ಬಾಯಲ್ಲಿ ನೀರೂರಿಸುವ ಪಾನಿಪೂರಿ

– ಸವಿತಾ.

ಏನೇನು ಬೇಕು?

ಪೂರಿ, ಪಾನಿ, ಆಲೂಗೆಡ್ಡೆ ಮಿಶ್ರಣ, ಹಸಿರು ಚಟ್ನಿ, ಹುಳಿಸಿಹಿ ಚಟ್ನಿ, ಅಲಂಕರಿಸಲು ಸಣ್ಣದಾಗಿ ಹೆಚ್ಚಿದ ಈರುಳ್ಳಿ ಹಾಗೂ ಅರ‍್ದ ಬಟ್ಟಲು ಕತ್ತರಿಸಿದ ಕೊತ್ತಂಬರಿ ಸೊಪ್ಪು.

ಪೂರಿ ಮಾಡುವ ಬಗೆ

ಒಂದು ಬಟ್ಟಲು ಚಿರೋಟಿ ರವೆ, 3 ಚಮಚ ಗೋದಿಹಿಟ್ಟು ಇಲ್ಲವೇ ಮೈದಾಹಿಟ್ಟು, ಒಂದು ಸಣ್ಣ ಚಮಚ ಕಾಯಿಸಿದ ಎಣ್ಣೆ ಹಾಗೂ ಚೂರು ನೀರು ಸೇರಿಸಿ, ಚಪಾತಿ ಹಿಟ್ಟಿಗಿಂತ ಗಟ್ಟಿಯಾಗಿ ಬರುವಂತೆ ನಾದಿ ಒಂದು ಬಟ್ಟೆ ಮುಚ್ಚಿ 2 ಗಂಟೆ ಇಡಿ. ಬಳಿಕ ಲಟ್ಟಿಸಿ ಚಿಕ್ಕ ಚಿಕ್ಕ ಪೂರಿ ಮಾಡಿ ಕಾದ ಎಣ್ಣೆಯಲ್ಲಿ ಕರಿದು ಇಟ್ಟುಕೊಳ್ಳಿ.

ಪಾನಿ ಮಾಡುವ ಬಗೆ

ಒಂದು ಬಟ್ಟಲು ಕತ್ತರಿಸಿದ ಕೊತ್ತಂಬರಿ ಸೊಪ್ಪು
ಒಂದು ಬಟ್ಟಲು ಕತ್ತರಿಸಿದ ಪುದೀನಾ ಸೊಪ್ಪು
2 ಚಮಚ ಜೀರಿಗೆ
2 ಚಮಚ ಕೊತ್ತಂಬರಿ ಪುಡಿ
2 ಚಮಚ ಚಾಟ್ ಮಸಾಲ ಪುಡಿ
3 ಚಮಚ ಬೆಲ್ಲ
ಅರ‍್ದ ಬಟ್ಟಲು ಹುಣಸೆಹಣ್ಣಿನ ರಸ
1 ಚಮಚ ಉಪ್ಪು ಅತವಾ ಕಾಲಾ ನಮಕ್

ಮೇಲೆ ಹೇಳಿದ ಎಲ್ಲಾ ಪದಾರ‍್ತಗಳನ್ನು ಸೇರಿಸಿ ಮಿಕ್ಸರ್ ನಲ್ಲಿ ನುಣ್ಣಗೆ ರುಬ್ಬಿ ಎರಡು ಲೋಟ ನೀರು ಹಾಕಿ ಸೋಸಿ ತಣ್ಣಗಾಗಲು ಪ್ರಿಡ್ಜ್ ನಲ್ಲಿ ಇಡಬೇಕು.

ಆಲೂಗಡ್ಡೆ ಮಿಶ್ರಣ

2 ಆಲೂಗಡ್ಡೆ ಹಾಗೂ ಅರ‍್ದ ಬಟ್ಟಲು ಕಡಲೆಕಾಳನ್ನು ಕುಕ್ಕರ್‍ನಲ್ಲಿ 3 ಶಿಳ್ಳೆ ಕೂಗಿಸಿ ತಣ್ಣಗಾಗಲು ಬಿಡಿ. ಬಳಿಕ ಆಲೂಗಡ್ಡೆ ಸಿಪ್ಪೆ ತೆಗೆದು ಪುಡಿಮಾಡಿ ಬೆಂದ ಕಡಲೆಕಾಳಿನ ಜೊತೆ ಬೆರೆಸಿ ಮಿಶ್ರಣ ಮಾಡಿ ಇಡಿ.

ಹಸಿರು ಚಟ್ನಿ

ಒಂದು ಬಟ್ಟಲು ಕತ್ತರಿಸಿದ ಕೊತ್ತಂಬರಿ ಸೊಪ್ಪು
ಒಂದು ಬಟ್ಟಲು ಕತ್ತರಿಸಿದ ಪುದೀನಾ ಸೊಪ್ಪು
2 ಹಸಿ ಮೆಣಸಿನಕಾಯಿ
1 ಚಮಚ ಜೀರಿಗೆ
1/2 ಚಮಚ ಉಪ್ಪು
1/2 ನಿಂಬೆ ಹಣ್ಣಿನ ರಸ
ಹಸಿಶುಂಟಿ ಸ್ವಲ್ಪ

ಮೇಲೆ ತಿಳಿಸಿದ ಎಲ್ಲ ಪದಾರ‍್ತಗಳನ್ನು ಸೇರಿಸಿ ಮಿಕ್ಸರ್ ನಲ್ಲಿ ನುಣ್ಣಗೆ ರುಬ್ಬಿದರೆ ಹಸಿರು ಚಟ್ನಿ ಸಿದ್ದ.

ಹುಳಿಸಿಹಿ ಚಟ್ನಿ

ಅರ‍್ದ ಬಟ್ಟಲು ಹುಣಸೆಹಣ್ಣಿನ ರಸ
6 ಕರ‍್ಜೂರ
1 ಚಮಚ ಬೆಲ್ಲ
1 ಚಮಚ ಜೀರಿಗೆ
1 ಚಮಚ ಕೊತ್ತಂಬರಿ ಪುಡಿ
ಸ್ವಲ್ಪ ಉಪ್ಪು

ಬೀಜ ತೆಗೆದ ಕರ‍್ಜೂರವನ್ನು ಕಲ್ಲಿನಲ್ಲಿ ಕುಟ್ಟಿಕೊಂಡು, ಮೇಲೆ ಹೇಳಿದ ಪದಾರ‍್ತಗಳನ್ನೆಲ್ಲಾ ಸೇರಿಸಿ ಮಿಕ್ಸರ್‍ನಲ್ಲಿ ನುಣ್ಣಗೆ ರುಬ್ಬಿದರೆ ಹುಳಿಸಿಹಿ ಚಟ್ನಿಯೂ ಸಿದ್ದ.

ಒಂದು ತಟ್ಟೆಯಲ್ಲಿ ಒಂದಿಶ್ಟು ಮೊದಲೇ ಮಾಡಿಟ್ಟ ಪೂರಿಯನ್ನು ತೆಗೆದುಕೊಳ್ಳಿ. ಒಂದು ಪೂರಿ ಒಡೆದು ಅದರಲ್ಲಿ ತಯಾರಿಸಿದ ಪಾನಿ, ಆಲೂಗೆಡ್ಡೆಯ ಮಿಶ್ರಣ, ಹಸಿರು ಚಟ್ನಿ ಮತ್ತು ಹುಳಿಸಿಹಿ ಚಟ್ನಿ ಹಾಕಿರಿ. ಹೀಗೆ ಆರೇಳು ಪೂರಿ ತುಂಬಿಟ್ಟು, ಅದರ ಮೇಲೆ ಕತ್ತರಿಸಿಟ್ಟುಕೊಂಡ ಈರುಳ್ಳಿ, ಕೊತ್ತಂಬರಿ ಸೊಪ್ಪು ಉದುರಿಸಿ ಪಾನಿಪೂರಿ ಸವಿಯಿರಿ.

(ಚಿತ್ರ ಸೆಲೆ:  ಸವಿತಾ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: