೈತೊಗಲಿನಲ್ಲಿರುವ ಬೆಳಕನ್ನು ಹಿಂಪುಟಿಸಬಲ್ಲ ಹರಳುಗಳು ನೀಲಿ ಬಣ್ಣದ ಬೆಳಕನ್ನು ಹಿಂಪುಟಿಸುತ್ತವೆ. ಅದು ಹಳದಿ ಬಣ್ಣದ ಹೊಗರಿನೊಂದಿಗೆ ಸೇರಿದಾಗ ನೀಲಿಬಣ್ಣದ ಬೆಳಕು ಹಸಿರಾಗಿ ಕಾಣುತ್ತದೆ. ಹೀಗಾಗಿ ಸಹಜವಾಗಿ ಮೈಸಡಿಲಿಸಿ ಕುಳಿತ ಗೋಸುಂಬೆಯ ಮೈಬಣ್ಣ ಹಸಿರಾಗಿ ಕಾಣುತ್ತದೆ.

ಅಚ್ಚರಿಯೆಂದರೆ ಬಣ್ಣ ಬದಲಿಸುವ ಗುಣ ಬೆಳೆದುನಿಂತ ಗಂಡು ಗೋಸುಂಬೆಗಳಲ್ಲಿ ಮಾತ್ರ ಕಂಡುಬಂದಿದೆ. ಬೇರೊಂದು ಗಂಡನ್ನು ಕಂಡು ಸಿಟ್ಟಿನಲ್ಲಿ ಬೆನ್ನಟ್ಟಿದಾಗ ಇಲ್ಲವೇ ಹೆಣ್ಣನ್ನು ಸೆಳೆಯಲು ಕೆರಳಿದಾಗ ಮಾತ್ರ ಅವುಗಳ ಮೈಬಣ್ಣ ಬದಲಾಗುತ್ತದೆ ಎನ್ನುವುದನ್ನು ಕೂಡ ಅರಕೆಗಾರರು ಹೇಳುತ್ತಾರೆ. ಹೆಣ್ಣು ಮತ್ತು ಕಿರಿಯ ಗೋಸುಂಬೆಗಳ ಮೈಬಣ್ಣ ಮಂಕಾಗಿದ್ದು, ಇವುಗಳ ಮೈಯಲ್ಲಿ ಬಣ್ಣಹೊರಗುಕಣಗಳ ಎಣಿಕೆ ತುಂಬಾ ಕಡಿಮೆ ಇದೆ.

(ಮಾಹಿತಿ ಮತ್ತು ಚಿತ್ರ ಸೆಲೆ: livescience.comyoutube.comnature.compixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: