‘ಪಾರ‍್ಕೆ ಡೆಲ್ ಗಟೋ’ ಎಂಬ ಬೆಕ್ಕಿನ ಉದ್ಯಾನವನ

– ಕೆ.ವಿ.ಶಶಿದರ.

ಕೊಲಂಬಿಯಾದ ಕಾಲಿಯಲ್ಲಿರುವ ಕ್ಯಾಟ್ ಪಾರ‍್ಕ್ ಬೆಕ್ಕಿನ ಮತ್ತು ಶಿಲ್ಪ ಕಲಾ ಪ್ರೇಮಿಗಳಿಗೆ ವಿಶೇಶವಾದ ಜಾಗ. ಉದ್ಯಾನವನಕ್ಕೆ ಕ್ಯಾಟ್ ಪಾರ‍್ಕ್ ಎಂಬ ಹೆಸರು ಬರಲು ಕಾರಣ ಅದರಲ್ಲಿರುವ ದೈತ್ಯ ಬೆಕ್ಕಿನ ಕಲಾಕ್ರುತಿ. ಇದನ್ನು ಕಂಚಿನಲ್ಲಿ ತಯಾರಿಸಲಾಗಿದೆ. ಇದನ್ನು ಹುಟ್ಟುಹಾಕಿದವರು ಕೊಲಂಬಿಯಾದ ಕಲಾವಿದ ಹೆರ‍್ನಾಂಡೊ ತೇಜಾಡಾ. ಇವರು ಕೊಲಂಬಿಯಾದ ಕಾಲಿ ನಗರಕ್ಕೆ ಈ ಕಲಾಕ್ರುತಿಯನ್ನು ದಾನವಾಗಿ ನೀಡಿದರು. ಬಳಿಕ ಎರಡು ವರ‍್ಶಗಳಲ್ಲೇ ಅವರು ಅಸುನೀಗಿದರು.

‘ಎಲ್ ಗಟೋ ರಿಯೋ – ದ ರಿವರ್ ಕ್ಯಾಟ್’ ಎಂದು ಕರೆಯಲ್ಪಡುವ ಈ ದೈತ್ಯ ಬೆಕ್ಕಿನ ಕಲಾಕ್ರುತಿಯನ್ನು ಕಾಲಿ ನದಿಯ ದಡದ ಮೇಲೆ ಸ್ತಾಪಿಸಿದ್ದು 1996 ರಲ್ಲಿ. ಬಗೊಟಾದಲ್ಲಿ ತಯಾರಾದ ಈ ದೈತ್ಯ ಬೆಕ್ಕಿನ ಕಲಾಕ್ರುತಿ 3.5 ಮೀಟರ್ ಎತ್ತರವಿದ್ದು, 3 ಟನ್ ತೂಗುತ್ತದೆ. ಬಾರಿ ಗಾತ್ರದ ಕಂಚಿನಲ್ಲಿ ತಯಾರಿಸಿದ ಬೆಕ್ಕಿನ ವಿಗ್ರಹವನ್ನು ಬಗೊಟಾದಿಂದ ಕಾಲಿ ನದಿಯ ದಂಡೆಗೆ ಸಾಗಿಸುವ ಕೆಲಸ ಅಶ್ಟೇನು ಸುಲಬವಾಗಿರಲಿಲ್ಲ. ಬಹಳ ದುಸ್ತರವಾಗಿತ್ತು.

ಕಾಲಿ ನದಿಯ ದಡದಲ್ಲಿದ್ದ ವಿಸ್ತಾರವಾದ ಉದ್ಯಾನವನದಲ್ಲಿ ಬೆಕ್ಕಿನ ದೈತ್ಯ ಕಂಚಿನ ವಿಗ್ರಹ ಸ್ತಾಪನೆಯಾದ ಬಳಿಕ ಅದೇ ಕೇಂದ್ರ ಬಿಂದುವಾಗಿ ಪ್ರವಾಸಿಗರನ್ನು ಸೆಳೆಯಿತು. ದ ರಿವರ್ ಕ್ಯಾಟ್ ಎಶ್ಟು ಪ್ರಸಿದ್ದಿಗೆ ಬಂತೆಂದರೆ, ಎಲ್ ಗಟೋ ರಿಯೋ ದೈತ್ಯ ಬೆಕ್ಕಿನ ಏಕಾಂಗಿತನವನ್ನು ತೊಡೆದು ಹಾಕಲು ಸ್ತಳೀಯ ಕಲಾವಿದರು ಚಿಂತಿಸಿದರು. ಜೊತೆಗಾರ ಬೆಕ್ಕುಗಳ ಕಲಾಕ್ರುತಿಗಳನ್ನು ತಯಾರಿಸಿ ಕಂಚಿನ ವಿಗ್ರಹಕ್ಕೆ ಗೆಳೆಯರನ್ನಾಗಿ ನೀಡಿದರು. ಮೋಜಿನ ಕೋಟುಗಳನ್ನು ಹಾಕಿರುವ ಹಾಗೂ ಬಗೆ ಬಗೆಯ ವಸ್ತುಗಳಿಂದ ಮಾಡಲ್ಪಟ್ಟ ಪೈಬರ್‍ಗ್ಲಾಸ್ ಬೆಕ್ಕು, ಸೂಪರ್ ಸ್ಟಾರ್ ಬೆಕ್ಕು, ಸ್ಪೈಕ್ಡ್ ಬೆಕ್ಕು, ಗೋಲ್ಡನ್ ಬೆಕ್ಕು ಮುಂತಾದ ವಿಶಿಶ್ಟ ಬೆಕ್ಕುಗಳು ಅದರಲ್ಲಿ ಸೇರಿದ್ದವು.

ಪ್ರಸಿದ್ದ ಕಲಾವಿದರಾದ ಅಲೆಹ್ಯಾಂಡ್ರೋ ವೇಲೆನ್ಶಿಯಾ ತೇಜಾಡಾ, ಮಾರಿಯೋ ಗೊರ‍್ಡಿಲ್ಲೋ, ನಾದಿನ್ ಓಸ್ಪಿನಾ, ಓಮಾ ರಯೊ ಮತ್ತು ಮಾರಿಪಾಜ್ ಜರಮಿಲ್ಲೋ ಈ ಬೆಕ್ಕುಗಳ ತಯಾರಿಕೆಯಲ್ಲಿ ತಮ್ಮ ಕೈಚಳಕವನ್ನು ಮೆರೆದಿದ್ದಾರೆ. ಬಹಳಶ್ಟು ಬೆಕ್ಕುಗಳ ಮೇಲ್ಮೈನ ಬಣ್ಣದಲ್ಲಿ ಹಾಗೂ ಅಲಂಕಾರದಲ್ಲಿ ವಿವಿದತೆಯಿದ್ದರೂ ಎಲ್ಲದರ ವಿನ್ಯಾಸ ಒಂದೇ ರೀತಿ ಇರುವುದು ಇಲ್ಲಿನ ವಿಶೇಶ. ಈ ಉದ್ಯಾನವನ ನಗರದ ನೈರುತ್ಯ ವಿಬಾಗದ ನಾರ‍್ಮಂಡಿಯಲ್ಲಿದೆ. ದಿನಗಳು ಉರುಳಿದಂತೆ ನಗರದ ಸುಪ್ರಸಿದ್ದ ಸಾಂಸ್ಕ್ರುತಿಕ ಸ್ಮಾರಕಗಳಾದ ಸೆಬಾಸ್ಟಿಯನ್ ಡಿ ಬೆಲಾಲ್ಕಾಜರ್ ಮತ್ತು ಸೆರೊ ಡಿ ಕ್ರಿಸ್ಟೊ ರೇ ಜೊತೆ ಇದೂ ಒಂದಾಗಿ ಮಾರ‍್ಪಟ್ಟಿದೆ.

ಕಾಲಿ ನಗರದ ಇತಿಹಾಸವನ್ನು ಕೆದಕಿದರೆ, 1996ರಲ್ಲಿ ಸಿಟಿಯ ನದಿ ದಡದಲ್ಲಿದ್ದ ಉದ್ಯಾನವನದ ಸೌಂದರ‍್ಯವನ್ನು ಹೆಚ್ಚಿಸಿ ಮರುಸ್ತಾಪಿಸಲು ಯೋಜನೆ ರೂಪಿಸಲಾಯಿತು. ಉದ್ಯಾನವನ್ನು ಹೊಸದಾಗಿಸುವ ಸಮಯದಲ್ಲಿ ಹೆರ‍್ನಾಂಡೊ ತೇಜಾಡಾ ದಾನವಾಗಿ ನೀಡಿದ್ದ ದೈತ್ಯ ಬೆಕ್ಕಿನ ಕಂಚಿನ ವಿಗ್ರಹವನ್ನು ಸ್ತಾಪಿಸಲು ಈ ಸ್ತಳವನ್ನು ಕಾದಿರಿಸಲಾಯಿತು.

ಬಗೊಟಾದಲ್ಲಿನ ರಾಪೆಲ್ ಪ್ರಾಂಕೋರ ಕಾರ‍್ಯಾಗಾರದಲ್ಲಿ ಎರಕ ಹೊಯ್ದ ಈ ದೊಡ್ಡ ಕಂಚಿನ ವಿಗ್ರಹವನ್ನು ಹೊರಸಾಗಿಸಲು ಕಾರ‍್ಯಾಗಾರದ ಮೇಲ್ಚವಾಣಿಯನ್ನೇ ತೆಗೆಯಬೇಕಾಯ್ತಂತೆ. ಈ ಸ್ಮಾರಕ ಸ್ತಾಪನೆಯಾಗಿದ್ದು ಅತಿ ಹೆಚ್ಚು ವಾಣಿಜ್ಯ ಚಟುವಟಿಕೆಯ ಹಾಗೂ ನಿದ್ರಿಸದ ವೆಸ್ಟ್ ಸ್ಟ್ರೀಟ್‍ನ ನಡುವಿರುವ ‘ಅವೆನಿಡಾ ಡೆಲ್ ರಿಯೊ’ ಎಂಬಲ್ಲಿ. ಇದರ ಉದ್ಗಾಟನೆ ನಡೆದಿದ್ದು ಜುಲೈ 3, 1996ರಂದು. ಸ್ಮಾರಕ ಉದ್ಗಾಟನೆಯಾದ ಹತ್ತು ವರ‍್ಶಗಳ ನಂತರ, ಅಂದರೆ 2006ರ ಅಕ್ಟೋಬರ್‍ನಲ್ಲಿ ಕಾಲಿಯ ಚೇಂಬರ್ ಆಪ್ ಕಾಮರ‍್ಸ್ ಸಂಸ್ತೆಯು ಸ್ಮಾರಕ ಹಾಗೂ ಅದರ ಸುತ್ತ ಮುತ್ತಲಿನ ಪ್ರದೇಶಗಳನ್ನು ಹೊಸದಾಗಿಸುವ ಕೆಲಸಗಳನ್ನು ಕೈಗೊಂಡಿತು. ‘ದ ಗರ‍್ಲ್ ಪ್ರೆಂಡ್ಸ್ ಆಪ್ ದ ಕ್ಯಾಟ್’ ತಲೆಬರಹದಲ್ಲಿ ದೈತ್ಯ ಬೆಕ್ಕಿನ ಸ್ಮಾರಕದ ಸುತ್ತಲಿನ ಪ್ರದೇಶವನ್ನು ದತ್ತು ಪಡೆದು ರೂಪಾಂತರಗೊಳಿಸಿತು.

ಹೊಸ ಹೊಸ ಬೆಕ್ಕುಗಳ ವಿನ್ಯಾಸವನ್ನು ರಚಿಸುವಲ್ಲಿ ಕೊಲಂಬಿಯಾದ ಶ್ರೇಶ್ಟ ಕಲಾವಿದರಾದ ಮರಿಪಜ್ ಜರಾಮಿಲೋ ಮತ್ತು ಒಮರ್ ರೇಯೋ ಸಹ ಬಾಗವಹಿಸಿದ್ದರು. 2006 ರಲ್ಲಿ ನಡೆದ ಪ್ರದರ‍್ಶನದಲ್ಲಿ ಹದಿನೈದು ಹೊಸ ವರ‍್ಣರಂಜಿತ ಶಿಲ್ಪ ಕಲಾಕ್ರುತಿಗಳ ಪ್ರಚಾರವನ್ನೂ ಚೇಂಬರ್ ಆಪ್ ಕಾಮರ‍್ಸ್ ಸಂಸ್ತೆ ಮಾಡಿತು. ಈ ಎಲ್ಲಾ ಹದಿನೈದು ಕಲಾಕ್ರುತಿಗಳು ಒಂದೇ ರೀತಿಯ ರಚನೆಯ ಆದಾರದ ಮೇಲೆ ರೂಪಿಸಿದ್ದು, ಬಣ್ಣ ಮತ್ತು ಅಲಂಕಾರ ಮಾತ್ರ ಸ್ತಳೀಯ ಕಲಾವಿದರ ವಿವೇಚನೆಯಂತೆ ವಿಬಿನ್ನವಾಗಿ ಮಾಡಲಾಗಿದೆ. ಈ ಎಲ್ಲಾ ಕಲಾಕ್ರುತಿಗಳು ಹೆಣ್ಣು ಬೆಕ್ಕಿನ ಚಿತ್ರಣಗಳು ಎಂಬುದೊಂದು ವಿಶೇಶ. ಕಲಾಕ್ರುತಿಯನ್ನು ವಿನ್ಯಾಸಗೊಳಿಸಿದ ಕಲಾವಿದನ ಹೆಸರು, ಪ್ರತಿಯೊಂದು ಬೆಕ್ಕಿನ ಹಿಂದಿರುವ ಸೊಗಸಾದ ಕತೆಯನ್ನು ನೋಡುಗರ ಗಮನಕ್ಕಾಗಿ ಅದರ ಬಳಿಯಿರುವ ಹಲಗೆಯಲ್ಲಿ ಸ್ಪಾನಿಶ್ ಬಾಶೆಯಲ್ಲಿ ಬರೆಯಲಾಗಿದೆ.

ಅಪಶಕುನ ಪ್ರಾಣಿಯೆಂಬ ಹಣೆಪಟ್ಟಿಯನ್ನು ಹೊತ್ತಿರುವ ಬೆಕ್ಕಿಗೆಂದೇ ಮೀಸಲಾದ ಹಾಗೂ ಒಂದೇ ರೀತಿಯ ವಿನ್ಯಾಸ ಹೊಂದಿರುವ ವಿಶ್ವದ ಏಕೈಕ ಉದ್ಯಾನವನ ಪಾರ‍್ಕ್ ಡೆಲ್ ಗೆಟೋ.

(ಮಾಹಿತಿಸೆಲೆ: atlasobscura.com, viator.com)
(ಚಿತ್ರಸೆಲೆ: toursift.com , noticias.calendariodecolombia.com)

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: