ನಾನು-ಅಪ್ಪ-ಎಂ80 ಬಜಾಜ್

– ಸಂದೀಪ ಔದಿ.

ವಾಹನದ ವೇಗದ ಗತಿ ನಿದಾನಕ್ಕೆ ಬದಲಾಗಿ ಗೇರ್ 3, 2,1 ಮತ್ತೆ ನ್ಯೂಟ್ರಲ್ ಗೆ ತಂದು, ರಸ್ತೆ ಬದಿ ನಿಲ್ಲಿಸಲಾಗಿ, ವಾಹನದ ಹಿಂಬದಿ ಸವಾರನ ಮುಕದಲ್ಲಿ ದೊಡ್ಡ “?” ಪ್ರಶ್ನಾರ‍್ತಕ ಚಿಹ್ನೆ. “ಬಾ ಗಾಡಿ ಹೊಡಿ ಬಾ” – ಮೌನ, ಆಶ್ಚರ‍್ಯ, ತಕ್ಶಣಕ್ಕೆ ಏನೂ ತೋಚದ ಪರಿಸ್ತಿತಿ.

ಮೊದಲ ಸಲ ಅಪ್ಪ ‘ನಾನಿನ್ನು ನಿನ್ನ ಸ್ನೇಹಿತ’ನೆನ್ನುವ ಮುನ್ಸೂಚನೆ ಕೊಟ್ಟ ಪರಿಯಿದು.

90 ರ ದಶಕದ ಸಮಯ. ಮದ್ಯಮ ವರ‍್ಗದ ಕುಟುಂಬದಲ್ಲಿ ಮೊದಲ ದ್ವಿಚಕ್ರ ವಾಹನ, ಮೊದಲ ಮನೆ, ಮೊದಲ ಸೈಕಲ್, ಶಾಲೆಗೆ ಮೊದಲ ಬಾರಿ ಅಪ್ಪ ಗಾಡಿ ಮೇಲೆ ಬಿಟ್ಟು ಕಚೇರಿಗೆ ಹೋಗೋದು – ಈ ನೆನಪುಗಳು ತುಂಬಾ ವಿಶೇಶ. ಅದರಲ್ಲೂ ಗಾಡಿ ಯಾವುದು ಅಂತೀರಾ ?

“ಎಂ 80” ಬಜಾಜ್ (ನಮ್ಮ ಬಜಾಜ). ಬಾನುವಾರ ಬಂತೆಂದರೆ ಸಾಕು, ಬಕೆಟಿನಲ್ಲಿ ನೀರು, ನಿರ‍್ಮಾ ಪುಡಿ (ಎಲ್ಲರ ಮೆಚ್ಚುಗೆಯ), ಒಂದು ಬ್ರಶ್ಶು, ‘ಎಂ 80’ಯ ಮುಂಗವಚವನ್ನು ಅತಿ ಬಿಳಿಯಾಗಿಸುವುದೇ ದ್ಯೇಯ. ಅದು ಪಳ ಪಳ ಹೊಳಿತಿದ್ರೆ ಪೂರ‍್ತಿ ಗಾಡಿ ಸ್ವಚ್ಚ ಆದಹಾಗೇನೇ. ಮೊದಲ ಗಾಡಿಯಾದ್ದರಿಂದ ವಿಶೇಶ ಕಾಳಜಿ ಹಾಗೂ ಸಲುಗೆ. ನನ್ನ ರುಣ ಹೇಗಾದರೂ ಮಾಡಿ ತೀರಿಸಲೇಬೇಕಂತ ಆ ಗಾಡಿ ನಿರ‍್ದರಿಸಿದಂತಿತ್ತು (ಈಗ ಅನಿಸುತ್ತೆ). ಅದಕ್ಕೆ ಮುಂದೊಂದು ದಿನ ನನ್ನ-ಅಪ್ಪನ ಸ್ನೇಹ ಕೊಂಡಿಯಾಗಿ ರುಣ ಮುಕ್ತನಾದ.

ನಮ್ಮ ದೇಶದಲ್ಲಿ(ಕತೆಯ ವ್ಯಾಪ್ತಿ ತುಸು ಜಾಸ್ತಿಯಾಯ್ತು ಅನಿಸುತ್ತೆ, ಒಂಚೂರು ಕಡಿಮೆ ಮಾಡೋಣ) – ನಮ್ಮ ಕಡೆ, ಅಪ್ಪ ಮಗನ ಸಂಬಂದ ವಿಚಿತ್ರ. ಯಾಕಂತೀರಾ? ಗೊತ್ತಿಲ್ಲ. ಸರಳವಾಗಿ ಹೇಳ್ಬೇಕು ಅಂದ್ರೆ, ಅಪ್ಪ ಅಡುಗೆ ಮನೆಗೆ ಬಂದ್ರೆ, ನಾವು ಪಡಸಾಲೆಗೆ, ಅವ್ರು ಅಲ್ಲಿಗೆ ಬಂದ್ರೆ, ನಾವು ಮಲಗೋ ಕೋಣೆಗೆ. ಅವ್ರು ಅಲ್ಲಿಗೂ ಬಂದ್ರೆ ನಾವೋ ಪಡಸಾಲೆಯಲ್ಲಿ ….ಹೀಗೆ ಎರಡು ಹುಲಿಗಳು ತಮ್ಮ ತಮ್ಮ ವ್ಯಾಪ್ತಿ ಪ್ರದೇಶದಲ್ಲಿ ಇದ್ರೇನೆ ಚೆಂದ (ನಮ್ಮ ನಂಬಿಕೆ ಅಶ್ಟೇ). ಟಿವಿ ವಿಚಾರದಲ್ಲೂ, ರಿಮೋಟ್ ಅಪ್ಪನ ಹತ್ರ ಇದ್ರೆ ಮುಗಿತು. ಅವ್ರು ಯಾವ ಚಾನೆಲ್ ಹಾಕಿ ನೋಡ್ತಾರೋ ಅದನ್ನೇ ನಾವು. ಅವ್ರೇನು ಬದಲಾಯಿಸಿದರೆ ಬೇಡ ಅಂತಿರ‍್ಲಿಲ್ವೇನೋ. ಆದ್ರೂ ಸುಮ್ನೆ ಯಾಕೆ ಅಂತ. ಪಾಪ, ನೋಡ್ಕೊಳ್ಳಲಿ ಅಂತ ಸುಮ್ನಿರ‍್ತಿದ್ದೆ.

ಮೇಲ್ಕಂಡ ಪರಿಸ್ತಿಯಲ್ಲಿ ಜೀವನ, ಬಾಂದವ್ಯ ಸಾಗುತಿರಲು – ಒಂದ್ ದಿನ ಎಂ 80 ನನ್ನಪ್ಪನಿಗೆ ಈ ರೀತಿ ಪ್ರಚೋದಿಸಿ ತನ್ನ ರುಣಬಾರ ಕಡಿಮೆ ಮಾಡಿಕೊಳ್ಳುವುದೆಂದು ನಾನಂತು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಅಂದು ನಾನು ಗಾಡಿ ಓಡಿಸಿದೆ ನಿದಾನವಾಗಿ, ಅಪ್ಪನ ಮಾರ‍್ಗದರ‍್ಶನದಲ್ಲಿ. ಎಲ್ಲಿಲ್ಲದ ಕುಶಿ. ಶಾಲೆ-ಮನೆ-ಬಡಾವಣೆಯ ಪ್ಯಾರಲ ಮರಕ್ಕೂ (ಸೀಬೆ ಹಣ್ಣು) ವಿಶಯ ತಲುಪಿಸಿದೆ. ಅಂದಿನಿಂದ ಪ್ರತಿ ದಿನ ಗಾಡಿ ಕಾಂಪೌಂಡ್ ಆಚೆ ತೆಗೆದು, ತುಸು ಸ್ವಚ್ಚ ಮಾಡಿ, ಅಪ್ಪ ಇನ್ನೇನು ಕಚೇರಿಗೆ ಹೋಗಲು ಹೊರಗೆ ಬಂದ ತಕ್ಶಣ ಕಿಕ್ ಹೊಡೆದು ‘ಎಂ 80’ ಶುರು ಮಾಡಿ, ಗಾಡಿಯಿಂದ ಕೆಳಗಿಳಿದು ಅಪ್ಪನಿಗೆ ಹಸ್ತಾಂತರಿಸುತ್ತಿದ್ದೆ. ನಾಲ್ಕು ಜನರ ಮೊಗದಲ್ಲಿ ಮಂದಹಾಸ ಮೂಡಿರುತ್ತಿತ್ತು ‘ನಾನು -ಅಪ್ಪ-ಅಮ್ಮ ಹಾಗೂ ಎಂ80’.

ಗಾಡಿಗಳು ಬದಲಾಗಿವೆ ಮನೆಯಂಗಳದಲಿ
ಉರುಳಲು ವರುಶಗಳು
ಇನ್ನೂ ಮಾಸದೆ ಮನದಂಗಳದಲಿ
 ಹಸಿರು, ಹರುಶಗಳು

ಮನದ ಪುಟದ ಹಳೆಯ ಹಾಳೆ ತುಸು ಉಸಿರಾಡಲೆಂದು ತೆರೆದಾಗ, ಮೂಡಿತೊಂದು ಪ್ರಸಂಗ – “ನಾನು-ಅಪ್ಪ-ಎಂ80 ಸಂಗ”

( ಚಿತ್ರ ಸೆಲೆ: walkthroughindia.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: