ಬೆರಗಾಗಿಸುವ ಕೆಲವು ಪೇಸ್ಬುಕ್ಕಿನ ಮಾಹಿತಿಗಳು!

– ರತೀಶ ರತ್ನಾಕರ.

ಪೇಸ್ಬುಕ್ ಯಾರಿಗೆ ಗೊತ್ತಿಲ್ಲ ಹೇಳಿ. ಮನರಂಜನೆ, ಸುದ್ದಿ, ವ್ಯಾಪಾರ ಹೀಗೆ ಹಲವಾರು ಚಟುವಟಿಕೆಗಳಿಗೆ ವೇದಿಕೆಯನ್ನು ಒದಗಿಸುವ ಮೂಲಕ ಕೂಡಣ ಕಟ್ಟೆಯ(social network) ಸಾದ್ಯತೆಗಳನ್ನು ಹಿಗ್ಗಿಸಿದ್ದು ಇದೇ ಪೇಸ್ಬುಕ್. ಪೆಬ್ರವರಿ 4, 2004 ರಂದು ಹಾರ‍್ವರ‍್ಡ್ ಕಲಿಕೆವೀಡಿನಲ್ಲಿ ಮೊದಲ್ಗೊಂಡು ಇಂದು ಜಗತ್ತಿನ ಕೋಟಿ ಕೋಟಿ ಮಂದಿಯನ್ನು ತಲುಪಿದೆ. ಮಾರ‍್ಕ್ ಜುಕರ‍್ಬರ‍್ಗ್ ಹಾಗೂ ಹಾರ‍್ವರ‍್ಡ್ ನಲ್ಲಿ ಅತನ ಜೊತೆ ಕಲಿಯುತ್ತಿದ್ದ ಎಡುವರ‍್ದೊ ಸವೆರಿನ್, ಆಂಡ್ರೂ ಮೆಕ್ಕಲಮ್, ಡಸ್ಟಿನ್ ಮಾಸ್ಕೊವಿಟ್ಜ್ ಹಾಗೂ ಕ್ರಿಸ್ ಹೀವ್ಸ್ ಗೆಳೆಯರು ಸೇರಿ ಹುಟ್ಟುಹಾಕಿದ ಈ ಕೂಡಣ ಕಟ್ಟೆ ಇಂದು ಹಲವು ಮಂದಿಯನ್ನು ಬೆಸೆಯುತ್ತಿದೆ.

ಇತ್ತೀಚಿನ ದಿನಗಳಲ್ಲಿ ಹಲವಾರು ಉದ್ದಿಮೆದಾರರು ತಮ್ಮ ಉತ್ಪನ್ನಗಳ ಪ್ರಚಾರಕ್ಕೆ ಪೇಸ್ಬುಕ್‍ನ ಮೊರೆ ಹೋಗಿದ್ದಾರೆ. ಪೇಸ್ಬುಕ್ಕಿನ ಬಳಕೆದಾರರ ಎಣಿಕೆ ದಿನೇ ದಿನೇ ಏರುತ್ತಿರುವುದರಿಂದ ಹೆಚ್ಚು ಹೆಚ್ಚು ಮಂದಿಯನ್ನು ತಲುಪಲು ಇದು ಸುಳುವಾದ ಹಾಗೂ ಪರಿಣಾಮಕಾರಿಯಾದ ದಾರಿಯಾಗಿದೆ. ಹೊಚ್ಚ ಹೊಸ ಉದ್ದಿಮೆಗಳಿಂದ ಹಿಡಿದು ದಟ್ಟವಾಗಿ ಬೆಳೆದಿರುವ ಉದ್ದಿಮೆಗಳೂ ಕೂಡ ಪೇಸ್ಬುಕ್ಕನ್ನು ಕಡೆಗಣಿಸುವಂತಿಲ್ಲ.

ಈ ಪೇಸ್ಬುಕ್ ಎಶ್ಟರ ಮಟ್ಟಿಗೆ ಹರಡಿಕೊಂಡಿದೆ?

ಮಂದಿಮೆಚ್ಚುಗೆ ಪಡೆದ ಕೂಡಣ ಕಟ್ಟೆಗಳಲ್ಲಿ ಪೇಸ್ಬುಕ್ಕಿಗೆ ಮೊದಲನೇ ಸ್ತಾನ. ಯೂಟ್ಯೂಬನ್ನು ಎರಡನೇ ಸ್ತಾನಕ್ಕೆ ತಳ್ಳಿ ಇದು ಮೇಲೇರಿದೆ. ಜೂನ್ 2017 ರಲ್ಲಿ ಪೇಸ್ಬುಕ್ ಹೊರತಂದಿರುವ ಮಾಹಿತಿ ಪ್ರಕಾರ 2.1 ಬಿಲಿಯನ್ ಅಂದರೆ 200 ಕೋಟಿಗೂ ಹೆಚ್ಚು ಬಳಕೆದಾರರ ಕಾತೆಗಳು ಒಂದು ತಿಂಗಳಲ್ಲಿ ಚಟುವಟಿಕೆಯಿಂದ ಇರುತ್ತವೆ. ಇದರಲ್ಲಿ 24 ಕೋಟಿ 10 ಲಕ್ಶ ಬಳಕೆದಾರರನ್ನು ಹೊಂದಿರುವ ಇಂಡಿಯಾ ಮೊದಲನೇ ಸ್ತಾನದಲ್ಲಿದ್ದರೆ, 24 ಕೋಟಿ ಬಳಕೆದಾರರಿಂದ ಯು.ಎಸ್.ಎ ಎರಡನೇ ಸ್ತಾನದಲ್ಲಿದೆ.

ದಿನಕ್ಕೆ 1.74 ಬಿಲಿಯನ್ ಕಾತೆಗಳು ಅಲೆಯುಲಿಗಳ ಮೂಲಕ (mobiles) ಪೇಸ್ಬುಕ್ಕನ್ನು ಬಳಸಲ್ಪಟ್ಟರೆ, 1.32 ಬಿಲಿಯನ್ ಕಾತೆಗಳು ಎಣ್ಣುಕ(Desktop) ಹಾಗೂ ಮಡಿಲೆಣ್ಣುಕ(laptop)ಗಳ ಮೂಲಕ ಬಳಸಲ್ಪಡುತ್ತಿವೆ. ಅಂದರೆ ದಿನದಲ್ಲಿ ಅಲೆಯುಲಿಗಳ ಮೂಲಕ ಪೇಸ್ಬುಕ್ಕನ್ನು ಬಳಸುವವರೇ ಹೆಚ್ಚು. ಚೀನಾ, ನಾರ‍್ತ್ ಕೊರಿಯಾ, ಇರಾನ್ ನಂತಹ ಹಲವು ನಾಡುಗಳಲ್ಲಿ ಪೇಸ್ಬುಕ್ ಅನ್ನು ತಡೆಹಿಡಿಯಲಾಗಿದೆ. ಉಳಿದಂತೆ ಜಗತ್ತಿನ ಹೆಚ್ಚಿನ ನಾಡುಗಳಲ್ಲಿ ಇದು ಮನೆಮಾಡಿದೆ.

ಬಳಕೆದಾರರು ಯಾರು?

ಒಂದು ಸೆಕೆಂಡಿಗೆ 5 ಹೊಸ ಕಾತೆಗಳು ಪೇಸ್ಬುಕ್ಕಿನಲ್ಲಿ ಹುಟ್ಟುತ್ತಿವೆ. ಈ ಕಾತೆಗಳ ಬಳಕೆದಾರರು ಯಾವ ವಯಸ್ಸಿನವರು, ಯಾವ ಗುರುತಿನವರು ಎಂಬ ಕುತೂಹಲ ಸಹಜವಾಗಿ ಹುಟ್ಟುತ್ತದೆ. ಜುಲೈ 2017 ರಲ್ಲಿ ಪೇಸ್ಬುಕ್ಕಿನಿಂದ ಹೊರಬಂದ ಮಾಹಿತಿ ಬಳಕೆದಾರರ ಎಣಿಕೆಯಲ್ಲಿ ಹೆಂಗಸರದ್ದೇ ಮೇಲುಗೈ ಎಂದು ಹೇಳುತ್ತದೆ. ಒಟ್ಟು ಬಳಕೆದಾರರಲ್ಲಿ 53% ಹೆಂಗಸರಿದ್ದರೆ 47% ಗಂಡಸರಿದ್ದಾರೆ.

ಪೇಸ್ಬುಕ್ಕಿನಲ್ಲಿ ಕಾತೆಯನ್ನು ತೆರೆಯಬೇಕು ಎಂದರೆ ವಯಸ್ಸು ಹದಿಮೂರಾಗಿರಬೇಕು. ಹದಿಮೂರು ದಾಟದವರೇನಾದರು ಸುಳ್ಳು ಮಾಹಿತಿ ಕೊಟ್ಟು ಕಾತೆಯನ್ನು ತೆರೆದಿದ್ದರೆ, ಅದೇನಾದರು ಪೇಸ್ಬುಕ್ಕಿನವರಿಗೆ ಗೊತ್ತಾದರೆ ಆ ಕಾತೆಯನ್ನು ರದ್ದುಗೊಳಿಸಲಾಗುವುದು. ಒಟ್ಟು ಬಳಕೆದಾರರಲ್ಲಿ 25 ರಿಂದ 34 ರ ವಯಸ್ಸಿನವರದ್ದೇ ದೊಡ್ಡ ಪಾಲು. ಸುಮಾರು 30% ನಶ್ಟು ಬಳಕೆದಾರರು ಈ ವಯಸ್ಸಿನವರಾಗಿದ್ದಾರೆ. ಅದನ್ನು ಬಿಟ್ಟರೆ 18 ರಿಂದ 24 ರ ವಯಸ್ಸಿನವರದ್ದು ಎರಡನೇ ದೊಡ್ಡ ಗುಂಪಾಗಿದೆ. ಅಂದರೆ ಪೇಸ್ಬುಕ್ಕಿನದ್ದು ಯುವ ಬಳಕೆದಾರರ ಪಡೆ!

ಇನ್ನೊಂದು ತಿಳಿಯಬೇಕಾದ ಮಾಹಿತಿ ಎಂದರೆ ಇರುವ 200 ಕೋಟಿಗೂ ಹೆಚ್ಚಿನ ಬಳಕೆದಾರರಲ್ಲಿ ಸುಮಾರು 8.3 ಕೋಟಿ ಸೋಗಿನ ಬಳಕೆದಾರರಿದ್ದಾರೆ (fake profiles). ತಮ್ಮ ಗುರುತನ್ನು ಮರೆಮಾಚಿ ಪೇಸ್ಬುಕ್ಕನ್ನು ಬಳಸುವುದಕ್ಕಾಗಿ, ಕೆಲವು ಅರಕೆಗಳಿಗಾಗಿ(research), ಪ್ರಚಾರದ ಉದ್ದೇಶಕ್ಕಾಗಿ ಹೀಗೆ ಹಲವು ಕಾರಣಗಳಿಂದಾಗಿ ಸೋಗಿನ ಕಾತೆಗಳು ಹುಟ್ಟುತ್ತಿವೆ ಎಂದು ಪೇಸ್ಬುಕ್ ಹೇಳಿಕೊಂಡಿದೆ. ಹಾಗೆಯೇ ಈ ಕಾತೆಗಳಿಂದ ಯಾವುದೇ ತೊಂದರೆ ಆಗದ ತನಕ ಅವನ್ನು ತೆಗೆದುಹಾಕುವುದಿಲ್ಲ ಎಂದೂ ತಿಳಿಸಿದೆ.

ಯಾವ ಹೊತ್ತಿನಲ್ಲಿ ದಟ್ಟಣೆ ಹೆಚ್ಚಿದೆ?

ವಾರದ ನಡುವಿನ ದಿನಗಳು ಅಂದರೆ ಸೋಮವಾರದಿಂದ ಶುಕ್ರವಾರದ ತನಕ ಹಗಲು 1 ಗಂಟೆಯಿಂದ 4 ಗಂಟೆಯವರೆಗೆ ಪೆಸ್ಬುಕ್ ದಟ್ಟಣೆ ಹೆಚ್ಚಿರುತ್ತದೆ. ಅದರಲ್ಲೂ ಬುದವಾರ 3 ಗಂಟೆಯ ಹೊತ್ತಿಗೆ ತುಂಬಾ ಹೆಚ್ಚಿನ ದಟ್ಟಣೆ ಇರುವುದು ಕಂಡುಬಂದಿದೆ. ಬೆಳಗ್ಗೆ 9 ಗಂಟೆಗೆ ಬಳಕೆಯ ದಟ್ಟಣೆಯು ಹೆಚ್ಚುತ್ತಾ ಹೋಗಿ 1 ಗಂಟೆಯ ಹೊತ್ತಿಗೆ ದಟ್ಟಣೆಯು ತುದಿಯನ್ನು ಮುಟ್ಟುತ್ತದೆ. ಅದರಂತೆ ಸಂಜೆ 4 ಗಂಟೆಯ ಹೊತ್ತಿಗೆ ಇಳಿಯುತ್ತಾ ಹೋಗುವ ದಟ್ಟಣೆಯು 8 ಗಂಟೆಯ ಹೊತ್ತಿಗೆ ತುಂಬಾ ಕಡಿಮೆಯಾಗಿರುತ್ತದೆ.

ವಾರದ ದಿನ ಬೆಳಗ್ಗೆ 8 ಗಂಟೆಯ ಒಳಗೆ ಹಾಗೂ ಸಂಜೆ 8 ಗಂಟೆಯ ಮೇಲೆ, ಶನಿವಾರ ಹಾಗೂ ರವಿವಾರದಂದು ದಟ್ಟಣೆ ತೀರ ಕಡಿಮೆಯಿರುವುದರಿಂದ ಏನಾದರು ಮಾಹಿತಿ ಹಂಚಿಕೊಳ್ಳುವುದು, ಹೊಸ ಪೋಸ್ಟ್ ಮಾಡುವುದನ್ನು ಕಡಿಮೆ ಮಾಡಬೇಕು ಎಂದು ಪೇಸ್ಬುಕ್ ಅರಿಗರು ಹೇಳುತ್ತಾರೆ.

ಇನ್ನಶ್ಟು ಬೆರಗಿನ ಸುದ್ದಿಗಳು

1. ಪೇಸ್ಬುಕ್ಕಿನ ಬಳಕೆದಾರರು ಒಮ್ಮೆ ಮಿಂದಾಣಕ್ಕೆ ಬೇಟಿಕೊಟ್ಟರೆ ಅದನ್ನು ಬಳಸುವ ಸರಾಸರಿ ಹೊತ್ತು 20 ನಿಮಿಶಗಳು.
2. ಒಂದು ನಿಮಿಶಕ್ಕೆ 510,000 ಒಕ್ಕಣೆಗಳು, 293,000 ಸ್ಟೇಟಸ್‍ಗಳು, 136,000 ಚಿತ್ರಗಳು ಪೇಸ್ಬುಕ್ಕಿಗೆ ಏರುತ್ತವೆ!
3. 18-34 ವಯಸ್ಸಿನ ಬಳಕೆದಾರರಲ್ಲಿ 50% ಮಂದಿ ಬೆಳಗ್ಗೆ ಎದ್ದ ಕೂಡಲೆ ಮೊದಲು ನೋಡುವುದು ಪೇಸ್ಬುಕನ್ನೆ!
4. ಕನ್ನಡವೂ ಸೇರಿ 101 ನುಡಿಗಳಲ್ಲಿ ಇದು ಸಿಗುತ್ತಿದೆ. ಸುಮಾರು 300,000 ಮಂದಿ ನುಡಿಮಾರಲು ಪೇಸ್ಬುಕ್ಕಿಗೆ ನೆರವಾಗುತ್ತಿದ್ದಾರೆ.
5. ಬಳಕೆದಾರರ ಸರಾಸರಿ ಗೆಳೆಯರ ಎಣಿಕೆ 155.

ಅಂದುಕೊಂಡಿದಕ್ಕಿಂತ ದೊಡ್ಡದಾಗಿ ಪೇಸ್ಬುಕ್ ಬೆಳೆಯುತ್ತಿದೆ. ಮನರಂಜನೆ, ಹರಟೆಗಳಿಗಿಂತ ಹೆಚ್ಚಾಗಿ ಇದು ಸಾಮಾಜಿಕ ಹೋರಾಟ ಹಾಗೂ ಉದ್ದಿಮೆಗಳಿಗೆ ಒಂದೊಳ್ಳೆ ಪ್ರಚಾರದ ವೇದಿಕೆಯಾಗಿ ಬಳಕೆಯಾಗುತ್ತಿದೆ. ಮಾರುಕಟ್ಟೆಯ ಆಗುಹೋಗುಗಳ ಬಗ್ಗೆ ಅರಕೆಯನ್ನು ನಡೆಸುವ 43% ಅರಸುಗರು ‘ನೀವು ಪ್ರಚಾರಕ್ಕೆ ಪೇಸ್ಬುಕ್ ಬಳಸದಿದ್ದರೆ ಉದ್ದಿಮೆಯ ಬೆಳವಣಿಗೆ ಆಗುವುದಿಲ್ಲ’ ಎಂದು ಹೇಳುತ್ತಿದ್ದಾರೆ. 4 ಕೋಟಿಗೂ ಹೆಚ್ಚಿನ ಸಣ್ಣ ಉದ್ದಿಮೆದಾರರು ತಮ್ಮ ಉತ್ನನ್ನಗಳ ಪ್ರಚಾರಕ್ಕೆ ಪೇಸ್ಬುಕ್ಕನ್ನು ಬಳಸುತ್ತಿರುವುದು ಅದರ ಮಂದಿಮೆಚ್ಚುಗೆಯನ್ನು ತಿಳಿಸುತ್ತಿದೆ.

ಸರಿಯಾದ ಉದ್ದೇಶಕ್ಕೆ ಪರಿಣಾಮಕಾರಿಯಾಗಿ ಪೇಸ್ಬುಕ್ಕನ್ನು ಬಳಸಬಹುದಾಗಿದೆ. ಅದರಲ್ಲೂ ಹೊಸ ಉದ್ದಿಮೆ ಕಟ್ಟಲು ಬಯಸುವವರು, ಕಟ್ಟಿ ಬೆಳೆಸುತ್ತಿರುವವರು ಈ ಎಲ್ಲಾ ಮಾಹಿತಿಗಳತ್ತ ಕಣ್ಣಾಡಿಸಿ, ತೀರ‍್ಮಾನಗಳನ್ನು ತೆಗೆದುಕೊಂಡು ಕೂಡಣ ಕಟ್ಟೆಯ ನೆರವಿನೊಂದಿಗೆ ಬೆಳೆಯಬಹುದಾಗಿದೆ.

(ಮಾಹಿತಿ ಸೆಲೆ: statista.comomnicoreagency.comzephoria.commarketinghire.com, forbes.comwordstream.com)

(ಚಿತ್ರ ಸೆಲೆ: pixabaywikimedia, )

ನಿಮಗೆ ಹಿಡಿಸಬಹುದಾದ ಬರಹಗಳು

%d bloggers like this: