ಬ್ರೌನ್ ಮೌಂಟೆನ್‍ನ ನಿಗೂಡ ದೀಪದ ಚೆಂಡುಗಳು

– ಕೆ.ವಿ.ಶಶಿದರ.

ಅಮೇರಿಕಾದ ನಾರ‍್ತ್ ಕರೊಲಿನಾ ನಾಡಿನ ಬ್ಲೂ ರಿಡ್ಜ್ ಬೆಟ್ಟಗಳ ಸಾಲಿನಲ್ಲಿ ಬ್ರೌನ್ ಮೌಂಟೆನ್ ಎಂಬ ಬೆಟ್ಟವಿದೆ. ಇದು ನೈಜ್ಯ ಮತ್ತು ಅಚ್ಚರಿಯ ರಹಸ್ಯಕ್ಕೆ ತಾಣವಾಗಿದೆ. ವಿಶ್ವದ ಬೇರೆ ಬೆಟ್ಟಗಳಿಗೆ ಹೋಲಿಸಿದರೆ ಈ ಬ್ರೌನ್ ಮೌಂಟೆನ್‍ನ ಎತ್ತರ ಬಹಳ ಕಡಿಮೆ. ಶತಮಾನಗಳ ಕಾಲದಿಂದ ‘ಬ್ರೌನ್ ಮೌಂಟನ್ ಲೈಟ್ಸ್’ ಎಂಬ ನಿಗೂಡ ದೀಪಗಳು ಇಲ್ಲಿ ಕಾಣಿಸಿಕೊಳ್ಳುತ್ತಿವೆ. ಬೆಟ್ಟದಿಂದ ಪಿನಿಕ್ಸ್ ನಂತೆ ಮೇಲೇಳುವ ಈ ನಿಗೂಡ ದೀಪದ ಚೆಂಡುಗಳು ಗಾಳಿಯಲ್ಲಿ ಅಂದಾಜು ಹದಿನೈದು ಅಡಿ ಎತ್ತರದಲ್ಲಿ ತೇಲುತ್ತಾ ಬಳಿಕ ಕಣ್ಮರೆಯಾಗುತ್ತವೆ. ಬಹಳ ದೂರದಿಂದಲೂ ದೀಪಗಳ ಈ ನೋಟವನ್ನು ಕಾಣಬಹುದು.

ದೀಪದ ಚೆಂಡುಗಳು ಕಾಣಿಸಿಕೊಳ್ಳಲು ಕಾರಣವೇನು?

ದೀಪದ ಚೆಂಡಿನ ಮೂಲದ ಬಗ್ಗೆ ಯಾವುದೇ ಸೂಕ್ತ ವಿವರಣೆ ಇಲ್ಲ. ಹಲವಾರು ವೈಜ್ನಾನಿಕ ಸಂಶೋದನೆಗಳು ಸಹ ಇದರ ಮೂಲವನ್ನು ಬೇದಿಸುವಲ್ಲಿ ವಿಪಲವಾಗಿವೆ. ಹಲವಾರು ಮಂದಿ ಇದನ್ನು ಕಾರು ಮುಂತಾದ ವಾಹನಗಳ ಹೆಡ್ ಲೈಟ್ ಇರಬಹುದೆಂದು ಊಹಿಸಿದರು. ಮತ್ತೆ ಕೆಲವರು ಪೊದೆಗಳಲ್ಲಿ ಹತ್ತಿ ಉರಿಯುವ ಬೆಂಕಿಯ ಪ್ರತಿಪಲನೆ ಇರಬಹುದೆಂದರು. ದೀಪದ ಚೆಂಡುಗಳು ಬ್ರೌನ್ ಬೆಟ್ಟದಿಂದ ಸರಿಸುಮಾರು ಹದಿನೈದು ಮೈಲಿ ದೂರದವರೆಗೂ ಕಾಣಿಸುತ್ತವೆ. ಕೆಲವೊಮ್ಮೆ ಇವು ನಿದಾನವಾಗಿ ಮೇಲೇರಿ ಸಾವಕಾಶವಾಗಿ ಕಣ್ಮರೆಯಾದರೆ, ಕೆಲವೊಮ್ಮೆ ಮೇಲೇರುತ್ತಾ ದೊಡ್ಡದಾಗಿ ಬೆಳೆದು ನಿಶ್ಯಬ್ದವಾಗಿ ಸಿಡಿದು ಹೋಗುತ್ತವೆ. ಮತ್ತೆ ಕೆಲವೊಮ್ಮೆ ಎಶ್ಟು ವೇಗವಾಗಿ ಕಾಣಿಸಿಕೊಳ್ಳುತ್ತವೆಯೋ ಮತ್ತು ಅಶ್ಟೇ ವೇಗವಾಗಿ ಅಳಿದು ಹೋಗುತ್ತವೆ.

ಇಲ್ಲಿನ ವಿದ್ಯಮಾನಗಳು ಅನೇಕ ವಿಜ್ನಾನಿಗಳಲ್ಲಿ ಕುತೂಹಲ ಕೆರಳಿಸುವುದರೊಂದಿಗೆ ಹಲವಾರು ಸಂಶೋದನೆಗಳಿಗೆ ಮುನ್ನುಡಿಯನ್ನೂ ಹಾಡಿದೆ. 1913ರಲ್ಲಿ ಯು.ಎಸ್. ಜಿಯಲಾಜಿಕಲ್ ಸರ‍್ವೆ ನಡೆಸಿದ ಸಂಶೋದನೆಯ ಮೊದಲನೇ ವರದಿಯಲ್ಲಿ, ಈ ದೀಪದ ಚೆಂಡಿಗೆ ಬ್ರೌನ್ ಪರ‍್ವತದ ದಕ್ಶಿಣ ಬಾಗದಲ್ಲಿರುವ ಕಟಾವ್ಬಾ ಕಣಿವೆಯ ಹೆದ್ದಾರಿಯಲ್ಲಿ ಓಡಾಡುವ ವಾಹನಗಳ ಹೆಡ್‍ಲೈಟ್‍ನಿಂದ ಬರುವ ಬೆಳಕು ಕಾರಣವೆಂದು ತೀರ‍್ಮಾನಿಸಿತು. ಆದರೆ ಮೂರು ವರ‍್ಶಗಳ ನಂತರ ಅಂದರೆ 1916ರಲ್ಲಿ ಕಟಾವ್ಬಾ ಕಣಿವೆಯಲ್ಲಿ ಸಂಬವಿಸಿದ ಪ್ರವಾಹದಿಂದ ಹೆದ್ದಾರಿ ಸಂಪೂರ‍್ಣವಾಗಿ ನಾಶವಾಯಿತು. ವಿದ್ಯುತ್ ತಂತಿಗಳೂ ನೆಲಕಚ್ಚಿದವು. ಕಣಿವೆಯಲ್ಲಿ ವಾಹನಗಳ ಓಡಾಟಕ್ಕೆ ಬ್ರೇಕ್ ಬಿದ್ದಿತು. ಆದರೆ ದೀಪದ ಚೆಂಡುಗಳಿಗೆ ಯಾವುದೇ ಬ್ರೇಕ್ ಬೀಳಲಿಲ್ಲ. ಮೊದಲಿನಂತೆಯೇ ಬೆಳಕಿನ ಚೆಂಡಿನಾಟ ಎಡೆಬಿಡದೆ ಮುಂದುವರೆಯಿತು.

ಯು.ಎಸ್ ಜಿಯಲಾಜಿಕಲ್ ಸರ‍್ವೆಯ ಎರಡನೇ ವರದಿಯಲ್ಲಿ ಬ್ರೌನ್ ಪರ‍್ವತದಲ್ಲಿನ ಜೌಗು ನೆಲದಲ್ಲಿ ಉತ್ಪಾದನೆಯಾಗುವ ಒಂದು ಬಗೆಯ ಗಾಳಿ ಹೊತ್ತಿಉರಿದಾಗ ಬೆಂಕಿಯ ಚೆಂಡು ಕಂಡುಬರುತ್ತಿದೆ ಎಂದರು. ಬ್ರೌನ್ ಪರ‍್ವತದಲ್ಲಾಗಲಿ ಅದರ ಸುತ್ತಮುತ್ತ ಪ್ರದೇಶದಲ್ಲಾಗಲಿ ಜೌಗು ನೆಲ ಕಂಡುಬಂದಿಲ್ಲವಾದ್ದರಿಂದ ಈ ಕಾರಣವನ್ನು ತಳ್ಳಿಹಾಕಲಾಯಿತು.

ಕೆಲವು ವಿಜ್ನಾನಿಗಳು ಬ್ರೌನ್ ಪರ‍್ವತದ ಸಮೀಪವಿರುವ ಹಿಕರಿ, ಲಿನೋಯಿರ್ ಮತ್ತು ಇತರೆ ಪಟ್ಟಣಗಳಲ್ಲಿ ಉರಿಯುವ ದೀಪದ ಬೆಳಕು ವಾಯುಮಂಡಲದ ನಿರ‍್ದಿಶ್ಟ ಪರಿಸ್ತಿತಿಯಲ್ಲಿ ಪ್ರತಿಪಲಿಸಿದಾಗ ದೀಪದ ಚೆಂಡುಗಳು ಕಂಡುಬರುತ್ತವೆ ಎಂದು ಸಮರ‍್ತಿಸಿಕೊಂಡರು. ಈ ಪಟ್ಟಣಗಳಲ್ಲಿ ವಿದ್ಯುತ್ ಇಲ್ಲದಿರುವಾಗಲೂ ದೀಪಗಳು ಕಾಣಿಸಿಕೊಂಡ ಕಾರಣ ಈ ಸಿದ್ದಾಂತದಲ್ಲೂ ಯಾವುದೇ ಹುರುಳಿಲ್ಲವೆಂದು ಸಂಪೂರ‍್ಣ ತಿರಸ್ಕರಿಸಲಾಯಿತು.

ಈ ದೀಪಗಳನ್ನು ಹತ್ತಿರದಿಂದ ನೋಡಿದವರು ಕಣ್ಮರೆಯಾಗುತ್ತಾರಂತೆ!

ಶತಮಾನಗಳ ಕಾಲದಿಂದ ಬ್ರೌನ್ ಪರ‍್ವತದಲ್ಲಿ ಕಂಡುಬರುತ್ತಿರುವ ದೀಪದ ವಿದ್ಯಮಾನಕ್ಕೆ ಅಲ್ಲಿನ ನೆಲಸಿಗರು ತಮ್ಮದೇ ಆದ ಕತೆಗಳನ್ನು ಕಟ್ಟಿ ಹೇಳುತ್ತಾರೆ. ಈ ದೀಪಗಳನ್ನು ಬ್ರೌನ್ ಪರ‍್ವತದ ಹತ್ತಿರದ ಸುತ್ತಮುತ್ತಲ ಪ್ರದೇಶದಿಂದ ನೋಡಿದವರು ನಿಗೂಡವಾಗಿ ಕಣ್ಮರೆಯಾಗುತ್ತಾರೆ ಎಂಬ ಕತೆಗಳಿವೆ. ಇದಕ್ಕೆ ಪೂರಕವಾಗಿ ಕಟಾವ್ಬಾ ವಿರುದ್ದದ ಯುದ್ದದಲ್ಲಿ ಬ್ರೌನ್ ಪರ‍್ವತದಲ್ಲಿ ಜೀವ ಕಳೆದುಕೊಂಡ ಚೆರೋಕಿ ಮೇಡನ್ ಮಂದಿಯ ಆತ್ಮಗಳೇ ಈ ದೀಪಗಳು ಎಂದು ಪ್ರತಿಪಾದಿಸುತ್ತಾರೆ.

1850ರಲ್ಲಿ ನಡೆಯಿತೆನ್ನಲಾದ ಒಂದು ಕತೆ ಇದೆ. ಒಮ್ಮೆ ಒಬ್ಬಾಕೆ ಬ್ರೌನ್ ಪರ‍್ವತದಲ್ಲಿ ನಿಗೂಡವಾಗಿ ಕಣ್ಮರೆಯಾದಳಂತೆ. ಸಮುದಾಯದ ಎಲ್ಲರೂ ಆಕೆಯನ್ನು ಹುಡುಕುತ್ತಾ ಹೋದರಂತೆ. ಆ ಹೊತ್ತಿನಲ್ಲಿ ಅವರಿಗೆ ಹತ್ತಿರದಲ್ಲೇ ಈ ದೀಪದ ಚೆಂಡುಗಳು ಕಂಡವಂತೆ. ದೀಪವನ್ನು ನೋಡಿದ್ದೇ ತಡ ಇಡೀ ಗುಂಪೇ ಕಣ್ಮರೆಯಾಯಿತಂತೆ. ಕೆಲವರ ನಂಬಿಕೆಯಂತೆ ಆ ಹೆಂಗಸನ್ನು ಆಕೆಯ ಗಂಡನೇ ಕೊಂದುಹಾಕಿದ್ದರಿಂದ ಆಕೆಯ ಆತ್ಮ ದೀಪದ ರೂಪದಲ್ಲಿ ಕಾಣಿಸಿಕೊಂಡಿತಂತೆ. ತನ್ನನಾಗಲಿ ತನ್ನ ದೇಹವನ್ನಾಗಲಿ ಹುಡುಕದಂತೆ ಎಚ್ಚರಿಸುವ ಸಲುವಾಗಿ ದೀಪ ಬೆಳಗುತ್ತದಂತೆ.

ಇತ್ತೀಚೆಗೆ ಅಂದರೆ 2011ರಲ್ಲಿ 27 ಜನರ ಒಂದು ತಂಡ ಬ್ರೌನ್ ಪರ‍್ವತಗಳನ್ನು ನೋಡಲು ಹೋಗಿದ್ದಾಗ ಕಣ್ಮರೆಯಾದರಂತೆ. ಇದ್ದಕ್ಕಿದ್ದಂತೆ ಈ ದೀಪಗಳು ಕಾಣಿಸಿಕೊಂಡಿದ್ದೇ ಇದಕ್ಕೆ ಕಾರಣ ಎನ್ನುತ್ತಾರೆ. ಈ ಎಲ್ಲಾ ವಿದ್ಯಮಾನಗಳನ್ನು ಗಮನಿಸಿದಾಗ ಕಣ್ಮರೆಗೆ ಮೂಲವಾಗಿ ಕಂಡುಬರುವ ಕಾರಣ ಈ ದೀಪಗಳನ್ನು ಹತ್ತಿರದಿಂದ ನೋಡಿರುವುದು ಮಾತ್ರ ಎಂಬುದು. ನಿಗೂಡ ಕಣ್ಮರೆಗೆ ಕಾರಣ ಹಾರುವ ತಟ್ಟೆ ಎನ್ನುವವರು ಕೆಲವರಾದರೆ, ಬೇರೆ ಲೋಕದ ಏಲಿಯನ್‍ಗಳು ಅಪಹರಣ ಮಾಡಿರಬಹುದು ಎಂಬುದು ಮತ್ತೆ ಕೆಲವರ ವಾದ.

ವಿಜ್ನಾನದಲ್ಲಿ ಏನೆಲ್ಲಾ ಪ್ರಗತಿ ಸಾದಿಸಿದ್ದರೂ ಬ್ರೌನ್ ಪರ‍್ವತದಲ್ಲಿ ಬೆಳಗುವ ದೀಪದ ಚೆಂಡಿನ ಹಾಗೂ ಅದನ್ನು ಹತ್ತಿರದಿಂದ ಕಂಡವರ ನಿಗೂಡ ಕಣ್ಮರೆಯ ಹಿಂದಿನ ರಹಸ್ಯವನ್ನು ಬೇದಿಸಲು ಸೋತಿರುವುದು ವಿಪರ‍್ಯಾಸವೇ ಸರಿ. ವೈಜ್ನಾನಿಕವಾಗಿ ಯಾವುದೇ ವಿವರಣೆಯನ್ನು ಹೊಂದಿರದ ನೈಸರ‍್ಗಿಕ ವಿದ್ಯಮಾನವಾಗಿಯೇ ಇದು ಉಳಿದೆದೆ.

(ಮಾಹಿತಿ ಸೆಲೆ: ibibliosupernaturalmagazine.com, mysteriousuniverse.org)
(ಚಿತ್ರ ಸೆಲೆ: seekernow.com, charlotteobserver.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.