ಮಾಡಿನೋಡಿ ರುಚಿಯಾದ ಬದನೆಕಾಯಿ ಎಣ್ಣೆಗಾಯಿ

– ಪ್ರತಿಬಾ ಶ್ರೀನಿವಾಸ್.

ಬೇಕಾಗುವ ಸಾಮಾಗ್ರಿಗಳು

ಬದನೆಕಾಯಿ – 6-8 (ಸಣ್ಣ ಗಾತ್ರದ್ದು)
ಈರುಳ್ಳಿ – 1
ಕರಿಬೇವು – 10-15 ಎಸಳು
ಹುಣಸೇಹಣ್ಣು – ಗೋಲಿಗಾತ್ರದಶ್ಟು
ಬೆಲ್ಲ – 1 ಟೀ ಚಮಚ
ಎಣ್ಣೆ – 10-12 ಚಮಚ

ಮಸಾಲೆ ತಯಾರಿಸಿಕೊಳ್ಳಲು ಬೇಕಾಗುವ ಸಾಮಾಗ್ರಿಗಳು

ಒಣಮೆಣಸು – 10 ರಿಂದ 12, ಕೊಬ್ಬರಿ ತುರಿ – 1/4 ಲೋಟ, ದನಿಯಾ – 2 ಚಮಚ, ಜೀರಿಗೆ – 1 ಚಮಚ, ಚಕ್ಕೆ – 1 ಇಂಚು, ಕರಿಎಳ್ಳು – 1 ಚಮಚ, ಕಡಲೇಬೇಳೆ – 2 ಚಮಚ, ಉದ್ದಿನಬೇಳೆ – 1/2 ಚಮಚ, ಮೆಂತೆ – 1/4 ಚಮಚ, ಲವಂಗ – 2, ಅರಿಶಿನ – ಚಿಟಿಕೆ.

ಮಾಡುವ ಬಗೆ:

ಬಾಣಲೆಯನ್ನು ಬಿಸಿ ಮಾಡಿ, ಮೇಲೆ ಹೇಳಿರುವ ಎಲ್ಲಾ ಮಸಾಲೆ ಪದಾರ‍್ತಗಳನ್ನು ಒಂದೊಂದಾಗಿ ಹುರಿದು ಬಳಿಕ ಚೂರು ನೀರು ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು.

ಬದನೆಕಾಯಿಯನ್ನು 4 ಬಾಗಗಳಾಗಿ ಸೀಳಬೇಕು (ಹೋಳು ಬೇರೆಯಾಗಬಾರದು), ಇದಕ್ಕೆ ರುಬ್ಬಿದ ಮಸಾಲೆಯನ್ನು ತುಂಬಬೇಕು. ಬಳಿಕ ಒಂದು ಬಾಣಲೆಗೆ 4-5 ಚಮಚ ಎಣ್ಣೆ ಹಾಕಿ ಕಾದ ನಂತರ ಸಾಸಿವೆ, ಕರಿಬೇವು, ಈರುಳ್ಳಿ ಹಾಕಿ ಬಾಡಿಸಿಕೊಂಡ ಮೇಲೆ ಮಸಾಲೆ ತುಂಬಿದ ಬದನೆಕಾಯಿ, ಚೂರು ನೀರು, ಹುಣಸೇಹುಳಿ, ಬೆಲ್ಲ, ಉಪ್ಪು ಹಾಕಿ ಸಣ್ಣ ಉರಿಯಲ್ಲಿ ತಿರುವಿ ಹಾಕುತ್ತಾ ಬೇಯಿಸಿದರೆ ಬದನೆಕಾಯಿ ಎಣ್ಣೆಗಾಯಿ ಸಿದ್ದ. ರೊಟ್ಟಿ, ಚಪಾತಿ, ಅನ್ನದ ಜೊತೆ ಇದನ್ನು ತಿನ್ನಲು ತುಂಬಾ ಚೆನ್ನಾಗಿರುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: