‘ಹೊನಲು’ – ಎರಡು ಸಾವಿರ ದಾಟಿದ ಬರಹಗಳ ಎಣಿಕೆ

– ಹೊನಲು ತಂಡ (  ರತೀಶ ರತ್ನಾಕರವಿಜಯಮಹಾಂತೇಶ ಮುಜಗೊಂಡಅನ್ನದಾನೇಶ ಶಿ. ಸಂಕದಾಳ )

ನಲ್ಮೆಯ ಓದುಗರೇ,

ನಿಮ್ಮ-ನಮ್ಮಯ ‘ಹೊನಲು’ ಈಗ ಮತ್ತೊಂದು ಮೈಲುಗಲ್ಲನ್ನು ಮುಟ್ಟಿದೆ ಎಂದು ತಿಳಿಸಲು ನಲಿವಾಗುತ್ತಿದೆ. ಹೊನಲು ಆನ್ಲೈನ್ ಮ್ಯಾಗಜೀನ್ ಈಗ 2000 ಕ್ಕೂ ಹೆಚ್ಚು ಬರಹಗಳ ಕಣಜವಾಗಿದೆ. ಬರಹಗಾರರ, ಓದುಗರ ಮತ್ತು ಬೆಂಬಲಿಗರ ಪ್ರೋತ್ಸಾಹವಿಲ್ಲದೇ ಈ ಮೈಲುಗಲ್ಲನ್ನು ತಲುಪಲಾಗುತ್ತಿರಲಿಲ್ಲ. ನಿಮ್ಮೆಲ್ಲರ ಬೆಂಬಲಕ್ಕೆ ಮನದಾಳದ ನನ್ನಿ.

ಸರಿ ಸುಮಾರು ನಾಲ್ಕೂವರೆ ವರುಶಗಳ ಹಿಂದೆ, ಬರವಣಿಗೆ ಮಾಡುವ ಆಸಕ್ತಿ ಇರುವವರಿಗೆ, ಬರಹಗಳನ್ನು ಹೆಚ್ಚು ಜನರ ಮುಂದಿಡಲು ಒಂದು ವೇದಿಕೆಯಾಗಿ ‘ಹೊನಲು’ ವನ್ನು ಕಟ್ಟಿದೆವು. ಮೊದ ಮೊದಲು, ಶನಿವಾರ ಮತ್ತು ರವಿವಾರವನ್ನು ಹೊರತುಪಡಿಸಿ, ವಾರಕ್ಕೆ 5 ದಿನ ಮಾತ್ರ ಬರಹಗಳನ್ನು ಹೊನಲಿನಲ್ಲಿ ಮೂಡಿಸಲಾಗುತ್ತಿತ್ತು. ದಿನಕ್ಕೆ ಕಡಿಮೆ ಎಂದರೂ ಒಂದು ಬರಹವನ್ನಾದರೂ ಹೊನಲು ಮೂಲಕ ಹೊರತರಬೇಕು ಎಂಬ ಕಟ್ಟಳೆಯನ್ನು ನಮಗೆ ನಾವೇ ಹಾಕಿಕೊಂಡಿದ್ದೆವು. ಕನ್ನಡಿಗರ ಬೆಂಬಲವನ್ನು ನಿರೀಕ್ಶಿಸುತ್ತ ಹೊನಲು ಶುರು ಮಾಡಿದ್ದ ನಮಗೆ, ಮೊದಲಿಗೆ ಬರಹಗಳ ಎಣಿಕೆಯ ವಿಶಯದಲ್ಲಿ ತುಸು ಅಂಜಿಕೆ ಇದ್ದದ್ದು ನಿಜವೇ. ಆದರೆ ನೋಡ ನೋಡುತ್ತಿದ್ದಂತೆ 2000 ಕ್ಕೂ ಹೆಚ್ಚು ಬರಹಗಳನ್ನು ಹೊನಲಿಗೆ ಸೇರಿಸಿದರು ನಮ್ಮ ಬರಹಗಾರರು. ಈಗ, ವಾರದ ಎಲ್ಲಾ ದಿನವೂ ಬರಹವಿರುವಂತೆ ನೋಡಿಕೊಳ್ಳುತ್ತಿದ್ದಾರೆ ಹೊನಲು ಬರಹಗಾರರು. ಬರಹದ ಹರಿವಿನ ಪೂರ‍್ತಿ ಶ್ರೇಯ ಬರಹಗಾರರಿಗೆ ಸಲ್ಲಲೇಬೇಕು.

ನಲ್ಬರಹ (ಕತೆ, ಕವಿತೆ, ವಿಮರ‍್ಶೆ), ಆಟೋಟ, ಅಡುಗೆ, ನಡೆ-ನುಡಿ, ಸುತ್ತಾಟ, ಸೋಜಿಗದ ಸಂಗತಿ – ಹೀಗೆ ಯಾವುದೇ ವಿಶಯದ ಬಗ್ಗೆ ಮಾಡುವ ಬರಹವು ನಮ್ಮಲ್ಲಡಗಿರುವ ಅತವಾ ನಾವು ಪಡೆದುಕೊಂಡಿರುವ ತಿಳಿವಿನ ಹಂಚಿಕೆ ಎಂಬುದು ನಮ್ಮ ನಂಬಿಕೆ. ಈ ನಂಬಿಕೆಯನ್ನು ಗಟ್ಟಿಗೊಳಿಸುವ ಕೆಲಸವನ್ನು ಪ್ರೀತಿಯಿಂದ, ಶ್ರದ್ದೆಯಿಂದ ಹೊನಲಿಗಾಗಿ ಬರಹ ಮಾಡುವುವರು ಕಳೆದ ನಾಲ್ಕೂವರೆ ವರುಶದಿಂದ ಮಾಡುತ್ತಲೇ ಬಂದಿದ್ದಾರೆ. ಹೊನಲಿನ ಬರಹಗಳನ್ನು ಓದುತ್ತಾ, ಮೆಚ್ಚುತ್ತಾ, ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಾ, ಹೆಚ್ಚು ಹೆಚ್ಚು ಜನರಿಗೆ ಆ ಬರಹಗಳನ್ನು ತಲುಪಿಸುವ ಹೊಣೆಯನ್ನು ಬಹಳಶ್ಟು ಓದುಗರು ತಾವಾಗಿಯೇ ಹೊತ್ತಿದ್ದಾರೆ. ಈ ರೀತಿಯ ಕನ್ನಡಿಗ ಸಮುದಾಯದ ಪಾಲ್ಗೊಳ್ಳುವಿಕೆ, ಹೊನಲನ್ನು ವರುಶಗಳನ್ನು ದಾಟಿಸುತ್ತಾ, ಹಲವಾರು ರಾಜ್ಯ ಮತ್ತು ದೇಶಗಳಲ್ಲಿರೋ ಕನ್ನಡಿಗರಿಗೆ ತಲುಪಿಸುತ್ತಾ ಹೊನಲನ್ನು ಮುನ್ನಡೆಸುತ್ತಿದೆ.

ಹೊಸ ಹೊಸ ಬರಹಗಾರರ, ಸತತವಾಗಿ ಬರಹ ಮಾಡುತ್ತಿರುವವರ ಬರಹಗಳ ಹರಿವು ಮತ್ತು ಓದುಗರ, ಬೆಂಬಲಿಗರ ಮೆಚ್ಚುಗೆ, ಪ್ರೋತ್ಸಾಹ – ಈ ಮ್ಯಾಗಜೀನ್ ನ ಬೆನ್ನೆಲುಬು. ಆದ್ದರಿಂದಲೇ, ಇಂದು ಹೊನಲಿನಲ್ಲಿ 2000 ಬರಹಗಳನ್ನು ನೋಡಲು ಸಾದ್ಯವಾಗಿದೆ. ಹೊನಲಿನಲ್ಲಿ ಸಾಕಶ್ಟು ವಿಶಯಗಳ ಬಗ್ಗೆ ಬರಹಗಳಿವೆ. ಆದರೆ ಅರಿವಿಗೆ ಕೊನೆಯೆಂಬುದು ಇಲ್ಲ. ಆದ್ದರಿಂದ ಇನ್ನೂ ಹೆಚ್ಚಿನ ವಿಶಯಗಳ ಬಗ್ಗೆ ಬರಹಗಳು ಹೊನಲಿನಲ್ಲಿ ಮೂಡಿ ಬರುತ್ತಿರಲಿ, ವಿಶಯಗಳನ್ನು ಮೂಡಿಸುವ ಕೈಗಳು ಹೆಚ್ಚಲಿ, ಬರಹಗಳು ಇನ್ನೂ ಹೆಚ್ಚು ಹೆಚ್ಚು ಮಂದಿಯನ್ನು ಸೆಳೆಯಲಿ ಎಂಬುದು ನಮ್ಮ ಬಯಕೆ.

ಮತ್ತೊಮ್ಮೆ, ಬೆಂಬಲ ತೋರುತ್ತಿರುವ ಎಲ್ಲರಿಗೂ ನನ್ನಿ. ಹೊನಲಿಗೆ ನಿಮ್ಮ ಬೆಂಬಲ ಹೀಗೇ ಮುಂದುವರೆಯುತ್ತಿರಲಿ.

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. ಅಭಿನಂದನೆಗಳು

  2. Uma Vallish says:

    ಅಭಿನಂದನೆಗಳು ??

ಅನಿಸಿಕೆ ಬರೆಯಿರಿ:

%d bloggers like this: