ಜಗುಲಿಯ ಮೇಲೆ ಮೂಡಿದ ಅಮ್ಮನ ನೆನಪು

– ಅಜಯ್ ರಾಜ್.

ಆಗಶ್ಟೇ ಎಸ್ಸೆಸ್ಸೆಲ್ಸಿ ಮುಗಿಸಿದ್ದ ನನ್ನನ್ನು ಕಾಡಿದ ಪ್ರಶ್ನೆ “ಮುಂದೇನು?” ಯಾವುದೇ ಪೂರ‍್ವಾಪರ ಕನಸು, ಯೋಜನೆಗಳಿಲ್ಲದ ನಾನು ಗಾಳಿ ಬೀಸಿದತ್ತ ತೂರಿಕೊಳ್ಳಲು ಅಣಿಯಾಗಿದ್ದೆ. ಆದರೆ ಎಲ್ಲೋ ಮನದಾಳದಲ್ಲಿ ಪಾದ್ರಿಯಾಗ ಬೇಕೆಂಬ ಇಂಗಿತ ನನ್ನನ್ನು ಎಡೆಬಿಡದೆ ಕಾಡುತ್ತಿತ್ತು. ನಮ್ಮದು ಮದ್ಯಮ ವರ‍್ಗದ ಸಾದಾರಣ ಕ್ರೈಸ್ತ ಕುಟುಂಬವಾದ ಕಾರಣ ಈ ಆದ್ಯಾತ್ಮಿಕತೆ, ಪ್ರತಿನಿತ್ಯ ಚರ‍್ಚಿಗೆ ಹೋಗುವುದು, ದಾರ‍್ಮಿಕ ಕಾರ‍್ಯಕ್ರಮಗಳಲ್ಲಿ ಬಾಗವಹಿಸುವುದು ಬದುಕಿನ ಅವಿಬಾಜ್ಯ ಅಂಗವಾಗಿತ್ತು. ಅಮ್ಮನಿಗೆ ನಾನೆಂದರೆ ಪ್ರಾಣ. ಒಂದು ವೇಳೆ ನನ್ನ ತಮ್ಮನಿಲ್ಲದೆ ಬದುಕಿ ಬಿಟ್ಟಾಳು ಆದರೆ ನಾನಿಲ್ಲದೆ ಅವಳನ್ನು ಊಹಿಸಿಕೊಳ್ಳುವುದೂ ಸಾದ್ಯವಿಲ್ಲ. ಅವಳ ಪ್ರೀತಿ ಅಶ್ಟರ ಮಟ್ಟಿಗೆ ಇಂಟೆನ್ಸ್. ಆದರೆ ಹುಡುಗು ಬುದ್ದಿಯ ನನಗೆ ಇದೆಲ್ಲಾ ತೀರಾ ಹಗುರವಾದ ವಿಶಯವೆನಿಸಿತ್ತು.

ಬೆಂಗಳೂರಿನಲ್ಲಿಯೇ ಗುರುಮಟಕ್ಕೆ ಸೇರಿ ಪಾದ್ರಿಯಾಗುವ ಕನಸು ಕಂಡಿದ್ದ ನನಗೆ ಆಶ್ಚರ‍್ಯವನ್ನುಂಟು ಮಾಡಿದ್ದು ಪಾದರ್ ಪಿಲಿಪ್ ರವರ ಬರುವಿಕೆ. ಪಾದರ್ ಪಿಲಿಪ್-ಈ ಮನುಶ್ಯನ ಬಗ್ಗೆ ಹೇಳಲೇ ಬೇಕು. ಆಳವಾದ ಕಣ್ಣುಗಳು, ಉಬ್ಬಿದ ಹೊಟ್ಟೆ, ಅರೆಗುಂಗುರು ಕೂದಲು, ಕಂದು ಮೈಬಣ್ಣ ಹಾಗು ಕೊಂಚ ದಡೂತಿ ದೇಹದ ಇವರು ಪಕ್ಕಾ ಹಳ್ಳಿಯ ಸೊಗಡಿನ ಮನುಶ್ಯ. ಕಂಡವರು ಈತ ಒಬ್ಬ ಪಾದ್ರಿಯೆಂದು ಗುರುತಿಸಲಸಾದ್ಯವಾದಶ್ಟು ಸರಳ ಜೀವಿ. ಜಾರ‍್ಕಂಡಿನಲ್ಲಿದ್ದ ಇವರು ಇದ್ದಕ್ಕಿದ್ದಂತೆ ಪ್ರತ್ಯಕ್ಶವಾಗಿ “ನೀನು ಗೋವಾಕ್ಕೆ ಹೊರಡು” ಎಂದು ಬಿಡುವುದೇ? ತಿಳಿ ನೀರಿನಂತೆ ಪ್ರಶಾಂತವಾಗಿದ್ದ ಮನಸ್ಸಿನ ಮಾನಸ ಸರೋವರಕ್ಕೆ ದೊಪ್ಪೆಂದು ಕಲ್ಲು ಬಿದ್ದಂತಾಯಿತು. ಮತ್ತದೇ ಗೊಂದಲಗಳ ನಡುವೆ ಮನಸ್ಸು ಈಜಾಡಿ ಕೊನೆಗೂ ಒಂದು ನಿರ‍್ದಾರ ಹೊರಬಿತ್ತು. ಹೇಗೋ ಒಂದು ಬಾರಿಯೂ ಗೋವಾ ನೋಡಿರದ ನನಗೆ, ಹೊಸದೊಂದು ಆಸೆ ಉದಯಿಸಿ ಅಲ್ಲಿಗೆ ಹೋಗಬೇಕೆಂಬ ಮನಸ್ಸಾಯಿತು. ಅಮ್ಮನ ಕಣ್ಣಹನಿಗಳ ನಡುವೆ, ಅಪ್ಪನ ಬೈಗುಳದ ಆರ‍್ಬಟದ ನಡುವೆಯೂ ಗೋವಾಕ್ಕೆ ಹೊರಡುವುದೆಂದು ಇತ್ಯರ‍್ತವಾಯಿತು.

ಮರುದಿನ ಸಾಯಂಕಾಲವೇ ಹಿರಿಯ ಪಾದ್ರಿ ಪಾದರ್ ಬೆನೆಡಿಕ್ಟ್ ಮೊಂತೇರೊ ನನ್ನನ್ನು ಗೋವಾಕ್ಕೆ ಕರೆದೊಯ್ಯುವ ಸಲುವಾಗಿ ಮನೆಗೆ ಬಂದರು. ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದ ನಾನು ಇನ್ನು ಹೊರಡುವುದೊಂದೇ ಬಾಕಿ. ಆಗ ಅಮ್ಮ ಎದುರಾಗಿ ಮಮತೆ ತುಂಬಿದ ಬಾವದಿಂದ ಮೆಲ್ಲನೆ ತಲೆ ಸವರಿದಳು. ಅವಳ ಕಣ್ಣುಗಳಲ್ಲಿ ಕಂದನ ಅಗಲಿಕೆ, ಬವಿಶ್ಯದ ಬಯ ಹಾಗು ನಾನು ಆ ಹೊಸ ಜಾಗದಲ್ಲಿ ಹೇಗಿರುತ್ತೇನೊ ಎಂಬ ದುಗುಡವೇ ತುಂಬಿತ್ತು. ಹಿಂದಿನ ದಿನ ರಾತ್ರಿಯೇ ತನ್ನೆಲ್ಲಾ ಅಸಹನೆ, ಉಪದೇಶ ಮತ್ತು ನನ್ನ ಸುರಕ್ಶತೆಯ ಬಗ್ಗೆ ಸವಿವರವಾಗಿ ಮಾತನಾಡಿದ್ದ ಅವಳು ನನ್ನೆದುರಾಗ ಪದಗಳಲ್ಲಿದೆ ಮೂಕಳಾಗಿದ್ದಳು. ಮನದ ಅಸ್ಕಲಿತ ಬಾವನೆಗಳೆಲ್ಲಾ ಕಣ್ಣಂಚಿನಲಿ ಕೂಡಿ ಸುಪ್ತ ಸಂಬಾಶಣೆಯೊಂದು ನಮ್ಮಿಬ್ಬರ ನಡುವೆ ಹಾದುಹೋಯಿತು. ಅಮ್ಮನ ತುಮುಲಗಳು ಎಳ್ಳಶ್ಟೂ ಅರ‍್ತವಾಗದ, ಅರ‍್ತವಾಗಿದ್ದರೂ ಅದಕ್ಕೆ ಪೂರಕವಾಗಿ ಸ್ಪಂದಿಸದ ನನ್ನನ್ನು ಕಾಣದೊಂದು ಅಪರಾದಿ ಪ್ರಜ್ನೆ ಪಯಣದುದ್ದಕೂ ಕಾಡುತ್ತಿತ್ತು.

ಅಂದು ಸಂಜೆ ಬೆಂಗಳೂರಿನಿಂದ ಹೊರಟ ನಾನು ತಿಪಟೂರಿನ ಪಾದರ್ ಬೆನೆಡಿಕ್ಟರ ನಿವಾಸ ತಲುಪುವಶ್ಟರಲ್ಲಿ ಮದ್ಯರಾತ್ರಿಯಾಗಿತ್ತು. ಅಲ್ಲಿ ಎರಡು ದಿನ ತಂಗಿದ್ದು, ಮೂರನೆಯ ದಿನ ಹೊರಡುವುದೆಂದು ನಿರ‍್ದರಿಸಿದೆವು. ರೈಲಿನಲ್ಲಿ ಹೋಗುವ ಪ್ರಯಾಣಕ್ಕೆಲ್ಲಾ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿ ಸ್ಲೀಪರ್ ಕೋಚಿನಲ್ಲಿ ಹಾಯಾಗಿ ಪಯಣಿಸುವ ಹವ್ಯಾಸವಿದ್ದ ನನಗೆ ಮೊದಲ ಬಾರಿ ಜನರಲ್ ಕಂಪಾರ‍್ಟ್ಮೆಂಟಿನಲ್ಲಿ ಪ್ರಯಾಣಿಸುವ “ಅದ್ರುಶ್ಟ”ವೊಂದು ಒದಗಿ ಬಂದಿತ್ತು. ರೈಲು ಹೊರಡುತ್ತಿದ್ದಂತೆಲ್ಲಾ ಸಾಗರೋಪಾದಿಯಲ್ಲಿ ಜನ ಪ್ರಯಾಣಿಸಲು ಬರುತ್ತಿದ್ದರು. ಕಿಕ್ಕಿರಿದ ಬೋಗಿಯಲ್ಲಿ ಮನುಶ್ಯರ ಬೆವರ ಗಬ್ಬುವಾಸನೆ ನನ್ನ ಗ್ರಾಣೇಂದ್ರಿಯವನ್ನು ಮಂಕಾಗಿಸಿತ್ತು. ಮತ್ತೊಂದು ಕಡೆ ದುರ‍್ಗಂದದಿಂದ ನಾರುತ್ತಿರುವ ಶೌಚಾಲಯಗಳು ಶತಮಾನಗಳಿಂದ ನೀರನ್ನು ಕಾಣದಂತಿದ್ದವು. ಕೆಳಗೆ ಕಾಲಿಡಲೂ ಆಗದಂತೆ ರೈಲಿನಲ್ಲಿ ಮಲಗಿದ್ದ ಜನರನ್ನು ಕಂಡು ಕೋಪ, ಅಸಹನೆ ಒಂದೆಡೆಯಾದರೆ, ಅವರ ಹೊಟ್ಟೆಪಾಡಿನ ಅನಿವಾರ‍್ಯತೆಯನ್ನು ಕಂಡು ಮರುಗುವುದು ಮತ್ತೊಂದೆಡೆ. ಈ ಶೋಚನೀಯ ಸ್ತಿತಿಯಲ್ಲಿಯೂ ಸಹ ಶಾಂತಮೂರ‍್ತಿಯಂತೆ ಕುಳಿತಿದ್ದರು ಪಾದರ್ ಬೆನೆಡಿಕ್ಟ್. “ಈ ಮುದುಕನಿಗೆ ಟಿಕೆಟ್ ಬುಕ್ ಮಾಡಿಸೋಕೆ ಏನು ರೋಗ” ಎಂದು ಮನದಲ್ಲೆ ಪಾದರ್ ಬೆನೆಡಿಕ್ಟರನ್ನು ಶಪಿಸುತ್ತಾ ಕಾಲ ಕಳೆಯುವಶ್ಟರಲ್ಲಿ ಮುಂಜಾನೆ ಆರು ಗಂಟೆಗೆ ಗೋವಾದ ವಾಸ್ಕೋ-ಡ-ಗಾಮ ಸ್ಟೇಶನ್ ತಲುಪಿದೆವು. ಅಬ್ಬಾ! ಅಂತೂ ಇಂತೂ ಈ ದುರ‍್ವಾಸನೆಯ ಕೂಪದಿಂದ ಮುಕ್ತಿ!

ಮೊದಲ ಬಾರಿ ಗೋವಾದಲ್ಲಿ ಕಾಲಿಟ್ಟ ನನಗೆ ಅದರ ಬಗ್ಗೆ ಹಿಂದಿದ್ದ ಆಲೋಚನೆಗಳೆಲ್ಲಾ ಬದಲಾಯ್ತು. ಗೋವಾ ಎಂದರೆ ಯೂರೋಪ್ ದೇಶಗಳಂತಿರುತ್ತದೆ ಎಂದೆಣಿಸಿದ್ದ ನನಗೆ ವಾಸ್ತವತೆ ಕಂಡು ನಿರಾಸೆಯಾಯ್ತು. ಅಲ್ಲಿನ ಬಸ್ಸುಗಳು ನಮ್ಮ ಬಸ್ಸುಗಳಿಗಿಂತ ಐವತ್ತು ವರ‍್ಶಗಳಶ್ಟು ಹಿಂದಿವೆ. ಆ್ಯಂಬುಲೆನ್ಸುಗಳಂತಿರುವ ಆ ಮಿನಿ ಬಸ್ಸುಗಳೇ ಅಲ್ಲಿನ ಜನರಿಗೆ ವೋಲ್ವೋ, ರಾಜಹಂಸ ಇತ್ಯಾದಿ ಸೂಪರ್ ಬಸ್ಸುಗಳು. ಮತ್ತೇನು ಮಾಡುವುದು? ಬಂದದ್ದಾಗಿದೆ. ಮುಂದೇನಾಗುತ್ತದೋ ನೋಡೋಣ ಎಂದು ಹೊರಟೆ. ವಾಸ್ಕೋದಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ಚಿಕಾಲಿಮ್ ಎಂಬ ಹಳ್ಳಿಗೆ ಬಂದು “ಪಲೋಟಿ ಹೋಂ” ಎಂಬ “ವನವಾಸದ ಅರಮನೆ”ಗೆ ಕಾಲಿಡುವಶ್ಟರಲ್ಲಿ ಸಮಯ ಏಳು ಗಂಟೆ. ಸ್ನಾನ, ನಿತ್ಯಕರ‍್ಮಗಳನ್ನೆಲ್ಲಾ ಮುಗಿಸಿ ಉಪಹಾರಕ್ಕೆಂದು ಊಟದ ಕೋಣೆಗೆ ಬರುವಶ್ಟರಲ್ಲಿ ಏಳೂವರೆಯಾಗಿತ್ತು. ನನ್ನಂತೆಯೇ ಹಲವಾರು ವಿದ್ಯಾರ‍್ತಿಗಳು ಡೈನಿಂಗ್ ಟೇಬಲಿನಲ್ಲಿ ಕುಳಿತು “ಪಾವ್ ಬಾಜಿ” ಸವಿಯುತ್ತಿದ್ದರು. ನನಗೆ ಅಲ್ಲಿನ ಆಹಾರ ಪದ್ದತಿ, ಬಾಶೆ ಮುಂತಾದ ಆಚಾರ ವಿಚಾರಗಳೆಲ್ಲಾ ತೀರಾ ಹೊಸತು. ಹೇಗಪ್ಪಾ ಇವರೊಂದಿಗೆ ಹೊಂದಿಕೊಳ್ಳುವುದು ಎನ್ನುವಶ್ಟರಲ್ಲಿ ಅವರಲ್ಲಿ ಬಹುತೇಕರು ಕನ್ನಡಿಗರೆಂದು ತಿಳಿದ ನನ್ನ ಕುಶಿಗೆ ಪಾರವಿರಲಿಲ್ಲ. ಅವರೊಂದಿಗಿನ ಸುಮದುರ ನೆನಪುಗಳ ಬಗ್ಗೆ ಮತ್ತೊಮ್ಮೆ ಬರೆಯುತ್ತೇನೆ. ಉಪಹಾರ ಮುಗಿಸಿ, ಕೊಂಚ ವಿರಾಮಕ್ಕಾಗಿ ಮಲಗುವ ಕೋಣೆಗೆ ಹೋಗಿ, ಸಾಲಾಗಿದ್ದ ಮಂಚಗಳಲ್ಲಿ ನನ್ನ ಮಂಚದ ಮೇಲೆ ಹೋಗಿ ಅಂಗಾತ ಬಿದ್ದುಕೊಂಡೆ.

ಯಾಕೋ ಅದೆಶ್ಟೇ ಆಯಾಸವಾಗಿದ್ದರೂ ನಿದ್ದೆಯೇ ಹತ್ತಲಿಲ್ಲ. ನಾನು ಯಾರನ್ನೋ ಕಳೆದು ಕೊಂಡೆನೆಂಬ ಹತಾಶೆಯ ಬಾವ ಪದೇ ಪದೇ ಕೆಣಕುತ್ತಿತ್ತು. ಆ ನಿಶ್ಯಬ್ದದ ಕೋಣೆಯಲ್ಲಿ ಒಬ್ಬನೇ ಇದ್ದೆ. ಇರಲಾರದೆ ಕೆಳಗಿಳಿದು ಬಂದೆ. ಅಲ್ಲೊಂದು ಜಗುಲಿಯಿತ್ತು. ಅಲ್ಲಿದ್ದ ಎಲ್ಲಾ ವಿದ್ಯಾರ‍್ತಿಗಳಿಗೆ ಆ ಜಗುಲಿಯೆಂದರೆ ಅಚ್ಚುಮೆಚ್ಚು. ಕಾಡು ಹರಟೆ, ಮೋಜು ಮಸ್ತಿಗೆ ಹೆಸರುವಾಸಿಯಾಗಿದ್ದ ಆ ಜಗುಲಿಯ ಮೇಲೆ ಈಗ ಮೌನ. ಉಳಿದೆಲ್ಲಾ ವಿದ್ಯಾರ‍್ತಿಗಳೆಲ್ಲಾ ಆಟ ಆಡಲು ಹೋಗಿದ್ದರು. ನಾನು ಮಾತ್ರ ಅಲ್ಲಿ ಒಬ್ಬಂಟಿಯಾಗಿ ಕುಳಿತಾಗ ನೆನಪಾದಳು ಅಮ್ಮ. ಅವಳು ನೆನಪಾದೊಡೆ ನನಗರಿವಿಲ್ಲದಂತೆಯೇ ಕಣ್ಣಿನಿಂದ ಹನಿಗಳು ಹರಿದು ಬೂಮಿಯ ಅಪ್ಪಿಕೊಂಡವು. ಆಗ ಕಾಡಿತು ನೋಡಿ ಪಾಪಪ್ರಜ್ನೆ. ನಾನು ಅವಳಿಗೆ ಬಹಳ ನೋವು ಮಾಡಿದ್ದೆ. ಬಹುಶಹ ಅವಳು ಆಗಲೂ ಅಳುತ್ತಿದ್ದಳು. ನನಗೇಕೋ ಈಗಿಂದೀಗಲೇ ಹೊರಟು ಬಿಡಬೇಕೆನ್ನಿಸಿತು. ದುಕ್ಕ ಉಮ್ಮಳಿಸಿ ಬರುತ್ತಿತ್ತು. ಕಳೆದು ಹೋದ ಮಗುವಿನಂತೆ ಜೋರಾಗಿ ಅತ್ತು ಬಿಟ್ಟೆ. ಆಗ ನಾನು “ಹೋಂ ಸಿಕ್” ಆಗಿದ್ದೆ. ಮೊದಲ ಬಾರಿ ಅಮ್ಮನ ನೆನಪು ತೀವ್ರವಾಗಿ ಕಾಡಲಾರಂಬಿಸಿತು. ತಕ್ಶಣವೇ ಪೋನೆತ್ತಿಕೊಂಡು ಅಮ್ಮನಿಗೆ ಕರೆ ಮಾಡಿದಾಗ ಆಗಲೂ ಅಳುತ್ತಿದ್ದಳು. ಅದೇ ಮೊದಲ ಬಾರಿಗೆ ಅವಳನ್ನು ಸಂತೈಸುತ್ತಾ ಹ್ರುದಯ ತುಂಬಿ ಮಾತನಾಡಿದ್ದೆ. ಇನ್ನೆಂದೂ ಅವಳನ್ನು ಹಗುರವಾಗಿ ಪರಿಗಣಿಸುವುದಿಲ್ಲವೆಂದು ಪ್ರಮಾಣ ಮಾಡಿ ಇಂದಿಗೆ ಏಳು ವರ‍್ಶಗಳು. ಗೋವಾ ಬಿಟ್ಟು ಬಂದು ಮೂರು ವರ‍್ಶಗಳಾಯಿತು. ನನ್ನಮ್ಮ ಜೊತೆಯಲ್ಲಿಯೇ ಇದ್ದಾಳೆ ಅದೇ ಪ್ರೀತಿ ವಾತ್ಸಲ್ಯದೊಂದಿಗೆ, ಅನವರತ ಮಮತೆಯೊಂದಿಗೆ. ಹೀಗೆ ಮೂಡಿತ್ತು ಜಗುಲಿಯ ಮೇಲೆ ಅಮ್ಮನ ನೆನಪು.

(ಚಿತ್ರ ಸೆಲೆ: pixabay)

ನಿಮಗೆ ಹಿಡಿಸಬಹುದಾದ ಬರಹಗಳು

Enable Notifications OK No thanks