‘ನೊಣ’ವೆಂಬ ಕೀಟದ ಮೇಲೊಂದು ಕಿರುನೋಟ

– ನಾಗರಾಜ್ ಬದ್ರಾ.

ಸಂಪತ್ ತುಂಬಾ ಚೂಟಿಯಾದ ಹುಡುಗ. 10 ನೇ ತರಗತಿಯಲ್ಲಿ ಓದುತ್ತಿರುವ ಇವನಿಗೆ ತನ್ನ ಸುತ್ತಮುತ್ತಲಿನ ವಿಶಯಗಳಲ್ಲಿ ಕುತೂಹಲ ಹೆಚ್ಚು. ಅವನ ಕುತೂಹಲ ಎಶ್ಟರಮಟ್ಟಿಗೆ ಇತ್ತೆಂದರೆ ಒಂದು ದಿನ ಟಿ.ವಿಯಲ್ಲಿ ಚಿತ್ರಗಳು ಹೇಗೆ ಬರುತ್ತವೆ, ಅದರ ಒಳಗಡೆ ಏನಿದೆ ಎಂದು ನೋಡುವ ಕುತೂಹಲದಲ್ಲಿ ಮನೆಯಲ್ಲಿನ ಇಡೀ ಟಿ.ವಿಯನ್ನೇ ಬಿಚ್ಚಿಟ್ಟಿದ್ದನು. ಬಳಿಕ ಅವನ ತಂದೆ ಆ ಟಿ.ವಿಯನ್ನು ಸರಿಪಡಿಸಲು ಪಟ್ಟಣಕ್ಕೆ ಹೊತ್ತುಕೊಂಡು ಹೋಗಿ ಹರಸಾಹಸ ಪಡಬೇಕಾಯಿತು.

ಒಂದು ದಿನ ಸಂಜೆ ಸಂಪತ್ ಮನೆಯ ಕಿರಾಣಿ ದಿನಸಿಗಳನ್ನು ತರಲು ಅಂಗಡಿ ಕಡೆಗೆ ಹೋಗುವಾಗ, ಊರಿನ ಗುಡಿಯ ಹತ್ತಿರ ಬಯಲಾಟ ನಡೆಯುತ್ತಿತ್ತು. ಬಯಲಿನಲ್ಲಿ ಹೊಲಸು ಮಾಡಿದಾಗ ಅದರ ಮೇಲೆ ಕುಳಿತ ನೊಣಗಳು, ನಾವು ತಿನ್ನುವ ತಿಂಡಿತಿನಿಸುಗಳ ಮೇಲೆ ಕುಳಿತುಕೊಳ್ಳುವುದರಿಂದ ಹರಡುವ ಅಂಟು ರೋಗಗಳ ಬಗ್ಗೆ ಎಚ್ಚರಿಕೆ ಮೂಡಿಸಲಾಗುತ್ತಿತ್ತು. ಅದನ್ನು ನೋಡಿದ ಸಂಪತ್ ಮನಸ್ಸಿನಲ್ಲಿ ನೊಣಗಳು ಹೊಲಸು ತಿನ್ನುತ್ತವೆಯೇ? ಅವುಗಳು ನಮ್ಮ ತಿಂಡಿತಿನಿಸುಗಳು ಮೇಲೆ ಕುಳಿತುಕೊಂಡಾಗ ಏನಾಗುತ್ತದೆ? ಅವುಗಳು ಏನು ಊಟ ಮಾಡುತ್ತವೆ? ಹೀಗೆ ನೊಣಗಳ ಬಗ್ಗೆ ಹಲವಾರು ಕುತೂಹಲಕಾರಿ ಪ್ರಶ್ನೆಗಳು ಹುಟ್ಟಿಕೊಂಡವು.

ಅವನು ಅದೇ ಕುತೂಹಲದಲ್ಲಿ ಮರುದಿನ ಬೆಳಗ್ಗೆ ಕಲಿಕೆಮನೆಯಲ್ಲಿ ತನ್ನ ಮೆಚ್ಚಿನ ಗುರುಗಳಾದ ಶರಣಪ್ಪ ಅವರನ್ನು ಬೇಟಿಯಾಗಿ ನಿನ್ನೆ ನಡೆದ ಸಂಗತಿಯನ್ನು ವಿವರಿಸಿದನು. ಅದಕ್ಕೆ ಗುರುಗಳು ನಿನ್ನ ಮುಕವನ್ನು ನೋಡಿದ ಕೂಡಲೇ ಇಂದು ನಿನ್ನ ತಲೆಯಲ್ಲಿ ಮತ್ತೆ ಯಾವುದೋ ಹೊಸ ವಿಶಯದ ಬಗ್ಗೆ ಕುತೂಹಲ ಹುಟ್ಟಿಕೊಂಡಿದೆ ಎಂದು ನನಗೆ ಅನಿಸಿತು. ನೊಣಗಳ ಬಗ್ಗೆ ನಿನ್ನ ಎಲ್ಲಾ ಪ್ರಶ್ನೆಗಳಿಗೆ ನಾನು ಬರೆದಿರುವ ಈ ಬರಹದಲ್ಲಿ ಉತ್ತರಗಳಿವೆ, ಒಮ್ಮೆ ಇದನ್ನು ಓದು ಎಂದು ತಮ್ಮ ಬರಹದ ಪ್ರತಿಯನ್ನು ನೀಡಿದರು. ಕಲಿಕೆಮನೆಯಿಂದ ಸಂಜೆ ಮನೆಯನ್ನು ತಲುಪಿದ ಕೂಡಲೇ ಗುರುಗಳ ಬರಹವನ್ನು ಓದಲು ಆರಂಬಿಸಿದನು.

ನೊಣಗಳ ಮೈಯ ರಚನೆ

ಸಾಮಾನ್ಯವಾಗಿ ಕಂಡುಬರುವ ಎಲ್ಲಾ ಕೀಟಗಳಂತೆ ನೊಣದ ಮೈಯನ್ನು ತಲೆ, ಬಗ್ಗರಿ(thorax ) ಹಾಗೂ ಹೊಟ್ಟೆ ಹೀಗೆ ಮೂರು ಬಾಗಗಳನ್ನಾಗಿ ವಿಂಗಡಿಸಲಾಗಿದೆ. ನೊಣಗಳು ಒಂದು ಗಡುಸಾದ ಎಲುಬುಗೂಡು (skeleton), ಆರು ಕಾಲುಗಳು ಹಾಗೂ ಎರಡು ರೆಕ್ಕೆಗಳನ್ನು ಹೊಂದಿವೆ. ಹಾಗೆಯೇ ಎರಡು ಅರಿವುಕಗಳನ್ನು (antennae) ಕೂಡ ಹೊಂದಿದ್ದು, ಅವುಗಳು ನೊಣಗಳಿಗೆ ತಾಗುವಿಕೆಯ ಹಾಗೂ ವಾಸನೆಯ ಅರಿವು ನೀಡುತ್ತವೆ. ಸಾಮಾನ್ಯವಾಗಿ ಕೀಟಗಳಿಗೆ ನಾಲ್ಕು ರೆಕ್ಕೆಗಳಿರುತ್ತವೆ, ಆದರೆ ನೊಣಗಳು ಕೇವಲ ಎರಡು ರೆಕ್ಕೆಗಳನ್ನು ಮಾತ್ರ ಹೊಂದಿವೆ. ನಮ್ಮ ಸುತ್ತಲಿನ ಪರಿಸರದಲ್ಲಿ ಸಾಮಾನ್ಯವಾಗಿ ಕಂಡುಬರುವ ನೊಣಗಳು ಕಡು ಬೂದಿ (dark grey) ಬಣ್ಣವನ್ನು ಹೊಂದಿದ್ದು, ಹಾಗೇ 6 ರಿಂದ 7 ಮಿಲಿಮೀಟರ್ ಉದ್ದವಾಗಿರುತ್ತವೆ.

ಸಂಪತ್ ನಿಗೆ ನೊಣಗಳ ಬಗೆಗಿನ ಒಂದೊಂದು ವಿಶಯ ಓದಿದ ಕೂಡಲೇ ಅವುಗಳ ಬಗ್ಗೆ ಆಸಕ್ತಿ ಇನ್ನು ಹೆಚ್ಚಾಗುತ್ತಾ ಹೋಯಿತು. ಓದು ಮುಂದುವರಿಯುತ್ತಿತ್ತು. ಕೆಲ ಹೊತ್ತಿನ ಬಳಿಕ ಅವನ ಅಮ್ಮ ಊಟಕ್ಕೆ ಕರೆದಳು. ಸಂಪತ್ “ಅಮ್ಮ ಮೊದಲು ನೀನು ನನ್ನ ಪ್ರಶ್ನೆಗೆ ಉತ್ತರಿಸು. ಮನುಶ್ಯರು ಎಶ್ಟು ವರ‍್ಶಗಳ ಕಾಲ ಬದುಕುತ್ತಾರೆ ಹೇಳು?” ಎಂದು ಕೇಳಿದನು. “ಸಾಮಾನ್ಯವಾಗಿ ಮನುಶ್ಯರು 80 ರಿಂದ 100 ವರ‍್ಶಗಳ ಕಾಲ ಬದುಕುತ್ತಾರೆ, ಆದರೆ ಇಂದಿನ ಕಾಲದಲ್ಲಿ ಏನಾದರು ಕಾಯಿಲೆ ಬಂದು ಬೇಗನೆ ಸಾಯುತ್ತಿದ್ದಾರೆ.’ ಎಂದಳು.

“ಹಾಗಾದರೆ ನೊಣಗಳು ಎಶ್ಟು ಕಾಲ ಬದುಕುತ್ತವೆ ಎಂದು ಗೊತ್ತಾ ನಿನಗೆ? ನೊಣಗಳು ಕೇವಲ 15 ರಿಂದ 30 ದಿನಗಳವರೆಗೆ ಮಾತ್ರ ಬದುಕುತ್ತವೆ.” ಎಂದು ತಾನು ಓದಿದ ಮತ್ತಶ್ಟು ವಿಶಯಗಳನ್ನು ಅಮ್ಮನಿಗೆ ಹೇಳತೊಡಗಿದನು. “ನೊಣಗಳು ಬದುಕುವ ಅವದಿಯು ಅಲ್ಲಿನ ಕಾವಳತೆ ಹಾಗೂ ಜೀವಿಸಲು ಬೇಕಾಗುವ ಗೊತ್ತುಪಾಡುಗಳ ಮೇಲೆ ಅವಲಂಬಿತವಾಗಿರುತ್ತದೆ. ಕೇವಲ 1 ದಿನದಲ್ಲಿ ಅವುಗಳ ಮೊಟ್ಟೆಯು ಒಡೆದು ಮರಿಹುಳು (larva) ಹೊರಗೆ ಬರುತ್ತದೆ. ಮರಿಹುಳು ನೋಡಲು ಅಕ್ಕಿಯ ಚೂರಿನಂತೆ ಕಾಣುತ್ತದೆ. ಇದು ಸುಮಾರು 3 ರಿಂದ 5 ದಿನಗಳ ಬಳಿಕ ಗೂಡುಹುಳುವಾಗಿ (pupa) ಬೆಳೆಯುತ್ತದೆ. ಗೂಡುಹುಳು 4 ರಿಂದ 5 ದಿನಗಳ ಬಳಿಕ ನೊಣವಾಗುತ್ತದೆ.”  ಇದನ್ನು ಕೇಳಿದ ಕೂಡಲೇ ಅಮ್ಮನ ಮುಕದಲ್ಲಿ ಅಚ್ಚರಿ ಮೂಡಿತ್ತು. “ಹೌದಾ! ಸರಿ, ನೀನು ಬೇಗ ಹೋಗು ತಂಗಿ ಊಟಕ್ಕೆ ಕಾಯುತ್ತಿದ್ದಾಳೆ.” ಎಂದಳು.

ಸಂಪತ್ ಹೋಗಿ ತಂಗಿಯ ಜೊತೆಗೆ ಊಟಕ್ಕೆ ಕುಳಿತ. ಊಟ ಮಾಡುತ್ತಾ “ಅಮ್ಮ, ಇಂದು ಸಾರು ತುಂಬಾ ರುಚಿಯಾಗಿದೆ.” ಎಂದಳು ತಂಗಿ. ರುಚಿಯ ಸುದ್ದಿ ಕೇಳಿದೊಡನೆ –
“ನೊಣಗಳು ಹೇಗೆ ರುಚಿ ಕಂಡುಹಿಡಿಯುತ್ತವೆ ಅಂತ ಗೊತ್ತಾ ನಿನಗೆ?” ಎಂದು ತಂಗಿಗೆ ತನ್ನ ಪ್ರಶ್ನೆ ಹಾಕಿದ ಸಂಪತ್.
“ನಾಲಿಗೆಯಿಂದಲೇ ಅಲ್ಲವಾ!?” ಎಂದಳು ತಂಗಿ.
“ಅಲ್ಲ. ನೊಣಗಳು ಕಾಲಿನಿಂದ ರುಚಿ ಕಂಡುಹಿಡಿಯುತ್ತವೆ! ಹಾಗೂ ನಾಲಿಗೆಯಿಂದ ಊಟ ಮಾಡುತ್ತವೆ. ಚಿಟ್ಟೆಗಳ ಹಾಗೇ ನೊಣಗಳು ಕೂಡ ಕಾಲಿನಿಂದ ರುಚಿಯನ್ನು ಕಂಡುಹಿಡಿಯುತ್ತವೆ. ನೊಣಗಳ ಕಾಲಿನ ಕೆಳಬಾಗದಲ್ಲಿ ಕೀಮೋಸೆನ್ಸಿಲ್ಲ (chemosensilla) ಎಂಬ ರುಚಿ ಕಂಡುಹಿಡಿಯುವ ರಾಸಾಯನಿಕ ವಸ್ತುವಿದೆ. ನೊಣಗಳು ಹೊಲಸು ಹಾಗೂ ತಿಂಡಿತಿನಿಸುಗಳ ಮೇಲೆ ಕುಳಿತುಕೊಂಡ ಕೂಡಲೇ ರುಚಿಯನ್ನು ಕಂಡುಹಿಡಿಯಲು ಅವುಗಳ ಮೇಲೆ ನಡೆದಾಡುತ್ತವೆ. ಇದು ಮನುಶ್ಯನ ನಾಲಿಗೆಗಿಂತ ಸುಮಾರು 10 ಪಟ್ಟು ಬೇಗನೆ ರುಚಿಯನ್ನು ಕಂಡುಹಿಡಿಯಬಲ್ಲವು.”
ಸಂಪತ್ ಅಲ್ಲಿಗೆ ಮಾತನ್ನು ನಿಲ್ಲಿಸಲಿಲ್ಲ –
“ನೊಣಗಳ ಬಾಯಿಯಲ್ಲಿ ಹಲ್ಲುಗಳು ಇರುವುದಿಲ್ಲ. ಅದಕ್ಕೆ ಅವುಗಳು ಬರೀ ನೀರಿನ ರೂಪದ ತಿಂಡಿತಿನಿಸುಗಳನ್ನು ಮಾತ್ರ ತಿನ್ನುತ್ತವೆ. ಹಲ್ಲುಗಳ ಬದಲಾಗಿ ನೊಣಗಳ ಬಾಯಿಯಲ್ಲಿ ಚಿಕ್ಕ ಕೊಳವೆ ಆಕಾರದ ಉದ್ದವಾದ ನಾಲಿಗೆ ಇದೆ. ಅವು ಮೊದಲಿಗೆ ಊಟದ ಮೇಲೆ ಕುಳಿತುಕೊಂಡ ಕೂಡಲೇ ಹುಳಿಗಳನ್ನು (Acids) ಊಟದ ಮೇಲೆ ವಾಕರಿಸುತ್ತವೆ. ಆಮೇಲೆ ಈ ಹುಳಿಗಳು ಊಟವನ್ನು ಕರಗಿಸಿ ನೀರಿನ ರೂಪಕ್ಕೆ ತರುತ್ತವೆ. ಬಳಿಕ ಕರಗಿಸಿದ ಊಟವನ್ನು ಕೊಳವೆ ಆಕಾರದ ನಾಲಿಗೆಯಿಂದ ಸುರ್… ಎಂದು ಹೀರಿಕೊಳ್ಳುತ್ತವೆ.”

ಅದನ್ನು ಕೇಳಿದ ತಂಗಿ “ಹೌದಾ ಅಣ್ಣ!” ಎಂದು ಅಚ್ಚರಿಯಿಂದ ಅವನ ಮುಕವನ್ನು ನೋಡಿದಳು. ಸಂಪತ್ ಊಟ ಮುಗಿಸಿ ಮತ್ತೆ ಬರಹವನ್ನು ಓದಲು ಆರಂಬಿಸಬೇಕು ಎನ್ನುವಶ್ಟರಲ್ಲಿ ನೆಲದ ಮೇಲೆ ಕುಳಿತಿರುವ ಹಾಗೂ ಗೋಡೆಯ ಮೇಲಿರುವ ನೊಣಗಳು ಅವನ ಕಣ್ಣಿಗೆ ಬಿದ್ದವು. ಅದನ್ನು ನೋಡಿದ ಸಂಪತ್ ತಲೆಯಲ್ಲಿ ಮತ್ತೊಂದು ಪ್ರಶ್ನೆ ಹುಟ್ಟಿತು. ನೊಣಗಳು ಯಾವುದೇ ಮೇಲ್ಮೈ(surface) ಮೇಲೆ ಹೇಗೆ ನಡೆದಾಡುತ್ತವೆ? ಎಂದು ತಿಳಿಯಲು ಬರಹವನ್ನು ಹುಡುಕಾಡಿದ. ನೊಣಗಳು ಕೂದಲಿರುವ ಹಾಗೂ ಜಿಗುಟಾದ ಕಾಲುಗಳನ್ನು ಹೊಂದಿದ್ದು, ಅವುಗಳು ನೊಣಗಳಿಗೆ ಗೋಡೆ, ನೆಲ, ಮನೆಯ ಮಹಡಿ ಹೀಗೆ ಯಾವುದೇ ಮೇಲ್ಮೈಗೆ ಅಂಟಿಕೊಳ್ಳಲು ಸಹಾಯ ಮಾಡುತ್ತವೆ ಎಂದು ಬರಹದಿಂದ ತಿಳಿದುಕೊಂಡನು.

ನೇಸರ ಮರೆಯಾಗಿ ಕತ್ತಲೆ ಆವರಿಸುತ್ತಿತ್ತು. ಓದುವುದರಲ್ಲಿ ಮುಳಗಿ ಹೋದ ಸಂಪತ್ ದೀಪ ಹಚ್ಚಿ ಮತ್ತೆ ಬರಹವನ್ನು ಓದಲು ಆರಂಬಿಸಬೇಕು ಎಂದುಕೊಂಡು, ಅದಾಗಲೇ ತನ್ನ ಸುತ್ತಮುತ್ತ ಕಾಣಿಸಿದ್ದ ನೊಣಗಳ ಕಡೆಗೆ ಕಣ್ಣು ಹಾಯಿಸಿದ. ಆದರೆ ಅವುಗಳು ಅಲ್ಲಿ ಇರಲಿಲ್ಲ. ದೀಪ ಹಚ್ಚಿ ಹುಡುಕಿದರೂ ಸಿಗಲಿಲ್ಲ. ಸಂಪತ್ ನ ತಲೆಯಲ್ಲಿ ಮತ್ತೊಂದು ಹೊಸ ಪ್ರಶ್ನೆ ಹುಟ್ಟಿತ್ತು. ಕತ್ತಲೆಯಾದೊಡನೆ ನೊಣಗಳು ಎಲ್ಲಿಗೆ ಹೋಗುತ್ತವೆ? ‘ನೊಣಗಳು ರಾತ್ರಿ ಹೊತ್ತಿನಲ್ಲಿ ತಮ್ಮ ಮೆಚ್ಚಿನ ಜಾಗಗಳಲ್ಲಿ ದಣಿವಾರಿಸಿಕೊಳ್ಳುತ್ತಿರುತ್ತವೆ. ಕಟ್ಟಡಗಳು, ಮರಗಳು, ಮನೆ ಹೊರಗಿನ ತಂತಿಗಳು ಹಾಗೂ ಹುಲ್ಲುಗಾವಲು ಮುಂತಾದಗಳು ನೊಣಗಳ ರಾತ್ರಿ ಹೊತ್ತಿನಲ್ಲಿ ದಣಿವಾರಿಸಿಕೊಳ್ಳುವ ಮೆಚ್ಚಿನ ಜಾಗಗಳು.’ ಎಂಬ ಉತ್ತರವನ್ನು ಬರಹದಲ್ಲಿ ಕಂಡುಕೊಂಡನು.

ಇದರ ಬಳಿಕ ಬರಹದಲ್ಲಿ ನೊಣಗಳ ಕುರಿತು ಇನ್ನೂ ಹಲವಾರು ಕುತೂಹಲಕಾರಿ ವಿಶಯಗಳು ಅವನಿಗೆ ಓದಲು ಸಿಕ್ಕಿತು.

ನೊಣಗಳು ತಮ್ಮ ಚಿಕ್ಕ ಮೈಯಲ್ಲಿ ಲಕ್ಶಗಟ್ಟಲೆ ಬ್ಯಾಕ್ಟೀರಿಯಾವನ್ನು ಒಯ್ಯುತ್ತವೆ; ನೊಣಗಳು ಹೊಲಸು ತಿನ್ನುವಾಗ ಕೆಲವು ರೋಗಾಣುಗಳು ಅವುಗಳ ಕಾಲಿನ ಹಾಗೂ ಬಾಯಿಯ ಬಾಗಗಳಲ್ಲಿ ಉಳಿಯಬಹುದು. ಅನಂತರ ಅದೇ ನೊಣಗಳು ಮನುಶ್ಯನು ತಿನ್ನುವ ತಿಂಡಿತಿನಿಸುಗಳ ಮೇಲೆ ಕುಳಿತುಕೊಂಡಾಗ ಈ ರೋಗಾಣುಗಳು ಅವುಗಳಲ್ಲಿ ಸೇರಿಕೊಳ್ಳುತ್ತವೆ. ಬಳಿಕ ಮನುಶ್ಯನು ಅದೇ ತಿಂಡಿತಿನಿಸುಗಳನ್ನು ಸೇವಿಸಿದಾಗ ಟೈಪಾಯಿಡ್, ಕಾಲರಾ, ವಾಂತಿಬೇದಿ ಮುಂತಾದ ಅಂಟುರೋಗಗಳು ಬರುತ್ತವೆ.

ನೊಣಗಳಿಂದ ಹರಡುವ ಅಂಟು ರೋಗದ ಪರಿಣಾಮ ಎಶ್ಟಿದೆ ಎಂದರೆ, ಹಿಂದೊಮ್ಮೆ ಸ್ಪೇನ್ ಹಾಗೂ ಅಮೇರಿಕಾದ ನಡುವೆ ಕಾಳಗ ನಡೆದಾಗ ಆ ಕಾಳಗದಲ್ಲಿ ಸುಮಾರು 9 ಸಾವಿರ ಕಾಳಗಪಡೆಯವರು ಸಾವನ್ನಪ್ಪಿದರು. ಆ 9 ಸಾವಿರದಲ್ಲಿ 4 ಸಾವಿರ ಕಾಳಗಪಡೆಯವರು ಕಾಳಗದಲ್ಲಿ ಹೋರಾಡಿ ಸತ್ತರೆ, ಉಳಿದ 5 ಸಾವಿರ ಕಾಳಗಪಡೆಯವರು ನೊಣದಿಂದ ಹರಡಿದ ಟೈಪಾಯಿಡ್ ಕಾಯಿಲೆಯಿಂದ ಸತ್ತಿದ್ದರು!

ಚಿಕ್ಕ ನೊಣಗಳಿಂದ ಹರಡುವ ರೋಗಗಳಿಂದ ಒಂದೇ ಸಲಕ್ಕೆ ಸಾವಿರಾರು ಮಂದಿ ಸಾಯುತ್ತಾರೆ ಎಂದು ಓದಿದ ಕೂಡಲೇ ಸಂಪತ್ ಮನಸ್ಸಿನಲ್ಲಿ ದಿಗಿಲುಂಟಾಯಿತು. ಅವನಿಗೆ ನೊಣಗಳು ದೈತ್ಯಕಾರದ ಸುನಾಮಿ ಹಾಗೆ ಅನಿಸತೊಡಗಿದವು. ಅವನ ಮುಕದಲ್ಲಿ ಹೆದರಿಕೆ ಆವರಿಸಿತ್ತು. ಈ ನೊಣಗಳನ್ನು ಕಂಡರೆ ಸಾಕು ನಾನು ದೂರ ಓಡಿ ಹೋಗಬೇಕೆಂದು ಯೋಚಿಸಿದ.
ನೊಣಗಳಿಗೆ ತುಂಬಾ ದೂರ ಹಾರಾಡಲು ಆಗುವುದಿಲ್ಲ. ಅವುಗಳಿಗೆ ಹುಟ್ಟಿದ ಜಾಗದಿಂದ ಸುಮಾರು 1 – 2 ಮೈಲಿ ದೂರದವರೆಗೆ ಒಳಗೆ ಉಳಿಯಲು ಒಲವು ಇರುತ್ತದೆ. ಅವುಗಳು ಊಟ ಹುಡುಕುವ ಸಲುವಾಗಿ ಸುಮಾರು 20 ಮೈಲಿ ದೂರದಶ್ಟು ಮಾತ್ರ ಪ್ರಯಾಣಿಸುತ್ತವೆ. ಅಂದರೆ ಇವುಗಳಿಂದ ತಪ್ಪಿಸಿಕೊಳ್ಳಲು ನಾನು 20 ಮೈಲಿಗಿಂತ ದೂರ ಓಡಿ ಹೋಗಬೇಕು ಎಂದು ಮನಸ್ಸಿನಲ್ಲಿ ನಕ್ಕು ಮತ್ತೆ ಬರಹವನ್ನು ಓದಲು ಆರಂಬಿಸಿದನು.

ಹೆಣ್ಣು ನೊಣವು ಒಂದು ಬಾರಿಗೆ 150 ಕ್ಕಿಂತ ಹೆಚ್ಚಿನ ಮೊಟ್ಟೆಗಳನ್ನು ಹಾಕುತ್ತದೆ. ಇದು ತನ್ನ ಜೀವಮಾನದಲ್ಲಿ ಸುಮಾರು 600 ಮೊಟ್ಟೆಗಳನ್ನು ಇಡುತ್ತದೆ. ಆದ್ದರಿಂದ ನೊಣಗಳ ಎಣಿಕೆಯು ನೋಡ ನೋಡುತ್ತಲೇ ತುಂಬಾ ಬೇಗನೆ ಹೆಚ್ಚಾಗುತ್ತದೆ. ವಿಶ್ವದಾದ್ಯಂತ 1,20,000 ಕ್ಕಿಂತ ಹೆಚ್ಚಿನ ಪಂಗಡದ ನೊಣಗಳಿವೆ. ಅದರಲ್ಲಿ 1800 ಪಂಗಡದ ನೊಣಗಳು ಉತ್ತರ ಅಮೇರಿಕಾ ಒಂದರಲ್ಲಿಯೇ ಕಂಡುಬರುತ್ತವೆ.

ಬರಹವನ್ನು ಓದಿ ಮುಗಿಸಿದ ಕೂಡಲೇ ಸಂಪತ್ ನ ಮುಕದಲ್ಲಿ ಇಂದು ಒಂದು ಹೊಸ ವಿಶಯದ ಬಗ್ಗೆ ತಿಳಿದುಕೊಂಡ ಸಂತೋಶ ಕಾಣುತ್ತಿತ್ತು. ಮರುದಿನ ಅವನು ಶರಣಪ್ಪ ಗುರುಗಳನ್ನು ಬೇಟಿಯಾಗಿ ಬರಹ ಓದಿದ್ದ ವಿಶಯವನ್ನು ತಿಳಿಸಿದನು. ಅದನ್ನು ಕೇಳಿದ ಗುರುಗಳಿಗೆ ಬರಹದ ಮೂಲಕ ಒಂದು ಹೊಸ ವಿಶಯವನ್ನು ತಿಳಿಸಿ ಕೊಟ್ಟ ನೆಮ್ಮದಿ ಸಿಕ್ಕಿತ್ತು.

(ಮಾಹಿತಿ ಸೆಲೆ: pestworldforkids.orgeasyscienceforkids.comanimalia.lifethoughtco.comblog.jefferspet.com entnemdept.ufl.edu)
(ಚಿತ್ರ ಸೆಲೆ: wiki/musca, wiki/fly, wiki/sarco )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: