38 ನಿಮಿಶಗಳಲ್ಲಿ ಮುಗಿದ ಜಗತ್ತಿನ ಅತಿ ಪುಟ್ಟ ಯುದ್ದ

– ಕೆ.ವಿ.ಶಶಿದರ.

1896ರ ಆಂಗ್ಲೋ-ಜಾಂಜಿಬಾರ್ ವಾರ್ – ಇತಿಹಾಸದಲ್ಲಿನ ಆಂಗ್ಲೋ-ಜಾಂಜಿಬಾರ್ ಯುದ್ದವನ್ನು ಗಮನಿಸಿದರೆ ದಾಕಲಾಗಿರುವ ಅಸಂಕ್ಯಾತ ಯುದ್ದಗಳಲ್ಲಿ ಅತಿ ಕಡಿಮೆ ಹೊತ್ತಿನ ಯುದ್ದ ಇದೇ ಎಂದು ಗಂಟಾಗೋಶವಾಗಿ ಹೇಳಬಹುದು. ವಾಸ್ತವವಾಗಿ ಈ ಯುದ್ದದ ಅವದಿ ಒಂದು ಗಂಟೆಗೂ ಕಡಿಮೆ. ಕೇವಲ 38 ನಿಮಿಶಗಳು ಮಾತ್ರ! ಹಾಗಾಗಿ ವಿಶ್ವದ ಇತಿಹಾಸ ಪುಟದಲ್ಲಿ ಅತಿ ಪುಟ್ಟ ಯುದ್ದ ಎಂಬ ದಾಕಲೆಯನ್ನು ಇದು ಆಕ್ರಮಿಸಿಕೊಂಡಿದೆ.

ಪ್ರಪಂಚದ ಇತಿಹಾಸವನ್ನು ಅವಲೋಕಿಸಿದರೆ ಅದರ ತುಂಬಾ ತುಂಬಿರುವುದು ಅಸಂಕ್ಯಾತ ಯುದ್ದದ ಇತಿಹಾಸವೇ. ನಾಗರೀಕ ಕಲಹ, ಸ್ವಾತಂತ್ರ ಹೋರಾಟ ಹಾಗೂ ಯುದ್ದದ ಮೂಲಕ ಆದ ವಿಜಯವೇ ವಿಶ್ವ ಚಿದ್ರ ಚಿದ್ರವಾಗಲು ಮೂಲ. ಯುದ್ದ ನಾಗರೀಕತೆಯಶ್ಟೇ ಹಳೆಯದು ಎಂಬುವುದನ್ನು ಅಲ್ಲಗೆಳೆಯುವಂತಿಲ್ಲ.

ಮೊಟ್ಟ ಮೊದಲನೇ ಯುದ್ದ ನಡೆದಿದ್ದು ಕ್ರಿ.ಪೂ.2700 ರಲ್ಲಿ

ಸುಮರ್ ಮತ್ತು ಎಲಾಮ್ ನಡುವೆ ಈ ಯುದ್ದ ನಡೆಯಿತು. ಅಲ್ಲಿಂದೀಚೆಗೆ ಇಳೆಯು ಅಸಂಕ್ಯಾತ ಯುದ್ದಗಳಿಗೆ ಮೂಕ ಸಾಕ್ಶಿಯಾಗಿದೆ. ಯುದ್ದದ ಬಯಂಕರ ವಿನಾಶಕಾರಿ ಪರಿಣಾಮದ ಬಗ್ಗೆ ಅರಿವಿದ್ದರೂ ಸಹ ಮಾನವನಲ್ಲಿ ಯುದ್ದದ ದಾಹ, ಶಕ್ತಿ ತೋರಿಸುವ ವಾಂಚೆ ಕಿಂಚಿತ್ತೂ ಕಡಿಮೆ ಆಗಿಲ್ಲದಿರುವುದು ವಿಪರ‍್ಯಾಸ.

ಯುದ್ದದ ಪ್ರಾರಂಬ ಎಶ್ಟು ಅನಿಶ್ಚಿತವೋ ಯುದ್ದಗಳು ನಡೆಯುವ ಅವದಿಯೂ ಅಶ್ಟೇ. ಇದಕ್ಕೆ ಯಾವುದೇ ಕಡಿವಾಣವಿಲ್ಲ. ಎದುರಾಳಿ ಸೋತು ಶರಣಾದಾಗಲೇ ಯುದ್ದಕ್ಕೆ ಅಂತ್ಯ. ಇದೇ ಮಾನದಂಡ. ಹಲವು ಯುದ್ದಗಳು ಎಡಬಿಡದೆ ಅನೇಕ ವರುಶಗಳ ಕಾಲ ನಡೆದ ದಾಕಲೆಗಳಿವೆ.

ಆಂಗ್ಲೋ-ಜಾಂಜಿಬಾರ್ ಯುದ್ದ ನಡೆದಿದ್ದು ಏಕೆ?

1890ರಲ್ಲಿ ಬ್ರಿಟನ್ ಮತ್ತು ಜರ‍್ಮನಿ ಮಾಡಿಕೊಂಡ ಒಪ್ಪಂದದ ಪ್ರಕಾರ ಮೂಡಣ ಆಪ್ರಿಕಾದ ಜಾಂಜಿಬಾರ್ ದ್ವೀಪವು ಬ್ರಿಟೀಶ್ ಸಾಮ್ರಾಜ್ಯದ ಪ್ರಬಾವದಲ್ಲಿದ್ದ ಕಾರಣ ಅದೇ ಆ ದ್ವೀಪದ ರಕ್ಶಕ ಎಂದು ಗೋಶಿಸಲಾಯಿತು. ಬ್ರಿಟೀಶ್ ಸಾಮ್ರಾಜ್ಯದ ಬೆಂಬಲದೊಂದಿಗೆ, ಹಮಾದ್ ಬಿನ್ ತುವೈನಿ ಜಾಂಜಿಬಾರ್ ದ್ವೀಪದ ಸುಲ್ತಾನನಾದ. ನಂತರದ ಕೇವಲ ಮೂರು ವರುಶಗಳಲ್ಲಿ ಈತ ಹಟಾತ್ ಸಾವನ್ನಪ್ಪಿದ. ದ್ವೀಪದ ಜನತೆಗೆ ಆತನ ಸಾವು ಸಹಜವಾದುದು ಎನಿಸಲಿಲ್ಲ. ಈ ಪುಟ್ಟ ದ್ವೀಪದ ಉತ್ತರಾದಿಕಾರಿಯಾಗಿ ಗೋಶಿಸಿಕೊಂಡ ಅವನ ಸೋದರ ಸಂಬಂದಿ ಕಲೀದ್ ಬಿನ್ ಬರ್‍ಗಾಶನು ಹಮಾದ್ ಬಿನ್ ತುವೈನಿಯನ್ನು ವಿಶವಿಕ್ಕಿ ಸಾಯಿಸಿರಬಹುದೆಂಬ ಊಹಾಪೋಹಗಳು ಎದ್ದವು.

ಬ್ರಿಟೀಶ್ ಸಾಮ್ರಾಜ್ಯವು ಕಲೀದ್ ಬಿನ್ ಬರ್‍ಗಾಶನನ್ನು ಹೊಸ ಆಡಳಿತಾದಿಕಾರಿಯಾಗಿ ಒಪ್ಪಿಕೊಂಡಿದ್ದರೆ ಎಲ್ಲವೂ ಸರಿಹೋಗುತ್ತಿತ್ತು. ಆದರೆ ಬ್ರಿಟೀಶ್ ಸಾಮ್ರಾಜ್ಯವು ಹಮಾದ್ ಬಿನ್ ಪರವಾಗಿತ್ತು. ಈತನನ್ನು ಬಿಟ್ಟು ಬೇರಾವುದೇ ವ್ಯಕ್ತಿಯನ್ನು ಸುಲ್ತಾನನ್ನಾಗಿ ನೋಡಲು ಬ್ರಿಟೀಶ್ ಸಾಮ್ರಾಜ್ಯಕ್ಕೆ ಸುತರಾಂ ಒಪ್ಪಿಗೆಯಿರಲಿಲ್ಲ. ಅದ್ದರಿಂದ ಕಲೀದ್ ಬಿನ್ ಬರ್‍ಗಾಶ್‍ಗೆ ಆಗಸ್ಟ್ 27ರ ಬೆಳಿಗ್ಗೆ 9 ಗಂಟೆಗೆ ಪದತ್ಯಾಗ ಮಾಡಲು ಅಂತಿಮ ಗಡುವನ್ನು ನೀಡಿತು. ಇಲ್ಲವಾದಲ್ಲಿ ಬ್ರಿಟೀಶ್ ಸೈನ್ಯದ ಆಕ್ರಮಣಕ್ಕೆ ಸಿದ್ದವಾಗುವಂತೆಯೂ ಸೂಚಿಸಲಾಯಿತು.

ಆಡಳಿತದಲ್ಲಿ ಅನನುಬವಿಯಾದ ಕಲೀದ್ ಬಿನ್ ಬರ್‍ಗಾಶನಿಗೆ ಬ್ರಿಟೀಶ್ ಸಾಮ್ರಾಜ್ಯದ ದೈತ್ಯ ಶಕ್ತಿಯ ಬಗ್ಗೆ ಅರಿವಿರಲಿಲ್ಲ. ಅರಮನೆಯ ಸುತ್ತಾ ಸೂಕ್ತ ಬಂದೋಬಸ್ತ್ ಮಾಡಿಕೊಂಡ ಆತ ತನ್ನ 3000 ಕಟ್ಟಾ ಅನುಯಾಯಿಗಳೊಂದಿಗೆ ಬ್ರಿಟೀಶರ ಸೈನ್ಯಕ್ಕೆ ಸಡ್ಡು ಹೊಡೆದು ಜಾಂಜಿಬಾರ್ ಮೇಲಿನ ಅವರ ಹಿಡಿತವನ್ನು ತಪ್ಪಿಸಲು ತಯಾರಾದ. ಜಾಂಜಿಬಾರ್‍ನ ಸ್ವಯಂ ಗೋಶಿತ ಸುಲ್ತಾನನಿಗೆ ಗಡುವು ನೀಡಿದ ಬ್ರಿಟೀಶ್ ಸಾಮ್ರಾಜ್ಯವು ಒಂದು ವೇಳೆ ಯುದ್ದ ನಡೆದರೆ ಬೇಕಾಗುವುದೆಂದು ಐದು ಯುದ್ದ ನೌಕೆಗಳನ್ನು ಬಂದರಿನಲ್ಲಿ ತಂದು ನಿಲ್ಲಿಸಿತ್ತು. ರಾಜತಾಂತ್ರಿಕವಾಗಿ ಬಿಕ್ಕಟ್ಟನ್ನು ಪರಿಹರಿಸಲು ಬ್ರಿಟೀಶರು ಚಿಂತಿಸಿದ್ದರು. ಆದರೆ ಕಲೀದ್ ಬಿನ್ ಗೆ ಸುಲ್ತಾನನ ಪದವಿಯನ್ನು ಬಿಟ್ಟುಕೊಡಲು ಸುತರಾಂ ಇಶ್ಟವಿರಲಿಲ್ಲ. ಆತನಿಗೆ ಬ್ರಿಟೀಶರು ತನ್ನ ಮೇಲೆ ಆಕ್ರಮಣ ಮಾಡುವುದಿಲ್ಲವೆಂಬ ಬಲವಾದ ನಂಬಿಕೆಯಿತ್ತು. ಆದರೆ ಆತನ ನಂಬಿಕೆ ಸುಳ್ಳಾಯಿತು.

ಆಗಸ್ಟ್ 27ರ ಬೆಳಿಗ್ಗೆ ಸ್ತಳೀಯ ಸಮಯ 9 ಗಂಟೆಗೆ ನಿಕರವಾಗಿ ಅವರು ನೀಡಿದ್ದ ಗಡುವಿನ ಸಮಯ ಮುಗಿಯುತ್ತಿದ್ದಂತೆ ಗುಂಡಿನ ಸುರಿಮಳೆಗೈದರು. ಕೇವಲ ಕಲವೇ ನಿಮಿಶಗಳಲ್ಲಿ ಜಾಂಜಿಬಾರಿನ ರಾಯಲ್ ಯಾಚ್ ಮತ್ತು ಇಡೀ ಅರಮನೆಯನ್ನು ದ್ವಂಸಗೊಳಿಸಿದರು. ಈ ಆಕ್ರಮಣದಲ್ಲಿ 500ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದರು. ಕಣ್ಣುಮುಚ್ಚಿ ಬಿಡುವುದರಲ್ಲಿ ನಡೆದು ಹೋದ ಗಟನೆಯಿಂದ ವಿಚಲಿತನಾದ ಸುಲ್ತಾನ ಕಲೀದ್ ಬಿನ್ ಬರ್‍ಗಾಶ್ ಪಲಾಯನಗೈದು ಜರ‍್ಮನ್ ದೂತವಾಸದಲ್ಲಿ ಆಶ್ರಯ ಪಡೆದ. ಬ್ರಿಟೀಶರ ಸೇನೆ ಸುಲ್ತಾನನ ದ್ವಜವನ್ನು ಕೆಡವಿ ಬ್ರಿಟೀಶ್ ಸಾಮ್ರಾಜ್ಯದ ದ್ವಜವನ್ನು ಹಾರಿಸುವಲ್ಲಿ ಯಶಸ್ವಿಯಾಯಿತು. ಯುದ್ದ ಕೊನೆಗೊಂಡಿತು.

ಇಶ್ಟೆಲ್ಲಾ ಗಟನೆಗಳು ನಡೆದದ್ದು ಕೇವಲ 38 ನಿಮಿಶಗಳಲ್ಲಿ. ಹಾಗಾಗಿ ಇದು ವಿಶ್ವದಲ್ಲೇ ಅತ್ಯಂತ ಕಡಿಮೆ ಅವದಿಯ ಯುದ್ದ ಎಂದು ಇತಿಹಾಸ ಪುಟಗಳಲ್ಲಿ ಸೇರಿ ಹೋಗಿದೆ.

(ಮಾಹಿತಿ ಸೆಲೆ: thevintagenews, wiki, history-uk, millitaryhistorynow )
(ಚಿತ್ರ ಸೆಲೆ: every-record.com ,  wiki)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: