ಸ್ವತಂತ್ರ ಸಿದ್ದಲಿಂಗೇಶ್ವರನ ವಚನಗಳ ಓದು

– ಸಿ.ಪಿ.ನಾಗರಾಜ.

ಶರಣರ ವಚನ

ಸ್ವತಂತ್ರ ಸಿದ್ದಲಿಂಗರ ಕುರಿತು ಕನ್ನಡ ಸಾಹಿತ್ಯಚರಿತ್ರಕಾರರು ಈ ಕೆಳಕಂಡ ಮಾಹಿತಿಗಳನ್ನು ನೀಡಿದ್ದಾರೆ:

ಹೆಸರು : ಸ್ವತಂತ್ರ ಸಿದ್ದಲಿಂಗೇಶ್ವರ / ಸ್ವತಂತ್ರ ಸಿದ್ದಲಿಂಗ

ಕಾಲ : ಕ್ರಿ.ಶ. ಹದಿನಾರನೆಯ ಶತಮಾನ (1501-1600)

ಊರು : 1) ಹುಟ್ಟಿದ ಊರು: ಹರದನ ಹಳ್ಳಿ(ವಾಣಿಜ್ಯಪುರ), ಚಾಮರಾಜ ನಗರ ತಾಲ್ಲೂಕು, ಚಾಮರಾಜ ನಗರ ಜಿಲ್ಲೆ.
2) ಮಂಡ್ಯ ಜಿಲ್ಲೆಯ ಕ್ರಿಶ್ಣರಾಜಪೇಟೆ ತಾಲ್ಲೂಕಿನ ಕಾಪನಹಳ್ಳಿ ಎಂಬ ಊರಿನ ಹತ್ತಿರದಲ್ಲಿರುವ ಗಜರಾಜಗಿರಿಯಲ್ಲಿ ದೊರಕಿರುವ ಒಂದು ಸಮಾದಿಯನ್ನು/ಗದ್ದುಗೆಯನ್ನು ಈತನದೆಂದು ಗುರುತಿಸಲಾಗಿದೆ.

ಕಸುಬು : ತಿಳಿದುಬಂದಿಲ್ಲ.

ದೊರೆತಿರುವ ವಚನಗಳು : 435

ವಚನಗಳ ಅಂಕಿತನಾಮ : ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ

=================================================

ಕಣ್ಣು ಕಾಲು ಎರಡುಳ್ಳವ ದೂರ ಎಯ್ದುವನಲ್ಲದೆ
ಕಣ್ಣು ಕಾಲೆರಡರೊಳಗೊಂದಿಲ್ಲದವನು
ದೂರವನೆಯ್ದಲರಿಯನೆಂಬಂತೆ
ಜ್ಞಾನರಹಿತನಾಗಿ ಕ್ರೀಯನೆಷ್ಟು ಮಾಡಿದಡೇನು
ಅದು ಕಣ್ಣಿಲ್ಲದವನ ನಡೆಯಂತೆ
ಕ್ರೀರಹಿತನಾಗಿ ಜ್ಞಾನಿಯಾದಡೇನು
ಅದು ಕಾಲಿಲ್ಲದವನ ಇರವಿನಂತೆ
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ
ನಿಜವ ಬೆರಸುವಡೆ
ಜ್ಞಾನವೂ ಕ್ರೀಯೂ ಎರಡು ಬೇಕು.

ವ್ಯಕ್ತಿಯು ತನ್ನ ಜೀವನದಲ್ಲಿ ಅರಿವನ್ನು ಹೊಂದದೆ ಕೇವಲ ದುಡಿಮೆಯನ್ನು ಮಾತ್ರ ಮಾಡುತ್ತಿದ್ದರೆ ಇಲ್ಲವೇ ದುಡಿಮೆಯನ್ನು ಮಾಡದೆ ಕೇವಲ ಅರಿವನ್ನು ಮಾತ್ರ ಹೊಂದಿದ್ದರೆ , ಯಾವ ಪ್ರಯೋಜನವೂ ಇಲ್ಲ. ಇವೆರಡು ಜತೆಗೂಡಿದಾಗ ಮಾತ್ರ ವ್ಯಕ್ತಿಗೆ ಜೀವನದಲ್ಲಿ ನೆಮ್ಮದಿ ಮತ್ತು ಏಳಿಗೆಯು ಉಂಟಾಗುತ್ತದೆ ಎಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.

( ಕಣ್ಣು=ನೋಡುವ ಅಂಗ/ನೇತ್ರ/ನಯನ; ಕಾಲು=ನಡೆಯುವ ಅಂಗ; ಎರಡು+ಉಳ್ಳವ; ಉಳ್=ಇರು/ಹೊಂದು/ಪಡೆ; ಉಳ್ಳವ=ಇರುವವನು/ಹೊಂದಿರುವವನು/ಪಡೆದಿರುವವನು; ದೂರ=ಒಂದು ಎಡೆಯಿಂದ ಮತ್ತೊಂದು ಎಡೆಗೆ ಇರುವ ಅಂತರ; ಎಯ್ದು+ಅನ್+ಅಲ್ಲದೆ; ಎಯ್ದು=ಮುಟ್ಟು/ಸೇರು ; ಎಯ್ದುವನ್=ಹೋಗಿ ಸೇರುವನು/ತಲುಪುವನು/ಮುಟ್ಟುವನು; ಅಲ್ಲದೆ=ಆ ರೀತಿ ಇರದೆ; ಕಣ್ಣು+ಕಾಲ್+ಎರಡರ+ಒಳಗೆ+ಒಂದು+ಇಲ್ಲದವನು; ದೂರ+ಅನ್+ಎಯ್ದಲ್+ಅರಿಯನ್+ಎಂಬ+ಅಂತೆ; ಎಯ್ದಲ್=ಹೋಗಿ ಸೇರಲು/ಮುಟ್ಟಲು/ತಲುಪಲು; ಅರಿ=ತಿಳಿ; ಅರಿಯನ್=ತಿಳಿಯನು/ಗೊತ್ತಿಲ್ಲದವನು; ಎಂಬ=ಎನ್ನುವ; ಅಂತೆ=ಹಾಗೆ; ದೂರವನೆಯ್ದಲರಿಯನ್=ನೋಡುವ ಕಣ್ಣು ಮತ್ತು ನಡೆಯುವ ಕಾಲುಗಳಲ್ಲಿ ಒಂದು ಅಂಗ ಇಲ್ಲವಾದರೆ , ಅಂದರೆ ಕಣ್ಣುಗಳು ಇಲ್ಲವಾದರೆ ಮುಂದಿನ ಹಾದಿಯು ಯಾವುದೆಂಬುದನ್ನು ಕಾಣಲಾಗದೆ / ಕಾಲುಗಳು ಇಲ್ಲವಾದರೆ ಹಾದಿಯಲ್ಲಿ ನಡೆಯಲಾಗದೆ, ಹೋಗಿ ಸೇರಬೇಕಾದ ನೆಲೆಯನ್ನು ತಲುಪಲಾಗುವುದಿಲ್ಲ;

ಜ್ಞಾನ+ರಹಿತನ್+ಆಗಿ; ಜ್ಞಾನ=ತಿಳುವಳಿಕೆ/ಅರಿವು/ಯಾವುದು ಒಳ್ಳೆಯದು-ಕೆಟ್ಟದ್ದು/ಯಾವುದು ಸರಿ-ತಪ್ಪು ಎಂಬುದನ್ನು ತಿಳಿದು ನೋಡುವ ಕಸುವು; ರಹಿತ=ಇಲ್ಲದ; ಜ್ಞಾನರಹಿತನಾಗಿ=ತಿಳುವಳಿಕೆಯಿಲ್ಲದೆ/ಅರಿವಿಲ್ಲದೆ/ಯಾವ ಬಗೆಯ ಕೆಲಸದಿಂದ ಏನು ದೊರೆಯುತ್ತದೆ ಎಂಬುದನ್ನೇ ಗೊತ್ತುಮಾಡಿಕೊಳ್ಳದೆ; ಕ್ರೀ+ಅನ್+ಎಷ್ಟು; ಕ್ರೀ=ಕ್ರಿಯೆ/ಕೆಲಸ/ಕಾರ‍್ಯ/ದುಡಿಮೆ/ಗೆಯ್ಮೆ; ಅನ್=ಅನ್ನು; ಎಷ್ಟು=ಯಾವ ಪ್ರಮಾಣದಲ್ಲಿಯಾದರೂ ; ಮಾಡದಡೆ+ಏನು; ಮಾಡಿದಡೇನು=ಮಾಡುವುದರಿಂದ ಯಾವುದೇ ಬಗೆಯ ಪ್ರಯೋಜನವಿಲ್ಲ; ಕಣ್+ಇಲ್ಲದವನ; ನಡೆ+ಅಂತೆ; ನಡೆ=ನಡಗೆ/ಮುಂದೆ ಸಾಗುವುದು/ಚಲಿಸುವುದು; ಅದು ಕಣ್ಣಿಲ್ಲದವನ ನಡೆಯಂತೆ=ಕಣ್ಣು ಕಾಣದವನು ದಾರಿಯಲ್ಲಿ ನಡೆಯುವಾಗ ಮುಂದಿನ ಎಡೆಯಲ್ಲಿ ಏನಿದೆ ಎಂಬುದನ್ನು ಅರಿಯಲಾಗದೆ ಹೆಜ್ಜೆ ಹೆಜ್ಜೆಗೂ ತೊಳಲಾಡುತ್ತಾನೆಯೋ ಅಂತೆಯೇ ಸರಿಯಾದ ತಿಳುವಳಿಕೆಯಿಲ್ಲದೇ ಮಾಡುವ ದುಡಿಮೆಯಿಂದ ವ್ಯಕ್ತಿಯು ಏಳಿಗೆಯನ್ನು ಹೊಂದಲಾಗುವುದಿಲ್ಲ ಎಂಬ ತಿರುಳಿನಲ್ಲಿ ಬಳಕೆಯಾಗಿರುವ ನುಡಿಗಳು;

ಕ್ರೀ+ರಹಿತನ್+ಆಗಿ; ಕ್ರೀರಹಿತನು=ದುಡಿಮೆಯನ್ನು ಮಾಡದವನು/ದೇಹವನ್ನು ದಂಡಿಸಿ ಗೆಯ್ಯಲಾರದವನು/ಏನೊಂದು ಕೆಲಸವನ್ನು ಮಾಡದವನು; ಜ್ಞಾನಿ+ಆದಡೆ+ಏನು; ಜ್ಞಾನಿ=ಅರಿವುಳ್ಳವನು/ತಿಳುವಳಿಕೆಯುಳ್ಳವನು/ಓದುಬರಹವನ್ನು ಕಲಿತವನು; ಆದಡೆ=ಆಗಿದ್ದರೆ; ಕಾಲ್+ಇಲ್ಲದವನ; ಇರವು+ಇನ್+ಅಂತೆ; ಇರವು=ರೀತಿ/ಬಗೆ ; ಅದು ಕಾಲಿಲ್ಲದವನ ಇರವು=ಕಾಲುಗಳು ಇಲ್ಲದವನು ಒಂದು ಎಡೆಯಿಂದ ಮತ್ತೊಂದು ಎಡೆಗೆ ಹೇಗೆ ಹೋಗಲಾರನೋ ಅಂತೆಯೇ ದುಡಿಮೆಯನ್ನು ಮಾಡದವನು ಜೀವನದ ಆಗುಹೋಗುಗಳಿಗೆ ಅಗತ್ಯವಾದ ಸಂಪತ್ತನ್ನು ಗಳಿಸಲಾಗದೆ/ಸಂಪಾದಿಸಲಾಗದೆ ಇದ್ದ ನೆಲೆಯಿಂದ ಮೇಲೇರಲಾಗದೆ ಉಳಿಯುತ್ತಾನೆ/ನೆಲಕಚ್ಚುತ್ತಾನೆ;

ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ=ಶಿವನ ಹೆಸರು/ಸಿದ್ದಲಿಂಗೇಶ್ವರನ ವಚನಗಳಲ್ಲಿ ಬಳಕೆಯಾಗಿರುವ ಅಂಕಿತನಾಮ/ವಚನಕಾರನ ಮೆಚ್ಚಿನ ದೇವರು; ನಿಜ=ವಾಸ್ತವ/ಸತ್ಯ/ದಿಟ; ಬೆರಸು=ಕೂಡಿಸು/ಸೇರಿಸು/ಒಂದು ಮಾಡು; ಬೆರಸುವಡೆ=ಬೇರೆ ಬೇರೆಯಾಗಿರುವುದನ್ನು ಒಂದು ಮಾಡಿದರೆ/ ಒಂದಾಗಿ ಒಳಗೊಳ್ಳುವಂತೆ ಮಾಡಿದರೆ/ಕೂಡಿಸಿದರೆ; ನಿಜವ ಬೆರಸುವಡೆ=ಮಾನವ ಜೀವನದಲ್ಲಿನ ಈ ವಾಸ್ತವವನ್ನು ಅರಿತುಕೊಂಡರೆ/ತಿಳಿದುಕೊಂಡರೆ; ಜ್ಞಾನವೂ ಕ್ರೀಯೂ ಎರಡು ಬೇಕು=ವ್ಯಕ್ತಿಯ ಬದುಕಿನಲ್ಲಿ ನೆಮ್ಮದಿಯಿಂದ ಕೂಡಿದ ಏಳಿಗೆಗೆ ಜ್ನಾನ ಮತ್ತು ಕ್ರಿಯೆಗಳೆರಡೂ ಅತ್ಯಗತ್ಯವೆಂಬುದು ಮನವರಿಕೆಯಾಗುತ್ತದೆ. )

 

ಹಾವಾಡಿಗ ಹಾವನಾಡಿಸುವಲ್ಲಿ ತನ್ನ ಕಾಯ್ದುಕೊಂಡು
ಹಾವನಾಡಿಸುವಂತೆ
ಆವ ಮಾತನಾಡಿದಡೂ ತನ್ನ ಕಾಯ್ದು ಆಡಬೇಕು
ಅದೆಂತೆಂದಡೆ
ತನ್ನ ವಚನವೆ ತನಗೆ ಹಗೆಯಹುದಾಗಿ
ಅನ್ನಿಗರಿಂದ ಬಂದಿತ್ತೆನಬೇಡ
ಅಳಿವುದು ಉಳಿವುದು ತನ್ನ ವಚನದಲ್ಲಿಯೆ ಅದೆ
ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ
ಹಗೆಯು ಕೆಳೆಯು ತನ್ನ ವಚನವೇ ಬೇರಿಲ್ಲ.

“ಮಾತೇ ಮುತ್ತು, ಮಾತೇ ಮಿತ್ತು (ಸಾವು)“ ಎಂಬ ಗಾದೆಯಂತೆ ವ್ಯಕ್ತಿಯು ಆಡುವ ಮಾತುಗಳು ತನಗೆ ಒಳಿತನ್ನು ಉಂಟುಮಾಡಬಲ್ಲವು ಇಲ್ಲವೇ ಕೇಡನ್ನು ತರಬಲ್ಲವು. ಆದುದರಿಂದ ವ್ಯಕ್ತಿಯು ತಾನಾಡುವ ಮಾತುಗಳ ಬಗ್ಗೆ ಸದಾಕಾಲ ಎಚ್ಚರದಿಂದ ಇರಬೇಕು ಎಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.

( ಹಾವು+ಆಡಿಗ; ಹಾವು=ನಂಜನ್ನು ಒಳಗೊಂಡ ಜೀವಿ/ಸರ‍್ಪ ; ಆಡಿಗ=ವರ‍್ತಿಸುವವನು/ವ್ಯವಹರಿಸುವವನು/ತೊಡಗಿರುವವನು ಎಂಬ ತಿರುಳಿನಲ್ಲಿ ಬಳಕೆಯಾಗುವ ಪ್ರತ್ಯಯ; ಹಾವಾಡಿಗ=ಹಾವನ್ನು ಆಡಿಸುವವನು/ಹಾವನ್ನು ಹಿಡಿದು , ಅದು ಇತರ ಜೀವಿಗಳಿಗೆ ಕಚ್ಚಿದಾಗ ನಂಜನ್ನು ಊರಿಸುವ ಅದರ ಹಲ್ಲುಗಳನ್ನು ಕಿತ್ತು, ಹಾವನ್ನು ತನ್ನ ಇಚ್ಚೆಗೆ ತಕ್ಕಂತೆ ಆಡಿಸುವವನು; ಹಾವು+ಅನ್+ಆಡಿಸು+ಅಲ್ಲಿ; ಅನ್=ಅನ್ನು; ಹಾವನಾಡಿಸುವುದು=ಹಾವಾಡಿಗನು ಪುಂಗಿಯನ್ನು ನುಡಿಸುತ್ತಿರುವಾಗ, ಹಾವು ತನ್ನ ಹೆಡೆಬಿಚ್ಚಿ ಪುಂಗಿಯ ನಾದಕ್ಕೆ ತಕ್ಕಂತೆ ಅತ್ತಿತ್ತ ಓಲಾಡುತ್ತ ಚಲಿಸುವಂತೆ ಮಾಡುವುದು; ಹಾವನಾಡಿಸುವಲ್ಲಿ=ಜನರ ಮುಂದೆ ಹಾವನ್ನು ಆಡಿಸುವ ಸಮಯದಲ್ಲಿ/ಕಾಲದಲ್ಲಿ; ತನ್ನ=ತನ್ನನ್ನು ; ಕಾಯ್ದು=ಕಾಪಾಡಿಕೊಂಡು/ಅಪಾಯವಾಗದಂತೆ ನೋಡಿಕೊಂಡು/ಹಾನಿಯುಂಟಾಗದಂತೆ ಎಚ್ಚರವಹಿಸಿ ; ತನ್ನನ್ನು ಕಾಯ್ದುಕೊಂಡು=ಹಾವಿನಿಂದ ಯಾವುದೇ ಬಗೆಯ ಆಪತ್ತು ತನಗೆ ಬರದಂತೆ ಮುನ್ನೆಚ್ಚರಿಕೆಯನ್ನು ವಹಿಸಿ; ಹಾವು+ಅನ್+ಆಡಿಸು+ಅಂತೆ;

ಆವ=ಯಾವ/ಯಾವುದೇ ಬಗೆಯ/ರೀತಿಯ ; ಮಾತು+ಅನ್+ಆಡಿದಡೂ; ಮಾತು=ಇತರರೊಡನೆ ವ್ಯವಹರಿಸುವಾಗ ಬಳಸುವ ನುಡಿಗಳು ; ಆಡಿದಡೂ=ಆಡಿದರೂ/ನುಡಿದರೂ/ಹೇಳಿದರೂ; ತನ್ನ ಕಾಯ್ದುಕೊಂಡು ಆಡಬೇಕು=ತಾನು ಆಡುವ ನುಡಿಗಳು ಯಾವುದೇ ಬಗೆಯಲ್ಲೂ ತನಗೆ ಆಪತ್ತನ್ನು/ಅಪಾಯವನ್ನು/ತೊಂದರೆಯನ್ನು ಉಂಟುಮಾಡದಂತೆ ಎಚ್ಚರಿಕೆಯನ್ನು ವಹಿಸಿ ಮಾತನಾಡಬೇಕು. ಅಂದರೆ ಕೇಳುಗರ ಮನಸ್ಸನ್ನು ನೋಯಿಸುವಂತಹ/ಕೆರಳಿಸುವಂತಹ ಮಾತುಗಳನ್ನಾಡಬಾರದು/ಆಡುವ ಮಾತುಗಳು ತನ್ನ ಮತ್ತು ಕೇಳುಗನ ಮನಸ್ಸಿಗೆ ಮುದವನ್ನು/ಅರಿವನ್ನು ನೀಡುವಂತಿರಬೇಕು ಎಂಬ ತಿರುಳಿನಲ್ಲಿ ಬಳಕೆಯಾಗಿರುವ ನುಡಿಗಳು:

ಅದು+ಎಂತು+ಎಂದಡೆ; ಎಂತು=ಯಾವ ರೀತಿಯದು/ಯಾವ ಬಗೆಯದು; ಎಂದಡೆ=ಎಂದರೆ ; ವಚನ=ಆಡಿದ ಮಾತು/ಹೇಳಿದ ನುಡಿ; ಹಗೆ+ಅಹುದು+ಆಗಿ; ಹಗೆ=ಶತ್ರು/ಎದುರಾಳಿ ; ಅಹುದು=ಆಗುವುದು ; ತನ್ನ ವಚನವೆ ತನಗೆ ಹಗೆಯಹುದು=ತಾನಾಡಿದ ಮಾತುಗಳು ಕೇಳುಗರನ್ನು ಕೋಪತಾಪಗಳಿಗೆ ಗುರಿಮಾಡಿ , ಅವರನ್ನು ಕೆರಳುವಂತೆ ಮಾಡಿದರೆ, ಆಗ ಅವರಿಂದ ತನ್ನ ಮಾನಪ್ರಾಣಗಳಿಗೆ ಆಪತ್ತು/ತೊಂದರೆ/ಕೇಡು ಉಂಟಾಗುವ ಸನ್ನಿವೇಶ ಎದುರಾಗುವುದು; ಅನ್ನಿಗರು+ಇಂದ; ಅನ್ನಿಗರು=ಇತರರು/ಬೇರೆಯವರು/ಹೊರಗಿನವರು ; ಬಂದು+ಇತ್ತು+ಎನಬೇಡ; ಬಂದಿತ್ತು=ಬಂದಿದೆ/ಬಂದಿರುವುದು ; ಎನಬೇಡ=ಎಂದು ಹೇಳಬೇಡ/ನುಡಿಯಬೇಡ ; ಅನ್ನಿಗರಿಂದ ಬಂದಿತ್ತೆನಬೇಡ=ಬೇರೆಯವರಿಂದ ನನಗೆ ಕೇಡಾಯಿತು/ಹಾನಿಯುಂಟಾಯಿತು/ಅಪಾಯ ತಟ್ಟಿತು ಎಂದು ಆರೋಪಿಸಬೇಡ. ಏಕೆಂದರೆ ಜೀವನದಲ್ಲಿ ಕೆಲವೊಮ್ಮೆ ನೀನಾಡಿದ ಮಾತುಗಳೇ ನಿನ್ನ ಜೀವನದ ದುಗುಡ ದುಮ್ಮಾನಗಳಿಗೆ ಕಾರಣವಾಗಿರುತ್ತವೆ ಎಂಬ ತಿರುಳನ್ನು ಈ ಪದಗಳು ಸೂಚಿಸುತ್ತಿವೆ;

ಅಳಿ=ಕೆಡು/ಸಾಯು/ನಾಶವಾಗು ; ಉಳಿ=ಜೀವದಿಂದಿರು/ಬದುಕಿರು ; ಅಳಿವುದು ಉಳಿವುದು ತನ್ನ ವಚನದಲ್ಲಿಯೇ ಇದೆ=ವ್ಯಕ್ತಿಯ ಜೀವನದಲ್ಲಿನ ಒಳಿತು/ಕೆಡುಕುಗಳಿಗೆ – ವ್ಯಕ್ತಿಯು ಜೀವನದಲ್ಲಿ ಹಾಳಾಗುವುದಕ್ಕೆ/ಏಳಿಗೆಯನ್ನು ಹೊಂದುವುದಕ್ಕೆ , ಆತ ತನ್ನ ನಿತ್ಯ ಜೀವನದಲ್ಲಿ ಇತರರೊಡನೆ ಒಡನಾಡುವಾಗ/ವ್ಯವಹರಿಸುವಾಗ ಬಳಸುವ ಮಾತುಗಳೇ ಕಾರಣವಾಗುತ್ತವೆ. ಅಂದರೆ ವ್ಯಕ್ತಿಯು ಆಡುವ ಮಾತುಗಳು ಕೇಳುಗರ ಮನಗೆಲ್ಲುವಂತಿರಬೇಕೇ ಹೊರತು ಕೇಳುಗರ ಮನವನ್ನು ಗಾಸಿಗೊಳಿಸುವಂತಿರಬಾರದು; ವ್ಯಕ್ತಿಯು ಆಡುವ ಮಾತುಗಳು ತನಗೆ ಮಾತ್ರವಲ್ಲದೇ ಸಹಮಾನವರಿಗೆ ಮತ್ತು ಸಮಾಜದ ನೆಮ್ಮದಿಯ ಬದುಕಿಗೆ ಪೂರಕವಾಗಬಲ್ಲವು ಇಲ್ಲವೇ ಹಾನಿಯನ್ನುಂಟುಮಾಡಬಲ್ಲವು. ಆದುದರಿಂದ ಆಡುವ ಮಾತುಗಳ ಬಗ್ಗೆ ವ್ಯಕ್ತಿಯಲ್ಲಿ ಸಾಮಾಜಿಕ ಎಚ್ಚರವಿರಬೇಕು ಎಂಬ ಇಂಗಿತವನ್ನು ಈ ನುಡಿಗಳು ಸೂಚಿಸುತ್ತಿವೆ; ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ=ಶಿವನ ಹೆಸರು/ವಚನಕಾರನ ಮೆಚ್ಚಿನ ದೇವರು; ಕೆಳೆ=ಗೆಳೆಯ/ಮಿತ್ರ/ಗೆಳೆತನ/ಸ್ನೇಹ; ಬೇರೆ+ಇಲ್ಲ; ಹಗೆಯು ಕೆಳೆಯು ತನ್ನ ವಚನವೇ ಬೇರಿಲ್ಲ=ತಾನಾಡುವ ಮಾತುಗಳೇ ಕೇಡನ್ನು ತರುತ್ತವೆ ಇಲ್ಲವೇ ಒಳಿತನ್ನು ಉಂಟುಮಾಡುತ್ತವೆಯೇ ಹೊರತು ಮತ್ತಾವುದೂ ಅಲ್ಲ. )

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: