ಹುಲಿ ಊರಿಗೇಕೆ ಬಂದಿತು?

– ಶಾಂತ್ ಸಂಪಿಗೆ.

ಇತ್ತೀಚೆಗೆ ಕಾಡಂಚಿನ ಹಳ್ಳಿಗಳಲ್ಲಿ ಹುಲಿ, ಜನರ ಮೇಲೆ ದಾಳಿಮಾಡಿದ ಸುದ್ದಿಗಳನ್ನು ದಿನಪತ್ರಿಕೆಗಳಲ್ಲಿ ಓದುತ್ತಿರುವಾಗ ಮನಸ್ಸಿನಲ್ಲಿ ಅನೇಕ ಯೋಚನೆಗಳು ಶುರುವಾದವು. ಅದೇನೆಂದರೆ  ದಟ್ಟವಾದ ಕಾಡು, ಬಾನೆತ್ತರಕ್ಕೆ ಬೆಳೆದ ಹಸಿರು ತುಂಬಿದ ಗಿಡಮರಗಳು, ಶುದ್ದಗಾಳಿ ಮತ್ತು ಕಾಡಿನ ದಿವ್ಯ ಪ್ರಕ್ರುತಿಯ ಮಡಿಲಲ್ಲಿ ಹರಿಯುವ ಪರಿಶುದ್ದ ನದಿ – ಇವೆಲ್ಲವನ್ನು ಬಿಟ್ಟು ಹುಲಿ ಊರಿಗೇಕೆ ಬಂದಿತು?  ಎನ್ನುವ ಯಕ್ಶಪ್ರಶ್ನೆ ಕಾಡಲಾರಂಬಿಸಿತು. ಇದೇ ಗುಂಗಿನಲ್ಲಿ ನಿದ್ರೆ ಆವರಿಸಿತು. ಮನುಶ್ಯ  ನಿದ್ರಿಸಿದರೂ ಸಹ ಮನಸ್ಸಿನಲ್ಲಿ ಅವನ ಚಿಂತನೆಗಳು ಕನಸಿನ ರೂಪದಲ್ಲಿ ಸದಾ ಎಚ್ಚರದಿಂದ ಇರುತ್ತವೆ ಮತ್ತು ಅವನ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನದಲ್ಲಿರುತ್ತವೆ ಎನ್ನುವ ಮಾತು ನಿಜವಾಯಿತು. ಹುಲಿಯು ನನ್ನ ಕನಸಿನಲ್ಲಿ ಸಮಸ್ತ ಮನುಕುಲಕ್ಕೆ ಹೇಳಿದ ಕತೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ.

ನಾನು ಹುಲಿ. ಈ ದೇಶದ ಹೆಮ್ಮೆಯ ರಾಶ್ಟ್ರೀಯ ಪ್ರಾಣಿ ಹಾಗು ನಾನು ಕ್ರೂರ ಪ್ರಾಣಿಯಾಗಿದ್ದರೂ ಸಹ ಸಮಸ್ತ ಮನುಕುಲವು ನನ್ನನ್ನು ತುಂಬಾ ಇಶ್ಟಪಡುತ್ತದೆ. ಏಕೆಂದರೆ ದೇವರು ನನಗೆ ಕ್ರೂರತೆಯ ಜೊತೆಗೆ ಸೌಂದರ‍್ಯವನ್ನೂ ಕರುಣಿಸಿದ್ದಾನೆ. ನಾನು ದಟ್ಟವಾದ ಕಾಡಿನ ನಡುವೆ, ಹರಿಯುವ ಶುದ್ದ ನೀರಿರುವ ಕಡೆ ವಾಸಿಸುತ್ತೇನೆ ಮತ್ತು ನನ್ನದು ಅತ್ಯಂತ ಶಿಸ್ತುಬದ್ದ ಜೀವನ. ಹೇಗೆಂದರೆ ಪ್ರತಿದಿನ ನಾನು ನನ್ನ ಸರಹದ್ದನ್ನು ಸುತ್ತು ಹಾಕುತ್ತಾ, ಹಸಿವು ನೀಗಿಸಲು ಮಾತ್ರವೇ ಬೇಕಾದಶ್ಟು ಬೇಟೆಯಾಡಿ ಜೀವನ ನಡೆಸುತ್ತೇನೆ.

ನಾನು ಸಂಪೂರ‍್ಣ ಮಾಂಸಹಾರಿ ಆಗಿರುವುದರಿಂದ ನೀವು ಹೇಳಬಹುದು – ಜಿಂಕೆ ಕಾಡಿನ ಅತ್ಯಂತ ಸಾದು ಪ್ರಾಣಿ, ಅಂತಹ ಜೀವಿಯನ್ನು ಕೊಂದು ತಿನ್ನುವ ನಿನ್ನ ಮಾತನ್ನು ನಾವು ಏಕೆ ಕೇಳಬೇಕು ಎಂದು?. ನಿಜ ನಾನು ಕ್ರೂರಪ್ರಾಣಿ  ಇರಬಹುದು ಆದರೆ ದೇವರು ನನ್ನನ್ನು ಯಾಕೆ ಇಶ್ಟು ಕ್ರೂರ ಪ್ರಾಣಿಯಾಗಿ ಸ್ರುಶ್ಟಿಸಿದ ಎಂದು ಹಲವು ಬಾರಿ ಯೋಚಿಸಿದ್ದೇನೆ ಮತ್ತು ನಾನು ಜಿಂಕೆಯೊಂದಿಗೆ ಸ್ನೇಹ ಬೆಳಸಿಕೊಂಡು ಪ್ರೀತಿಯಿಂದ ಸಹಬಾಳ್ವೆ ನಡೆಸಬೇಕು ಎಂದೆನಿಸುತ್ತದೆ. ಆದರೆ ನಾನು ಜಿಂಕೆಯನ್ನು ಬೇಟೆಯಾಡದೆ ಹಸಿಯುತ್ತಾ ನನ್ನ ಸಂತತಿ ನಾಶಪಡಿಸಿಕೊಂಡರೆ ಈ ಸುಂದರ ಕಾಡು ನಾಶವಾಗುತ್ತದೆ ಎನ್ನುವ ಸತ್ಯ ಮರೆಯಬೇಡಿ. ಏಕೆಂದರೆ ಜಿಂಕೆಯ ಸಂತತಿ ಹೆಚ್ಚಾದರೆ ಕಾಡಿನ ನೆಲದ ಹುಲ್ಲನ್ನೆಲ್ಲ ಆಹಾರವಾಗಿ ಆ ಮುಗ್ದ ಪ್ರಾಣಿಗಳು ತಿನ್ನುತ್ತವೆ ಇದರಿಂದ ಮಳೆಗಾಲ ಬಂದಾಗ ಹರಿವ ನೀರಿಗೆ ಮಣ್ಣಿನ ಸವಕಳಿಯಾಗಿ ಮರಗಳು ಬುಡಮೇಲಾಗುತ್ತವೆ. ಮರಗಳು ನೆಲಕ್ಕುರುಳಿದರೆ ಕಾಡು ನಾಡಾಗುತ್ತದೆ ಹಾಗೂ ನಿಮ್ಮ ಆದುನಿಕ ನಾಡಿನಲ್ಲಿ ನಮಗೆ ಬದುಕಲು ಸಾದ್ಯವೆ ನೀವೇ ಹೇಳಿ. ಆದ್ದರಿಂದ ನಮ್ಮ ಈ ಕಾಡು ನಮ್ಮ ಚೆಂದದ ಮನೆ, ಇಲ್ಲಿ ದೇವರು ಅನುಗ್ರಹಿಸಿದ ಹಾಗೆ ಹಸಿವಿಗಾಗಿ ಬೇಟೆಯಾಡುತ್ತ ಎಲ್ಲ ಜೀವರಾಶಿಗಳು, ಪ್ರಾಣಿ, ಪಕ್ಶಿಗಳು ಒಗ್ಗಟ್ಟಿನಿಂದ ಬದುಕಿನ ಸಹಜ ದರ‍್ಮ ಪಾಲಿಸುತ್ತಾ ಸುಂದರ ಜೀವನ ನಡೆಸುತ್ತಿದ್ದೇವೆ.

ಆದರೆ ಇತ್ತೀಚೆಗೆ ನಮ್ಮ ಸುಂದರ ಕಾಡು ಕೂಡ ಕಿರಿದಾಗುತ್ತಾ ಬರುತ್ತಿರುವುದು ನಮ್ಮೆಲ್ಲ ಜೀವರಾಶಿಗಳ ಅಳಿವಿನ ಸೂಚನೆಯಾಗಿದೆ ಅನಿಸುತ್ತಿದೆ. ತಿಳುವಳಿಕೆಯುಳ್ಳ ನಾಗರೀಕರಾದ ನೀವು ಆದುನಿಕ ಪ್ರಪಂಚದ ಮತ್ತು ಅಬಿವ್ರುದ್ದಿಯ ಹೆಸರಿನಲ್ಲಿ, ದಟ್ಟವಾದ ಕಾಡಿನ ನಮ್ಮ ಸರಹದ್ದನ್ನು ದಾಟಿ ನಮ್ಮನ್ನು ಈಗಾಗಲೇ ಹಿಮ್ಮೆಟ್ಟಿಸಿದ್ದೀರಿ. ಆದರೂ ಸಹ ನಾವುಗಳು ಸಹನೆಯಿಂದ ನಮ್ಮ ಎಲ್ಲೆ ಮೀರಿ ನಾಡಿಗೆ ಬಂದಿರಲಿಲ್ಲ. ಈಗ ನಮ್ಮ ಉಳಿವಿನ ಪ್ರಶ್ನೆ ನಮ್ಮನ್ನು ಬಹಳವಾಗಿ ಕಾಡುತ್ತಿದೆ. ಏಕೆಂದರೆ ಈ ಬೂಮಿ ಕೇವಲ ಮನುಶ್ಯನಿಗೆ ಸೇರಿದ್ದು ಎಂದು ಬಾವಿಸಿದ್ದೀರಿ. ನಮ್ಮನ್ನು ಕೊಲ್ಲಲು ಬಗೆ ಬಗೆಯ ಆಯುದಗಳು ನಿಮ್ಮ ಬಳಿ ಇವೆ ಮತ್ತು ನೀವು ಎಶ್ಟೊಂದು ಮುಂದುವರೆದಿದ್ದೀರಿ, ಏಳಿಗೆ ಹೊಂದಿದ್ದೀರಿ ಎಂದು ಅರಿತರೆ ಹೆದರಿಕೆಯಾಗುತ್ತದೆ. ನಿಮ್ಮ ಪೂರ‍್ವಜರ ಜೊತೆ ಸಾವಿರಾರು ವರ‍್ಶ ಸುಂದರವಾಗಿ ಬದುಕಿದ ನಮಗೆ ಯಾವತ್ತೂ ಈ ಗಂಡಾಂತರ ಒದಗಿ ಬಂದಿರಲಿಲ್ಲ.

ಮನುಶ್ಯರು ಅತ್ಯಂತ ಕರುಣಾಮಯಿಗಳು ಎಂದು ಬಾವಿಸಿದ್ದೆವು. ಆದರೆ ಈ ಆದುನಿಕ ಪ್ರಪಂಚದಲ್ಲಿ ನಮ್ಮಂತಹ ಪ್ರಾಣಿಗಳನ್ನು ಬಿಡಿ, ಆದರೆ ನೀವು ಕೂಡ ಮುಂದೆ ಬದುಕುಳಿಯುತ್ತೀರಿ ಎನ್ನುವ ಸಣ್ಣ ನಂಬಿಕೆಯೂ ಇಲ್ಲ. ನೀವು ಎಲ್ಲಾ ಕ್ಶೇತ್ರಗಳಲ್ಲಿ ಪ್ರಗತಿ ಸಾದಿಸಿದ್ದೀರಿ. ಆದರೆ ಅಬಿವ್ರುದ್ದಿಯ ಬರದಲ್ಲಿ ಮನುಶ್ಯತ್ವ ಕಳೆದುಕೊಂಡಿದ್ದೀರಿ. ಬೂಮಿಯನ್ನು ಬಗೆದು ಆಯುದಗಳನ್ನು ತಯಾರುಮಾಡುತ್ತಿದ್ದೀರಿ. ಪ್ರೀತಿ, ಸಹಬಾಳ್ವೆ, ಸ್ನೇಹ ಎನ್ನುವ ಮಾತುಗಳು ಈಗ ನಿಮಗೆ ಕೇಳಿಸಲಾರವು ಮತ್ತು ಆಕಸ್ಮಿಕವಾಗಿ ಕೇಳಿಸಿದರೆ ನೀನು ಕ್ರೂರ ಪ್ರಾಣಿ ನಿನ್ನಿಂದ ಪಾಟ ಕೇಳಬೇಕೇ ಎನ್ನುತ್ತೀರಿ. ನಾವು ಕಾಡಿನಲ್ಲಿ ಮಾತ್ರ ಬದುಕಬಲ್ಲೆವು ನಿಮ್ಮೊಂದಿಗೆ ನಾಡಿನಲ್ಲಿ ಬದುಕಲು ಸಾದ್ಯವಿಲ್ಲ. ನಿಮ್ಮೊಂದಿಗೆ ಯುದ್ದ ಮಾಡುವ ಶಕ್ತಿಯೂ ನಮ್ಮಲ್ಲಿಲ್ಲ.

ನಮ್ಮ ಮೇಲೆ ಕರುಣೆ ತೋರಿಸಿ, ನಮ್ಮ ಕಾಡನ್ನು ಉಳಿಸಿ. ನಾವು ನಿಮ್ಮ ನಾಡಿಗೆ ಹಣದ ಆಸೆಗಾಗಲಿ, ಅದಿಕಾರದ ಆಸೆಗಾಗಲಿ ಬರಲಿಲ್ಲ. ನಮ್ಮ ಉಳಿವಿಗಾಗಿ ಬರುತ್ತಿದ್ದೇವೆ. ಕಳೆದ ಕೆಲವು ವರ‍್ಶಗಳಿಂದ ಮಳೆಯಿಲ್ಲದೆ ಬರಗಾಲ ಆವರಿಸಿದೆ. ಆದ್ದರಿಂದ ಹರಿವ ತೊರೆಗಳು ಬತ್ತಿಹೋಗಿವೆ. ನಮಗೆ ಕುಡಿಯುವ ನೀರು ಕೂಡ ಸಿಗುತ್ತಿಲ್ಲ. ಕುಡಿವ ನೀರಿಗಾಗಿ ಊರ ಕಡೆ ಬಂದರೆ ನಮ್ಮನ್ನು ಕೊಂದೇ ಬಿಡುತ್ತೀರಿ. ನಾವು ನಾಡಿನಲ್ಲಿ ಬದುಕಲು ಎಂದೂ ಇಶ್ಟ ಪಡುವುದಿಲ್ಲ, ನಮಗೆ ನಮ್ಮ ಕಾಡೇ ಸಂಪತ್ತು ಮತ್ತು ನಿಮ್ಮ ಸಂಪತ್ತು ಕೂಡ ಎನ್ನುವ ಸತ್ಯವನ್ನು ಮರೆಯಬೇಡಿ. ಬುದ್ದಿವಂತರಾದ ನೀವು ಬಯಸಿದರೆ ಮರಗಿಡಗಳನ್ನು ಬೆಳೆಸಿ ನಾಡನ್ನು ಕೂಡ ಹಸಿರಿನಿಂದ ಸಿಂಗರಿಸಬಹುದು. ಮರಗಿಡಗಳು ಹೆಚ್ಚಾದರೆ ಉತ್ತಮ ಮಳೆ ಕೂಡ ಬರುತ್ತದೆ. ನಮ್ಮ ನಿಮ್ಮೆಲ್ಲರ ಬಾಯಾರಿಕೆಯೂ ತಣಿಯುತ್ತದೆ. ಆದ್ದರಿಂದ

“ನಮ್ಮ ಸರಹದ್ದನ್ನು ಮೀರಿ ನಿಮ್ಮ ನಾಡಿಗೆ ಬಂದಿರುವುದಕ್ಕೆ ಕ್ಶಮೆ ಇರಲಿ ಆದರೆ ನಮ್ಮನ್ನು ಕಂಡರೆ ನಿಮಗೆ ದಯೆ ಇರಲಿ”.

ಈ ಸುಂದರ ಕನಸನ್ನು ಕಾಣುತ್ತ ಎಚ್ಚರವಾದಾಗ ನಡುರಾತ್ರಿಯಾಗಿತ್ತು. ಮನಸ್ಸು ತುಂಬಾ ತಿಳಿಯಾಗಿತ್ತು. ಮೂಕ ಪ್ರಾಣಿ ಪಕ್ಶಿಗಳ ಬಗ್ಗೆ ಮನುಶ್ಯನಿಗೆ ಕರುಣೆ ಇರಬೇಕು ಎನಿಸಿತು. ಎಲ್ಲಾ ಪ್ರಾಣಿ ಪಕ್ಶಿಗಳು ಬೂಮಿಯ ಮೇಲೆ ಸುಂದರವಾಗಿ ಬದುಕಲು ಅವಕಾಶ ಮಾಡಿಕೊಡಬೇಕು ಅಲ್ಲವೇ?

( ಚಿತ್ರ ಸೆಲೆ:  traveltriangle.com )

 

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: