ಆಕಳಿಕೆ – ಹಲವು ರೋಚಕ ಸತ್ಯಗಳು

– ಕೆ.ವಿ.ಶಶಿದರ.

ಆಕಳಿಸದಿರುವವರೇ ಹುಟ್ಟಿಲ್ಲ ಎನ್ನುವಶ್ಟರ ಮಟ್ಟಿಗೆ ಆಕಳಿಕೆ ಸಾರ‍್ವತ್ರಿಕ. ಬೆನ್ನೆಲುಬು ಇರದ ಪ್ರಾಣಿಗಳು ಹಾಗೂ ಸಸ್ತನಿಗಳು ಆಕಳಿಸುತ್ತವೆ ಎಂಬುದು ನಿತ್ಯಸತ್ಯ. ದನಕರುಗಳು, ಬೆಕ್ಕು ನಾಯಿ ಮಂಗಗಳು, ಹುಲಿ, ಚಿರತೆ, ಸಿಂಹಗಳು, ಒಂಟೆ ಜಿರಾಪೆಗಳು, ಕತ್ತೆ-ಕುದುರೆಗಳು ಮುಂತಾದ ಎಲ್ಲವೂ ಆಕಳಿಕೆಯ ದಾಸರೆ.  ಸಾಮಾನ್ಯ ತಿಳುವಳಿಕೆಯಂತೆ, ಮಾಡುತ್ತಿರುವ ಕೆಲಸದಲ್ಲಿ ಬೇಸರವಾದರೆ ಅತವಾ ಅದರಲ್ಲಿ ಆಸಕ್ತಿ ಕಡಿಮೆಯಾದರೆ ಆಕಳಿಕೆ ತಾನೇ ತಾನಾಗಿ ಬರುತ್ತದೆ ಎಂಬುದು. ಸೋಂಬೇರಿತನದ ಕುರುಹು ಆಕಳಿಕೆ ಎಂಬುದು ಹಿರಿಯರ ಅಂಬೋಣ. ಇದು ಎಶ್ಟರ ಮಟ್ಟಿಗೆ ಸತ್ಯ? ಅನೇಕ ಕ್ರೀಡಾಪಟುಗಳು ಆಟದ ಮೈದಾನದಲ್ಲೇ ಆಕಳಿಸಿಸುವುದನ್ನು ಕಂಡಿದ್ದೇವೆ. ಕ್ರಿಕೆಟ್ ಮೈದಾನದಲ್ಲಿ ಪೀಲ್ಡರ್‍ಗಳು, ಪುಟ್‍ಬಾಲ್ ಮೈದಾನದಲ್ಲಿ ಗೋಲ್‍ಕೀಪರ್‍ಗಳು ಹೆಚ್ಚಾಗಿ ಆಕಳಿಸುತ್ತಾರೆ. ಹಾಗಾದರೆ ಅವರೂ ಸೊಂಬೇರಿಗಳೆ? ಅವರಿಗೆ ಆಟದಲ್ಲಿ ಬೇಸರ ಮೂಡಿದೆಯೇ? ಎಂಬ ಪ್ರಶ್ನೆ ಎದುರಾಗುತ್ತದೆ.

ತೂಕಡಿಕೆ ಬಂದಾಗಲೂ ಆಕಳಿಕೆ ಬರುತ್ತದೆ ಎಂಬುದು ಮತ್ತೊಂದು ಅನಿಸಿಕೆ. ಆದರೆ ಇದು ಶುದ್ದ ಸುಳ್ಳು. ಬಹಳಶ್ಟು ಜನ ರಾತ್ರಿಯಿಡೀ ಮಲಗಿ ಗೊರಕೆ ಹೊಡೆಯುತ್ತಾ ನಿದ್ದೆಮಾಡಿ ಬೆಳಿಗ್ಗೆ ಎಳುವುದೇ ಆಕಳಿಸುತ್ತಾ. ಇದು ನಿದ್ದೆ ಬರುವ ಮುನ್ಸೂಚನೆಯಂತೂ ಕಂಡಿತಾ ಅಲ್ಲ. ಬದಲಿಗೆ ನಿದ್ದೆ ಹೆಚ್ಚಾದ ಸೂಚನೆ ಇರಬಹುದೇ? ಅತವಾ ಇನ್ನೂ ನಿದ್ದೆ ಹರಿದಿಲ್ಲ ಎಂಬುದರ ಪ್ರತೀಕವೇ?

ಬೆನ್ನೆಲುಬು ಇರದ ಪ್ರಾಣಿಗಳು ಮತ್ತು ಸಸ್ತನಿಗಳು ಯಾಕಾಗಿ ಆಕಳಿಸುತ್ತವೆ ಎಂಬುದಕ್ಕೆ ಹಲವು ಹತ್ತು ವೈಜ್ನಾನಿಕ ವಿವರಣೆಯನ್ನು ಕಾಣಬಹುದು. ಆದರೆ ಯಾವುದೇ ವಿವರಣೆ ನಿಕರವಾದ ಕಾರಣವನ್ನು ಪ್ರತಿಪಾದಿಸಲು ವಿಪಲವಾಗಿದೆ. ದ್ರುಡ ವೈಜ್ನಾನಿಕ ವಿವರಣೆ ಇನ್ನೂ ಮರೀಚಿಕೆಯೇ.

ಮಾನವನ ಅತವಾ ಪ್ರಾಣಿಗಳ ದೇಹದಲ್ಲಿ ನಡೆಯಬಹುದಾದ ಈ ವಿದ್ಯಮಾನದ ಹಿಂದೆ ಹಲವು ರೋಚಕ ಸತ್ಯ ಸಂಗತಿಗಳು ಅಡಗಿವೆ.

ಆಕಳಿಕೆಗೆ ಇನ್ನೂ ಯಾವುದೇ ಸ್ಪಶ್ಟ ವೈಜ್ನಾನಿಕ ಆದಾರ ದೊರಕಿಲ್ಲ ಎಂಬುದಂತೂ ಸತ್ಯ. ದ್ವಂದ್ವ ನಿಲುವು ಹೊಂದಿರುವ ವೈದ್ಯರುಗಳು, ಆಕಳಿಕೆ ಜ್ವರದ ತೀಕ್ಶಣೆತೆಯನ್ನು ಕಡಿಮೆ ಮಾಡುವ ಒಂದು ಕ್ರಿಯೆ ಎಂದು ವ್ಯಾಕ್ಯಾನಿಸುತ್ತಾರೆ. ಆಕಳಿಕೆಯ ಮೂಲಕ ದೇಹವು ತನಗೆ ಅವಶ್ಯವಿರುವ ಹೆಚ್ಚುವರಿ ಆಮ್ಲಜನಕವನ್ನು ಪಡೆಯುವ ಮೂಲಬೂತ ಲಕ್ಶಣ ಎಂದು ವಿಜ್ನಾನಿಗಳು  ಪ್ರತಿಪಾದಿಸುತ್ತಾರೆ. ಆದರೆ ಈ ವಿಚಾರವನ್ನು ಪುಶ್ಟೀಕರಿಸಲು ಯಾವುದೇ ಸೂಕ್ತ ಸಾಕ್ಶ್ಯಾದಾರವಿಲ್ಲ.

ಮತ್ತೊಂದು ರೋಚಕ ಸಂಗತಿಯೆಂದರೆ ಬಸಿರಿನಲ್ಲಿರುವ 20 ವಾರಗಳ ಬ್ರೂಣವೂ ಆಕಳಿಸುತ್ತದಂತೆ!

ಬ್ರೂಣದ 4ಡಿ ಅಲ್ಟ್ರ ಸೌಂಡ್ ಇಮೇಜ್‍ನ ಅದ್ಯಯನಗಳ ಪ್ರಕಾರ ಅತಿ ಕಡಿಮೆ ಅಂದರೆ 11 ವಾರದ ಬ್ರೂಣಕ್ಕೂ ಆಕಳಿಕೆಯ ವಿದ್ಯೆ ಕರಗತವಾಗಿರುತ್ತದಂತೆ. ವಿಜ್ನಾನಿಗಳು ಇದನ್ನು ಮೆದುಳ ಬೆಳವಣಿಗೆಯ ಪ್ರಾರಂಬದ ಕಾರಣವೆಂದು ಗುರುತಿಸಿದ್ದಾರೆ. ಹುಟ್ಟಿದಾಗಿನಿಂದ ಆಕಳಿಸದೇ ಇರುವವರೇ ಇಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಯಾರೊಬ್ಬರು ಆಕಳಿಕೆಯ ಬಗ್ಗೆ ಚಿಂತಿಸಿದ್ದೇ ಇಲ್ಲ. ಆಕಳಿಕೆಯ ಸಮಯವೆಶ್ಟು? ಎಲ್ಲರನ್ನೂ ಕಾಡುವ ಅತಿ ಸಾಮಾನ್ಯ ಪ್ರಶ್ನೆ ಇದು. ಯಾರನ್ನಾದರೂ ಕೇಳಿದರೆ ಉತ್ತರಕ್ಕಾಗಿ ತಡಬಡಾಯಿಸುತ್ತಾರೆ. ಆಕಳಿಕೆಯ ಸರಾಸರಿ ಸಮಯ 6 ಸೆಕೆಂಡುಗಳು ಮಾತ್ರ. ಆಕಳಿಕೆಯ ಜೊತೆಗೆ ಹಾಸು ಹೊಕ್ಕಾಗಿರುವ ಮತ್ತೊಂದು ಕ್ರಿಯೆ ಹ್ರುದಯ ಬಡಿತ. ಆಕಳಿಸುವ ಸಮಯದಲ್ಲಿ ಹ್ರುದಯ ಬಡಿತ ಅಚಾನಕ್ ಆಗಿ ಹೆಚ್ಚುತ್ತದೆ.

ಆಕಳಿಕೆ ಒಂದು ರೀತಿಯಲ್ಲಿ ಸಾಂಕ್ರಾಮಿಕ

ಬದುಕಿನ ಆರಂಬದ ಮೊದಲ ಒಂದೆರೆಡು ವರ‍್ಶಗಳಲ್ಲಿ ಆಕಳಿಕೆ ಸಾಂಕ್ರಾಮಿಕವಾಗಿ ಹರಡುತ್ತದೆ. ಇದರ ಬಗ್ಗೆ ಅದ್ಯಯನ ನಡೆಸಿದವರು ಕಂಡುಕೊಂಡಂತೆ ಗುಂಪಿನ ಯಾರಾದರೊಬ್ಬರು ಆಕಳಿಸಿದರೆ ಕನಿಶ್ಟ ಗುಂಪಿನಲ್ಲಿರುವ ಅರ‍್ದಕ್ಕರ‍್ದ ಮಂದಿ ಐದು ನಿಮಿಶದ ಒಳಗಾಗಿ ತಾವು ಆಕಳಿಸುತ್ತಾರಂತೆ. ಉಳಿದರ‍್ದ ಗುಂಪಿನವರಿಗೂ ಇದರ ಸೆಳೆತ ಇರುತ್ತದಂತೆ. ಜಲಬಾದೆಯ ಸಾಂಕ್ರಾಮಿಕದಂತೆ. ಮಾನವ ಆಕಳಿಸಿದಲ್ಲಿ ಅದು ಸಾಂಕ್ರಾಮಿಕವಾಗಿ ಅವನ ಸಾಕು ನಾಯಿಯೂ ಆಕಳಿಸುತ್ತದಂತೆ. ಕೆಲವೊಂದು ಅದ್ಯಯನಗಳ ಪ್ರಕಾರ ಬಾವನಾತ್ಮಕ ಸ್ನೇಹಿತರಲ್ಲಿ ಅತವಾ/ಹಾಗೂ ಅನುವಂಶಿಕ ಜೊತೆಗಾರರಲ್ಲಿ ಆಕಳಿಕೆ ಹೆಚ್ಚು ಸಾಂಕ್ರಾಮಿಕವಂತೆ.

ಆಕಳಿಕೆಯಿಂದ ಮೆದುಳು ತಂಪಾಗುತ್ತದಂತೆ

ಇದು ಎಶ್ಟರ ಮಟ್ಟಿಗೆ ನಿಜ ಆ ದೇವರೇ ಬಲ್ಲ. ತಲೆ ಬಿಸಿಯಾದಾಗ ಆಕಳಿಸಿದವರನ್ನು ಕಂಡವರಿಲ್ಲ. ಚಳಿಗಾಲದಲ್ಲಿ ಆಕಳಿಕೆ ಹೆಚ್ಚು ಎಂಬುದು ಸತ್ಯ. ಆದರೆ ಇದಕ್ಕಾವ ಪಕ್ಕಾ ಕಾರಣವೂ ಇಲ್ಲ. ಕ್ರೀಡಾಪಟುಗಳು ಸ್ಪರ‍್ದೆಗೆ ಮುನ್ನ ಹೆಚ್ಚು ಆಕಳಿಸುತ್ತಾರಂತೆ. ಇದರಿಂದ ಹೆಚ್ಚು ಪ್ರಮಾಣದಲ್ಲಿ ಆಮ್ಲಜನಕ ದೇಹವನ್ನು ಸೇರಿ ಪಂದ್ಯಕ್ಕೆ ಅಣಿಯಾಗುವುದು ಸುಲುಬವಂತೆ. ಆಕಳಿಕೆ ಕ್ರೀಡಾಪಟುಗಳ ಮೆದುಳನ್ನು ತಂಪಾಗಿಸುವುದರಿಂದ ಮಾನಸಿಕವಾಗಿ ತಾವು ನಿರ‍್ವಹಿಸಬೇಕಿರುವ ಆಟದ ಬಗ್ಗೆ ಸಂಪೂರ‍್ಣ ಗಮನವನ್ನು ಕೇಂದ್ರೀಕರಿಸಲು ಸಹಕಾರಿಯಂತೆ.

ಆಕಳಿಕೆ ವ್ಯಕ್ತಿಗೆ ಬೋರಾದಾಗ ಸಂಬವಿಸುವುದು ಹೆಚ್ಚು. ಶಾಲಾ ಕಾಲೇಜುಗಳಲ್ಲ್ಲಿ ಪಾಟ ಪ್ರವಚನದ ವೇಳೆ ಅದರಲ್ಲಿ ಆಸಕ್ತಿ ಕುಂಟಿತವಾದಲ್ಲಿ ಆಕಳಿಕೆ ಹೆಚ್ಚು. ಆದರೆ ರಾಕ್ ಮ್ಯೂಸಿಕ್ ಕಾನ್ಸರ‍್ಟ್‍ಗಳಲ್ಲಾಗಲಿ ಮತ್ತಾವುದೇ ಹೆಚ್ಚು ಶಬ್ದವಿರುವ ಮನರಂಜಾನಾ ಕಾರ‍್ಯಕ್ರಮದಲ್ಲಾಗಲಿ ಆಕಳಿಕೆ ಹತ್ತಿರ ಸುಳಿಯುವುದಿಲ್ಲ. ಇದು ವಿಡಿಯೋ ಚಿತ್ರಗಳ ವೀಕ್ಶಣೆಗೂ ಅನ್ವಯಿಸುತ್ತದೆ.

ಹಲವು ಪ್ರಾಣಿಗಳೂ ಆಕಳಿಸುತ್ತವೆ ಎಂಬುದಂತೂ ಸತ್ಯ. ಸಸ್ತನಿಗಳಾದ ಚಿಂಪಾಂಜಿಗಳಲ್ಲಿ, ಬಬೂನ್‍ಗಳಲ್ಲಿ ಆಕಳಿಕೆ ಹೆಚ್ಚು. ಆಕಳಿಕೆ ದೇಹದಲ್ಲಿ ನಡೆಯುವ ಪ್ರಕ್ರುತಿದತ್ತವಾದ ಒಂದು ಕ್ರಿಯೆ. ಅತಿ ಹೆಚ್ಚು ಆಕಳಿಕೆ ಹ್ರುದಯ ಸಂಬಂದಿ ಕಾಯಿಲೆಯ ಅತಿ ಅಪರೂಪದ ಲಕ್ಶಣ ಎಂದು ಬಾವಿಸುವವರೂ ಇದ್ದಾರೆ. ಇದು ಮೆದುಳಿಗೆ ಸಂಬಂದಿಸಿದ ಕಾಯಿಲೆಯ ಲಕ್ಶಣವೂ ಆಗಿರುವ ಸಾದ್ಯತೆಯಿದೆ ಎಂದು ಕೆಲವೊಂದು ಅದ್ಯಯನಗಳು ಹೇಳುತ್ತವೆ. ಇದಕ್ಕೆ ಪೂರಕವಾದ ಯಾವುದೇ ವೈಜ್ನಾನಿಕ ತಳಹದಿಯಿಲ್ಲ.

(ಮಾಹಿತಿ ಸೆಲೆ: examinedexistence.com)
(ಚಿತ್ರ ಸೆಲೆ: maxpixel)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: