ಚಿತ್ರಕಲಾ ಪರಿಶತ್ ನಲ್ಲಿ ಕಂಡ ಬಿದರಿ ಕಲೆಗಾರರು

– ವಿಜಯಬಾಸ್ಕರ.

 

ನಿರಂತರ ಮೌನದಿಂದ ಕುಳಿತಿದ್ದ ನನಗೆ ಇತ್ತ ಜೇಬಿನಲ್ಲಿ ಗುನುಗುವ ಶಬ್ದ ಕೇಳಿದ್ದರು ಮೌನದ ಅನುಯಾಯಿಯಾಗಿದ್ದೆ. ಮತ್ತೆ ಗುನುಗುವ ಪೋನಿನತ್ತ ವಾಲಿತು ನನ್ನ ಕೈ. ಪೋನ್ ಮೆಸೇಜ್ ನೋಡಿದೆ. ತಕ್ಶಣ “ನೀವಿದ್ದ ಸ್ತಳದಿಂದ ಚಿತ್ರಕಲಾ ಪರಿಶತ್ ಗೆ ಹೊರಡಿ” ಎನ್ನುವ ನಮ್ಮ ಸೀನಿಯರ್  ರ ಸಂದೇಶ ನಮ್ಮನ್ನು ಚಿತ್ರಕಲಾ ಪರಿಶತ್ ಕಡೆಗೆ ಪಯಣ ಬೆಳೆಸುವಂತೆ ಮಾಡಿತು.

ಚಿತ್ರಕಲಾ ಪರಿಶತ್ ಎಂದರೆ ಸುಮ್ಮನೆನಾ. ಅದು ಒಂದು ಬಣ್ಣದ ರೌದ್ರಬೂಮಿ. ಚಿತ್ತಾರದ ಬೀಡು, ಕುಂಚದ ಸೊಬಗು. ನಾವು ಒಳಗೆ ಹೋದಾಗ ತದೇಕ ಚಿತ್ತದಿಂದ ನೋಡುತ್ತಿದ್ದ ಬುದ್ದ ನಮ್ಮನ್ನು ಬರಮಾಡಿಕೊಂಡನು. ಜಂಬದಿಂದ ನಿಂತಿರುವ ನೀಳ ಸುಂದರಿಯ ಬಿತ್ತಿ ಚಿತ್ರ, ಅದರ ಕಣ್ಣೋಟದಿಂದ ನಮ್ಮನ್ನು ಸೆಳೆಯಿತು. ಬೀದರ್ ಜಿಲ್ಲೆಯ ಕಡಕ್ ಬಾಶೆ ಕಿವಿಗೆ ಬಿದ್ದಿದ್ದೇ ತಡ, ನಾವು ಆ ಶಬ್ದ ಬಂದ ಕಡೆಗೆ ಹೋಗಿ ನೋಡಿದರೆ, ಬಿದರಿ ಕಲೆಗಾರರ ಸಂಸಾರ ಅಲ್ಲಿ ಬಿಡಾರ ಹೂಡಿದೆ! ರಾಜ್ಯ ಸರ‍್ಕಾರ, ಕನ್ನಡ ಸಂಸ್ರುತಿ ಇಲಾಕೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬಿದರಿ ಕಲೆಯ ಪ್ರದರ‍್ಶನ, ಬಂದ ಜನರ ಮನ ಸೆಳೆಯುತ್ತಿತ್ತು. ಸುಮಾರು 15 ರಿಂದ 20 ಮಳಿಗೆಗಳು ಅಲ್ಲಿದ್ದವು.

ಅಬ್ಬಾ! ಬಿದರಿ ಕಲೆಯಲ್ಲಿ ಅರಳಿದ ಒಂದೊಂದು ಕಲಾವಸ್ತುವು ಮೂಕವಿಸ್ಮಿತಗೊಳಿಸಿತು. ಬಿದರಿ ಕಲೆಯನ್ನು ಪರಂಪರಾಗತವಾಗಿ ಕಾಪಾಡಿಕೊಂಡು ಬಂದಿರುವ ಬಿದರಿ ಕಲೆಗಾರರ ಹತ್ತಿರ ಹೋಗಿ ಅವರನ್ನ ನೋಡಿದೆ. “ಸರ‍್ರ,  ನೀವು ನಮ್ಮ ಬಗ್ಗೆ ಬರೀತೇರೆನ್ರಿ?” ಅಂತ ನಮ್ಮನ್ನೆ ದುರುಗುಟ್ಟುತ್ತಾ ನೋಡಿ ನಕ್ಕರು. ಆ ನಗು ಒಂದು ಕ್ಶಣ ಕರಾಳ ನೋವಿನ ನಾದ ಮಿಡಿಸಿತು.

ನನಗೆ ಬಿದರಿ ಕಲೆಯ ಪರಂಪರೆ, ಅದರ ಇತಿಹಾಸಕ್ಕಿಂತ ಬಿದರಿ ಕಲಾಕ್ರುತಿಯನ್ನು ಅಶ್ಟು ಅಚ್ಚುಕಟ್ಟಾಗಿ ಹೆಣೆದಿರುವ ಕಲೆಗಾರರ ಕತೆ ಕೇಳುವ ಹಂಬಲ ಮತ್ತು ಹಪಹಪಿ. “ಸರ‍್ರಾ, ನಿಮ್ಮ ಈ ಕಲೆಯಿಂದ ನಿಮ್ಮ ಬಾಳ್ ಹಸನಾಗೆದೇನ್ರಿ?” ಅಂತ ಅವರ ಮಾತಿನ ದಾಟಿಯಲ್ಲಿ ಕೇಳಿದೆ. “ಇಲ್ರಿ ಸರಾ, ನಮ್ಮ ಬಾಳ್ ಒಂದು ಕಡಿಗೆ ಇರಲಿ. ನಾವು ಮಾಡಿದ ಬಿದರಿ ಶೈಲಿ ಕಲಾಕ್ರುತಿ ಇನ್ನೂ ಬಹಳ ಮಂದಿಗೆ ಗೊತ್ತ ಇಲ್ರಿ. ಪ್ರದರ‍್ಶನಕ್ಕ ಬಂದ ಜನ ಸೆಲ್ಪಿ ತೊಗೊತಾರ, ಆತು. ನಮ್ಮ ತ್ರಾಸ ಯಾರ್ ಕೇಳ್ತಾರ” ಅಂತ ಆ ಕಲೆಗಾರ ಬೇಸರ ವ್ಯಕ್ತಪಡಿಸಿದ.

ಅಲ್ಲಿ ನಮಗೆ 86 ವರ‍್ಶದ ಹಿರಿ ಜೀವ ಬಿದರಿ ಕಲೆಯ ವಹಿವಾಟಿನ ಬಗ್ಗೆ ಹೇಳಿದರು. “ರಾಜಸ್ತಾನದ ಜಾಲೋರ್ ನಲ್ಲಿ ಸಿಗುವ ಈ ಸತು ನಮಗೆ ತುಂಬಾ ದುಬಾರಿ ಬೀಳತ್ತ. ಮತ್ತ ಇದಕ್ಕ ಬೆಳ್ಳಿ ಮತ್ತ ತಾಮ್ರ ಬೆರೆಸಿ ಒಂದು ಹದ ಮಾಡಿಕೊಳ್ತೀವಿ. ಸರ‍್ಕಾರ ನಮಗ 6 ಕೆಜಿ ಸತು ನೀಡ್ತಾರ.. ಅದು ನಮಗ ಯಾವುದಕ್ಕೂ ಸಾಲೂದಿಲ್ಲ” ಎಂದು ಆ ಹಿರಿ ಜೀವ ಹೇಳಿದಾಗ ಅವರ ಕಳವಳ, ನನಗೆ ಮತ್ತು ನೆರೆದ ಜನರ ಮನತಟ್ಟಿತು.

ಮನ ತಣಿಸುವ ಬಿದರಿ ಕಲಾಕ್ರುತಿಗಳ ಹಿಂದಿನ ಕರಾಳ ಸತ್ಯ ಮತ್ತು ನೋವು ಅಲ್ಲಿ ಕಂಡಿತು. “ಸುಮಾರು 14ನೇ ಶತಮಾನದಿಂದ ಬಂದ ಈ ಕಲೆ ನಮ್ಮ ಮುಂದಿನ ಪೀಳಿಗೆಗೆ ಬ್ಯಾಡ ಸರಾ. ನಾವು ಪಟ್ಟ ಕಶ್ಟ ನಮಗ ಕೊನೆಯಾಗಲಿ. ಬಿದರಿ ಕಲೆಗಾರರ ಬದುಕು ದಡ ಸೇರದ ಮೌನಕ್ಕ ಶರಣಾಗಕತ್ತೇತಿ. ನಮ್ಮ ಮುಂದಿನ ತಲೆಮಾರು ಈ ನೋವು ಅನುಬವಿಸದ ಓದಿ ಒಳ್ಳೆ ನೌಕರಿ ಮಾಡಲಿ” ಎಂದು ಬಿದರಿ ಕಲೆಗಾರರು ತಮ್ಮ ನೋವಿನ ಪಯಣವನ್ನು ಹೇಳಿಕೊಂಡರು.

ಈ ನೋವಿನ ಕತೆಯ ಅಂದಾಜು ಸಿಗದೆ ಸ್ವಲ್ಪ ಹೊತ್ತು ಅದರಲ್ಲೇ ಮುಳುಗಿದೆವು. ಬಿದರಿ ಕಲೆಗಾರರಿಗೆ ನೆಲೆ ಸಿಗಲಿ, ಅವರು ತಯಾರಿಸಿರುವ ಕಲಾಕ್ರುತಿಗಳು ಜನರಿಗೆ ಹತ್ತಿರವಾಗಲಿ ಎಂದು ಬಿದರಿ ಕಲೆಗಾರರಿಗೆ ಹಾರೈಸಿ ಅಲ್ಲಿಂದ ಹಿಂದಿರುಗಿದೆವು.

( ಚಿತ್ರ ಸೆಲೆ:  bidartourism.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: