ಅಂಬಿಗರ ಚೌಡಯ್ಯನ ವಚನಗಳ ಓದು -2ನೆಯ ಕಂತು

– ಸಿ.ಪಿ.ನಾಗರಾಜ.

ಈಶ ಲಾಂಛನವ ತೊಟ್ಟು ಮನ್ಮಥ ವೇಷ ಲಾಂಛನವ ತೊಡಲೇತಕ್ಕೆ
ಇದು ನಿಮ್ಮ ನುಡಿ ನಡೆಗೆ ನಾಚಿಕೆಯಲ್ಲವೇ
ಅಂದಳ ಛತ್ರ ಆಭರಣ ಕರಿ ತುರಗಂಗಳ ಗೊಂದಣವೇತಕ್ಕೆ
ಅದು ಘನಲಿಂಗದ ಮೆಚ್ಚಲ್ಲ ಎಂದನಂಬಿಗ ಚೌಡಯ್ಯ.

ಜಾತಿ, ಮತ, ದೇವರುಗಳ ನೆಲೆಯಲ್ಲಿನ ಒಕ್ಕೂಟಗಳಿಗೆ ಗುರುಗಳಾದವರು ಮತ್ತು ದೇವ ಮಾನವರೆಂದು ತಮ್ಮನ್ನು ತಾವೇ ಕರೆದುಕೊಂಡು ಜನಸಮುದಾಯದ ನಡುವೆ ಕಾಣಿಸಿಕೊಳ್ಳುತ್ತಿರುವ ವ್ಯಕ್ತಿಗಳು , ಹಣೆಯಲ್ಲಿ ವಿಬೂತಿ/ಕುಂಕುಮ/ಚಂದನದ ದ್ರವ್ಯಗಳನ್ನು ಬಳಿದುಕೊಂಡು , ಮಯ್ ಮೇಲೆ ಕಾವಿ ಇಲ್ಲವೇ ಬಿಳಿಯ ಬಣ್ಣದ ಬಟ್ಟೆಯನ್ನುಟ್ಟು , ಕೊರಳು ಮತ್ತು ತೋಳುಗಳಲ್ಲಿ ಜಪಮಣಿಗಳ ಮಾಲೆಯನ್ನು ಕಟ್ಟಿಕೊಂಡು , ಸರಳವಾದ ಜೀವನವನ್ನು ನಡೆಸುತ್ತಿರುವಂತೆ ಮೇಲ್ನೋಟಕ್ಕೆ ಕಂಡುಬಂದರೂ , ಕೆಲವು ಸನ್ನಿವೇಶಗಳಲ್ಲಿ ಜರತಾರಿ ಉಡುಗೆಯನ್ನುಟ್ಟು , ರತ್ನವಜ್ರಗಳಿಂದ ಕೂಡಿದ ಚಿನ್ನದ ಕಿರೀಟವನ್ನು ಮುಡಿಯಲ್ಲಿ ತೊಟ್ಟು , ಪಲ್ಲಕ್ಕಿಯನ್ನೇರಿ , ಆಡಂಬರದಿಂದ ಕೂಡಿದ ಆಚರಣೆಗಳಲ್ಲಿ ತೊಡಗಿ , ಅದ್ದೂರಿಯ ಮೆರೆವಣಿಗೆಯಲ್ಲಿ ಮೆರೆಯುತ್ತಿರುತ್ತಾರೆ. ಇಂತಹ ಇಬ್ಬಂದಿತನದ ನಡೆನುಡಿಗಳನ್ನು ಈ ವಚನದಲ್ಲಿ ಕಟುವಾಗಿ ಟೀಕಿಸಲಾಗಿದೆ.

ಇಬ್ಬಂದಿತನದ ನಡೆನುಡಿ ಎಂದರೆ , ಒಂದೆಡೆಯಲ್ಲಿ ಸರ‍್ವಸಂಗಪರಿತ್ಯಾಗಿಗಳಂತೆ ನಟಿಸುತ್ತಾ , ಮತ್ತೊಂದೆಡೆಯಲ್ಲಿ ಎಲ್ಲಾ ಬಗೆಯ ಸಿರಿಸಂಪದಗಳಿಂದ ಕೂಡಿದ ಆಡಂಬರದ ಬದುಕನ್ನು ನಡೆಸುತ್ತಿರುವುದು.

( ಈಶ=ಈಶ್ವರ/ಶಿವ/ಒಡೆಯ/ದೇವರು; ಲಾಂಛನ=ಗುರುತು/ಚಿಹ್ನೆ/ಮುದ್ರೆ; ಈಶ ಲಾಂಛನ=ಕಾವಿ/ಬಿಳಿಯ ಬಣ್ಣದ ಬಟ್ಟೆ , ಹಣೆಯಲ್ಲಿ ವಿಬೂತಿ/ಕುಂಕುಮ/ಚಂದನ ದ್ರವ್ಯ , ಕೊರಳಲ್ಲಿ ರುದ್ರಾಕ್ಶಿ ಮಾಲೆ , ಅಂಗಯ್ ಮೇಲೆ ಇಶ್ಟಲಿಂಗ. ಶಿವನನ್ನು/ದೇವರನ್ನು ಒಲಿದು ಪೂಜಿಸುವ ವ್ಯಕ್ತಿಗಳು ಈ ಬಗೆಯ ಉಡುಗೆ ತೊಡುಗೆಗಳಿಂದ ಕಂಡುಬರುತ್ತಾರೆ; ತೊಟ್ಟು=ತಳೆದು/ಹೊಂದಿ/ಹಾಕಿಕೊಂಡು; ಮನ್ಮಥ=ಕಾಮ/ಮದನ/ಹೆಣ್ಣುಗಂಡಿನ ಮಯ್ ಮನಗಳಲ್ಲಿ ಕಾಮದ ನಂಟಿನ ಒಳಮಿಡಿತಗಳು ಮೂಡುವಂತೆ ಮಾಡುವ ದೇವತೆ ಎಂಬ ಕಲ್ಪನೆಯು ಜನಮನದಲ್ಲಿದೆ; ವೇಷ=ಮಯ್ಯನ್ನು ಉಡುಗೆತೊಡುಗೆಗಳಿಂದ ಸಿಂಗರಿಸಿಕೊಳ್ಳುವುದು/ಒಡವೆ/ಬಟ್ಟೆ; ಮನ್ಮಥ ವೇಷ ಲಾಂಛನ=ನೋಡುವವರ ಕಣ್ಮನಗಳನ್ನು ಸೆಳೆಯುವಂತಹ ಮೋಹಕವಾದ ಹಾಗೂ ಬೆಲೆಬಾಳುವ ಉಡುಗೆ ತೊಡುಗೆಗಳು / ಮನದಲ್ಲಿ ಕಾಮದ ನಂಟಿನ ಒಳಮಿಡಿತಗಳಿಂದ ಕೂಡಿ ಅಂದಚೆಂದದ ಒಡವೆ ಮತ್ತು ಬಟ್ಟೆಗಳಿಂದ ಸಿಂಗಾರಗೊಂಡಿರುವ ದೇಹ/ಶರೀರ/ಮಯ್ ; ತೊಡಲ್+ಏತಕ್ಕೆ; ತೊಡು=ಬಟ್ಟೆ/ಒಡವೆಗಳನ್ನು ಮಯ್ ಮೇಲೆ ಹಾಕಿಕೊಳ್ಳುವುದು ; ಏತಕ್ಕೆ=ಯಾವ ಉದ್ದೇಶಕ್ಕಾಗಿ/ಏನು ಕಾರಣಕ್ಕಾಗಿ;

ಇದು=ಈ ರೀತಿಯ/ಬಗೆಯ ; ನುಡಿ=ಮಾತು; ನಡೆ=ಆಚರಣೆ/ವರ‍್ತನೆ ; ನಾಚಿಕೆ+ಅಲ್ಲವೇ; ನಾಚಿಕೆ=ಲಜ್ಜೆ/ಸಿಗ್ಗು/ಅವಮಾನ; ಇದು ನಿಮ್ಮ ನಡೆನುಡಿಗೆ ನಾಚಿಕೆಯಲ್ಲವೇ=ಬಾಯಲ್ಲಿ ಆದರ‍್ಶದ/ಸರಳತನದ/ನೀತಿಯ/ನ್ಯಾಯದ ನುಡಿಗಳನ್ನಾಡುತ್ತಾ , ನಿಜಜೀವನದಲ್ಲಿ ಅದ್ದೂರಿತನದಿಂದ ಕೂಡಿದ ಸಿರಿವಂತಿಕೆಯ ಜೀವನವನ್ನು ಮಾಡುತ್ತಿರುವುದು ನಿಮ್ಮ ಮನವನ್ನು ಕಾಡುತ್ತಿಲ್ಲವೇ / ಈ ರೀತಿ ಇಬ್ಬಗೆಯಲ್ಲಿ ಬಾಳುವುದು ಸರಿಯಲ್ಲ ಎಂಬ ಒಳಮಿಡಿತವು ನಿಮ್ಮ ಮನದಲ್ಲಿ ಮೂಡಿಲ್ಲವೇ / ಆಡುವುದು ಒಂದು ಮಾಡುವುದು ಮತ್ತೊಂದು ಎಂಬ ನಾಣ್ಣುಡಿಯಂತೆ ನಾನಿದ್ದೇನೆ ಎಂಬ ಅಳುಕು ನಿಮ್ಮನ್ನು ಕಾಡುತ್ತಿಲ್ಲವೇ / ಸಮಾಜದಲ್ಲಿ ನನ್ನನ್ನು ನೋಡಿದ ನಾಲ್ಕು ಮಂದಿ ನನ್ನ ಬಗ್ಗೆ ಏನಂದುಕೊಳ್ಳಬಹುದು ಎಂಬ ಹೆದರಿಕೆಯಿಲ್ಲವೇ ;

ಅಂದಳ=ಪಲ್ಲಕ್ಕಿ/ಮೇನೆ/ಡೋಲಿ; ಛತ್ರ=ದೇವರು/ರಾಜ/ಗುರುಹಿರಿಯರ ಸಾಮಾಜಿಕ ಅಂತಸ್ತಿನ ದೊಡ್ಡತನ/ಹಿರಿಮೆಯ ಸೂಚಕವಾಗಿ ಹಿಡಿಯುವ ಬಿಳಿಯ ಕೊಡೆ; ಆಭರಣ=ಒಡವೆ/ಚಿನ್ನಬೆಳ್ಳಿವಜ್ರಗಳಿಂದ ಮಾಡಿರುವ ತೊಡುಗೆ; ಕರಿ=ಆನೆ; ತುರಗ=ಕುದುರೆ/ಅಶ್ವ; ತುರಗಂಗಳ=ಕುದುರೆಗಳ; ಗೊಂದಣವು+ಏತಕ್ಕೆ; ಗೊಂದಣ=ಗುಂಪು/ಹಿಂಡು/ಮೇಳ; ಘನ=ದೊಡ್ಡದಾದ/ಮಂಗಳಕರವಾದ/ಮಹಿಮೆಯುಳ್ಳ; ಲಿಂಗ=ಈಶ್ವರನ ವಿಗ್ರಹ/ದೇವರು; ಮೆಚ್ಚು=ಒಪ್ಪು/ಸಮ್ಮತಿಸು/ಒಲಿ/ಪ್ರೀತಿಸು; ಮೆಚ್ಚಲ್ಲ=ಒಪ್ಪಿಗೆಯಾಗುವುದಿಲ್ಲ/ಒಲಿಯುವುದಿಲ್ಲ;

ಅದು ಘನಲಿಂಗದ ಮೆಚ್ಚಲ್ಲ= ಈ ರೀತಿ ಹೊರಗೊಂದು ಒಳಗೊಂದು ಬಗೆಯ ಉದ್ದೇಶಗಳಿಂದ ಕೂಡಿ , ಮನದಲ್ಲಿ ಒಳಿತು ಕೆಡುಕಿನ ನಡೆನುಡಿಗಳ ಬಗ್ಗೆ ಯಾವೊಂದು ಬಗೆಯ ಒಳತೋಟಿಗಳಿಲ್ಲದೆ ಮೆರೆಯುವ ವ್ಯಕ್ತಿಗಳನ್ನು ದೇವರು/ಲಿಂಗ ಮೆಚ್ಚುವುದಿಲ್ಲ. ದೇವರು ಮೆಚ್ಚುವುದು ಒಳ್ಳೆಯ ನಡೆನುಡಿಗಳಿಂದ ಕೂಡಿ, ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ವ್ಯಕ್ತಿಗಳನ್ನು ಮಾತ್ರ ಎಂಬ ಇಂಗಿತವನ್ನು ಈ ನುಡಿಗಳಲ್ಲಿ ಸೂಚಿಸಲಾಗಿದೆ; ಎಂದನ್+ಅಂಬಿಗ;ಎಂದನ್=ಎಂದು ಹೇಳಿದನು/ನುಡಿದನು )

 

ಹೊಡವಡಲೇಕೆ ಹಿಡಿದು ಪೂಜಿಸಲೇಕೆ
ಎಡೆಯಾಡಲೇಕೆ ದೇಗುಲಕ್ಕಯ್ಯಾ
ಬಡವರಂಧಕರಿಂಗೆ ಒಡಲಿಗನ್ನವನಿಕ್ಕಿದಡೆ
ಹೊಡವಂಟನಾದ ಮೂರು ಲೋಕಕ್ಕೆ
ಬಡವರಂಧಕರಿಗೆ ಒಡಲಿಗನ್ನವನಿಕ್ಕದಿದ್ದರೆ
ಹೊಡೆವಡಲಿಕೆ ಹುರುಳಿಲ್ಲವೆಂದನಂಬಿಗ ಚೌಡಯ್ಯ.

ದೇವರ ಹೆಸರಿನಲ್ಲಿ ಮಾಡುವ ಎಲ್ಲಾ ಬಗೆಯ ಪೂಜೆ / ಆಚರಣೆಗಳಿಗಿಂತಲೂ , ಹಸಿವು/ಬಡತನ/ಸಂಕಟದ ಬೇಗೆಯಲ್ಲಿ ಬೇಯುತ್ತಿರುವ ವ್ಯಕ್ತಿಗಳಿಗೆ ನೆರವನ್ನು ನೀಡುವ ಕೆಲಸವು ಮಿಗಿಲಾದುದು/ಉತ್ತಮವಾದುದು/ದೊಡ್ಡದು ಎಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.

( ಹೊಡವಡಲ್+ಏಕೆ; ಪೊಡೆ+ಪಡು=ಪೊಡೆವಡು; ಪೊಡೆ=ಹೊಟ್ಟೆ/ಒಡಲು/ಉದರ; ಪಡು=ಬೀಳು/ಕೆಡೆ/ಮಲಗು ; ಪೊಡೆವಡು/ಹೊಡವಡು=ಅಡ್ಡಬೀಳು/ಇಡೀ ಮಯ್ಯನ್ನು ನೆಲದ ಮೇಲೆ ಒಡ್ಡಿ ತಲೆಬಾಗಿ ನಮಿಸುವುದು/ದಿಂಡುರುಳುವುದು; ಏಕೆ=ಯಾವುದಕ್ಕಾಗಿ/ಏತಕ್ಕಾಗಿ; ಹಿಡಿದು=ಕಯ್ಯಲ್ಲಿ ಮುಟ್ಟುತ್ತಾ/ಅಂಗಯ್ ಮೇಲೆ ಇಶ್ಟಲಿಂಗವನ್ನು ಇಟ್ಟುಕೊಂಡು; ಪೂಜಿಸಲ್+ಏಕೆ; ಪೂಜೆ=ದೇವರಿಗೆ ಮಾಡುವ ಬಹುಬಗೆಯ ಆಚರಣೆಗಳು/ಹೂಹಣ್ಣುಕಾಯಿಗಳನ್ನು ದೇವರ ವಿಗ್ರಹದ ಮುಂದೆ ಇಟ್ಟು , ಕರ‍್ಪೂರ/ಸಾಂಬ್ರಾಣಿ/ದೀಪದ ಆರತಿಯನ್ನು ಬೆಳಗುವುದು;

ಎಡೆ+ಆಡಲ್+ಏಕೆ; ಎಡೆ=ನಡುವಣ ಜಾಗ/ಪ್ರದೇಶ; ಆಡು=ಚಲಿಸು/ತಿರುಗು; ಆಡಲ್=ಆಡಲು/ತಿರುಗಲು; ಎಡೆಯಾಡು=ಅತ್ತಿತ್ತ ಅಡ್ಡಾಡು/ಅಲೆದಾಡು/ಹೋಗಿಬರುತ್ತಿರುವುದು; ದೇಗುಲಕ್ಕೆ+ಅಯ್ಯಾ; ದೇಗುಲ=ದೇವ+ಕುಲ; ಕುಲ=ಮನೆ/ಇರುವ ಜಾಗ/ಆಲಯ; ದೇಗುಲ=ದೇವಾಲಯ/ ದೇವರ ವಿಗ್ರಹ ಇರುವ ಮಂದಿರ ; ಅಯ್ಯಾ=ಇತರರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ;

ಬಡವರ್  + ಅಂಧಕರಿಂಗೆ; ಬಡವ=ಆಸ್ತಿಪಾಸ್ತಿ/ಸಂಪತ್ತು/ಹಣಕಾಸು ಇಲ್ಲದವನು ; ಅಂಧಕ=ಕುರುಡ/ಕಣ್ಣುಗಳಿಂದ ನೋಡಲಾಗದವನು/ಕಣ್ಣು ಕಾಣದವನು; ಒಡಲಿಗೆ+ಅನ್ನವನ್+ಇಕ್ಕಿದಡೆ; ಒಡಲು=ಹೊಟ್ಟೆ/ಉದರ/ದೇಹ/ಶರೀರ/ಮಯ್ ; ಅನ್ನ=ಆಹಾರವಾಗಿ ತಿನ್ನುವ ಉಣ್ಣುವ ಎಲ್ಲಾ ಬಗೆಯ ತಿನಸು ಉಣಿಸುಗಳು; ಇಕ್ಕು=ನೀಡುವುದು/ಕೊಡುವುದು/ಇಡುವುದು/ಹಾಕುವುದು ; ಇಕ್ಕಿದಡೆ=ನೀಡಿದರೆ/ಉಣಬಡಿಸಿದರೆ;

ಹೊಡವಂಟನ್+ಆದ; ಹೊಡವಂಟನು=ನಮಸ್ಕರಿಸಿದವನು/ನಮಿಸಿದವನು/ದಿಂಡುರುಳಿದವನು; ಆದ=ಆದನು ; ಮೂರು ಲೋಕ=ಮಾನವ ಜೀವಿಗಳಿರುವ ಬೂಲೋಕ, ದೇವತೆಗಳಿರುವ ದೇವಲೋಕ , ನಾಗದೇವತೆಗಳು ನೆಲೆಸಿರುವ ಪಾತಾಳಲೋಕ ಎಂಬ ಮೂರು ಲೋಕಗಳಿವೆ ಎಂಬ ಕಲ್ಪನೆಯು ಜನಮನದಲ್ಲಿದೆ ; ಹೊಡವಂಟನಾದ ಮೂರು ಲೋಕಕ್ಕೆ=ಸಹಮಾನವರ ಬಗ್ಗೆ ಕರುಣೆಯನ್ನು ತೋರಿದ ನಡೆನುಡಿಗಳಿಂದಾಗಿ, ಇಂತಹ ವ್ಯಕ್ತಿಯು ಮೂರು ಲೋಕದ ಮನ್ನಣೆಗೆ ಪಾತ್ರನಾಗುವನು ಎಂಬ ತಿರುಳಿನಲ್ಲಿ ಬಳಕೆಯಾಗಿದೆ;

ಬಡವರ್  + ಅಂಧಕರಿಂಗೆ;   ಒಡಲಿಗೆ+ಅನ್ನವನ್+ಇಕ್ಕದೆ+ಇದ್ದರೆ; ಅನ್ನವನ್=ಅನ್ನವನ್ನು; ಇಕ್ಕದೆ=ನೀಡದೆ/ಕೊಡದೆ/ಹಾಕದೆ ; ಇಕ್ಕದಿದ್ದರೆ=ಕೊಡದೆ ಹೋದರೆ; ಹೊಡೆವಡಲಿಕೆ=ದೇವರ ಮುಂದೆ ಇಲ್ಲವೇ ದೇಗುಲದಲ್ಲಿ ದಿಂಡುರುಳುವ /ನಮಸ್ಕರಿಸುವ ಆಚರಣೆಯಿಂದ; ಹುರುಳ್+ಇಲ್ಲ+ಎಂದನ್+ಅಂಬಿಗ; ಹುರುಳು=ಸತ್ವ/ಒಳಿತು/ಲೇಸು/ಪ್ರಯೋಜನ;

ಹೊಡೆವಡಲಿಕೆ ಹುರುಳಿಲ್ಲ=ಸಹಮಾನವರ ಬಗ್ಗೆ ಕರುಣೆಯ ನಡೆನುಡಿಯಿಲ್ಲದವರು/ನೊಂದವರಿಗೆ ಹಸಿದವರಿಗೆ ನೆರವನ್ನು ನೀಡದವರು ಮಾಡುವ ದೇವರ ಪೂಜೆಯಿಂದ ಯಾವ ಪ್ರಯೋಜನವೂ ಇಲ್ಲ. ದೇವರ ಪೂಜೆಗಿಂತ ಸಹಮಾನವರ ಬಗೆಗಿನ ಕಾಳಜಿ ಮತ್ತು ಕರುಣೆಯ ನಡೆನುಡಿ ದೊಡ್ಡದು ಎಂಬ ತಿರುಳಿನಲ್ಲಿ ಈ ಪದಕಂತೆಯು ಬಳಕೆಯಾಗಿದೆ )

 

ಅರಿವಿನ ಪಥವನರಿಯದಿರ್ದಡೆ
ಮುಂದೆ ಹೆರರಿಗೆ ದೀಕ್ಷೆಯ ಮಾಡಲೇಕೆ
ತೊರೆಯಲದ್ದವನನೀಸಲರಿಯದವ
ತೆಗೆಯ ಹೋದಂತಾಯಿತ್ತೆಂದನಂಬಿಗ ಚೌಡಯ್ಯ.

ಇತರರಿಗೆ ತಿಳುವಳಿಕೆಯನ್ನು ಹೇಳುವ / ಇತರರ ನಡೆನುಡಿಗಳನ್ನು ಒಳ್ಳೆಯ ರೀತಿಯಲ್ಲಿ ರೂಪಿಸುವ ಹೊಣೆಯನ್ನು ಹೊತ್ತಿರುವ ವ್ಯಕ್ತಿಯು, ಮೊದಲು ತಾನು ಒಳ್ಳೆಯ ಅರಿವನ್ನು ಪಡೆದುಕೊಂಡು , ತನ್ನ ಬದುಕಿನಲ್ಲಿ ಒಳ್ಳೆಯ ನಡೆನುಡಿಗಳನ್ನು ಹೊಂದಿರಬೇಕು. ತಾನೇ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿರದೆ ಇತರರಿಗೆ ತಿಳಿಯ ಹೇಳಲು ಹೋದರೆ , ಅದು ದುರಂತಕ್ಕೆ ಕಾರಣವಾಗುತ್ತದೆಯೆಂಬ ಎಚ್ಚರಿಕೆಯನ್ನು ರೂಪಕವೊಂದರ ಮೂಲಕ ಈ ವಚನದಲ್ಲಿ ನೀಡಲಾಗಿದೆ.

( ಅರಿವು=ತಿಳುವಳಿಕೆ/ವಿವೇಕ; ಪಥ + ಅನ್ + ಅರಿಯದೆ + ಇರ್ದಡೆ ; ಪಥ=ದಾರಿ/ಹಾದಿ/ಮಾರ‍್ಗ; ಅನ್=ಅನ್ನು; ಅರಿ=ತಿಳಿ/ಕಲಿ; ಅರಿಯದೆ=ಕಲಿತುಕೊಳ್ಳದೆ/ತಿಳಿದುಕೊಳ್ಳದೆ ; ಇರ್ದಡೆ=ಇದ್ದರೆ ; ಅರಿವಿನ ಪಥ=ಜೀವನದಲ್ಲಿ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂಬ ತಿಳುವಳಿಕೆಯನ್ನು ಪಡೆದುಕೊಂಡು , ಕೆಟ್ಟದ್ದನ್ನು ತೊರೆದು , ಒಳ್ಳೆಯದನ್ನು ಅನುಸರಿಸಿ , ತನಗೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವಂತಹ ನಡೆನುಡಿಗಳು; ಅರಿಯದಿರ್ದಡೆ=ತಿಳಿಯದಿದ್ದರೆ/ಕಲಿಯದಿದ್ದರೆ/ಗೊತ್ತುಮಾಡಿಕೊಳ್ಳದಿದ್ದರೆ;

ಮುಂದೆ=ಅನಂತರದಲ್ಲಿ/ತರುವಾಯ/ಆಮೇಲೆ; ; ಹೆರರು=ಬೇರೆಯವರು/ಇತರರು/ಅನ್ಯರು; ಹೆರರಿಗೆ=ಬೇರೆಯವರಿಗೆ/ಇತರರಿಗೆ; ದೀಕ್ಷೆ=ವ್ರತ/ನಿಯಮ/ಉಪದೇಶವನ್ನು ನೀಡುವುದು/ಅರಿವನ್ನು ತಿಳಿಯ ಹೇಳುವುದು/ಒಳ್ಳೆಯ ವ್ಯಕ್ತಿತ್ವ ರೂಪುಗೊಳ್ಳಲು ಬೇಕಾದ ನಡೆನುಡಿಗಳನ್ನು ಕಲಿಸುವುದು; ಮಾಡಲ್+ಏಕೆ; ಏಕೆ=ಏತಕ್ಕಾಗಿ/ಯಾವುದಕ್ಕಾಗಿ; ಮುಂದೆ ಹೆರರಿಗೆ ದೀಕ್ಷೆಯ ಮಾಡಲೇಕೆ=ತನಗೆ ತಿಳಿಯದ ವಿಚಾರಗಳನ್ನು ಇತರರಿಗೆ ಹೇಳುವುದರಿಂದಾಗಲಿ ಇಲ್ಲವೇ ತಾನು ಮಾಡಲಾಗದ ಒಳ್ಳೆಯ ಕೆಲಸಗಳನ್ನು ಇತರರಿಗೆ ಮಾಡುವಂತೆ ಹೇಳುವುದರಿಂದಾಗಲಿ ಯಾವುದೇ ಪ್ರಯೋಜನವಿಲ್ಲ ;

ತೊರೆಯಲ್+ಅದ್ದ+ಅವನನ್+ಈಸಲ್+ಅರಿಯದವ; ತೊರೆ=ನದಿ/ಹೊಳೆ ; ಅದ್ದ=ಮುಳುಗಿದ/ನೀರಿನಲ್ಲಿ ಮುಳುಗುತ್ತಿರುವ ; ಅವನನ್= ಆ ವ್ಯಕ್ತಿಯನ್ನು ; ತೊರೆಯಲದ್ದವನನ್=ನದಿಯ ನೀರಿನಲ್ಲಿ ಮುಳುಗೇಳುತ್ತಾ , ಸಾವು ಬದುಕಿನ ನಡುವೆ ತುಯ್ದಾಡುತ್ತಿರುವವನನ್ನು/ಹೋರಾಡುತ್ತಿರುವವನನ್ನು ; ಈಸು=ಈಜು/ನೀರಿನಲ್ಲಿ ಕಯ್ ಕಾಲುಗಳನ್ನು ಆಡಿಸುತ್ತ , ನೀರಿನ ಅಲೆಗಳನ್ನು ಸೀಳಿಕೊಂಡು , ನೀರಿನಲ್ಲಿ ಮುಳುಗಿಹೋಗದೆ , ತೇಲುತ್ತಾ ಮುಂದೆ ಮುಂದೆ ಸಾಗುವ ಕಲೆ/ನಿಪುಣತೆ/ಕುಶಲತೆ ; ಈಸಲು=ಈಜನ್ನು ಹೊಡೆಯಲು ; ಅರಿಯದವ=ತಿಳಿಯದವನು; ಈಸಲರಿಯದವ=ಈಜನ್ನು ಕಲಿಯದವನು/ಈಜಿನಲ್ಲಿ ಪರಿಣತಿ/ತರಬೇತಿಯನ್ನು ಪಡೆಯದವನು/ಈಜು ಬಾರದವನು ; ತೆಗೆ=ಮೇಲಕ್ಕೆ ಎತ್ತು/ಈಚೆಗೆ ತರು/ಹೊರಕ್ಕೆ ಎಳೆ ; ತೆಗೆಯ=ತೆಗೆಯಲು; ಹೋದ+ಅಂತೆ+ಆಯಿತ್ತು+ಎಂದನ್+ಅಂಬಿಗ ; ಅಂತೆ=ಹಾಗೆ; ತೆಗೆಯ ಹೋದಂತೆ=ಮೇಲಕ್ಕೆತ್ತಲು/ಹೊರಕ್ಕೆ ಎಳೆದು ತರಲು ಹೋದ ಹಾಗೆ ; ಆಯಿತ್ತು=ಆಯಿತು.

ಈಜನ್ನು ಕಲಿಯದವನು ತೊರೆಯಲ್ಲಿ ಮುಳುಗಿ ಸಾಯುತ್ತಿರುವವನ್ನು ಮೇಲಕ್ಕೆತ್ತಲು ಹೋದಾಗ , ಅವನನ್ನು ಕಾಪಾಡಲಾಗದೆ , ತಾನೂ ಅವನೊಡನೆ ಸಾಯುವಂತೆ ಒಳ್ಳೆಯ ಅರಿವನ್ನು ತನ್ನದಾಗಿಸಿಕೊಳ್ಳದವನು ಮತ್ತು ಜೀವನದಲ್ಲಿ ಒಳ್ಳೆಯ ನಡೆನುಡಿಗಳನ್ನು ಹೊಂದದವನು ಗುರುವಾದರೆ , ತಾನು ಹಾಳಾಗುವುದಲ್ಲದೆ , ತನ್ನ ಬಳಿ ಅರಿವನ್ನು ಪಡೆಯಲು /ವಿದ್ಯೆಯನ್ನು ಕಲಿಯಲು ಬಂದವರನ್ನು ಹಾಳುಮಾಡುತ್ತಾನೆ ಎಂಬ ಇಂಗಿತವನ್ನು ಈ ರೂಪಕ ಸೂಚಿಸುತ್ತಿದೆ )

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: