ಬುದ್ದಿವಂತ ಮಂಗಗಳು ಮೂರಲ್ಲ ನಾಲ್ಕು!

– ಕೆ.ವಿ.ಶಶಿದರ.

ಬೌದ್ದ ದರ‍್ಮದ ಮೂಲ ತತ್ವಗಳನ್ನು ಪ್ರತಿನಿದಿಸುವ ಮೂರು ಬುದ್ದಿವಂತ ಮಂಗಗಳ ಬಗ್ಗೆ ತಿಳಿಯದವರಿಲ್ಲ. ‘ಕೆಟ್ಟದ್ದನ್ನು ನೋಡಬೇಡ’ ‘ಕೆಟ್ಟದ್ದನ್ನು ಕೇಳಬೇಡ’ ‘ಕೆಟ್ಟದ್ದನ್ನು ಆಡಬೇಡ’ ಇವುಗಳನ್ನು ಆ ಮೂರು ಮಂಗಗಳು ಪ್ರತಿನಿದಿಸುತ್ತವೆ. ಮಿ-ಜುರು – ಕೆಟ್ಟದ್ದನ್ನು ನೋಡದಿರುವಂತೆ ಕಣ್ಣು ಮುಚ್ಚಿಕೊಂಡಿರುವ ಮಂಗ, ಸಿಕಾ-ಜುರು – ಕೆಟ್ಟದ್ದನ್ನು ಕೇಳದಿರುವಂತೆ ಕಿವಿಯನ್ನು ಮುಚ್ಚಿಕೊಂಡಿರುವ ಮಂಗ ಹಾಗೂ ಕೆಟ್ಟದ್ದನ್ನು ಆಡದಂತೆ ಬಾಯಿ ಮುಚ್ಚಿಕೊಂಡಿರುವ ಮಂಗ ಇವಾ-ಜುರು.

ಈ ಮೂರೂ ಮಂಗಗಳನ್ನು ಬಹಳಶ್ಟು ಕಡೆ – ಶಿಲ್ಪಗಳಲ್ಲಾಗಲಿ, ಸಣ್ಣ ಸಣ್ಣ ಪ್ರತಿಮೆಯ ಅತವಾ ಚಿತ್ರಗಳ ಅತವಾ ಮಕ್ಕಳಾಟಿಕೆಯ ರೂಪದಲ್ಲಾಗಲಿ, ನಾನಾ ವಿನ್ಯಾಸಗಳಲ್ಲಾಗಲಿ, ನಾನಾ ಬಣ್ಣಗಳಲ್ಲಾಗಲಿ ಕಾಣಬಹುದು. ಈ ಮೂರು ಮಂಗಗಳ ತತ್ವವನ್ನೇ ಗಾಂದೀಜಿ ತಮ್ಮ ಜೀವನದ ಉದ್ದಕ್ಕೂ ಪಾಲಿಸಿಕೊಂಡು ಬಂದ ಕಾರಣ ಇವು ಗಾಂದೀಜಿಯ ಮಂಗಗಳು ಎಂದೇ ಬಾರತದಲ್ಲಿ ಪ್ರಕ್ಯಾತವಾಗಿವೆ. ಈ ಮಂಗಗಳಿಗೆ ವಿಶ್ವಾದ್ಯಂತ ಸಿಕ್ಕಿರುವ ಮನ್ನಣೆ ಅದ್ವಿತೀಯ.

ಈ ಮೂರು ಮಂಗಗಳಶ್ಟು ಪ್ರಚಾರವಿಲ್ಲದೆ ಹಿಂದೆ ಸರಿದಿರುವ ಇವರ ಜೊತೆಗಾರ ಮಂಗ ಮತ್ತೊಂದು ಇದೆ ಎಂದರೆ ಬೆರಗಾಗುತ್ತದೆ ಅಲ್ಲವೆ?

ಹೌದು ಇದೆ. ಅದೇ ‘ಸೆಡ್-ಜುರು’. ಇದು ಬಹಳ ಅಪರೂಪದ ಮಂಗ. ಇದು ಪ್ರತಿಪಾದಿಸುವುದು ಅತಿ ಉತ್ಕ್ರುಶ್ಟ ತತ್ವವನ್ನು. ಸೆಡ್-ಜುರು ‘ಕೆಟ್ಟದ್ದನ್ನು ಮಾಡಬೇಡ’ ಎಂಬ ತತ್ವಕ್ಕೆ ಅನುಗುಣವಾಗಿ ತನ್ನ ಎರಡೂ ತೋಳುಗಳನ್ನು ಮುಂದಕ್ಕೆ ಚಾಚಿ ಹೊಟ್ಟೆಯ ಹಾಗೂ ಜನನೇಂದ್ರಿಯ ಪ್ರದೇಶವನ್ನು ಮರೆಮಾಚಿರುತ್ತದೆ. ಪ್ರಸ್ತುತ ವಿಶ್ವದಲ್ಲಿ ನಡೆಯುತ್ತಿರುವ ದುಶ್ಟ ವಿದ್ಯಮಾನಗಳಿಗೆ ‘ಸೆಡ್-ಜುರು’ ಪ್ರತಿಪಾದಿಸುತ್ತಿರುವ ತತ್ವವನ್ನು ಪಾಲಿಸದಿರುವುದೇ ಕಾರಣ ಎನಿಸುವುದಿಲ್ಲವೆ?

ನಾಲ್ಕನೇ ಮಂಗ ಪ್ರತಿಪಾದಿಸುವ ತತ್ವ ಅತ್ಯಂತ ಮಹತ್ವದ್ದಾಗಿದ್ದರೂ ಇದರ ಉಲ್ಲೇಕ ಮಾತ್ರ ಬಹಳ ವಿರಳ. ಇದಕ್ಕೆ ಕಾರಣ ಜಪಾನೀಯರಿಗೆ ನಾಲ್ಕು ದುರದ್ರುಶ್ಟಕರ ಸಂಕ್ಯೆಯಂತೆ! ಹೌದು, ಈ ಮಂಗಗಳ ಗುಂಪಿನಿಂದ ನಾಲ್ಕನೇ ಮಂಗ ಹೊರಹೋಗಲು ಕಾರಣ ಜಪಾನೀಯರ ನಂಬಿಕೆ. ‘ನಾಲ್ಕು’ ಎಂಬ ಅಂಕೆ ಕೆಟ್ಟದ್ದು ಎಂಬ ನಂಬಿಕೆ ಜಪಾನೀಯರಲ್ಲಿ ಇದ್ದದ್ದುರಿಂದ ನಾಲ್ಕರ ಬದಲಾಗಿ ಮೂರು ಮಂಗಗಳನ್ನು ಉಳಿಸಿಕೊಂಡು ತಮ್ಮ ತತ್ವಗಳನ್ನು ಹರಡುವ ಕೆಲಸವನ್ನು ಮುಂದುವೆರೆಸಿದರು. ಕಾಲಸರಿದಂತೆ ನಾಲ್ಕನೇ ಮಂಗದ ಇರವು ಮರೆಯಾಗಿ ಹೋಯಿತು.

ಈಗ ಮೂರು ಮಂಗಗಳು ವಿಶ್ವಾದ್ಯಂತ ಅನೇಕ ರೂಪ ಮತ್ತು ವಿನ್ಯಾಸಗಳಲ್ಲಿ ಹೊರಬಂದು ಜನರನ್ನು ರಂಜಿಸುತ್ತಾ ತಮ್ಮ ತತ್ವವನ್ನು ಪ್ರತಿಪಾದಿಸುತ್ತಿವೆ. ವಿಶ್ವಾದ್ಯಂತ ಅನೇಕ ಕಲಾವಿದರುಗಳಿಗೆ ಮತ್ತು ಕುಶಲಕರ‍್ಮಿಗಳಿಗೆ ಇವು ನಿಜವಾದ ಸ್ಪೂರ‍್ತಿಯ ಸೆಲೆ.

ಮೂರು (ಇಲ್ಲವೇ ನಾಲ್ಕು) ಮಂಗಗಳ ತತ್ವ ಹುಟ್ಟಿದ್ದಾದರೂ ಎಲ್ಲಿ?

ಇದಕ್ಕೆ ಉತ್ತರ ಜಪಾನ್ ಎಂದು. ಉತ್ತರ ಹುಡುಕುತ್ತಾ ಹೋದಲ್ಲಿ ಎಡತಾಕುವುದು ರಶ್ಯಾದಲ್ಲಿ ದೊರೆತ ವಿಗ್ರಹದ ಕಡೆಗೆ. 2000ದ ದಶಕದಲ್ಲಿ ರಶ್ಯಾದ ವೊರೊನೆಜ್ ಪ್ರಾಂತ್ಯದ ಪಾವ್ಲೋವ್‍ಸ್ಕ್ ಜಿಲ್ಲೆಯ ಪೊಕ್ರೊವ್ಕ ಹಳ್ಳಿಯಲ್ಲಿ ರೈತನೊಬ್ಬ ಉಳುವಾಗ ಅಸಾಮಾನ್ಯ ವಿಗ್ರಹವೊಂದು ಬೂಮಿಯಲ್ಲಿ ಸಿಕ್ಕಿತು. ಜೇಡಿಮಣ್ಣು ಮತ್ತು ಸುಣ್ಣದ ಕಲ್ಲಿನ ಮಿಶ್ರಣದಿಂದ ಮಾಡಿದ್ದ ಆ ಪುಟ್ಟ ಬೊಂಬೆ ಮಾನವರೂಪಿ. ಮೊಟ್ಟೆಯಾಕಾರದ ತಲೆ, ಬ್ರುಹತ್ ಬಾದಾಮಿ ಬೀಜದಂತ ಕಣ್ಣು, ತಲೆ ಮತ್ತು ಮುಕಕ್ಕೆ ಒತ್ತಿಹಿಡಿದಂತ ಕೈಗಳು ಮತ್ತು ಮಡಿಚಿಕೊಂಡಂತೆ ಇದ್ದ ಕಾಲುಗಳು ಅದರ ವೈಶಿಶ್ಟ್ಯ.

ಈ ಪುಟ್ಟ ವಿಗ್ರಹದೊಂದಿಗೆ ದೋಣಿಯಾಕಾರದ ಕೊಡಲಿ ಸಹ ಸಿಕ್ಕಿದೆ. ಇದರ ಕಾಲ ಕ್ರಿಸ್ತ ಪೂರ‍್ವ 3000 ರಿಂದ 2500 ವರ‍್ಶಗಳಶ್ಟು ಹಿಂದಿನದು ಎನ್ನುತ್ತಾರೆ ಪುರಾತತ್ವಜ್ನರು. ಆ ಪುಟ್ಟ ವಿಗ್ರಹವನ್ನು ಗಮನವಿಟ್ಟು ನೋಡಿದರೆ, ಕಣ್ಣು ಮುಚ್ಚಿದಂತಿದ್ದು, ಬಲಗೈ ಕಿವಿಯನ್ನು, ಎಡಕೈ ಬಾಯನ್ನು ಮುಚ್ಚಿರುವುದನ್ನು ಗಮನಿಸಬಹುದು. ಬಹುಶಹ ‘ನಾನು ನೋಡುತ್ತಿಲ್ಲ, ಕೇಳುತ್ತಿಲ್ಲ ಮತ್ತು ಹೇಳುತ್ತಿಲ್ಲ’ ಎಂಬ ಜಪಾನಿನ ಮೂರು ಮಂಗಗಳ ಬೌದ್ದ ತತ್ವವನ್ನು ಪ್ರತಿಪಾದಿಸುವಂತಿದೆ.

ಹಾಗಾದರೆ ಈ ವಿಗ್ರಹ ಯಾವ ಯುಗಕ್ಕೆ ಸಂಬಂದಿಸಿದ್ದು? ಕಂಚಿನ ಯುಗವೇ? ಇದು ನಿಜವೇ ಆದಲ್ಲಿ ಮೂರು ಮಂಗಗಳ ಬೌದ್ದ ತತ್ವದ ಹುಟ್ಟಿನ ಬಗ್ಗೆ ಸಂಶಯ ಮೂಡುತ್ತದಲ್ಲವೆ? ಇದು ಬೌದ್ದ ತತ್ವಗಳ ಆದಾರಿತ ಎಂಬ ಬಗ್ಗೆ ಅನುಮಾನ ಉಂಟಾಗುತ್ತದಲ್ಲವೆ? ಈ ಅನುಮಾನಗಳಿಗೆ ಸರಿಯಾದ ಬಗೆಹರಿಕೆ ಇನ್ನೂ ಸಿಕ್ಕಿಲ್ಲ. ಅದೇನೆ ಇರಲಿ ಈಗಾಗಲೇ ತಿಳಿದಿರುವಂತೆ ಈ ಮೂರು ವಿಕ್ಯಾತ ಮಂಗಗಳ ಲೆಕ್ಕವಿರದಶ್ಟು ವಿಗ್ರಹಗಳು ವಿಶ್ವಾದ್ಯಂತ ಪಸರಿಸಿದೆ. ಅತಿ ಪುಟ್ಟ ವಿಗ್ರಹದಿಂದ ಹಿಡಿದು ಬ್ರುಹತ್ ವಿಗ್ರಹಗಳು ಕಾಣ ಸಿಗುತ್ತವೆ.

ಪಿಲಿಪೈನ್ಸ್ ದ್ವೀಪ ಸಮೂಹದ ಮಿಂಡಾರೋ ದ್ವೀಪದಲ್ಲಿ ಬೆನಿಲ್ಡಾ ಎಂಬ ರೆಸಾರ‍್ಟ್ ಪಟ್ಟಣವಿದೆ. ಈ ರೆಸಾರ‍್ಟ್ ಅಂತಹ ಅಸಾಮಾನ್ಯವಾದುದೇನು ಅಲ್ಲ. ಎಲ್ಲೆಡೆಯಂತೆ ಇಲ್ಲೂ ದೊಡ್ಡ ಈಜುಕೊಳ, ಕುಟೀರಗಳು, ರೆಸ್ಟೋರೆಂಟ್‍ಗಳು ಇವೆ. ಇದರಲ್ಲಿರುವ ಉದ್ಯಾನವನದ ಒಳಹೊಕ್ಕರೆ ಮೂರು ಮಂಗಗಳ ಬ್ರುಹತ್ ಶಿಲ್ಪ ಎಲ್ಲರ ಗಮನ ಸೆಳೆಯುತ್ತದೆ. ಇದು ವಿಶ್ವದ ಮೂರು ಮಂಗಗಳ ಅತಿ ದೊಡ್ಡ ಪ್ರತಿಮೆಗಳಲ್ಲಿ ಒಂದು. ವಿಪರ‍್ಯಾಸವೆಂದರೆ ಇಲ್ಲೂ ನಾಲ್ಕನೇ ಮಂಗದ ಸುಳಿವು ಇಲ್ಲದಿರುವುದು.

(ಮಾಹಿತಿ ಸೆಲೆ: vsuete.comen.wikipedia.orgmylifepuzzle.comphrases.org.uk )
(ಚಿತ್ರ ಸೆಲೆ:  vsuete.com, quora)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: