ರಾಬಿನ್ ಉತ್ತಪ್ಪ – “ದಿ ವಾಕಿಂಗ್ ಅಸಾಸಿನ್”

ರಾಮಚಂದ್ರ ಮಹಾರುದ್ರಪ್ಪ.

ಬೆಂಗಳೂರಿನಲ್ಲಿ 2000 ಇಸವಿಯ ಕರ‍್ನಾಟಕದ ಕಿರಿಯರ ತಂಡದ ಆಯ್ಕೆಗೆ ನಡೆಯುವ ಕ್ರಿಕೆಟ್  ಟ್ರಯಲ್ಸ್ ನಲ್ಲಿ, ನೀರಸ ಪ್ರದರ‍್ಶನ ತೋರಿದ 15ರ ಪೋರನನ್ನು ಆಯ್ಕೆಗಾರರು ತಂಡದಿಂದ ಹೊರಗಿಡುತ್ತಾರೆ. ಈ ನೋವನ್ನು ಅರಗಿಸಿಕೊಳ್ಳಲಾಗದೆ ಮನೆಗೆ ಹೋಗಿ ತಂದೆ ತಾಯಿಯನ್ನು ಎದುರಿಸಲು ದೈರ‍್ಯ ಸಾಲದೇ ಆ ಹುಡುಗ ಕಬ್ಬನ್ ಪಾರ‍್ಕ್ ನಲ್ಲಿ ದಿನವೆಲ್ಲಾ ಕಳೆದು, ಇನ್ನು ನನಗೆ ಕ್ರಿಕೆಟ್ ನಲ್ಲಿ ಬವಿಶ್ಯ ಇದೆಯೇ ಎಂದು ಗೊಂದಲಕ್ಕೊಳಗಾಗುತ್ತಾನೆ. ಆಗ ಸುಮಾರು 80 ಕೆ.ಜಿ ತೂಗುತ್ತಿದ್ದ ಆ ಹುಡುಗನನ್ನು ಕಂಡು, ಇವನು ಕ್ರಿಕೆಟ್ ಆಡುತ್ತಾನೆಯೇ ಎಂದು ಮೂಗು ಮುರಿದವರೇ ಹೆಚ್ಚು. ಆದರೆ ಪವಾಡ ಎಂಬಂತೆ ಅಲ್ಲಿಂದ ಕೇವಲ 2 ವರ‍್ಶಗಳಲ್ಲಿ ಕರ‍್ನಾಟಕದ ರಣಜಿ ತಂಡಕ್ಕೆ ಆಯ್ಕೆಯಾಗುವುದಲ್ಲದೇ 6 ವರ‍್ಶದೊಳಗೆ ಬಾರತ ತಂಡಕ್ಕೂ ಆ ಹುಡುಗ ಆಡುತ್ತಾನೆ. ಆ ಹುಡುಗ ಬೇರೆ ಯಾರು ಅಲ್ಲ, ಅಂತರಾಶ್ಟ್ರೀಯ ಕ್ರಿಕೆಟ್ ನಲ್ಲಿ “ದಿ ವಾಕಿಂಗ್ ಅಸಾಸಿನ್” ಎಂದೇ ಹೆಸರಾಗಿದ್ದ ಕರ‍್ನಾಟಕದ ಸ್ಪೋಟಕ ಬ್ಯಾಟ್ಸ್ಮನ್ ರಾಬಿನ್ ಉತ್ತಪ್ಪ.

ಎಳವೆಯಲ್ಲೇ ಕ್ರಿಕೆಟ್ ಒಲವು

ರಾಬಿನ್ ಉತ್ತಪ್ಪ ಅವರು ವೇಣು ಉತ್ತಪ್ಪ ಮತ್ತು ರೋಸಿ ಉತ್ತಪ್ಪ ಅವರ ಮೊದಲ ಕೂಸಾಗಿ 1985 ರ ನವಂಬರ್ 11 ರಂದು ಕೊಡಗಿನಲ್ಲಿ ಹುಟ್ಟಿದರು. ತಂದೆ ವೇಣು ಉತ್ತಪ್ಪ ಅಂತರಾಶ್ಟ್ರೀಯ ಹಾಕಿ ರೆಪರಿ ಆಗಿದ್ದರಿಂದ ಎಳವೆಯಲ್ಲೇ ರಾಬಿನ್ ರಿಗೆ ಆಟದ ಸಲುವಾಗಿ ಬೇಕಾದ ಪ್ರೋತ್ಸಾಹ ದೊರಕಿತು. ಆದರೆ ರಾಬಿನ್ ಆರಿಸಿಕೊಂಡಿದ್ದು ಮಾತ್ರ ತನಗೆ ಮತ್ತು ತನ್ನ ತಾಯಿಗೆ ಪ್ರಿಯವಾದ ಕ್ರಿಕೆಟ್ ಆಟವನ್ನು. ಬೆಂಗಳೂರಿನ ಸೇಂಟ್ ಜೋಸೆಪ್ಸ್ ಶಾಲೆ ಸೇರಿದ ಪುಟ್ಟ ರಾಬಿನ್ ಮೊದಲು ಬ್ಯಾಟ್ ಹಿಡಿದಾಗ ಅವರಿಗಿನ್ನು 8 ವರ‍್ಶ. ಅಲ್ಲಿಂದ ಸುಮಾರು ಮೂರರಿಂದ ನಾಲ್ಕು ವರ‍್ಶ ಅಂತರ ಶಾಲೆಯ ಪೋಟಿಗಳಲ್ಲಿ ಆಡುತ್ತಿದ್ದ ರಾಬಿನ್, ನಂತರ ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್ ಸೇರಿ ವ್ರುತ್ತಿಪರ ಕ್ರಿಕೆಟಿಗನಾಗುವತ್ತ ಮೊದಲ ಪುಟ್ಟ ಹೆಜ್ಜೆ ಇಟ್ಟರು.

ಕ್ಲಬ್ ಕ್ರಿಕೆಟಿಗರಾದ ಮೇಲೆ ರಾಬಿನ್ ವಿಕೆಟ್ ಕೀಪಿಂಗ್ ಅನ್ನು ಕೂಡ ಒಂದು ಮಟ್ಟಕ್ಕೆ ಕರಗತ ಮಾಡಿಕೊಂಡರು. ಕೆ.ಎಸ್.ಸಿ.ಯ ನಡೆಸುವ ಮೊದಲ ಡಿವಿಶನ್ ಪಂದ್ಯಾವಳಿಗಳಾದ ಕೆ.ತಿಮ್ಮಪ್ಪಯ್ಯ ಟ್ರೋಪಿ, ಶಪಿ ದರಾಶಾ ಟ್ರೋಪಿಗಳಲ್ಲಿ ತಮ್ಮ ಬಿರುಸಿನ ಆಟದಿಂದ ಎಲ್ಲರ ಗಮನ ಸೆಳೆದರು. ನಂತರ ಬಿ.ಸಿ.ಸಿ.ಐ ನ ವಿಜಯ್ ಮರ‍್ಚೆಂಟ್ ಟ್ರೋಪಿ ಹಾಗು ಸ್ಪೋರ‍್ಟ್ಸ್ ಸ್ಟಾರ್ ಟ್ರೋಪಿಯಲ್ಲೂ ರಾಬಿನ್ ಬ್ಯಾಟ್ ನಿಂದ ರನ್ ಗಳ ಹೊಳೆಯೇ ಹರಿಯಿತು.

ರಣಜಿ ಪಾದಾರ‍್ಪಣೆ

2000 ಇಸವಿಯಿಂದ ಈಚೆಗೆ ಸಾಕಶ್ಟು ಸೊರಗಿದ್ದ ಕರ‍್ನಾಟಕ ತಂಡಕ್ಕೆ ಕಸುವು ತುಂಬಲು ಹೊಸ ಆಟಗಾರರ ಅವಶ್ಯಕತೆಯನ್ನು ಮನಗಂಡಿದ್ದ ರಾಜ್ಯದ ಆಯ್ಕೆಗಾರರು, 2002/03 ರ ಸಾಲಿನ ರಣಜಿ ತಂಡಕ್ಕೆ 17ರ ಹುಡುಗ ರಾಬಿನ್ ಉತ್ತಪ್ಪರನ್ನು ಆಯ್ಕೆ ಮಾಡಿದರು. ಅದೇ ವರ‍್ಶ ಪರೀದಾಬಾದ್ ನಲ್ಲಿ ಹರಿಯಾಣ ಮೇಲೆ ತಮ್ಮ ಮೊದಲ ರಣಜಿ ಪಂದ್ಯ ಆಡಿದ ಉತ್ತಪ್ಪ 40 ರನ್ ಗಳಿಸಿದರೂ ನಂತರದ 3 ಪಂದ್ಯಗಳಲ್ಲಿ ಹೆಚ್ಚು ರನ್ ಗಳಿಸದೇ ಎರಡು ವರ‍್ಶಗಳ ಕಾಲ ತಂಡದಿಂದ ಹೊರಗುಳಿದರು.

2004 – ಕಿರಿಯರ ವಿಶ್ವಕಪ್

ಕರ‍್ನಾಟಕ ತಂಡದಿಂದ ಕೈ ಬಿಡಲಾಗಿದ್ದರೂ ರಾಬಿನ್ ರ ಬಿರುಸಿನ ಆಟ ಬಾಂಗ್ಲಾದೇಶದಲ್ಲಿ ನಡೆದ 2004 ರ ಕಿರಿಯರ ವಿಶ್ವಕಪ್ ತಂಡದಲ್ಲಿ ಅವರಿಗೆ ಎಡೆ ಮಾಡಿ ಕೊಟ್ಟಿತು. ಅಂಬಾಟಿ ರಾಯುಡು ಮುಂದಾಳತ್ವದಲ್ಲಿ ವಿಶ್ವಕಪ್ ಗೆ ತೆರಳಿದ ಬಾರತ ತಂಡ ಪಾಕಿಸ್ತಾನದ ಮೇಲೆ ಸೆಮಿ ಪೈನಲ್ ನಲ್ಲಿ ಮುಗ್ಗರಿಸಿದರೂ ಉತ್ತಪ್ಪ ಪಂದ್ಯಾವಳಿ ಉದ್ದಕ್ಕೂ ಒಳ್ಳೆ ಪ್ರದರ‍್ಶನವನ್ನೇ ನೀಡಿದರು. ಅದರಲ್ಲೂ ಲೀಗ್ ಹಂತದಲ್ಲಿ ಸ್ಕಾಟ್ ಲ್ಯಾಂಡ್ ಎದುರು 78 ಬಾಲ್ ಗಳಲ್ಲಿ ಅವರು ಗಳಿಸಿದ ಚುರುಕಿನ 97 ರನ್ ಗಳು, ಅವರ ಬ್ಯಾಟಿಂಗ್ ಅಳವಿಗೆ ಹಿಡಿದ ಕನ್ನಡಿಯಾಗಿತ್ತು.

2004/05 – ಮರಳಿ ಕರ‍್ನಾಟಕ ತಂಡಕ್ಕೆ

ಎರಡು ವರ‍್ಶ ರಾಜ್ಯ ತಂಡದಿಂದ ಹೊರಗಿದ್ದು ಮೊದಲ ಡಿವಿಶನ್ ಪಂದ್ಯಗಳ ಜೊತೆ ಕಿರಿಯರ ವಿಶ್ವಕಪ್ ಆಡಿ ಸಾಕಶ್ಟು ಪಕ್ವಗೊಂಡಿದ್ದ ಉತ್ತಪ್ಪರಿಗೆ ರಾಜ್ಯ ತಂಡದ ಕದ ಮತ್ತೊಮ್ಮೆ ತೆರೆಯುತ್ತದೆ. ತಂಡಕ್ಕೆ ಮರಳಿದ ಮೇಲೆ ಇದೇ ಸಾಲಿನಲ್ಲಿ ತಮ್ಮ 5ನೇ ರಣಜಿ ಪಂದ್ಯದಲ್ಲಿ ಬೆಂಗಳೂರಿನಲ್ಲಿ ಮದ್ಯ ಪ್ರದೇಶದ ಮೇಲೆ ಉತ್ತಪ್ಪ ತಮ್ಮ ಚೊಚ್ಚಲ ಶತಕ (162) ಬಾರಿಸಿದರು. ಅಲ್ಲಿಂದ ಮೊದಲ ದರ‍್ಜೆ ಆಟಗಾರರಾಗಿ ಅವರು ಮತ್ತೆಂದೂ ಹಿಂತಿರುಗಿ ನೋಡಲೇ ಇಲ್ಲ. ಪ್ರತಿ ವರ‍್ಶ ರನ್ ಪೇರಿಸುತ್ತಲೇ ರಾಜ್ಯ ತಂಡದ ಕಾಯಮ್ ಸದಸ್ಯರಾದರು.

2005 ರ ಸಾಲಿನ ರಣಜಿ ಟ್ರೋಪಿ ಆರಂಬಕ್ಕೂ ಮುನ್ನ ನಡೆಯುವ ಚಾಲೆಂಜರ್ ಟ್ರೋಪಿಯ ಇಂಡಿಯಾ ಬಿ ತಂಡಕ್ಕೆ ಆಯ್ಕೆಯಾಗಿ ಕರ‍್ನಾಟಕದಿಂದ ಬಾರತಕ್ಕೆ ಆಡುವ ಮುಂದಿನ ಆಟಗಾರ ನಾನೇ ಎಂದು ಕನ್ನಡಿಗರಲ್ಲಿ ವಿಶ್ವಾಸ ಮೂಡಿಸಿದರು. ಚಾಲೆಂಜರ್ ಟ್ರೋಪಿಯಲ್ಲೂ ಅವರ ಬ್ಯಾಟ್ ಸದ್ದು ಮಾಡಿತು. ಸರಣಿಯಲ್ಲಿ ಶತಕ ಗಳಿಸದೇ ಇದ್ದರೂ ಉತ್ತಪ್ಪರ ಬಿರುಸಿನ ಬ್ಯಾಟಿಂಗ್ ಪರಿ ಎಲ್ಲರಿಗೂ ರಸದೌತಣ ನೀಡಿತು. ನಂತರ ನಡೆದ ರಣಜಿ ಟ್ರೋಪಿಯಲ್ಲೂ ರಾಬಿನ್ ರ ಬ್ಯಾಟ್ ನಿಂದ ರನ್ ಗಳು ಬಂದವು. ರಣಜಿ ಟ್ರೋಪಿ ನಂತರ 2005/06 ರ ಒಂದು ದಿನ ಆವ್ರುತ್ತಿಯ ಪಂದ್ಯಾವಳಿಯಾದ ವಿಜಯ್ ಹಜಾರೆ ಟ್ರೋಪಿಯಲ್ಲಿ ಉತ್ತಪ್ಪ ಮೂರು ಅರ‍್ದ ಶತಕಗಳನ್ನು ಗಳಿಸಿ ಮತ್ತೊಮ್ಮೆ ಅಂತರಾಶ್ಟ್ರೀಯ ಕ್ರಿಕೆಟ್ ಆಡುವಶ್ಟು ಅಳವು ನನ್ನಲ್ಲಿದೆ ಅನ್ನೋದನ್ನ ತೋರಿಸಿದರು. ಇದರ ಪರಿಣಾಮವಾಗಿ ಅವರು ಹೆಸರು ಬಾರತ ತಂಡದ ಆಯ್ಕೆಯ ವೇಳೆ ಕೇಳಲಾರಂಬಿಸಿತು.

2006 – ಅಂತರಾಶ್ಟ್ರೀಯ ಕ್ರಿಕೆಟ್ ಗೆ ಪಾದಾರ‍್ಪಣೆ

ಕಡೆಗೆ ಏಪ್ರಿಲ್ ನಲ್ಲಿ ಉತ್ತಪ್ಪರನ್ನು ಬಾರತ ತಂಡಕ್ಕೆ ಆಯ್ಕೆ ಮಾಡಲಾಯಿತು. ಇಂಗ್ಲೆಂಡ್ ಮೇಲೆ ಇಂದೋರ್ ನಲ್ಲಿ ನಡೆದ ಏಳನೇ ಒಂದು ದಿನದ ಪಂದ್ಯ ಉತ್ತಪ್ಪರ ಚೊಚ್ಚಲ ಅಂತರಾಶ್ಟ್ರೀಯ ಪಂದ್ಯವಾಯಿತು. ಈ ಪಂದ್ಯದಲ್ಲಿ ಇಂಗ್ಲೆಂಡ್ ನ ದೊಡ್ಡ ಸವಾಲನ್ನು ಬೆನ್ನತ್ತಿ ಬಾರತದ ಇನ್ನಿಂಗ್ಸ್ ಶುರು ಮಾಡಿದವರು ನಾಯಕ ದ್ರಾವಿಡ್ ಹಾಗು ಉತ್ತಪ್ಪ. ಕರ‍್ನಾಟಕದ ಈ ಇಬ್ಬರು ಶತಕದ ಜೊತೆಯಾಟ ಆಡಿ ತಂಡಕ್ಕೆ ಬದ್ರ ಬುನಾದಿ ಹಾಕಿಕೊಟ್ಟರು. ಉತ್ತಪ್ಪ 86 ರನ್ ಗಳಿಸಿದ್ದು ಆಗಿನ ಪದಾರ‍್ಪಣೆಯ ಪಂದ್ಯದಲ್ಲಿ ಬಾರತೀಯನೊಬ್ಬನ ಅತ್ಯಂತ ಹೆಚ್ಚು ಮೊತ್ತ ಆಗಿತ್ತು. ನಂತರ ಈ ದಾಕಲೆಯನ್ನು ಕನ್ನಡಿಗರೇ ಆದ ಲೋಕೇಶ್ ರಾಹುಲ್ 2016 ರಲ್ಲಿ ಜಿಂಬಾಬ್ವೆ ಮೇಲೆ ಶತಕ ಬಾರಿಸುವ ಮೂಲಕ ಮುರಿದರು.

ಈ ಪಂದ್ಯದ ನಂತರ ಅಬುದಾಬಿಯಲ್ಲಿ ಪಾಕಿಸ್ತಾನದ ಮೇಲೆ ಮತ್ತು ಟ್ರಿನಿಡಾಡ್ ನಲ್ಲಿ ವೆಸ್ಟ್ ಇಂಡೀಸ್ ಮೇಲೆ ಒಂದೊಂದು ಪಂದ್ಯವಾಡಿ ಎರಡರಲ್ಲೂ ಉತ್ತಪ್ಪ ಕಡಿಮೆ ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದರು. ಉತ್ತಪ್ಪ ಅವರು ಎಣಿಸಿದಂತೆ ಅವರನ್ನು ತಂಡದಿಂದ ಕೈಬಿಡಲಾಯಿತು. ವೆಸ್ಟ್ ಇಂಡೀಸ್ ನಿಂದ ಮರಳಿ ಬಾರತಕ್ಕೆ ಬಂದ ಉತ್ತಪ್ಪ ಅಲ್ಲಿ ತಾವು ಕೊಂಡಿದ್ದ ಸಿಮ್ ಕಾರ‍್ಡ್ ಅನ್ನು ಅವರ ತಾಯಿಗೆ ಕೊಟ್ಟು ಇದನ್ನು ಜೋಪಾನವಾಗಿ ಎತ್ತಿಡು. ಮುಂದಿನ ವರ‍್ಶ ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿರುವ ವಿಶ್ವಕಪ್ ನಲ್ಲಿ ನಾನು ಆಡಲಿರುವೆ, ಆಗ ಈ ಸಿಮ್ ಬೇಕಾಗುತ್ತದೆ ಎಂದು ಬರವಸೆಯಿಂದ ಹೇಳಿದರು.

ಕಟಿಣ ಪರಿಶ್ರಮ – ಲಯ ಕಂಡುಕೊಂಡ ರಾಬಿನ್

2006 ರ ಸಾಲಿನ ದೇಶೀ ಕ್ರಿಕೆಟ್ ಶುರುವಾಗುವುದಕ್ಕಿಂತ ಮೊದಲು ಉತ್ತಪ್ಪ ಬೆಂಗಳೂರಿನ ರಾಶ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಸಾಕಶ್ಟು ಬೆವರು ಹರಿಸಿ ಮುಂದಿನ ಸವಾಲುಗಳಿಗೆ ಅಣಿಯಾದಾರು. ಅವರ ಪರಿಶ್ರಮ ರನ್ ಗಳಾಗಿ ಬದಲಾಗಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಚಾಲೆಂಜರ್ ಟ್ರೋಪಿಯಲ್ಲಿ ಲಯ ಕಂಡುಕೊಂಡಂತೆ ಕಂಡ ಉತ್ತಪ್ಪ, ರಣಜಿ ಟ್ರೋಪಿಯಲ್ಲಿ ತಮ್ಮ ಚಳಕದ ಉತ್ತುಂಗವನ್ನು ತಲುಪಿದರು. ಕೇವಲ 7 ಪಂದ್ಯಗಳಲ್ಲಿ 3 ಶತಕಗಳೊಂದಿಗೆ ಬರೋಬ್ಬರಿ 854 ರನ್ ಗಳನ್ನು ಬಾರಿಸಿ ರಾಶ್ಟ್ರೀಯ ಆಯ್ಕೆಗಾರರು ಮತ್ತೆ ತಮ್ಮತ್ತ ತಿರುಗಿ ನೋಡುವಂತೆ ಮಾಡಿದರು. ನಿರೀಕ್ಶೆಯಂತೆಯೇ 2007ರ ಜನವರಿಯಲ್ಲಿ ಬಾರತದಲ್ಲಿ ವೆಸ್ಟ್ ಇಂಡೀಸ್ ಮೇಲೆ ನಡೆಯಲಿದ್ದ ಒಂದು ದಿನದ ಪಂದ್ಯಗಳಿಗೆ ಆಯ್ಕೆಯಾದರು.

ಚೆನ್ನೈ ಪಂದ್ಯದಲ್ಲಿ ಅವಕಾಶ ಪಡೆದ ಉತ್ತಪ್ಪ ಕೇವಲ 41 ಎಸೆತಗಳಲ್ಲಿ ಬಿರುಸಿನ 70 ರನ್ ಗಳಸಿ ತಮ್ಮ ವಿಶ್ವಕಪ್ ಆಡುವ ಕನಸಿಗೆ ಬದ್ರ ಅಡಿಪಾಯ ಹಾಕಿದರು. ಈ ಇನ್ನಿಂಗ್ಸ್ ನಲ್ಲಿ ಅವರು ವೇಗದ ಬೌಲರ್ ಗಳನ್ನೂ ಸ್ಪಿನ್ನರ್ ಗಳಂತೆ ಕ್ರೀಸ್ ನಿಂದ ಹೊರನಡೆದು ನೇರ ಸಿಕ್ಸ್ ಗಳನ್ನು ಹೊಡೆದ ಪರಿ ಎಲ್ಲರಿಗೂ ಅಚ್ಚರಿ ಮೂಡಿಸಿತು. ಎಶ್ಟು ದೊಡ್ಡ ಆಟದ ಅಂಗಣವೇ ಇದ್ದರೂ ನಿರಾಯಾಸವಾಗಿ ಸಿಕ್ಸ್ ಹೊಡೆಯಬಲ್ಲ ಅಳವು ತನಗಿದೆ ಅನ್ನೋದನ್ನ ಉತ್ತಪ್ಪ ಸಾಬೀತು ಮಾಡಿದರು. ನಂತರ ಶ್ರೀಲಂಕಾ ಸರಣಿಯಲ್ಲೂ ಒಳ್ಳೆ ಆಟ ಆಡಿದ ಉತ್ತಪ್ಪ 2007ರ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿ ತಮ್ಮ ತಾಯಿಗೆ ಕೊಟ್ಟ ಮಾತನ್ನು ಉಳಿಸಿಕೊಂಡರು.

2007 – ಎರಡು ವಿಶ್ವಕಪ್ ಗಳು

ವೆಸ್ಟ್ ಇಂಡೀಸ್ ನಲ್ಲಿ ನಡೆದ 50 ಓವರ್ ಗಳ ವಿಶ್ವಕಪ್ ನಲ್ಲಿ ಬಾರತ ಆಡಿದ 3 ಪಂದ್ಯಗಳಲ್ಲಿ ಎರಡರಲ್ಲಿ ಸೋತು ಮೊದಲ ಸುತ್ತಿನಲ್ಲೇ ಹೊರ ನಡೆಯಿತು. ಉತ್ತಪ್ಪರಿಗೆ ಮೂರೂ ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕರೂ ಹೆಚ್ಚು ರನ್ ಗಳಿಸದೆ ನಿರಾಸೆ ಮೂಡಿಸಿದರು. ಆದರೆ ಸೆಪ್ಟೆಂಬರ್ ನಲ್ಲಿ ದಕ್ಶಿಣ ಆಪ್ರಿಕಾದಲ್ಲಿ ನಡೆದ 20 ಓವರ್ ಗಳ ವಿಶ್ವಕಪ್ ಅನ್ನು ಬಾರತ ಗೆಲ್ಲುವಲ್ಲಿ ಉತ್ತಪ್ಪ ಮುಕ್ಯ ಪಾತ್ರ ವಹಿಸಿದರು. ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಒಬ್ಬರೇ ಹೋರಾಟ ಮಾಡಿ ಅರ‍್ದ ಶತಕ ಗಳಿಸಿ ತಂಡಕ್ಕೆ ಆಸರೆ ಆದರೆ, ಸೆಮಿ ಪೈನಲ್ ನಲ್ಲಿ ಆಸ್ಟ್ರೇಲಿಯಾ ಮೇಲೆ ಕೂಡ ತಮ್ಮ ಬಿರುಸಿನ ಆಟದ ರುಚಿಯನ್ನು ಎದುರಾಳಿಗೆ ತೋರಿಸಿದರು.

ಆಸ್ಟ್ರೇಲಿಯಾದ ಗಟಾನುಗಟಿ ಬೌಲರ್ ಗಳಾದ ಬ್ರೆಟ್ ಲೀ, ಜಾನ್ಸನ್ ರನ್ನು ಉತ್ತಪ್ಪ ದಂಡಿಸಿದ ಪರಿ ನೋಡುಗರನ್ನು ನಿಬ್ಬೆರಗಾಗಿಸಿತು. ನಂತರ 2008 ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸಾದಾರಣ ಯಶಸ್ಸು ಕಂಡರೂ ಮೆಲ್ಬರ‍್ನ್ ನಲ್ಲಿ ಬ್ರೆಟ್ ಲೀ ಅವರ ಬೌನ್ಸರ್ ಗೆ 100 ಮೀಟರ್ ಗಿಂತ ದೊಡ್ಡ ಸಿಕ್ಸ್ ಅನ್ನು ಲಾಂಗ್ ಆನ್ ದಿಕ್ಕಿನಲ್ಲಿ ಹೊಡೆದದ್ದು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಿತು. 2008 ರಲ್ಲೇ ಪಾಕಿಸ್ತಾನದಲ್ಲಿ ನಡೆದ ಏಶಿಯಾ ಕಪ್ ಗೆ ಉತ್ತಪ್ಪರಿಗೆ ಮಣೆ ಹಾಕಲಾಯಿತು. ಪದೇ ಪದೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಹಾಗೂ ಸ್ಪಿನ್ನರ್ ಗಳ ದಾಳಿಗೆ ಉತ್ತಪ್ಪ ನಲುಗಿದರು. ಪೈನಲ್ ನಲ್ಲಿ ಸೋತ ಬಾರತ ತಂಡದಿಂದ ಮತ್ತೊಮ್ಮೆ ಅವರನ್ನು ಕೈಬಿಡಲಾಯಿತು.

ಐ.ಪಿ.ಎಲ್ ನಲ್ಲಿ ಬೇಡಿಕೆ ಉಳಿಸಿಕೊಂಡಿರುವ ಕೊಡಗಿನ ವೀರ

ಬಾರತ ತಂಡದಲ್ಲಿ ಇರಲಿ ಇಲ್ಲದಿರಲಿ ಐಪಿಎಲ್ ಲಿ ಮಾತ್ರ ಉತ್ತಪ್ಪ ಅವರ ಬೇಡಿಕೆ ಕುಸಿದೇ ಇಲ್ಲ. ಇಲ್ಲಿಯವರೆಗು ಒಟ್ಟು ನಡೆದಿರುವ 10 ಐ.ಪಿ.ಎಲ್ ಗಳಲ್ಲಿ ಉತ್ತಪ್ಪ ಮುಂಬಯಿ ಇಂಡಿಯನ್ಸ್ ಪರ 1 ವರ‍್ಶ, ಬೆಂಗಳೂರು ಪರ 2 ವರ‍್ಶ, ಪುಣೆ ಪರ 3 ವರ‍್ಶ ಮತ್ತು ಕೋಲ್ಕತ್ತಾ ತಂಡದ ಪರ 4 ವರ‍್ಶ ಆಡಿದ್ದಾರೆ. 2008 ರ ಮೊದಲ ಐ.ಪಿ.ಎಲ್ ಗೆ ಮುಂಬಯಿ ತಂಡಕ್ಕೆ ಉತ್ತಪ್ಪ ಬೇಕೇ ಬೇಕು ಎಂದು ತಂಡದ ಒಡೆಯರಿಗೆ ಹೇಳಿ, ಸಚಿನ್ ತೆಂಡೂಲ್ಕರ್ ಉತ್ತಪ್ಪ ಅವರನ್ನು ಆರಿಸಿದ್ದು ಈ ಬಗೆಯ ಕ್ರಿಕೆಟ್ ನಲ್ಲಿ ಅವರ ಅಳವಿಗೆ ಹಿಡಿದ ಕನ್ನಡಿಯಾಗಿದೆ.

2011 ರಲ್ಲಿ ಪುಣೆ ತಂಡ ಅವರಿಗೆ ಯುವರಾಜ್ ಸಿಂಗ್ ರಿಗಿಂತ ಹೆಚ್ಚು ಹಣ (11.5 ಕೋಟಿ) ಕೊಟ್ಟಿದ್ದು ಈ ಪಂದ್ಯಾವಳಿಯ ಅಚ್ಚರಿಗಳಲ್ಲೊಂದು. ಒಟ್ಟು ಐಪಿಎಲ್ ನಲ್ಲಿ 149 ಪಂದ್ಯಗಳನ್ನಾಡಿ 3778 ರನ್ ಗಳನ್ನು ಗಳಿಸಿರುವ ಉತ್ತಪ್ಪ 2014 ರಲ್ಲಿ ಅತಿ ಹೆಚ್ಚು 660 ರನ್ ಬಾರಿಸಿ ಆರೆಂಜ್ ಟೋಪಿ ಪಡೆಯುವುದರ ಜೊತೆಗೆ ಕೋಲ್ಕತ್ತಾ ತಂಡದ ತೆಕ್ಕೆಗೆ ಪ್ರಶಸ್ತಿಯನ್ನು ಹಾಕಿದರು. ಇದೇ ವರ‍್ಶ ಸತತ 10 ಬಾರಿ 40 ಕ್ಕಿಂತ ಹೆಚ್ಚು ರನ್ ಗಳಿಸಿ ಐಪಿಎಲ್ ನಲ್ಲೊಂದು ವಿಶಿಶ್ಟ ದಾಕಲೆಯನ್ನು ಕೂಡ ತಮ್ಮದಾಗಿಸಿಕೊಂಡರು. ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ಹೊತ್ತು ಕಳೆದ 4 ವರ‍್ಶಗಳಿಂದ ಕೋಲ್ಕತ್ತಾ ತಂಡದ ಬೆನ್ನೆಲುಬಾಗಿ ಉತ್ತಪ್ಪ ಬೆಳೆದಿದ್ದಾರೆ. ಅಂತರಾಶ್ಟ್ರೀಯ ಕ್ರಿಕೆಟ್ ನಲ್ಲಿ ಹೇಳಿಕೊಳ್ಳುವಂತಹ ಸಾದನೆ ಮಾಡದ್ದಿದ್ದರೂ ಐಪಿಎಲ್ ನಲ್ಲಿ ಮಾತ್ರ ಉತ್ತಪ್ಪ ಬಾರತ ತಂಡದ ಕಾಯಮ್ ಸದಸ್ಯರನ್ನು ನಾಚಿಸುವಂತಹ ಆಟ ಆಡಿರೋದು ದಿಟ.

ಬಾರತ ತಂಡಕ್ಕೆ ಮರಳುವ ತುಡಿತ

2008 ರಲ್ಲಿ ಬಾರತ ತಂಡದಿಂದ ಹೊರ ಬಂದ ಮೇಲೆ 2012 ರಲ್ಲಿ ದಕ್ಶಿಣ ಆಪ್ರಿಕಾದಲ್ಲಿ ಒಂದೇ ಒಂದು 20 ಓವರ್ ಗಳ ಪಂದ್ಯದಲ್ಲಿ ಉತ್ತಪ್ಪರಿಗೆ ಆಡುವ ಅವಕಾಶ ಸಿಕ್ಕಿತು. ಮೂರ‍್ನಾಲ್ಕು ವರ‍್ಶ ದೇಶಿಯ ಕ್ರಿಕೆಟ್ ನಲ್ಲೂ ಹೇಳಿಕೊಳ್ಳುವಂತಹ ಆಟ ಆಡದೇ ಆಯ್ಕೆಗಾರರ ಕಣ್ಣುಗಳಿಂದ ದೂರವೇ ಉಳಿದರು. ಈ ನಡುವೆ ಐಪಿಎಲ್ ಆಡಿ ಸಾಕಶ್ಟು ಹಣ ಗಳಿಸುತ್ತಿದ್ದರೂ ಮತ್ತೆ ಬಾರತಕ್ಕೆ ಆಡಲೇ ಬೇಕು ಅನ್ನೋ ತುಡಿತ ಉತ್ತಪ್ಪರಲ್ಲಿ ಮನೆ ಮಾಡಿತ್ತು. ಆದರೆ 2012 ರಲ್ಲಿ ವೈಯುಕ್ತಿಕ ಕಾರಣ ಮತ್ತು ಏಕಾಗ್ರತೆಯ ಕೊರತೆಯಿಂದ ಆಟವನ್ನೇ ಬಿಡಬೇಕು ಅನ್ನೋ ಯೋಚನೆ ಕೂಡ ಅವರಿಗೆ ಬಂದಿತ್ತು. ಆಗ ಅವರಿಗೆ ನೆರವಾದವರು ಅವರ ಗೆಳತಿ ಶೀತಲ್ ಗೌತಮ್ (ಈಗ ಹೆಂಡತಿ). ಗೆಳತಿಯ ಮಾತಿನ ಮೇರೆಗೆ ಇನ್ನೊಂದು ವರ‍್ಶ ಆಡಿ ನೋಡೋ ಮನಸ್ಸು ಮಾಡಿದ ಉತ್ತಪ್ಪ ತಮ್ಮ ಬ್ಯಾಟಿಂಗ್ ಸುದಾರಣೆಗಾಗಿ ಪ್ರವೀಣ್ ಆಮ್ರೆ ಅವರನ್ನು ಕೋಚ್ ಆಗಿ ನೇಮಿಸಿಕೊಂಡರು.

ತರಬೇತಿಗಾಗಿ ಉತ್ತಪ್ಪ ಒಂದು ವರ‍್ಶ ಕಾಲ ತವರೂರು ಬೆಂಗಳೂರು ಬಿಟ್ಟು ಮುಂಬಯಿಯಲ್ಲಿ ಬೀಡು ಬಿಟ್ಟರು. ಆಮ್ರೆ ಅವರು ಉತ್ತಪ್ಪರ ಬ್ಯಾಟಿಂಗ್ ನಲ್ಲಿದ್ದ ಲೋಪದೋಶಗಳನ್ನು ತಿದ್ದಿ ತೀಡುವುದರ ಜೊತೆಗೆ ಅವರ ಬ್ಯಾಟಿಂಗ್ ಗೆ ನಿಲ್ಲುವ ಪರಿ ಹಾಗು ಪೂರ‍್ಣ ತಂತ್ರಗಾರಿಕೆಯನ್ನೇ ಬದಲಾಯಿಸಿದರು. ತಾನು ಚಿಕ್ಕಂದಿಂದ ಕಲಿತ ಬ್ಯಾಟಿಂಗ್ ಮಾದರಿಯನ್ನು ಪೂರ‍್ಣ ನೆಲಸಮ ಮಾಡಿ ಹೊಸದೊಂದು ಬಗೆಯನ್ನು ಕಲಿತು ಅಳವಡಿಸಿಕೊಳ್ಳೋದು ತುಂಬಾ ತೊಡಕಿನ ಹಾಗು ಸವಾಲಿನ ವಿಶಯವೇ ಆಗಿತ್ತು. ಹೆಚ್ಚು ಕಡಿಮೆ ಆದರೆ ತ್ರಿಶಂಕು ಪರಿಸ್ತಿತಿ ಉಂಟಾಗುವ ಆಪತ್ತು ಕೂಡ ಇತ್ತು. ಆದರೆ ಆಮ್ರೆ ಅವರ ಮೇಲೆ ಪೂರ‍್ತಿ ಬಾರ ಹಾಕಿ ರಾಬಿನ್ ಬರವಸೆಯಿಂದ ಬ್ಯಾಟಿಂಗ್ ಪಟ್ಟುಗಳನ್ನು ಕಲಿತರು. ಇದರಿಂದ ಹೊಸ ಹುರುಪು ಪಡೆದ ರಾಬಿನ್ 2013 ರಿಂದ ತಮ್ಮ ಆಟದಲ್ಲಿ ಸುದಾರಣೆ ಕಾಣುವುದರ ಜೊತೆಗೆ ರನ್ ಗಳ ಬೆಟ್ಟವನ್ನೇ ಕಟ್ಟಲಾರಂಬಿಸಿದರು.

2013 – ರಾಬಿನ್ ಉತ್ತಪ್ಪ 2.0

ಹೊಸ ರಾಬಿನ್ ಉತ್ತಪ್ಪರ ಆಟವನ್ನು ಎಲ್ಲರು ಕಂಡಿದ್ದು 2013 ಒಂದು ದಿನದ ಮಾದರಿಯಾದ ವಿಜಯ್ ಹಜಾರೆ ಟ್ರೋಪಿಯಲ್ಲಿ. ಈ ಪಂದ್ಯಾವಳಿಯಲ್ಲಿ 2 ಶತಕಗಳೂ ಸೇರಿ ಎಲ್ಲರಿಗಿಂತ ಹೆಚ್ಚು 445 ಬಾರಿಸಿ ತಮ್ಮ ಬ್ಯಾಟಿಂಗ್ ನಲ್ಲಿ ಇನ್ನೂ ಕಸುವಿದೆ
ಎಂಬುದನ್ನು ತೋರಿಸಿದರು. ಅದರ ಮುಂದಿನ ವರ‍್ಶ ಅವರ ಆಟ ಇನ್ನೂ ಬಲಗೊಂಡು 536 ರನ್ ಗಳನ್ನು ಗಳಿಸಿ ವಿಜಯ್ ಹಜಾರೆ ಟ್ರೋಪಿಯನ್ನು ಕರ‍್ನಾಟಕದ ಮಡಿಲಿಗೆ ಹಾಕಿದರು. ಇದರಲ್ಲಿ 3 ಶತಕಗಳು ಇದ್ದವು. 

2014 ರಲ್ಲಿ ಕರ‍್ನಾಟಕ 15 ವರ‍್ಶಗಳ ಬಳಿಕ ರಣಜಿ ಟ್ರೋಪಿ ಗೆದ್ದಾಗ ಉತ್ತಪ್ಪ ಹೆಚ್ಚೇನೂ ರನ್ ಗಳಿಸದ್ದಿದ್ದರೂ ಹೊಸಬರಾದ ರಾಹುಲ್, ಸಮರ‍್ತ್, ಕರುಣ್ ರಿಗೆ ಹಿರಿಯಣ್ಣನಂತೆ ಹುರಿದುಂಬಿಸಿ ಬೆಂಬಲ ನೀಡಿದರು. ಅದೇ ವರ‍್ಶ ಐಪಿಎಲ್ ನಲ್ಲೂ ಅತ್ಯದಿಕ ರನ್ ಬಾರಿಸಿ ಬಾರತೀಯ ತಂಡದ ಕದವನ್ನು ಮತ್ತೆ ಬಲವಾಗಿ ತಟ್ಟಿದರು. ಆಯ್ಕೆಗಾರರಿಗೆ ರಾಬಿನ್ ರಿಗೆ ತಂಡದ ಕದ ತೆರೆಯದೇ ಬೇರೆ ದಾರಿ ಇರಲಿಲ್ಲ. ಕೊನೆಗೂ 2014 ರ ಬಾಂಗ್ಲಾದೇಶದ ಒಂದು ದಿನದ ಪಂದ್ಯಗಳ ಪ್ರವಾಸಕ್ಕೆ ಆಯ್ಕೆಯಾಗುತ್ತಾರೆ. 3 ಪಂದ್ಯಗಳನ್ನು ಆಡಿ ಒಂದು ಅರ‍್ದ ಶತಕ ಗಳಿಸಿದರೂ ನಂತರ ತಂಡದಿಂದ ಹೊರಗುಳಿಯುತ್ತಾರೆ. 2015 ರಲ್ಲಿ ಮತ್ತೊಮ್ಮೆ ರಾಜ್ಯ ತಂಡ ರಣಜಿ ಟ್ರೋಪಿ ಗೆದ್ದಾಗ ಉತ್ತಪ್ಪ ಬ್ಯಾಟ್ ನಿಂದಲೂ ಕೊಡುಗೆ ನೀಡಿದರು. ಅತ್ಯದಿಕ 912 ರನ್ ಬಾರಿಸಿ ತಮ್ಮ ಸ್ತಿರ ಪ್ರದರ‍್ಶವನ್ನು ಮುಂದುವರಿಸಿದರು. ನಂತರದ ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆಯಾದರೂ ಹೆಚ್ಚು ರನ್ ಗಳಿಸುವಲ್ಲಿ ವಿಪಲರಾದರು.

ಕೈ ಕೊಟ್ಟಿದ್ದು ಅದ್ರುಶ್ಟ ??

ರಾಬಿನ್ ರ ಆಟವನ್ನು ಮೊದಲಿಂದಲೂ ನೋಡಿದವರಿಗೆ ಅವರ ಅಳವನ್ನು ಅರಿತವರಿಗೆ ಅವರು ಈಗ ಕಡಿಮೆ ಅಂದರೂ ಅಂತರಾಶ್ಟೀಯ ಕ್ರಿಕೆಟ್ ನಲ್ಲಿ 5 ರಿಂದ 6 ಸಾವಿರ ರನ್ ಗಳನ್ನು ಗಳಿಸಿರಬೇಕಿತ್ತು ಎಂದೆನಿಸದೇ ಇರದು. ಒಂದು ಹಂತದಲ್ಲಿ ರೋಹಿತ್ ಶರ‍್ಮ, ಸುರೇಶ್ ರೈನಾ ಅವರಿಗಿಂತ ಮುಂದಿದ್ದ ಉತ್ತಪ್ಪ ಅವರಿಬ್ಬರಂತೆ ಯಶಸ್ಸು ಕಾಣದದ್ದು ದುರಂತವೇ ಸರಿ. ಕೊಟ್ಟ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಲ್ಲಿಲ್ಲ ಎಂದು ದೂರುವುದಕ್ಕೂ ಮುನ್ನ ಅವರಿಗೆ ಸಿಕ್ಕ ಅವಕಾಶಗಳು ಎಶ್ಟು ಮತ್ತು ಎಲ್ಲಿ ಅನ್ನುವುದನ್ನು ಒರೆ ಹಚ್ಚಿ ನೋಡಬೇಕು.

ಓಪನರ್ ಆದ ಉತ್ತಪ್ಪರಿಗೆ ಎಂದೂ ಸಹ ಸತತವಾಗಿ ಓಪನರ್ ಆಗಿ ಆಡುವ ಅವಕಾಶ ಸಿಗಲಿಲ್ಲ. ತಂಡಕ್ಕೆ ಬೇಕಾದಾಗ ಮದ್ಯಮ ಕ್ರಮಾಂಕದಲ್ಲೂ ಆಡಿಸಲಾಯಿತು. ತಮ್ಮ ಚಳಕವನ್ನು ತೋರಲು ಅವರಿಗೆ ಸರಿಯಾದ ಅವಕಾಶ ಸಿಗಲಿಲ್ಲ ಅನ್ನೋದು ಹುಸಿಯಲ್ಲ. ಕಡೆಗೆ ವಿಕೆಟ್ ಕೀಪಿಂಗ್ ನಲ್ಲೂ ಕೊಂಚ ಪಕ್ವಗೊಂಡು ಪ್ರಯತ್ನ ಮಾಡಿದರೂ ಮೂರ‍್ನಾಲ್ಕು ಪಂದ್ಯಗಳಿಗಿಂತ ಹೆಚ್ಚು ಅವಕಾಶ ಸಿಗಲಿಲ್ಲ. ಇಲ್ಲಿ ನಾವು ರೋಹಿತ್ ಶರ‍್ಮರಿಗೆ ವರ‍್ಶಗಟ್ಟಲೇ ಸಿಕ್ಕ ಅವಕಾಶಗಳನ್ನು ಮರೆಯಬಾರದು. ಹೀಗಿದ್ದರೂ ಉತ್ತಪ್ಪ ಎಂದೂ ಸಹ ತಮ್ಮ ಸ್ವಾರ‍್ತಕ್ಕೆ ಆಟ ಆಡಲಿಲ್ಲ. ತಂಡದ ಹಿತ ಮೊದಲು ಎಂದೇ ಆಡಿದರು. ಎಶ್ಟೇ ಆದರೂ ಇದು ಕರ‍್ನಾಟಕದ ಆಟಗಾರರ ಹುಟ್ಟುಗುಣ ಅಲ್ಲವೇ ??

2014 ರ ಶ್ರೀಲಂಕಾ ಮೇಲಿನ ಪಂದ್ಯದಲ್ಲಿ ಉತ್ತಪ್ಪ 41ನೇ ಓವರ್ ನಲ್ಲಿ ಬ್ಯಾಟ್ ಮಾಡಲು ಬಂದಾಗ ರೋಹಿತ್ 155 ರನ್ ಗಳಿಸಿ ಒಳ್ಳೆ ಲಯದಲ್ಲಿದ್ದರು. ಇದನ್ನು ಗಮನಿಸಿದ ಉತ್ತಪ್ಪ, ರೋಹಿತ್ ಹೆಚ್ಚು ಬಾಲ್ ಆಡುವುದು ತಂಡಕ್ಕೆ ಒಳ್ಳೆಯದೆಂದು, ಬರಿ ಒಂದೊಂದು ರನ್ ಪಡೆದು ಇನ್ನೊಂದು ಬದಿ ತಲುಪುತ್ತಿದ್ದರು. ಕೊನೆಗೆ ರೋಹಿತ್ 265 ರನ್ ಗಳಿಸಿ ದಾಕಲೆ ಮಾಡಿದರು, ಆದರೆ ಉತ್ತಪ್ಪ ಆಡಿದ್ದು ಬರಿ 16 ಬಾಲ್ ಗಳು ಮಾತ್ರ. ಅವಕಾಶಗಳೇ ಸಿಗದ್ದಿದ್ದಾಗ ಈ ಬಗೆಯ ತ್ಯಾಗ ಮಾಡಿ, ಅವರು ಜನರ ಮೆಚ್ಚುಗೆ ಪಡೆದರೂ ತಮಗೆ ಬ್ಯಾಟ್ ಮಾಡಲು ಸಿಕ್ಕ ಅವಕಾಶವನ್ನು ಪೋಲು ಮಾಡಿದರು ಅನ್ನೋದು ಸುಳ್ಳಲ್ಲ. ಇದಾದ ನಂತರ 2015 ರ ವಿಶ್ವಕಪ್ ಗೂ ಅವರು ಆಯ್ಕೆ ಆಗಲಿಲ್ಲ. ಇಲ್ಲಿಯ ತನಕ 11 ವರ‍್ಶಗಳಲ್ಲಿ ಅವರು ಆಡಿರಿವುದು ಕೇವಲ 46 ಅಂತರಾಶ್ಟ್ರೀಯ ಒಂದು ದಿನದ ಪಂದ್ಯಗಳು, ಗಳಿಸಿರುವ ರನ್‌ ಗಳು 934.

ಕರ‍್ನಾಟಕ ತಂಡಕ್ಕೆ ಉತ್ತಪ್ಪ ಕೊಡುಗೆ

ಅಂತರಾಶ್ಟ್ರೀಯ ಕ್ರಿಕೆಟ್ ನಲ್ಲಿ ಹೆಚ್ಚು ಮಿಂಚದ್ದಿದ್ದರೂ ಕರ‍್ನಾಟಕದ ಮಟ್ಟಿಗೆ ಉತ್ತಪ್ಪ ಒಬ್ಬ ದಿಗ್ಗಜ ಆಟಗಾರ. ಕರ‍್ನಾಟಕದ ನಾಯಕನಾಗಿ 2010 ರಲ್ಲಿ ಪೈನಲ್ ತನಕ ತಂಡವನ್ನು ಕೊಂಡೊಯ್ದಿದ್ದರು. ಒಟ್ಟು 12 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿ 6ರಲ್ಲಿ ಗೆಲುವು ಕಂಡು 2 ರಲ್ಲಿ ಸೋಲು ಕಂಡಿದ್ದಾರೆ. ಬ್ರಿಜೇಶ್ ಪಟೇಲ್ (7216) ನಂತರ ರಣಜಿ ಟ್ರೋಪಿಯಲ್ಲಿ ಕರ‍್ನಾಟಕದ ಪರ ಹೆಚ್ಚು ರನ್ ಗಳಿಸಿರೋದು ಉತ್ತಪ್ಪ (6800). ಎರಡು ರಣಜಿ ಟ್ರೋಪಿ, ಎರಡು ಇರಾನಿ ಟ್ರೋಪಿ ಮತ್ತು ಎರಡು ವಿಜಯ್ ಹಜಾರೆ ಟ್ರೋಪಿಯನ್ನು ರಾಜ್ಯ ತಂಡದೊಂದಿಗೆ ಗೆದ್ದಿದ್ದಾರೆ.

ಇಶ್ಟೆಲ್ಲಾ ಸಾದನೆ ಮಾಡಿದ ಅನುಬವ ಇದ್ದರೂ 2016/17 ರ ರಣಜಿ ಟ್ರೋಪಿಯಲ್ಲಿ ಉತ್ತಪ್ಪರ ಆಟ ಸಪ್ಪೆಯಾಗುತ್ತಾ ಹೋಯಿತು. ಸ್ಪಿನ್ನರ್ ಗಳ ವಿರುದ್ದ, ಅದರಲ್ಲೂ ಎಡಗಯ್ ಸ್ಪಿನ್ನರ್ ಗಳನ್ನು ಎದರಿಸುವಾಗ ಅವರ ಕುಂದು ಹೆಚ್ಚುತ್ತಾ ಹೋಯಿತು. ಕಳೆದ ವರ‍್ಶ, 7 ಪಂದ್ಯಗಳಿಂದ ಒಂದೇ ಒಂದು ಶತಕ ಗಳಿಸಿ ಮಿಕ್ಕೆಲ್ಲಾ ಪಂದ್ಯಗಳಲ್ಲಿ ರನ್ ಗಳಿಸಲು ಹೆಣಗಾಡಿದರು. ಕಡೆಗೆ ಕ್ವಾರ‍್ಟರ್ ಪೈನಲ್ ಪಂದ್ಯಕ್ಕೆ ಅವರನ್ನು ತಂಡದಿಂದ ಕೈ ಬಿಡಲಾಯಿತು. ನಂತರದ ವಿಜಯ್ ಹಜಾರೆ ಟ್ರೋಪಿಯಲ್ಲಿ ರಾಜ್ಯದ ಪರ ಆಡಿದರೂ ಮುಂದಿನ ವರ‍್ಶದಿಂದ ಕರ‍್ನಾಟಕ ತಂಡದ ಪರ ಆಡಲೊಲ್ಲೆ ಎಂದು ತಮ್ಮ ತಾಯ್ನಾಡಿನ ಸಂಬಂದವನ್ನು ಉತ್ತಪ್ಪ ಕಡೆದು ಕೊಂಡರು. ಇದು ಕರುನಾಡಿನ ಅಬಿಮಾನಿಗಳಿಗೆ ಮತ್ತು ರಾಜ್ಯ ತಂಡದ ಸದಸ್ಯರಿಗೆ ಬೇಸರ, ನೋವು ತಂದಿದೆ. ನಮ್ಮ ಹುಡುಗ ಇನ್ಮುಂದೆ ನಮ್ಮೊಡನೆ ಆಡದೆ ಎದುರಾಳಿ ತಂಡದ ಪರ ಆಡಲಿದ್ದಾನೆ ಎಂದಾಗ ಒಂದು ವಿಚಿತ್ರ ಅನುಬವ ಆಗೋದು ದಿಟ.

ಆದರೆ 32 ರ ಹರೆಯದ ಉತ್ತಪ್ಪರ ದ್ರುಶ್ಟಿಯಿಂದ ನೋಡಿದರೆ ಅವರ ತೀರ‍್ಮಾನ ಸರಿಯಾಗಿಯೇ ಇದೆ ಅನ್ನಬಹುದು. ಬಲಿಶ್ಟವಾಗಿರೋ ಕರ‍್ನಾಟಕ ತಂಡದಲ್ಲಿ ಅವಕಾಶಕ್ಕಾಗಿ ಸಾಕಶ್ಟು ಯುವ ಆಟಗಾರರು ಕಾಯುತ್ತಿದ್ದಾರೆ. ಅವರಿಗೆ ಪೈಪೋಟಿ ನೀಡುತ್ತಾ ಅವರನ್ನು ತಂಡದಿಂದ ಹೊರಗಿಡುವುದು ಉತ್ತಪ್ಪರಿಗೆ ತಪ್ಪು ಅನ್ನಿಸಿ ತಂಡಕ್ಕೆ ತಾವು ಹೊರೆಯಾಗೋದು ಬೇಡ ಎಂದು ಹೊರನಡೆದ್ದಿದ್ದಾರೆ. ಅವರಿಗೂ ಬಲಿಶ್ಟವಲ್ಲದ ತಂಡಗಳಲ್ಲಿ ಹೆಚ್ಚು ಅವಕಾಶ ಸಿಗಲಿದೆ. ಉತ್ತಪ್ಪ ಈ ಬಾರಿ ಸೌರಾಶ್ಟ್ರ ತಂಡದ ಪರ ಆಡೋದು ಈಗ ಕಾತ್ರಿಯಾಗಿದೆ.

ನಮ್ಮ ರಾಜ್ಯದ ಆಟಗಾರರು ಬೇರೆ ರಾಜ್ಯಕ್ಕೆ ಹೋದರೂ ನಮ್ಮ ಕೆಪಿಎಲ್ ನಲ್ಲಿ ಆಡುವ ಅವಕಾಶ ಇದೆ. ಆದರೆ ವೈಯುಕ್ತಿಕ ಕಾರಣಗಳಿಂದ ಆಡಲಾಗುತ್ತಿಲ್ಲ ಎಂದು ಕನ್ನಡದ ಅಬಿಮಾನಿಗಳಿಗೆ ಕನ್ನಡದಲ್ಲೇ ವಿಡಿಯೋ ಸಂದೇಶ ನೀಡಿ ಕರ‍್ನಾಟಕ ಕ್ರಿಕೆಟ್ ಅನ್ನು ನೀವೆಲ್ಲಾ ಮುಂದೆ ತಗೆದುಕೊಂಡು ಹೋಗಿ ಎಂದು ರಾಜ್ಯದ ಆಟಗಾರರಿಗೆ ಶುಬ ಹಾರೈಸಿ ಎಲ್ಲರ ಮನ ಗೆದ್ದರು. ಎಶ್ಟೇ ಆದರೂ ರಾಬಿನ್ ನಮ್ಮ ಮಣ್ಣಿನ ಮಗ ಅಲ್ಲವೇ?? ರಾಬಿನ್ ಸೌರಾಶ್ಟ್ರದ ಪರ ಆಡಲಿ ಅತವಾ ಇನ್ಯಾವುದೇ ತಂಡಕ್ಕೆ ಆಡಲಿ ಅವರು ಒಳ್ಳೇ ಆಟ ಆಡಿದಾಗ ಸಂತಸದಿಂದ ಬೀಗೋದು ಕನ್ನಡಿಗರೇ ಅನ್ನೋದು ದಿಟ. ಇನ್ನೂ ಬಾರತದ ಪರ ಟೆಸ್ಟ್ ಆಡುವ ಅವಕಾಶಕ್ಕಾಗಿ ಹವಣಿಸುತ್ತಿರುವ ರಾಬಿನ್ ರ ಆಸೆ ಈಡೇರಲಿ ಅನ್ನೋದು ಕನ್ನಡಿಗರ ಹಾರೈಕೆ.

ಹೋಗಿಬನ್ನಿ ರಾಬಿನ್, ನಿಮ್ಮ ಕೊಡುಗೆಯನ್ನು ಕರ‍್ನಾಟಕ ಎಂದೂ ಮರೆಯುವುದಿಲ್ಲ.

( ಚಿತ್ರಸೆಲೆ:   iplt20cric.comrediffzeenews.indiacricfit, sportskeeda )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: