ಕನ್ನಡ ನಾಡಿನ ಹಿರಿಮೆಯ ಹಾಡುವೆ

– ಶಾಂತ್ ಸಂಪಿಗೆ.

ಕನ್ನಡ ನಾಡಿನ ಹಿರಿಮೆಯನು
ಕವಿತೆಯಲಿ ನಾ ಹಾಡುವೆನು
ವೀರಬೂಮಿಯ ನಾಡಿನಲಿ
ಜನಿಸಿದ ಪುಣ್ಯಕೆ ನಮಿಸುವೆನು ||

ವಿಶ್ವದಿ ಶ್ರೀಮಂತ ಸಾಮ್ರಾಜ್ಯ ಕಟ್ಟಿದ
ಹೆಮ್ಮೆಯು ಇರಲಿ ನಮಗೆಲ್ಲ… ಬಳ್ಳಾರಿ
ಜ್ನಾನದ ಸಂಗಮ ಮಾಹಿತಿ ಯುಗದಲಿ
ಸಾರತಿ ನಾವು ಜಗಕೆಲ್ಲ… ಬೆಂಗಳೂರು

ಸ್ವಾತಂತ್ರ್ಯ ಪೂರ‍್ವದಿ ಪ್ರಗತಿಯ ಸಾದಿಸಿ
ಇತಿಹಾಸದಿ ಮೆರೆವ ವರನಾಡು… ಮೈಸೂರು
ಗಂದದ ಕಾಡಿನ ಹುಲಿಯ ತಾಣದ
ಸೊಬಗನು ಸೂಸುವ ಸಿರಿನಾಡು… ಚಾಮರಾಜನಗರ

ದೇಶದ ಗಡಿಯಲಿ ಶೌರ‍್ಯದಿ ಕಾಯುವ
ವೀರ ಸೈನಿಕರ ತವರೂರು… ಕೊಡಗು
ಕಲ್ಪವ್ರುಕ್ಶದ ಮಣ್ಣಿನಲಿ ಕಾಮದೇನು ರೂಪದಲಿ
ಶರಣರು ನೆಲೆಸಿದ ನಮ್ಮೂರು… ತುಮಕೂರು

ಕಡಲ ತೀರದಲಿ ದರ‍್ಮ ಕ್ಶೇತ್ರದಲಿ
ಮೆರೆದಿದೆ ಯಕ್ಶಗಾನವು ವೈಬವದಿ… ದಕ್ಶಿಣ ಕನ್ನಡ
ಶಿಲ್ಪಕಲೆಗಳು ಜೈನ ಕವಿಗಳು ನೆಲೆಸಿದ
ತಾಣವು ಮಿನುಗಿದೆ ಸೌಂದರ‍್ಯದಿ… ಹಾಸನ

ಸ್ವತಂತ್ರ್ಯ ದೇಶದ ಕನಸನು ಕಂಡ
ವೀರಮಾತೆಯ ತಾಯ್ನಾಡು… ಬೆಳಗಾವಿ
ಕಲ್ಯಾಣ ಚಾಲುಕ್ಯರ ವಿಜಯದ ನಾಡು
ಪಂಚನದಿಗಳ ಹೊನ್ನಾಡು… ವಿಜಯಪುರ

ಮದುವೆ ಜವಳಿಗೆ ಹೆಸರಾಗಿ, ದಣಿದವರಿಗೆ ಕೆರೆ ಉಸಿರಾಗಿ
ಹರಿಹರ ದೇವನ ನೆಲೆಬೀಡು… ದಾವಣಗೆರೆ
ಕರುನಾಡಿಗೆ ಬೆಳಕಾಗಿ, ಶಕ್ತಿಯ ನೀಡುವ ನೆಲೆಯಾಗಿ
ಈ ಮಣ್ಣು ಚಿನ್ನದ ಗಣಿನಾಡು… ರಾಯಚೂರು

ಕಾವೇರಿಯಿಂದ ನರ‍್ಮದೆಯವರೆಗೆ ಕನ್ನಡ ಕಹಳೆಯ
ಮೊಳಗಿಸಿದ ಚಾಲುಕ್ಯರ ಸಿರಿನಾಡು… ಬಾಗಲಕೋಟೆ
ಕುಮಾರರಾಮನ ವೀರಬೂಮಿಯು, ಜೈನಕಾಶಿಯು
ಹೊನ್ನನು ಬೆಳೆವ ಬತ್ತದ ನಾಡು… ಕೊಪ್ಪಳ

ಅವಳಿ ನಗರದ ವ್ಯಾಪಾರ, ಶಿಕ್ಶಣಕೆ ಕಾಶಿ ಇದು
ಬಾವುಟ ನೇಯುವ ಊರು ಇದು… ದಾರವಾಡ
ಕೈಮಗ್ಗದ ಸೀರೆಗಳು, ಹಾನಗಲ್ಲರ ರಾಗಗಳು
ಸಂಗೀತ ಸಾಮ್ರಾಜ್ನಿಗಳ ಬೀಡು ಇದು… ಹಾವೇರಿ

ಅಂದರ ಬಾಳಿಗೆ ಬೆಳಕಾಗಿ, ಹಸಿದ ಒಡಲಿಗೆ ಮಡಿಲಾಗಿ
ಕರುಣೆಯು ತುಂಬಿದ ಕರುನಾಡು… ಗದಗ
ಪ್ರಜಾಪ್ರಬುತ್ವದ ಕಲ್ಪನೆಯ ಅನುಬವ ಮಂಟಪವು
ಬಕ್ತಿಸುದೆಯ ನೀಡಿದ ವಚನಾಮ್ರುತ ನಾಡು… ಬೀದರ್

ಜಲಪಾತಗಳ ತಾಣವಿದು, ಆತ್ಮಲಿಂಗದ ತೀರವಿದು
ಪಶ್ಚಿಮ ಗಟ್ಟಗಳ ಹಸಿರಿನ ನಾಡು… ಉತ್ತರಕನ್ನಡ
ಮಲೆನಾಡಿನ ಸೌಂದರ‍್ಯ, ಜೋಗದ ಸಿರಿಯ ಮಾದುರ‍್ಯ
ಸಿಂಗಾರಗೊಂಡ ಬೂತಾಯಿಯ ಸುಂದರ ಗೂಡು… ಶಿವಮೊಗ್ಗ

ವೀರನಾಯಕನ ಜನ್ಮಬೂಮಿಯು, ಕಲ್ಲಿನ ಕೋಟೆಯು
ವೀರ ವನಿತೆಯು ಶೌರ‍್ಯದಿ ಮೆರೆದ ನಮ್ಮೂರು… ಚಿತ್ರದುರ‍್ಗ
ಕಾವೇರಿ ಮಡಿಲಲಿ, ಸಕ್ಕರೆ ನಾಡಿನ ಅಕ್ಕರೆ ಮಾತಲಿ
ದನುಶ್ಕೋಟಿ ವೈಬವದೀ ಮೆರೆವ ಬ್ರುಂದಾವನವು ನಮ್ಮೂರು… ಮಂಡ್ಯ

ರೇಶ್ಮೆಯ ನಾಡಿದು, ಗೊಂಬೆಯ ಬೀಡಿದು
ಮಾವಿನ ತೋಟದ ತವರೂರು… ರಾಮನಗರ
ಕನ್ನಡ ನಾಡನು ಕಟ್ಟಿದ ಶಿಲ್ಪಿಯು ಜನಿಸಿದ
ನಂದಿಬೆಟ್ಟದ ಸಾಲು ಇದು… ಚಿಕ್ಕಬಳ್ಳಾಪುರ

ಆತ್ಮಲಿಂಗವು, ಅಶ್ಟನಂದಿಯು ನೆಲೆಸಿದ
ಪುಣ್ಯಕ್ಶೇತ್ರದ ತೀರ‍್ತ ಇದು… ಬೆಂಗಳೂರು ಗ್ರಾಮಾಂತರ
ಸೂಪಿ ದರ‍್ಗವು, ಬ್ರುಹತ್ ಮಸೀದಿಯು ಮೆರೆವ
ಬಹುಮನಿ ಸಾಮ್ರಾಜ್ಯದ ನೆಲೆನಾಡು… ಕಲಬುರ‍್ಗಿ

ಅಶ್ಟಮಟಗಳು, ಶ್ರೀಕ್ರಿಶ್ಣನ ತಾಣವು
ನಳಪಾಕಕೆ ವಿಶ್ವ ಪ್ರಸಿದ್ದಿಯ ಊರು… ಉಡುಪಿ
ದತ್ತಪೀಟವು, ಹಚ್ಚ ಹಸುರಿನ ಬೆಟ್ಟದ ಸಾಲಲಿ
ಕಾಪಿ ಬೆಳೆವ ಸುಂದರ ಬೀಡು… ಚಿಕ್ಕಮಗಳೂರು

ಶತಶ್ರುಂಗ ಪರ‍್ವತವು, ಅವನಿ ಕ್ಶೇತ್ರವು
ಇತಿಹಾಸದಿ ಮೆರೆದ ಚಿನ್ನದ ನಾಡು… ಕೋಲಾರ
ಯಾದವರ ರಾಜದಾನಿಯು, ಸಣ್ಣಕೆರೆಯ ಸೌಂದರ‍್ಯವು
ಮೈಲಾಪುರ ಮಲ್ಲಯ್ಯನ ಪುಣ್ಯ ಬೂಮಿಯಿದು… ಯಾದಗಿರಿ

(ಚಿತ್ರ ಸೆಲೆ: fropper.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: