ಕಣ್ಮನ ಸೆಳೆಯುವ ‘ಚಾಕೊಲೇಟ್ ಗುಡ್ಡಗಳು’

– ಕೆ.ವಿ.ಶಶಿದರ.

ಪಿಲಿಪೈನ್ ದ್ವೀಪ ಸಮೂಹಗಳಲ್ಲಿ ಹತ್ತನೇ ಅತಿ ದೊಡ್ಡ ದ್ವೀಪ ಬೊಹೋಲ್. ಇದು ಬೊಹೋಲ್ ಪ್ರಾಂತ್ಯದ ಕೇಂದ್ರ ಬಿಂದುವೂ ಹೌದು. ಬೊಹೋಲ್ ದ್ವೀಪ ಉಶ್ಣವಲಯದ ಸ್ವರ‍್ಗ. ಇಲ್ಲಿನ ಪ್ರಾಕ್ರುತಿಕ ಸೌಂದರ‍್ಯ ಹಾಗೂ ಸೌಮ್ಯ ಕರಾವಳಿ ಇದರ ಮೆರುಗನ್ನು ಇಮ್ಮಡಿಸಿದೆ. ನೀರ‍್ನೆಗೆಯಾಟಗಾರರಿಗೆ ಹಾಗೂ ಗಾಳಿಕೊಳವೆ ಹಾಕಿಕೊಂಡು ಸಮುದ್ರದಲ್ಲಿ ಹರಿದಾಡುವವರಿಗೆ ಬೊಹೋಲ್‍ನ ಕಡಲು ಬಹಳ ಪ್ರಶಸ್ತ.

ಈ ಕಣ್ಮನ ಸೆಳೆಯುವ ದ್ವೀಪದ ವಿಶೇಶತೆ ಅಡಗಿರುವುದು ಇಡೀ ದ್ವೀಪದ ತುಂಬಾ ಹರಡಿರುವ ವಿವಿದ ಗಾತ್ರದ ಚಾಕೊಲೇಟ್ ಗುಡ್ಡಗಳು! ಸಾವಿರಾರು ಸಂಕ್ಯೆಯಲ್ಲಿರುವ ಈ ದಿಬ್ಬಗಳೇ ಈ ದ್ವೀಪದ ಅಸಾಮಾನ್ಯ ಹಾಗೂ ಅನನ್ಯ ಬೂದ್ರುಶ್ಯ. ಇದರಲ್ಲಿರುವ ಚಾಕೊಲೇಟ್ ಗುಡ್ಡಗಳು ಎಣಿಕೆಗೆ ಸಿಗದಶ್ಟಿವೆ. ಒಂದು ಅಂದಾಜಿನ ಪ್ರಕಾರ ಕನಿಶ್ಟ 1268 ಹಾಗೂ ಗರಿಶ್ಟ 1776 ಗುಡ್ಡಗಳು ಇರಬಹುದು ಎಂದು ಲೆಕ್ಕಹಾಕಲಾಗಿದೆ. ನಿಕರವಾದ ಸಂಕ್ಯೆ ಇನ್ನೂ ಮರೀಚಿಕೆಯೇ.

ಅತಿ ದೊಡ್ಡ ಗುಡ್ಡ 120 ಮೀಟರ್ ಎತ್ತರವಿದೆ. ಉಳಿದೆಲ್ಲವೂ 30 ರಿಂದ 50 ಮೀಟರ್ ಆಸುಪಾಸಿನಲ್ಲಿವೆ.

ಚಾಕೊಲೇಟ್ ಗುಡ್ಡಗಳು ಬಾರೀ ಗಾತ್ರದ್ದಲ್ಲ. ಅತಿ ದೊಡ್ಡ ಗುಡ್ಡ 120 ಮೀಟರ್ ಎತ್ತರವಿದೆ. ಉಳಿದೆಲ್ಲವೂ 30 ರಿಂದ 50 ಮೀಟರ್ ಆಸುಪಾಸಿನಲ್ಲಿವೆ. ತ್ರಿಬುಜಾಕ್ರುತಿಯ ಆಕಾರದಲ್ಲಿರುವ ಈ ಗುಡ್ಡಗಳು ದ್ವೀಪದ 50 ಚದರ ಕಿಲೋಮೀಟರ್ ವಿಸ್ತೀರ‍್ಣದ ತುಂಬಾ ಹರಡಿವೆ. ಬೊಹೋಲ್ ದ್ವೀಪದಲ್ಲಿ ಚಾಕೊಲೇಟ್ ಗುಡ್ಡಗಳು ರಚನೆಯಾದ ಬಗ್ಗೆ ಇನ್ನೂ ನಿಗೂಡತೆಯಿದೆ. ಇದರ ರಚನೆಯ ಬಗ್ಗೆ ಹೇಳುವ ಕತೆಗಳನ್ನು ಕೇಳಿದರೆ ಅವು ಯಾವುದೇ ಆದಾರವಿಲ್ಲದೆ ಹುಟ್ಟಿದ ದಂತಕತೆಗಳಂತಿವೆ. ಈ ಕತೆಗಳನ್ನು ಕೇಳಲಶ್ಟೆ ಕುಶಿ. ಕಾಗಕ್ಕ ಗುಬ್ಬಕ್ಕನ ಕತೆಯಂತೆ.

ಒಂದು ಬಹಳ ಜನಪ್ರಿಯ ಸ್ತಳೀಯ ದಂತಕತೆಯಂತೆ, ಇಬ್ಬರು ದೈತ್ಯ ರಾಕ್ಶಸರ ಹೊಡೆದಾಟದಲ್ಲಿ ಒಬ್ಬರ ಮೇಲೊಬ್ಬರು ತೂರಲು ಬಳಸಿದ ಮಣ್ಣು ಮತ್ತು ಕಲ್ಲುಗಳ ರಾಶಿಯೇ ಈ ಗುಡ್ಡಗಳಂತೆ! ಕೊನೆಗೊಮ್ಮೆ ಶಕ್ತಿ ಕುಂದಿ ನಿತ್ರಾಣರಾದಾಗ ಮತ್ತೆ ಸ್ನೇಹಿತರಾಗಿ ಕೈ ಜೋಡಿಸಿ ಒಂದಾದರಂತೆ.

ಮತ್ತೊಂದು ಕತೆ ಮೊದಲನೆ ಕತೆಗಿಂತ ವಿಬಿನ್ನವಾಗಿದೆ. ಅತಿ ಸುಂದರ ಯುವ ಪ್ರಣಯ ದೈತ್ಯ ಅರೊಗೊಗೆ ನಶ್ವರ ಹೆಣ್ಣಾದ ಅಲೋಯಾ ಮೇಲೆ ಪ್ರೀತಿಯಾಯಿತಂತೆ. ಆಕೆ ಎಶ್ಟಾದರೂ ನಶ್ವರ. ಅಲೋಯಾ ಪ್ರಾಣ ತ್ಯಜಿಸಿದಾಗ ಈ ದೈತ್ಯ ದುಕ್ಕ ತಾಳಲಾರದೆ ಅತ್ತನಂತೆ. ಅಳುವಾಗ ಕಣ್ಣಿನಿಂದ ಸುರಿದ ಸಾವಿರಾರು ಕಣ್ಣೀರ ಹನಿಗಳು ಒಂದೊಂದೂ ಒಂದೊಂದು ಚಾಕೊಲೇಟ್ ಗುಡ್ಡವಾಯಿತಂತೆ!

ಮಗದೊಂದು ಕತೆಯಂತೆ ಮತ್ತೊಬ್ಬ ದೈತ್ಯನಿಗೆ ಬಹುಕಾಂತೀಯ ಯುವತಿಯನ್ನು ಒಲಿಸಿಕೊಳ್ಳುವ ಮಹದಾಸೆಯಾಗಿ ಅದಕ್ಕಾಗಿ ತನ್ನ ತೂಕವನ್ನು ಇಳಿಸಲು ದೇಹದಲ್ಲಿ ಇದ್ದ ಕೊಳಕೆಲ್ಲವನ್ನೂ ಅಲ್ಲೆಲ್ಲೇ ಹೊರಹಾಕಿದನಂತೆ. ಅವೇ ಚಾಕೊಲೇಟ್ ಗುಡ್ಡಗಳಾದವಂತೆ!

ನೆಲದರಿಗರ ದ್ರುಶ್ಟಿಕೋನದಲ್ಲಿ ಇದನ್ನು ಗಮನಿಸಿದರೆ ಇಲ್ಲೂ ಸಾಕಶ್ಟು ಬೇದಗಳಿವೆ. ವಾತಾವರಣದ ಏರುಪೇರಿನಿಂದ ಉಂಟಾದ ಅಬೇದ್ಯ ಜೇಡಿಮಣ್ಣಿನ ತಳಹದಿಯ ಮೇಲೆ, ಸಮುದ್ರದ ಸುಣ್ಣದ ಕಲ್ಲುಗಳ ಹೊದಿಕೆಯಾಗಿ ಇಂತಹ ಗುಡ್ಡಗಳ ರಚನೆಯಾಯಿತು ಎಂಬುದು ಒಂದು ಸಿದ್ದಾಂತ.

ನೆಲದರಿಗರ ಸಿದ್ದಾಂತವಾಗಲಿ ಕಟ್ಟುಕತೆಯಾಗಲಿ ಈ ದ್ವೀಪದ ಸೌಂದರ‍್ಯವನ್ನು ಹೆಚ್ಚಿಸಲಿಕ್ಕಾಗಲಿ ತಗ್ಗಿಸಲಿಕ್ಕಾಗಲಿ ಸಾದ್ಯವಿಲ್ಲ. ಈ ಐತಿಹಾಸಿಕ ಗುಡ್ಡಗಳೇ ಬೊಹೋಲ್ ದ್ವೀಪಕ್ಕೆ ಪ್ರವಾಸಿಗರನ್ನು ಸೆಳೆಯುವ ಪ್ರಮುಕ ಆಕರ‍್ಶಣೆ. ಈ ಗುಡ್ಡಗಳ ಮತ್ತೊಂದು ವಿಶೇಶತೆಯಂದರೆ ಇದರ ಮೇಲ್ಮಯನಲ್ಲಿ ಯಾವುದೇ ರೀತಿಯ ಮರಗಳಾಗಲಿ ಪೊದೆಗಳಾಗಲಿ ಬೆಳೆದಿಲ್ಲದಿರುವುದು! ಹುಲ್ಲಿನ ಗಿಡ ಬೆಳೆಯಲು ಸೊಗಸಾದ ಪ್ರದೇಶ. ಮಳೆಗಾಲದಲ್ಲಿ ಹಸಿರಿನಿಂದ ಜಗಮಗಿಸುವ ಹುಲ್ಲು ಬೇಸಿಗೆಯಲ್ಲಿ ಬಿಸಿಲಿನ ಬೇಗೆಗೆ ಒಣಗುತ್ತದೆ. ಒಣಗಿದ ಹುಲ್ಲು ಕಂದು ಬಣ್ಣಕ್ಕೆ ತಿರುಗುತ್ತದೆ. ಮರ ಪೊದೆ ಯಾವುದೂ ಇಲ್ಲದ ಕಾರಣ ಇಡೀ ಗುಡ್ಡಕ್ಕೆ ಕಂದು ಬಣ್ಣದ ಹಾಸನ್ನು ಹೊದಿಸಿದಂತೆ ಕಾಣುತ್ತದೆ. ಚಾಕೊಲೇಟ್‍ನಂತೆ ಕಾಣಲು ಇದೇ ಕಾರಣ. ಹಾಗಾಗಿ ಗುಡ್ಡಗಳು ಚಾಕೊಲೇಟ್ ಗುಡ್ಡಗಳು ಎಂದೇ ಪ್ರಸಿದ್ದಿ.

ಗುಡ್ಡಗಳ ನಡುವಿನ ಪ್ರದೇಶ ಸಮತಟ್ಟಾದ ಬಯಲಿನಂತಿದೆ. ಈ ಬಯಲು ಪ್ರದೇಶದಲ್ಲಿ ಹಲವಾರು ಗುಹೆಗಳನ್ನು, ಬುಗ್ಗೆಗಳನ್ನು ಕಾಣಬಹುದು. ಸಾಮಾನ್ಯ ಬೆಟ್ಟ ಗುಡ್ಡಗಳ ಲಕ್ಶಣದಂತೆ ಈ ಗುಡ್ಡಗಳಿಲ್ಲ. ಯಾವುದೇ ಬೆಟ್ಟದ ತಳಬಾಗ ಸಾಕಶ್ಟು ವಿಸ್ತಾರವಾಗಿರುತ್ತದೆ. ಏರುವಿಕೆ ನಿದಾನಗತಿಯಲ್ಲರುತ್ತದೆ. ಆದರೆ ಇಲ್ಲಿನ ಗುಡ್ಡಗಳು ಅದಕ್ಕೆ ತೀರ ವ್ಯತಿರಿಕ್ತ. ಬಯಲಿನಿಂದ ದುತ್ತನೆ ನೇರ ಎದ್ದು ನಿಲ್ಲುತ್ತವೆ ಈ ಗುಡ್ಡಗಳು.

(ಚಿತ್ರ ಸೆಲೆ: gophilippinestravel.ph, wikimedia)
(ಮಾಹಿತಿ ಸೆಲೆ: www.chocolatehills.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: