ಹಟವಾದಿ ಕುರುವೀರ…

– ಕೌಸಲ್ಯ.

ಮಣ್ಣಾಸೆಯೊಳ್ ಪಗೆಯಿಲ್
ಮುನ್ನುಡಿಯಿಟ್ಟನ್ ಸುಯೋದನ
ಶತಕುರುವಂಶವನ್ ರಣರಂಗದ
ಜೂಜಿನೊಳಾಟಕೆ ಒತ್ತೆಯಾಗಿರಿಸಿ
ಗೆಲ್ವೆ ಗೆಲ್ವೆನೆಂಬ ಅಹಂಕಾರಮದಗಳ
ಸಾನಿದ್ಯದಲಿ ಚಲವನ್ನಿತ್ತ

ಹಗೆಯಲಿ ಬಗೆದನ್
ದ್ವೇಶಮತ್ಸರಂಗಳಂ ಬಾತ್ರುಂಗಳಿಂಗೆ
ಬೋಜನದಿ ಅರ‍್ಪಿಸಿದನ್ ಅನುದಿನಂ
ನಿತ್ಯಸೇವನೆಯ ಪಲವು ಪಾಂಡವಕುಲದ ವಿನಾಶಕೆ
ಪೇಳ್ದನ್ ಕುರುವೀರ

ಚಲವಾದಿ ಕುರುವೀರ
ಸಮರದೊಳ್ ಆಹ್ವಾನಿಸಿದ ಸಮವೀರನಂ
ಹಟವಾದಿ ವಿಜಯದ ನೆರಳಂಪಿಡದೆ
ಬೆಂಬತ್ತಿ ದಾವಂತದಿ ಮುಗ್ಗರಿಸಿ ಬೀಳ್ದನಾ
ರಣರಂಗದ ಕವಡೆಯಾಟದೊಳ್

ಶತಕುರುವಂಶವನ್ ಹಗೆಯಕೂಪದೊಳ್ ನೂಕಿ
ಪ್ರೇತಾತ್ಮವನ್ ಸ್ರುಶ್ಟಿಸಿದ
ಸತ್ಯಲೋಕದೊಳ್ ಮಿತ್ಯದಪಜಯವನ್
ಸಾರಿದನ್ ಕುರುವೀರ…

( ಸಾರಾಂಶ :  ಕುರುವೀರನಾದ ದುರ‍್ಯೋದನನು ರಾಜ್ಯದ ಆಸೆಗೆ ಹಗೆತನವನ್ನು ಅಸ್ತ್ರವನ್ನಾಗಿ ಉಪಯೋಗಿಸಿದ. ರಣರಂಗದ ಜೂಜಿನಾಟಕ್ಕೆ ಕೌರವವಂಶವನ್ನೇ ಪಣಕ್ಕಿಟ್ಟ. ಅವನ ಚಲ ಕೇವಲ ಸಕರಾತ್ಮಕ ಚಲವಾಗಿದ್ದರೆ ಇಡೀ ಯುದ್ದದ ಚಿತ್ರಣವೇ ಬದಲಾಗುತ್ತಿತ್ತು. ಆದರೆ ಕೌರವ ವೀರ ದ್ವೇಶ, ಮತ್ಸರಗಳನ್ನು ತನ್ನ ಸಹೋದರರಿಗೂ ನಿತ್ಯ ಸೇವನೆಯಂತೆ ಬೋಜನಕ್ಕೆ ನೀಡಿದ. ‘ಪಾಂಡವ ಕುಲ ವಿನಾಶವೇ ನಮ್ಮೆಲ್ಲರ ಗುರಿ’ ಎಂದು ಹೇಳುತ್ತಾ ಸಹೋದರರ ಮನಸ್ಸಲ್ಲಿ ದ್ವೇಶ ಚಿಗುರೊಡೆಯುವಂತೆ ಮಾಡಿದ. ಚಲವಾದಿ ದುರ‍್ಯೋದನ ತನಗೆ ಸಮನಾದ ಶಕ್ತಿಶಾಲಿ ಬೀಮನನ್ನು ರಣರಂಗದಲಿ ಆಯ್ಕೆ ಮಾಡಿದನಾದರೂ, ಸಮರದ ಕವಡೆಯಾಟದಲಿ ತಾನೇ ಮುಗ್ಗರಿಸಿ ಬಿದ್ದ. ಅಲ್ಲಿಯವರೆಗೂ ಪಟ್ಟುಬಿಡದೇ ವಿಜಯದೇವಿಯ ನೆರಳನ್ನು ಹಿಂಬಾಲಿಸುವವನಂತೆ, ತನ್ನ ಜಯದ ಕನಸು ಕಾಣುತಲಿದ್ದ. ಅವನ ಪಟ್ಟುಬಿಡದ ಪಗಡೆಯಾಟದಲಿ ಶತಕುರುವಂಶಗಳನ್ನು ಪೈಶಾಚಿಕವಾಗಿ ಬಳಸಿ ಸತ್ಯಲೋಕದಲ್ಲಿ ಮಿತ್ಯದ ಅಪಜಯವನ್ನು ಜಗತ್ತಿಗೆ ಸಾರಿದ ಮಹಾನ್ ವೀರ ಈ ಕುರುವೀರ )

(ಚಿತ್ರ ಸೆಲೆ: desinema.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: