ಎಂತವರನ್ನೂ ಹೆದರಿಸುವ ‘ಮಾಟಗಾತಿಯರ ಬೆಟ್ಟ!’

– ಕೆ.ವಿ.ಶಶಿದರ.

ಲಿತುವೇನಿಯಾದ ಜುಡೊಕ್ರಾಂಟೆಯಲ್ಲಿದೆ ಈ ಮಾಟಗಾತಿಯರ ಬೆಟ್ಟ ಅರ‍್ತಾತ್ ಜೋನಾಸ್ ಮತ್ತು ಐವಾಸ್ ಬೆಟ್ಟ. ಒಂದಾನೊಂದು ಕಾಲದಲ್ಲಿ ದೊಡ್ಡ ಮರಳಿನ ದಿಬ್ಬವಾಗಿದ್ದ ಈ ಮಾಟಗಾತಿಯರ ಬೆಟ್ಟ ಇಂದು ವಿಶ್ವವಿಕ್ಯಾತ. ಬೆಟ್ಟದ ಮೇಲೆ ನಿಂತು ಸುತ್ತಲೂ ಕಣ್ಣಾಡಿಸಿದರೆ ಬಾಲ್ಟಿಕ್ ಸಮುದ್ರ ಒಂದು ದಿಕ್ಕಿನಲ್ಲಿ ಕಂಡರೆ ಮತ್ತೊಂದರಲ್ಲಿ ನೀರಿನ ಕೊಲ್ಲಿಯನ್ನು ಕಾಣಬಹುದು. ದೇವದಾರು ಮರಗಳು ಈ ದಿಬ್ಬವನ್ನು ಸಂಪೂರ‍್ಣವಾಗಿ ಆಕ್ರಮಿಸಿಕೊಂಡಿದ್ದು ಕಣ್ಣಿನ ನೋಟ ಎಶ್ಟು ಎತ್ತರಕ್ಕೆ ಹೋಗುತ್ತದೋ ಅಶ್ಟು ಎತ್ತರಕ್ಕೆ ಅವು ಬೆಳೆದು ನಿಂತಿವೆ. ಅದರ ತುದಿಯಲ್ಲಿ ಬೀಸುವ ಗಾಳಿ ಆ ಮರಗಳನ್ನು ಪಿಸುಗುಡುವಂತೆ ಮಾಡಿದೆ. ಮರದಡಿಯಲ್ಲಿ ನಿಂತರೆ ಪಿಸುಗುಡುವುದನ್ನು ಆಲಿಸಬಹುದು.

ಲಿತುವೇನಿಯಾ ಉತ್ತರ ಯೂರೋಪ್‍ನ ಮೂರು ಬಾಲ್ಟಿಕ್ ರಾಜ್ಯಗಳಲ್ಲಿ ಒಂದು. ಇದು ಬಾಲ್ಟಿಕ್ ಸಮುದ್ರದ ಆಗ್ನೇಯ ಕರಾವಳಿಯಲ್ಲಿದೆ. ಸುತ್ತಲೂ ಲಾಟ್ವಿಯಾ, ಬೆಲಾರಸ್, ಪೊಲೆಂಡ್ ರಾಜ್ಯಗಳಿವೆ. ಲಿತುವೇನಿಯಾ 2.8 ಮಿಲಿಯನ್ ಜನಸಂಕ್ಯೆಯುಳ್ಳ 65.3 ಚದರ ಕಿ.ಮೀ. ವಿಸ್ತಾರದ ಪುಟ್ಟ ರಾಜ್ಯ. ಜುಡೊಕ್ರಾಂಟೆ ಲಿತುವೇನಿಯಾದ ಕರಾವಳಿಯಲ್ಲಿನ ಕ್ಯುರೋನಿಯನ್ ದ್ವೀಪದಲ್ಲಿ ನಿದ್ರಾವಸ್ತೆಯಲ್ಲಿರುವಂತಹ ಚಿಕ್ಕಹಳ್ಳಿ. ಈ ಹಳ್ಳಿ ಸುಂದರವಾದ ಮರಳಿನ ದಿಬ್ಬಗಳಿಂದ ಮತ್ತು ಅದ್ಬುತ ದೇವದಾರು (ಪೈನ್) ಮರಗಳ ಕಾಡಿನಿಂದ ಆವ್ರುತವಾಗಿದೆ. ಇಲ್ಲಿಗೆ ತಲುಪಲು ಇರುವ ಒಂದೇ ಮಾರ‍್ಗವೆಂದರೆ ದೋಣಿಗಳು ಮಾತ್ರ.

ಇಲ್ಲಿ ಸಿಗುವಶ್ಟು ದೆವ್ವದ ಕತೆಗಳು ನಿಮಗೆ ಬೇರೆಲ್ಲೂ ಸಿಗುವುದಿಲ್ಲ!

ಲಿತುವೇನಿಯಾದಲ್ಲಿ ಕಾಲ್ಪನಿಕ ಕತೆಗಳಿಗಾಗಲಿ, ದಂತಕತೆಗಳಿಗಾಗಲಿ ಬರವೇ ಇಲ್ಲ. ಇತಿಹಾಸದ ಬಗ್ಗೆ, ಬೌಗೋಳಿಕದ ಬಗ್ಗೆ ಹಾಗೂ ಅಲ್ಲಿನ ಜನರ ಬಗ್ಗೆ ಸಾಕಶ್ಟು ಕತೆಗಳು ಪ್ರಚಲಿತದಲ್ಲಿವೆ. ಈ ದ್ವೀಪವನ್ನು ಹೊರತು ಪಡಿಸಿದರೆ ಬೇರೆಲ್ಲೂ ಆ ಕತೆಗಳು ಕೇಳ ಸಿಗುವುದಿಲ್ಲ. ಬಹುಶಹ ಅಲ್ಲಿನ ಬಾಶೆಯ ಅಡ್ಡಿಯಿರಬಹುದು. ಇಲ್ಲಿಯವರಲ್ಲಿ ಯಾರನ್ನೇ ಮಾತಿಗೆಳೆದರೂ ಅವರಿಂದ ಪುಂಕಾನುಪುಂಕವಾಗಿ ಕತೆಗಳು ಹರಿದು ಬರುತ್ತವೆ. ಕತೆಗಳನ್ನು ಹೇಳುವ ಪರಿ, ಅದರಲ್ಲಿನ ತಲ್ಲೀನತೆ ಅವರ ನಂಬಿಕೆಗೆ ಸಾಕ್ಶಿ. ಮಾಟಗಾತಿಯರ ಬೆಟ್ಟ ಇರುವುದು ಅತೀಂದ್ರಿಯ ಮತ್ತು ಅತಿಮಾನುಶ ಸ್ತಳದಲ್ಲಿ. ಹಾಗಾಗಿ ಇದರ ವಾಸ್ತು ಸರಿಯಿಲ್ಲ ಎಂಬುದು ಅಲ್ಲಿನವರ ನಂಬಿಕೆ. ಅವರ ದ್ರುಶ್ಟಿಯಲ್ಲಿ ಇದೊಂದು ಮಾಂತ್ರಿಕ ಪ್ರದೇಶ. ಮಾಟಗಾತಿಯರು, ಯಕ್ಶ ಯಕ್ಶಣಿಯರು, ಬವಿಶ್ಯ ನುಡಿಯುವವರು, ಚಾತು ಕುಟ್ಟಿಯಂತಹ ಬೇತಾಳಗಳು, ದೆವ್ವಗಳು ಸೂರ‍್ಯ ಮುಳುಗುತ್ತಿದ್ದಂತೆ ಈ ಬೆಟ್ಟದಲ್ಲಿ ಉದ್ಬವಿಸುತ್ತವೆ. ಇವೆಲ್ಲಾ ಒಟ್ಟಾಗಿ ಸೇರಿ ಕುಣಿದು ಕುಪ್ಪಳಿಸಿ ಕುಡಿದು, ಜೂಜಾಡುತ್ತಾ, ರಾತ್ರಿ ಕೆಲ ಸಮಯವನ್ನು ಕಳೆಯುತ್ತವೆ ಎನ್ನುತ್ತಾರೆ ಸ್ತಳೀಯರು.

ಬಳಿಕ ರಾತ್ರಿಯಿಡೀ ಬೆಟ್ಟದ ಸುತ್ತಾ ಗಸ್ತು ತಿರುಗುತ್ತಾ ತಮ್ಮ ಪ್ರದೇಶವನ್ನು ಅತಿಕ್ರಮಿಸಲು ಬಂದವರನ್ನು ಹೆದರಿಸಿ, ಬಯಬೀತರನ್ನಾಗಿಸುತ್ತವೆ. ಅವರ ಮನದಲ್ಲಿ ಗೊಂದಲಮಯ ವಾತಾವರಣ ಸ್ರುಶ್ಟಿ ಮಾಡಿ, ತಮ್ಮೆಡೆಗೆ ಸೆಳೆದು, ನೋವುಂಟು ಮಾಡಿ ಅಲ್ಲಿಂದ ಕಾಲ್ತೆಗೆಯುವಂತೆ ಮಾಡುತ್ತವೆ. ಅವುಗಳ ಆಟ ಹಾಗೂ ಮನುಶ್ಯರ ಪೀಕಲಾಟ ಮುಂಜಾನೆಯವರೆಗೂ ಎಡೆಬಿಡದೆ ನಡೆಯುತ್ತಿರುತ್ತದೆ. ಸೂರ‍್ಯ ಕಿರಣಗಳು ಮೂಡಿದ ನಂತರ ಅವು ಬಂದೇ ಇಲ್ಲ ಎನ್ನುವ ವಾತಾವರಣವನ್ನು ಸ್ರುಶ್ಟಿಮಾಡಿ ಮಂಗಮಾಯವಾಗುತ್ತವೆ ಎನ್ನುತ್ತಾರೆ ಅಲ್ಲಿಯವರು.

ಮೊದಲನೇ ಜಾಗತಿಕ ಮಹಾಯುದ್ದಕ್ಕೂ ಮುಂಚೆ ಜೋನಿನ್ಸ್ (ಸೆಂಟ್ ಜಾನ್ಸ್ ಇವ್) ಉತ್ಸವ ಮಾಟಗಾತಿಯರ ಬೆಟ್ಟದಲ್ಲಿ ಆಯೋಜನೆಗೊಳ್ಳುತ್ತಿತ್ತು. ದೂರ ದೂರದ ಪ್ರದೇಶದಿಂದ ಲಿತುವೇನಿಯಾದ ಪ್ರಜೆಗಳು ಈ ಉತ್ಸವದಲ್ಲಿ ಪಾಲ್ಗೊಳ್ಳಲು ಬಂದು ಸೇರುತ್ತಿದ್ದರು. ಸಂಗೀತ, ಹಾಡುಗಾರಿಕೆ, ನ್ರುತ್ಯ, ಕುಣಿತ ಮುಂತಾದವುಗಳ ಬರಪೂರ ರಸದೌತಣ ನೋಡುಗರಿಗೆ ಸಿಗುತ್ತಿತ್ತು ಈ ಉತ್ಸವದಲ್ಲಿ. ಪ್ರತಿ ವರ‍್ಶ ಜೂನ್ 24ರಂದು ಜೋನಿನ್ಸ್ ಉತ್ಸವ ನಡೆಯುತ್ತಿತ್ತು. ಜೂನ್ 24 ವರ‍್ಶದಲ್ಲಿ ಅತಿ ಕಡಿಮೆ ರಾತ್ರಿಯಿರುವ ದಿನ. ಲಿತುವೇನಿಯಾದಲ್ಲಿ ಅಂದು ರಾತ್ರಿ 10.30ರ ನಂತರ ಸೂರ‍್ಯಾಸ್ತಮಾನವಾದರೆ ಬೆಳಗಾಗುವುದು ಮುಂಜಾನೆ ನಾಲ್ಕಕ್ಕೆ. ಅಲ್ಲಿನ ಜನರ ಹೇಳಿಕೆಯಂತೆ ಅಂದು ಮಾಟಗಾತಿಯರ ಬೆಟ್ಟವನ್ನು ಹತ್ತಿದವರು ಪ್ರಾಣಾಪಾಯವಿಲ್ಲದೆ ಸುರಕ್ಶಿತವಾಗಿ ಹಿಂದಿರುಗುವ ಬರವಸೆಯಿದೆ. ಉಳಿದ ದಿನಗಳಲ್ಲಿ ಜೀವ ಸಹಿತ ಹಿಂದಿರುಗುವ ಯಾವುದೇ ಗ್ಯಾರಂಟಿ ಇಲ್ಲ. ಮಾಟಗಾತಿಯರ ಬೆಟ್ಟದ ಮಾಂತ್ರಿಕ ಪ್ರಪಂಚದ ಇರುವನ್ನು ಕಣ್ಣಾರೆ ಕಂಡು ಸಂಪೂರ‍್ಣವಾಗಿ ಅನುಬವಿಸಲು ಅಂದು ಮಾತ್ರ ಸಾದ್ಯ.

ಇದರೊಂದಿಗೆ ಮತ್ತೊಂದು ವಿಚಾರ ಜೋಡಣೆಯಾಗಿದೆ. ಆ ದಿನದ ಮದ್ಯರಾತ್ರಿಯಲ್ಲಿ ಏಕಾಏಕಿ ಜರೀಗಿಡಗಳು(fern) ಅರಳುತ್ತವೆ. ಜರೀಗಿಡಗಳು ಅರಳುವುದನ್ನು ಕಣ್ಣಾರೆ ಕಂಡವರರಿಗೆ ಅತಿಮಾನುಶ ಶಕ್ತಿ ಪ್ರಾಪ್ತವಾಗುತ್ತದೆ ಎಂದು ಅಲ್ಲಿನ ದಂತ ಕತೆಗಳು ಹೇಳುತ್ತವೆ. ಅತಿಮಾನುಶ ಶಕ್ತಿಯಲ್ಲಿ ಬವಿಶ್ಯವನ್ನು ಕಾಣುವ, ಪ್ರಾಣಿ ಪಕ್ಶಿಗಳ ಜೊತೆ ಸಂಬಾಶಿಸುವ, ವಿಶ್ವದಲ್ಲಿ ಅಡಗಿರುವ ಪುರಾತನ ರಹಸ್ಯ ನಿದಿಯ ಸ್ತಳದ ವಿವರ ಗ್ರಹಿಸುವ ಶಕ್ತಿ ಆವಾಹನೆಯಾಗುತ್ತದೆ ಎನ್ನಲಾಗಿದೆ. ಜರೀಗಿಡಗಳು ಅರಳುವುದನ್ನು ಕಾಣಲು ಬರುವವರಿಗೆ ಮಾಟಗಾತಿಯರು ಯಕ್ಶಣಿಯರು ಹಿಂಸೆ ನೀಡುವುದಿಲ್ಲ. ಬದಲಿಗೆ ಅವರಿಗೆ ಅತಿಮಾನುಶ ಶಕ್ತಿ ಬರುವುದನ್ನು ತಡೆಯಲು ಸಾದ್ಯವಾದ ಎಲ್ಲಾ ಪ್ರಯತ್ನವನ್ನೂ ಮಾಡುತ್ತವೆ. ರಾತ್ರಿಯಿಡೀ ಹೆದರಿಸಿ ಗೊಂದಲವನ್ನು ಸ್ರುಶ್ಟಿಸುತ್ತವೆ. ಯಕ್ಶಣಿಗಳು ಮಾರುವೇಶದಲ್ಲಿ ಅಗಂತುಕರಾಗಿ ಬರಬಹುದು ಎಂಬ ಕಾರಣಕ್ಕೆ ಆಗಂತುಕರೊಡನೆ ಮಾತಿಗಿಳಿಯದಂತೆ ಎಚ್ಚರವಹಿಸಬೇಕು ಎಂಬ ಸೂಚನೆಯನ್ನು ಬೆಟ್ಟ ಹತ್ತುವ ಎಲ್ಲರಿಗೂ ಮೊದಲೇ ನೀಡಲಾಗಿರುತ್ತೆ.

ಮಾಟಗಾತಿಯರ ಬೆಟ್ಟದ ಸುತ್ತಾ 80 ಚಿತ್ರ ವಿಚಿತ್ರ ಮರದ ಕೆತ್ತನೆಗಳು ರಾರಾಜಿಸುತ್ತಿವೆ

ದುಕ್ಕದ ಸಂಗತಿಯೆಂದರೆ ಮೊದಲನೇ ಜಾಗತಿಕ ಯುದ್ದದ ನಂತರ ಈ ಉತ್ಸವಕ್ಕೆ ತೆರೆಬಿದ್ದಿದೆ. ಆದರೂ ಮಾಟಗಾತಿಯರು ಬರುವ ವಿಚಾರ ಜನಮನದಲ್ಲಿ ಹಾಗೇ ಅಚ್ಚಳಿಯದೆ ಉಳಿದಿದೆ. ಇಂದು ಮಾಟಗಾತಿಯರ ಬೆಟ್ಟದ ಸುತ್ತಾ 80 ಚಿತ್ರ ವಿಚಿತ್ರ ಮರದ ಕೆತ್ತನೆಗಳು ರಾರಾಜಿಸುತ್ತಿವೆ. ಲಿತುವೇನಿಯಾದ ಅದ್ಬುತ ದಂತಕತೆಗಳ ಹಾಗೂ ಯಕ್ಶ ಯಕ್ಶಣಿಯರ ಈ ಕೆತ್ತನೆಗಳು ಅವರ ಕಲ್ಪನೆಗೆ ಜೀವ ತುಂಬಿದಂತಿದೆ. ಬಿಸಿಲಿಗೆ ಮೈಯೊಡ್ಡಿ ನಿಂತಿರುವ ಮಾಂತ್ರಿಕ ಕೆತ್ತನೆಗಳಲ್ಲಿ ಕತೆ ಹೇಳುವ ಕೊರವಂಜಿ ಗೊಂಬೆಗಳು, ಹದ್ದುಗಳು, ಹಾವುರಾಣಿ ಮುಂತಾದವು ಬೆಟ್ಟವನ್ನು ಮುಂಬಾಗದಿಂದ ಹತ್ತಿದಲ್ಲಿ ಎದುರಾಗುತ್ತವೆ. ಮೇಲೇರಿ ಮತ್ತೊಂದು ಬದಿಯಿಂದ ಇಳಿಯುವಾಗಿನ ಅನುಬವವೇ ಬೇರೆ.

ಬಿಸಿಲು ಉದ್ದನೆಯ ದಟ್ಟ ಮರಗಳ ನಡುವೆ ಮರೆಯಾಗುತ್ತದೆ, ಗಾಳಿಯ ಮೊರೆತ ಹೆಚ್ಚಾಗುತ್ತದೆ. ಮರಗಳು ಪಿಸುಗುಡಲು ಪ್ರಾರಂಬಿಸುತ್ತವೆ, ಬಯದ ವಾತಾವರಣ ಸ್ರುಶ್ಟಿಸುವ ಕೆತ್ತನೆಗಳನ್ನು ಇಳಿಜಾರಿನ ದಾರಿಯುದ್ದಕ್ಕೂ ಕಾಣಬಹುದು. ಸೈತಾನ, ನರಕದ ಹೆಬ್ಬಾಗಿಲನ್ನು ಹೋಲುವ ಚಿತ್ರಣ, ಬಯಾನಕ ಮಾಂತ್ರಿಕ, ದುಶ್ಟ ಮಾಟಗಾತಿಯರ ಗೊಂಬೆಗಳು ಬಯ ಹುಟ್ಟಿಸುವಂತಿವೆ. ಕತ್ತಲೆ ಆಗುವುದರ ಒಳಗೆ ಅಲ್ಲಿಂದ ಕಳಚಿಕೊಳ್ಳವಂತೆ ಎಲ್ಲರಿಗೂ ತಾಕೀತು ಮಾಡಲಾಗುತ್ತದೆ. ಇಲ್ಲವಾದಲ್ಲಿ ಹಿಂದಿರುಗುವ ಸಂಬವ ಕಡಿಮೆ ಎಂದು ಅಲ್ಲಿನವರು ನಂಬಿದ್ದಾರೆ.

ಓಕ್ ಮರದ 71 ಕೆತ್ತನೆಗಳು 1979 – 1981ರ ಬೇಸಿಗೆಯಲ್ಲಿ ಕೆತ್ತಲ್ಪಟ್ಟವು. ಇವುಗಳನ್ನು ಕೆತ್ತಿದವರ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವುದರಿಂದ ಬಹುಶಹ ಅಲ್ಲಿನ ಜಾನಪದ ಕಲಾವಿದರ ಕೆಲಸವಿರಬೇಕೆಂದು ಅಂದಾಜಿಸಲಾಗಿದೆ. ಮಾಟಗಾತಿಯರ, ದೆವ್ವಗಳ, ಬೇತಾಳಗಳ, ನೆರಿಂಗಾಗಳ ಎಲ್ಲಾ ಕೆತ್ತನೆಗಳು ಅಲ್ಲಿನ ದಂತ ಕತೆಗಳ ವಸ್ತು ಆದಾರಿತ. 1988ರ ಬೇಸಿಗೆಯಲ್ಲಿ ಮತ್ತೆ 12 ಶಿಲ್ಪಕಲಾ ಕ್ರುತಿಗಳು ಇದಕ್ಕೆ ಸೇರ‍್ಪಡೆಯಾದವು. ಇದರಲ್ಲಿ ಮಕ್ಕಳಾಡುವ ಉಯ್ಯಾಲೆ, ಪುಟ್ಟ ಪುಟ್ಟ ದಿಬ್ಬಗಳು, ಕುರ‍್ಚಿಗಳೇ ಹೆಚ್ಚಿದ್ದವು. 1999-2002ರಲ್ಲಿ ನಡೆದ ಮಾಟಗಾತಿಯರ ಬೆಟ್ಟದ ವಿಚಾರ ಸಂಕೀರ‍್ಣದ ಸಮಯದಲ್ಲಿ ಎಲ್ಲಾ ಹಳೆಯ ಕೆತ್ತನೆಗಳನ್ನು ಹೊಸದಾಗಿಸಿ ಅದರ ಸ್ತಳದಲ್ಲೇ ಪುನರ್ ಸ್ತಾಪಿಸಲಾಯಿತು.

(ಚಿತ್ರ ಸೆಲೆ: wiki/Ragankalnas, wiki/Juodkrant , wiki/Vaizdas)
(ಮಾಹಿತಿ ಸೆಲೆ: basketslifetravel.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: