ಗೂಗಲ್‌ನವರ ಹೊಸ ‘ಪಿಕ್ಸೆಲ್‌ ಬಡ್ಸ್’

– ವಿಜಯಮಹಾಂತೇಶ ಮುಜಗೊಂಡ.

ಚೂಟಿಯೆಣಿಗಳ ಲೋಕದಲ್ಲಿ ಆಪಲ್ ತಾನೇ ಮುಂದೆ ಎಂದು ಮುನ್ನುಗ್ಗುತ್ತಿರುವಾಗ ಅವರಿಗೆ ಬಹಳ ಹತ್ತಿರದಿಂದ ಪೈಪೋಟಿ ನೀಡುತ್ತಿರುವುದು ಗೂಗಲ್. ಆಪಲ್‌ನವರ ಐಪೋನ್‌ಗೆ ಪೋಟಿಯೊಡ್ಡುವ ನಿಟ್ಟಿನಲ್ಲಿ ಗೂಗಲ್‌ನವರು ಪಿಕ್ಸೆಲ್‌ ಚೂಟಿಯುಲಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಈಗ ಹಳೆಯ ಸುದ್ದಿ. ಕಳೆದ ವರುಶ ಆಪಲ್‌ನವರು ಏರ್‌ಪಾಡ್‌ ಎನ್ನುವ ಕಿವಿಯುಲಿಗಳನ್ನು (earphones) ಬಿಡುಗಡೆ ಮಾಡಿದ್ದರು, ಈಗ ಏರ್‌ಪಾಡ್‌ಗಳಿಗೆ ಬಿರುಸಾದ ಸ್ಪರ‍್ದೆಯೊಡ್ಡಲು ಗೂಗಲ್‌ನವರು ಹೊಸ ಮಾಡುಗೆಯೊಂದನ್ನು ತಯಾರಿಸಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಗೂಗಲ್‌ನವರು ಬಿಡುಗಡೆ ಮಾಡುವುದಾಗಿ ಸಾರಿರುವ ಗೂಗಲ್‌ ಪಿಕ್ಸೆಲ್‌ ಬಡ್‌ಗಳ ಹಲವು ಪರಿಚೆಗಳು, ಇವು ಆಪಲ್‌ ಏರ್‌ಪಾಡ್‌ಗಳನ್ನು ಹಿಂದಿಕ್ಕಬಲ್ಲವು ಎಂಬ ಮಾತುಗಳು ಗ್ಯಾಜೆಟ್‌ಗಳ ಲೋಕದಲ್ಲಿ ಹರಿದಾಡುತ್ತಿವೆ.

ಗೂಗಲ್‌ ಪಿಕ್ಸೆಲ್‌ ಬಡ್‌ಗಳ ವಿಶೇಶವೆಂದರೆ ಇವು ದಿಟಹೊತ್ತಿನಲ್ಲಿ(real-time) ನುಡಿಮಾರ‍್ಪು(translation) ಮಾಡಬಲ್ಲವು. ಹೊಸ ಕಿವಿಯುಲಿಗಳ ಈ ಪರಿಚೆಯನ್ನು ಬಳಸಲು ಇವುಗಳನ್ನು ಗೂಗಲ್‌  ಪಿಕ್ಸೆಲ್‌ ಚೂಟಿಯುಲಿಯೊಂದಿಗೆ ಹೊಂದಿಸಿಕೊಂಡಿರಬೇಕು(pair). ಒಂದು ನುಡಿಯಲ್ಲಿ ಆಡಿದ ಮಾತುಗಳನ್ನು ಪಿಕ್ಸೆಲ್‌ ಬಡ್‌ ಮೂಲಕ ಬೇರೊಂದು ನುಡಿಯಲ್ಲಿ ಕೇಳಬಹುದು. ಗೂಗಲ್‌ ಅಸಿಸ್ಟಂಟ್ ಸೇವೆಯೊಂದಿಗೆ ಈ ಕಿವಿಯುಲಿಗಳನ್ನು ಹೊಂದಿಸಲಾಗಿದ್ದು ನಿಮಗೆ ಯಾವ ನುಡಿಯಲ್ಲಿ ಕೇಳಿಸಬೇಕು ಎನ್ನುವುದನ್ನು ಹೇಳಿದರೆ ಸಾಕು, ನಿಮ್ಮ ಎದುರಿಗಿರುವವರ ಮಾತು ನಿಮಗೆ ಬೇಕಾದ ನುಡಿಯಲ್ಲಿ ನುಡಿಮಾರ‍್ಪಾಗಿ ಕೇಳಿಸುತ್ತದೆ.

ಗೂಗಲ್‌ನ ಮುಕ್ಯ ನಡೆಸಾಳು ಸುಂದರ್ ಪಿಚಾಯ್ “ನುಡಿಮಾರ‍್ಪಿನ ಸುತ್ತ ಕಳೆದ ವರುಶ ಹಲವು ಸುದಾರಣೆಗಳನ್ನು ಮಾಡಲಾಗಿದ್ದು, ಹಿಂದಿನ ಹತ್ತು ವರುಶಗಳಲ್ಲಿ ಮಾಡಿದ ಕೆಲಸಗಳನ್ನು ಒಂದೇ ವರುಶದಲ್ಲಿ ಮೀರಿಸಲಾಗಿದೆ” ಎನ್ನುತ್ತಾರೆ. ಇದರಿಂದಾಗಿ ಗೂಗಲ್ ನುಡಿಮಾರ‍್ಪು ಸೇವೆ ಹೆಚ್ಚು ತಪ್ಪಿಲ್ಲದೇ ಕೆಲಸ ಮಾಡುವಂತಾಗಿದೆ.

ಪಿಕ್ಸೆಲ್ ಬಡ್‌ಗಳು ಮೂರು ಬಣ್ಣಗಳಲ್ಲಿ ಬರಲಿದ್ದು ಬಿಳಿ, ಬೂದು ಮತ್ತು ಕಪ್ಪು ಬಣ್ಣದ ಆಯ್ಕೆಗಳಿವೆ. ತಂತಿಯಿಲ್ಲದೇ ಇವುಗಳನ್ನು ಪಿಕ್ಸೆಲ್‌ ಮೊಬೈಲ್‌ನೊಂದಿಗೆ ಹೊಂದಿಸಬಹುದಾದರೂ ಇವುಗಳನ್ನು ತಂತಿಯಿರದ(wireless) ಕಿವಿಯುಲಿಗಳು ಎಂದು ಗುರುತಿಸಲಾಗದು. ಕಿವಿಯಲ್ಲಿ ತೂರಿಸಿಕೊಳ್ಳಬಹುದಾದ ಎರಡು ಕಿವಿಯುಲಿಗಳನ್ನು ದಾರವೊಂದರಿಂದ ಜೋಡಿಸಲಾಗಿದೆ. ಕಿವಿಯಲ್ಲಿ ತೂರಬಹುದಾದ ತುದಿಗೆ ಜೋಡಿಸಲಾದ ದಾರವನ್ನು ಬಳಸುಗರ ಕಿವಿಯ ಅಳತೆಗೆ ತಕ್ಕಂತೆ ಹೊಂದಿಸಬಹುದು. ಪಿಕ್ಸೆಲ್‌ ಬಡ್‌ಗಳನ್ನು ಸುರಕ್ಶಿತವಾಗಿ ಇಡುವ ಚಿಕ್ಕ ಪೆಟ್ಟಿಗೆಯನ್ನು ಚಾರ‍್ಜರ್ ಆಗಿ ಕೂಡ ಬಳಸಬಹುದು. ಒಮ್ಮೆ ಮಿಂಕಟ್ಟನ್ನು(battery) ತುಂಬಿಸಿದರೆ ಸುಮಾರು 4-5 ಗಂಟೆಗಳಶ್ಟು ಹೊತ್ತು ಬಳಸಬಹುದು. ಕಿವಿಯುಲಿಗಳನ್ನಿಡುವ ಪೆಟ್ಟಿಗೆಯನ್ನು ಒಮ್ಮೆ ಚಾರ‍್ಜ್ ಮಾಡಿದರೆ ಅದರಿಂದ ಕಿವಿಯುಲಿಗಳ ಮಿಂಕಟ್ಟನ್ನು 5 ಸಲ ಮರುತುಂಬಿಸಬಹುದಾಗಿದೆ.

ಬಲಬದಿಯ ಕಿವಿಯುಲಿಗೆ ಹೊಂದಿಕೊಂಡ ಮುಟ್ಟುಗುಂಡಿಯನ್ನು(touch button) ಬಳಸಿ ನಿಮ್ಮ ಹಾಡುಗಳ ಪಟ್ಟಿಯಲ್ಲಿರುವ ಮುಂದಿನ ಇಲ್ಲವೇ ಹಿಂದಿನ ಹಾಡಿಗೆ ಬದಲಿಸುವುದು, ದನಿಯಳತೆಯನ್ನು(volume) ಏರಿಸುವುದು ಮತ್ತು ಇಳಿಸುವದು ಮಾತ್ರವಲ್ಲದೇ, ಗೂಗಲ್ ಅಸಿಸ್ಟಂಟ್ ಅನ್ನು ಕೂಡ ಬಳಸಬಹುದು. ಪಿಕ್ಸೆಲ್ ಬಡ್‌ಗಳು ಗೂಗಲ್ ಅಸಿಸ್ಟಂಟ್ ಪರಿಚೆಯನ್ನು ಬಳಸುವುದರಿಂದ ನಿಮ್ಮ ಮೊಬೈಲ್‌ ತೆರೆಯನ್ನು ನೋಡದೆಯೇ ಮೆಸೇಜ್ ಕಳಿಸುವುದು, ಓದುವುದು ಮತ್ತು ದಿಕ್ಕುತೋರುವ ಮಾಹಿತಿ ಪಡೆಯುವ ಕೆಲಸ ಮಾಡಬಹುದು. ಹೊಸ ಮುನ್ಸುಳಿವುಗಳನ್ನೂ(notifications) ನೇರವಾಗಿ ಕೇಳಬಹುದು.

ಗೂಗಲ್ ಪಿಕ್ಸೆಲ್ ಬಡ್‌ಗಳು ಇದೇ ನವೆಂಬರ್ ತಿಂಗಳಿನಲ್ಲಿ ಯು.ಎಸ್‌. ಮತ್ತು ಕೆನಡಾದ ಮಾರುಕಟ್ಟೆಗೆ ಲಗ್ಗೆಯಿಡಲಿವೆ ಎಂದು ಗೂಗಲ್ ಹೇಳಿಕೊಂಡಿದೆ. 159 ಅಮೆರಿಕನ್ ಡಾಲರ್‌ ಬೆಲೆಗೆ ಸಿಗಲಿದ್ದು ಈಗಾಗಲೇ ಮುಂಗಡ ಬುಕಿಂಗ್‌ ಶುರುವಾಗಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: weforum.org, theverge.com, blog.google)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: