ಬೆಕ್ಕುಗಳ ಕುರಿತು ಕೆಲವು ಅಪರೂಪದ ಸಂಗತಿಗಳು

– ನಾಗರಾಜ್ ಬದ್ರಾ.

ಸಾಮಾನ್ಯವಾಗಿ ಮನುಶ್ಯರಲ್ಲಿ ಬೇರೊಬ್ಬರೊಂದಿಗೆ ಹೋಲಿಕೆ ಆಗದ ಗುರುತು ಎಂದರೆ ಬೆರಳಚ್ಚು. ಪ್ರತಿಯೊಬ್ಬರ ಬೆರಳಚ್ಚು ಕೂಡ ಬೇರೆ ಬೇರೆ ಆಗಿದ್ದು, ಇನ್ನೊಬ್ಬರ ಬೆರಳಚ್ಚಿಗೆ ಹೊಂದಾಣಿಕೆ ಆಗುವ ಯಾವುದೇ ಪ್ರಕರಣ ಇಂದಿನವರೆಗೆ ಬೆಳಕಿಗೆ ಬಂದಿಲ್ಲ. ಈ ಅಪರೂಪದ ಸಂಗತಿಯನ್ನು ಅರಿಮೆಗಾರರು ಹಲವಾರು ವರ‍್ಶಗಳ ಹಿಂದೆಯೇ ಕಂಡುಹಿಡಿದ್ದಾರೆ. ಹಾಗೆಯೇ ಸಾಕುಪ್ರಾಣಿ ಬೆಕ್ಕು ಕೂಡ ಇದೇ ರೀತಿಯ ಒಂದು ಅಪರೂಪದ ಗುಣಲಕ್ಶಣವನ್ನು ಹೊಂದಿದೆ ಎಂದರೆ ಬೆರಗಾಗಬಹುದಲ್ಲವೇ?

ಅರಕೆಗಳ ಪ್ರಕಾರ 2008ರಲ್ಲಿ ಮೊದಲ ಬಾರಿಗೆ ರಯಾನ್ ಸ್ಟ್ರೀಟ್ ಎಂಬ ಯುವಕನು ಬೆಕ್ಕಿನ ಮೂಗಿನ ಗೆರೆಗಳು ಹೋಲಿಕೆ ಆಗುವುದಿಲ್ಲ ಎಂದು ಕಂಡುಹಿಡಿದನು. ಅದು ಹೇಗೆ? ಬೆಕ್ಕಿನ ಮೂಗನ್ನು ಒಮ್ಮೆ ತುಂಬಾ ಹತ್ತಿರದಿಂದ ನೋಡಿ. ಅದರ ಮೂಗಿನ ತುದಿಯ ಹತ್ತಿರ ಚಿಕ್ಕ ಉಬ್ಬುಗಳು ಹಾಗೂ ಏಣುಗೆರೆಗಳು (ridges) ಕಾಣಿಸುತ್ತವೆ. ಇವುಗಳು ಪ್ರತಿ ಬೆಕ್ಕಿನಲ್ಲಿ ಬೇರೆ ಬೇರೆಯಾಗಿದ್ದು, ಇದನ್ನು ಮನುಶ್ಯನ ಬೆರಳಚ್ಚುಗಳಂತೆ ಬೆಕ್ಕುಗಳನ್ನು ಗುರುತಿಸಲು ಬಳಸಬಹುದು.

ಸಾಕುಪ್ರಾಣಿಗಳನ್ನು ಗುರುತಿಸಲು ಈಗಿನ ದಿನಗಳಲ್ಲಿ ಬಳಸುತ್ತಿರುವ ವಿದಾನ ಎಂದರೆ ಮೈಕ್ರೋಚಿಪ್ಅನ್ನು(microchip) ಸಾಕುಪ್ರಾಣಿಗಳ ಮೈ ಒಳಗಡೆ ಸೇರಿಸುವುದು. ಆದರೆ ಈ ಮೈಕ್ರೋಚಿಪ್ಅನ್ನು ಯಾರಾದರೂ ಕೂಡ ಸಲೀಸಾಗಿ ತೆಗೆದುಹಾಕಬಹುದು, ಅದಲ್ಲದೇ ಇದನ್ನು ಕೆಲಸ ಮಾಡದಂತೆ ಕೂಡ ಮಾಡಬಹುದು. ಮುಂದಿನ ದಿನಗಳಲ್ಲಿ ಮಂದಿ ಬೆಕ್ಕುಗಳನ್ನು ಗುರುತಿಸಲು ಮೈಕ್ರೋಚಿಪ್‍ಗಳ ಬದಲಿಗೆ ಮೂಗಿನ ಸ್ಕ್ಯಾನರ್‍ಅನ್ನು(scanner) ಬಳಸಿದರೆ ಅಚ್ಚರಿ ಪಡಬೇಕಿಲ್ಲ. ಬೆಕ್ಕುಗಳನ್ನು ಸಾಕುವುದಿದ್ದರೆ ಬೆಕ್ಕಿನ ಮೂಗನ್ನು ಸ್ಕ್ಯಾನ್ ಮಾಡಿ ಇಟ್ಟುಕೊಂಡರೆ ಸಾಕು, ಬೆಕ್ಕುಗಳು ಕಳೆದು ಹೋದಾಗ ಹಾಗೂ ಇತರೆ ಪ್ರಕ್ರುತಿ ವಿಕೋಪಗಳು ಸಂಬವಿಸಿದ ಸಮಯದಲ್ಲಿ ಅವುಗಳ ಸರಿಯಾದ ಒಡೆಯಯನ್ನು ಹುಡುಕಲು ಸಹಾಯ ಆಗುತ್ತವೆ. ಇದು ಮೈಕ್ರೋಚಿಪ್‍ಗಿಂತ ಕಡಿಮೆ ವೆಚ್ಚದಾಯಕವಾಗಿದ್ದು, ಪ್ರಾಣಿಗಳಿಗೆ ಆಗುವ ನೋವು ಕೂಡ ಕಡಿಮೆ.

ಬೆಕ್ಕುಗಳ ಕುರಿತ ಇನ್ನೂ ಕೆಲವು ಅಪರೂಪದ ಸಂಗತಿಗಳು ಇಲ್ಲಿವೆ.

ಬೆಕ್ಕುಗಳು ಒಂದು ನಂಬಲಾಗದ ವಾಸನೆಯ ಅರಿವನ್ನು(sense)  ಹೊಂದಿವೆ

ಬೆಕ್ಕುಗಳ ಬಾಯಿಯ ಮೇಲ್ಬಾಗದಲ್ಲಿ ವಾಸನೆಯನ್ನು ಕಂಡಿಹಿಡಿಯಬಲ್ಲ ಒಂದು ಅಪರೂಪದ ರಚನೆ ಇದ್ದು, ಅದನ್ನು ವಾಮೊರೊನಾಸಲ್ ಅಂಗ(vomeronasal organ) ಅತವಾ ಜಾಕೋಬ್ಸನ್ಸ್ ಅಂಗ(Jacobson’s organ) ಎಂದು ಕರೆಯುತ್ತಾರೆ. ವಾಮೊರೊನಾಸಲ್ ಅಂಗ ಒಂದು ಕೊಳವೆಯನ್ನು ಹೊಂದಿದ್ದು, ಅದು ಬೆಕ್ಕಿನ ಬಾಯಿ ಹಾಗೂ ಮೂಗಿನ ನಡುವೆ ದಾರಿ ಮಾಡಿಕೊಡುತ್ತದೆ. ಅರಿಮೆಗಾರರ ಪ್ರಕಾರ ಇದು ಒಂದು ವಾಸನೆಯ ಒರೆಹಚ್ಚುಕ (analyzer) ಆಗಿದ್ದು, ಪ್ರಾಣಿಗಳ ಮೈಯ ವಾಸನೆಯನ್ನು ದೂರದಿಂದಲೇ ಕಂಡುಹಿಡಿಯಬಲ್ಲದು. ಬೆಕ್ಕುಗಳು ಸುಮಾರು 200 ಮಿಲಿಯನ್ ಪಡೆಕಗಳನ್ನು(receptors) ಹೊಂದಿದ್ದು. ಇವುಗಳ ವಾಸನೆಯ ಅರಿವು ಮನುಶ್ಯನಿಗಿಂತ 14 ಪಟ್ಟು ಹೆಚ್ಚು ಸೂಕ್ಶ್ಮವಾಗಿದೆ.

ಬೆಕ್ಕು ಹಾಗೂ ಮನುಶ್ಯನ ನಡುವಿನ ಸಂಬಂದ ತುಂಬಾ ಹಳೆಯದು

ಬೆಕ್ಕು ಹಾಗೂ ಮನುಶ್ಯನ ನಡುವೆ ಸುಮಾರು 12,000 ವರ‍್ಶಗಳ ಹಳೆಯ ನಂಟಿದೆ. ಬೆಕ್ಕುಗಳು ಮನುಶ್ಯನ ಜೊತೆಯಲ್ಲಿ ಬದುಕುತ್ತಿದ್ದವು ಎಂಬುದಕ್ಕೆ ಪಳಲರಿಮೆ(archaeological) ಪುರಾವೆ ಸಿಕ್ಕಿದ್ದು ಮೆಡಿಟರೇನಿಯನ್(Mediterranean) ದ್ವೀಪದ ಸೈಪ್ರಸ್(Cyprus) ಎಂಬಲ್ಲಿ. ಈ ದ್ವೀಪದಲ್ಲಿ ಕ್ರಿಸ್ತಪೂರ‍್ವ 7500ರಲ್ಲಿಯೇ ಬೆಕ್ಕುಗಳನ್ನು ಒಳಗೊಂಡಂತೆ ಇತರೆ ಹಲವಾರು ಪ್ರಾಣಿಗಳು ಕೂಡ ಬದುಕುತ್ತಿದ್ದವು ಎಂಬುವುದಕ್ಕೆ ಹಲವಾರು ಪುರಾವೆಗಳು ಸಿಕ್ಕಿವೆ. ಆದ್ದರಿಂದಲೇ ಬೆಕ್ಕುಗಳು ಮನುಶ್ಯನಿಗೆ ತುಂಬಾ ಹತ್ತಿರವಾಗಿವೆ. ಸಾಮಾನ್ಯವಾಗಿ ಮನುಶ್ಯನು ಸಾಕುವ ಪ್ರಾಣಿಗಳ ಪಟ್ಟಿಯಲ್ಲಿ ಬೆಕ್ಕು ಮುಂಚೂಣಿಯಲ್ಲಿ ನಿಲ್ಲುತ್ತದೆ.

ಬೆಕ್ಕುಗಳು ನಿದ್ದೆಯಲ್ಲಿ  ಕುಂಬಕರ‍್ಣನ ನೆಂಟರು

ಬೆಕ್ಕುಗಳು ತಮ್ಮ ಜೀವನದ ಶೇಕಡಾ 70 ರಶ್ಟು ಸಮಯವನ್ನು ನಿದ್ದೆ ಮಾಡುವುದರಲ್ಲಿಯೇ ಕಳೆಯುತ್ತವೆ. ಯಾಕೆಂದರೆ ಬೆಕ್ಕುಗಳಿಗೆ ಬೇಟೆಯಾಡಲು ತುಂಬಾ ಶಕ್ತಿ ಬೇಕು. ಆದ್ದರಿಂದ ಇವುಗಳು ದಿನಕ್ಕೆ 13 ರಿಂದ 14 ಗಂಟೆಗಳ ಕಾಲ ಮಲಗುವ ಮೂಲಕ ಶಕ್ತಿಯನ್ನು ಉಳಿಸಿಕೊಳ್ಳುತ್ತವೆ.

ಬೆಕ್ಕುಗಳು ಬೇರೆ ಬೇರೆ ರೀತಿಯ ಸಪ್ಪಳ ಮಾಡುವುದರಲ್ಲಿ ನಾಯಿಗಳನ್ನೇ ಮೀರಿಸಬಲ್ಲವು

ಬೆಕ್ಕುಗಳ ಹಲವಾರು ಬಗೆಯ ಸಪ್ಪಳಗಳನ್ನು ನಾವು ಕೂಡ ಕೇಳಿರುತ್ತಿವಿ. ಇವುಗಳು ಒಂದೊಂದು ವಿಶಯಕ್ಕೆ ಸಂಬಂದಿಸಿದಂತೆ ಒಂದೊಂದು ರೀತಿಯ ಸಪ್ಪಳಗಳನ್ನು ಮಾಡುತ್ತವೆ. ನಾಯಿಗಳು ಕೇವಲ 10 ಬೇರೆ ಬೇರೆ ರೀತಿಯ ಸಪ್ಪಳಗಳನ್ನು ಮಾಡಿದ್ದರೆ, ಬೆಕ್ಕುಗಳು ಸುಮಾರು 100 ಬೇರೆ ಬೇರೆ ರೀತಿಯ ಸಪ್ಪಳಗಳನ್ನು ಮಾಡಬಲ್ಲವು.

ಬೆಕ್ಕುಗಳು ಓಟದಲ್ಲಿ ಉಸೇನ್ ಬೋಲ್ಟ್ ಅವರನ್ನು ಮೀರಿಸಬಲ್ಲವು

ಬೆಕ್ಕುಗಳು ಇಲಿಯನ್ನು ಎಶ್ಟು ವೇಗದಲ್ಲಿ ಓಡಿ ಹಿಡಿದ್ದು ಬೇಟೆಯಾಡುತ್ತವೆ ಎಂದು ನಾವು ನೋಡಿದ್ದೇವೆ. ಇವುಗಳು ಓಟದಲ್ಲಿ ಉಸೇನ್ ಬೋಲ್ಟ್  ಅವರನ್ನೇ ಮೀರಿಸಬಲ್ಲವು. ಉಸೇನ್ ಬೋಲ್ಟ್ ಪ್ರತಿ ಗಂಟೆ 28 ಮೈಲಿಗಳಶ್ಟು ವೇಗವಾಗಿ ಓಡಬಲ್ಲ. ಆದರೆ ಬೆಕ್ಕುಗಳು ಪ್ರತಿ ಗಂಟೆಗೆ ಸುಮಾರು 30 ಮೈಲಿಗಳಶ್ಟು ವೇಗವಾಗಿ ಓಡುತ್ತವೆ.

  • ವಿಶ್ವದಾದ್ಯಂತ ಅತಿ ಹೆಚ್ಚು ಸಾಕುವ ಪ್ರಾಣಿಯ ಪಟ್ಟಿಯಲ್ಲಿ ಬೆಕ್ಕು ಎರಡನೆಯ ಜಾಗದಲ್ಲಿದ್ದು, ಮೀನುಗಳು ಮೊದಲನೆಯ ಜಾಗದಲ್ಲಿವೆ.
  • ಅಮೇರಿಕ ದೇಶದಲ್ಲಿ ಸಾಮಾನ್ಯವಾಗಿ ಕಂಡುಬರುವ ಸಾಕುಪ್ರಾಣಿ ಎಂದರೆ ಬೆಕ್ಕು. ಇದು ಅಮೇರಿಕದಲ್ಲಿ ನಾಯಿಗಳಿಗಿಂತ ಹೆಚ್ಚು ಮಂದಿಮೆಚ್ಚುಗೆ ಪಡೆದಿದೆ. ಅಮೇರಿಕದಲ್ಲಿ ಸುಮಾರು 88 ಮಿಲಿಯನ್ ಬೆಕ್ಕುಗಳು ಕಂಡುಬಂದರೆ, 74 ಮಿಲಿಯನ್ ನಾಯಿಗಳು ಕಂಡುಬರುತ್ತವೆ.
  • ಸುಮಾರು 320 ಮೀಟರ್ ಎತ್ತರದಿಂದ ಬಿದ್ದರೂ ಬೆಕ್ಕುಗಳಿಗೆ ಏನೂ ಆಗುವುದಿಲ್ಲ. ಇವುಗಳ ಬಾಲವು ಎತ್ತರದಿಂದ ಬೀಳುವಾಗ ಅದರ ಮೈಯನ್ನು ಸರಿದೂಗಿಸುವುದಲ್ಲದೇ ಗಾಳಿಕೊಡೆಯ (parachute) ಹಾಗೆ ಕೆಲಸ ಮಾಡುತ್ತದೆ. ಇದರಿಂದಾಗಿ ಎತ್ತರದಿಂದ ಬಿದ್ದಾಗ ಆಗುವ ಕೆಡುಕಿನಿಂದ ಪಾರಾಗುತ್ತವೆ.
  • ಅರಿಮೆಗಾರರ ಪ್ರಕಾರ ಸಾಕುಬೆಕ್ಕುಗಳು 12 ರಿಂದ 15 ವರುಶಗಳ ಕಾಲ ಬದುಕಿದರೆ ಕಾಡುಬೆಕ್ಕುಗಳು 4 ರಿಂದ 5 ವರುಶಗಳ ಕಾಲ ಬದುಕುತ್ತವೆ.
  • ಸಾಮಾನ್ಯವಾಗಿ ಮನುಶ್ಯರು ಒಬ್ಬರಿಗೊಬ್ಬರು ಕೈಕುಲುಕುವ ಮೂಲಕ ಎದುರುಗೊಳ್ಳುತ್ತಾರೆ (greet). ಆದರೆ ಬೆಕ್ಕುಗಳು ಪರಸ್ಪರ ಮೂಗನ್ನು ಮುಟ್ಟುವ ಮೂಲಕ ಎದುರುಗೊಳ್ಳುತ್ತವೆ.
  • ಬೆಕ್ಕುಗಳ ಬೆವರು ಪಂಜಗಳ ಮೂಲಕ ಹೊರಬರುತ್ತದೆ. ಆದ್ದರಿಂದಲೇ ಬೇಸಿಗೆಯ ದಿನಗಳಲ್ಲಿ ಬೆಕ್ಕುಗಳು ನಡೆದ್ದಾಗ ಕೊಂಚ ನೆನೆದು ಒದ್ದೆಯಾದ ಪಂಜಗಳ ಗುರುತುಗಳು ಕಾಣಿಸಿಕೊಳ್ಳುತ್ತವೆ.
  • 1963ರಲ್ಲಿ ಮೊಟ್ಟಮೊದಲ ಬಾರಿಗೆ ಬಾನಿಗೆ(space) ಪ್ರೆಂಚ್ ದೇಶದ ಪೆಲಿಸಿಟಿ (Felicette) ಎಂಬ ಹೆಸರಿನ ಬೆಕ್ಕು ಒಂದನ್ನು ಕರೆದುಕೊಂಡು ಹೋಗಲಾಗಿತ್ತು. ಇದರ ಮಿದುಳಿನಲ್ಲಿ ಅಳವಡಿಸಲಾಗಿದ ಎಲೆಕ್ಟ್ರೋಡ್‍ಗಳು ನರ ಅರಿಮೆಯ (neurological) ಸುಳಿವುಗಳನ್ನು (signals) ನೆಲಕ್ಕೆ ಕಳುಹಿಸುತ್ತಿದ್ದವು. ಈ ಬೆಕ್ಕನ್ನು ಅಸ್ಟ್ರೋಕ್ಯಾಟ್ (Astrocat) ಎಂದೇ ಕರೆಯುತ್ತಾರೆ.
  • ಸಾಮಾನ್ಯವಾಗಿ ಹೆಣ್ಣು ಬೆಕ್ಕುಗಳು ಬಲಗೈ ಪಂಜುದಾರರಾಗಿದ್ದು (right-pawed), ಗಂಡು ಬೆಕ್ಕುಗಳು ಎಡಗೈ ಪಂಜುದಾರರಾಗಿರುತ್ತವೆ.

( ಮಾಹಿತಿ ಮತ್ತು ಚಿತ್ರ ಸೆಲೆ: animalbliss.com, catster.com, morrisanimalinn.com, buzzfeedsheltercatsandkittens.compexels.com )

 

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. Sir,

    ಸುಮಾರು 320 ಮೀಟರ್ ಎತ್ತರದಿಂದ ಬಿದ್ದರೂ ಬೆಕ್ಕುಗಳಿಗೆ ಏನೂ ಆಗುವುದಿಲ್ಲ. ಇವುಗಳ ಬಾಲವು ಎತ್ತರದಿಂದ ಬೀಳುವಾಗ ಅದರ ಮೈಯನ್ನು ಸರಿದೂಗಿಸುವುದಲ್ಲದೇ ಗಾಳಿಕೊಡೆಯ (parachute) ಹಾಗೆ ಕೆಲಸ ಮಾಡುತ್ತದೆ. ಇದರಿಂದಾಗಿ ಎತ್ತರದಿಂದ ಬಿದ್ದಾಗ ಆಗುವ ಕೆಡುಕಿನಿಂದ ಪಾರಾಗುತ್ತವೆ.

    320 meters is taller than Jog falls, is it true?

  2. Vinay Kumar S says:

    ಬೆಕ್ಕು ಕಳೆದುಹೋದರೆ ತಿರುಗಿ ಮನೆ ತನ್ನ ಮನೆಯನ್ನು ಹುಡಿಕಿಕೊಂಡು ಬರುತ್ತದೆ ಯೇ.

ಅನಿಸಿಕೆ ಬರೆಯಿರಿ:

%d bloggers like this: