ಕಾಳಿಯ ಮಂದಿರದೊಳಗೊಂದು ಪ್ರಯೋಗಶಾಲೆ

ಹರೀಶ್ ಸೀತಾರಾಮ್.

ಬಂಗಾಳದ ದಕ್ಶಿಣೇಶ್ವರದ ಗಂಗೆಯ ತಟದಲ್ಲೊಂದು ಕಾಳಿಯ ಮಂದಿರ. ಆ ಮಂದಿರದಲ್ಲಿ ಜಗನ್ಮಾತೆಯ ಸೇವೆಗಾಗಿ ಅರ‍್ಚಕರೊಬ್ಬರು ನಿಯೋಜನೆಗೊಂಡರು. ಅದೇ ಮಂದಿರದ ಪ್ರಾಕಾರದ ಮೂಲೆಯ ಕೋಣೆಯಲ್ಲೇ ಅವರ ವಾಸ. ಅವರ ಅರ‍್ಚಕತ್ವವೇ ವಿಚಿತ್ರ. ದೇವರನ್ನು ನೋಡಲು ಅಳುತ್ತಿದ್ದರು, ದೇವರೊಂದಿಗೆ ಮಾತನಾಡುತ್ತಿದ್ದರು, ದೇವರ ದ್ಯಾನದಲ್ಲೇ ಮುಳುಗಿ ಹೋಗುತ್ತಿದ್ದರು. ಇಶ್ಟು ಸಾಲದೆಂಬಂತೆ ಮುಸಲ್ಮಾನರಂತೆಯೇ ಜೀವಿಸುತ್ತ ಮೂರುದಿನಗಳ ಕಾಲ ಮಂದಿರದೊಳಗೆ ಕಾಲಿಡಲಿಲ್ಲ. ಹೆಣ್ಣಿನ ಉಡುಪುಗಳನ್ನು ಹಾಕಿಕೊಂಡು ಹೆಣ್ಣಿನಂತೆಯೇ ನಡೆದುಕೊಳ್ಳುತ್ತಿದ್ದರು. ಹಲವರಿಗೆ ಈ ವ್ಯಕ್ತಿಯಲ್ಲಿ ಕಂಡದ್ದು ಹುಚ್ಚುತನ. ಆದರೆ ಕೆಲವರು ಮಾತ್ರ ಇವರಲ್ಲಿ ಬಕ್ತಿಯ ನಾನಾ ಪ್ರಾಕಾರಗಳನ್ನು ತಾವೇ ಅನುಬವಿಸುವ ‘ಪರಮಹಂಸ’ರನ್ನು ಕಂಡರು. ಇವರೇ ಮುಂದೆ ಬಾರತದ ಜನಮಾನಸದಲ್ಲಿ ಮತ್ತೊಮ್ಮೆ ಉದಯಿಸಿದ ರಾಮನಂತೆ, ಕ್ರಿಶ್ಣನಂತೆ, ‘ರಾಮಕ್ರಿಶ್ಣ ಪರಮಹಂಸ’ರಾಗಿ ಉಳಿದರು.

ಸಾಮಾನ್ಯ ಅರ‍್ಚಕರಾಗಿ ದಕ್ಶಿಣೇಶ್ವರಕ್ಕೆ ಬಂದ ಪರಮಹಂಸರ ಪ್ರಬಾವ ದಿನೇದಿನೇ ಬೆಳೆದಿತ್ತು. ಕೆಲವೇ ಕೆಲವು ವ್ಯಕ್ತಿಗಳಿಂದ ದಿನವಿಡೀ ಅವರ ಮಾತುಗಳನ್ನು ಕೇಳಲು ಜನ ಉತ್ಸುಕರಾಗಿರುವಶ್ಟು ಅವರ ವಿಶಯ ಎಲ್ಲೆಡೆ ಪಸರಿಸಿತ್ತು. ಜಗನ್ಮಾತೆಯ ಮುಂದೆ ಕುಳಿತು ತಮ್ಮ ಕಾರ‍್ಯವನ್ನು ಮುಂದುವರೆಸುವ ಶಿಶ್ಯವ್ರುಂದಕ್ಕಾಗಿ ಅಳುತ್ತಾ ಅವರಿಟ್ಟ ಬೇಡಿಕೆ ಪಲಿಸಿತ್ತು. ಆದರೆ ಅಶ್ಟು ಮಂದಿ ಶಿಶ್ಯರಿಗೆ ಬೋದಿಸಲು ಅವರು ಕಂಡುಕೊಂಡ ವಿದಾನ ಸಾಮಾನ್ಯವಾಗಿರಲಿಲ್ಲ. ಶಿಶ್ಯನ ಮನಸ್ಸಿನ ವಿಚಾರಗಳನ್ನು ಅರಿತುಕೊಳ್ಳುತ್ತಾ ಪ್ರತಿಯೊಬ್ಬ ಶಿಶ್ಯನಿಗೂ ವಿಬಿನ್ನವಾಗಿ ಬೋದಿಸುತ್ತಿದ್ದರು.

ಅವರಲ್ಲಿಗೆ ಬರುತ್ತಿದ್ದ ತರುಣ ಶಿಶ್ಯರಲ್ಲೊಬ್ಬ ನಿತ್ಯನಿರಂಜನ ಗೋಶ್. ಈತನು ಹೇಳಿಕೇಳಿ ಕ್ಶಾತ್ರವಂಶಕ್ಕೆ ಸೇರಿದವನು. ಕೋಪತಾಪಗಳು ಹೆಚ್ಚಾದರೂ ರಾಮಕ್ರಿಶ್ಣರೆಂದರೆ ಅಪರಿಮಿತವಾದ ಬಕ್ತಿ. ಒಮ್ಮೆ ದಕ್ಶಿಣೇಶ್ವರಕ್ಕೆ ದೋಣಿಯಲ್ಲಿ ಬರುತ್ತಿದ್ದ ನಿರಂಜನನಿಗೆ ಕೆಲವು ಸಹಪ್ರಯಾಣಿಕರು ರಾಮಕ್ರಿಶ್ಣರನ್ನು, ಅವರೊಬ್ಬ ಹುಚ್ಚರೆಂದು, ಸಂಸಾರಿಯೆಂದು, ಮಕ್ಕಳ ತಲೆಕೆಡಿಸುವವರೆಂದು, ಹೀಗೆ ಬಗೆಬಗೆಯಾಗಿ ನಿಂದಿಸುತ್ತಿರುವುದು ಕೇಳಿಬಂತು. ನಿರಂಜನ ಕೋಪಗೊಂಡು ದೋಣಿಯನ್ನು ಬಲವಾಗಿ ಅಲುಗಾಡಿಸಿ ಅವರ ಮಾತುಗಳನ್ನು ನಿಲ್ಲಿಸಬೇಕಾಯಿತು. ವಿಶಯ ತಿಳಿದ ಪರಮಹಂಸರು ಅವನ ಕಾರ‍್ಯವನ್ನು ಕಂಡಿಸಿ ಬೈದು ಬುದ್ದಿ ಹೇಳಿದರು.

ಇದೇ ಪರಿಸ್ತಿತಿ ಯೋಗೀಂದ್ರನಾತನೆಂಬ ಮತ್ತೊಬ್ಬ ಶಿಶ್ಯನಿಗೆ ಒದಗಿಬಂತು. ಆದ್ಯಾತ್ಮಿಕತೆಯಲ್ಲಿ ಮುಳುಗಿಹೋಗಿ ಸನ್ಯಾಸಿಯಾಗಿಬಿಡುವನೆಂಬ ಬಯದಿಂದ ಅವನ ತಂದೆತಾಯಿ ಅವನಿಗೆ ಮದುವೆಮಾಡಿಬಿಟ್ಟಿದ್ದರು. ಇದರಿಂದ ಜೀವನವೇ ಮುಗಿದುಹೋಯಿತೆಂಬಂತೆ ಮಂಕಾಗಿಬಿಟ್ಟಿದ್ದ. ಇಂತಹ ಯೋಗೀಂದ್ರ ದಕ್ಶಿಣೇಶ್ವರದ ದಾರಿಯಲ್ಲಿ ಕೆಲವರು ಪರಮಹಂಸರನ್ನು ನಿಂದಿಸುತ್ತಿದ್ದನ್ನು ಕೇಳಿ ಅದನ್ನು ನಿರ‍್ಲಕ್ಶಿಸಿ ಸುಮ್ಮನಿದ್ದ. ಇದನ್ನು ತಿಳಿದ ಪರಮಹಂಸರು ಯೋಗೀಂದ್ರನನ್ನು ಹೊಗಳಲಿಲ್ಲ. ಬದಲಿಗೆ, ಅವರು ತಮ್ಮನ್ನು ನಿಂದಿಸುತ್ತಿದ್ದರೆ ಸುಮ್ಮನೇಕೆ ಕುಳಿತಿದ್ದನೆಂದು ಅವನನ್ನು ತರಾಟೆಗೆ ತೆಗೆದುಕೊಂಡರು. ಶಿಶ್ಯನ ಸ್ವಬಾವವನ್ನರಿತು, ಕೋಪಗೊಂಡವನಿಗೆ ಮ್ರುದುವಾಗುವಂತೆಯೂ, ಮಂಕಾಗಿದ್ದವನಿಗೆ ಲವಲವಿಕೆಯಿಂದ ಬಾಳುವಂತೆಯೂ ಬೋದಿಸುತ್ತಿದ್ದರು. ಅದು ಪರಮಹಂಸರ ಬೋದನೆಯ ವೈಶಿಶ್ಟ್ಯ.

ರಾಮಕ್ರಿಶ್ಣರನ್ನು ಕಾಣಲು ಬಂದ ಶಿಶ್ಯರು, ಹಲವು ಬಾರಿ ದಕ್ಶಿಣೇಶ್ವರದಲ್ಲೇ ಉಳಿದುಕೊಂಡು ಅವರ ಆದ್ಯಾತ್ಮಿಕ ಸಂಗಾತಿಯಾಗಿದ್ದ ಅವರ ದರ‍್ಮಪತ್ನಿ, ಶಾರದಾಮಾತೆಯವರು ಮಾಡಿದ ಅಡುಗೆಯನ್ನೇ ಸೇವಿಸುತ್ತಿದ್ದರು. ಹೀಗೊಮ್ಮೆ ನಿರಂಜನ ಹೆಚ್ಚು ತುಪ್ಪ ತಿನ್ನುತ್ತಿರುವುದನ್ನು ಗಮನಿಸಿದ ಅವರು, ಹೀಗೆ ತುಪ್ಪ ತಿಂದರೆ ನೀನೊಂದು ಹುಡುಗಿಯನ್ನು ಹಾರಿಸಿಕೊಂಡು ಹೋಗುವೆ ಎಂದು ಹೇಳಿ ಎಚ್ಚರಿಸಿದರು. ಆಹಾರಪದ್ದತಿಯು ಆದ್ಯತ್ಮಿಕ ಸಾದನೆಯ ಮೇಲೆ ಪ್ರಬಾವ ಬೀರುವುದೆಂಬುದು ಅವರ ಉದ್ದೇಶವಾಗಿತ್ತು. ಇನ್ನೊಂದೆಡೆ ಅವರ ಪ್ರಿಯಶಿಶ್ಯನಾಗಿದ್ದ ನರೇಂದ್ರನಿಗೆ ತಾವೇ ಸಿಹಿತಿನಿಸುಗಳನ್ನು ನೀಡುತ್ತಿದ್ದರು. ನಿರಂಜನನಿಗೆ ಆಹಾರದಲ್ಲಿ ಸಾತ್ವಿಕತೆಯನ್ನು ಬೋದಿಸಿದ ಪರಮಹಂಸರು, ನರೇಂದ್ರನನ್ನು ಸ್ವತಹ ನಾರಾಯಣನ ಸ್ವರೂಪವೆಂದೂ, ಬಾಲ್ಯದಿಂದಲೇ ಸಾದಕನೆಂದೂ, ತಿಳಿದಿದ್ದರು. ಹಾಗಾಗಿ ನರೇಂದ್ರನಿಗೆ ಆಹಾರದಲ್ಲಿ ಕಟ್ಟುಪಾಡುಗಳನ್ನು ವಿದಿಸಲಿಲ್ಲ. ಹೀಗೆ ಶಿಶ್ಯರ ಸ್ವಬಾಕ್ಕನುಗುಣವಾಗಿ ಜೀವನಕ್ರಮವನ್ನು ಬೋದಿಸುತ್ತಿದ್ದರು.

ಈ ನಡುವೆ ಅವರು ಶಿಶ್ಯರನ್ನು ಪರೀಕ್ಶಿಸುವುದೂ ಇತ್ತು. ದೇವರೇ ಎಲ್ಲ ಎಂದು ನಂಬಿದ್ದ ನಾಗಮಹಾಶಯರೆಂಬ ಶಿಶ್ಯರನ್ನೂ, ದೇವರು ನಮ್ಮೊಳಗೇ ಇದ್ದಾನೆಂದು ನಂಬಿದ್ದ ನರೇಂದ್ರನನ್ನು ಚರ‍್ಚೆಗೆ ಬಿಟ್ಟು ಅವರನ್ನು ಪರೀಕ್ಶೆಗೊಳಪಡಿಸುತ್ತಿದ್ದರು. ಹಾಗೆಯೇ ತಮ್ಮ ಶಿಶ್ಯರಿಗೂ ಪ್ರತಿಯೊಂದನ್ನು ತಾವೇ ಪರೀಕ್ಶಿಸಲು ಪ್ರೇರೇಪಿಸುತ್ತಿದ್ದರು. ರಾಮಕ್ರಿಶ್ಣರು ಕಾಮಕಾಂಚನಗಳಿಂದ ದೂರ ಉಳಿಯುವರು, ಹಣವನ್ನು ಕೈಯಿಂದ ಮುಟ್ಟಲಾರರು ಎಂದು ಕೇಳಿದ್ದ ನರೇಂದ್ರ ಅವರನ್ನು ಪರೀಕ್ಶಿಸಲು ಹೊರಟ. ಬೆಳ್ಳಿಯ ನಾಣ್ಯವೊಂದನ್ನು ರಾಮಕ್ರಿಶ್ಣರಿಗೆ ತಿಳಿಯದೆ ಅವರ ಹಾಸಿಗೆಯ ಮೇಲೆ ಹೊದಿಸಿದ್ದ ಬಟ್ಟೆಯ ಕೆಳಗೆ ಸೇರಿಸಿದ. ಎಲ್ಲಿಂದಲೋ ಬಂದು ಹಾಸಿಗೆಯ ಮೇಲೆ ಕುಳಿತ ಪರಮಹಂಸರು ವಿಚಲಿತರಾಗಿ ತಕ್ಶಣವೇ ಎದ್ದು ನಿಂತರು. ಬಳಿಕ ರಾಮಕ್ರಿಶ್ಣರೇ ನರೇಂದ್ರನ ಪರೀಕ್ಶಿಸುವ ಗುಣವನ್ನು ಶ್ಲಾಗಿಸಿದರು. ಇನ್ನೊಮ್ಮೆ ರಾಮಕ್ರಿಶ್ಣರು ಮದ್ಯರಾತ್ರಿಯಲ್ಲಿ ಕೋಣೆಯಿಂದ ಎದ್ದು ಎಲ್ಲಿಗೋ ಹೋದದ್ದನ್ನು ಅಲ್ಲಿದ್ದ ಯೋಗೀಂದ್ರ ಕಂಡು, ಅನುಮಾನದಿಂದ ಅವರ ಪತ್ನಿಯ ಕೋಣೆಯ ದಿಕ್ಕನ್ನೇ ಗಮನಿಸುತ್ತಾ ಅವರಿಗಾಗಿ ಕಾಯುತ್ತಿದ್ದ. ರಾಮಕ್ರಿಶ್ಣರು ಮತ್ತೊಂದು ದಿಕ್ಕಿನಿಂದ ಬಂದದ್ದನ್ನು ಕಂಡು ಅವನಿಗೆ ನಾಚಿಕೆಯಾಯಿತು. ಆದರೆ ಅದನ್ನರಿತ ಪರಮಹಂಸರು ಅವನ ಅನುಮಾನವನ್ನು ಶ್ಲಾಗಿಸಿದರು.

ರಾಮಕ್ರಿಶ್ಣರ ಈ ಅದ್ಬುತ ಬೋದನೆಯಿಂದಲೇ, ಮುಂದೆ ನರೇಂದ್ರನಂತಂಹ ಶಿಶ್ಯನು ವಿವೇಕಾನಂದರಾಗಿದ್ದು. ಮನುಶ್ಯನ ದೇಹದ ಸಮಸ್ಯೆಗಳನ್ನು ಸಂಶೋದಿಸಿ, ಅದಕ್ಕೆ ತಕ್ಕ ಔಶದಿಯನ್ನು ಕಂಡುಹಿಡಿದು ಪ್ರಯೋಗಿಸುವುದು ವೈದ್ಯರ ಕಾಯಕ. ಅದೇ ರೀತಿ ರಾಮಕ್ರಿಶ್ಣರು ಮನಸ್ಸಿನ ವೈದ್ಯರಾಗಿ, ತಮ್ಮ ಶಿಶ್ಯರ ಮನಸ್ಸಿನ ವಿಚಾರಗಳನ್ನು ಅರಿತು ವಿವಿದ ಬೋದನಾಕ್ರಮಗಳನ್ನು ನಿರ‍್ದರಿಸಿ, ಅವರೊಂದಿಗೆ ಆದ್ಯಾತ್ಮಿಕ ಪ್ರಯೋಗದಲ್ಲಿ ತೊಡಗುತ್ತಿದ್ದರು. ಇಶ್ಟೇ ಅಲ್ಲದೆ ತಾವೇ ವಿವಿದ ದರ‍್ಮಗಳ, ವಿವಿದ ರೀತಿಯ ಬಕ್ತಿಯ ಪ್ರಕಾರಗಳನ್ನು ಪ್ರಯೋಗಿಸಿ ಅನುಬವಿಸಿದ್ದರು. ಹಾಗಾಗಿ ದಕ್ಶಿಣೇಶ್ವರದ ಕಾಳಿಮಂದಿರದ ರಾಮಕ್ರಿಶ್ಣರ ಕೋಣೆ ಒಂದು ಮಟವೋ, ಆಶ್ರಮವೋ ಆಗಿರಲಿಲ್ಲ. ಅದೊಂದು ಆದ್ಯಾತ್ಮದ ಪ್ರಯೋಗಶಾಲೆಯಾಗಿತ್ತು.

(ಚಿತ್ರ ಸೆಲೆ: maadurgawallpaper.com, ramakrishna.eu)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: