‘ರಕ್ಶಾ ಬಂದನ’ – ಅಣ್ಣ ತಂಗಿಯರ ಬಾಂದವ್ಯಕ್ಕೊಂದು ಸಂಬ್ರಮ

ಪ್ರಜ್ವಲಾ.ಆರ್.ಮುಜಗೊಂಡ.

ಹಾಲು-ಜೇನಿನ ಸಂಬಂದಕ್ಕೊಂದು ಸಂಬ್ರಮ, ಚಂದ್ರ ನೈದಿಲೆಯ ಸಂಬಂದಕ್ಕೊಂದು ಸಂಬ್ರಮ, ಪ್ರಕ್ರುತಿಯ ಮಡಿಲಿನ ಪ್ರತಿ ಅಣು ಅಣುವಿಗೆ ತನ್ನ ಸಂಬಂದದ ಸಂಬ್ರಮ, ಹಾಗೆಯೇ ಅಣ್ಣ-ತಂಗಿಯ ಸಂಬಂದಕ್ಕೊಂದು ಸಂಬ್ರಮ. ಹೀಗೆ ಸಂಬ್ರಮದ ಸಂಬಂದಕ್ಕೊಂದು ಸಾಕ್ಶಾತ್ಕಾರವೇ, ಸಂಸ್ಕ್ರುತಿ ನೀಡಿರುವ ಒಂದು ಸಮಾರಂಬವೇ ರಕ್ಶಾ ಬಂದನ. ಇದು ಕೇವಲ ಸಂಬ್ರಮವಲ್ಲ, ಸಾವಿರಾರು ಸಂಬಂದಗಳಿಗಿಂತ ಹೆಚ್ಚಾದದ್ದು. ಅದಕ್ಕೆ ಕೊನೆಯಿಲ್ಲ, ಆದಿ ಅಂತ್ಯದ ಮಾತಿಲ್ಲ, ಅಣ್ಣ-ತಂಗಿಯ ಸಂಬದದ ಈ ಸಂಬ್ರಮಕ್ಕೆ ಅಳಿವಿಲ್ಲ. ಈ ಬಾಂದವ್ಯಕ್ಕೆ ನೀಡುವ ಗೌರವ, ಆದ್ಯತೆ, ಮರ‍್ಯಾದೆ ಅಂತಿಂತದಲ್ಲ.

ತಂದೆಯ ಕಾಳಜಿ, ತಾಯಿಯ ಮಮತೆ, ಸ್ನೇಹಿತರ ಗೆಳೆತನ, ಮಗುವಿನ ಮುಗ್ದತೆ ಹೀಗೆ ಎಲ್ಲವನ್ನೂ ಒಂದೇ ಸಂಬಂದದಲ್ಲೆ ಸವಿಯುವ ಬಾಂದವ್ಯವೇ ಈ ಸಹೋದರತ್ವ. ಈ ಸಂಬಂದಕ್ಕೆ ಸವಿ ಕಾಣಿಕೆ ಈ ಹಬ್ಬ. ಬೇರೆ ಸಂಬಂದಗಳಿಗೆ ಸಾವಿರಬಹುದೇನೋ, ಆದರೆ ಸಾವಿಲ್ಲದ ಈ ಸಹೋದರತ್ವದ ಸಂಬಂದ ಶಾಶ್ವತವಾದುದು, ಸಾರ‍್ವಕಾಲಿಕವಾದುದು. ಸಹೋದರ ಸಂಬಂದ ನೀಡುವ ಪ್ರೀತಿ, ಮಮತೆ, ಕಾಳಜಿ, ಕರುಣೆ, ಮುಗ್ದತೆ, ಬರವಸೆ ಜೀವನದ ಬೇರೆ ಯಾವ ಸಂಬಂದವೂ ನೀಡುವುದಿಲ್ಲ.

ಪ್ರತಿಯೊಬ್ಬ ತಂಗಿಗೆ ಅಣ್ಣ ಹೇಳುವ ಮಾತು ಕೇವಲ ಮಾತಲ್ಲ, ಅದು ಬರವಸೆಯ ಮೊದಲ ಮೆಟ್ಟಿಲು. ಆ ಮಾತು ಸಂಬಂದವನ್ನು ಕಾಯುವ ಕೀಲಿಕೈ. ಹಾಗೆಯೇ ತಂಗಿ ಹೇಳುವ ನುಡಿ ಅದು ಕೇವಲ ನುಡಿಯಲ್ಲ, ಅದು ಮಮತೆಯ ಕುಲುಮೆ. ಹೀಗೆಯೇ ತಂಗಿ ಯಾರ ಮುಂದೆಯೂ ಹೇಳಲಾಗದ ತನ್ನ ನೋವನ್ನು ಅಣ್ಣನ ಮುಂದೆ ಹೇಳಿಕೊಳ್ಳುವಳು.ಯಾಕೆಂದರೆ, ಬೇರೆ ಯಾವ ಸಂಬಂದವೂ ನೀಡದ ಬರವಸೆ ಸಹೋದರತ್ವ ನೀಡುವುದು. ಅಣ್ಣನ ಪ್ರೀತಿ ಸಾರ‍್ವಕಾಲಿಕವಾದುದು. ಸತ್ಯ, ಗೌರವ, ಸಮ್ಮಾನಕ್ಕೆ ಹಾದಿಯಾದುದು.

ಬಾನಿಗೆ ಚಂದ್ರ ಒಂದು ಉಡುಗೊರೆ, ವಸಂತ ರುತು ಕೋಗಿಲೆಗೊಂದು ಉಡುಗೊರೆ, ಸಂಬಂದಕ್ಕೆ ಅಣ್ಣ ತಂಗಿಯ ಬಾಂದವ್ಯವು ಉಡುಗೊರೆ. ಈ ಸಂಬಂದದಲ್ಲಿ ಅಣ್ಣನು ತಂಗಿಯ ಜೀವಕ್ಕೆ ರಕ್ಶಣೆ ನೀಡುವನೆಂಬ ಬರವಸೆಯ ಪ್ರತೀಕವೇ ಈ ರಾಕಿ ಕಟ್ಟುವುದು. ಹೀಗೆ ಸಾವಿರ ಸಂಬಂದಗಳಿಗಿಂತ ಮಿಗಿಲಾದುದು ಅಣ್ಣ-ತಂಗಿಯರ ಸಂಬಂದ. ಮಿಕ್ಕ ಸಂಬಂದಗಳ ಮುಂದೆ ಇದು ಹೆಮ್ಮರ. ಈ ಹೆಮ್ಮರ ಮೇಲೆ ಕಾಣುವಂತೆ ವಿಶಾಲವಾದುದು, ಆಳಕ್ಕಿಳಿದಂತೆ ಸದ್ರುಡವಾದುದು. ಈ ಸಂಬಂದಕ್ಕೊಂದು ಸಂಬ್ರಮವೇ “ಈ ರಕ್ಶಾ ಬಂದನ”

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: