ಡೆವೆಲಿಸ್ ಕೇವ್ಸ್ – ಗ್ರೀಸ್‍ನಲ್ಲಿರುವ ನಿಗೂಡ ಗುಹೆಗಳು!

– ಕೆ.ವಿ.ಶಶಿದರ.

ಮೂಡನಂಬಿಕೆಗಳಿಂದ ತುಂಬಿರುವ ಅತ್ಯಂತ ನಿಗೂಡ ಸ್ತಳಗಳಲ್ಲಿ ಗ್ರೀಸ್‍ನಲ್ಲಿರುವ ಡೆವೆಲಿಸ್ ಕೇವ್ ಮಂಚೂಣಿಯಲ್ಲಿದೆ. ಇದು ಅತೆನ್ಸ್ ಪಟ್ಟಣದಿಂದ ಹೆಚ್ಚು ದೂರದಲ್ಲೇನಿಲ್ಲ. ಕಳ್ಳರಿಗೆ, ಸನ್ಯಾಸಿಗಳಿಗೆ, ಜೋಗಿಗಳಿಗೆ ಅಡಗುತಾಣವಾದ್ದರಿಂದ ಇದು ಕೆಟ್ಟ ಕ್ಯಾತಿಯನ್ನು ಮುಡಿಗೇರಿಸಿಕೊಂಡಿದೆ. ಗ್ರೀಕ್‍ನ ಕುರುಬರ ದೇವರಾದ ‘ಪಾನ್’ ದೇವರ ದೇವಾಲಯವಿರುವುದು ಇದೇ ಗುಹೆಯಲ್ಲಿ.

ಶತಮಾನಗಳ ಕಾಲದಿಂದಲೂ ಈ ಗುಹೆಯ ಬಗ್ಗೆ ಮೂಡನಂಬಿಕೆಗಳು ಚಾಲ್ತಿಯಲ್ಲಿವೆ. ದಿನಗಳು ಉರುಳಿದಂತೆ ಈ ಮೂಡನಂಬಿಕೆಗಳು ಕಡಿಮೆಯಾಗಬೇಕಿತ್ತು ಆದರೆ ಇಲ್ಲಿ ಹಾಗಾಗಿಲ್ಲ. ಗುಹೆಯ ಬಗ್ಗೆ ತಿಳಿಯಲು ಬಂದ ಹಲವಾರು ನೆಲದರಿಗರು, ಪ್ಯಾರಾನಾರ‍್ಮಲ್ ಚಟುವಟಿಕೆಗಳನ್ನು ಪತ್ತೆಹಚ್ಚಲು ಬಂದ ಅರಿಗರು ಗುಹೆಯ ಕುರಿತು ಹೆದರಿಕೆ ಹುಟ್ಟಿಸುವಂತಹ ವಿವರಗಳನ್ನು ಹೊರಹಾಕಿದ್ದಾರೆ ಇದರಿಂದಾಗಿ ಮೂಡನಂಬಿಕೆಗಳು ಇನ್ನೂ ಹೆಚ್ಚಾಗಿವೆ.

ಪೆಂಟಿಲಿ ಪರ‍್ವತದ ನೈರುತ್ಯದ ಇಳಿಜಾರಿನಲ್ಲಿ ಡೆವೆಲಿಸ್ ಗುಹೆಗಳಿವೆ. ಗ್ರೀಸ್‍ನವರು ಇದನ್ನು ‘ಕೇವ್ಸ್ ಆಪ್ ಪೆಂಟಿಲಿ’ ಅತವಾ ‘ಪೆಂಟಿಲಿ ಕೇವ್ಸ್’ ಎನ್ನುತ್ತಾರೆ. ಪೆಂಟಿಲಿ ಪರ‍್ವತ ಶ್ರೇಣಿಗಳು ಅಮ್ರುತ ಶಿಲೆಗೆ ಹೆಸರುವಾಸಿ. ಹಿಂದಿನ ಕಾಲದಲ್ಲಿ ಊರಿನ ಯಾವುದಾದರು ಎತ್ತರದ ಜಾಗದಲ್ಲಿ ಕಲ್ಲಿನ ಕೋಟೆಗಳನ್ನು ಕಟ್ಟುತ್ತಿದ್ದರು. ಊರಿನಮೇಲೆ ಯಾವುದಾದರೂ ಆಕ್ರಮಣ, ತೊಂದರೆಗಳು ಎದುರಾಗಲಿವೆಯೇ ಎಂದು ತಿಳಿಯಲು ಹಾಗೂ ಕಾವಲು ಕಾಯಲು ಈ ಕೋಟೆಗಳು ನೆರವಾಗುತ್ತಿದ್ದವು. ಗ್ರೀಸ್‍ನಲ್ಲಿ ಇಂತಹ ಕೋಟೆಗಳನ್ನು ಅಕ್ರೊಪೊಲಿಸ್ ಎಂದು ಕರೆಯುತ್ತಿದ್ದರು. ಹೀಗೆ ಅತೆನ್ಸ್ ಪಟ್ಟಣದಲ್ಲಿರುವ ಅಕ್ರೊಪೊಲಿಸ್‍ಗಳನ್ನು ಪೆಂಟಿಲಿ ಪರ‍್ವತಗಳಲ್ಲಿರುವ ಅಮ್ರುತಶಿಲೆಯಿಂದ ಕಟ್ಟಲಾಗಿದೆ.

ಇಲ್ಲಿರುವ ಗುಹೆಯ ಒಳಗೆ ಏನೇನಿದೆ?

ಪೆಂಟಿಲಿ ಗುಹೆಯ ಪ್ರವೇಶ ದ್ವಾರದಲ್ಲಿ ಎರಡು ಚರ‍್ಚುಗಳಿವೆ. ಹನ್ನೊಂದನೇ ಶತಮಾನಕ್ಕೆ ಸೇರಿದ್ದೆನ್ನಲಾದ ಈ ಚರ‍್ಚುಗಳಲ್ಲಿ ಒಂದನ್ನು ಸೇಂಟ್ ಸ್ಪೈರಿಡಾನ್‍ಗೆ ಹಾಗೂ ಮತ್ತೊಂದನ್ನು ಸೇಂಟ್ ನಿಕೋಲಾಸ್‍ಗೆ ಸಮರ‍್ಪಿಸಲಾಗಿದೆ. ಗುಹೆಯ ಒಳಗಡೆ ಸುರಂಗಗಳ ಒಂದು ಜಾಲವೇ ಇದೆ. ಒಂದು ಸುರಂಗ ಪುಟ್ಟ ಕೊಳಕ್ಕೆ ಕರೆದೊಯ್ಯುತ್ತದೆ. ಅಲ್ಲಿನ ಕುರುಬರ ದೇವರಾದ ‘ಪಾನ್‍’ಗೆ ಸಂಬಂದಿಸಿದ ದೇವಾಲಯ, ಕಾಡಿನ ದೇವರು, ಪುರಾತನ ಗ್ರೀಸ್‍ ಸಂಗೀತ ಹಾಗೂ ಗ್ರೀಸ್ ಅಪ್ಸರೆಯರ ಕುರಿತ ಸಾಕಶ್ಟು ಕಲಾಕ್ರುತಿಗಳು ಈ ಕೊಳದ ಸುತ್ತ ಸಿಕ್ಕಿವೆ. ಈ ಕಲಾಕ್ರುತಿಗಳು ವರ‍್ಣದ್ರವ್ಯಗಳಿಂದ ಆವ್ರುತವಾಗಿವೆ. ಅವೆಲ್ಲವೂ ಈಗ ಮ್ಯೂಸಿಯಮ್ ಪಾಲಾಗಿವೆ.

ಪ್ಯಾರಾನಾರ‍್ಮಲ್ ಚಟುವಟಿಕೆಗಳನ್ನು ಪತ್ತೆಹಚ್ಚುವ ಹಲವಾರು ಅರಿಗರು ಪೆಂಟಿಲಿ ಗುಹೆಗಳನ್ನು ಪ್ರೇತಾತ್ಮಗಳ ತಾಣವೆನ್ನುತ್ತಾರೆ. ಮಾನವಾಕ್ರುತಿಯ ಜೀವಿಗಳ ಹಾಗೂ ಕುರಿಗಳಂತಹ ಪ್ರಾಣಿಗಳ ಅಸ್ಪಶ್ಟ ರೂಪವನ್ನು ಗುಹೆಯ ಹತ್ತಿರ ಕಂಡಿದ್ದೇವೆ ಎನ್ನುತ್ತಾರೆ. ಅಸ್ಪಶ್ಟವಾದ ಜೀವಿಗಳ ಪ್ರತಿಬಿಂಬವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ಸಾದ್ಯವಾಗಿಲ್ಲ. ಪ್ರಯತ್ನಿಸಿದರೆ ಕ್ಯಾಮೆರಾ ತಂತಾನೆ ನಿಂತುಹೋಗಿ ಪ್ರಯತ್ನ ನಿಶ್ಪಲವಾಗುತ್ತದಂತೆ.

‘ಡೆವೆಲಿಸ್ ‘ ಎಂಬ ಹೆಸರು ಹೇಗೆ ಬಂತು?

ಡೆವೆಲಿಸ್ ಒಬ್ಬ ಪ್ರಕ್ಯಾತ ದರೋಡೆಕೋರ. ಗ್ರೀಕ್‍ನ ರಾಬಿನ್ ಹುಡ್ ಎಂದೇ ಕ್ಯಾತಿ ಪಡೆದವನು. 19ನೇ ಶತಮಾನದಲ್ಲಿ ಇಲ್ಲಿನ ಹಲವಾರು ಗುಹೆಗಳಲ್ಲಿ ಈತ ಟಿಕಾಣಿ ಹೂಡುತ್ತಿದ್ದ. ಹಾಗಾಗಿ ಇದು ಡೆವೆಲಿಸ್ ಕೇವ್ ಎಂದು ಹೆಸರುಪಡೆದುಕೊಂಡಿತು, ಅಲ್ಲದೇ ಇವನ ಸುತ್ತ ಹಲವಾರು ಕಟ್ಟುಕತೆಗಳೂ ಹುಟ್ಟಿಕೊಂಡಿವೆ. ಶ್ರೀಮಂತ ಪ್ರೆಂಚ್ ಕುಟುಂಬಕ್ಕೆ ಸೇರಿದ್ದ ಡಚೆಸ್ ಆಪ್ ಪ್ಲಕೆನ್ಶಿಯಾ ಎಂಬ ಹೆಂಗಸಿನೊಂದಿಗೆ ಈ ಡೆವೆಲಿಸ್ ಗೆ ಒಲವು ಮೂಡಿತ್ತು, ಹಾಗಾಗಿ ಇಲ್ಲಿನ ಪೆಂಟಿಲಿ ಗುಹೆಯಿಂದ ಡಚೆಸ್ ಆಪ್ ಪ್ಲಕೆನ್ಶಿಯಾ ವಾಸವಾಗಿದ್ದ ಬಂಗಲೆಯವರೆಗೆ ಸುರಂಗವಿದೆ ಎಂದು ಒಂದು ಕಟ್ಟುಕತೆ ಹೇಳುತ್ತದೆ. ಇಂತಹ ಹಲವಾರು ಕತೆಗಳಿಗೆ ಇಲ್ಲಿ ಬರವಿಲ್ಲ.

ಪೆಂಟಿಲಿ ತಲುಪಲು ಸಾರ‍್ವಜನಿಕ ಸಾರಿಗೆ ಇಲ್ಲ. ಕಾಸಗಿ ಸಾರಿಗೆ ಇದೆಯಾದರೂ ಪ್ರವಾಸಿಗರೇ ಏರ‍್ಪಾಡು ಮಾಡಿಕೊಳ್ಳಬೇಕು. ಡೆವೆಲಿಸ್ ಗುಹೆಗಳನ್ನು ತಲುಪಲು ಅತೆನ್ಸ್ ಪಟ್ಟಣದಿಂದ ನಡೆದುಕೊಂಡೇ ಹೋಗುವುದು ಅತ್ಯಂತ ಸೂಕ್ತ ಆಯ್ಕೆ. ಈ ಗುಹೆಗಳು ಅಮ್ರುತ ಶಿಲೆಯಿಂದ ಸುತ್ತುವರೆದಿರುವ ಕಾರಣ ವಾತಾವರಣ ಬಲುತಂಪು. ಬೆಚ್ಚಗಿನ ಜಾಕೆಟ್ ಮತ್ತು ಟಾರ‍್ಚ್ ಸಮೇತ ಇಲ್ಲಿಗೆ ಹೋಗುವುದು ಒಳ್ಳೆಯದು. ಗುಹೆಯ ಇಕ್ಕೆಲಗಳಲ್ಲಿ ಹಿಂದಿನ ಪ್ರವಾಸಿಗರ ಕೆತ್ತನೆಯ ಕುಶಲತೆಯನ್ನು ಕಾಣಬಹುದು! ಸಾವಿರಾರು ಪ್ರವಾಸಿಗರ ಎಡಬಿಡದ ನಡುಗೆಯಿಂದಾಗಿ ನೆಲಹಾಸು ಸವೆದು ನುಣುಪಾಗಿದೆ. ಇದರಿಂದ ಜಾರಲೂಬಹುದು ಜೋಪಾನ!

ಈ ಸುರಂಗದೊಳಗೆ ಏನಿರಬಹುದು ಎಂಬ ಕುತೂಹಲ ಪ್ರವಾಸಿಗರನ್ನು ಹೆಚ್ಚು ಹೆಚ್ಚು ಸುರಂಗದೊಳಗೆ ಹೋಗುವಂತೆ ಪ್ರೆರೇಪಿಸಬಹುದು. ಎಚ್ಚರ! ತುಂಬಾ ಒಳ ಹೋಗುವುದು ಒಳ್ಳೆಯದಲ್ಲ.

(ಮಾಹಿತಿ ಸೆಲೆ: atlasobscura.commysteriousuniverse.orghistoricmysteries.com )
(ಚಿತ್ರ ಸೆಲೆ:  atlasobscura.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks