ಹೊರಬಾನಾಡಿಗನಾದ ಮೊದಲ ನಾಯಿ – ‘ಲೈಕಾ’

– ಪ್ರಶಾಂತ. ಆರ್. ಮುಜಗೊಂಡ.

ಬಾನಂಗಳಕ್ಕೆ ಏರಿದ ಮೊದಲ ಮಾನವರ ಬಗ್ಗೆ ನಮಗೆ ಅರಿವಿದೆ, ಆದರೆ ಬಾನಿಗೇರಿದ ಮೊದಲ ಪ್ರಾಣಿಗಳ ಬಗ್ಗೆ ಅಶ್ಟೊಂದು ವಿಶಯಗಳು ತಿಳಿದಿಲ್ಲ. ಅನೇಕ ಪ್ರಾಣಿಗಳು ಸದ್ದಿಲ್ಲದೆ ಬಾಹ್ಯಾಕಾಶ ಲೋಕದ ಕುರಿತ ಅರಕೆಗಾಗಿ ತಮ್ಮ ಜೀವವನ್ನೇ ನೀಡಿವೆ. ಅಮೇರಿಕಾ ಮತ್ತು ರಶ್ಯಾ ದೇಶಗಳು ಬಾನಂಗಳಕ್ಕೆ ಪ್ರಾಣಿಗಳನ್ನು ಕಳುಹಿಸಿ ಜೀವಿಗಳ ಪ್ರಾಣದ ಸುರಕ್ಶತೆ ಮತ್ತು ಜೈವಿಕ ಕ್ರಿಯೆಗಳ ಮೇಲೆ ಆಗುವ ಪ್ರಬಾವವನ್ನು ತಿಳಿಯಲು 1947ರಲ್ಲಿ ಮೊದಲ ಪ್ರಯತ್ನ ಮಾಡಿದರು. ಮೊದಲು ಕೀಟಗಳು, ಮಂಗ ಹೀಗೆ ಹಲವು ಜೀವಿಗಳನ್ನು ಬಾನಂಗಳಕ್ಕೆ ಕಳುಹಿಸಿ ಅರಕೆ ನಡೆಸಲಾಯಿತು.

ಬಾನಾಡಿಗನಾದ ಮೊದಲ ನಾಯಿ

ಈ ನಾಯಿಯ ಮೂಲ ಹೆಸರು ಲಿಟಲ್ ಕರ‍್ಲಿ, ಆದರೆ ವಿಜ್ನಾನಿಗಳು ಅಂತರಾಶ್ಟ್ರೀಯವಾಗಿ ಲೈಕಾ ಎಂಬ ಹೆಸರಿನಿಂದ ಗುರುತಿಸಿದರು. ಸೈಬೀರಿಯಾದ ಎಸ್ಕಿಮೊ ಎಂಬ ಜನಾಂಗಕ್ಕೆ ಸೇರಿದ ಈ ನಾಯಿ ಮಾಸ್ಕೋ ನಗರದ ಬೀದಿಗಳಲ್ಲಿ ದಾರಿತಪ್ಪಿ, ಸೋಂಕು ತಗುಲಿ ಹಸಿವು ಮತ್ತು ಚಳಿಯಿಂದ ಕಟಿಣ ಪರಿಸ್ತಿತಿಗಳನ್ನು ಅನುಬವಿಸಿ ತಿರುಗಾಡುತ್ತಿತ್ತು. ವಿಜ್ನಾನಿಗಳು ಈ ನಾಯಿಯನ್ನು ಒಂದು ಸಣ್ಣ ಬೋನಿನಲ್ಲಿ ಇರಿಸಿ, ಕಾಪಾಡಿ ಬಾಹ್ಯಾಕಾಶ ಪಯಣಕ್ಕಾಗಿ ತರಬೇತಿ ನೀಡಲು ಶುರುಮಾಡಿದರು. ಬಾನಂಗಳಕ್ಕೆ ಹೋದ ನಂತರ ಬರೀ ಪೌಶ್ಟಿಕಾಂಶ ಹೊಂದಿರುವ ದ್ರಾವಣವನ್ನು ಆಹಾರವಾಗಿ ತೆಗೆದುಕೊಳ್ಳಬೇಕಾದ ಕಾರಣದಿಂದ, ತರಬೇತಿಯ ಹಂತದಲ್ಲಿ ಈ ನಾಯಿಗೆ ದ್ರಾವಣ ತೆಗೆದುಕೊಳ್ಳುವದನ್ನೇ ರೂಡಿ ಮಾಡಿಸಿದರು.

ಮರಳಿ ನೆಲಕ್ಕೆ ಬಾರದ ಲೈಕಾ

ಸೋವಿಯತ್ ಒಕ್ಕೂಟವು 3 ನವೆಂಬರ್ 1957ರಂದು ಬಾನಿಗೆ ಹಾರಿಸಿದ ಸ್ಪಟ್ನಿಕ್2 ಎಂಬ ಚಿಕ್ಕ ಬಾನಬಂಡಿ ಈ ನಾಯಿಯನ್ನು ಹೊರಬಾನಾಡಿಗನಾಗಿ ತೆಗೆದುಕೊಂಡು ಹೋಯಿತು. ಆದರೆ ಲೈಕಾ ಬಾನಂಗಳಕ್ಕೇರಿದ ಬಳಿಕ ಕೆಲವೇ ಗಂಟೆಗಳ ಕಾಲ ಮಾತ್ರ ಬದುಕುಳಿಯಿತು. ಐದರಿಂದ ಏಳು ಗಂಟೆಗಳವರೆಗೆ ಬಾನಬಂಡಿಯಲ್ಲಿದ್ದ ಲೈಕಾದಿಂದ ಯಾವುದೇ ರೀತಿಯ ಚಲನ-ವಲನಗಳು ಗಮನಕ್ಕೆ ಬರಲಿಲ್ಲ ಎನ್ನುತ್ತವೆ ವೈದ್ಯಕೀಯ ಮೂಲಗಳು.

ಮೊದಲು ನಾಡಿಬಡಿತ ಬೂಮಿಯ ಮಟ್ಟದಲ್ಲಿ ಇದ್ದಕ್ಕಿಂತ ಮೂರು ಪಟ್ಟು ಹೆಚ್ಚಾಯಿತು. ಹೆಚ್ಚು ಎತ್ತರಕ್ಕೆ ಏರುತ್ತಿದ್ದಂತೆ ಬಾನಂಗಳದಲ್ಲಿ ತೂಕವಿಲ್ಲಮೆಯ(weightlessness) ಕಾರಣದಿಂದ ಲೈಕಾದ ನಾಡಿಬಡಿತ ಕಡಿಮೆಯಾಗತೊಡಗಿತು. ನಿದಾನವಾಗಿ ಹ್ರುದಯ ಬಡಿತ ಕಡಿಮೆ ಆದ ಕಾರಣ ರಕ್ತ ಒತ್ತಡವು ಕೂಡ ಮೂರು ಪಟ್ಟು ಹೆಚ್ಚಾಯಿತು. ಬೂಮಿಯ ಕಕ್ಶೆಗೆ ಸೇರುವುದರೊಳಗೆ ಲೈಕಾ ಮಿತಿಮೀರಿದ ಒತ್ತಡದಿಂದ ಸಾವನ್ನಪ್ಪಿತ್ತು.

ಬಾನಿಗೇರಿದ ಬಳಿಕ ಹಿಡಿತ ಕಳೆದುಕೊಂಡ ಕಾರಣ  ಸ್ಪಟ್ನಿಕ್2 ಬಾನಬಂಡಿ ಮತ್ತು ಲೈಕಾ ನಾಯಿಯನ್ನು ಬೂಮಿಗೆ ಮರಳಿ ತರಲು ಸಾದ್ಯವಾಗಲಿಲ್ಲ. ಬೂಮಿಯ ಸುತ್ತ 2570 ಸುತ್ತು ಹಾಕಿದ ಬಳಿಕ 4 ಏಪ್ರಿಲ್ 1958 ರಂದು ಸ್ಪಟ್ನಿಕ್2 ಮತ್ತು ಲೈಕಾ ಬಾನಂಗಳದಲ್ಲಿಯೇ ಸುಟ್ಟು ಕರಕಲಾದುವು.

(ಮಾಹಿತಿ ಸೆಲೆ: news.bbc.co.ukspace.combt.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: