ಬದುಕಿನಲಿ ಸಂಬಂದಗಳ ಮಹತ್ವ

ಮದುಶೇಕರ್. ಸಿ.


ನಮ್ಮ ಸಮಾಜದಲ್ಲಿ ಹಲವಾರು ರೀತಿಯ ಮನಸ್ತಿತಿ ಹೊಂದಿದ ಜನರಿದ್ದಾರೆ. ಅಶ್ಟೇ ಯಾಕೆ, ಬೇರೆ ಬೇರೆ ಮನಸ್ತಿತಿ ಹೊಂದಿದ ನಮ್ಮ ಗೆಳೆಯರೇ ಇದ್ದಾರೆ. ಕೆಲವು ಸಂದರ‍್ಬಗಳಲ್ಲಿ, ‘ನಾನು ದೊಡ್ಡವ, ನಾನು ಮಾಡಿದ್ದೇ ಸರಿ’ ಎಂಬ ವಾದದಿಂದ ಎಶ್ಟೋ ಮನಸ್ತಾಪಗಳು ಉಂಟಾಗುವುದುಂಟು. ಎಶ್ಟೋ ಬಾರಿ ಅದು ಮುಂದುವರಿದು ಸಂಬಂದಗಳು ಮುರಿಯುವುದೂ ಉಂಟು. ಮೂರು ದಿನದ ಈ ಲೋಕ ಯಾತ್ರೆಯಲ್ಲಿ ಈ ಜಗಳಗಳು ಬೇಕಾ? ನಮ್ಮ ಕೈ ಬೆರಳುಗಳು ಸಮವಾಗಿಲ್ಲ, ಆದರೆ ಅವುಗಳನ್ನು ಬಾಗಿಸಿದಾಗ ಸಮವಾಗುತ್ತವೆ. ಹಾಗೆಯೇ ಜೀವನದಲ್ಲಿ ಒಮ್ಮೊಮ್ಮೆ ಬಾಗಿ ನಡೆಯುವುದು ಅತ್ಯಂತ ಮುಕ್ಯವಾಗುತ್ತದೆ.

ಸಾರ‍್ತಕ ಬದುಕಿಗೆ ಬೇಕಾದ ಎರಡು ಪ್ರಮುಕ ಅಂಶಗಳು ‘ಪ್ರಸನ್ನತೆ’ ಹಾಗು ‘ಶಾಂತತೆ’. ಆ ಪ್ರಸನ್ನ ನಗು ಸಮಸ್ಯೆಗಳನ್ನು ಪರಿಹರಿಸಲು, ಶಾಂತತೆ ಸಮಸ್ಯೆಗಳೇ ಬಾರದಂತೆ ತಡೆಯಲು. ಇದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಹಾಗು ಅನುಸರಿಸಿದರೆ ನಿಜವಾಗಿಯೂ ಪ್ರತಿದಿವಸ ಬಾಳಿಗೆ ಹೊಸ ಹರುಶ ತರುವುದರಲ್ಲಿ ಅನುಮಾನವೇ ಇಲ್ಲ. ಕಶ್ಟ ಎನಿಸುವ ಈ ಜೀವನದಲ್ಲಿ, ನಮ್ಮ ನಿಲುವುಗಳು ಸ್ಪಶ್ಟವಿಲ್ಲದೆ ಇದ್ದಲ್ಲಿ, ಬಾಳಿನಲ್ಲಿ ಹಲವಾರು ರೀತಿಯ ನಶ್ಟ ಅನುಬವಿಸಬೇಕಾಗುತ್ತದೆ. ನೋವು-ನಲಿವುಗಳ ಈ ಪಯಣದಲ್ಲಿ ಹೆಗಲಿಗೆ ಜೊತೆಯಾಗುವ ಸಂಬಂದಗಳು ನಮ್ಮ ಬದುಕಿಗೆ ಒಂದು ರೀತಿಯ ಅರ‍್ತ ನೀಡುತ್ತವೆ. ಅವುಗಳಲ್ಲಿ ಮುಕ್ಯವಾದುದು ಸ್ನೇಹ.

ಬೇರೆಯವರಲ್ಲಿ ತಪ್ಪು ಹುಡುಕುವುದು ಬೇಡ

ಸ್ನೇಹಿತರಲ್ಲಿ ಒಳ್ಳೆಯ ಸ್ನೇಹಿತ-ಕೆಟ್ಟ ಸ್ನೇಹಿತ ಎಂದೇನೂ ಇರುವುದಿಲ್ಲ. ಬದಲಾಗಿ ಸ್ನೇಹಿತನಿರುತ್ತಾನೆ/ಳೆ ಅಶ್ಟೇ. ಸ್ನೇಹಿತನೆಂದರೆ, ಕಹಿ ತಿಂದು ಸಿಹಿ ಹಣ್ಣು ಕೊಡುವ ಮಣ್ಣಿನ ಹಾಗೆ, ಕಗ್ಗತ್ತಲ ನುಂಗಿ ಹೊಂಬೆಳಕು ನೀಡುವ ನೇಸರನ ಹಾಗೆ, ಹುಲ್ಲು ತಿಂದು ಹಾಲುಕೊಡುವ ಹಸುವಿನ ಹಾಗೆ, ನೋವ ತಿಂದು ಮಮತೆ ಬಸಿಯುವ ತಾಯಿಯ ಹಾಗೆ, ಕಡು ಕಶ್ಟ ನುಂಗಿ ಜವಾಬ್ದಾರಿ ಹೊರುವ ತಂದೆಯ ಹಾಗೆ. ತ್ಯಾಗ ಮಾಡಿ, ಪ್ರೀತಿ, ದೈರ‍್ಯ ನೀಡುವವನು ಹಾಗು ನಂಬಿಕೆ ಉಳಿಸಿಕೊಳ್ಳುವವನೇ ಸ್ನೇಹಿತ. ಅಂತಹ ಸ್ನೇಹಿತನ ಆಯ್ಕೆ, ಬದುಕೆಂಬ ಪಯಣದಲ್ಲಿ ಬಲು ಮುಕ್ಯ. ಇಲ್ಲಿ ಏನಾದರೂ ಎಡವಿದರೆ ಏಳುವುದು ಕಶ್ಟ, ಎದ್ದರೂ ಬಿದ್ದಾಗ ಆದ ಪೆಟ್ಟಿನಿಂದ ಆಗುವುದು ತುಂಬಲಾರದ ನಶ್ಟ.

ಎಶ್ಟೋ ವರುಶಗಳಿಂದ ಬೆಳೆಸಿಕೊಂಡು ಬಂದ ಅದೆಶ್ಟೋ ಸ್ನೇಹ -ಸಂಬಂದ-ಬಾಂದವ್ಯಗಳು ಕೇವಲ ಕ್ಶಣಗಳಲ್ಲಿ ಕ್ಶಣಿಕವಾಗಿಬಿಡುತ್ತವೆ. ಯಾಕೆ ಹೀಗೆ!? ಒಂದು ದೊಡ್ಡದಾದ ಬಿಳಿಯ ಹಾಳೆಯ ಮದ್ಯೆ ಕಪ್ಪು ಚುಕ್ಕೆಯೊಂದನ್ನು ಚಿತ್ರಿಸಿ,  ನಿಮಗೇನು ಕಾಣಿಸುತ್ತಿದೆ? ಎಂದು ಕೇಳಿದರೆ, ಬಹುತೇಕರಿಂದ ಬರುವ ಉತ್ತರ – “ಕಪ್ಪು ಚುಕ್ಕೆ”! ಎಂದಶ್ಟೇ. ಆದರೆ ಅದರ ಸುತ್ತ ಶುಬ್ರವಾಗಿ ಕಾಣುವ ಬಿಳಿಯ ಬಾಗ ಕಾಣುವುದು ಕೇವಲ ಬೆರಳೆಣಿಕೆ ಜನರಿಗೆ ಮಾತ್ರ. ಇಲ್ಲಿ ಹೇಳ ಹೊರಟಿರುವುದು- ಸಾಗರದಶ್ಟು ಆಳವಾದ ಪ್ರೀತಿ, ಬೆಟ್ಟದಶ್ಟು ಹಿರಿದಾದ ಒಳ್ಳೆಯ ನಡತೆ, ಆಕಾಶದಶ್ಟು ವಿಶಾಲವಾದ ಮನಸ್ಸು – ಹೀಗೆ ಹತ್ತು ಹಲವಾರು ಒಳ್ಳೆಯತನ ಹೊಂದಿರುವ ನಿಮ್ಮ ಆ ಸ್ನೇಹಿತ ಅತವಾ ಯಾರೇ ಆದರೂ, ಅವರಲ್ಲಿ ಹಿಂದೆಂದೂ ಸುಳಿಯದ ಕಪ್ಪುಚುಕ್ಕೆಯಿಂದ, ಮೇಲೆ ತಿಳಿಸಿದ ಅದಶ್ಟೂ ಗುಣಗಳು ಕಿರಿದಾಗಿ, ಅವರನ್ನು ಮನುಶ್ಯ ಸಂಬಂದಗಳಿಗೆ ಅನರ‍್ಹನಾಗಿಸಿಬಿಡುತ್ತದೆ! ಯಾಕೆ!? ಹಾಲಿಗೆ  ಹುಳಿ ಬಿದ್ದು ಹಾಲು ಒಡೆದರೆ, ಹಾಲಿನ ರೂಪದಲ್ಲಿ ಅದು ಕುಡಿಯಲು ಯೋಗ್ಯವಿಲ್ಲದಿರಬಹುದು, ಆದರೆ ಇದರಲ್ಲಿ ಹಾಲಿನ ತಪ್ಪೇನಿದೆ? ಹುಳಿಯ ಪ್ರಬಾವಕ್ಕೆ ಒಳಗಾದ ಹಾಲಲ್ಲಿ ತಪ್ಪು ಹುಡುಕುವ ನಮ್ಮೀ ಬಾಳು ಎಶ್ಟರ ಮಟ್ಟಿಗೆ ಸರಿ?.

“ತಪ್ಪು ಮಾಡೋದು ಸಹಜ, ತಿದ್ದಿ ನಡೆಯೋನು ಮನುಜ”

ಜೀವನದಲ್ಲಿ ಸಹನೆ ಎಂಬುದು ಅತಿ ಮುಕ್ಯ ಆಸ್ತಿ. ಆತುರಗಾರನಿಗೆ ಬುದ್ದಿ ಮಟ್ಟ ಎಂದೆನ್ನುವಂತೆ, ಅಸಹನೆಯಿಂದ ಆತುರದಲ್ಲಿ ಏನೇನೋ ಎಡವಟ್ಟು ಮಾಡಿಕೊಂಡು ನಂತರ ವ್ಯತೆ ಪಡುತ್ತೇವೆ. ಹಿರಿಯರು ಹೇಳುವಂತೆ, ‘ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು’. ಈ ಮಾತು ಎಶ್ಟು ಸತ್ಯವಲ್ಲವೇ? ನಮ್ಮ ಪ್ರತಿಯೊಂದು ಮಾತುಗಳು ಮುತ್ತಿನಶ್ಟೇ ಅಮೂಲ್ಯ ; ಅವುಗಳ ಬಳಕೆಯಲ್ಲಿ ಸದಾ ಎಚ್ಚರಿಕೆಯಿಂದಿರಬೇಕು.ಯಾವುದೇ ನಿರ‍್ದಾರಕ್ಕೆ ಬರುವ ಮೊದಲು, ಸಹನೆಯಿಂದ, ವಿವೇಚನೆಯಿಂದ ಆಲೋಚಿಸಬೇಕು. “ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ನಿದಾನಿಸಿ ಯೋಚಿಸಿದಾಗ ನಿಜವೂ ತಿಳಿವುದು”. ಎಂತಾ ಸಾಲುಗಳು. ಇದನ್ನು ಸಾರುವ ಹಾವು-ಮುಂಗುಸಿ ಕತೆ ಕೇಳಿದಾಗ ಒಂದು ಕ್ಶಣ ಕಣ್ಣು ಒದ್ದೆಯಾಗುವುದಂತೂ ಕಂಡಿತ.

ಈ ಜಗತ್ತಿನಲ್ಲಿ ಯಾರೂ ಪರಿಪೂರ‍್ಣರಲ್ಲ, ಪರಿಪೂರ‍್ಣರಾಗಿಬಿಟ್ಟರೆ  ಅವರು ದೇವರಾಗಿ ಬಿಡುವರು. ಅದಕ್ಕೆ ಹೇಳುವುದು “ತಪ್ಪು ಮಾಡೋದು ಸಹಜ, ತಿದ್ದಿ ನಡೆಯೋನು ಮನುಜ” ಎಂದು. ಒಂದು ಬಾರಿ ಸಂಬಂದಗಳಿಂದ ಕಳಚಿಕೊಳ್ಳುವ, ಒಬ್ಬರನ್ನು ಸರಿಯಿಲ್ಲ ಎಂದು ದೂಶಿಸುವ ಮೊದಲು ಅವರ ಸ್ತಾನದಲ್ಲೊಮ್ಮೆ ನಿಂತು ಯೋಚಿಸಿ! ಯಾರೋ ನಿಮ್ಮ ಆತ್ಮೀಯರು ನಿಮಗೆ ಕಾಯಲು ಹೇಳಿ, ತಡವಾಗಿ ಬಂದರೆ ಅವರನ್ನು ಬೈದು ಸಂಬಂದ ಮುರಿದುಕೊಳ್ಳುವ ಮುನ್ನ ಸಹನೆಯಿಂದ ಅದಕ್ಕೆ ಕಾರಣ ಕೇಳಿ ಅರಿತುಕೊಳ್ಳಿ. ಇಲ್ಲವಾದರೆ ಐದು ನಿಮಿಶ ಕಾಯುವಂತೆ ಮಾಡಿದವರನ್ನು ನೆನೆದು ನೆನೆದು ಅವರಿಲ್ಲದೆ ಜೀವನವೆಲ್ಲ ಒಬ್ಬಂಟಿಯಾಗಿ ಕಾಯಬೇಕಾದೀತು!

( ಚಿತ್ರ ಸೆಲೆ:  saintmichaelshospice.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: